ಬುಧವಾರ, ಏಪ್ರಿಲ್ 15, 2026

ನೋವೂ ಒಂದು ಹೃದ್ಯ ಕಾವ್ಯ (ಪುಸ್ತಕ ಯಾನ - 182)


ಪುಸ್ತಕದ ಶೀರ್ಷಿಕೆ : ನೋವೂ ಒಂದು ಹೃದ್ಯ ಕಾವ್ಯ

ಲೇಖಕರು : ರಂಗಮ್ಮ ಹೊದೇಕಲ್ 

ಪ್ರಕಾಶಕರು : ಇಷ್ಟ ಪ್ರಕಾಶನ

ಪ್ರಥಮ ಮುದ್ರಣ : 2020

ಪುಟಗಳು : 64

ಬೆಲೆ : 130 ರೂ.


"ಬರೆಯದೇ ಉಳಿದ 

ಸಾಲುಗಳಲ್ಲಿ ಬದುಕಿದೆ"

ಎನ್ನುತ್ತಾ ಹೇಳುವ ಪ್ರೀತಿಯ ರಂಗಮ್ಮ ಮಿಸ್ ಫೇಸ್ಬುಕ್ ನಲ್ಲಿ ಜೀವ ಮಿಡಿತದ, ಜೀವನ ಪ್ರೀತಿಯ ಸಾಲುಗಳಿಂದ ಇಷ್ಟವಾಗುತ್ತಿದ್ದವರು. ವೃತ್ತಿಯಿಂದ ಶಿಕ್ಷಕರು. ಅವರ ಕೈ ಬರಹದ ಸಾಲುಗಳನ್ನೂ.. ಎಷ್ಟು ಸಾಧ್ಯವೋ ಅಷ್ಟು ಕಡಿಮೆ ಪದಗಳಿಂದ ಮಾಯಕದ ಸತ್ಯವನ್ನೂ ತೋರುವ ಆಪ್ತಜೀವ. ಫೇಸ್ಬುಕ್ ನ ಸಾಲುಗಳಿಂದ ಪರಿಚಿತವಾಗಿದ್ದವರು ಅಚಾನಕ್ಕಾಗಿ ಸಿಕ್ಕಿದ್ದು ಕಳೆದ ವರ್ಷ ದಯಾ ಗಂಗನಘಟ್ಟ ಅಕ್ಕ ಅವರ 'ಉಪ್ಪುಚ್ಚಿ ಮುಳ್ಳು' ಕಥಾಸಂಕಲನದ ಬಿಡುಗಡೆ ಸಮಾರಂಭದಲ್ಲಿ. ಬರಹದಷ್ಟೇ ಆಪ್ತವಾಗಿ ಸರಳತೆಯಿಂದ ಬೆರೆತು ಸ್ನೇಹಪೂರ್ವಕವಾಗಿ ಕೊಟ್ಟ ಪುಸ್ತಕ ನಾನು ಆಗಾಗ ಸವಿಯುವ ಕಾವ್ಯದ ಪುಸ್ತಕಗಳಲ್ಲಿ ಖಾಯಂ ಆಗಿದೆ. 


ನೋವು ಅಥವಾ ನಲಿವು ಎಂದರೆ ನಲಿವನ್ನು ಆಯ್ಕೆ ಮಾಡುವ ನಾವು ನೋವನ್ನು ದಾಟಿ ಬರುವ ಕ್ಷಣ ಜೀವನದ ಅತಿ ಪ್ರಮುಖ ಘಟ್ಟ. ಅದು ಜೀವನದ ತಿರುವೂ ಆಗಬಹುದು. ಅಂತಹಾ ನೋವನ್ನೂ ಕಾವ್ಯವಾಗಿಸುವುದು ಅಷ್ಟು ಸುಲಭವಲ್ಲ.. ಜೀವನ್ಮುಖಿ ಸಾಲುಗಳನ್ನು ಮೂಡಿಸುವುದೂ ಸುಲಭವಲ್ಲ. ಇಲ್ಲಿ ಅಂತಹಾ ಹಲವಾರು ಸಾಲುಗಳು ಒಳಗಿಳಿಯುತ್ತವೆ. ಕೆಲವನ್ನು ಮಾತ್ರ ಉದಾಹರಿಸುವೆ. ಇದು ಇಲ್ಲಿನ ಕಾವ್ಯದೊಳಗೆ ಇಳಿಯುವ ಮೆಟ್ಟಿಲುಗಳಷ್ಟೇ..


ನೋವುಗಳನ್ನು ಮೀರಿದಾಗಲೇ ಬದುಕಿನ ಲಯ ದೊರಕುವುದು. ನೋವುಗಳಿವೆ ಎಂದ ಮಾತ್ರಕ್ಕೆ ಬದುಕನ್ನು ದ್ವೇಷಿಸುತ್ತಾ ಕೂರಲಾಗದು ಎನ್ನುವ ಸತ್ಯವನ್ನು ಹಾಗೂ ನೋವುಗಳನ್ನು ದಾಟಬೇಕಾದ ಅನಿವಾರ್ಯತೆಯನ್ನೂ ಹೀಗೆ ಹೇಳುತ್ತಾರೆ. 

 ಬದುಕನ್ನು 

ಪ್ರೀತಿಸುವುದೆಂದರೆ

ನೋವುಗಳನ್ನು

ದಾಟುವುದಷ್ಟೇ !!


ಮಾತು ಹಾಗೂ ಮೌನ ಇವೆರಡರಲ್ಲಿ ಯಾವುದು ನಮ್ಮನ್ನು ಹೆಚ್ಚು ಅಭಿವ್ಯಕ್ತಿಗೊಳಿಸಿಕೊಳ್ಳುವಲ್ಲಿ ಮುಂದು ಎಂಬ ಪ್ರಶ್ನೆಗೆ ಸಮಯಕ್ಕೆ, ಸಂಧರ್ಭಕ್ಕೆ ತಕ್ಕಂತೆ ಎಂದು ಹೇಳಬಹುದು. ಆದರೆ, ಎರಡಕ್ಕೂ ಇರುವ ಮಿತಿಯನ್ನು ಎಷ್ಟು ಚೆಂದವಾಗಿ ಹೇಳಿದ್ದಾರೆಂದರೆ..

ಭಾಷೆಯಷ್ಟೇ

ಎಲ್ಲವನ್ನೂ

ಪ್ರಕಟಿಸುವುದಿಲ್ಲ!

ಮೌನ

ಎಲ್ಲರನ್ನೂ

ತಲುಪುವುದೂ ಇಲ್ಲ!


ಕಂಡ ಎಲ್ಲಾ ಕನಸುಗಳೂ ನನಸಾಗಲಾರವು. ಎಷ್ಟೋ ಕನಸುಗಳನ್ನು ಕೈಬಿಡುವ ಅನಿವಾರ್ಯತೆ ಎಲ್ಲರಿಗೂ ಒಂದಲ್ಲಾ ಒಂದು ಬಾರಿ ಬಂದಿರುತ್ತದೆ. ಆ ಕನಸುಗಳ ಅಂತ್ಯಕ್ಕೆ ಕಾರಣರಾದವರ ಬಗ್ಗೆ ಯೋಚಿಸಿದಾಗ ನಮಗೆ ಸಿಕ್ಕ ಉತ್ತರ ಇದೇ ಅಲ್ಲವೇ..??

ಇಲ್ಲಿ 

ದಿನವೂ

ಅಸಂಖ್ಯ ಕನಸುಗಳು

ಕೊಲೆಯಾಗುತ್ತವೆ !

ಕೊಲೆಗೈದವರು

ಶತ್ರುಗಳಾಗಿರುವುದಿಲ್ಲ !


ನೋವು, ಸಂಕಟಗಳಿಗೆ ನಾವು ದನಿಯಾಗುತ್ತೇವಾ..?? ಹೊರಗಿನ ಜಗತ್ತಿಗೆ ನಾವು ಎಷ್ಟು ಸಂಕಟವನ್ನು ತೆರೆದಿಡಬಹುದು..?? ಹಾಗೆ ತೆರೆದಿಟ್ಟ ಸಂಕಟಗಳೇನಾಗುತ್ತವೆ ಎನ್ನುವುದನ್ನು ಹೀಗೆ ಹೇಳುತ್ತಾರೆ.

ಎಲ್ಲ ಸಂಕಟಗಳೂ

ದಾಖಲಾಗುವುದಿಲ್ಲ !

ದಾಖಲೆಗಳೆಲ್ಲವೂ

ಮಾನ್ಯವಾಗುವುದಿಲ್ಲ !


'ಸುಂಕದವನ ಬಳಿ ಸುಖ-ದುಃಖ ತೋಡಿಕೊಂಡರಂತೆ' ಎನ್ನುವ ಆಡು ಮಾತೊಂದಿದೆ. ಎಲ್ಲರ ಬಳಿಯೂ ನೋವ ತೆರೆದಿಡಲಾಗದು. ಯಾಕೆ ಗೊತ್ತೇ..?!

ಸಂಕಟದ ಸಾಲುಗಳಿಗೆ

ಷರಾ ಬರೆಯುವವರ ಬಳಿ

ಸುಖ ದುಃಖ 

ಬಿಚ್ಚಿಡಬಾರದು ಮರುಳೆ !


ನೋವು ನೀಡುವವರು ನೋಯಿಸಿದಾಗ ಕಣ್ಣಲ್ಲಿ ನೀರು ಬಾರದಷ್ಟು ಕಲ್ಲಾಗಲಾರೆವು. ಆದರೆ, ಆ ಕಣ್ಣೀರನ್ನು ತೊಡೆದು ಮತ್ತೆ ಜೀವನ್ಮುಖಿಗಳಾಗುವ ಪರಿ ಮಾತ್ರವೇ ಮತ್ತೆ ಬದುಕಿನತ್ತ ನಮ್ಮನ್ನು ನಡೆಸಬಲ್ಲದು. ಕಣ್ಣೀರಾಗಬೇಡಿ ಎಂದಿಲ್ಲ ಬದಲಾಗಿ ಕಣ್ಣೀರು ಹಾಗಿ ಹಗುರಾಗಿ ಪುಟಿದೇಳುವ ಧೈರ್ಯ ತುಂಬಿದ್ದಾರೆ. ನೋಯಿಸುವವರಿಗೆ ನೀಡುವ, ನೀಡಬೇಕಾದ ಖಡಕ್ ಉತ್ತರ ಇದೇ ಅಲ್ಲವೇ..??

ಹೆಚ್ಚೆಂದರೆ.. ನೀವು

ನನ್ನ ಕಣ್ಣಲ್ಲಿ 

ನೀರು ತುಳುಕಿಸಬಹುದು !

ಒಳಗಿನ ಬೆಳಕ

ಕಸಿಯಲಾರಿರಿ !


ಯಾವುದನ್ನು ಕುರಿತು ಬರೆಯಬೇಕು, ಎಷ್ಟನ್ನು ಮಾತ್ರವೇ ಬಿಚ್ಚಿಡಬೇಕು ಎನ್ನುವ ಪ್ರಶ್ನೆ ಬರಹಗಾರರಿಗೆ ಕಾಡಿರಬಹುದು. ಒಳ್ಳೆಯದನ್ನು ಮಾತ್ರವೇ ಬಿಂಬಿಸಬೇಕು ಎನ್ನುವುದು ಹೌದಾದರೂ ಒಳ್ಳೆಯದಲ್ಲದನ್ನು ಬರೆಯಬಾರದಾ ಎಂದು ಆಲೋಚಿಸುವವರಿಗೆ.. ಅಂತಹವರ ತುಮುಲವನ್ನು ಏಕೆ ಚಿತ್ರಿಸಬೇಕೆಂದು ಹೇಳಿದ್ದು ವಿಭಿನ್ನವಾದ ಆಶಾವಾದದಂತೆ ಗೋಚರಿಸಿತು.

ಕಟುಕರನ್ನೂ

ಕುರಿತು ಬರೆಯಬೇಕು !

ಕ್ರೂರ ಎದೆಗಳೂ

ಹೂವಾಗುತ್ತವಾ ! ಕಾಯಬೇಕು !


ಒಂದು 

ನೋವಿತ್ತು

ನೇವರಿಸಿದೆ

ಕವಿತೆಯಾಯಿತು !

ಎನ್ನುತ್ತಾ ಹಲವಾರು ನೋವುಗಳು, ಕವಿತೆಗಳನ್ನು ನಮ್ಮ ಎದೆಗಿಳಿಸಿದ್ದಾರೆ.


ಹಂಗುಗಳಾಚೆ 

ಬದುಕು ಅರಳಬೇಕು

ನೋವೂ ಒಂದು

ಹೃದ್ಯ ಕಾವ್ಯವೇ ಆಗಬೇಕು !

ಎನ್ನುತ್ತಾ ನೋವನ್ನು ಕಾವ್ಯವಾಗಿಸುವ ಪರಿ ಹಾಗೂ ಬದುಕನ್ನು ಅರಳಿಸಿಕೊಳ್ಳುವ ಬಗೆಯನ್ನು, ಹಂಗನ್ನು ದಾಟಿ ದೂರ ನಿಲ್ಲುವ, ನಿಲ್ಲಬೇಕಾದುದನ್ನು ಹೇಳುತ್ತಾರೆ.


ನೋವುಗಳನ್ನು

ಹಾಡಬಾರದು !

ಲೋಕ

ರಾಗಕ್ಕಷ್ಟೇ ತಲೆದೂಗುತ್ತದೆ !

ಎನ್ನುತ್ತಾ ನೋವಿನ ಹಾಡುಗಳನ್ನು ಹಾಡಿದಾಗ ಉಂಟಾಗುವ ಪರಿಣಾಮವನ್ನು ಹೇಳುತ್ತಾರೆ. ಲೋಕಕ್ಕೆ ಬೇಕಿರುವುದು ಯಾವುದು ಎನ್ನುವುದರ ಜೊತೆಗೆ ನಾವು ಅದಕ್ಕೆ ಹೊಂದಿಕೊಳ್ಳಬೇಕಾದ ಅನಿವಾರ್ಯತೆಯನ್ನೂ ಚೆಂದವಾಗಿ ಸೂಕ್ಷ್ಮ ಎಚ್ಚರಿಕೆಯಾಗಿ ಹೇಳುತ್ತಾರೆ.


ಈ ಕವಿತೆಗಳನ್ನು ಓದಿ ಪುಸ್ತಕ ಮುಚ್ಚಿಡುವಾಗ ಎಷ್ಟು ಪರಿಣಾಮಕಾರಿಯಾಗಿ, ಹೂ ಹೃದಯದಿ ಬರೆದಿದ್ದಾರಲ್ಲವಾ..! ಎಂದು ಉದ್ಗರಿಸದೇ ಇರಲಾಗದು. ಜೊತೆಗೆ, ಇಡೀ ಪುಸ್ತಕ ಕೈ ಬರಹ ಹಾಗೂ ರೇಖಾಚಿತ್ರಗಳಿಂದ ಕೂಡಿರುವುದು ವಿಶೇಷ. ಇಂತಹಾ ಪುಸ್ತಕವನ್ನು ನಾನು ಇದುವರೆಗೂ ನೋಡಿಲ್ಲ. ಕೈ ಬರಹ ಇವರದ್ದೇ.. ಒಳಪುಟದ ಚಿತ್ರಗಳು ಹಾಗೂ ಮುಖಪುಟ ಹೆಚ್.ಸಿ ಭವ್ಯ ನವೀನ್ ಅವರದ್ದು.


ಇಲ್ಲಿನ ಕವಿತೆಗಳು ಕೇವಲ ಕೆಲವಷ್ಟೇ.. ಇಂತಹಾ ಅಂತಃಕರಣದ ಹಲವಾರು ಕವಿತೆಗಳನ್ನು ತಾಕಲು 'ನೋವೂ ಒಂದು ಹೃದ್ಯ ಕಾವ್ಯ'ದ ಅಂತರಂಗವನ್ನೇ ಹೊಕ್ಕಬೇಕು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ