"ಅದೇನೋ ಮೊಬೈಲ್ ಹಿಡಿದುಕೊಂಡು ಆ ಚಿತ್ರಕ್ಕೆ ಹಿಡಿತೀರ ಸರಿ. ಆದರೆ, ಅದರಿಂದ ಅವರಿಗೆ ಹಣ ಹೇಗೆ ಹೋಗುತ್ತದೆ ?"
" ನಿಮ್ಮ ಮೊಬೈಲ್ ನಿಂದ ಹಣ ಹೋಗುತ್ತಲ್ಲಾ ಮೊಬೈಲ್ ನಲ್ಲಿ ಹಣ ಇರುತ್ತದಾ ? ದುಡ್ಡು ಕಡಿತಗೊಂಡದ್ದು ನಿಮಗೆ ಹೇಗೆ ಗೊತ್ತಾಗುತ್ತದೆ ? "
" ಅವರಿಗೆ ದುಡ್ಡು ಬಂದದ್ದು ಅವರಿಗೆ ಗೊತ್ತಾಗುತ್ತದಾ ?"
"ಈ ಕೋಡ್ ಸ್ಕ್ಯಾನ್ ಮಾಡಿದರೆ ಹಣ ಮಾತ್ರ ಹಾಕಲಿಕ್ಕಾಗುವುದಾ ? ಇಷ್ಟೇ ಹಣ ಹಾಕಬೇಕು ಎಂದು ಆ ಕೋಡ್ ನಲ್ಲಿ ಬರೆದಿರುತ್ತದಾ ? "
ಹೀಗೆ ಅನೇಕ ಕುತೂಹಲಗಳು ಅನೇಕರಿಗಿವೆ. ಅದಕ್ಕೆಲ್ಲಾ ಉತ್ತರ ಇಲ್ಲಿದೆ.
ನನ್ನ ಮನೆ ಹತ್ತಿರದಲ್ಲಿ ಇರುವ ಎರಡು ದಿನಸಿ ಅಂಗಡಿಗಳಲ್ಲಿ ಒಂದಕ್ಕೆ ಮಾತ್ರ ಹೆಚ್ಚು ಜನರು ಹೋಗುವುದು. ಕಾರಣ ಇಷ್ಟೇ, ಅಲ್ಲಿ ಆನ್ಲೈನ್ ಪೇಮೆಂಟ್ ಇದೆ. ಚಿಲ್ಲರೆಗಾಗಿ ಪರದಾಡಬೇಕಿಲ್ಲ. ಕೈಯಲ್ಲಿ ದುಡ್ಡಿಲ್ಲದೆ ಮೊಬೈಲ್ ಇದ್ದರೂ ಆದೀತು. ಕಾರ್ಡ್ ಏನೂ ಬೇಕಿಲ್ಲ.
ಆನ್ಲೈನ್ ಪೇಮೆಂಟ್ ಮಾಡಲು ಕೈಯ್ಯಲ್ಲೊಂದು ಸ್ಮಾರ್ಟ್ ಫೋನ್ ಇರಬೇಕು. ಆ ಸ್ಮಾರ್ಟ್ ಫೋನ್ ನಲ್ಲಿ ಕ್ಯಾಮೆರಾ ಜೊತೆಗೆ ಸಮರ್ಪಕವಾದ ಇಂಟರ್ನೆಟ್ ಇರಬೇಕು. ಜೊತೆಗೆ, ಆ ಫೋನ್ ನಲ್ಲಿ ಆನ್ಲೈನ್ ಪೇ ಮಾಡುವ ಅಪ್ಲಿಕೇಶನ್ ಗಳು ಉದಾಹರಣೆಗೆ ಜಿ-ಪೇ, ಫೋನ್ ಪೇ, ಅಮೆಜಾನ್ ಪೇ, ಪೇಟಿಯಂ.. ಇವುಗಳಲ್ಲಿ ಯಾವುದಾದರೂ ಒಂದು ಇದ್ದು ಅವುಗಳಲ್ಲಿ ನಮ್ಮ ಬ್ಯಾಂಕ್ ಅಕೌಂಟ್ ಹಾಗೂ ಕ್ರೆಡಿಟ್/ಡೆಬಿಟ್ ಕಾರ್ಡ್ ಮಾಹಿತಿ ತುಂಬಿ ಲಿಂಕ್ ಮಾಡಿರಬೇಕು. ಇದಿಷ್ಟನ್ನು ನಾವು ಮಾಡಿದರೆ ಅತ್ತ ಆ ಅಂಗಡಿಯವರು ಸಹಾ ಹೀಗೆಯೇ ಮಾಡಿರುತ್ತಾರೆ.
ಸಣ್ಣ ಪುಟ್ಟ ಅಂಗಡಿಯವರಿಗೆ ವಹಿವಾಟು ನಡೆಸಲು ಯಾವುದೇ ವೆಬ್ಸೈಟ್ ಇರುವುದಿಲ್ಲ. ಅದನ್ನು ಹೊಂದಲು ಜ್ಞಾನ ಇರುವುದಿಲ್ಲ. ಇಲ್ಲವೇ, ದುಬಾರಿಯಾಗಬಹುದು. ಅದಕ್ಕಾಗಿಯೇ ವಹಿವಾಟು ನಡೆಸುವ ಸಲುವಾಗಿ ಎಲ್ಲರೂ ಒಂದೇ ವ್ಯವಸ್ಥೆಯನ್ನು ಹೊಂದಲು ಈ ಕ್ಯೂ.ಆರ್ ಕೋಡ್ ಅನ್ನು ಬಳಸುತ್ತಾರೆ. ಕ್ಯೂ.ಆರ್ ಕೋಡ್ ಎಂದರೆ ಕ್ವಿಕ್ ರೆಸ್ಪಾನ್ಸ್ ಕೋಡ್ ಎಂದರ್ಥ. ಆ ಚೌಕಾಕಾರದ ಚಿತ್ರ ಒಂದು ಕೋಡ್ ಆಗಿರುವ ಸಂದೇಶವನ್ನು ಹೊಂದಿರುತ್ತದೆ.
ನಾವು ಒಂದು ಚಿತ್ರವನ್ನು, ಫೋಟೋವನ್ನು, ಯಾವುದೇ ಸಂದೇಶವನ್ನು, ವಿಳಾಸವನ್ನು, ಮಾಹಿತಿಯನ್ನು, ಫೋನ್ ನಂಬರ್, ಲೋಕೇಶನ್, ಲಿಂಕ್ ಹೀಗೆ ಏನನ್ನಾದರೂ ನೇರವಾಗಿ ಬರೆಯುವುದಕ್ಕಿಂತ ಮತ್ತೊಬ್ಬರಿಗೆ ತಿಳಿಯದ ರೀತಿಯ ಕೋಡ್ (ಎನ್ಕ್ರಿಪ್ಟ್) ಮಾಡಲಾಗಿರುತ್ತದೆ. ಅಷ್ಟು ಚಿಕ್ಕ ಚೌಕ ಎಷ್ಟು ಮಾಹಿತಿಯನ್ನು ಹಿಡಿದಿಡಲು ತಾನೇ ಸಾಧ್ಯ ಎಂದುಕೊಂಡಿರಾ ? ಒಂದು ಕೋಡ್ 7089 ನಂಬರ್, 4296 ಆಲ್ಪಾನ್ಯೂಮೇರಿಕ್, 2953 ಬೈಟ್ ಗಳಷ್ಟು ಮಾಹಿತಿಯನ್ನು ಶೇಖರಿಸಿಕೊಳ್ಳಬಹುದು. ಒಬ್ಬೊಬ್ಬರ ಬೆರಳಚ್ಚು ಸಹಾ ವಿಭಿನ್ನವಾಗಿರುವಂತೆ ಒಂದೊಂದು ಕ್ಯೂ.ಆರ್. ಕೋಡ್ ಕೂಡಾ ವಿಭಿನ್ನವೇ.
ಇದನ್ನು ಸ್ಕ್ಯಾನ್ ಮಾಡಿದಾಗ ವ್ಯಾಪಾರ ಮಾಡುವವರು ಲಿಂಕ್ ಮಾಡಿರುವ ಲಿಂಕ್ ಗೆ ಹೋಗಿ ಅಲ್ಲಿಂದ ಹಣ ಅವರ ಖಾತೆಗೆ ಜಮೆಯಾಗುತ್ತದೆ ಹಾಗೂ ನಮ್ಮ ಖಾತೆಯಲ್ಲಿಯೂ ಹಣ ಕಡಿತವಾಗುತ್ತದೆ. ಅದು ಮೊಬೈಲ್ ನಲ್ಲಿಯೇ ನಮಗೆ ತಿಳಿದರೆ ಅವರಿಗೂ ಮೊಬೈಲ್ ನಲ್ಲಿ ಮೆಸೇಜ್ ಮೂಲಕ ತಿಳಿದರೂ ನಮ್ಮಿಂದ ಕೂಡಾ ಖಾತ್ರಿ ಮಾಡಿಕೊಳ್ಳುತ್ತಾರೆ. ಈಗ ಬಂದಿರುವ ಕೋಡ್ ಸ್ಕ್ಯಾನ್ ಮೆಷಿನ್ ಗಳಲ್ಲಿ ಸ್ಪೀಕರ್ ಕೂಡಾ ಇದ್ದು ಅದರ ಮೂಲಕವೂ ತಿಳಿಯುತ್ತದೆ. ಈ ಕ್ಯೂ.ಆರ್ ಕೋಡ್ ನ ಆಯಸ್ಸು ಆ ಲಿಂಕ್ ಇರುವವರೆಗೂ..
ಕೆಲವು ಕ್ಯೂ.ಆರ್. ಕೋಡ್ ಗಳನ್ನು ನಾವೇ ಸ್ಕ್ಯಾನ್ ಮಾಡಿ ಹಣದ ಮೊತ್ತವನ್ನು ನಮೂದಿಸುವಂತಿದ್ದರೆ ಅದನ್ನು ಸ್ಟ್ಯಾಟಿಕ್ ಕ್ಯೂ.ಆರ್.ಕೋಡ್ ಎಂದರೆ ಅವರೇ ಇಷ್ಟು ಹಣ ಎಂದು ನಮೂದಿಸಿ ಕೋಡ್ ನೀಡಿದರೆ ಅದು ಡೈನಮಿಕ್ ಕ್ಯೂ.ಆರ್, ಕೋಡ್. ಅದರ ಆಯಸ್ಸು ನಾವು ಹಣ ಪಾವತಿಸುವವರೆಗೂ ಅಷ್ಟೇ.
ಆನ್ಲೈನ್ ಹಣ ಪಾವತಿಸುವಿಕೆ ಸುಲಭ ಹೌದು. ಆದರೆ, ಇದು ಎಷ್ಟು ಸುರಕ್ಷಿತ ಎಂಬುದರ ಮಾಹಿತಿ ಮುಂದಿನ 'ಟೆಕ್ - ಟಾಕ್' ಅಂಕಣದಲ್ಲಿ
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ