ಗುರುವಾರ, ಏಪ್ರಿಲ್ 16, 2026

ಮೆದುಳಿಲ್ಲದ ಯಂತ್ರಗಳ ಬುದ್ಧಿವಂತಿಕೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ( ಟೆಕ್ - ಟಾಕ್ - 16 )


ಮನುಷ್ಯ ಎಲ್ಲಾ ಜೀವರಾಶಿಗಳಿಗಿಂತ ಭಿನ್ನ. ಆತ ನಡೆದಾಡುತ್ತಾನೆ, ಮಾತನಾಡುತ್ತಾನೆ, ಆಲೋಚಿಸುತ್ತಾನೆ. ಇದೆಲ್ಲವೂ ಸಾಧ್ಯವಾಗಿರುವುದು ಮೆದುಳಿನಿಂದ. ಮೆದುಳಿಲ್ಲದೆ ಬದುಕುವ ಜೀವಿಗಳಿಲ್ಲವೇ ? ಎಂದು ನೋಡಿದರೆ ಜೆಲ್ಲಿ ಫಿಶ್ ಗೆ ಮೆದುಳೇ ಇಲ್ಲ. ಮನುಷ್ಯನ ಪ್ರತಿ ಚರ್ಯೆಯ ಮೂಲ ಆಲೋಚನೆಗಳು ಹೊರ ಹೊಮ್ಮುವುದು, ಯಾವುದೇ ನಿರ್ಧಾರಗಳನ್ನು ಮಾಡಲು ಸಾಧ್ಯವಾಗುವುದು ಆತನ ಬುದ್ಧಿವಂತಿಕೆಯಿಂದ. ಜೀನ್ ಗಳಿಂದ ಬಳುವಳಿಯಾಗಿ ಒಂದಿಷ್ಟು ಬುದ್ಧಿವಂತಿಕೆ ಪಡೆದಿದ್ದರೆ ಮತ್ತೊಂದಷ್ಟು ಬಂದದ್ದು ಸುತ್ತಮುತ್ತಲಿನ ವಾತಾವರಣ ಹಾಗೂ ಓದಿನಿಂದ, ಅನುಭವದಿಂದ. ಬುದ್ಧಿವಂತಿಕೆಯ ಮಾತುಗಳನ್ನು, ಅನುಭವಗಳಿಂದ ಕಲಿತದ್ದನ್ನು ಎರವಲು ಪಡೆಯಬಹುದೇ ಹೊರತು ಬುದ್ಧಿವಂತಿಕೆಯನ್ನಲ್ಲ. ಈಗೀಗ ಯಂತ್ರಗಳೂ ಬುದ್ಧಿವಂತಿಕೆ ತೋರುತ್ತಿವೆ. ಎಷ್ಟೆಂದರೆ ಮನುಷ್ಯನನ್ನೂ ಮೀರಿಸುವಷ್ಟು..! ಮನುಷ್ಯನನ್ನು ಬುದ್ಧಿವಂತಿಕೆಯಲ್ಲಿ ಮೀರಿಸುತ್ತಿವೆ ಅವನದ್ದೇ ಆವಿಷ್ಕಾರಗಳು. ಇದೇ ಮೆದುಳಿಲ್ಲದ ಯಂತ್ರಗಳ ಬುದ್ಧಿವಂತಿಕೆಯ ಕೃತಕ ಬುದ್ಧಿಮತ್ತೆಯಿಂದ.. ಎಂದರೆ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಿಂದ. 


ಇದು ಈಗಿನ ಮಾತಲ್ಲ.. 1977 ರಲ್ಲಿಯೇ ಆಗಿನ ವಿಶ್ವ ಚೆಸ್ ಚಾಂಪಿಯನ್ ಗ್ಯಾರಿ ಕ್ಯಾಸ್ಪರೋವ್ ನನ್ನು ಚೆಸ್ ನಲ್ಲಿ ಸೋಲಿಸಿತ್ತು ಐ.ಬಿ.ಎಂ ನವರ "ಡೀಪ್ ಬ್ಲ್ಯೂ" ಎನ್ನುವ ಗೇಮಿಂಗ್ ಕಂಪ್ಯೂಟರ್. 


ಅಷ್ಟೇ ಅಲ್ಲ, ಅದೇ ವರ್ಷ ವಿಂಡೋಸ್ ನಲ್ಲಿ ಮಾತು ಗುರುತಿಸಿ ಅದರ ಆಧಾರದ ಕೆಲಸ ಮಾಡುವ ತಂತ್ರಜ್ಞಾನ ಸೃಷ್ಟಿಯಾಯಿತು. ಆಗಿನಿಂದ ಹೀಗೆ ಬೆಳೆದುಬಂದ ಯಂತ್ರಗಳ ಬುದ್ಧಿವಂತಿಕೆ ಮನುಷ್ಯ ಆಗದು ಎಂದು ಕೈ ಚೆಲ್ಲಿ ಕೂತಾಗ ತಾನೇ ಉತ್ತರ ಹುಡುಕಿತು. ಎಂ.ಐ.ಟಿ ಯಲ್ಲಿ ಈ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಿಂದಾಗಿ ಹೊಸ ಆಂಟಿಬಯಾಟಿಕ್ ಒಂದನ್ನು ಕಂಡು ಹಿಡಿಯಲಾಗಿದೆ. ಇನ್ನು ಯಾವ ಹೊಸ ಆಂಟಿ ಬಯಾಟಿಕ್ ಅನ್ನೂ ಉತ್ಪಾದಿಸಲು ಸಾಧ್ಯವಾಗುವುದಿಲ್ಲ ಎಂದು ನಿರ್ಧಾರ ಮಾಡಿದ್ದಾಗ 61000 ವಿವಿಧ ರಾಸಾಯನಿಕ ಮಾಲಿಕ್ಯೂಲ್ ಗಳನ್ನು ಹುಡುಕಿ, ಸಂಯೋಜಿಸಿ, ಪ್ರಯೋಗ ಮಾಡಿ ಹ್ಯಾಲಿಸಿನ್ ಎಂಬ ಆಂಟಿ ಬಯಾಟಿಕ್ ಒಂದನ್ನು ಸೃಷ್ಟಿ ಮಾಡಲಾಗಿದೆ. ಇದು ಈಗ ದಿವ್ಯೌಷಧ ಎಂದೇ ಹೆಸರಾಗಿದೆ. 


ಇಷ್ಟೇ ಯಾಕೆ ಡೆಲ್ಪಿಯಲ್ಲಿರುವ ಕಂಪ್ಯೂಟರ್ ನನ್ನ ಭವಿಷ್ಯವನ್ನು ಊಹಿಸಬಲ್ಲದು. ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಿಂದ ವೈದ್ಯಕೀಯ ಲೋಕ ಸಹಾ ಹೆಚ್ಚಿನ ಸಹಾಯ ಪಡೆದುಕೊಂಡಿದೆ. ಮನುಷ್ಯನ ಉಸಿರಾಟವನ್ನು ಗಮನಿಸಿ ಅದರಲ್ಲಿನ ಸುಮಾರು 800 ರಾಸಾಯನಿಕಗಳನ್ನು ವಿಶ್ಲೇಷಿಸಿ ಈಗಾಗಲೇ ಆತನಿಗೆ ಬಂದಿದ್ದ ಹಾಗೂ ಬರಲಿರುವ ಖಾಯಿಲೆಗಳನ್ನು ಪತ್ತೆ ಮಾಡಿದೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್.


ಹಾಗಾದರೆ, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಎನ್ನುವ ಕಾನ್ಸೆಪ್ಟ್ ಶುರುವಾಗಿದ್ದು ಹೇಗೆ ಗೊತ್ತಾ..?

ಎರಡನೇ ಮಹಾಯುದ್ಧದ ನಂತರ ಆಲನ್ ಟ್ಯೂರಿಂಗ್ ಎನ್ನುವ ಗಣಿತಜ್ಞ, ಕಂಪ್ಯೂಟರ್ ಇಂಜಿನಿಯರ್ ಹಾಗೂ ಬಯಾಲಜಿಸ್ಟ್ ಗೆ ಒಂದು ಪ್ರಶ್ನೆ ಮೂಡಿತ್ತು. ಅದು ಮಶಿನ್ ಹಾಗೂ ಮನುಷ್ಯನ ಬುದ್ಧಿವಂತಿಕೆಗಳ ಕುರಿತು. ಯಾವತ್ತಾದರೂ ಮಶೀನ್ ಮನುಷ್ಯನಷ್ಟು ಬುದ್ಧಿವಂತಿಕೆ ತೋರಿಸಬಲ್ಲದಾ ? ಮನುಷ್ಯನಂತೆಯೇ ವರ್ತಿಸಬಲ್ಲದಾ ಎಂದು.


ಈ ಪ್ರಶ್ನೆಗೆ ಉತ್ತರವಾಗಿ ದೊರೆತದ್ದು ಆರ್ಟಿಫಿಶಿಯಲ್ ಇಂಟಲಿಜೆನ್ಸ್. 1956 ರಲ್ಲಿ ಅಮೆರಿಕಾದ ಕಂಪ್ಯೂಟರ್ ವಿಜ್ಞಾನಿ 'ಜಾನ್ ಮೆಕಾರ್ಡ್' ಈ ಕಾನ್ಸೆಪ್ಟ್ ಗೆ ಹೆಸರು ನೀಡಿದ್ದು. ಇದಕ್ಕಿಂತಲೂ ಮೊದಲೆಲ್ಲಾ ಈ ಕಾನ್ಸೆಪ್ಟ್ ಅನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿದ್ದರು. ಸೈಬರ್ನೆಟಿಕ್ಸ್, ಥಿಂಕಿಂಗ್ ಮೆಷಿನ್, ಆಟೊಮ್ಯಾಟಾ ಥಿಯರಿ ಎಂದೆಲ್ಲಾ ಕರೆಯುತ್ತಿದ್ದರು. 


ಜಾನ್ ಮೆಕಾರ್ತಿ 1955 ರಲ್ಲಿ ರಾಕ್ ಫೆಲ್ಲರ್ ಪೌಂಡೇಶನ್ ಬಳಿ ಡಾರ್ಮಾತ್ ಕಾಲೇಜಿನಲ್ಲಿ ಒಂದು ಬೇಸಿಗೆ ಸಮ್ಮೇಳನ ನಡೆಸುವುದಾಗಿ ಹೇಳಿದರು. ಅದಕ್ಕಾಗಿ ಫಂಡಿಂಗ್ ಮಾಡಬೇಕೆಂದು ಕೇಳಿಕೊಂಡರು. ಮೊದಲಲ್ಲಿ ರಾಕ್ ಫೆಲ್ಲರ್ ಪೌಂಡೇಶನ್ ಒಪ್ಪದಿದ್ದರೂ ನಂತರ ಅವರ ಕಾನ್ಸೆಪ್ಟ್ ಗೆ ಒಪ್ಪಿಗೆ ನೀಡಿತು. ಎರಡು ತಿಂಗಳು ಹತ್ತು ಜನ ಮಾತ್ರವೇ ಆ ಡಾರ್ಮಾತ್ ಸಮ್ಮೇಳನದಲ್ಲಿ ಭಾಗಿಯಾಗಿ ವಿವಿಧ ಪ್ರಯೋಗಗಳನ್ನು ನಡೆಸಿದರು. ಮಶೀನ್ ನ ಅರ್ಧದಂತಹಾ ನ್ಯೂರಾಲಿಟಿ ಕಾರಣದಿಂದ ಜಾನ್ ಮೆಕಾರ್ಡ್ ಅದಕ್ಕೆ ಕೊಟ್ಟ ಹೆಸರು 'ಆರ್ಟಿಫಿಶಿಯಲ್ ಇಂಟಲಿಜೆನ್ಸ್'.


ಇದನ್ನು ಹೆಚ್ಚಿನ ಪ್ರಯೋಗಕ್ಕೆ ಒಳಪಡಿಸುತ್ತಾ ಹೋದಂತೆ ಇದನ್ನು ಎರಡು ಪ್ರಭೇಧಗಳಾಗಿ ಮಾಡಿದರು.


ಮೊದಲನೆಯದರಲ್ಲಿ ದುರ್ಬಲ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಜನರಲ್/ ಸ್ಟ್ರಾಂಗ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಸೂಪರ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಎಂದು ವಿಭಾಗಿಸಿದರು. ಈ ಪ್ರಭೇಧದಲ್ಲಿ ಮನುಷ್ಯನ ಹಿಂದಿನ ಡೇಟಾಗಳನ್ನು ಸಂಗ್ರಹಿಸಿ ಅದರ ಆಧಾರದ ಮೇಲೆ ತನ್ನ ಕೆಲಸ ಮಾಡುತ್ತದೆ. 


ಸೆಲ್ಫ್ ಡ್ರೈವಿಂಗ್ ಕಾರ್ ಗಳು, ಗೂಗಲ್ ನ ಓ.ಕೆ ಗೂಗಲ್, ನಾವು ಮೊಬೈಲ್ ನಲ್ಲಿ ಬಳಸುವ ಫೇಸ್ ರೆಕಗ್ನೈಸೇಶನ್, ಸ್ಪೀಚ್ ಮತ್ತು ಇಮೇಜ್ ರೆಕಗ್ನೈಸೇಶನ್, ಆಪಲ್ ಫೋನ್ ನ ಸಿರಿ ಇವೆಲ್ಲವನ್ನೂ ಈಗಾಗಲೇ ನಾವು ಬಳಸುತ್ತಿದ್ದೇವೆಲ್ಲಾ.. ಇವೆಲ್ಲವೂ ವೀಕ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನ ಉತ್ತಮ ಉದಾಹರಣೆಗಳು.


ಯಂತ್ರಗಳನ್ನು ತಾವೇ ಸ್ವತಃ ಯೋಚಿಸುವಂತೆ ಮಾಡುವುದು ಜನರಲ್ / ಸ್ಟ್ರಾಂಗ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಆದರೆ ಯೋಚಿಸುವ ಕಾರಣಗಳನ್ನು ಹುಡುಕುವುದು, ಆಲೋಚನೆಗೆ ತಕ್ಕ ಹಾಗೆ ಪ್ಲಾನ್ ಮಾಡುವುದು, ಸ್ವತಂತ್ರವಾಗಿ ಕಮ್ಯುನಿಕೇಟ್ ಮಾಡುವ, ತೀರ್ಪು ನೀಡುವ, ಫಜಲ್ ಗಳನ್ನು ಬಿಡಿಸುವ ಬುದ್ಧಿವಂತಿಕೆ ಸೂಪರ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್. 


ಇನ್ನು ಎರಡನೇ ಪ್ರಭೇಧದಲ್ಲಿ ಬರುವ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕೊಂಚ ವಿಭಿನ್ನ ರೀತಿಯದ್ದು.


ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನ ರಿಯಾಕ್ಟಿವ್ ಮಶೀನ್ ಗಳು ಸಂಧರ್ಭಕ್ಕೆ ತಕ್ಕ ಹಾಗೆ ಆ ಸನ್ನಿವೇಶಕ್ಕೆ ಎಷ್ಟು ಬೇಕೋ ಅಷ್ಟರ ಮೇಲೆ ಕೇಂದ್ರೀಕರಿಸಿ ಕ್ರಿಯೆಗೆ ತಕ್ಕಂತೆ ಪ್ರತಿಕ್ರಿಯೆ ನೀಡುತ್ತವೆ. ಇವುಗಳಿಗೆ ಭವಿಷ್ಯದ ಭಯವಿಲ್ಲ. ಅಥವಾ ಭವಿಷ್ಯಕ್ಕಾಗಿ ಯಾವುದೇ ಡೇಟಾ ಸಂಗ್ರಹಣೆ ಮಾಡುವುದಿಲ್ಲ.  ಗ್ಯಾರಿ ಕ್ಯಾಸ್ಪರೋವ್ ನನ್ನು ಚೆಸ್ ನಲ್ಲಿ ಸೋಲಿಸಿದ ಡೀಪ್ ಬ್ಲ್ಯೂ ಸಿಸ್ಟಮ್ ಇದಕ್ಕೆ ಉತ್ತಮ ಉದಾಹರಣೆ. ಗೂಗಲ್ ಕೂಡಾ ಇಂತಹದ್ದೇ ಗೇಮ್ ಪ್ಲೇಯರ್ ಕಂಪ್ಯೂಟರ್ ಪ್ರೋಗ್ರಾಮ್ ಅನ್ನು ಸಿದ್ಧಪಡಿಸಿದೆ. ಅದರ ಹೆಸರು ಅಲ್ಪಾ ಗೋ.


ಸಂಧರ್ಭಕ್ಕೆ ತಕ್ಕ ಹಾಗೆ ವರ್ತಿಸುವ ಎ.ಐ ಇರುವ ಹಾಗೆ ತನ್ನ ಸ್ಮರಣೆಯನ್ನು ಇಷ್ಟಕ್ಕೇ ಎಂದು ಸೀಮಿತಗೊಳಿಸಿಕೊಳ್ಳುವ ಲಿಮಿಟೆಡ್ ಮೆಮೊರಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸಹಾ ಇದೆ.  

ಸ್ವಯಂಚಾಲಿತ ಕಾರುಗಳು ಈ ಗುಂಪಿಗೆ ಸೇರಿದವು.. ಕಾರು ಓಡಿಸಲು ಬೇಕಾದ ಸ್ವಯಂಚಾಲಿತ ನ್ಯಾವಿಗೇಶನ್ , ಸಮೀಪದ ಕಾರುಗಳ ವೇಗ ಮತ್ತು ದೂರವನ್ನು ಮಾತ್ರ ಇವುಗಳು ನೆನಪಿನಲ್ಲಿ ಇಟ್ಟುಕೊಳ್ಳುವುದು. ಅದಕ್ಕೆ ತಕ್ಕ ಹಾಗೆ ಡ್ರೈವ್ ಮಾಡುತ್ತಾ ಹೋಗುತ್ತವೆ. 


ಥಿಯರಿ ಆಫ್ ಮೈಂಡ್ ಆಧಾರದ ಮೇಲೆ ಮನುಷ್ಯನ ಭಾವನೆಗಳು, ನಂಬಿಕೆಗಳು, ಅವಶ್ಯಕತೆಗಳಿಗೆ ತಕ್ಕ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅನ್ನು ಇನ್ನೂ ಅಭಿವೃದ್ಧಿ ಮಾಡಲಾಗುತ್ತಿದೆ. ಇನ್ನೂ ಈ ರೀತಿಯ ಯಾವುದೇ ಪ್ರಾಡಕ್ಟ್ ಗಳು ನಮಗಿನ್ನೂ ಲಭ್ಯವಾಗಿಲ್ಲ.


ಮನುಷ್ಯನ ಬುದ್ಧಿಮತ್ತೆಯನ್ನು ಮೀರಿಸುವ ಸೆಲ್ಫ್ ಆವೇರ್ ನೆಸ್ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅನ್ನು ಸಹಾ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದಕ್ಕಿನ್ನೂ ಸಮಯವಿದ್ದರೂ ಆ ಸಮಯವೂ ಇನ್ನೂ ದೂರವಿಲ್ಲ. 


ಈಗ ಇಂಜಿನಿಯರಿಂಗ್ ಓದುವವರಿಗೆ ಇದರ ಕುರಿತು ಆಸಕ್ತಿ ಇದ್ದು ಹೆಚ್ಚಿನ ಅಧ್ಯಯನ ಮಾಡುತ್ತೇವೆ ಎಂದರೆ ಈಗ ಕಂಪ್ಯೂಟರ್ ಸೈನ್ಸ್ ಅನ್ನು ಆಯ್ಕೆ ಮಾಡುಕೊಳ್ಳುವ ಅವಶ್ಯಕತೆ ಇಲ್ಲ. ಕಂಪ್ಯೂಟರ್ ಸೈನ್ಸ್, ಇನ್ಫರ್ಮೇಷನ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಗಳ ಹಾಗೆ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಈಗ ಪ್ರತ್ಯೇಕ ವಿಭಾಗವಾಗಿ ಲಭ್ಯವಿದೆ. ಎಂ.ಟೆಕ್ ಅಥವಾ ಪಿ.ಎಚ್.ಡಿ ಗೆ ಮಾತ್ರವಲ್ಲ ಇಂಜಿನಿಯರಿಂಗ್ ಅನ್ನೇ ಈ ಕ್ಷೇತ್ರದಲ್ಲಿ ಓದಬಹುದು.  ನಾಲೆಡ್ಜ್ ಇಂಜಿನಿಯರಿಂಗ್, ರೋಬೋಟಿಕ್ಸ್, ಮಶೀನ್ ಲರ್ನಿಂಗ್, ನ್ಯೂರಲ್ ನೆಟ್ವರ್ಕ್/ ಡೀಪ್ ಲರ್ನಿಂಗ್, ನ್ಯಾಚುರಲ್ ಲಾಂಗ್ವೇಜ್ ಪ್ರೊಸೆಸಿಂಗ್ ನಂತಹಾ ಬಹಳ ಇಂಟರೆಸ್ಟಿಂಗ್ ಆಗಿರುವ ವಿಭಾಗಗಳು ಬರುವುದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಲ್ಲಿಯೇ. 


ಈಗ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಎಲ್ಲೆಡೆ ತನ್ನ ಕಬಂಧ ಬಾಹುಗಳನ್ನು ಚಾಚುತ್ತಿದೆ. ಆರೋಗ್ಯ, ವೈದ್ಯಕೀಯ, ಯುದ್ಧ, ಶಿಕ್ಷಣ ಹೀಗೆ ಎಲ್ಲಾ ಕ್ಷೇತ್ರದಲ್ಲಿಯೂ ಇದರ ಪರಿಣಾಮವಾಗಿ ಟೆಕ್ನಾಲಜಿ ವೇಗವಾಗಿ ಬೆಳೆಯುತ್ತಿದೆ. ಪರಿಸರಕ್ಕೂ ಸಹಾ ಇದರಿಂದ ಉಪಯೋಗವೇ ಆಗುತ್ತಿದೆ. ಹೇಗೆ ಎನ್ನುವಿರಾ..?? ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನ ವೇಲ್ ಸೇಫ್ ಹೈಟೆಕ್ ಯೋಜನೆ ಕುರಿತು ಹೇಳುತ್ತೇನೆ ಕೇಳಿ.


ವೇಲ್ ಗಳ ಸಂಖ್ಯೆ ಕಡಿಮೆಯಾಗುತ್ತಾ ಸಾಗುತ್ತಿದೆ ಎನ್ನುವ ಆತಂಕಕಾರಿ ವಿಚಾರಕ್ಕೆ ಇನ್ನೂ ಹೆಚ್ಚಿನ ಕಾರಣವಾಗಿದ್ದು ಈ ವೇಲ್ ಗಳು ಹಾಗೂ ಹಡಗುಗಳ ಘರ್ಷಣೆ. 80 ಕ್ಕೂ ಹೆಚ್ಚಿನ ಅಳಿವಿನಂಚಿನಲ್ಲಿರುವ ತಿಮಿಂಗಿಲಗಳು ಹಡಗುಗಳ ದಾಳಿಗೆ ಸಿಕ್ಕು ಬಲಿಯಾಗಿದ್ದವು. ಇದು ಪರಿಸರದ ಸಮತೋಲನದ ಮೇಲೆ ಸಹಾ ಪರಿಣಾಮ ಬೀರುತ್ತಿದ್ದು ಅಲ್ಲಿನ ಪಶ್ಚಿಮ ಕರಾವಳಿಯ ಮೂರು ಬಂದರುಗಳ ಹಡಗುಗಳ ಮೇಲೆ ಸಹಾ ತೊಂದರೆಯಾಗುತ್ತಿತ್ತು. ಇದು ಆಗುತ್ತಿದದ್ದು ಸ್ಯಾನ್ ಫ್ರ್ಯಾನ್ಸಿಸ್ಕೊದಲ್ಲಿ. 


ಈ ಮಾರಣಾಂತಿಕ ಘರ್ಷಣೆಯನ್ನು ತಪ್ಪಿಸಲು ಸೇಂಟ್ ಬಾರ್ಬರಾದ ಕ್ಯಾಲಿಫೋರ್ನಿಯಾ ವಿಶ್ವ ವಿದ್ಯಾಲಯದ ಓಷನ್ ಸೈನ್ಸ್ ಲ್ಯಾಬ್ ಯೋಜನೆಯ ನಿರ್ವಾಹಕರು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಅನ್ನು ಬಳಸಿ ವೇಲ್ ಸೇಫ್ ಪ್ರಾಜೆಕ್ಟ್ ಅನ್ನು ರೂಪಿಸಿದರು. 


ಮೊದಲಿಗೆ ಸ್ಯಾಟಲೈಟ್ ಕಣ್ಗಾವಲಿನ ಮೂಲಕ ತಿಮಿಂಗಿಲಗಳನ್ನು ಪತ್ತೆ ಹಚ್ಚಿ ಅದನ್ನು ಆನ್ಲೈನ್ನಲ್ಲಿ ಡೇಟಾ ಫೀಡ್ ಮಾಡಿದರು. 2020 ರಲ್ಲಿ ವುಡ್ಸ್ ಹೋಲ್ ಒಷಿಯಾನೊಗ್ರಾಫಿಕ್ ಇನ್ಸ್ಟಿಟ್ಯೂಟ್ ಅಭಿವೃದ್ಧಿಪಡಿಸಿದ ತಂತ್ರಜ್ಞಾನ ಆಧಾರಿತ ಹೈಡ್ರೋಫೋನ್ ಎಂಬ ಮೈಕ್ರೋಫೋನ್ ನಿಂದ ವೇಲ್ ಗಳ ಧ್ವನಿ ಆಲಿಸಿ ಅದನ್ನು ಕಂಪ್ಯೂಟರ್ ಗೆ ಡೇಟಾ ಫೀಡ್ ಮಾಡಿ ಹಡಗುಗಳಿಗೆ ಸ್ವಯಂಚಾಲಿತವಾಗಿ ಕಳುಹಿಸುವ ವ್ಯವಸ್ಥೆಯಾಗುತ್ತದೆ. ಹೀಗೆ ಕಳುಹಿಸುವ ಮೊದಲು ಮತ್ತೊಮ್ಮೆ ಧೃಡೀಕರಿಸಲಾಗುತ್ತದೆ. ಇದು ಆ ಕ್ಷಣದಲ್ಲಿ ಸ್ವಲ್ಪವೂ ವಿಳಂಬವಿಲ್ಲದಂತೆ ಆಗುವ ಕೆಲಸ. ರಿಯಲ್ ಟೈಮ್ ಇಂಪ್ಲಿಮೆಂಟ್. ಅಲ್ಲದೆ, ಪ್ರತಿ ನಿಮಿಷ ಮತ್ತು ಪ್ರತಿ ಸೆಕೆಂಡಿನ ಡೇಟಾ ಸ್ವಲ್ಪವೂ ಲೇಟಾಗದೆ ಡೇಟಾ ಫೀಡ್ ಆಗಿ ಸ್ವಯಂಚಾಲಿತವಾಗಿ ಕೆಲಸವಾಗಬೇಕು.


ಇದೆಲ್ಲವನ್ನೂ ನಿರ್ವಹಣೆ ಮಾಡುವುದು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮೆಷಿನ್. ಇದರೊಂದಿಗೆ ಜೊತೆಯಾಗಿರುವುದು ಇಂಟರ್ನೆಟ್ ಆಫ್ ಥಿಂಗ್ಸ್. ಈ ರೀತಿಯ ಅನೇಕ ಅನುಕೂಲಗಳಿವೆ ಇವುಗಳಿಂದ.


ಈ ಎರಡೂ ಟೆಕ್ನಾಲಜಿ ಮಿಳಿತಗೊಂಡು ಮನುಷ್ಯನಂತೆಯೇ ವರ್ತಿಸುವ, ಈಗಾಗಲೇ ಪೌರತ್ವವನ್ನೂ ಪಡೆದಿರುವ ರೋಬೋ ಒಂದಿದೆ. ಆರ್ಟಿಫಿಶಿಯಲ್ ಇಂಟಲಿಜೆನ್ಸ್, ಇಂಟರ್ನೆಟ್ ಆಫ್ ಥಿಂಗ್ಸ್ ಜೊತೆಗೆ ರೋಬೋ.. ಕೇಳುವುದಕ್ಕೆ ಇಂಟರೆಸ್ಟಿಂಗ್ ಅನ್ನಿಸ್ತಾ ಇದೆಯಾ.. ಈ ಇಂಟರೆಸ್ಟಿಂಗ್ ರೋಬೋ ಪ್ರಪಂಚದ ಪರಿಚಯ ಮುಂದಿನ ವಾರದ ಟೆಕ್ - ಟಾಕ್ ನಲ್ಲಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ