ಬುಧವಾರ, ಏಪ್ರಿಲ್ 15, 2026

ಸಮನ್ವಿತ (ಪುಸ್ತಕ ಯಾನ - 179)


ಪುಸ್ತಕದ ಶೀರ್ಷಿಕೆ : ಸಮನ್ವಿತ

ಲೇಖಕರು : ಸಾಯಿಸುತೆ

ಪ್ರಕಾಶಕರು : ಕನ್ನಡ ಸಾಹಿತ್ಯ ಪ್ರಕಾಶನ

ಪ್ರಥಮ ಮುದ್ರಣ : 2010

ಪುಟಗಳು : 201

ಬೆಲೆ : 120 ರೂ. 


ಸ್ವಯಂವರ ಕಲ್ಯಾಣ ಮಂಟಪದಲ್ಲಿ ಭರ್ಜರಿ ಮದುವೆ. ಖ್ಯಾತ ಕಂಪನಿಯಾದ 'ವರ್ಮ ಫೈನಾನ್ಸ್' ನ ದಾಮೋದರ್ ವರ್ಮ ಅವರ ಕೊನೆಯ ಮಗ ಅಪ್ರಮೇಯ ವರ್ಮನಿಗೂ ಬಹರೇನ್ ನಲ್ಲಿ ನೆಲೆಸಿದ್ದ ಹೋಟೆಲ್ ಉದ್ಯಮಿ ಸದಾನಂದ ಅವರ ಮೊದಲ ಮಗಳು ಸಮನ್ವಿತಳಿಗೂ ವಿವಾಹ. ಎರಡು ಪ್ರಸಿದ್ಧವಾದ ಶ್ರೀಮಂತ ಕುಟುಂಬಗಳೆ ವೈಭವದ ಮದುವೆ. ಆದರೆ, ವರ್ಮ ಫೈನಾನ್ಸ್ ಕುರಿತು ಆರು ತಿಂಗಳ ಹಿಂದೆ ದೊಡ್ಡ ಗಲಾಟೆಯಾಗಿ ಅದರ ಹೆಸರಿನ ಪುನರ್ ಸ್ಥಾಪನೆಗೆ ತಂದೆ-ಮಗ ಇಬ್ಬರೂ ಶ್ರಮ ವಹಿಸುತ್ತಿದ್ದರು. 


ಸಮನ್ವಿತ ಹಾಗೂ ಅಪ್ರಮೇಯನ ಮದುವೆಯಾದ ನಂತರ ನಡೆದಿದ್ದು ಎಲ್ಲರಿಗೂ ಒಂದು ರೀತಿಯ ಭಯ ಹುಟ್ಟಿಸಿತು. ಧಾರೆ, ಮಾಂಗಲ್ಯಧಾರಣೆ, ಸಪ್ತಪದಿ ಮುಗಿಯುವ ವೇಳೆಗೆ ಮಹಿಳೆಯರ ದೊಡ್ಡ ಗುಂಪು ಮಂಟಪಕ್ಕೆ ನುಗ್ಗಿ ಹಸೆಮಣೆ ಮೇಲೆ ಕೂತಿದ್ದ ಮದುಮಕ್ಕಳನ್ನು ಎಳೆದಾಡಿ ಅಲ್ಲೆಲ್ಲ ದಾಂಧಲೆ ಎಬ್ಬಿಸುವ ವೇಳೆಗೆ ಪೊಲೀಸ್ ಬಂದವರು ಅಪ್ರಮೇಯನನ್ನು ತಮ್ಮೊಡನೆ ಕರೆದುಕೊಂಡು ಹೊರಟರು. 


ಸಮನ್ವಿತಳದ್ದು ಪ್ರೇಮ ವಿವಾಹವಲ್ಲ. ಹಿರಿಯರೇ ನೋಡಿ ನಿಶ್ಚಯಿಸಿದ ವಿವಾಹ. ಆಕೆಯ ತಂದೆ ಸದಾನಂದ ಅವರ ಅಣ್ಣ ದಯಾನಂದ್ ಅವರು ಮಾತನಾಡಿ ನಿಶ್ಚಯಿಸಿದ್ದ ವಿವಾಹ. ಅವರ ಮಗ ರಘುಸಮರ್ಥನಿಗಿಂತ ಸಮನ್ವಿತಳ ಮೇಲೆಯೇ ಹೆಚ್ಚಿನ ಪ್ರೀತಿ. ಅವರು ಹಾಗೂ ಅವರ ಪತ್ನಿ ಅರುಂಧತಿ, ಸಮನ್ವಿತ ಮದುವೆಯಾದ ನಂತರ ಅವಳನ್ನು ತಾವೇ ಕರೆದು ಕಳುಹಿಸಿ ಅವಳ ಹೊಣೆ ಹೊರುವ ಆಲೋಚನೆಯಿಂದ ಬೆಂಗಳೂರಿನಲ್ಲಿಯೇ ವರನನ್ನು ಹುಡುಕಿ ವಿವಾಹ ನಿಶ್ಚಯಿಸಿದ್ದರು. ಇದಕ್ಕೆ ಸದಾನಂದ ಹಾಗೂ ತಾಯಿ ಅಹಲ್ಯಾರ ಸಮ್ಮತಿಯೂ ಇತ್ತು.


ಮದುವೆಯ ದಿನ ರಾದ್ದಾಂತವಾಗಲು ಕಾರಣ ಆವಂತಿ. ಅಪ್ರಮೇಯ ತನ್ನನ್ನು ಪ್ರೀತಿಸಿ ಮೋಸ ಮಾಡಿದ ಎಂಬ ಆರೋಪ. ಅವರಿಬ್ಬರ ಪ್ರೇಮಕ್ಕೆ ಮೂರೂ ಚಿಲ್ಲರೆ ವರ್ಷಗಳ ಇತಿಹಾಸವಿದ್ದರೂ.. ಕಂಪನಿ ನಷ್ಟದ ಪ್ರಕರಣವಾದ ನಂತರ ಆವಂತಿಗೆ ಆತನ ಮೇಲಿನ ಪ್ರೀತಿ ಕಡಿಮೆಯಾಗಿತ್ತು. ಆಕೆ ಬಯಸಿದ್ದು ಆತನ ಪ್ರೇಮವಲ್ಲ, ಬದಲಾಗಿ ಆತನ ಶ್ರೀಮಂತಿಕೆಯನ್ನು. ಆದರೆ, ಆತ ಸಮನ್ವಿತಳನ್ನು ನಿಶ್ಚಿತಾರ್ಥ ಮಾಡಿಕೊಂಡದ್ದು, ಮದುವೆಯಾಗುತ್ತಿರುವುದು ತಿಳಿದಿತ್ತಾದರೂ.. ಆಗ ಸುಮ್ಮನಿದ್ದವಳು, ನಂತರ ತನ್ನ ಅಕ್ಕನ ಜೊತೆ ಸೇರಿ ರಾದ್ದಾಂತ ಮಾಡಿಬಿಟ್ಟಿದ್ದಳು. 


ಪ್ರೇಮಿಸಿ ಮೋಸ ಮಾಡಿದ್ದಾನೆ ಎಂದರೆ ಆ ಕೇಸು ನಿಲ್ಲಲಾರದೆಂದು ತನಗೂ ಆತನಿಗೂ ಸಂಬಂಧವಿತ್ತೆಂದೇ ಬಿಂಬಿಸಿದ್ದಳು. ಆರತಿ ಮಹಿಳಾ ಸಂಘಟನೆಯಲ್ಲಿ ಹಾಗೂ ರಾಜಕೀಯದಲ್ಲಿ ತೊಡಗಿದ್ದುದರಿಂದ ಆಕೆಯ ಕಡೆಯಿಂದ ಬೆಂಬಲ ಸಿಕ್ಕಿ ದೊಡ್ಡ ಪ್ರಕರಣವೇ ಆಗಿ ಹೋಗಿತ್ತು 


ಯಾವ ತಪ್ಪನ್ನೂ ಮಾಡಿರದ ನಿರಪರಾಧಿ ಸಮನ್ವಿತ ಮೂಕಪ್ರೇಕ್ಷಕಿಯಾಗಿದ್ದಳು. ಮದುವೆಯ ಮುನ್ನವೇ ಇದಾಗಿದ್ದರೆ ಪರವಾಗಿರಲಿಲ್ಲ. ಆದರೆ, ಈಗ ನಿರಪರಾಧಿ ಸಮನ್ವಿತ ಬದುಕು ಹಳಿತಪ್ಪಿತು. ಆಕೆ ವರನ ಜೊತೆ ಮಾತನಾಡಿರದ್ದು ಹೀಗೆ ಪರಿಣಮಿಸಿತ್ತು. ತನ್ನ ತಂಗಿ ಸಹನಾಳ ಜೊತೆ ಮಾಡಿಕೊಂಡ ಬೆಟ್ಟಿಂಗ್ ಆಕೆಯನ್ನು ಜೀವನದ ಬಹುದೊಡ್ಡ ತಿರುವಿಗೆ ತಂದು ನಿಲ್ಲಿಸಿತ್ತು.


ಸಮನ್ವಿತಳ ಏಕೈಕ ತಂಗಿ ಸಹನ ಬಹರೇನ್ ನಲ್ಲೇ ಇದ್ದ ಕನ್ನಡಿಗರಾದ ವಿಕ್ರಾಂತ್ ಶೆಟ್ಟಿಯನ್ನು ಪ್ರೇಮಿಸಿದ್ದಳು. ಅವರಿಬ್ಬರ ಮದುವೆ ಆದಷ್ಟು ಬೇಗ ಆಗಬೇಕೆಂದು ಹಠ ಹಿಡಿದಿದ್ದಳು. ಅದಕಿದ್ದ ಅಡ್ಡಿ ಸಮನ್ವಿತಳ ಮದುವೆ. ಅಕ್ಕನ ಮದುವೆಯಾಗದೆ ತಂಗಿಯ ಮದುವೆ ಮಾಡಲಾರವು ಎಂದು ಪಟ್ಟು ಹಿಡಿದಿದ್ದ ಅಪ್ಪ-ಅಮ್ಮನನ್ನು ಒಪ್ಪಿಸಿ ಆದಷ್ಟು ತರಾತುರಿಯಲ್ಲಿ ಸಮನ್ವಿತಳ ಮದುವೆ ನಿಶ್ಚಯವಾಗಿತ್ತು. ವಿವಾಹವಾದ ನಂತರವೇ ಮಾತುಕತೆ ಎಂಬ ಸಮನ್ವಿತಳ ನಿರ್ಧಾರ ಹಾಗೂ ದೊಡ್ಡಪ್ಪ ದಯಾನಂದ ಅವರ ಮೇಲಿಟ್ಟಿದ್ದ ನಂಬಿಕೆಯಿಂದ ವಿವಾಹ ನಡೆದೇ ಹೋಗಿತ್ತು. 


ಇದೆಲ್ಲದರ ಪರಿಣಾಮ ದಯಾನಂದ್ ಅವರಿಗೆ ಹೃದಯಘಾತವಾಗಿತ್ತು. ಮಗಳ ಬದುಕನ್ನು ಕೈಯ್ಯಾರೆ ಹಾಳು ಮಾಡಿದೆವೆಂದು ಎಲ್ಲರ ಮನಸ್ಸಲ್ಲೂ ಕೊರೆಯುತ್ತಿತ್ತು. ಆದರೆ, ಇದರಿಂದಾಗಿ ಸಹನಾಳ ಮದುವೆ ನಿಲ್ಲುವಂತಿರಲಿಲ್ಲ. ಪ್ರಬುದ್ಧವಾಗಿ ಯೋಚಿಸಿದ ಸಮನ್ವಿತ ಎಲ್ಲದರಲ್ಲೂ ದೃಢಚಿತ್ತಳಾಗಿರುವಂತೆ ನಡೆದುಕೊಳ್ಳುತ್ತಾ ತಾನೇ ಧೈರ್ಯ ಹೇಳುತ್ತಿದ್ದಳು. ಆಕೆ ಸಹನಾಳಂತಲ್ಲ.. ಇಂತಹದ್ದು ಬೇಕೆಂದು ಎಂದಿಗೂ ಕೇಳಿದವಳೂ ಅಲ್ಲ. ಆದರೆ, ಬಹಳ ಪ್ರಬುದ್ಧವಾದ ವ್ಯಕ್ತಿತ್ವದವಳು. 


ದಾಮೋದರ್ ವರ್ಮಾ ಅವರ ಪತ್ನಿ ದೊಡ್ಡ ಮಗನ ಜೊತೆ ವಿದೇಶದಲ್ಲೇ ನೆಲೆಸಿದ್ದರು. ಇನ್ನೊಬ್ಬ ಮಗ ಕೇಂದ್ರ ಸಚಿವರ ಮನೆಯ ಮಗಳನ್ನು ವಿವಾಹವಾಗಿದ್ದ. ದೆಹಲಿಯಲ್ಲಿದ್ದ ಮಗಳು-ಅಳಿಯ ಇವರಿಬ್ಬರ ಚಿತಾವಣೆಗೆಯಿಂದಾಗಿ ವರ್ಮ ಫೈನಾನ್ಸ್ ನೆಲ ಕಚ್ಚಿದ್ದು. ಈಗ ಅದನ್ನು ಸಂಭಾಳಿಸುತ್ತಿದ್ದ ಅಪ್ರಮೇಯ ಅವರ ಪಾಲಿನ ಆಶಾಕಿರಣದಂತಿದ್ದ. ಆದರೆ, ಈ ಆಘಾತ ನಡೆದ ನಂತರ ಅವರ ಜೊತೆ ನಿಂತವರು ಕೇವಲ ಅವರ ಗೆಳೆಯ ಹಾಗೂ ಲಾಯರ್ ಆಗಿದ್ದ ರಾಜಗೋಪಾಲ್.


ಆವಂತಿ ಅಪ್ರಮೇಯ ತನ್ನನ್ನು ಮದುವೆಯಾಗುತ್ತಾನೆಂದು ನಂಬಿ ಆತನ ಮೇಲಿದ್ದ ಕೇಸನ್ನು ವಾಪಸ್ ತೆಗೆದುಕೊಂಡಳು. ಆಕೆ ಹೇಳಿದ್ದ ಎಲ್ಲವೂ ಸತ್ಯವಲ್ಲ. ಅವರಿಬ್ಬರ ನಡುವೆ ಸಂಬಂಧವಿರಲಿಲ್ಲ. ಅದನ್ನು ಮುಖ್ಯವಾಗಿಸಿ ರಾಜಗೋಪಾಲ್ ತಮ್ಮ ಬುದ್ಧಿವಂತಿಕೆ ಹಾಗೂ ಚಾಣಾಕ್ಷತೆಯಿಂದ ಅಪ್ರಮೇಯ ನಿರಪರಾಧಿಯೆಂದು ಸಾಬೀತು ಮಾಡಿದರು. ಅದರಿಂದಾಗಿ ಆರತಿಗೂ ಹಿನ್ನಡೆಯಾಗಿ ಎಲ್ಲೆಡೆ ಅವಳನ್ನು ನಿಂದಿಸಲು ಶುರುವಿಟ್ಟಿದ್ದರು. ಆಕೆಯ ತಂದೆ-ತಾಯಿಯಂತೂ ಪಡಬಾರದ ಪಾಡು ಪಟ್ಟರು. ಇದ್ದೊಬ್ಬ ತಮ್ಮ ಅಕ್ಕ ತಪ್ಪು ಹೆಜ್ಜೆ ಇಟ್ಟಾಗಲೇ ಮನೆ ಬಿಟ್ಟು ಹೊರಟಿದ್ದ. ಆವಂತಿಯ ಹೆಸರು ಕೆತ್ತಿತ್ತಾದರೂ ಮೋಹದಿಂದ ಅಪ್ರಮೇಯನ ಬೆನ್ನು ಬಿದ್ದಿದ್ದಳು.


ಮೂರು ಜನರ ಜೀವನದ ದಿಕ್ಕು ಮಾತ್ರವೇ ಬದಲಾಗಿರಲಿಲ್ಲ.. ಅವರ ಕುಟುಂಬದ ಪರಿಸ್ಥಿತಿಯಲ್ಲವೂ ಅಲ್ಲೋಲಕಲ್ಲೋಲವಾಗಿತ್ತು. ಅಪ್ರಮೇಯನಿಗೆ ಸದ್ಯಕ್ಕೆ ವರ್ಮ ಫೈನಾನ್ಸ್ ಕಡೆಗೆ ಮಾತ್ರ ಗಮನವಿದ್ದರೂ.. ಸಮನ್ವಿತಳಿಗೆ ತನ್ನಿಂದ ಅನ್ಯಾಯವಾಗಿದೆಯೆಂಬ ಭಾವ ಕಾಡುತ್ತಿತ್ತು.


ಸಮನ್ವಿತ ಆ ವಿವಾಹವನ್ನು ವಿವಾಹವೆಂದೇ ಪರಿಗಣಿಸದೆ ಮಾಂಗಲ್ಯ ತೆಗೆದಿಟ್ಟು ಬದುಕಬಹುದಾಗಿದ್ದರೂ.. ಬಹರೇನ್‌ನಲ್ಲಿದ್ದರೂ ಭಾರತೀಯ ಸಂಸ್ಕೃತಿ ಇನ್ನೂ ಆಕೆಯ ರಕ್ತದಲ್ಲಿಯೇ ಇದ್ದುದರಿಂದ ಅದು ಸಾಧ್ಯವಾಗಲಿಲ್ಲ. ವಿಚ್ಛೇದನಕ್ಕೆ ಅವಳ ತಂದೆ ಒಪ್ಪಿದರೂ.. ತಾಯಿಯಿಂದ ಸಂಪೂರ್ಣ ಒಪ್ಪಿಗೆ ಸಿಕ್ಕಿರಲಿಲ್ಲ. ಸಹನಾಳಿಗೆ ತಾನೇ ಅವಳ ಸ್ಥಿತಿಗೆ ಕಾರಣಳೆಂಬ ತಪ್ಪಿತಸ್ಥ ಭಾವ ಆಗಾಗ ಕಾಡುತ್ತಿತ್ತು. ರಘುಸಮರ್ಥ, ದಯಾನಂದ, ಅರುಂಧತಿಯರು ಆಕೆ ಹೇಗೆ ಮಾಡಿದರೂ ಸರಿಎಂಬ ತೀರ್ಮಾನದಲ್ಲಿದ್ದರೂ.. ಅಪ್ರಮೇಯನೊಡನೆ ಸಂಬಂಧ ಸರಿ ಹೋಗಲಿ ಎಂದೇ ಆಶಿಸುತ್ತಿದ್ದರು. 


ಆದರೆ, ನಿರೀಕ್ಷಿಸದ ಬೆಳವಣಿಗೆಗಳಿಂದ ಸಮನ್ವಿತ ವಿಚ್ಛೇದನದ ಪತ್ರಕ್ಕೂ ಸಹಿ ಹಾಕಿದಳು. ಹಾಗಾದರೆ, ಅಪ್ರಮೇಯ ಆಕೆಗೆ ವಿಚ್ಛೇದನ ನೀಡಿದನೇ..?? ಆವಂತಿಯನ್ನು ವಿವಾಹವಾದನೇ..?? ಆವಂತಿಯ ಬದುಕು ಹಾಳಾಗಲು ಕಾರಣವೇನು..?? ಅಪ್ರಮೇಯನಿಗೆ ಮತ್ತೊಂದು ಪ್ರೊಪೋಸಲ್ ಕೂಡ ಇದ್ದಿತು. ಸಮನ್ವಿತಳ ಜೊತೆ ವಿಚ್ಛೇದನ ಪಡೆದುಕೊಂಡು ಆ ಹುಡುಗಿಯನ್ನು ಮದುವೆಯಾದರೆ, ವರ್ಮ ಫೈನಾನ್ಸ್‌ನ ಸಾಲವೆಲ್ಲವೂ ತೀರಿಹೋಗುತ್ತಿತ್ತು. ಅಪ್ರಮೇಯ ಅದರತ್ತ ಹೆಜ್ಜೆ ಇಟ್ಟನೇ..?? ಆ ಪ್ರೊಪೋಸಲ್ ತಂದವರಾರು..?? ಆತ ಸಹನಾ ಹಾಗೂ ಸಮನ್ವಿತ ಬಳಿ ಮೋಹನ್ ಕುರಿತು ವಿಚಾರಿಸಿದ್ದೇಕೆ..??


ಕ್ಲಿಷ್ಟ ಪರಿಸ್ಥಿತಿಯೊಂದು ಧಿಡೀರನೆ ಎದುರಾದಾಗ ಅದನ್ನು ಸಮಚಿತ್ತದಿಂದ ನಿಭಾಯಿಸುವುದು ಸುಲಭದ ಮಾತಲ್ಲ. ಆದರೆ ಪ್ರೌಢ ಆಲೋಚನೆಯಿಂದ ಸಮನ್ವಿತ ಮನಸ್ಸಿನಲ್ಲಿ ಗಾಢವಾಗಿ ಉಳಿಯುತ್ತಾಳೆ. ಇಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಜೊತೆಗೆ ಬಾಳುವ ತೀರ್ಮಾನ ಮಾಡಿಕೊಂಡಿದ್ದ ಸಮನ್ವಿತ ತನ್ನ ಬದುಕಿನಲ್ಲಾದ ಘಟನೆಯಿಂದ ಬೇರೆ ದಾರಿಯನ್ನು ಆಯ್ದುಕೊಂಡಳೇ.. ಅಥವಾ ಭಾರತೀಯ ಸಂಸ್ಕೃತಿಯ ಮೂಲ ಗುಣವೆಂದು ಆ ಮದುವೆಯನ್ನು ಒಪ್ಪಿದಳೇ..?? 


ಇಲ್ಲಿ ಇದಷ್ಟೇ ಇಲ್ಲ.. ಒಬ್ಬಳು ಹೆಣ್ಣುಮಗಳಿಗೆ ನೀಡಬೇಕಾದ ಸ್ವಾತಂತ್ರ್ಯ ಹಾಗೂ ಬೆಂಬಲದ ತೀರ್ಮಾನ ಆಕೆಯನ್ನು ಎಷ್ಟು ಗಟ್ಟಿಗೊಳಿಸುತ್ತದೆ ಎಂಬುದರ ಚಿತ್ರಣವೂ ಇದೆ. ಪೋಷಕರು ಮಕ್ಕಳ ಜೊತೆ ನಿಂತು ಬೆಂಬಲಿಸಿದರೆ ಎಂತಹಾ ಕಷ್ಟಗಳನ್ನು ಯಾವ ರೀತಿಯಲ್ಲಿ ಪರಿಹರಿಸಬಹುದು ಎಂದು ತೋರುತ್ತದೆ. ಕನ್ನಡ ಸಾಹಿತ್ಯದ ಕೆಲ ಉನ್ನತ ವಿಚಾರಗಳಿವೆ.


ಸಂಬಂಧ, ಜವಾಬ್ದಾರಿ, ಪ್ರೀತಿ, ವಿವಾಹ ಹೀಗೆ ಬದುಕಿನ ಹಲವಾರು ಮಜಲುಗಳನ್ನು ತೋರುವ ಸುಂದರ ಕಾದಂಬರಿ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ