ಮೊನ್ನೆ ಇವರು ಕಂಪೆನಿಯಿಂದ ಬಂದಾಗ ಇವರ ಜೇಬಿನಲ್ಲಿ ಒಂದಷ್ಟು ಕ್ಯೂ.ಆರ್ ಕೋಡ್ ಇರುವ ಡೇಟಾ ಶೀಟ್ ಗಳು ಉಳಿದು ಹೋಗಿದ್ದವು. 'ಏನಿದು' ಎಂದು ವಿಚಾರಿಸಿದಾಗ ಅವರು ವರ್ಕ್ ಮಾಡುವ ಕಾರ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿಯ ಕೆಲವು ಡೇಟಾ ಶೀಟ್ ಗಳು ಎಂದು ತಿಳಿಯಿತು. ಯಾವ ಪಾರ್ಟ್ ಎಷ್ಟು ಹೊತ್ತಿಗೆ ತಯಾರಾಗುತ್ತದೆ ಮತ್ತು ಅದರ ಉಳಿದ ಎಲ್ಲಾ ಮಾಹಿತಿಗಳನ್ನು ಹೊಂದಿರುವ ಶೀಟ್ ಅದು. ಈ ಕ್ಯೂ.ಆರ್ ಕೋಡ್ ಸಾಫ್ಟ್ವೇರ್ ಇಂಜಿಯರಿಂಗ್ ಗೆ ಹಾಗೂ ಅದರ ಬಳಕೆಗೆ ಮಾತ್ರ ಸೀಮಿತ ಎಂದು ತಿಳಿದಿದ್ದರೆ ಅದು ನಮ್ಮ ದಡ್ಡತನಕ್ಕೆ ಹಿಡಿವ ಕೈಗನ್ನಡಿಯಾಗುತ್ತದೆ ಅಷ್ಟೇ.. ಇದರ ಹುಟ್ಟಿನ ಜಾಡು ಹಿಡಿದು ಹೊರಟರೆ ಬೇರೆಯದ್ದೇ ಕಥೆ ಕಾಣುತ್ತದೆ.
ಕ್ಯೂ.ಆರ್ ಕೋಡ್ ಗಿಂತಲೂ ಮೊದಲು ಎಲ್ಲೆಡೆ ಬಳಕೆಯಲ್ಲಿದ್ದದ್ದು ಬಾರ್ ಕೋಡ್ ಗಳು. ಈ ಬಾರ್ ಕೋಡ್ ಗಳನ್ನೇ ಬಳಸಬಹುದಿತ್ತಲ್ಲಾ ಎಂದುಕೊಂಡರೆ ಅದರಲ್ಲಿ 12 ಅಂಕಿಯ ಮಾಹಿತಿಯನ್ನು ಮಾತ್ರವೇ ಬಳಸಬಹುದಾಗಿದ್ದಿತು. ಈಗ ನಾವು ಮೊಬೈಲ್ ನಲ್ಲಿ 10 ಸಂಖ್ಯೆಯ ನಂಬರ್ ಬಳಸುತ್ತಿದ್ದೇವಲ್ಲಾ ಹಾಗೆ.. ಮೊದಲು ಎಲ್ಲಾ ಮೊಬೈಲ್ ನಂಬರ್ ಗಳು 9 ರಿಂದಲೇ ಶುರುವಾಗುತ್ತಿತ್ತು. ನಾನು ಹೇಳುತ್ತಿರುವುದು +91 ಎಂಬ ದೇಶದ ಕೋಡ್ ಬಿಟ್ಟು ಶುರುವಾಗುವ ನಂಬರ್ ಕುರಿತು. ಅದಾದ ನಂತರ 8 ರಿಂದ ಶುರುವಾಗಲು ತೊಡಗಿತು. ನಂತರ 7, 6 ಹೀಗೆ.. 9 ರಿಂದ ಶುರುವಾಗುವ ಅಷ್ಟು ಸೀರಿಯಲ್ ನಂಬರ್ ಗಳು ಮುಗಿದ ನಂತರ ಈ ಸೀರೀಸ್ ಶುರುವಾದದ್ದು.
ಬಾರ್ ಕೋಡ್ ನಿಂದ ಕ್ಯೂ.ಆರ್ ಕೋಡ್ ಬಂದದ್ದು ಕೂಡಾ ಹಾಗೆಯೇ.. ಕ್ಯೂ.ಆರ್ ಕೋಡ್ ಎಂದರೆ ಮತ್ತೇನಲ್ಲ.. ಎರಡು ಆಯಾಮದ ಬಾರ್ ಕೋಡ್. ಅಂದರೆ, 2-D ಬಾರ್ ಕೋಡ್. ಅದರ ಕಾರ್ಯಕ್ಷಮತೆಗಿಂತಲೂ ಇದರ ಕಾರ್ಯ ಮತ್ತಷ್ಟು ವೇಗವಾದದ್ದು. 1994 ರಲ್ಲಿ ಜಪಾನಿನ 'ಡೆನ್ಸೊ ವೇವ್' ಎನ್ನುವ ಒಂದು ಆಟೋಮೋಟಿವ್ ಕಂಪನಿಯಲ್ಲಿ ಚೀಫ್ ಇಂಜಿನಿಯರ್ ಆಗಿದ್ದ 'ಮಸಾಹಿರೋ ಹರಾ' ಇದನ್ನು ಕಂಡುಹಿಡಿದದ್ದು. ಆಟೋಮೋಟಿವ್ ಕಂಪನಿಯಲ್ಲಿ ತಯಾರಾಗುವ ಭಾಗಗಳ, ಉತ್ಪಾದನಾ ಪ್ರಕ್ರಿಯೆಯ ಮಾಹಿತಿಗಾಗಿ ಆತ ಇದನ್ನು ಮೊದಲು ಬಳಸಿದ್ದು.
ಚಕ್ಚೌಕವಾಗಿರುವ ಕೋಡ್ ಅನ್ನು ಹೀಗೆಯೇ ಸ್ಕ್ಯಾನ್ ಮಾಡಬೇಕೆಂದು ಹೇಗೆ ತಿಳಿಯುತ್ತದೆ ಎನ್ನುವಿರಾ ? ಸಿಮ್ ಕಾರ್ಡ್ ನ ಮಾದರಿಯಂತೆಯೇ ಈ ಕ್ಯೂ.ಆರ್ ಕೋಡ್ ನ ರೂಪು. 3 ಮೂಲೆಗಳಲ್ಲಿ ಒಂದೊಂದು ವಿಶಿಷ್ಟ ಚೌಕವಿದ್ದರೆ ಕೆಳ ಮೂಲೆಯಲ್ಲಿ ಸಣ್ಣ ಚೌಕ ಅಥವಾ ಬಹು ಸಣ್ಣ ಚಚ್ಚೌಕಗಳು ರೂಪುಗೊಂಡಿರುತ್ತವೆ. ಇದರ ಡಿಸೈನಿಂಗ್ ಪರಿ ಹೀಗೆ.
ಮೊದಲೆಲ್ಲಾ ಕ್ಯೂ.ಆರ್ ಕೋಡ್ ತಯಾರಿಸಲು ಗೂಗಲ್ API ಗಳನ್ನು ಬಳಸಬೇಕಾಗಿತ್ತು. ಆದರೆ, ಈಗ ಕೋಡ್ ಗಳನ್ನು ಜನರೇಟ್ ಮಾಡಲು ನೂರಾರು ಅಪ್ಲಿಕೇಶನ್ ಗಳು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿವೆ. ಆದರೆ, ಬಳಸುವ ಮುನ್ನ ಎಚ್ಚರ. ರಿವ್ಯೂ ಹಾಗೂ ರೇಟಿಂಗ್ ನೋಡಿ ಬಳಸಿ. ಹಲವಾರು ಫೇಕ್ ಅಪ್ಲಿಕೇಶನ್ ಗಳು ಕೂಡಾ ಇರಬಹುದು.
ವಿದೇಶಗಳಲ್ಲಿ ಲಭ್ಯವಿರುವ ಸಮಾಧಿಗಳ ಮೇಲೆಯೂ ಈ ಕ್ಯೂ.ಆರ್.ಕೋಡ್ ಬಳಸುವ ಬಳಕೆ ಅಭ್ಯಾಸವಿದೆ. ಅದು ಕೇವಲ ಆ ಸತ್ತ ವ್ಯಕ್ತಿಯ ಕುರಿತು ತಿಳಿದುಕೊಳ್ಳಲು ಮಾತ್ರವಲ್ಲ. ಆ ಸಮಾಧಿಯ ಬಳಿ ಬಂದವರ ಕುರಿತು ಕೂಡಾ ತಿಳಿದುಕೊಳ್ಳಬಹುದು. ಎಷ್ಟು ಜನ, ಎಷ್ಟು ಹೊತ್ತಿಗೆ ಬಂದಿದ್ದರು ಎನ್ನುವ ಮಾಹಿತಿ ಲಭ್ಯವಾಗುವುದು. ಆದರೆ, ಅವರು ಕ್ಯೂ.ಆರ್ ಕೋಡ್ ಬಳಸಿದ್ದರೆ ಮಾತ್ರ. ಈ ರೀತಿ ವಿಭಿನ್ನವಾಗಿ ಯೋಚಿಸಿ ಮೊದಲ ಬಾರಿಗೆ ಜಾರಿಗೆ ತಂದದ್ದು 2008 ರಲ್ಲಿ.. ಜಪಾನ್ ನ ಸ್ಟೋನ್ ಮೇಸನ್ ಎಂಬ ಸಮಾಧಿಯಲ್ಲಿ.
ನಾವು ಪುಸ್ತಕ ಓದುವಾಗ ಯಾವುದೋ ಆಕರದ ಲಿಂಕ್ ಕುರಿತು ಉಲ್ಲೇಖಿಸಿರುತ್ತಾರೆ. ಅದನ್ನು ಚೆಕ್ ಮಾಡಲು ಬ್ರೌಸರ್ ನಲ್ಲಿ ಉದ್ದಕ್ಕೆ ಲಿಂಕ್ ಟೈಪ್ ಮಾಡುವ ಬದಲು ಅಲ್ಲಿನ ಲಿಂಕ್ ಅಥವಾ ವಿಡಿಯೋ ಲಿಂಕ್ ಕ್ಯೂ.ಆರ್ ಕೋಡ್ ಆಗಿ ದೊರೆತರೆ.. ಎಷ್ಟು ಸುಲಭ ಅಲ್ಲವಾ.. ಇಂತಹಾ ಆಲೋಚನೆಯನ್ನು ಕಾರ್ಯರೂಪಕ್ಕೆ ತಂದದ್ದು ಯು.ಕೆ ಯ ರಿಚರ್ಡ್ ವೈಸ್ ಮನ್. 2011 ರಲ್ಲಿ ಆತ ಇಂಗ್ಲೀಷ್ ಹಾಗೂ ಜರ್ಮನ್ ನಲ್ಲಿ ಬರೆದಿರುವ "ಪ್ಯಾರಾ ನಾರ್ಮಾಲಿಟಿ" ಎಂಬ ಪುಸ್ತಕದಲ್ಲಿ ಯೂಟ್ಯೂಬ್ ಲಿಂಕ್ ಗಳೆಲ್ಲವೂ ಕೋಡ್ ರೂಪದಲ್ಲಿವೆ.
ಕೆಲವು ದೇಶಗಳಲ್ಲಿ ಕಾಯಿನ್, ನೋಟುಗಳ ಮೇಲೆ ಅವುಗಳ ಮಾಹಿತಿ ತಿಳಿಯಲು ಕ್ಯೂ.ಆರ್ ಕೋಡ್ ಲಭ್ಯವಿದೆ. 2016 ರಲ್ಲಿ ನಮ್ಮ ದೇಶದಲ್ಲಿ ರಿಸರ್ವ್ ಬ್ಯಾಂಕ್ ಮಾಸ್ಟರ್ ಕಾರ್ಡ್, ವೀಸಾ ಕಾರ್ಡ್, ರೂಪೇ ಕಾರ್ಡ್ ಕಂಪನಿಗಳ ಜೊತೆ ಸೇರಿ ಕ್ಯೂ.ಆರ್ ಕೋಡ್ ಮೂಲಕ ಪಾವತಿಗಾಗಿ ಏಕೀಕೃತ ಪಾವತಿಗಳ ಇಂಟರ್ಪೇಸ್ ಭಾರತ್ ಕ್ಯೂ.ಆರ್ ಅನ್ನು ರೂಪಿಸಿತು.
ಈ ಕ್ಯೂ.ಆರ್ ಕೋಡ್ ಗಳು ಎಷ್ಟು ಸುಲಭವಾಗಿ ಲಭ್ಯವಾಗುತ್ತಿವೆ ಎಂದರೆ. ಹೋಟೆಲ್ ಗೆ ಹೋಗಿ ಮೆನು ಕಾರ್ಡ್ ನೋಡಲು ಸ್ಕ್ಯಾನ್ ಮಾಡಿದರೆ ಮೆನು ಲಭ್ಯ. ನಂತರ ಆರ್ಡರ್ ತೆಗೆದುಕೊಳ್ಳಲು ಮಾತ್ರ ವೇಟರ್ನನ್ನು ಕರೆಯಬಹುದು. ಸಮಯದ ಉಳಿತಾಯ, ಕಿರಿಕಿರಿ ತಪ್ಪಿಸುವ ಉಪಯೋಗವಿದೆ. ಮೆನು ಕಾರ್ಡ್ ಅನ್ನು ಕೈಯಲ್ಲಿ ಮುಟ್ಟುವ ಅವಶ್ಯಕತೆ ಕಾಣದು.
ಇದು ಬಿಡಿ.. ಇನ್ನಷ್ಟು ಸುಲಭ ಹಾಗೆಯೇ ಅಷ್ಟೇ ಅಪಾಯ ಕೂಡಾ ಆಗಬಲ್ಲದು ಇದು. ವೈ-ಫೈ ನೆಟ್ ವರ್ಕ್ ಗೆ ಸೇರಲು ಪಾಸ್ವರ್ಡ್ ಸಮೇತ ಈ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಬಹುದು. ಯಾವುದಾದರೂ ಕಂಪನಿಯ ಬಗ್ಗೆ ತಿಳಿಯಲು ಅವರು ಈ ಕ್ಯೂ.ಆರ್ ಕೋಡ್ ಮೊರೆ ಹೋಗಿರಬಹುದು. ಸುಮ್ಮನೆ ಸಿಕ್ಕಸಿಕ್ಕದ್ದನ್ನೆಲ್ಲಾ ಸ್ಕ್ಯಾನ್ ಮಾಡುತ್ತಾ ಹೋದರೆ.. ಅಥವಾ ಅನಾಮಿಕ ಮೂಲಗಳಿಂದ ಬಂದ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿದರೆ ಅದು ನಮ್ಮನ್ನು ದಾರಿ ತಪ್ಪಿಸಬಹುದು. ಅದು ನಕಲಿ ಕ್ಯೂ.ಆರ್ ಕೋಡ್ ಆಗಿರಬಹುದು ಅಥವಾ ಬೇರೆ ಬೇಡದ ವೆಬ್ಸೈಟ್ ಗೆ ಲಿಂಕ್ ಆಗಿ ನಮ್ಮಿಂದ ನಮ್ಮ ವೈಯಕ್ತಿಕ ಮಾಹಿತಿ ಪಡೆದುಕೊಳ್ಳಬಹುದು.
ಇದರಿಂದ ನಮ್ಮ ವಹಿವಾಟಿನ ಮಾಹಿತಿ ಬಿಟ್ಟು ಕೊಡಬಹುದು. ಪಾಸ್ವರ್ಡ್, ಫೈಲ್ ಗಳನ್ನು ಅವರು ಹ್ಯಾಕ್ ಮಾಡಬಹುದು. ಅಥವಾ ಮೊಬೈಲ್ ಗೆ ವೈರಸ್ ಕೂಡಾ ಅಟ್ಯಾಕ್ ಆಗಬಹುದು.
ನೋಟುಗಳನ್ನು ನಕಲಿಸುತ್ತಾರಲ್ಲಾ ಹಾಗೆ ಕ್ಯೂ.ಆರ್ ಕೋಡ್ ನಕಲಿಸುವವರು ಸಹಾ ಇದ್ದಾರೆ. ಈ ನಕಲಿ ಕ್ಯೂ.ಆರ್ ಕೋಡ್ ತಡೆಯಲು ಎರಡು ರೀತಿಯ ಸುರಕ್ಷತೆ ನೀಡುತ್ತಾರೆ. ಮೊದಲನೆಯದು, ಡಿಜಿಟಲ್ ವಾಟರ್ ಮಾರ್ಕ್ ಅನ್ನು ಕ್ಯೂ.ಆರ್ ಕೋಡ್ ನಲ್ಲಿ ಹಾಕುವ ಮೂಲಕ. ಸುಲಭಕ್ಕೆ ವಾಟರ್ ಮಾರ್ಕ್ ಅನ್ನು ನಕಲಿಸಲು ಸಾಧ್ಯವಿಲ್ಲ. ಅದಕ್ಕೆ ಹೆಚ್ಚಿನ ಮುದ್ರಣ ಪ್ರಕ್ರಿಯೆಯ ಅಗತ್ಯ ಬೀಳುತ್ತದೆ. ಎರಡನೆಯದ್ದು ಸ್ಕ್ಯಾನ್ ಮಾಡುವ ಬಳಸುವ ಕಾಪಿ ಡಿಟೆಕ್ಷನ್ ಪ್ಯಾಟರ್ನ್/ ನಕಲು ಪತ್ತೆ ಮಾದರಿಯಲ್ಲಿ.
ಆದರೆ, ಜನರು ಮೋಸ ಹೋಗುತ್ತಿರುವುದು ಬೇರೆಯದ್ದೇ ರೀತಿಯಲ್ಲಿ. ಯಾರೋ ಅನಾಮಿಕರು ಕಳುಹಿಸಿದ ಕ್ಯೂ.ಆರ್. ಸ್ಕ್ಯಾನ್ ಮಾಡಿ. ಅದರಲ್ಲಿ ಹೀಗೆ ಬರೆದಿತ್ತು. ನೀವು ಈ ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿ ನಿಮ್ಮ ಅಕೌಂಟ್ ಮಾಹಿತಿ ಹಾಗೂ ಯು.ಪಿ.ಐ ಪಿನ್ ನೀಡಿದರೆ ನಿಮ್ಮ ಖಾತೆಗೆ ಇಷ್ಟು ಹಣ ಸಂದಾಯವಾಗುತ್ತದೆ ಎಂದಿರುತ್ತದೆ. ಹಣ ಎಂದರೆ ಯಾರಿಗೆ ಆಸೆಯಿರುವುದಿಲ್ಲ ಹೇಳಿ. ಹಣದಾಸೆಗಾಗಿ ಈ ರೀತಿ ಸಿಕ್ಕಸಿಕ್ಕದನ್ನು ಸ್ಕ್ಯಾನ್ ಮಾಡಿದರೆ ಹಣ ಬರುವುದರ ಬದಲಾಗಿ ಹಣ ಹೋಗುತ್ತದೆ ಅಷ್ಟೇ. ಹಣ ಪಾವತಿಸಲು ಸ್ಕ್ಯಾನ್ ಮಾಡಿ. ಬದಲಿಗೆ, ಹಣ ನಿಮಗೆ ಬರಲು ಸ್ಕ್ಯಾನ್ ಮಾಡದಿರಿ. ಅದೊಂದು ಸ್ಕ್ಯಾಮ್ ಅಷ್ಟೇ.
ಸುರಕ್ಷಾ ತನ್ನ ಮನೆಯ ಹಳೆಯ ಡೈನಿಂಗ್ ಟೇಬಲ್ ಮಾರಲು OLX ನಲ್ಲಿ ಜಾಹೀರಾತು ನೀಡಿದಳು. ಅವಳಿಗೆ ಅನಾಮಿಕ ಖರೀದಿದಾರರಿಂದ ತಾವು ಅದನ್ನು ಕೊಳ್ಳಲು ಸಿದ್ಧರಿದ್ದೇವೆ ಎಂಬ ಮೆಸೇಜ್ ದೊರೆಯಿತು. ನಂತರದ್ದು ಪೇಮೆಂಟ್ ಪ್ರಕ್ರಿಯೆ. ಅವರು ಪೇ ಮಾಡುವಾಗ ಅವಳಿಗೆ ಒಂದು ಮೆಸೇಜ್ ಬಂದಿತು. "ಈ ಕ್ಯೂ.ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿದರೆ ನಿಮಗೆ ಹಣ ಸಂದಾಯವಾಗುತ್ತದೆ" ಎಂದು. ಯಾಕೋ ಆವಳಿಗೆ ಅನುಮಾನ ಬಂದು ನನಗೆ ಈ ರೀತಿಯ ಪೇಮೆಂಟ್ ಬೇಡ ಎಂದು ಹೇಳಿದಳು. ಮುಖಾಮುಖಿ ಬಂದು ಹಣ ಸಂದಾಯ ಮಾಡಿ ಎಂದಾಗ ಆ ಆಸಾಮಿ ಮತ್ತೆ ಪ್ರತಿಕ್ರಿಯೆ ನೀಡಲೂ ಇಲ್ಲ ಮತ್ತೆ ಫೋನ್ ಕೂಡಾ ಸ್ವಿಚ್ಡ್ ಆಫ್. ಅವಳಿಗೆ ಅನುಮಾನ ಬಂದದ್ದಕ್ಕೆ ಕಾರಣ ಅವಳ ಸಹೋದ್ಯೋಗಿ ಗಿರೀಶ್ ರಿಗೆ ಇದೇ ರೀತಿ ಹೇಳಿ ಅವರು ಸ್ಕ್ಯಾನ್ ಮಾಡಿ ಪಿನ್ ನಮೂದಿಸಿ ಹಣ ಕಳೆದುಕೊಂಡಿದ್ದರು. ಇನ್ನೂ ಅಲ್ಲಿ ಇಲ್ಲಿ ಅಲೆಯುತ್ತಾ ಬಾರದ ದುಡ್ಡಿಗಾಗಿ, ಕಳೆದುಕೊಂಡ ಹಣಕ್ಕಾಗಿ ಪರಿತಪಿಸುತ್ತಿದ್ದರು. ಎಲ್ಲಾ ಪಾಠಗಳನ್ನೂ ಅನುಭವಿಸಿಯೇ ಕಲಿಯಬೇಕಿಲ್ಲ. ಬದಲಿಗೆ ನೋಡಿಯೂ ಕಲಿಯಬಹುದು.
ಹೆಚ್ಚಿನ ಸುರಕ್ಷತೆ ಇದ್ದೂ OLX ಹಾಗೂ SBI ಗಳು ಕ್ಯೂ.ಆರ್ ಕೋಡ್ ಸ್ಕ್ಯಾಮ್ ಆಗಬಹುದು ಎಂದು ಎಚ್ಚರಿಕೆ ನೀಡಿವೆ. ಏಕೆಂದರೆ, ಮೇಲಿನ ರೀತಿಯದ್ದೇ ಕೆಲ ಪ್ರಕರಣಗಳು ನಡೆದಿವೆ.
ಇದನ್ನು ತಡೆಯಲು ನಾವು ಮಾಡಬೇಕಾಗಿರುವುದು ಹೀಗೆ. ಕ್ಯೂ.ಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ಓಪನ್ ಆದ ವೆಬ್ಸೈಟ್ ಸುರಕ್ಷತೆ ಕುರಿತು ಪರಿಶೀಲಿಸಿ. ವೈಯಕ್ತಿಕ ಮಾಹಿತಿ ತುಂಬದಿರಿ. ಸುಖಾಸುಮ್ಮನೆ ಸಿಕ್ಕಿದ್ದನ್ನೆಲ್ಲಾ, ಯಾರ್ಯಾರೋ ಅನಾಮಿಕರು ಕಳುಹಿಸಿದ್ದನ್ನೆಲ್ಲಾ ಸ್ಕ್ಯಾನ್ ಮಾಡಬೇಡಿ. ಸ್ಕ್ಯಾನ್ ಮಾಡಿದರೆ ಹಣ ಬರುವುದಿಲ್ಲ.. ಅದರಲ್ಲಿ ಪಿನ್ ನಂಬರ್ ನಮೂದಿಸದಿರಿ. ಯಾವುದೋ ವೈ-ಫೈಗೆ ಪಾಸ್ವರ್ಡ್ ಇಲ್ಲದೆ ಕನೆಕ್ಟ್ ಮಾಡಲು ಸ್ಕ್ಯಾನ್ ಮಾಡದಿರಿ.
ಈ-ಮೇಲ್ ನಲ್ಲಿ ಈ ಟಿಕೆಟ್ ಬುಕ್ ಮಾಡಿ ಎಂದೋ.. ಅಥವಾ ಈ ಕಂಪನಿಯಲ್ಲಿ ನಿಮಗೆ ಕೆಲಸ ಸಿಕ್ಕಿದೆ. ಸ್ಕ್ಯಾನ್ ಮಾಡಿ ಎನ್ನುವ ರೀತಿ ಕೂಡಾ ದಿನದಿಂದ ದಿನಕ್ಕೆ ಸ್ಪ್ಯಾಮ್ ಗಳು ಹೆಚ್ಚಾಗುತ್ತಿವೆ. ಈ ಸ್ಪ್ಯಾಮ್ ಗಳು ನಾವು ಇತ್ತೀಚಿನ ನಮ್ಮ ಅಭ್ಯಾಸ,ಹವ್ಯಾಸ ಅನುಸರಿಸಿ ಟ್ರ್ಯಾಪ್ ಮಾಡುತ್ತಾರೆ. ಹಾಗಾದ್ರೆ, ನಮ್ಮ ಡೇಟಾ ಅವರ ಬಳಿ ಹೇಗೆ ಹೋಗುತ್ತದೆ ? ಬಳಕೆದಾರರ ಗೌಪ್ಯತೆಗಳು ಎಷ್ಟು ಸುರಕ್ಷಿತ ಹಾಗೂ ಟ್ರ್ಯಾಪ್ ಮಾಡುವ ಟ್ರ್ಯಾಕ್ ಕುರಿತ ಮಾಹಿತಿ ಮುಂದಿನ 'ಟೆಕ್-ಟಾಕ್'ನಲ್ಲಿ.
- ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ