ಪುಸ್ತಕದ ಶೀರ್ಷಿಕೆ : ಸಾವೆಂಬ ಲಹರಿ
ಲೇಖಕರು : ಗುರುಪ್ರಸಾದ ಕಾಗಿನೆಲೆ
ಪ್ರಕಾಶಕರು : ಛಂದ ಪುಸ್ತಕ
ಪ್ರಥಮ ಮುದ್ರಣ : 2018
ಪುಟಗಳು : 120
ಬೆಲೆ : 110 ರೂ.
ಬದುಕಿನ ಬಗ್ಗೆ ನಮ್ಮ ಆಸಕ್ತಿ ಹೆಚ್ಚು. ಆದರೆ, ಮನಸ್ಸು ಆತ್ಮೀಯರ ಸಾವಿನ ದುಃಖದಿಂದ ಹೊರಬರಲು ಅಥವಾ ಸಾಂತ್ವನದ ಸಲುವಾಗಿಯೋ.. ಸಾವಿನ ಕುರಿತು ಅಥವಾ ನಶ್ವರತೆಯ ಕುರಿತು ಅಥವಾ ಆಧ್ಯಾತ್ಮಿಕ ಓದನ್ನು ಬಯಸುತ್ತೇವೆ. 'ಸಾವೆಂಬ ಲಹರಿ' ಎಂಬ ಶೀರ್ಷಿಕೆ ಕಂಡಾಗ ಇದು ಅಂತಹಾ ಕ್ಯಾಟಗರಿಗೆ ಸೇರಿದ ಪುಸ್ತಕವಿರಬಹುದಾ ಎಂದುಕೊಂಡಿದ್ದೆ. ಆದರೆ, ಲಲಿತ ಪ್ರಬಂಧಗಳ ಈ ಸಂಕಲನ ಬೇರೆಯದ್ದೇ ಅನುಭವವನ್ನು ನನ್ನದಾಗಿಸಿಕೊಳ್ಳಲು ಸಹಕಾರಿಯಾಯಿತು.
ಲೇಖಕರಾದ ಗುರುಪ್ರಸಾದ ಕಾಗಿನೆಲೆಯವರು ಹುಟ್ಟಿದ್ದು ಶಿವಮೊಗ್ಗದಲ್ಲಿ. ಮಿನಿಸೊಟಾ ರಾಜ್ಯದ ರಾಚೆಸ್ಟರ್ ನ ಓಮ್ ಸ್ಟೆಡ್ ಆಸ್ಪತ್ರೆಯಲ್ಲಿ ಎಮರ್ಜೆನ್ಸಿ ಮೆಡಿಸಿನ್ ವಿಭಾಗದಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದಾರೆ. 'ನಿರ್ಗುಣ', 'ಶಕುಂತಳಾ', 'ದೇವರ ರಜಾ' ಇವರ ಪ್ರಕಟಿತ ಕಥಾಸಂಕಲನಗಳು. 'ಬಿಳಿಯ ಚಾದರ', 'ಗುಣ', 'ಹಿಜಾಬ್' ಇವರ ಕಾದಂಬರಿಗಳು. ಕೆಲವು ಸಂಪಾದಿತ ಕೃತಿಗಳು ಪ್ರಕಟವಾಗಿವೆ.
ಇದು ನಾನು ಓದಿದ ಈ ಲೇಖಕರ ಮೊದಲ ಪುಸ್ತಕ. ಇದು ಇವರ ಮೊದಲ ಲಲಿತ ಪ್ರಬಂಧ ಸಂಕಲನ. ಲೇಖಕರ ವೃತ್ತಿ ಹಾಗೂ ಅನುಭವವೂ ಇಲ್ಲಿ ಮೇಳೈಸಿ ಕೇವಲ ಸಾವಿನ ಲಹರಿ ಮಾತ್ರವಲ್ಲದೇ.. ಅನೇಕ ವಿಚಾರಗಳನ್ನು ನೋಡುವ ರೀತಿ ವಿಶಿಷ್ಟವಾಗಿ ಜ್ಞಾನವನ್ನೂ ಹೆಚ್ಚಿಸುತ್ತದೆ.
ಮೈನಸ್ 25 - ಒಂದು ಪ್ರಾರ್ಥನೆ : ಹೊರಗಿನ ತಾಪಮಾನ ಮೈನಸ್ 25 ಫ್ಯಾರನ್ ಹೈಟ್ ಅಂದರೆ ಮೈನಸ್ 32° ಸೆಂಟಿಗ್ರೇಡ್. ಆ ಚಳಿಯ ತೀವ್ರತೆ ಕೇಳುವಾಗಲೇ ಅದು ಚಳುಕು ಹುಟ್ಟಿಸುತ್ತದೆ. ಒಳಗೆ ಕುಳಿತು ನೋಡಿದರೆ ಹೊರಗಿನ ಬಿಳಿ ಮೌನ ಬೇರೆಯದ್ದೇ ರೀತಿ ಕಂಡುಬರುತ್ತದೆ. ಆರ್ಟಿಕ್ ತುರ್ತಂತೆ ಇದ್ದ ದಿನಗಳಲ್ಲಿ ಮಕ್ಕಳಿಗೆ ಸ್ಕೂಲಿಗೆ ರಜೆ ಕೂಡ ಇತ್ತು. ಆದರೆ, ಪಕ್ಕದ ಬೀದಿಗೆ ಬಂದ ಮೈಸೂರು ಅಂಕಲ್ ತಮ್ಮ ಪತ್ನಿಯೊಂದಿಗೆ ವಾಕಿಂಗ್ ಹೊರಟ ಪ್ರಯತ್ನ, ಅಮ್ಮನ ಜೊತೆ ನಯಾಗರಾಗೆ ಹೋಗಿದ್ದು ಎದೆ ಜಲ್ಲೆನಿಸಿತು. ಇದರ ಜೊತೆ ಜೊತೆಗೆ ಇರುವ ಉಳಿದ ಪ್ರಸಂಗಗಳು ಹಾಗೂ ಪ್ರಾರ್ಥನೆಗಳೂ ಇವೆ.
ತಪ್ಪಾದ ಜಾಗದಲಿ, ತಪ್ಪಾದ ಸಮಯದಲಿ : ಮೆಡಿಕಲ್ ಎಮರ್ಜೆನ್ಸಿ ಎಂಬ ತುರ್ತು ಸಂದರ್ಭದಲ್ಲಿ ಡಾಕ್ಟರ್ ಯಾರಾದರೂ ಇದ್ದೀರಾ ಎಂಬ ಗಗನಸಖಿಯ ಕೂಗಿಗೆ ಓಗೊಟ್ಟು, ರೋಗಿಗಳನ್ನು ಚಿಕಿತ್ಸೆ ಮಾಡಲು ಹೋಗಿ ಅಲ್ಲಿಗೆ ಪೇಚಿಗೆ ಸಿಕ್ಕಿದ ಸಂದರ್ಭಗಳು.. ಇವರನ್ನೇ ಸಂದೇಹಿಸಿದ ಸಂದರ್ಭಗಳು, ರೋಗಿಗಳಿಗೆ ಹಾಗೆ ವರ್ತಿಸಲು ಮಾಡಿದ ಅವರದ್ದೇ ಆದ ಕಾರಣಗಳು ಹಾಗೂ ಅನಿವಾರ್ಯತೆಗಳ ಚಿತ್ರಣವಿದೆ. ಇಲ್ಲಿನ ಒಂದು ಸಂದರ್ಭದಲ್ಲಂತೂ ಯಾವುದೋ ವೈದ್ಯಕೀಯ ಸಮ್ಮೇಳನಕ್ಕೆ ಹೋಗಿ ವಾಪಸ್ಸು ಬರುವಾಗ ಹೃದಯ ಸ್ತಂಭನವಾಗಿ ತೀರಿಕೊಂಡವರ ಪಕ್ಕ ಕೋರುವ ಪ್ರಸಂಗವಂತೂ ಬೇರೆಬೇರೆ ರೀತಿಯ ಆಲೋಚನೆಗಳನ್ನು ಕಣ್ಮುಂದೆ ತರುತ್ತವೆ. ಅನಿರೀಕ್ಷಿತ ತಿರುವುಗಳ ಸಾವಿನ ಸುತ್ತಲಿನ ಆಲೋಚನೆಗಳ ಚಿತ್ರಣವಿದೆ.
ಸಾವೆಂಬ ಲಹರಿ : ಆಸ್ಪತ್ರೆಯಲ್ಲಿರುವವರು ಹಾಗೂ ರೋಗಿಗಳ ನಡುವೆ ಕೆಲಸ ಮಾಡುವವರಿಗೆ ಸಾವು ಎಂಬುದು ತೀರಾ ಅನಿರೀಕ್ಷಿತವೇನೂ ಆಗಿರುವುದಿಲ್ಲ. ಆದರೆ, ಅಲ್ಲಿನ ಸಂದರ್ಭಗಳು ಅನಿವಾರ್ಯವೇ ಆಗಿರುತ್ತವೆ. ಎಂ.ಬಿ.ಬಿ.ಎಸ್ ಮುಗಿಸಿ ಹೌಸ್ ಸರ್ಜೆನ್ಸಿ ಶುರು ಮಾಡಿದ್ದ ಕೆಲಸದ ಮೊದಲ ದಿನಗಳಲ್ಲಿ ರೋಗಿಯ ಸಾವಿನ ಸಂದರ್ಭವಿದೆ. ರೋಗಿಯ ಜೊತೆ ಯಾವುದೇ ರೀತಿಯ ಸ್ನೇಹ ಸಂಬಂಧವಿರದೆ ಇದ್ದಾಗ ಆ ಸಾವು ಕೆಲಸದ ಇನ್ನೊಂದು ಭಾಗವಾಗುವುದು ಕಂಡುಬರುತ್ತದೆ. "ಬದುಕಲು ಬೇಕಾದ ಅಮೆರಿಕ ಭಾರತೀಯರಿಗೆ ಸಾಯಲು ಬೇಡ" ಎಂದು ಲೇಖಕರು ಎಲ್ಲೋ ಓದಿದ್ದ ಮಾತುಗಳಿಗೂ ಮತ್ತೊಮ್ಮೆ ನೆನಪಿಸಿಕೊಂಡದ್ದೇಕೆ..??
ನನ್ನ ಶ್ರೀದೇವಿ :ಇದು ಸಾವಿನ ಕುರಿತ ಬರಹವಲ್ಲ. ಬದಲಾಗಿ ಅವರ ಕನಸಿನ ಹುಡುಗಿ, ನಟಿ ಶ್ರೀದೇವಿ ಒಮ್ಮೆ ಏರ್ಪೋರ್ಟ್ ನಲ್ಲಿ ಎಮರ್ಜೆನ್ಸಿ ಇದ್ದ ಸಂದರ್ಭದಲ್ಲಿ ಕನಸಿನಂತೆ ಬಂದು ಹೋದ ಕ್ಷಣಗಳ ನೆನಪಿದೆ.
ಸಾಹಿತಿಗಳ ಚಿತ್ರ : ಎಷ್ಟೋ ಬಾರಿ ನಮ್ಮದೇ ಫೋಟೋ ಸೆಲೆಕ್ಟ್ ಮಾಡುವಾಗ ಅಥವಾ ತೆಗಿಸಿಕೊಳ್ಳುವಾಗ ಇಂತಹಾ ಸಂದರ್ಭ ಕಾಡಿರಬಹುದು. ನ್ಯಾಚುರಲ್ ಆಗಿ ಕಾಣುತ್ತದೆ ಎಂದು ತೆಗೆಯುವ ಫೋಟೋಗಳು ಹಾಗೂ ಆ ಫೋಸಿನ ಕೃತಕತೆಯೂ ನಮಗೆ ಗೊತ್ತಿರುತ್ತದೆ. ಲೇಖಕರು ಫೋಟೋ ಜೊತೆಗೆ ಬರಹವನ್ನು ಕಳಿಸಿಕೊಡಬೇಕಾಗಿ ಬಂದಾಗ ತಮ್ಮ ಫೋಟೋ ತೆಗೆಸಿಕೊಂಡ ಸಂದರ್ಭಗಳು ಚಿತ್ರಣ ಹಾಗೂ ಉಳಿದ ಸಾಹಿತಿಗಳ ಭಾವಚಿತ್ರಗಳ ಹಿನ್ನೆಲೆಗಳನ್ನು ಹಿಡಿದಿಟ್ಟಿದ್ದಾರೆ.
ಮುಸ್ಸಂಜೆಯ ಅನಂತರ ಮುಂಜಾನೆಯ ಮೊದಲು : ವೈದ್ಯರ ಪಾಳಿಯ ಕೆಲಸದಲ್ಲಿ, ಮುಸ್ಸಂಜೆಯ ನಂತರ ಹಾಗೂ ಮುಂಜಾನೆಯ ಮೊದಲು ಮುಗಿಯುವ ಪಾಳಿಯಲ್ಲಿ ಕಂಡ ಇಬ್ಬರು ರೋಗಿಗಳ ಸೂಕ್ಷ್ಮ ಅವಲೋಕನವಿದೆ. ಬರೀ ಗ್ಯಾಸ್ ಎಂದು ಹೇಳಿಕೊಂಡು ಬರುವ 88 ವರ್ಷದ ವೃದ್ಧೆ ಹಾಗೂ ಹಾರ್ಲಿ ಡೇವಿನ್ಸ್ ನಲ್ಲಿ ಬಂದ ಒಬ್ಬ ಸಂದೇಹ ಮೂಡಿಸುವ ರೋಗಿ, ಇಬ್ಬರೂ ನೀಡಿದ ಗ್ರಾಹಕ ತೃಪ್ತಿಯ ಸಮೀಕ್ಷಾ ಕಾರ್ಡುಗಳ ಅಭಿಪ್ರಾಯ ಹೇಗಿದ್ದವು..??
ಪುಕ್ಕಟೆ ಔಷಧಿ ಅಂದರೆ ನಂಗೂ ತಲೆನೋವು ಅಂದಂತೆ : ಮನುಷ್ಯರಿಗೆ ಔಷಧದ ಮೇಲೆ ಇರುವ ವ್ಯಾಮೋಹದ ಕುರಿತು ಹಾಗೂ.. ಅಪ್ಪ ಕೇಳುತ್ತಿದ್ದರಿಂದ, ಆಸ್ಪತ್ರೆಗೆ ಕೊಡುತ್ತಿದ್ದ ಕೆಲವು ಸ್ಯಾಂಪಲ್ ಔಷಧಿಗಳನ್ನು ಮನೆಗೆ ಕೊಟ್ಟು ಕಳಿಸುವ ಸಂದರ್ಭದ ಚಿತ್ರಣವಿದೆ. ಔಷಧಿಯನ್ನು ಸರಿಯಾಗಿ ಲೇಬಲ್ ಮಾಡುವುದಕ್ಕೆ ಬರುವುದಿಲ್ಲವೆಂದು ತರಾಟೆಗೆ ತೆಗೆದುಕೊಂಡ ಅಪ್ಪನ ಚಿತ್ರಣ ಕಣ್ಮುಂದೆ ಮೂಡುತ್ತದೆ. ಭೇದಿಗೆ ಎಂದರೆ ಭೇದಿ ಆಗುವುದಕ್ಕೋ.. ಭೇದಿ ನಿಲ್ಲುವುದಕ್ಕೋ..?? ವಾಂತಿ ಎಂದರೆ ವಾಂತಿ ಆಗುವುದಕ್ಕೂ ವಾಂತಿ ನಿಲ್ಲುವುದಕ್ಕೋ ಇಂಚಿಂಚೂ ಬರೆದು ಮಾಹಿತಿಯನ್ನಾಗಿಸಿದ ಡಬ್ಬಿಗಳು ಹಾಗೂ ಆ ರಗಳೆಯಿಂದ ತಪ್ಪಿಸಿಕೊಂಡ ಬಗೆಯನ್ನು ಹೇಳುತ್ತಾರೆ.
ಅಪ್ಪನ ಆ ಕರಕಲು ತಲೆ : ರೋಗಿಗಳ ಸಾವನ್ನು ನೋಡಿದ್ದರೂ.. ಮನಸ್ಸು ಕಲ್ಲಾಗಿದ್ದರೂ ಅಪ್ಪನ ಸಾವು ಕಂಡದ್ದು ಹಾಗೂ ಮಳೆ-ಗಾಳಿಯ ಸಂಧರ್ಭದಲ್ಲಿ ಚಿತೆಯಾಗಿಸಿದ್ದ ಅಪ್ಪನನ್ನು ನೆನೆಸಿಕೊಳ್ಳುತ್ತಾ.. "ದೇವರೇ ಹೋದವರನ್ನು ಘನತೆಯಿಂದ ಬೀಳ್ಕೊಡುವುದನ್ನು ನಮಗೆ ಕಲಿಸು" ಎಂದು ಪ್ರಾರ್ಥಿಸಿದ ರೀತಿ ದುಗುಡ ಹುಟ್ಟಿಸುತ್ತದೆ.
ಅಪ್ಪನ ಡಾಕ್ಟರ್ ಗಿರಿ : ನಮ್ಮಪ್ಪ ನನ್ನನ್ನು ಡಾಕ್ಟರ್ ಮಾಡಿಸಿದ್ದೇ ಅವರ ಔಷಧಿಗಳ ಮತ್ತು ಡಾಕ್ಟರ್ ಗಳ ಮೇಲಿನ ವ್ಯಾಮೋಹದಿಂದ ಎನ್ನಿಸುತ್ತದೆ ಎಂದು ಹೇಳುತ್ತಿದ್ದವರು.. ಅಪ್ಪನ ರಕ್ತದೊತ್ತಡ ಹಾಗೂ ಪ್ರತಿದಿನ ಅವರ ಪುಕ್ಕಟ್ಟೆ ಬಿ.ಪಿ ಪರೀಕ್ಷಿಸುತ್ತಿದ್ದ ಮೂರ್ತಿ ಡಾಕ್ಟರ್ ಹಾಗೂ ಅದರ ಕಾರಣ, ಅಪ್ಪನ ಆರೋಗ್ಯ ಹಾಗೂ ಅಪ್ಪನ ಅನಾರೋಗ್ಯಕ್ಕೆ ಸಂಬಂಧಿಸಿದ ಚಿತ್ರಣಗಳ ಜೊತೆಗೆ ಅವರ ಹಾಸ್ಯಪ್ರಜ್ಞೆಯನ್ನು ನೆನೆಯುತ್ತಾರೆ.
ಅಪ್ಪನ ಸಾರಥಿಯರು : ಚಿಕ್ಕಂದಿನಿಂದ ಸೈಕಲ್ ಕೂಡಾ ಹತ್ತದ ಅಪ್ಪನಿಗೆ ಸ್ವಂತ ಕಾರಿಡಬೇಕೆಂಬ ಆಸೆ ನೆರವೇರಿದಾಗ ಅದಕ್ಕೆ ಅವರು ಡ್ರೈವರನ್ನು ಪರೀಕ್ಷಿಸುತ್ತಿದ್ದ ರೀತಿ ಹಾಗೂ ಅದರ ಪಜೀತಿಗಳ ಚಿತ್ರಣವಿದೆ.
ತಿಪ್ಪೆಗೆ ಹಾಕಿದರೂ ಲೆಕ್ಕ ತಪ್ಪಬಾರದು : ಅಪ್ಪನ ಲೆಕ್ಕಾಚಾರದ ಬದುಕು ಹಾಗೂ ಅವರು ಪ್ರತಿಯೊಂದು ಲೆಕ್ಕವಿಡುತ್ತಿದ್ದ ರೀತಿ ಅಚ್ಚರಿ ಹುಟ್ಟಿಸುತ್ತದೆ. ಬಹುಶಃ ಆ ತಲೆಮಾರಿನವರು ಹಾಗೆಯೇ ಇರಬಹುದಾ ಎಂಬ ಆಲೋಚನೆಯೊಂದು ಸುಳಿದು ಹೋಯಿತು. ಅಪ್ಪನಿಗೆ ಕೈಲಾಗದಾಗ, ಅವರ ದೊಡ್ಡಪ್ಪನ ಮಗನಿಗೆ ಮನೆಯ ಉಸ್ತುವಾರಿಯನ್ನು ವಹಿಸಿದಾಗ.. ಯಾರಾದರೂ "ಹೇಗಿದ್ದೀರಿ ರಂಗನಾಥರಾಯರೇ..?" ಎಂದು ಕೇಳಿದರೆ, ಅಣ್ಣನ ಮಗನನ್ನು ತೋರಿಸಿ "ಮನೆಯಲ್ಲಿ ಈಗ ರಾಷ್ಟ್ರಪತಿ ಆಡಳಿತ, ಉಸ್ತುವಾರಿ ಸರ್ಕಾರ" ಎಂದು ಕಿಚಾಯಿಸುತ್ತಿದ್ದರು ಎಂಬ ಮಾತು ಹೇಳದೆಯೂ ಅವರ ಭಾವವನ್ನು ಹೇಳುತ್ತದೆ.
ಸಲ್ಲದ ಋಣ : ಜೀವ ಉಳಿಸಿದ್ದ ಗೆಳೆಯನೊಬ್ಬನ ಈಗಿನ ಆರೋಗ್ಯ ಸ್ಥಿತಿಯನ್ನು ಗೆಳೆಯನಾಗಿ ಹಾಗೂ ವೈದ್ಯನಾಗಿ ನೋಡುವ ರೀತಿ.. ನಾವು ಆಲೋಚಿಸುವ ಬಗೆಗೂ ಕನ್ನಡಿ ಹಿಡಿದಂತೆ ತೋರುತ್ತದೆ. "ಕೆಲವೊಂದು ಋಣಗಳಿಂದ ಮುಕ್ತವಾಗಲು ಸಾಧ್ಯವಿಲ್ಲ ಎಂದು ಒಪ್ಪಿಕೊಳ್ಳುವುದರಲ್ಲಿ ನಮ್ಮ ಪ್ರಾಮಾಣಿಕತೆಯಿದೆ ಎಂದು ಭಾವಿಸುತ್ತೇನೆ" ಎನ್ನುವ ಮಾತು ಎಲ್ಲವನ್ನೂ ಧ್ವನಿಸುತ್ತದೆ.
ನನ್ನ ಏಪ್ರಾನೂ ನನ್ನ ಮಗಳ ಬಿಳಿ ಕೋಟೂ :ಮಗಳಿಗೆ ಶಿಕಾಗೋದಲ್ಲಿ ವೈಟ್ ಕೋಟ್ ಸೆರ್ಮನಿ ನಡೆದಾಗ.. ಸಮಾರಂಭಕ್ಕೆ ಅವರ ಸಿದ್ಧತೆ ಹಾಗೂ ಇವರು ಮೊದಲು ಏಪ್ರಾನ್ ಕೊಂಡ ಹಾಗೂ ಹೊಲಿಸಿಕೊಂಡ ನೆನಪುಗಳು ಮೇಳೈಸಿವೆ.
ಮೈಲಿಗೆ ಊಟ : ಅಮ್ಮ ಎಲ್ಲರಿಗೂ ಸಮವಾಗಿ ತಿಂಡಿಗಳನ್ನು ಹಂಚುತ್ತಿದ್ದರಾದರೂ.. ಅವರು ಮಡಿ-ಮೈಲಿಗೆಯನ್ನು ಪಾಲಿಸುತ್ತಿದ್ದ ರೀತಿ ಹಾಗೂ ಅಮ್ಮನ ಅಸ್ಥಿ ವಿಸರ್ಜನೆ ಮಾಡಿಕೊಂಡು ಬಂದ ನಂತರ, ಅಮ್ಮನೇ ರಕ್ತ-ಮಾಂಸ ತುಂಬಿಕೊಂಡು ಮತ್ತೆ ಪ್ರತ್ಯಕ್ಷಳಾದಳು ಎನಿಸಿದ್ದೇಕೆ..??
ಇಲ್ಲಿ ದೇಶೀಯ ಹಾಗೂ ವಿದೇಶೀಯ ಅನುಭವಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ ಘನವಾಗಿ ನೋಡಬಹುದಾದ ವಿಚಾರಗಳನ್ನು ಹೇಳಿರುವ ಪರಿ ಅಚ್ಚರಿ ಮೂಡಿಸುತ್ತದೆ.
ನನ್ನ ಅಪ್ಪ ಕೂಡ ಫಾರ್ಮಸಿಸ್ಟ್ ಆಗಿದ್ದವರು. ಅವರು ಹೇಳುತ್ತಿದ್ದ ಆಸ್ಪತ್ರೆಯ ಪ್ರಸಂಗಗಳು ಹಾಗೂ ರೋಗಿಗಳ ಕುರಿತ ರೋಗ, ಸಾವು-ನೋವಿನ ಕುರಿತು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದವರಿಗಿದ್ದ ಒಂದು ರೀತಿಯ ನಿರ್ಲಿಪ್ತ ಕರ್ತವ್ಯ ಭಾವನೆ ಹಾಗೂ ಔಷಧಿಗಳ ವಿಚಾರಗಳನ್ನು ಮೆಲುಕು ಹಾಕಿದಂತಾಯಿತು. ಸಂಪೂರ್ಣವಾಗಿ ತಾಳೆಯಾಗುವ ಪ್ರಸಂಗಗಳಲ್ಲದಿದ್ದರೂ.. ಅಪ್ಪನ ಮಾತುಕತೆಗಳನ್ನು ನೆನಪಿಸಿದವು.
ಈ ಲಲಿತ ಪ್ರಬಂಧದ ಸಂಕಲನದಲ್ಲಿ ಕೆಲವು ಸಾವಿನ ಕುರಿತ ಸಂಗತಿಗಳ ಬರಹಗಳಿದ್ದರೆ, ಹೆಚ್ಚು-ಕಡಿಮೆ ಅಂತದಷ್ಟು ಅಪ್ಪನ ಕುರಿತ ವಿಚಾರಗಳೇ.. ಶೀರ್ಷಿಕೆ ನೋಡಿ ಇಂತಹದ್ದೇ ಎಂದು ಊಹಿಸಿ ಓದದೇ ಉಳಿದಿದ್ದರೆ, ಒಂದು ಒಳ್ಳೆಯ ಪುಸ್ತಕದ ಓದಿನ ಅನುಭವದಿಂದ ವಂಚಿತಳಾಗುತ್ತಿದ್ದೆ. ಅನುಭವ ಹಾಗೂ ಅದನ್ನು ನೋಡುವ ಕ್ರಮ, ಜೊತೆಗೆ ತೆರೆದಿಟ್ಟ ರೀತಿಯಿಂದ ಪುಸ್ತಕದ ಓದು ವಿಭಿನ್ನ ಅನುಭವ ನೀಡಿತು. ಇವರ ಉಳಿದ ಪುಸ್ತಕಗಳನ್ನು ಓದಬೇಕಿದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ