ಪುಸ್ತಕದ ಶೀರ್ಷಿಕೆ : ಅಗಮ್ಯ
ಲೇಖಕರು : ಎಸ್. ಲೋಕೇಶ್
ಪ್ರಕಾಶಕರು : ಮನಿಷಾ ಪಬ್ಲಿಕೇಶನ್ಸ್
ಪ್ರಥಮ ಮುದ್ರಣ : 2004
ಪುಟಗಳು : 144
ಬೆಲೆ : 65 ರೂ.
ಲೇಖಕರಾದ ಶ್ರೀ ಎಸ್. ಲೋಕೇಶ್ ಅವರು ಚೆನ್ನಗಿರಿ ತಾಲೂಕಿನ ಸಂತೇಬೆನ್ನೂರಿನವರು. ವೃತ್ತಿಯಲ್ಲಿ ಪೊಲೀಸ್ ಪ್ರವೃತ್ತಿಯಲ್ಲಿ ಬರಹಗಾರರು. ಇವರ ಮೊದಲ ಕಾದಂಬರಿ 'ಒಂದು ಮಸಿ, ಒಂದು ಚಿತ್ರ'. ಎರಡನೆಯದು ಪತ್ತೇದಾರಿ ಕಾದಂಬರಿ 'ದಮನ'. ಅದಮ್ಯ ಅವರ ಮೂರನೆಯ ಕಾದಂಬರಿ. ಇದು ಕೌಟುಂಬಿಕ ಪತ್ತೇದಾರಿ ಕಾದಂಬರಿ. ಇವರು ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವುದರಿಂದ.. ಅಲ್ಲಿನ ಅನುಭವವೂ ಈ ಕಾದಂಬರಿಯಲ್ಲಿ ಮಿಳಿತವಾಗಿ ಒಂದು ಪಕ್ವವಾದ ಕಾದಂಬರಿ ಮೂಡಿಬಂದಿದೆ. ಸ್ಥಳ, ಕತೆ, ಪಾತ್ರಗಳು ಕಾಲ್ಪನಿಕವೆಂದಿದ್ದಾರೆ.
ಹಾಸನ ಜಿಲ್ಲೆಯ ಅತ್ತಿಗೇರನಹಳ್ಳಿಯಲ್ಲಿ ಪ್ರಾರಂಭವಾಗುವ ಈ ಕಥೆ ಅಲ್ಲಿನ ಒಂದು ಕೂಡು ಕುಟುಂಬದಿಂದ ಶುರುವಾಗುತ್ತದೆ. ಹಳ್ಳಿಯಲ್ಲಿ ವಿದ್ಯಾವಂತರಂದೇ ಹೆಸರು ಪಡೆದಿದ್ದ ಅಣ್ಣ-ತಮ್ಮಂದಿರಾದ ಹನುಮೇಗೌಡ, ಕರೀಗೌಡ ಹಾಗೂ ದಾಸೇಗೌಡರದ್ದು ಸಹಬಾಳ್ವೆಯ ಕುಟುಂಬ.
ಹನುಮೇಗೌಡರು ವಿದ್ಯಾವಂತರಲ್ಲದಿದ್ದರೂ.. ವಿದ್ಯಾವಂತರನ್ನು ಮೀರಿಸುವ ಜಾಣ್ಮೆ, ಕೌಶಲ್ಯ ಹಾಗೂ ನಡವಳಿಕೆಯಿತ್ತು. ಹಳ್ಳಿಯ ಹಿರಿತಲೆಯಾಗಿ ಅಲ್ಲಿ ನಡೆಯುವ ಪ್ರತಿಯೊಂದು ಕೆಲಸ ಕಾರ್ಯದಲ್ಲಿಯೂ ಅವರ ಉಪಸ್ಥಿತಿ ಇರುತ್ತಿತ್ತು. ಜನರನ್ನು ಗೌರವದಿಂದಲೇ ತನ್ನ ಆಡಳಿತದ ಚೌಕಟ್ಟಿನಲ್ಲಿ ಇಟ್ಟುಕೊಂಡಿದ್ದರು. ಹಳ್ಳಿಯ ಜನರನ್ನು ತನ್ನ ಮಕ್ಕಳಂತೆ ಪ್ರೀತಿಸುತ್ತಿದ್ದರು ಇವರ ಪತ್ನಿ ನಾಗಮ್ಮ. ಇವರಿಗೆ ಒಬ್ಬಳೇ ಮಗಳು ಚೆನ್ನಮ್ಮ. ಈಕೆಯನ್ನು ವರದನಹಳ್ಳಿಯ ನಾಗೇಗೌಡರಿಗೆ ಕೊಟ್ಟು ವಿವಾಹ ಮಾಡಿದ್ದರು. ನಾಗೇಗೌಡರು ಎಂ.ಎಲ್.ಎ ಆಗಿದ್ದವರು ಮದುವೆಯಾದ ನಂತರ ಮಂತ್ರಿಯಾಗಿದ್ದರು ಹೀಗಾಗಿ ಹನುಮೇಗೌಡರ ಕುಟುಂಬಕ್ಕೆ ಮತ್ತಷ್ಟು ಗೌರವ ಹೆಚ್ಚಿತ್ತು.
ಕರೀಗೌಡರು ವಿದ್ಯಾವಂತರಾಗಿದ್ದು ಹಾಸನದ ಸರ್ಕಾರಿ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿದ್ದರುಮ್ ಆಕರ್ಷಕವಾಗಿ ಪಾಠ ಮಾಡುತ್ತಿದ್ದ ಶೈಲಿಯಿಂದ ಮಕ್ಕಳನ್ನು ಹಾಗೂ ಸ್ನೇಹಪರತೆಯಿಂದ ಉಪಾಧ್ಯಾಯರೆಲ್ಲರಿಗೂ ಅಚ್ಚುಮೆಚ್ಚು. ಇವರು ಪಟ್ಟಣದಲ್ಲಿಯೇ ನೆಲೆಸಿದ್ದು, ಆಗಾಗ ಹಳ್ಳಿಗೆ ಬಂದು ಹೋಗುತ್ತಿದ್ದರು. ಅಣ್ಣನ ಮಾರ್ಗದಲ್ಲಿಯೇ ನಡೆಯುತ್ತಿದ್ದರು. ಇವರ ಪತ್ನಿ ಮಲ್ಲವ್ವ. ವಿದ್ಯಾವಂತೆಯೂ ಅಲ್ಲ, ಗುಣವಂತೆಯೂ ಅಲ್ಲ. ಮತ್ತೊಬ್ಬರಿಗೆ ಹೇಗೆ ತೊಂದರೆ ಕೊಡುವುದು ಎಂಬುದನ್ನೇ ಆಲೋಚಿಸುತ್ತಿದ್ದು.. ಕೂಡು ಕುಟುಂಬದಿಂದ ಹೊರಗೆ ಬಂದರೆ ಸಾಕು ಎಂದೇ ಭಾವಿಸುತ್ತಿದ್ದರು. ಇವರಿಗೆ ಒಬ್ಬ ಮಗ ಸುಂದರ್ ಹಾಗೂ ಮಗಳು ಸುಗುಣ. ಸುಂದರ್ ತನ್ನ ತಾಯಿಯಿಂದ ಪ್ರೇರಣೆ ಪಡೆದಿದ್ದರೆ.. ಸುಗುಣ ತಂದೆಯಂತೆ ನಡೆ-ನುಡಿಯಲ್ಲಿ ಗುಣವತಿಯಾಗಿದ್ದಳು. ಆಕೆಗೆ ಬ್ಯಾಕೋಡಿನ ರಾಜಕೀಯ ಮುಖಂಡರಾದ ಮರಿಗೌಡರ ಜೊತೆ ವಿವಾಹವಾಗಿತ್ತು. ಅವರು ಎಂ.ಎಲ್.ಎ ಆಗಿ ಆಯ್ಕೆಯಾಗಿದ್ದರು.
ಕೊನೆಯವನೇ ದಾಸೇಗೌಡ. ಇಬ್ಬರು ಅಣ್ಣಂದಿರಿಗಿಂತ ಭಿನ್ನ. ಮಹಾಭಾರತದ ಕರ್ಣನಂತೆ ಕಷ್ಟದಲ್ಲಿದ್ದವರ ಸಹಾಯಕ್ಕೆ ಸದಾ ಹೆಗಲು ನೀಡುತ್ತಿದ್ದವರು. ಇವರ ಪತ್ನಿ ನಿಂಗಮ್ಮ. ಇವರಿಗೆ ಇಬ್ಬರು ಗಂಡು ಹಾಗೂ ಇಬ್ಬರು ಹೆಣ್ಣುಮಕ್ಕಳು. ದೊಡ್ಡವನಾದ ರಾಮನಾಥ ತನ್ನ ಭಾವಂದಿರಾದ ನಾಗೇಗೌಡ ಹಾಗೂ ಮರಿಗೌಡರ ಪ್ರಭಾವದಿಂದ ತಾನು ರಾಜಕೀಯಕ್ಕೆ ಸೇರಿ ರಾಜಕಾರಣಿ ಆಗಬೇಕೆಂದು ಓದಿಗೆ ನಮಸ್ಕರಿಸಿ ಹಳ್ಳಿಯ ಪುಡಿ ರಾಜಕೀಯದಲ್ಲಿ ತೊಡಗಿದ್ದನು. ಚಿಕ್ಕೇಗೌಡ ಬಿ.ಎ ಪಾಸು ಮಾಡಿಕೊಂಡಿದ್ದರೂ ಆತ ಸದಾ ಅಂತರ್ಮುಖಿಯಾಗಿರುತ್ತಿದ್ದ. ಯಾವುದರ ಕುರಿತೂ ಆತನಿಗೆ ಆಸಕ್ತಿ ಇರಲಿಲ್ಲ. ಹಿರಿಯ ಮಗಳು ಹೇಮಾವತಿಯನ್ನು ಬಾಳಹಳ್ಳಿಯ ರಂಗೇಗೌಡನಿಗೆ ಕೊಟ್ಟು ವಿವಾಹ ಮಾಡಿದ್ದರು. ಕೊನೆಯವಳೇ ಕಾವೇರಿ. ಕಾವೇರಿಯ ವಿವಾಹ ಇನ್ನೂ ಬಾಕಿಯಿತ್ತು. ಈಕೆ ಆಟೋಟಗಳಲ್ಲಿ ಮತ್ತು ವಿದ್ಯಾಭ್ಯಾಸದಲ್ಲಿ ಸದಾ ಮುಂದು. ಹಾಗಾಗಿ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಹಾಸನದ ಕಾಲೇಜಿಗೆ ಕಳುಹಿಸುತ್ತಿದ್ದರು. ಕುಟುಂಬದ ಆ ತಲೆಮಾರಿನಲ್ಲಿ ಆಕೆಯೇ ಓದಿನಲ್ಲಿ ಮುಂದಿದ್ದವಳು.
ದೊಡ್ಡಪ್ಪ ಕರೀಗೌಡರ ಮನೆಯಲ್ಲಿ ನೆಲೆಸುವ ಅವಕಾಶವಿದ್ದರೂ.. ಅಲ್ಲಿ ನೆಲೆಸದೇ ದಿನಾ ಊರಿಗೆ ಬಂದು ಹೋಗಿ ಮಾಡುತ್ತಿದ್ದಳು.
ಕರೀಗೌಡರ ಪತ್ನಿ ಮಲ್ಲವ್ವ ಆಸ್ತಿಯಲ್ಲಿ ಭಾಗ ಕೇಳಬೇಕೆಂದು ಗಂಡನೊಡನೆ ಒತ್ತಾಯಿಸುತ್ತಾ.. ದಿನವೂ ಜಗಳ ಮಾಡುತ್ತಿದ್ದ ಸಂದರ್ಭದಲ್ಲಿಯೇ ಒಂದು ದಿನ ಕಾವೇರಿ ಅವರ ಮನೆಯಲ್ಲಿ ಉಳಿಯಬೇಕಾದ ಪ್ರಸಂಗ ಬಂದಿತು. ಕಾಲೇಜಿನ ಕ್ರೀಡಾಕೂಟದ ಸಮಾರಂಭವೊಂದರ ಬಹುಮಾನ ವಿತರಣೆಗೆಂದು ಹೊಸದಾಗಿ ಬಂದಿದ್ದ ಸಬ್ ಇನ್ಸ್ಪೆಕ್ಟರ್ ಅಕ್ಷಯ್ ಮುಖ್ಯ ಅತಿಥಿಯಾಗಿ ಬಂದಿದ್ದರು. ಅಂದಿನ ಸಮಾರಂಭ ಮುಗಿಯುವ ಹೊತ್ತಿಗೆ ವೇಳೆಯಾಗಿತ್ತು.
ಸಾಯಂಕಾಲ ಕಾವೇರಿ ತನ್ನ ಹಳ್ಳಿಗೆ ಹೋಗಬೇಕೆಂದು ಬಸ್ ಸ್ಟ್ಯಾಂಡ್ ಗೆ ಹೋಗುತ್ತಿರುವಾಗ ಹಿಂದಿನಿಂದ ಕಾರಿನಲ್ಲಿ ಬಂದವರು ಯಾರೋ ಆಕೆಯನ್ನು ಅಪಹರಿಸಿಕೊಂಡು ಹೋಗುವಾಗ ತನ್ನ ಶಕ್ತಿಬಲದಿಂದ ತಪ್ಪಿಸಿಕೊಳ್ಳಲು ನೋಡಿ, ಸಹಾಯಕ್ಕಾಗಿ ಬೇಡಿದಳು. ಅಚಾನಕ್ ಎನ್ನುವಂತೆ ಅಕ್ಷಯ್ ರವರು ಅದೇ ಸಂದರ್ಭದಲ್ಲಿ ಅಲ್ಲಿದ್ದವರು ಬಂದು ಕಾಪಾಡಿದರು. ಇಷ್ಟು ಹೊತ್ತಿನಲ್ಲಿ ಊರಿಗೆ ಹೋದರೆ ಸರಿಯಾಗದೆಂದು ಕರೀಗೌಡರ ಮನೆಯಲ್ಲಿ ಉಳಿಯಲು ಹೋದಾಗ ದೊಡ್ಡಮ್ಮ ಮಲ್ಲವ್ವನ ಮಾತು ಕೇಳಿ ಕಾವೇರಿ ರೊಚ್ಚಿಗೆದ್ದಳು. ತನ್ನ ಸ್ವಾಭಿಮಾನದಿಂದ ಅಲ್ಲಿ ನಿಲ್ಲಲಾಗದೆ, ಅಕ್ಷಯರವರನ್ನು ಊರಿಗೆ ತಲುಪಿಸಲು ಸಹಾಯಕ್ಕಾಗಿ ಬೇಡಿದಳು.
ಅವರು ತಮ್ಮ ತಾಯಿ ರಂಗಮ್ಮನವರ ಜೊತೆ ಬಂದಾಗ ಕರೀಗೌಡರು ಜೊತೆಗೆ ಬಂದು ಕಾವೇರಿಯನ್ನು ಊರಿಗೆ ಕರೆತಂದರು. ಆದರೆ, ಈ ವಿಚಾರವಾಗಿ ಅವರೇನೂ ಹೇಳದಿದ್ದರೂ.. ಕರೀಗೌಡರೆ ತನ್ನ ಹೆಂಡತಿಯ ವರ್ತನೆಯಿಂದ ನಾಚಿಕೊಂಡು, ತನ್ನ ಅಸಹಾಯಕತೆಯನ್ನು ತಿಳಿಸಿ ಕ್ಷಮಿಸಬೇಕೆಂದು ಅಣ್ಣ-ತಮ್ಮಂದಿರಿಗೆ ಎಲ್ಲಾ ಸತ್ಯವನ್ನು ಹೇಳಿದ್ದರು.
ಇದಾದ ನಂತರ ಮಲ್ಲವ್ವನ ಮಾತುಗಳು ಹಾಗೂ ಒಡಕು, ದುರ್ಬುದ್ಧಿ ಸರಿಯಾಗದೆ.. ಕಾವೇರಿಯ ಕುರಿತು ಕೆಟ್ಟದಾಗಿ ಮಾತನಾಡಿದಾಗ ತಾಳಲಾಗದೆ.. ಅಣ್ಣ-ತಮ್ಮಂದಿರೆಲ್ಲರೂ ಪಾಲಾಗಿಯಾಗಿತ್ತು. ಆದರೂ.. ಸಮಾಧಾನವಾಗದೇ.. ಕಾವೇರಿಯ ಕುರಿತು ಆಕೆ ಆಡುತ್ತಿದ್ದ ಮಾತುಗಳು ಅವಳ ಕೀಳು ಮನೋಭಾವವನ್ನು ತೋರಿಸುತ್ತಿದ್ದವ ಸುಂದರ ತಾಯಿಯಂತೆ ಮಾತನಾಡಲು ಆಗದೆ, ತಂಗಿಯ ಕುರಿತು ಮಮಕಾರ ತೋರುತ್ತಿದ್ದ.
ಕಾವೇರಿ ತನ ವಿದ್ಯಾಭ್ಯಾಸವನ್ನು ನಿಲ್ಲಿಸದೆ ಕಾಲೇಜಿಗೆ ಹೋಗುತ್ತಿದ್ದಳು. ಪ್ರಾಣಿ ಶಾಸ್ತ್ರದ ಉಪನ್ಯಾಸಕರಾದ ಪುಟ್ಟುಸಿಂಗ್ ರವರು ಆಕೆಯನ್ನು ಇಷ್ಟಪಡುತ್ತಿದ್ದರು. ಆದರೆ, ತಮ್ಮ ಪ್ರೇಮವನ್ನು ಇನ್ನೂ ನಿವೇದಿಸಿರಲಿಲ್ಲ.
ತಮ್ಮ ಮೊದಲ ನೋಟದಲ್ಲಿಯೇ ಇಷ್ಟವಾದ ಕಾವೇರಿಗೆ ಅಕ್ಷಯ್ ಅದರ ಕುರಿತಾಗಿ ಹೇಳಿದ್ದರು. ಇನ್ನೊಮ್ಮೆ ಕಾವೇರಿಯ ಅಪಹರಣದ ಪ್ರಯತ್ನವೂ ನಡೆಯಿತು. ಅದನ್ನು ಮಾಡಿದ್ದು ಅದೇ ಕಾಲೇಜಿನ ರಾಧೇಶ ಹಾಗೂ ರುಕ್ಮಾಂಗದ, ಜಾರ್ಜ್ ಮತ್ತು ತಂಗಮಣಿ ತಂಡದವರು. ಆಗ ಅವಳ ಸಹಪಾಠಿಯೇ ಆಗಿದ್ದ ರಾಕೇಶ್ ಸಮಯಕ್ಕೆ ಸರಿಯಾಗಿ ಬಂದು ಆಕೆಯನ್ನು ರಕ್ಷಿಸಿದ್ದ. ಕಾವೇರಿಗೆ ಆತನ ಕುರಿತು ಸೆಳೆತವೂ ಇದ್ದುದರಿಂದ ಅಕ್ಷಯರವರಿಗೆ ಯಾವುದೇ ಉತ್ತರ ನೀಡಿರಲಿಲ್ಲ. ಇದೆಲ್ಲದರ ನಂತರ ಕಾವೇರಿ ಕಾಲೇಜು ಬಿಟ್ಟು ತಂದೆಯೊಂದಿಗೆ ಕೃಷಿ ಕೆಲಸಕ್ಕೆ ಕೈಜೋಡಿಸಿದ್ದಳು.
ಇದೆಲ್ಲವೂ ಆದ ನಂತರ ಅಕ್ಷಯರವರು ತಾವೇ ತಮ್ಮ ತಾಯಿಯೊಡನೆ ಬಂದು, ಹಿರಿಯರೊಡನೆ ವಿವಾಹದ ಪ್ರಸ್ತಾಪ ಮಾಡುವುದಾಗಿ ಹೇಳಿದ್ದರು. ಅಷ್ಟರೊಳಗೆ ಚೆನ್ನಮ್ಮನ ಊರಿನ ಜಾತ್ರೆ ಇದ್ದುದರಿಂದ ಕಾವೇರಿ ಹಾಗೂ ಆಕೆಯ ಅಣ್ಣ ಚಿಕ್ಕೇಗೌಡನ ಹೊರತಾಗಿ ಉಳಿದೆಲ್ಲರೂ ಜಾತ್ರೆಗಾಗಿ ಹೋಗುವ ಸಂದರ್ಭ ಬಂದಿತ್ತು. ಅಂದು ನಡೆದ ದುರ್ಘಟನೆ ಇಡೀ ಕುಟುಂಬದ ನೆಮ್ಮದಿಯ ಬುಡವನ್ನೇ ಅಲುಗಾಡಿಸಿತ್ತು.
ಕಾವೇರಿ ರಾತ್ರಿ ಹೊಲಕ್ಕೆ ನೀರು ನೋಡಲು ಹೋದಾಗ ಆಕೆಯ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಕೊಲೆ ಮಾಡಿದ್ದರು. ಇತ್ತ ಚಿಕ್ಕೇಗೌಡ ನೇಣು ಹಾಕಿಕೊಂಡು ಒಂದು ಪತ್ರವನ್ನು ಬರೆದಿಟ್ಟ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿದ್ದ.
ಇದರ ಹಿಂದಿನ ಮರ್ಮಗಳೇನು ಎಂದು ತಿಳಿಯಲು ಬಂದ ಪೊಲೀಸರಿಗೆ ಹಾಸನ ವಾಯ್ಸ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸಂಗತಿಯೊಂದು ಗಮನಸೆಳೆಯುತ್ತದೆ. ಇದರ ಕುರಿತು ಗೋಪಾಲ್ ವಿಚಾರಿಸಲು ಹೊರಟಾಗ ರಾಕೇಶ್, ಅಕ್ಷಯ್ ಹಾಗೂ ಪುಟ್ಟುಸಿಂಗ್ ಮೇಲೆ ಅನುಮಾನವಿದ್ದಂತಿತ್ತು.
ಮರಿಗೌಡರ ರಾಜಕೀಯ ಭವಿಷ್ಯಕ್ಕೂ ಕುತ್ತು ಬರುವ ಸಾಧ್ಯತೆಯೂ ಇದ್ದಿತು. ಕರೀಗೌಡರ ಪತ್ನಿ ಪಾಲಾಗುವ ದಿನ ನಡೆಸಿದ ರಾದ್ಧಾಂತದ ಫಲವಾಗಿತ್ತೇ..??
ಕೌಟುಂಬಿಕ ಕಲಹಗಳು ಚಿಕ್ಕೇಗೌಡ ಹಾಗೂ ಕಾವೇರಿಯ ಸಾವಿಗೆ ಕಾರಣವಾಯಿತೇ ಅಥವಾ ಪತ್ರಿಕೆಯಲ್ಲಿ ಬಂದಂತೆ ಈ ಮೂವರಲ್ಲಿ ಯಾರಾದರೂ ಅಪರಾಧಿಗಳೇ ಅಥವಾ ಅಪಹರಣದ ಪ್ರಯತ್ನ ಮಾಡಿದ್ದವರೇ ಎಂಬ ಪತ್ತೇದಾರಿ ಜಾಡಿನಲ್ಲಿ ಸಾಗುವ ಕಥೆ ರೋಚಕತೆಯಿಂದ ಕೂಡಿದೆ. ಅಗಮ್ಯ ಎಂಬ ಶೀರ್ಷಿಕೆಗೆ ಅರ್ಥ ತಿಳಿಯಬೇಕಾದರೆ ಅಂತ್ಯವನ್ನು ತಿಳಿಯಬೇಕು.
ಅದೇ ಇಲಾಖೆಯಲ್ಲಿ ಕೆಲಸ ಮಾಡುವ ಲೇಖಕರು, ಒಂದೊಳ್ಳೆ ಕಾದಂಬರಿಯ ಮೂಲಕ ನಮ್ಮ ಮೆದುಳಿಗೂ ಕೆಲಸ ಕೊಡುತ್ತಾರೆ. ಒಂದೊಳ್ಳೆ ಚಲನಚಿತ್ರವಾಗುವಂತಹಾ ಸಾಧ್ಯತೆ ಇರುವ ಕಥೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ