ಬುಧವಾರ, ಏಪ್ರಿಲ್ 15, 2026

ಪ್ರೇಮಕಾವ್ಯದ ಕಹಿಬರಹ ! (ಪುಸ್ತಕ ಯಾನ - 197)


ಪುಸ್ತಕದ ಶೀರ್ಷಿಕೆ : ಪ್ರೇಮಕಾವ್ಯದ ಕಹಿಬರಹ !

ಲೇಖಕರು : ಮೀನಾ ಹರೀಶ್ ಕೋಟ್ಯಾನ್ 

ಪ್ರಕಾಶಕರು : ಓಂ ಶಕ್ತಿ ಪ್ರಕಾಶನ

ಪ್ರಥಮ ಮುದ್ರಣ :2007


ಪ್ರೇಮಕಾವ್ಯದ ಕಹಿಬರಹ ಕಾದಂಬರಿಯನ್ನು ಓದಿದಾಗ ಮೊದಲಿಗೆ ಅನಿಸಿದ್ದು ಸತ್ಯ ಯಾವಾಗಲೂ ಕಹಿಯೇ.. ಆದರೆ, ಅದನ್ನು ಅರಿಯುವ ಪ್ರಯತ್ನ ಮಾಡಿ ಆಳವಾಗಿ ಹೊಕ್ಕಾಗ ಮಾತ್ರವೇ ಆ ಸತ್ಯದ ದರ್ಶನವಾಗುತ್ತದೆ. ಮೇಲ್ನೋಟಕ್ಕೆ ಕಾಣುವಂತೆ ಕಣ್ಣಿಗೆ ಕಾಣುವುದೆಲ್ಲಾ ಖಂಡಿತವಾಗಿಯೂ ಸತ್ಯವಲ್ಲ. ಈ ಕಾದಂಬರಿ ನವರಾಗ ಸಂಗಮ ಮಾಸಪತ್ರಿಕೆಯಲ್ಲಿ ಕಾದಂಬರಿಯಾಗಿ ಪ್ರಕಟವಾಗಿತ್ತು.


ಮಗಳು ಸಂತೃಪ್ತಿ ಮುಖ ಬಾಡಿಸಿಕೊಂಡು ಬಂದಾಗ ಸುಗುಣಮ್ಮನವರಿಗೆ ಕೊಂಚ ಆತಂಕವೇ.. ಆಕೆ ಮನೆಯ ಮುದ್ದಿನ ಮಗಳು. ಅಮ್ಮನಿಗಿಂತಲೂ ತನ್ನ ಅತ್ತಿಗೆ ಸರಳಾಳ ಬಳಿ ಹೆಚ್ಚಿನ ಸಲುಗೆ, ಬಾಂಧವ್ಯ. ಅತ್ತಿಗೆ-ನಾದಿನಿ ಇಬ್ಬರೂ ಸ್ನೇಹಿತೆಯರಂತೆ ಅನ್ಯೋನ್ಯತೆಯಿಂದ ಹೊಂದಿಕೊಂಡಿದ್ದರು. 


ಹಿರಿಯ ಸೊಸೆಯಾದ ಸರಳಾಳಿಗೂ ಅತ್ತೆ-ಮಾವ ಎಂದರೆ ಪ್ರಾಣ. ತಂದೆ-ತಾಯಿ ಇಲ್ಲದೆ ಸೋದರಮಾವನ ಆಶ್ರಯದಲ್ಲಿ ಬೆಳೆದ ಅವಳು ಸುಗುಣಮ್ಮ ಹಾಗೂ ಚಂದ್ರಶೇಖರರಾಯರನ್ನೇ ತಂದೆ ಸ್ಥಾನ, ತಾಯಿಯ ಸ್ಥಾನದಲ್ಲಿ ನೋಡುತ್ತಿದ್ದಳು. ಮೈದುನನೆಂದರೆ ವಿಶೇಷ ಅಭಿಮಾನ. ನಾದಿನಿ ಅಂದರೆ ಹೆಚ್ಚಿನ ಪ್ರೀತಿ. ಮದುವೆಯಾಗಿ ಏಳು ವರ್ಷವಾಗಿದ್ದರೂ ಸರಳಾ ಮಡಿಲು ತುಂಬಿರಲಿಲ್ಲ ಎಂಬುದನ್ನು ಬಿಟ್ಟರೆ ಸಂಸಾರದಲ್ಲಿ ಬೇರಾವ ಕೊರತೆಯೂ ಇರಲಿಲ್ಲ. 


ಸಂತೃಪ್ತಿಯ ಬಳಿ ಕುಳಿತು ನಿಧಾನವಾಗಿ ಮಾತನಾಡಿದಾಗ ತಿಳಿದದ್ದು.. ಆಕೆಯ ಗೆಳತಿ ಅರುಣಾ ಆತ್ಮಹತ್ಯೆ ಮಾಡಿಕೊಂಡದ್ದು ಅವಳಿಗೆ ಹೆಚ್ಚಿನ ಆತಂಕ, ನೋವು ತಂದಿತ್ತು. ಆಘಾತವಾಗಿತ್ತು. ತನ್ನ ಬಳಿ ಮಾತನಾಡಬೇಕೆಂದು ಹಿಂದಿನ ದಿನ ಹೇಳಿದಾಗ ತಾನು ಕೇಳಿಸಿಕೊಳ್ಳಲಿಲ್ಲವೆಂಬ ಪಾಪಪ್ರಜ್ಞೆಯೂ ಅದರೊಟ್ಟಿಗೆ ಸೇರಿ ಅವಳನ್ನು ಸೂಕ್ಷ್ಮವಾಗಿ ಹಿಂಸಿಸುತ್ತಿತ್ತು. 


ಆಕೆ ನಿನ್ನ ಬಳಿ ಮಾತನಾಡಿದ ನಂತರವೂ ಆತ್ಮಹತ್ಯೆ ಮಾಡಿಕೊಂಡಿದ್ದರೆ ಬೇರೆಯ ರೀತಿ ಕೊರಗುತ್ತಿದ್ದೆಯಲ್ಲವೇ.. ಎಂದ ಅಣ್ಣ ಸಂತೋಷನ ಮಾತಿಗೆ ಅದು ಹೌದೆಂದು ಒಪ್ಪಿಕೊಂಡಳಾದರೂ ಆ ರೀತಿ ಯೋಚಿಸುವುದು ಸಹಾ ಕಷ್ಟವಿತ್ತು. 


ಅರುಣಾಳ ಸಾವಿನ ಹಿಂದಿನ ಕಾರಣ ತಿಳಿದರೆ ಮಾತ್ರವೇ ತನಗೆ ನೆಮ್ಮದಿ ಎಂದು ಅದನ್ನೇ ಮನಸ್ಸಿಗೆ ಹಚ್ಚಿಕೊಂಡು ಕೊರಗುತ್ತಾ.. ಅದರ ಹಿಂದೆ ಬಿದ್ದಿದ್ದಳು ಸಂತೃಪ್ತಿ.


ಮನೆಯಲ್ಲಿ ಎಲ್ಲರಿಗೂ ಅದೇ ಚಿಂತೆಯಾಗಿತ್ತು. ಗೆಳತಿಯ ಸಾವಿನ ಕಾರಣದ ಹಿಂದೆ ಬಿದ್ದು ಈ ಹುಡುಗಿ ತನ್ನ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾಳೆ ಎನ್ನುವ ಆತಂಕ ತುಂಬಿತ್ತು. ಆಕೆ ಬಿ.ಎಸ್ಸಿ ಓದುತ್ತಿರುವಾಗಲೇ ಸರಳ ದೂರದ ಸಂಬಂಧಿಯಾಗಿದ್ದ ಶ್ಯಾಮ್ ಜೊತೆಯಲ್ಲಿ ವಿವಾಹವೆಂದು ನಿಶ್ಚಯವಾಗಿದ್ದರೂ.. ಸಂತೃಪ್ತಿ ಅದನ್ನು ಮುಂದಕ್ಕೆ ಹಾಕುತ್ತಲೇ ಬಂದಿದ್ದಳು. ಈಗ ಎಂ.ಎಸ್ಸಿ ಮುಗಿದರೂ ಶ್ಯಾಮ್ ಜೊತೆಗಿನ ಮಾತುಕತೆ ಅರುಣಾ ಸಾವಿನ ನಂತರ ಕಡಿಮೆಯಾಗಿತ್ತು. ಆತ ಮನೆಗೆ ಬಂದಾಗಲೂ.. ಕೋಪದಿಂದಲೇ ನಡೆದುಕೊಂಡಿದ್ದಳು. ಅದಕ್ಕೆ ಕಾರಣ ತನ್ನ ಗೆಳತಿ ಅರುಣಾಳ ಸಾವಿನ ಕುರಿತು ಹೇಳಿದಾಗ ಆತ ಸರಿಯಾಗಿ ಸ್ಪಂದಿಸಲಿಲ್ಲವೆಂಬುದು.


ಆದರೆ, ತನ್ನ ಮತ್ತೊಬ್ಬಳು ಗೆಳತಿ ರಂಜಿತಗಳಿಂದ ತಿಳಿದುಬಂದ ವಿಚಾರವೆಂದರೆ, 'ಸಂಕಲ್ಪ'ದಲ್ಲಿ ನರ್ಸ್ ಆಗಿದ್ದ ಆಕೆಯ ಅಕ್ಕ ಅಲ್ಲಿಗೆ ಅರುಣಾ ತನ್ನ ಮೂರು ತಿಂಗಳ ಗರ್ಭವನ್ನು ತೆಗೆಸಿಕೊಳ್ಳಲು ಸಾಯುವ ಎರಡು ದಿನದ ಹಿಂದೆಯಷ್ಟೇ ಹೋಗಿದ್ದಳು. ಇದು ಸಂತೃಪ್ತಿಗಂತೂ ಹೆಚ್ಚಿನ ಆಘಾತವನ್ನುಂಟು ಮಾಡಿತ್ತು. ಆಕೆ ಯಾವ ಹುಡುಗನ ಜೊತೆ ಓಡಾಡಿದ್ದಾಗಲೀ, ಪ್ರೇಮ ಪ್ರಕರಣ ನಡೆಸಿಕೊಂಡಿದ್ದಾಗಲೇ ತಿಳಿದಿರಲೇ ಇಲ್ಲ.


ಇದರ ಆಳವನ್ನು ಹೊಕ್ಕುವ ಮೊದಲೇ ತಿಳಿದದ್ದೆಂದರೆ ಆಕೆಯ ಎರಡನೇ ಅಣ್ಣ ಸಂಜಯ್ ಆಕೆಯನ್ನು ಪ್ರೀತಿಸುತ್ತಿದ್ದ. ಮದುವೆಯಾದರೆ ಆಕೆಯನ್ನೇ ಎಂದು ಪತ್ರ ಬರೆದಿದ್ದ. ಆದರೆ, ಅಷ್ಟರಲ್ಲಾಗಲೇ ಅರುಣಾ ಸಾವನ್ನಪ್ಪಿಯಾಗಿತ್ತು. 


ಅರುಣಾ ಸಂಕಲ್ಪದಲ್ಲಿ ತನ್ನ ಹೆಸರಿನ ಜೊತೆಗೆ ಪತಿ ಎಂದು ಹಾಗೂ ವಿಳಾಸ ಎಂದು ಕೊಟ್ಟಿದ್ದು ಶ್ಯಾಮ್ ಸುಂದರ್ ಹೆಸರನ್ನೇ.. ಆ ವಿಳಾಸ ಕೂಡ ಈಕೆಗೆ ನಿಶ್ಚಯವಾಗುತ್ತಿದ್ದ ಹುಡುಗ ಶ್ಯಾಮ್ ನದ್ದೇ. ಆತನೇ ಎಂದು ರಂಜಿತಾ ಅಕ್ಕನ ಬಳಿ ಖಚಿತಪಡಿಸಿಕೊಂಡಿದ್ದಳು. ಅದನ್ನು ನೇರವಾಗಿ ಕೇಳಲಾಗದೆ ಇಕ್ಕಟ್ಟಿಗೆ ಸಿಲುಕಿದ್ದಳು. 


ಸಂತೃಪ್ತಿಯ ದೊಡ್ಡ ಅಣ್ಣ ಸಂತೋಷನ ಗೆಳೆಯ ಇನ್ಸ್ಪೆಕ್ಟರ್ ಆಗಿದ್ದವರು. ಅವರ ಬಳಿ ವಿಚಾರಿಸು ಎಂದು ಹೇಳಿದ ಸಂತೃಪ್ತಿಗೆ ಸಿಕ್ಕ ಉತ್ತರ ತೃಪ್ತಿದಾಯಕವಾಗಿರಲಿಲ್ಲ. ಆದರೆ, ತಿಳಿದ ಮತ್ತೊಂದು ಸತ್ಯವೆಂದರೆ ಆಕೆ ಸಾಯುವ ಹಿಂದಿನ ದಿನ ರಾತ್ರಿ ಸಂತೃಪ್ತಿಯ ಮನೆಗೆ ಕರೆ ಮಾಡಿದ್ದಳು. ತನ್ನ ಬದುಕಿನ ಎಡವಟ್ಟಿಗೆ ಕಾರಣ ಸಂಜಯ್ ಎಂದೂಮ್ಮ್ ಆತ ವಿವಾಹಕ್ಕೆ ಒಪ್ಪುತ್ತಿಲ್ಲವೆಂದು ಸಂತೋಷ್ ಬಳಿ ಹೇಳಿದ್ದಳು ಎಂಬುದನ್ನು ತಿಳಿದಾಗ ಮತ್ತಷ್ಟು ಗೊಂದಲಕ್ಕೆ ಸಿಲುಕಿದ್ದಳು.


ಸಂತೋಷ್ ಹಾಗೂ ಸಂಜಯ್ ಇಬ್ಬರ ಹೇಳಿಕೆಯು ವ್ಯತಿರಿಕ್ತವಾಗಿತ್ತು. ಅಷ್ಟೇ ಅಲ್ಲದೆ.. ಇದರ ನಡುವೆ ಶ್ಯಾಮ್ ಸಿಲುಕಿಯಾಗಿತ್ತು. ಅರುಣಾಳ ಆತ್ಮಹತ್ಯೆಗೆ ನಿಜವಾಗಿ ಕಾರಣರು ಯಾರು..?? ಅರುಣಾಳ ಬದುಕಿನಲ್ಲಿ ನಡೆದಿದ್ದ ದುರಂತವಾದರೂ ಏನು..?? ರಂಜಿತಾಳ ಅಕ್ಕ ಹೇಳಿದ್ದು ನಿಜವೇ..?? ಸಂತೃಪ್ತಿಗೆ ಈ ನಿಜ ಭೇದಿಸಿದಳೇ..?ಇದರ ನಂತರದ ಬೆಳವಣಿಗೆಗಳೇನು..?? ಸಂಜಯ್ ಹಾಗೂ ಮಿರಿಟಾಳನ್ನು ಅಷ್ಟು ಬೇಗ ಮದುವೆಯಾಗಲು ಕಾರಣವೇನು..?? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಈ ಕಾದಂಬರಿಯನ್ನು. 


ಇಲ್ಲಿ ಎರಡು ರೀತಿಯ ಪ್ರೇಮ ಪ್ರಕರಣಗಳನ್ನು ಕಾಣಬಹುದು. ಒಂದು ಪ್ರೇಮದಿಂದ ಮೋಸದ ಕಹಿಯಾದರೆ.. ಮತ್ತೊಂದು ಪ್ರೇಮ ನಿಶ್ಚಲವಾಗಿದ್ದು.. ಅನುಮಾನವನ್ನು ಬಗೆಹರಿಸಿಕೊಂಡ ನಂತರ, ಎಲ್ಲವೂ ತಿಳಿದಿದ್ದರೂ ಸಿಹಿಯಾಗಿ ನಡೆದುಕೊಳ್ಳುವುದು. ಅರುಣಾಳ ಸಾವಿನ ಕಗ್ಗಂಟು ಬಿಡಿಸುವುದು ಇಲ್ಲಿ ಅಷ್ಟೊಂದು ಸುಲಭವಾಗಿಲ್ಲ. ನಿಗೂಢವಾಗಿಯೇ ಈ ಕಾದಂಬರಿಯನ್ನು ಕಟ್ಟಿಕೊಡುತ್ತಾ ಓದಿಸಿಕೊಂಡು ಹೋಗುತ್ತಾರೆ ಲೇಖಕಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ