ಪುಸ್ತಕದ ಶೀರ್ಷಿಕೆ : ಕಾಗೆ ಮೇಷ್ಟ್ರು
ಲೇಖಕರು : ವಿಕ್ರಮ ಹತ್ವಾರ
ಪ್ರಕಾಶಕರು : ವೀರಲೋಕ ಬುಕ್ಸ್
ಪ್ರಥಮ ಮುದ್ರಣ : 2023
ಪುಟಗಳು : 108
ಬೆಲೆ : 125 ರೂ.
1982ರಲ್ಲಿ ಕುಂದಾಪುರ ತಾಲ್ಲೂಕಿನ ಬೀಜಾಡಿ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದ ವಿಕ್ರಮ ಹತ್ವಾರರು ವೃತ್ತಿಯಿಂದ ಸಾಫ್ಟ್ವೇರ್ ಇಂಜಿನಿಯರ್. 'ಇದೇ ಇರಬೇಕು ಕವಿತೆ', 'ಅಕ್ಷೀ... ಎಂದಿತು ವೃಕ್ಷ!', 'ಮೆಟ್ರೋ ಝೆನ್' ಇವರ ಕವನ ಸಂಕಲನಗಳು. 'ಜೀರೋ ಮತ್ತು ಒಂದು' ಹಾಗೂ 'ಹಮಾರಾ ಬಜಾಜ್' ಇವರ ಪ್ರಕಟಿತ ಕಥಾ ಸಂಕಲನಗಳು. ಇವರ ಮೊದಲ ಕಥಾ ಸಂಕಲನ 'ಜೀರೋ ಮತ್ತು ಒಂದು' ಪುಸ್ತಕಕ್ಕೆ 2016ರ ಕೇಂದ್ರ ಸಾಹಿತ್ಯ ಯುವ ಪುರಸ್ಕಾರ ಬಂದಿದೆ. ಕರ್ನಾಟಕ ಸಾಹಿತ್ಯ ಪರಿಷತ್ತಿನಿಂದ 'ಅರಳು ಪ್ರಶಸ್ತಿ'ಗೂ ಭಾಜನರಾಗಿದ್ದಾರೆ. 'ನೀ ಮಾಯೆಯೊಳಗೋ' ಎಂಬುದು ಇವರ ಪ್ರಬಂಧ ಸಂಕಲನ. ಇವರ ಕಥೆಯೊಂದು 'ನಿರುತ್ತರ' ಎಂಬ ಸಿನಿಮಾ ಆಗಿ ರೂಪಾಂತರಗೊಂಡಿದೆ.
ವಿಕ್ರಮ ಹತ್ವಾರರ ಪುಸ್ತಕಗಳಲ್ಲಿ ನಾನು ಮೊದಲು ಓದಿದ್ದು 'ಕಾಗೆ ಮೇಷ್ಟ್ರು'. ಈ ಕಥಾ ಸಂಕಲನದಲ್ಲಿ ಆರು ಕಥೆಗಳಿವೆ.
ಕತ್ತಲಕೆರೆ : ಕತ್ತಲೆಕೆರೆಗೆ ದಾರಿ ಹುಡುಕಿಕೊಂಡು ಹೊರಟವರು ಕರೆದುಕೊಂಡು ಹೋದ ದಾರಿಯಲ್ಲಿ ನಾವೂ ಪಯಣಿಸುತ್ತೇವೆ. ಶ್ರೀಕಾಂತ ಜೋಯಿಸರು ಅವರ ಮನೆಗೆ ಗೂಗಲ್ ಮ್ಯಾಪ್ ನಂಬಿ ತಲುಪಲು ಸಾಧ್ಯವಿಲ್ಲವೆಂದು ಹೇಳಿಯೇ ಗೂಗಲ್ ಲೊಕೇಶನ್ ಕಳುಹಿಸಿದ್ದರು. ಆದರೆ, ಅಲ್ಲಿಗೆ ಹೋಗುವ ಇವರಿಗೆ ಈ ಮೊದಲೇ ಹೋಗಿದ್ದರೂ.. ದಾರಿಯ ಗುರುತು ಅಷ್ಟಾಗಿರಲಿಲ್ಲ. ಮೋಡ ಕವಿದ ವಾತಾವರಣ, ಮಳೆ, ಕತ್ತಲಿನ ನಡುವೆ ಹೊರಟವರಿಗೆ ಅಲ್ಲೊಬ್ಬರು ದಾರಿ ತೋರಿದರು. ನಂತರ ಸಿಕ್ಕ ಏಕಾಂಗಿ ಚೆಲುವೆಯೊಬ್ಬಳು ಕತ್ತಲಕೆರೆಗೆ ದಾರಿ ತೋರುವುದಾಗಿ ಕರೆದೊಯ್ಯುತ್ತಾಳೆ. ಮಲೆನಾಡಿನ ಊರಿನ ದಾರಿಯಲ್ಲಿ ಸಾಗುತ್ತಲೇ.. ಆ ಯುವತಿಯ ಕುರಿತಾಗಿ ಹೇಳುವ ಭಾವನೆಗಳು ಆಕೆ ದೆವ್ವವಿರಬಹುದು ಎಂದು ಆಲೋಚಿಸುವ ರೀತಿ ನಮ್ಮನ್ನು ಇದು ಹಾರರ್ ಕಥೆ ಇರಬಹುದಾ ಎಂದು ಯೋಚಿಸುವಂತೆ ಮಾಡುತ್ತದೆ. ಆದರೆ ಈ ಕಥೆಗೆ ತಿರುವು ದೊರಕುವುದು ಆಕೆಯ ನಡವಳಿಕೆಯಿಂದ. ಆಕೆಯನ್ನು ಹಿಂಬಾಲಿಸಿ ಹೊರಟವರಿಗೆ ಸಿಕ್ಕ ಅನುಭವ ಬೇರೆಯದ್ದೇ ಕಥೆಯನ್ನು ಹೇಳುತ್ತದೆ.
ಕಾಗೆ ಮೇಷ್ಟ್ರು : ಶಂಕರ ಐತಾಳ ಮೇಷ್ಟ್ರನ್ನು ಊರಿನ ಎಲ್ಲರೂ ಕಾಗೆ ಮೇಷ್ಟ್ರು ಇಂತಲೇ ಕರೆಯುತ್ತಿದ್ದರು ಎನ್ನುವುದರಿಂದ ಶುರುವಾಗುವ ಕಥೆ ಅವರು ಹೇಳುವ ಪಾಠದಲ್ಲಿ.. ಕಾವ್ಯಕ್ಕೂ ಈಗಿನ ಜೀವನ ಕ್ರಮಕ್ಕೂ ಹೋಲಿಕೆಯನ್ನು ಹೇಳುತ್ತಲೇ.. ಅವರ ಜೀವನದ ಚಿತ್ರಣವು ಬದಲಾದ ಕಥೆಯನ್ನು ಹೇಳುತ್ತದೆ. ಅವರ ಬದಲಾದ ನಡವಳಿಕೆ, ಕಾಗೆಯ ಕುರಿತು ಆಸಕ್ತಿ ಹುಟ್ಟಿಸಿದ್ದೇಕೆ..?? ಸರಳವಾದ ಸತ್ಯವನ್ನು ಅರಗಿಸಿಕೊಳ್ಳಲೇ ಒದ್ದಾಡುವ ಅವರು ಕಂಡುಕೊಂಡ ಬದುಕಿನ ಗತಿ ಸಾಗಿದ್ದೇಗೆ..?? ಓದಿ ನೋಡಿ.
"ತಮ್ಮ ಗುಂಪಿನಲ್ಲಿ ಒಂದು ಆನೆ ಸತ್ತಿತೆಂದರೆ ಉಳಿದ ಆನೆಗಳೆಲ್ಲಾ ಅಲ್ಲೇ ರೋಧಿಸುತ್ತಾ ನಿಂತಿರುತ್ತವೆ. ಒಂದೊಂದೇ ಆನೆ ಹೊರಟರೂ ತಾಯಿ ಆನೆ ಮಾತ್ರ ಕೊನೆಯವರೆಗೂ ಹಸಿವಿನಿಂದ ಇನ್ನೇನು ತನ್ನ ಪ್ರಾಣಕ್ಕೆ ಆಪತ್ತು ಅನ್ನುವವರೆಗೂ ಅಲ್ಲೇ ನಿಂತಿದ್ದು ಕೊನೆಗೆ ಬಿಟ್ಟು ಹೋಗಲಾರದೆ ಸಂಕಟಪಡುತ್ತಾ ಹೊರಡುತ್ತದೆ" ಎಂದವರು "ಅದೇ ನಾವು ಮನುಷ್ಯರು! ಹೆಣ ಸುಟ್ಟು ಮನೆಗೆ ಬಂದ ಕೂಡಲೇ ಗಂಜಿ ಉಣ್ಣುತ್ತೇವೆ!!" ಎಂದ ಮೇಷ್ಟ್ರ ಮಾತು ಬಹಳ ಕಲಕಿತು.
ಒಂದು ಪಾರ್ಕಿಂಗ್ ಪ್ರಕರಣ : ಪಾರ್ಕಿಂಗ್ ಪ್ರಕರಣ ಎಂದಾಕ್ಷಣ ಮೊದಲಿಗೆ ನೆನಪಾಗುವುದು ಅಲ್ಲಿನ ಸೆಕ್ಯೂರಿಟಿ. ಇಲ್ಲಿನ ಸೆಕ್ಯೂರಿಟಿ ಮುನಿರಾಜು. ಬೇರೆಡೆಯಿರುವಂತೆ ಮುನಿರಾಜುವಿಗೆ ಪ್ರತ್ಯೇಕ ಕೊಠಡಿ, ಫೋನು, ಫ್ಯಾನು ಇಂತಹಾ ಸೌಲಭ್ಯವಿರಲಿಲ್ಲ. ಒಂದು ಸಣ್ಣ ಕಾಂಪ್ಲೆಕ್ಸಿನ ಮೊದಲ ಮಹಡಿಯ ಅಕೌಂಟ್ಸ್ ಕಂಪನಿಯ ಸೆಕ್ಯೂರಿಟಿಗಾರ್ಡ್ ಆಗಿದ್ದ ಅವನು ತನ್ನ ಮಾಲೀಕರಿಗೆಂದು ಹಿಡಿತಿರುತ್ತಿದ್ದ ಜಾಗ ಕ್ರಮೇಣ ಆತನನ್ನು ಬದಲಾಯಿಸಿದ್ದು ಹೇಗೆ..?? ಅಷ್ಟಕ್ಕೂ ಅಲ್ಲಿನ ಪಾರ್ಕಿಂಗ್ ಸ್ಥಳವನ್ನು ಹಿಡಿಯಬೇಕಾದ ಅವಶ್ಯಕತೆ ಏನಿತ್ತು..?? ಮುನಿರಾಜು ಸಾರ್ವಜನಿಕರ ಜೊತೆಗೆ ನಡೆದುಕೊಳ್ಳುತ್ತಿದ್ದದ್ದು ಹೇಗೆ..?? ಆತನ ಚಾರ್ ಸೋ ಬೀಸ್ ಝರ್ದಾ ರಂಗಾದ ಕಥೆಯೊಂದನ್ನು ಬಿಚ್ಚಿಡುತ್ತದೆ.
ಸಾವಿನ ಕಥೆಗಳೇ ಹೀಗೆ... : ಸಾವಿನ ಕಥೆಗಳೇ ಹೀಗೆ ಧಿಡೀರ್ ಎಂದು ಅನಿರೀಕ್ಷಿತವಾದ ಸುದ್ದಿಗಳನ್ನು ಹೇಳುತ್ತವೆ. ಎಲ್ಲರೂ ನಿರೀಕ್ಷಿಸುತ್ತಿದ್ದ ಸತೀಶನ ಸಾವು ಸಂಭವಿಸಿರಲಿಲ್ಲ. ವೈವಾಹಿಕ ಜೀವನ, ಆರ್ಥಿಕ ಪರಿಸ್ಥಿತಿ, ಆರೋಗ್ಯ ಎಲ್ಲವೂ ಹಳ್ಳಹಿಡಿದಿದ್ದರೂ.. ಆತ ಇನ್ನೂ ಬದುಕಿದ್ದ. ಆದರೆ, 40 ದಾಟಿದರೂ ಬಿ.ಪಿ, ಶುಗರ್, ಕೊಲೆಸ್ಟ್ರಾಲ್ ಯಾವುದರ ಲಕ್ಷಣವೂ ಇಲ್ಲದೆ.. ಎಲ್ಲರೊಂದಿಗೆ ಅಪ್ಯಾಯಮಾನವಾಗಿದ್ದ, ಯಾವ ಒತ್ತಡಗಳೂ ಇಲ್ಲದೆ ಹಾಯಾಗಿ ಸಿಂಗಾಪೂರಿನಲ್ಲಿದ್ದ ಶಶಾಂಕ್ ಹಾರ್ಟ್ ಅಟ್ಯಾಕ್ ನಿಂದ ಸಾವನ್ನಪ್ಪಿದ್ದ. ಇಲ್ಲಿ ಶಶಾಂಕನ ಸಾವಿಗೂ ಸತೀಶನ ಬದುಕಿಗೂ ಅಜಗಜಾಂತರ ವ್ಯತ್ಯಾಸವಿತ್ತು. ಅಷ್ಟಕ್ಕೂ ಇನ್ನೊಬ್ಬರು ಸಾಯಬೇಕಿತ್ತು ಎನ್ನುವ ಆಲೋಚನೆಯೇ ತಪ್ಪಲ್ಲವಾ ಎನ್ನಿಸಿತು. ಆದರೆ, ಚೆನ್ನಾಗಿದ್ದವರು ಸತ್ತಾಗ ಅಂತವರಿಗೆ ಸಾವು ಇಷ್ಟು ಬೇಗ ಏಕೆ ಬಂತು..?? ಎನ್ನುವ ಪ್ರಶ್ನೆ ಕಾಡುವುದರ ಜೊತೆಗೆ ಇಂತಹಾ ಆಲೋಚನೆಯೂ ಸಹಜವೇ ಎನ್ನಿಸಿತು. ಅದಕ್ಕೆ ಎಲ್ಲರೂ ಪ್ರತಿಕ್ರಿಸಿದ ರೀತಿ ಹಾಗೂ ಸತೀಶನ ಪ್ರತಿಕ್ರಿಯೆ ಎಲ್ಲವನ್ನು ಕಂಡಾಗ ಸಾವಿನ ನಂತರದ ಪ್ರತಿಕ್ರಿಯೆಗಳ ಚಿತ್ರಣವೊಂದು ದೊರಕುತ್ತದೆ
ವೈಯಕ್ತಿಕವಾಗಿ ಕಾಡಿದ ಕಥೆ ಇದು. ಅನಿರೀಕ್ಷಿತವಾದ ಸಾವನ್ನು ಅರಗಿಸಿಕೊಳ್ಳುವುದು ಕಷ್ಟವಾದರೂ.. ಸಹಜತೆಯತ್ತ ಮುಖ ಮಾಡುತ್ತಿದ್ದೇವೆ ಎಂದು ಭಾವಿಸಿದರೂ ಹಾಗಿರುವುದು ಬಹಳವೇ ಕಷ್ಟ. ಧಿಡೀರ್ ಸಾವಿನ ಕಾರಣಗಳನ್ನು ಅರಿಯುವುದು ಕಷ್ಟವಾದರೂ.. ಅದು ತಿಳಿದ ನಂತರ ಅದನ್ನು ಅರಗಿಸಿಕೊಳ್ಳುವುದು ಇನ್ನೂ ಕಷ್ಟ.
ಸಂತಾನ ಯೋಗ : ಪ್ರದ್ಯುಮ್ನ ಹಾಗೂ ಸರಿತಾರ ವಿವಾಹದ ನಂತರದ ಜೀವನ ಹಾಗೂ ಅವರಿಬ್ಬರ ದೈನಂದಿನ ಬದುಕು, ಅವರವರ ತಂದೆ-ತಾಯಿಯರು ಬಂದಾಗ ಇರುವ ಬದುಕಿಗೂ ಇರುವ ಅಜಗಜಾಂತರ ವ್ಯತ್ಯಾಸವನ್ನು ಹೇಳುತ್ತಲೇ.. ಇಂದಿನ ದಂಪತಿಗಳ ವಾಸ್ತವವನ್ನು ಚಿತ್ರಿಸಿದ್ದಾರೆ. ಅವರವರ ಮಾನಸಿಕ ತುಮುಲಗಳ ಜೊತೆಗೆ ಇಂದಿನ ವೈದ್ಯಕೀಯ ಪರಿಸ್ಥಿತಿ ಹಾಗೂ ಮನೆಯವರ ಪ್ರತಿಕ್ರಿಯೆಗಳು ಸಂತಾನಯೋಗಕ್ಕಾಗಿ ಮಾಡಿಕೊಂಡ ಬದಲಾವಣೆಗಳು ಇಲ್ಲಿವೆ. ಯಾವುದಾದರೂ ಮಗುವನ್ನು ದತ್ತು ತೆಗೆದುಕೊಳ್ಳೋಣ ಎಂದ ಪ್ರದ್ಯುಮ್ನನ ಮಾತಿಗೆ "ಮಗೂನ ಬೆಳೆಸುವ ಸುಖ ಮಾತ್ರವಲ್ಲ, ನನಗೆ ಮಗೂನ ಹೊರುವ ಸುಖಾನೂ ಬೇಕು; ಹೆರುವ ನೋವೂ ಬೇಕು" ಎಂದು ಆಶಿಸಿದ್ದ ಸರಿತಾಳ ಭವಿಷ್ಯದ ಕನಸು ಇಲ್ಲಿದೆ.
ವರ್ಣ ವಿಸ್ಮೃತಿ : ಮಮತಾ ಆಗಿದ್ದ ಮೃದು ಹುಡುಗಿಯೊಬ್ಬಳು ಈಗ ಮಂದಾರ ಎನ್ನುವ ಖ್ಯಾತ ನಟಿ. ಆಕೆ ಹಾಗೆ ನಟಿಯಾದರೂ ಆಗಾಗ ತೀರ್ಥಹಳ್ಳಿ ಕಾಡುತ್ತಿತ್ತು. ಅಲ್ಲಿನ ತಿಳಿಸಂಜೆಯ ಲಾಸ್ಯ, ಮಾರ್ದವತೆ, ಸೌಮ್ಯತೆ ಕಾಡುತ್ತಿತ್ತು. ಅಲ್ಲಿನ ಸಂಜೆಗಳನ್ನು ಮತ್ತೆಲ್ಲೋ ನಿರೀಕ್ಷಿಸುವ ಅವಳ ಹುಡುಕಾಟ ನಿಂತಿರಲಿಲ್ಲ. ಆಕೆ ಮೊದಲ ಬಾರಿಗೆ ಶೂಟಿಂಗಿಗೆ ಬಂದಾಗ ಆಕೆಯನ್ನು ಗುರುತಿಸಿದ್ದು ಆಕೆಯ ಹೆಸರಿನಿಂದಲ್ಲ.. ಬದಲಾಗಿ ಒಂದು ಬಣ್ಣದಿಂದ. ಕೃತಕ ಜಗತ್ತಿನಲ್ಲಿನ ಆ ಬಣ್ಣ ಆಕಿಯಲ್ಲಿ ಮೂಡಿಸಿದ್ದ ಭಾವಗಳೇನು..?? ಅವಳ ಬದುಕಲ್ಲಿ ಶಿಶಿರನ ಪಾತ್ರವೇನಿತ್ತು..??
'ಕತ್ತಲಕೆರೆ' ಕಥೆಯಲ್ಲಿನ ರೂಪಕ ಹೇಳಿದ ನಂತರವೂ ಹೇಳದೆ ಉಳಿದದ್ದೇ ಹೆಚ್ಚೆನಿಸಿತು. 'ಕಾಗೆ ಮೇಷ್ಟ್ರು' ಕಥೆಯಲ್ಲಿ ಸಾವಿನ ನಿಗೂಢತೆಯನ್ನು ಅರಿಯಲು ಹೊರಟವರ ಮನಸ್ಥಿತಿ ಕಾಣುತ್ತದೆ. 'ಒಂದು ಪಾರ್ಕಿಂಗ್ ಪ್ರಕರಣ' ವಾಸ್ತವದ ಪ್ರಸಂಗವೊಂದನ್ನು ತೆರೆದಿಟ್ಟಂತೆ ಎನ್ನಿಸಿದರೂ.. ಮನುಷ್ಯ ಬದಲಾಗುತ್ತಾ ಮೈಗೂಡುವ ಒಂದು ರೀತಿಯ ಒರಟುತನವನ್ನು ತೋರಿಸುತ್ತದೆ. 'ಸಾವಿನ ಕಥೆಗಳೇ ಹೀಗೆ..' ಇಂದಿನ ಕಟು ವಾಸ್ತವದ ಕಥೆ.
ಬದುಕಿನಲ್ಲಿ ನೋವು-ನಲಿವಿನ ಆಯ್ಕೆ ನೀಡಿದರೆ ಹೆಚ್ಚಿನವರು ಆಯ್ದುಕೊಳ್ಳುವುದು ನಲಿವನ್ನೇ.. ಆದರೆ, ಆ ನಲಿವು ಬೇಕೆಂದರೆ ನೋವು ಜೊತೆಯಾಗಬೇಕು. ಆ ನೋವನ್ನು ಅಪೇಕ್ಷಿಸುತ್ತಿದ್ದ 'ಸಂತಾನಯೋಗ'ದ ಸರಿತಾ ಬದುಕಿನ ದೃಷ್ಟಿಕೋನವನ್ನು ಬೇರೆಯದ್ದೇ ರೀತಿಯಲ್ಲಿ ತೋರುತ್ತಾಳೆ. ಬಣ್ಣದ ದೆಸೆಯಿಂದ ಮಂದಾರ ಬದುಕನ್ನು ಕಟ್ಟಿಕೊಂಡಳೋ ಅಥವಾ ತನ್ನ ವ್ಯಕ್ತಿತ್ವವನ್ನು ಕಳೆದುಕೊಂಡಿದ್ದಳೋ ಎನ್ನಿಸುತ್ತಲೇ ಎರಡರ ನಡುವೆ 'ವರ್ಣ ವಿಸ್ಮೃತಿ' ಮೂಡಿಸುತ್ತಾಳೆ.
ಈ ಪುಸ್ತಕದ ಪ್ರಕಾಶಕರ ನುಡಿಯಲ್ಲಿ "ಓದಿದ್ದಷ್ಟೇ ಕಥೆಯಲ್ಲ! ನಮಗೆ ದಕ್ಕಿದ್ದಷ್ಟೇ ಕಥೆಯೂ ಅಲ್ಲ! ಓದಿ, ದಕ್ಕಿಸಿಕೊಂಡ ನಂತರವೂ ಇನ್ನೇನೋ ಇದೆ ಅನ್ನಿಸುವುದು ಶ್ರೇಷ್ಠ ಕಥೆ. ವಿಕ್ರಮ್ ಅವರ ಕಥೆಗಳಲ್ಲಿ ಆ ಇನ್ನೇನೋ ಇದೆ! ನೀವು ಓದಬೇಕಷ್ಟೆ." ಎಂದಿರುವ ಮಾತಿಗೆ ನನ್ನ ಸಂಪೂರ್ಣ ಸಹಮತಿ ಇದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ