ಬುಧವಾರ, ಏಪ್ರಿಲ್ 15, 2026

ಕಸ್ತೂರಿ (ಪುಸ್ತಕ ಯಾನ - 181)


ಪುಸ್ತಕದ ಶೀರ್ಷಿಕೆ : ಕಸ್ತೂರಿ

ಲೇಖಕರು : ವಾಣಿ

ಪ್ರಕಾಶಕರು : ಲಲಿತ ಸಾಹಿತ್ಯ ಮಾಲೆ

ಪ್ರಥಮ ಮುದ್ರಣ : 1944

ಪುಟಗಳು : 112


1944ರಲ್ಲಿ ಶ್ರೀಮತಿ ವಾಣಿಯವರ ಪ್ರಕಟಿತ ಕಥಾಸಂಕಲನದ ಸಂಪಾದಕರು ಚುಳಕಿ ಗೋವಿಂದರಾಯರು. ಈ ಕಥಾ ಸಂಕಲನಕ್ಕೆ ಮಾಸ್ತಿಯವರ ಮುನ್ನುಡಿ ಇದ್ದು ವಾಣಿಯವರ ಬರವಣಿಗೆಯ ಶಕ್ತಿಯ ಜೊತೆಗೆ ಅವರ ವಾಗ್ಝರಿಯ ಕುರಿತೂ ಪ್ರಶಂಸಿಸಿದ್ದಾರೆ. 


ಈ ಕಥಾ ಸಂಕಲನದಲ್ಲಿ ಏಳು ಕಥೆಗಳಿವೆ. ಇಂದಿನ ದಿನಗಳಲ್ಲಿ ಸಾಮಾನ್ಯವಾಗಿ ಕಥಾಸಂಕಲನದ ಶೀರ್ಷಿಕೆಯು ಅದೇ ಹೆಸರಿನ ಒಂದು ಕಥೆಯಾಗಿರುವುದನ್ನು ಗಮನಿಸಬಹುದು. ಆದರೆ, ಈ ಕಥಾಸಂಕಲನದ ಹೆಸರಿನ ಶೀರ್ಷಿಕೆಯ ಕತೆಯಿಲ್ಲ. ಬದಲಾಗಿ ಕಸ್ತೂರಿ ಕನ್ನಡದ ಕಂಪಿನ ಕಥೆಗಳಿವೆ. ಇಲ್ಲಿನ ಹಲವಾರು ಕಥೆಗಳು ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದು ಮೆಚ್ಚುಗೆಯನ್ನು ಗಳಿಸಿವೆ.


ಅರ್ಪಣೆಯಂತೆ ಇಲ್ಲಿ 'ಮುಡಿಪು' ಎನ್ನುವಲ್ಲಿ ಕಸ್ತೂರಿಯ ಕಂಪಿನ ಕುರಿತು ಹೇಳಿದ್ದಾರೆ 

ಕಸ್ತೂರಿಯ ಕಂಪೆಲ್ಲಿ ಪೋಪುದು ?

ಕಾಣದಿದ್ದರೂ ನೋಟಕೆ !

ನಿನ್ನ ಮೂರುತಿ ಕಾಣದಾದರು; 

ನೆನಪು ಉಳಿಯದೆ ?ಅಳಿವುದೆ !

ನಿನ್ನ ಪ್ರೇಮದ ಸವಿಯ ನೆನಪಿಗೆ 

ಮುಡಿಪು ಈ ಸುಮ ಸೋದರ !


ಮುರಲಿ : ಪ್ರಕೃತಿಯ ಮಗನಂತೆ ಬೆಳೆಯುತ್ತಿದ್ದ ಮುರಲಿಗೆ ಪ್ರಕೃತಿಯೇ ವರ ನೀಡಿದಂತೆ ದೈವದತ್ತವಾದ ಕಂಠವಿತ್ತು. ಅದಕ್ಕೂ ಮೀರಿದ ಒಳ್ಳೆಯತನದಿಂದ.. ಆತ ಊರಿನ ಎಲ್ಲರಿಗೂ ಅಚ್ಚುಮೆಚ್ಚಾಗಿ ಎಲ್ಲರ ಮಗನಂತೆಯೇ ಇದ್ದನು. ಆದರೆ, ಇದ್ದಕ್ಕಿದ್ದಂತೆ ಆತ 'ಪತಿತ' ಎಂದು ಹರಡಿದ ಗಾಳಿಸುದ್ದಿ ಕ್ರಮೇಣ ಜನರ ಮನಸ್ಸಿನಲ್ಲಿ ಆತನ ಕುರಿತು ಬೇರೆಯ ಭಾವ ಮೂಡಿಸಿತ. "ಜನರು ಗಂಡಸಿನ ತಪ್ಪನ್ನು ಸಾಧಾರಣವಾಗಿ ಅಷ್ಟಾಗಿ ಗಣಿಸುವುದಿಲ್ಲ." ಇದು ಈ ಕಾಲಕ್ಕೂ ಪ್ರಸ್ತುತ ಮಾತು ಎಂದರೆ ತಪ್ಪಾಗಲಾರದು. ಆಗ ಮುರಳಿಯ ಬದುಕಿನಲ್ಲಿ ಬಂದ ಆ ಹುಡುಗಿಯ ಕುರಿತಾಗಿ ಎಲ್ಲರ ಹುಡುಕಾಟ ಶುರುವಾಗುತ್ತದೆ. ಆದರೆ, ಒಂದು ದಿನ ಸಾಹುಕಾರರ ಮಗನ ಮದುವೆಯ ಸಲುವಾಗಿ ಎಲ್ಲರೂ ಹೋಗಿದ್ದರೂ.. ಭೀಮ ಬಂದದ್ದು ಹಾಗೂ ಆತನ ನಿಶ್ಚಲ ಪ್ರೀತಿ ಮುರಳಿಯ ಮನಸ್ಸಿನ ವೇದನೆಯೆಲ್ಲವನ್ನೂ ಹೊರ ಹಾಕುವಂತೆ ಮಾಡುತ್ತದೆ.

ವರ್ಷಾಂತರಗಳಿಂದ ಅವನ ಮನಸ್ಸನ್ನು ಆತನನ್ನು ಚೆನ್ನಾಗಿ ಅರಿತಿದ್ದ ಜನರ ನಂಬಿಕೆ ಅಷ್ಟು ಬೇಗ ಗಾಳಿಸುದ್ದಿಗೆ ಕೆಟ್ಟದ್ದು, ಮುರಲಿಯ ಮನಸ್ಸನ್ನು ಕಲಕಿದ್ದಕ್ಕಿಂತ..ಭೀಮನ ನಿಶ್ಚಲ ಪ್ರೀತಿಯೇ ಕಲಕಿದ್ದು ಹೌದು. ಮುರಳಿ ತೆಗೆದುಕೊಂಡ ಆ ನಿರ್ಧಾರವೇನು..?? ಎಂಬುದನ್ನು ಓದಿ ತಿಳಿಯಿರಿ.


ಮಾನಾಪಮಾನ ಕೇವಲ ಹೆಣ್ಣುಮಕ್ಕಳಿಗೆ ಮಾತ್ರವೇ..?? ಎಲ್ಲರಿಗೂ ನಿಜ ವಿಚಾರವನ್ನು ತಿಳಿಸಬಹುದಾಗಿದ್ದರೂ.. ಎಲ್ಲರಲ್ಲೂ ನಂಬಿಕೆ ಮೂಡಿಸುವುದು ಸುಲಭವಲ್ಲ. 'ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ' ಎನ್ನುವಂತೆ ನಂಬಿಕೆ ಕಳೆದುಹೋಗಲು ಕೆಲ ಕ್ಷಣಗಳು ಸಾಕು. ಆದರೆ, ನಂಬಿಕೆ ಮೂಡಿಸಲು ಅದೆಷ್ಟು ಕಾಲ ಬೇಕಲ್ಲವಾ..! ಎನ್ನಿಸಿತು. ಹುಡುಗಿಯ ಹೆಸರು ಕೆಡಬಾರದೆಂಬ ಮುರಲಿಯ ಕಾಳಜಿ ಇಷ್ಟವಾಯಿತು. ತಾನು ತನ್ನ ಕಾಲ ಮೇಲೆ ನಿಂತು ಮನುಷ್ಯನಾಗುವ ಕುರಿತು ಆಡುವ ಮಾತು ಆತನ ಸ್ವಾಭಿಮಾನದ ಸಂಕೇತವಾಗಿ ಕಂಡಿತು. 


ಕಡೆಯ ದಿನ : ಶ್ರೀಧರ ಹಾಗೂ ಕುಸುಮರ ಸಂಸಾರ ಕುಸುಮಳ ದೆಸೆಯಿಂದ ಚೆನ್ನಾಗಿಯೇ ಸಾಗುತ್ತಿತ್ತು. ಆಗಾಗ ಶ್ರೀಧರನ ಗೆಳೆಯ ವಾಸು ಅಲ್ಲಿಗೆ ಹೋಗಿ ಬರುವುದಿತ್ತು. ಕುಸುಮಳ ವಿಚಾರದಲ್ಲಿ ಅವನಿಗೆ ಸಹಾನುಭೂತಿ. ಆಕೆಯ ಅಭಿರುಚಿಗಳನ್ನು ಕಂಡು ಮೆಚ್ಚುಗೆ. ಶ್ರೀಧರ ಎಲ್ಲವನ್ನೂ ತಾನೇ ತಿಳಿದುಕೊಳ್ಳುವ ಸ್ವಭಾವದವನಲ್ಲ. ಅವರಿಬ್ಬರ ಮೌನ ವಾಸುವಿಗೆ ಒಂದು ರೀತಿಯ ವ್ಯಥೆಯೂ ಆಗಿತ್ತು. ಕುಸುಮ ತಾನು ಕಡೆಯ ದಿನದ ಶೋ ನೋಡಬೇಕು ಎಂದು ಸಿನಿಮಾಗೆ ಹೋಗುವ ಆಸೆಯನ್ನು ತೋಡಿಕೊಂಡರೂ ಶ್ರೀಧರ ಬರಲಾಗಲಿಲ್ಲ. ಆದರೆ, ವಾಸು ಅಚಾನಕ್ಕಾಗಿ ಆ ಆಸೆಯನ್ನು ಈಡೇರಿಸಿದ. ಆ ಕಡೆಯ ದಿನದ ದೆಸೆಯಿಂದ ಏನೆಲ್ಲಾ ಜರುಗಿತು..??


ಗಂಡು-ಹೆಣ್ಣು ಇಬ್ಬರೂ ಒಟ್ಟಿಗೆ ಇರುವುದು ನಿಷ್ಕಲ್ಮಶವಾದ ಸಂಬಂಧದ ಸ್ನೇಹವಾಗಿ ಅಥವಾ ಸಹೋದರ-ಸಹೋದರಿಯ ಭಾವದಿಂದಲೂ ಇರಬಹುದು. ಆದರೆ, ನೋಡುವ ಕಣ್ಣಿಗೆ ತಪ್ಪು ತಿಳುವಳಿಕೆಯ ಭಾವ ಹೇಗೂ ಆಗಬಹುದು. ಅದು ಯಾವ ಕಾಲದಲ್ಲಿಯೂ ಹೊರತಲ್ಲ. ಹೆಣ್ಣಿನ ಮನಸ್ಸು ತನ್ನ ಆಸೆಯನ್ನು ಪೂರೈಸಿಕೊಳ್ಳಲು ಮೊದಮೊದಲಿಗೆ ಹಾತೊರೆದರೂ ನಂತರ ಕಾಡುವ ಪಾಪಪ್ರಜ್ಞೆಯ ಭಾವ ವ್ಯಕ್ತವಾಗಿದೆ. ಗಂಡ-ಹೆಂಡತಿಯ ನಡುವೆ ಇರಬೇಕಾದ ಸೌಹಾರ್ದತೆ, ನಂಬಿಕೆ, ಪ್ರೀತಿಯೂ ಬಿಂಬಿತವಾಗಿದೆ. 


ತುಂಗಭದ್ರ : ಹೊಸದಾಗಿ ಕಟ್ಟಿದ ತುಂಗಭದ್ರ ಅಣೆಕಟ್ಟಿನ ಉದ್ಘಾಟನೆಗೆಂದು ಬಂದ ವಿದೇಶದ ಉನ್ನತಾಧಿಕಾರಿ ಪ್ರಾರ್ಥನೆ, ಸ್ವಾಗತ ಹಾಗೂ ಸಂಗೀತಗಳಿಂದ ಸೆಳೆದಿದ್ದ ಹುಡುಗಿ ವಿಜಯಲಕ್ಷ್ಮಿಯ ಕುರಿತಾಗಿ ತಿಳಿದುಕೊಳ್ಳುತ್ತಾರೆ. ಆಕೆಯ ಭೇಟಿಯೂ ಆಗುತ್ತದೆ. ಮಾತುಕತೆಯ ನಂತರ ತನ್ನ ತಾಯಿ-ತಂದೆಯ ವಿಚಾರ ಬಂದಾಗ ತಂದೆಯ ವಿಚಾರವಾಗಿ ಕೋಪ, ಕ್ರೋಧ, ತಪ್ಪನ್ನು ತೋರದೆ.. ಎತ್ತಿ ಆಡದೆ ತಂದೆಯ ಮೇಲಿನ ಅಂತಃಕರಣ ತಿಳಿದ ಅಧಿಕಾರಿಯನ್ನು ತಾನೇ ಅವಳ ತಂದೆ ಎಂದು ಸತ್ಯ ಬಿಚ್ಚಿಡುತ್ತಾರೆ. ಆಕೆಯ ತಾಯಿ ಜಯಾಳಿಗೂ ಇದು ತಿಳಿಯುತ್ತದೆ. ಆತ ಅಷ್ಟು ದಿನಗಳ ಕಾಲ ಎಲ್ಲಿದ್ದರು..?? ಇವರಿಬ್ಬರಿಗೂ ತಿಳಿದ ಕಟುಸತ್ಯವೇನು..??


ತಾರುಣ್ಯದಲ್ಲಿ ಜೊತೆಗಿರದ ಆತನನ್ನು.. ಆಗಿನ ಕೊರತೆ ತುಂಬುತ್ತಾನೆಂದು ಈಗ ಒಪ್ಪಲು ಸಾಧ್ಯವೇ..?? ಹಳೆಯ ಜೀವನಕ್ಕೆ, ಕಷ್ಟಕ್ಕೆಸ್ ಸ್ವಾತಂತ್ರ್ಯಕ್ಕೆ ಒಗ್ಗಿ ಹೋದವರು ಹೊಸ ಜೀವನವನ್ನು ಅಪ್ಪಿ ಒಪ್ಪುವುದು ಸುಲಭವಲ್ಲ. ಮನಸ್ಸಿನ ತುಮುಲಗಳನ್ನು, ಹೆಣ್ಣಾಗಿ ಆಕೆ ತನ್ನ ಕಷ್ಟಗಳನ್ನು ತೆರೆದಿಡುವ ರೀತಿ ಹಾಗೂ ಆಕೆಯ ನಡೆ ಆಗಿನ ಕಾಲಕ್ಕೆ ಕ್ರಾಂತಿಕಾರಿ ಎನ್ನಿಸುತ್ತದೆ. ಆದರೂ.. ಮನಸ್ಸಿನಲ್ಲೇನೇ ಕಹಿ ಇದ್ದರೂ ಮಗಳ ಮನಸ್ಸಿಗೆ ಅದಾವುದೂ ಬಾರದಂತೆ ನೋಡಿಕೊಂಡ ತಾಯಿಯ ಉನ್ನತ ವ್ಯಕ್ತಿತ್ವವೂ ಕಾಣಿಸುತ್ತದೆ.


ತಾಯಿ : ಅನಂತು, ಶಾರದಾ ಹಾಗೂ ಸೀತಮ್ಮನವರ ಆ ಪುಟ್ಟ ಸಂಸಾರದಲ್ಲಿ ಅನಂತನಿಗೆ ಹುಷಾರು ತಪ್ಪಿದಾಗ ಸೀತಮ್ಮನ ಒಂದು ನಡೆ ಎಲ್ಲರಿಗೂ ಅಚ್ಚರಿ ತರಿಸಿತ್ತು. 'ಅಷ್ಟು ಕಾಯಿಲೆಯ ಮಗನನ್ನು ಬಿಟ್ಟು ಹೋಗಲು ಆ ತಾಯಿಗೆ ಮನಸ್ಸಾದರೂ ಹೇಗೆ ಬಂತು..?' ಎಂದು ದೂಷಿಸಿದವರು ಯಾರಿಗೂ ಆ ತಾಯಿಯ ಮನಸ್ಸಿನ ಅರಿವಿರಲಿಲ್ಲ. ಹಾಗೆಂದು ಅತ್ತೆ-ಸೊಸೆಯರಲ್ಲಿ ಬಾಂಧವ್ಯವಿರಲಿಲ್ಲವೆಂದಲ್ಲ. ಆದರೆ, ಇಬ್ಬರಿಗೂ ಎರಡು ಧ್ರುವದ ಅಂತರ. "ಸುಖದ ಲೇಶವೂ ಇಲ್ಲದೆ ಬೆಳೆದ ಅವರು, ಕಷ್ಟದ ನೆರಳನ್ನು ಕಾಣದ ಇವಳು.. ಅವಳ ನಾಗರಿಕತೆಗೂ ಇವರ ಮೌಢ್ಯಕ್ಕೂ ಬಹಳವೇ ಅಂತರ" ಎನ್ನುತ್ತಾ ಅವರಿಬ್ಬರ ಕುರಿತು ಹೇಳುತ್ತಾರಾದರೂ.. ಅವರ ಬದುಕನ್ನು ಚಿಕ್ಕಯ್ಯನವರು ತೆರೆದಟ್ಟ ರೀತಿ ಶಾರದೆಗೆ ಅಚ್ಚರಿ ತರಿಸುತ್ತದೆ. ಇದರಿಂದ ಏನಾದರೂ ಬದಲಾಯಿತೇ..??


"ತಾಯಿಯರು ಮಕ್ಕಳನ್ನು ಅಷ್ಟು ಆಸೆ ಇಟ್ಟುಕೊಂಡು ಬೆಳೆಸುವುದಕ್ಕಿಂತ, ಅದು ತಮ್ಮ ಕರ್ತವ್ಯವೆಂದು ತಿಳಿದು ಬೆಳೆಸುವುದು ಸುಖ" ಎನ್ನುವ ಶಾರದೆಯ ಮಾತು ಆ ಕಾಲಘಟ್ಟಕ್ಕೆ ಮುಂದುವರಿದ ಆಲೋಚನೆಯಂತೆ ಕಂಡಿತು. ಅಲ್ಲದೆ, ತಾಯಿಯರು ಅಷ್ಟು ಭಾವುಕರಾಗಿ ಯೋಚಿಸದೇ, ಕೇವಲ ಕರ್ತವ್ಯವೆಂದು ಇದನ್ನು ಮಾಡುವುದು ಸಾಧ್ಯವೇ..?? ಎಂದೂ ಅನ್ನಿಸಿತು. ಬಹುಶಃ ತಾಯಿಯಾದ ನಂತರದ ಶಾರದಳ ಮನಸ್ಥಿತಿ ಬದಲಾಗುತ್ತಿತ್ತಾ.. ಇಬ್ಬರು ಹೆಣ್ಣೇ ಆದರೂ ತಾಯಿಯ ಆಲೋಚನೆಗೂ ಪತ್ನಿಯ ಆಲೋಚನೆಗೂ ಇರುವ ವ್ಯತ್ಯಾಸ ಕಾಣುತ್ತದೆ. ಇದು ಕಾಲಘಟ್ಟದ ವ್ಯತ್ಯಾಸದ ಆಲೋಚನೆಯೂ ಹೌದು. ಅಕ್ಷರಸ್ಥರು ಹಾಗೂ ಅನಕ್ಷರಸ್ಥರ ಆಲೋಚನೆಯ ವ್ಯತ್ಯಾಸವೂ ಹೌದೆನ್ನಿಸಿತು.


ಪಯಣ : ರಾಜ ರಾಮನಾಥ ಪತ್ನಿ ಗೀತಾದೇವಿಯ ಬಳಿ ಬಂದಾಗ ಆಕೆಯ ಮನಸ್ಥಿತಿ ಕದಡಿದ್ದಕ್ಕೆ ಕಾರಣ ಆತನ ಎರಡನೆ ಮದುವೆಯ ಸುದ್ದಿ. ರಾಜರ ಪದ್ಧತಿಯಂತೆ ಮತ್ತೊಂದು ಮದುವೆಯಾಗಲು ಹೊರಟರೂ.. ಅದಾವುದೂ ಗೀತಾದೇವಿಯನ್ನು ಒಪ್ಪಿಗೆ ನೀಡುವಂತೆ ಮಾಡುವುದಿಲ್ಲ. ಇದೆಲ್ಲವನ್ನು ತೊರೆದು ಪಯಣಿಸಿದ ಗೀತಾದೇವಿ ಸೇರಿದ್ದು ಎಲ್ಲಿಗೆ..?? ಅವಳ ಆಶಯ ಸರಿಯಿತ್ತೇ ಅಥವಾ ತಪ್ಪಾಗಿತ್ತೇ..??


ತನ್ನ ಗಂಡ ಮತ್ತೊಂದು ಮದುವೆಯಾಗುತ್ತೇನೆಂದರೂ ಸುಮ್ಮನೆ ತಲೆಯಾಡಿಸಿ ಒಪ್ಪುವ ಹೆಣ್ಣಾಗಿ ಕಾಣದ ಗೀತಾದೇವಿ, ಆಕೆಯ ನಿರ್ಧಾರ ಅವಳ ಸ್ವಾಭಿಮಾನವನ್ನು ಉಳಿಸಿಕೊಳ್ಳುವ ನಡೆ ವಿಭಿನ್ನವಾಗಿ ಕಂಡಿತು. ಇಂತಹಾ ಧೃಢ ನಿರ್ಧಾರದ ಹೆಣ್ಣುಗಳು ಬಹಳವೇ ವಿರಳ. ಆದರೆ, ಇಬ್ಬರಲ್ಲೂ ಪ್ರೇಮವಿತ್ತು. ಅದು ಅರಿವಾಗಲು ವಿರಹದ ಆ ಪಯಣ ಎಷ್ಟು ಸಹಾಯಕವಾಗಿತ್ತು ಎಂಬುದರ ಜೊತೆಗೆ ಪ್ರೇಮದ ಎರಡು ಭಿನ್ನ ಮುಖಗಳು ಇಲ್ಲಿ ಕಾಣುತ್ತವೆ.


ಅರವಿಂದ : ತೀರ ಸುಖದಲ್ಲಿ ಬೆಳೆಯದಿದ್ದರೂ.. ತಂದೆ-ತಾಯಿಯ ಒಬ್ಬಳೇ ಮಗಳಾಗಿದ್ದವಳು, ಮದುವೆಯಾದ ನಂತರ ಶೀಘ್ರವಾಗಿ ಗಂಡನನ್ನು ಕಳೆದುಕೊಂಡು, ತಂದೆ-ತಾಯಿಯನ್ನು ಕಳೆದುಕೊಂಡು 

ಒಂಟಿಯಾದಾಗ ತಮ್ಮನನ್ನು ಬೆಳೆಸುವ ಹೊಣೆ ಹೊತ್ತು ಆತನ ಭವಿಷ್ಯ ರೂಪಿಸುವ ಹಾದಿಯಲ್ಲಿ 'ಅರವಿಂದ'ನಿಂದ ಗುಂಡಮ್ಮನಾಗುತ್ತಾಳೆ. ಎಲ್ಲರಿಗೂ ಬೇಕಾದ ತಾಳ್ಮೆಯ, ಜೀವನದ ಸುಖ-ದುಃಖಗಳ ಕುಲುಮೆಯಲ್ಲಿ ಕರಗಿದ ಅವಳ ತಿಳಿಯಾದ ಮನಸ್ಸು,ಅನುಭವಗಳ ಆಪ್ತ ಜೀವನ, ಮಾಸದ ನಗುವಿನೊಂದಿಗೆ ಮುಂದಿನ ಬದುಕು ಹೇಗಿತ್ತು..?? 


ಜನ ಹೆಸರಿಗೂ ವ್ಯಕ್ತಿತ್ವಕ್ಕೂ ಅದೆಷ್ಟು ಬೇಗ ಸಂಬಂಧ ಕಲ್ಪಿಸುತ್ತಾರೆ..! ಅಲ್ಲದೆ, ಹೆಸರಿನಿಂದಲೇ ಕೆಲವೊಮ್ಮೆ ವ್ಯಕ್ತಿತ್ವವನ್ನು ಅಳೆಯಲು ಹೊರಡುತ್ತಾರೆ. ಕೆಲವೊಮ್ಮೆ ಅವರನ್ನು ಛೇಡಿಸಲು, ಹಾಸ್ಯ ಮಾಡಲು ತೊಡಗುತ್ತಾರೆ. ಜೀವನದಲ್ಲಿ ಒಂದನ್ನು ಪಡೆಯಬೇಕಾದರೆ ಮತ್ತೊಂದನ್ನು ಬಿಡಬೇಕು ಎಂದು ಮಾರ್ಮಿಕವಾಗಿ ಹೇಳಿರುವ ಪರಿ ವಿಭಿನ್ನವಾಗಿದೆ. 


ಎರಡು ಚಿತ್ರ : ಗಂಗಾರಾಮ ದುಡಿಯುತ್ತಿದ್ದ ಮನೆಯಲ್ಲಿ ಒಡೆಯರಾದ ರಘುನಾಥರಾಯರು ಹಾಗೂ ತ್ರಿವೇಣಿಯವರ ಮನೆಯಲ್ಲಿದ್ದ ಎರಡು ಚಿತ್ರಗಳು 'ನಿರೀಕ್ಷೆ' ಹಾಗೂ 'ನಿರಾಸೆ' ಎಂಬ ಶೀರ್ಷಿಕೆಯ ಚಿತ್ರಗಳು. ಒಂದರಲ್ಲಿ ಮನಸ್ಸಿನಲ್ಲಿದ್ದ ಸುಖದ ಕಲ್ಪನೆಗಳ ನಿರೀಕ್ಷೆ ಹಾಗೂ ಯೌವ್ವನವಿದ್ದರೆ, ಮತ್ತೊಂದರಲ್ಲಿ ಬದುಕಿನ ಬಾಳ ಸಂಜೆಯ, ಜೀವನದ ಕಷ್ಟಕ್ಕೆ ನಲುಗಿ ನಂಬಿಕೆ ಕಳೆದುಕೊಂಡ ಮನುಷ್ಯನ ನಿರಾಶೆ ಚಿತ್ರಿತವಾಗಿತ್ತು. ಇದಕ್ಕೂ ಗಂಗಾರಾಮನ ಬದುಕಿಗೂ ಏನಾದರೂ ಸಂಬಂಧವಿತ್ತೇ..??


ಇಲ್ಲಿ ಚಿತ್ರಗಳು ಬಿಂಬಿಸುವ ವಿಚಾರಗಳ ಜೊತೆಗೆ ಶ್ರೀಮಂತರ ಮನೆಯಲ್ಲಿ ಕೆಲಸ ಮಾಡುವ ಕೆಲಸಗಾರರ ಬದುಕಿನ ಕ್ಲಿಷ್ಟತೆ ಹಾಗೂ ಅಡಕತ್ತರಿಗೆ ಸಿಲುಕಿದ ಅವರ ಪರಿಸ್ಥಿತಿಯೂ ಬಿಂಬಿತವಾಗಿದೆ. ಎರಡು ಮನೆಗಳಲ್ಲಿನ ಪರಿಸ್ಥಿತಿಯ ರೂಪಕ ಚಿತ್ರದಂತೆಯೂ ಕಾಣುತ್ತದೆ. ಶ್ರೀಮಂತರ ಮನೆಯವರಿಗೆ ಅವು ಕೇವಲ ಬೆಲೆಬಾಳುವ ಚಿತ್ರಗಳಾದರೆ ಅದರ ಕಲಾತ್ಮಕತೆ ಹಾಗೂ ಭಾವ ತಟ್ಟುವುದು ಕೆಲವರಿಗೆ ಮಾತ್ರವೇ ಎನ್ನುವುದು ಸೂಕ್ಷ್ಮವಾಗಿ ಚಿತ್ರಿತವಾದ ಪರಿ ಇಷ್ಟವಾಯಿತು.


ಮಾಸ್ತಿಯವರು ತಮ್ಮ ಮುನ್ನುಡಿಯಲ್ಲಿ ಒಂದು ಮಾತನ್ನು ಉಲ್ಲೇಖಿಸುತ್ತಾರೆ. "ಈ ಕಥೆಗಳಲ್ಲಿನ ನಡತೆ, ಸಂಗತಿ ಅಲ್ಲಲ್ಲಿ ವಾಡಿಕೆಯಲ್ಲವೆಂಬಂತೆ ಕಾಣಬಹುದು. ಆದರೆ, ಆ ವಿಷಯವನ್ನು ಅವರು ಯೋಚಿಸಿದ್ದಾರೆ. ವಾಡಿಕೆಯದು ಅಲ್ಲದಿದ್ದರೂ ಅಸ್ವಾಭಾವಿಕವಲ್ಲ ಎಂದು ನಿರ್ಧರಿಸಿಕೊಂಡಿದ್ದಾರೆ" ಎನ್ನುವ ಮಾತು ನೂರಕ್ಕೆ ನೂರು ಸತ್ಯ ಎನ್ನಿಸಿತು. 


ತಾವು ಕಂಡ ಬದುಕಿನ ಚಿತ್ರಣವನ್ನು ತೋರಿಸುವ ಚಿತ್ರಗಳು ಒಂದು ರೀತಿಯ ಕತೆಗಳಾಗಿ ಕಂಡರೆ, ಹೀಗಾದರೆ ಚೆಂದವೆನ್ನುವ ಬದಲಾವಣೆಯ ನಿರೀಕ್ಷೆ ಹೊತ್ತ ಕತೆಗಳಾಗಿಯೂ ಮನಸೆಳೆಯುತ್ತವೆ. ಇಲ್ಲಿನ ಕಥೆಗಳು ಎರಡನೇ ವರ್ಗಕ್ಕೆ ಸೇರಿದೆ ಎಂಬುದು ನನ್ನ ಅನಿಸಿಕೆ. ಮುರಳಿಯ ಸೌಮ್ಯದಂತೆ ಕಂಡರೂ ತೆಗೆದುಕೊಳ್ಳುವ ಕಠಿಣವಾದ ನಿರ್ಧಾರ, ದೂರವಾಗಿದ್ದ ಗಂಡ ಮರಳಿ ಬಂದಾಗ ಜಯಾ ತೆಗೆದುಕೊಳ್ಳುವ ನಿರ್ಧಾರ, ಗೀತಾದೇವಿ ತೆಗೆದುಕೊಂಡ ಕಠಿಣವಾದ ನಿರ್ಧಾರ, ಇಕ್ಕಟ್ಟಿನಲ್ಲಿ ಇದ್ದಾಗಲೂ ಸ್ಪಷ್ಟವಾಗಿ ತೆಗೆದುಕೊಂಡ ಗುಂಡಮ್ಮನ ನಿರ್ಧಾರ, ಗಂಗಾರಾಮ ಅಸಹಾಯಕತೆಯಲ್ಲಿ ತೆಗೆದುಕೊಳ್ಳುವ ನಿರ್ಧಾರ, ಸೀತಮ್ಮ ಭಾವನೆಗಳನ್ನು ಬಚ್ಚಿಟ್ಟುಕೊಂಡು ತೆಗೆದುಕೊಳ್ಳುವ ಗಟ್ಟಿ ನಿರ್ಧಾರ, ತನ್ನ ಗೆಳೆಯನ ಬದುಕಿನಲ್ಲಿ ವಾಸು ತೆಗೆದುಕೊಂಡ ನಿರ್ಧಾರ.. ಎಲ್ಲವೂ ಸೂಕ್ಷ್ಮವಾಗಿ ಬದಲಾವಣೆಯನ್ನು ಸೂಚಿಸಿದರೂ ನಂತರ ಬದಲಾದ ಬದುಕನ್ನೂ ತೋರುತ್ತವೆ. ಸೂಕ್ಷ್ಮವಾಗಿ ಹೇಳುವ ಕಥೆಯ ರೀತಿ ಹಾಗೂ ಭಾಷೆ 'ಕಸ್ತೂರಿ' ಕಥಾಸಂಕಲನದ ಕಂಪನ್ನು ಉಳಿಸಿ ಹೋಗುತ್ತದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ