ಬುಧವಾರ, ಏಪ್ರಿಲ್ 15, 2026

ಭೂಮಿಕಾ (ಪುಸ್ತಕ ಯಾನ - 194)


ಪುಸ್ತಕದ ಶೀರ್ಷಿಕೆ : ಭೂಮಿಕಾ

ಲೇಖಕರು : ಪ್ರೇಮಾ ಭಟ್

ಪ್ರಕಾಶಕರು : ಶ್ರೀ ಪ್ರೇಮಸಾಯಿ ಪ್ರಕಾಶನ

ಪ್ರಥಮ ಮುದ್ರಣ : 2001

ಪುಟಗಳು : 103


ರಾಮಾಯಣ ಹಾಗೂ ಮಹಾಭಾರತಗಳು ಮಹಾಕಾವ್ಯಗಳು. ಇವುಗಳ ಹರಿವು ವಿಶಾಲವಾದಂತಹದ್ದು. ಆದರೆ, ಒಂದೇ ಪಾತ್ರದ ದೃಷ್ಟಿಯಿಂದ ರಾಮಾಯಣವನ್ನು ನೋಡುವುದಕ್ಕೂ.. ಬೇರೆ ಬೇರೆ ವಿಶ್ಲೇಷಣೆಯ ಮೂಲಕ ರಾಮಾಯಣವನ್ನು ಅರ್ಥಮಾಡಿಕೊಳ್ಳುವುದಕ್ಕೂ ವಿಭಿನ್ನ ನೋಟ ಕಾಣುತ್ತದೆ. ವಾಲ್ಮೀಕಿ ರಾಮಾಯಣ, ತುಳಸಿ ರಾಮಾಯಣ, ಶ್ರೀ ರಾಮಾಯಣ ದರ್ಶನಂ ಹೀಗೆ ಹಲವಾರು ರೀತಿಯ ಗ್ರಂಥಗಳನ್ನು ಓದುವಾಗ ಇದು ಅರಿವಾಗುತ್ತದೆ. 


ಆದೌ ರಾಮ ತಪೋವನಾಭಿಗಮನಂ ಹತ್ವಾ ಮೃಗಂ ಕಾಂಚನಂ|ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ||ವಾಲಿನಿರ್ಹನನಂ ಸಮುದ್ರ ತರಣಂ ಲಂಕಾಪುರೀ ದಾಹನಂ|ಪಶ್ಚಾದ್ರಾವಣಕುಂಭಕರ್ಣ ಮಥನಂ ಏತದ್ಧಿ ರಾಮಾಯಣಂ||


ಈ ಏಕ ಶ್ಲೋಕೀ ರಾಮಾಯಣ, ರಾಮಾಯಣದ ಇಡೀ ಸಾರವನ್ನು ನಾಲ್ಕು ಸಾಲುಗಳಲ್ಲಿ ಬಹಳ ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದೆ.


ಲೇಖಕಿ ಪ್ರೇಮ ಭಟ್ ಅವರು ಹೆಣ್ಮನಸಿನ ಮೂಲಕ ಅದರಲ್ಲೂ ಸೀತೆಯ ಭೂಮಿ ತೂಕದ ಹೆಣ್ಣು ಸೀತೆಯ ಮೂಲಕ ರಾಮಾಯಣವನ್ನು ಗೀತಕಾವ್ಯದ ಮೂಲಕ ನಾಲ್ಕು ಸಾಲುಗಳ ಸರಳವಾದ ಕಾವ್ಯದಲ್ಲಿ ಕಟ್ಟಿಕೊಟ್ಟಿರುವುದು.. ಅರ್ಥ ಮಾಡಿಕೊಳ್ಳುವುದಕ್ಕೂ ಸುಲಭವಿದ್ದು ವಿಶೇಷವೆನಿಸುತ್ತದೆ.

 

ರಾಮಾಯಣದ ಗದ್ಯರೂಪವನ್ನು ಮಾತ್ರ ನಾನು ಇದುವರೆಗೂ ಓದಿದ್ದು.. ಅಲ್ಲದೇ, ಪ್ರೇಮ ಭಟ್ ಅವರ ಬರಹದ ಶೈಲಿಯೂ ನನಗೆ ಹೊಸದು. ಇದು ನಾನು ಓದಿದ ಅವರ ಮೊದಲ ಪುಸ್ತಕ. ಇದರಲ್ಲಿ ನನಗಿಷ್ಟವಾದ ಕೆಲವು ಸಾಲುಗಳನ್ನು ಉಲ್ಲೇಖಿಸುತ್ತಾ.. ಅದನ್ನು ವಿಶ್ಲೇಷಿಸುವ ಪ್ರಯತ್ನ ಮಾಡುತ್ತೇನೆ. ಮುಖ್ಯವಾಗಿ ಇಲ್ಲಿ ಸೀತೆಯ ಸ್ವಭಾವವನ್ನು ಹೇಳಿರುವ ಸಾಲುಗಳನ್ನೇ ಆಯ್ದುಕೊಂಡಿದ್ದೇನೆ. ಶೀರ್ಷಿಕೆಗೆ ಹೊಂದಿಕೆಯಾಗುವ ಈ ಸಾಲುಗಳು ಸೀತೆಯ ಹಿರಿಮೆಯನ್ನು ಪರಿಚಯಿಸುತ್ತವೆ.


ಜನಕರಾಜನ ಕುವರಿ ಜಾನಕೀ ದೇವಿ

ವನಜನಾಭನ ಸತಿ ಸೀತೆಯ ಕುರಿತು

ಕತೆಯ ಹೇಳುವೆ ಮನವೆ ನೀ ಕೇಳು ಮುದದಿ

ಅಂತಿಂಥ ಕತೆಯಲ್ಲವಿದು ಹಳೆ ಕತೆಯ ಹೊಸ ಜಾಡು


ಸೀತೆಯನ್ನು ನಾವು ನೆನೆಯುವಾಗ ಆಕೆ ರಾಮನ ಪತ್ನಿ ಎನ್ನುವುದರ ಜೊತೆಗೆ ಜನಕರಾಜನ ಮಗಳೆನ್ನುವುದೂ ಅಷ್ಟೇ ಮುಖ್ಯವಾಗುತ್ತದೆ. ಹಾಗಾಗಿ, ಅವಳನ್ನು ಜಾನಕಿ ಎಂದು ಕರೆಯುತ್ತೇವೆ. ಆದರೆ, ಸೀತೆ ದೊರೆತದ್ದು ಭೂಮಿಯಲ್ಲಿಯೇ ಆದರೂ ಆತ ತಂದೆಯಾಗಿ ಆಕೆಯನ್ನು ಸಲಹಿದ ರೀತಿ ಹಾಗೂ ರಾಜಕುಮಾರಿಯಂತೆ, ತನ್ನ ಮಗಳಂತೆ ಬೆಳೆಸಿ ಸಾಕಿ, ಸಲಹಿ ಸಂಸ್ಕಾರ ನೀಡಿರುವ ಪರಿ ಅರ್ಥವಾಗುತ್ತದೆ. ವನಜನಾಭ ಎಂದರೆ ವಿಷ್ಣು. ವಿಷ್ಣುವಿನ ಅವತಾರವೇ ಆದ ರಾಮಾವತಾರದಲ್ಲಿ ರಾಮನ ಪತ್ನಿಯಾದ ಸೀತೆಯನ್ನು ಪರಿಚಯಿಸುತ್ತಾ.. ಇದು ಸಾಮಾನ್ಯವಾದ ಕಥೆಯಲ್ಲ. ಹಳೆ ಕಥೆಯ ಹೊಸ ಜಾಡು ಎನ್ನುತ್ತಾ ಅವರು ಗೀತ ಕಾವ್ಯವನ್ನು ಶುರು ಮಾಡಿರುವ ರೀತಿಯೇ ಇದು ಹೋಗುವ ಜಾಡನ್ನು ಎತ್ತಿ ತೋರುತ್ತದೆ. 


ಬರೆಸಿದರು ಸಾವಿತ್ರಿ ದ್ರೌಪದಿ ತಾರೆ ಮಂಡೋದರಿಯರು

ಬರೆದೆನು ಅತಿಮಾನುಷನ ಅಮರ ಕತೆಯ

ಇರಲದು ನಿಮ್ಮ ಮನೆದೇವರ ಪೀಠದಲಿ

ಕಳೆಯಲಿ ನಮ್ಮ ನಿಮ್ಮೆಲ್ಲರ ಕೊಳೆ ಹರಿದು ಹೋಗಲಿ


ಪಂಚಪತಿವ್ರತೆಯರ ಹೆಸರುಗಳನ್ನು ನೆನೆಯುವುದಿರಂದಲೇ ನಮ್ಮ ದೋಷಗಳೆಲ್ಲವೂ ಅಳಿದು ಹೋಗುತ್ತದೆ ಎನ್ನುವ ಶ್ಲೋಕ ಸ್ಮರಿಸುತ್ತೇವೆ. ಇಲ್ಲಿ ಉಳಿದ ನಾಲ್ಕು ಪತಿವ್ರತೆಯರು ಸೇರಿ ಕಥೆಯನ್ನು ಬರೆಸಿದರು ಎಂದು ಹೇಳುವುದು ಎಷ್ಟು ವಿಶೇಷವಲ್ಲವಾ ಎನ್ನಿಸಿತು. 


ಜನಕರಾಜನ ಮಗಳು ಜಾನಕೀ ದೇವಿ

ಜನಕನ ಸುಕೃತದ ಪುಣ್ಯ ಫಲ ಇವಳು

ತಾಳ್ಮೆಯಲಿ ಭೂದೇವಿಯಂತಿರ್ಪಳು

ತಿಳಿ ಮನದ ಹಾಲ್ಗಲ್ಲದ ಹಸುಳೆ ಸೀತೆ


ಸೀತೆ ಭೂಮಿಯಲ್ಲಿ ದೊರೆತನಂತರ ಜನಕರಾಜನ ಸಂಭ್ರಮಕ್ಕೆ ಎಣೆಯೇ ಇಲ್ಲ. ಅವಳ ಬಾಲ್ಯವನ್ನು ನೆನಪಿಸುವ ಈ ಶ್ಲೋಕ ಹಿರಿದರ್ಥವನ್ನು ಹೊಂದಿದೆ. ಅವಳ ಬಾಲ್ಯದ ಮುಗ್ಧತೆಯಲ್ಲಿಯೇ ಆಕೆ ಎಷ್ಟು ತಾಳ್ಮೆಯ ಪ್ರತಿರೂಪ ಎಂಬುದನ್ನು ಬಿಂಬಿಸುತ್ತದೆ. 


ಭೂದೇವಿಯ ಮಗಳು ಭೂಮಿಕಾ ಇವಳು

ಭಾಮಿನಿಯು ಶ್ರೀದೇವಿ ಸಕಲಗುಣ ಸಂಪನ್ನೆ

ಜನಕನರಮನೆಯ ಭಾಗ್ಯಲಕ್ಷ್ಮಿ ಕಾರುಣ್ಯನಿಧಿ

ಆನಂದಮಯಿ ಘನ ಗಂಭೀರೆ ದೇವಿ


ಭೂಮಿಯ ಮಗಳಾದರೂ.. ಜನಕ ರಾಜನ ಅರಮನೆಯ ಯುವರಾಣಿಯಾಗಿದ್ದವಳು ಎಷ್ಟು ಗಂಭೀರ ಎಂಬುದನ್ನು ಹೇಳುತ್ತಲೇ.. ಆಕೆ ಎಂತಹ ಅದೃಷ್ಟವನ್ನು ಹೊತ್ತು ತಂದಳು ಎಂದು ಪರಿಚಯಿಸುತ್ತಾ.. ಆಕೆಯ ಸ್ವಯಂವರದ ಭೂಮಿಕೆಯನ್ನು ಸಿದ್ಧಪಡಿಸುತ್ತಾರೆ. 


ಭೂದೇವಿಯ ಮಗಳು ಭೂಮಿಕಾ ಇವಳು

ಭೂಮಿ ತೂಕದ ಸತಿ ಮಾನಿನಿಯು ಇವಳು

ಕಾಮಿತಾರ್ಥಗಳನೀಡೇರಿಸುವ ಮಹಾಸತಿ ಇವಳು

ಧರ್ಮವಂತಳು ಇವಳು ಧಾರಿಣಿಯ ಮಗಳು


ವಿವಾಹವಾದ ನಂತರದ ಸೀತೆಯನ್ನು ನಮ್ಮೆಲ್ಲರಿಗೂ ಪರಿಚಯಿಸುವಾಗಲೂ ಮೊದಲಿಗೆ ಆಕೆ ಭೂದೇವಿಯ ಮಗಳು ಹಾಗೂ ಭೂಮಿಯಷ್ಟು ತಾಳ್ಮೆ ಹೊಂದಿದವಳು ಎಂಬುದೇ ಮಹತ್ವವಾಗಿದೆ. ಆಕೆಯ ಧರ್ಮವಂತಿಕೆ ಹಾಗೂ ಸತಿ ಧರ್ಮವನ್ನು ಪಾಲಿಸುತ್ತಾ.. ಅವಳು ಬೇಡಿದನ್ನೆಲ್ಲ ಕೊಡುವವಳು ಎಂದು ಹೇಳುತ್ತಾರೆ.


ಅರಮನೆಯೊಳಗೆಲ್ಲ ಮನೆಮಾತಾದಳು ದೇವಿ

ಪುರಜನರೆಲ್ಲರ ಪ್ರೀತಿಯ ಗಳಿಸೋ ಜಾನಕಿ

ನಗುನಗುತ ಬಾಳಿದಳು ಮನೆಯೊಡತಿಯಾಗಿ

ಸಗ್ಗ ಸುಖವಿದೆಯೆಂದು ನಂಬಿ ನಡೆದಳು ಸತಿ ಸೀತೆ


ರಾವಣನು ತನ್ನ ಸ್ವಯಂವರಕ್ಕೆ ಬಂದಾಗ ಬೆದರಿದ್ದ ಆಕೆಗೆ ಸಮಾಧಾನವಾಗಿದ್ದು ರಾಮನೇ ಕೈ ಹಿಡಿದಾಗ. ಇಲ್ಲಿ ಅಯೋಧ್ಯೆಗೆ ಅವರು ಸಕುಟುಂಬ ಸಮೇತ ಬಂದರು ಎಂಬುದರ ಉಲ್ಲೇಖವಿಲ್ಲ. ಬದಲಾಗಿ, ಸೀತೆಗೆ ಅಯೋಧ್ಯೆಯ ವರ್ಣನೆಯ ನಂತರ ಆಕೆ ಅರಮನೆಗೆ ಬಂದಾಗಿನ ಸಂದರ್ಭವನ್ನು ಹೇಳುತ್ತಾರೆ. ಆಕೆ ಎಲ್ಲರ ಮನ ಗೆದ್ದುದರ ಬಗ್ಗೆ, ನಗುನಗುತ್ತಾ ಬಾಳುವ.. ಇಡೀ ರಾಜ್ಯದ ಮಗಳೆಂಬ ಭಾವ ಎದ್ದು ತೋರುತ್ತದೆ. 


ಬಿತ್ತಿದಳು ಧರ್ಮ ಬೀಜವ ಗರತಿ

ಸತಿ ಸ್ವಜನಪಕ್ಷಪಾತವ ಮಾಡದೆ

ನಡೆನುಡಿ ಒಂದಾಗಿ ಸುಜ್ಞಾನದಿ ಮೆರೆದಳು

ಅಡಿಗಡಿಗು ಸತಿ ಧರ್ಮವ ಸಾರುತಾ ಸೀತೆ


ರಾಮನಿಗೆ ಮೂವರು ತಾಯಂದಿರು. ಸೊಸೆಯಾಗಿ ಬಂದವಳು ಎಲ್ಲರನ್ನೂ ಒಂದೇ ರೀತಿ ಭಾವಿಸಿ, ಗೌರವಿಸುವುದು ಅಷ್ಟು ಸುಲಭವಲ್ಲ. ಸೀತೆ ಸತಿ ಧರ್ಮವನ್ನು ಪಾಲಿಸುತ್ತಾ.. ಪತಿ ನಡೆದಂತೆಯೇ ಎಲ್ಲರನ್ನೂ ಒಂದೇ ರೀತಿಯಲ್ಲಿ ಸೇವಿಸುತ್ತಾ.. ಪಕ್ಷಪಾತವನ್ನು ಮಾಡದಿದ್ದು ಆಕೆಯ ಹಿರಿಮೆಯನ್ನು ತೋರುತ್ತದೆ. 


ಅತ್ತೆ ಮಾತುಗಳ ಅಲಕ್ಷಿಸದೆ ಸತಿ ಸೀತೆ

ಮತ್ತೆ ಬಿಚ್ಚಿಟ್ಟ ಒಡವೆಗಳ ಧರಿಸಿದಳು

ಸತಿ ಪಟ್ಟೆಪೀತಾಂಬರವನುಟ್ಟು ಮರಳಿ

ಮಾತೆ ಕೌಸಲ್ಯೆಗೆ ಶಿರಬಾಗಿ ಪೊರಮಟ್ಟಳು ದೇವಿ


ರಾಮ-ಲಕ್ಷ್ಮಣರೊಡನೆ ವನವಾಸಕ್ಕೆ ಹೊರಟಾಗ ಅವರಂತೆಯೇ ನಾರು ಮಡಿಯುಟ್ಟ ಸೀತೆಯ ಚಿತ್ರಣವೇ ಎಲ್ಲೆಡೆ ಕಂಡು ಬರುವಾಗ ಇಲ್ಲಿ ಪತಿಯ ಒಳಿತಿಗಾಗಿ ಸುಮಂಗಲಿಯಂತೆ ಎಲ್ಲವನ್ನು ಮತ್ತೆ ಧರಿಸು ಎನ್ನುವ ಅತ್ತೆಯ ಮಾತನ್ನು ಮರುಮಾತನಾಡದೆ ಒಪ್ಪಿದ ಸೀತೆ ಕಾಣುತ್ತಾಳೆ. 


ಪತಿ ಸೇವೆ ಮಾಡುವುದು ಅವಭೃತ ಸ್ನಾನವಂತೆ

ಸತಿ ನಿನಗಿರಲಿ ತೀರ್ಥ ಸ್ನಾನದ ಭಾಗ್ಯ, ಎನಗಿರಲಿ ಅವಭೃತ ಸ್ನಾನ

ಈ ಜ್ಞಾನ ಸುಜ್ಞಾನದಲಿ ಮಿಂದು ನಾವೀರ್ವರೂ

ಅಜ್ಞಾನ ಅಂಧಕಾರವ ಅಳಿಸೋಣ ಬಾ ತಂಗಿ


ಊರ್ಮಿಳೆಯು ತಮ್ಮೊಡನೆ ಬನವಾಸಕ್ಕೆ ಬರುವ ಸಂದರ್ಭ ದಲ್ಲಿ ಸೀತೆ ಆಕೆಯನ್ನು ಸಂತೈಸಿದ ಸಂಧರ್ಭವನ್ನು ನಾನು ಓದಿದ್ದು ವಿರಳ. ಅತ್ತೆ-ಮಾವನ ಸೇವೆಯಿಂದ ನಿನಗೆ ತೀರ್ಥಸ್ನಾನದ ಪುಣ್ಯವೂ.. ನನಗೆ ಪುಣ್ಯಸ್ನಾನದ ಪುಣ್ಯವೂ ದೊರಕುತ್ತದೆ. ಇಬ್ಬರೂ ಸೊಸೆಯರ ಹಾಗೂ ಪತ್ನಿಯ ಧರ್ಮ ಪಾಲಿಸುತ್ತಾ.. ಪುಣ್ಯ ಪಡೆಯೋಣ ಎನ್ನುವ ಹಂಬಲವೂ ಕಾಣುತ್ತದೆ. 


ಸರ್ವಗುಣ ಸಂಪನ್ನೆ ಸೀತೆ ಮಹಾಮಾತೆ

ಸರ್ವರೊಳು ಸಮಭಾವದಿ ಮೆರೆದವಳು

ಭರತನನ್ನೊಲುಮೆಯಿಂದ ಸಂತೈಸುತಲಿ

ಮರೆಯದಂತೆ ಕುಲಬಾಂಧವರ ಹರಸಿದಳು


ಭರತ ಕಾಡಿಗೆ ಬಂದ ಸಂದರ್ಭದಲ್ಲಿ ರಾಮ-ಲಕ್ಷ್ಮಣರು ಆತನನ್ನು ಸಂತೈಸಿದುದರ ಜೊತೆಗೆ ಸೀತೆ ಆತನನ್ನು ಕಂಡ ಭಾವ, ಒಬ್ಬಳು ಮಮತಾಮಯಿ ತಾಯಿಯಂತೆ ಚಿತ್ರಿತವಾಗಿದೆ. 


ಮೌನವಹಿಸಿದಳಾ ದೇವಿ ಮಾತಿಲ್ಲದಲೆ

ಮೌನದಲಿ 'ಶಿವನೆ ಏಕಿಂಥ ಮಾತ ನುಡಿಸಿದೆ

ದೀನನಿವನು ಅಣ್ಣನಿಗೆ ಅತಿವಿನಯನು

ಮೂಲೋಕ ಮೆಚ್ಚುತಿಹುದಿಂದು ಇವನ ಸೌಶೀಲ್ಯಕೆ'


ಮಾಯಾ ಜಿಂಕೆಯನ್ನು ಅರಸಿ ಹೊರಟ ರಾಮನಿಗೆ ಏನಾದರೂ ತೊಂದರೆಯಾಗಿರಬಹುದು ಎಂಬ ಆತಂಕದಿಂದ ಸೀತೆಯ ಬಾಯಿಯಲ್ಲಿ ಲಕ್ಷ್ಮಣನನ್ನು ಅನುಮಾನಿಸುವ ಮಾತು ಬಂದ ಮರುಕ್ಷಣವೇ ಆಕೆ ಪರಿತಪಿಸುವ ಹಾಗೂ ಆತನ ಉನ್ನತ ವ್ಯಕ್ತಿತ್ವವನ್ನು ನೆನೆಸಿಕೊಳ್ಳುವ ಪರಿತಾಪ ಇಲ್ಲಿದೆ. 


ಆಗೊಮ್ಮೆ ಬರುವುದು ಸೀತೆಗೆ ಊರ್ಮಿಳೆಯ ನೆನಪು

'ಬರುವೆನೆಂದಳು ಬಾಲೆ ಬೇಡವೆಂದೆ ನಾ

ಇಂದು ಕಾಡುತಿಹುದೆನ್ನ ಪಾಪಕೂಪವಾಗ

ಇದು ನೊಂದ ಊರ್ಮಿಳೆಯ ಶಾಪವಾಗಿರಬಹುದೇ ?'


ಊರ್ಮಿಳೆ ಅಯೋಧ್ಯೆಯಲ್ಲಿಯೇ ಉಳಿದರೂ.. ಸೀತೆ ರಾವಣನಿಂದ ಅಪಹರಿಸಲ್ಪಟ್ಟು.. ಅಶೋಕವನದಲ್ಲಿರುವಾಗ ಅಗಲುವಿಕೆ ಊರ್ಮಿಳೆಯ ನಿಟ್ಟುಸಿರಿನ ಶಾಪವೇ ಆಗಿರಬಹುದಾ..?! ಎಂಬ ಆಲೋಚನೆ ಸುಳಿಯುತ್ತದೆ. ಬಹುಶಃ ಬೇರೆಯ ರಾಜಕುಮಾರಿಯರಾಗಿದ್ದರೆ ಇದು ಹಾಗಾಗಿರುತ್ತಿತ್ತೇನೋ.. ಆದರೆ, ಇಲ್ಲಿದ್ದದ್ದು ಸೀತೆ-ಊರ್ಮಿಳೆಯರಲ್ಲವೇ..?!


'ಕೇಳಿ ನಿನ್ನ ಮಾತನು ಎನ್ನೆದೆ ಬಿರಿದಿಹುದು

ಹಸಿದು ಬಂದೆಯಾ ಮಗನೆ ಬಹುದೂರದಿ

ಹಸನಾದ ತಿನಿಸುಗಳಿಲ್ಲಿಲ್ಲ ನಿನಗೆ ಕೊಡಲು

ವಿಧವಿಧದ ಫಲಗಳಿಹವು ವನದಲ್ಲಿ'


ಹನುಮಂತ ಸಾಗರವನ್ನು ದಾಟಿ ಸೀತೆಯನ್ನರಸಿ ಬಂದಾಗ ಮೊದಲಿಗೆ ಅನುಮಾನಿಸಿದರೂ ನಂತರ ಎಲ್ಲ ಮಾತುಕತೆ ನಡೆದ ನಂತರ ಆಂಜನೇಯ ತನ್ನ ಒಡತಿಯ ಅಪ್ಪಣೆಯನ್ನು ಕೇಳಿ.. 'ನಾನು ಹಸಿದಿದ್ದೇನೆ ಹಾಗಾಗಿ ನೀವು ಅಪ್ಪಣೆ ಕೊಟ್ಟರೆ ಇಲ್ಲಿರುವ ಹಣ್ಣುಗಳನ್ನು ತಿನ್ನಬಹುದೇ' ಎನ್ನುವ ವಿನಮ್ರತೆಗೆ ಕರಗಿದುದರ ಜೊತೆಗೆ ತಾಯಿಯಾಗಿ ಮಗು ಹಸಿದು ಬಂದಿದ್ದೇನೆ ಎಂದಾಗ ತಿನ್ನಲು ಕೊಡಲೇನೂ ಇಲ್ಲದ ಪರಿಸ್ಥಿತಿಯ ಇಕ್ಕಟ್ಟಿನ ಜೊತೆಗೆ ಅಸಹಾಯಕತೆಯ ಭಾವವೂ ಕಾಣುತ್ತದೆ.


ಸಭೆ ನಡೆದುದ ತಿಳಿದು ಸೀತೆ ದುಃಖಿಸಲು

ಜನಕರಾಜನ ಕುವರಿ ಜಾನಕಿದೇವಿ

ಮತಿಗೆಟ್ಟು ಹಲುಬುತ ಭೂಮಿಕಾ

'ಯುದ್ಧ ನಡೆದರೆಷ್ಟು ನಷ್ಟ' ಎನುತ ಕಂಗೆಟ್ಟಳು


ಬೇರೆಯವರು ಸೀತೆಯ ಜಾಗದಲ್ಲಿದ್ದರೆ ಆ ಯುದ್ಧ ನಡೆದರೆ ಸಾಕೆಂದು ಆಶಿಸುವಾಗ, ಈಕೆ ಈ ಯುದ್ಧ ನಡೆದರೆ ಎಷ್ಟು ಸಾವು-ನೋವುಗಳಾಗುತ್ತವೆ ಎಂದು ಪರಹಿತ ಚಿಂತನೆ ಮಾಡುವ ಸೀತೆಯಾಗಿ, ತಾಯಿಯಂತೆ ಭಾಸವಾಗುತ್ತಾಳೆ. 


ಪರರ ಕಷ್ಟದಲಿ ಭಾಗಿಯಾಗುತ ಸತಿ

ಶ್ರೀರಾಮನೊಡನೆ ನುಡಿದಳು ಸತಿ ಸೀತೆ

'ಇವಳು ರಾವಣನ ಪಟ್ಟದರಸಿ ಮಂಡೋದರಿ

ಇವಳು ಮಹಾಪತಿವ್ರತೆ ಮಾಂಗಲ್ಯಭಾಗ್ಯ ಅಳಿಯದಿರಲಿ'


ರಾಮ-ರಾವಣರ ಯುದ್ಧದ ಸಂದರ್ಭದ ಕೊನೆಯ ಘಟ್ಟದಲ್ಲಿ ಇಬ್ಬರ ಮುಖಾಮುಖಿಯಾಗಿ ರಾವಣನ ಅಂತ್ಯವಾಯಿತು ಎನ್ನುವ ವಾರ್ತೆ ಕೇಳಿ ಮಂಡೋದರಿ ಪ್ರಲಾಪಿಸುತ್ತಿರುವ ಸಂದರ್ಭದಲ್ಲಿ ಸೀತೆ ಆಕೆಯನ್ನು ಸಹೋದರಿಯಂತೆ ಸಂತೈಸಿ ರಾಮನ ಕೃಪಾಕಟಾಕ್ಷಕ್ಕೆ ಪಾತ್ರವಾಗುವಂತೆ ಮಾಡುವ ಸಂದರ್ಭವಿಲ್ಲಿದೆ.


ನುಡಿದಳಿತು ಜಾನಕಿ ತ್ರಿಜಟೆಗೆ ಪ್ರಿಯದಿ

ಒಡನೆ ಉತ್ತರಿಸಿದಳಾ ತ್ರಿಜಟೆ ಸೀತೆಗೆ

'ಬರಲೊಲ್ಲೆ ತಾಯಿ ನಾ ಹುಟ್ಟಿದ ಪರಿಸರವಿದು

ಹೆತ್ತಮ್ಮನಂತಿಹುದು ನನ್ನೂರು ನನಗೆ' ಎಂದಳು


ತ್ರಿಜಟೆ ರಾವಣನ ಋಣದಲ್ಲಿದ್ದೇನೆ ಎಂಬ ಕಾರಣಕ್ಕಾಗಿ ಸೀತೆಯನ್ನು ನೋಡಿಕೊಂಡವಳು. ಈರ್ವರೂ ಗೆಳತಿಯರಂತಾಗಿ ಹೋಗಿದ್ದರು. ಸೀತೆಗಿಂತಲೂ.. ತ್ರಿಜಟೆಯಲ್ಲಿ ಹೆಚ್ಚಿನ ಅಗಲಿಕೆಯ ನೋವು ಕಾಣುತ್ತದೆ. ಆಕೆ ಕಣ್ಣು ಕಿರಿದಾಗಿಸುವ ರೀತಿ ನೋವು ನುಂಗುವುದನ್ನು ತೋರಿಸುತ್ತದೆ. ಇಂತಹಾ ಸಂದರ್ಭದಲ್ಲಿ ಆಕೆಯನ್ನು ತನ್ನ ಜೊತೆ ಬರುವಂತೆ ಕೇಳಿಕೊಂಡಾಗ.. ಆಕೆ ಮಾತೃಭೂಮಿಯ ಮೇಲೆ ತೋರುವ ಅಭಿಮಾನವನ್ನು ಮೆಚ್ಚದೇ ಇರಲಾಗದು. ರೂಪದಲ್ಲಿ ರಾಕ್ಷಸತ್ವ ತುಂಬಿದ್ದರೂ.. ತನ್ನ ಗುಣದಿಂದ ಸೆಳೆದ ಪಾತ್ರವಿದು. 


ಐಕ್ಯವಾದಳು ಭೂಮಿಜೆ ತಾಯಿ ಒಡಲಲ್ಲಿ

ಭೂಮಿ ತೂಕದ ಹೆಣ್ಣು ಭೂಮಿಕಾ ಇವಳು

ಭುವನದ ಭಾಗ್ಯನಿಧಿ ಭವತಾರಿಣಿ ದೇವಿ

ಮರೆಯಾದಳು ಸೀತೆ ಭವಬಂಧ ತೊರೆದು


ಸೀತೆಯ ಅಂತ್ಯದವರೆಗೂ ಇರುವ ಚಿತ್ರಣದಲ್ಲಿ ಹೆಚ್ಚು ನೋವು ತರುವುದು ಸೀತೆ ಎಲ್ಲಿಂದ ಬಂದಿದ್ದಳೋ ಅಲ್ಲಿಗೇ ಸೇರುವುದು. ಆ ಸಂಧರ್ಭ ಮನಕಲಕುವಂತನ್ನಿಸುತ್ತದೆ. 


ಇಲ್ಲಿ ಕೆಲ ಸಂದರ್ಭಗಳು ವಿಷದವಾಗಿಯೂ ಇನ್ನು ಕೆಲ ಸಂದರ್ಭಗಳು ಚುಟುಕಾಗಿಯೂ ಚಿತ್ರಿತವಾಗಿವೆ. ರಾಮನ ಹುಟ್ಟು, ಬಾಲ್ಯ ಬೆಳವಣಿಗೆಗಿಂತಲೂ.. ಇಲ್ಲಿ ಸೀತೆಯ ಹುಟ್ಟು, ಬಾಲ್ಯ, ಬೆಳವಣಿಗೆಗೆ ಪ್ರಾಮುಖ್ಯ ನೀಡಿ ಚಿತ್ರಿಸಿದ್ದಾರೆ. ಅಲ್ಲದೇ ರಾಮ-ಸೀತೆಯ ವಿವಾಹದ ಜೊತೆಗೆ ಲಕ್ಷ್ಮಣ ಹಾಗೂ ಊರ್ಮಿಳೆಯರ ವಿವಾಹವಾದುದರ ಪ್ರಸ್ತಾಪವಿಲ್ಲ. ಭರತ ಹಾಗೂ ಶತ್ರುಘ್ನರ ಪರಿವಾರದ ಚಿತ್ರಣವೂ ಇಲ್ಲಿ ಸಿಗಲಿಲ್ಲ. ಬದಲಾಗಿ ಸೀತೆಯ ಅನ್ಯೋನ್ಯತೆ ಹಾಗೂ ವಿವಾಹದ ನಂತರದ ಅರಮನೆಯ ಬದುಕು ಕಾಣುತ್ತದೆ. 


ಸೀತೆಗೆ ತನ್ನ ಹಿಂದಿನ ಜನ್ಮದ ಸ್ಮರಣೆ, ಸೀತೆ ವನವಾಸದಲ್ಲಿ ಪಡುವ ಪಾಡು, ಸುಕೋಮಲೆಯಾದವಳ ಕಾಲಿನಲ್ಲಿ ಕಲ್ಲು-ಮುಳ್ಳುಗಳಿಂದಾಗಿ ರಕ್ತ ಬರುವ ಸಂದರ್ಭದಲ್ಲಿ ಲಕ್ಷ್ಮಣ ಆಕೆಯನ್ನು ಆದರಿಸುವ ಮಮತೆ, ಆಕೆಗೆ ಅನುಕೂಲವಾಗುವಂತೆ ಅಣ್ಣ-ತಮ್ಮಂದಿರು ಕಾಪಾಡುವ ಪರಿ, ಇದೆಲ್ಲದರ ಜೊತೆಗೆ ರಾಕ್ಷಸರ ಕಾಟಗಳು ಅವರ ಶಾಪದ ಪ್ರಸ್ತಾವನೆ ಕಂಡುಬರುತ್ತದೆ. ಅವರ ಶಾಪದ ಹಿನ್ನೆಲೆಯಿಲ್ಲ. ಬದಲಾಗಿ, ಆ ಶಾಪದ ಕುರಿತ ಉಲ್ಲೇಖ ಕಂಡು ಬರುತ್ತದೆ ಹಾಗೂ ಶಾಪಮುಕ್ತರಾದ ಪ್ರಸಂಗ ಕಾಣುತ್ತದೆ. ರಾವಣನ ಅಂತ್ಯದವರೆಗೂ ವಿಸ್ತಾರವಾಗಿ ಚಿತ್ರಿತವಾಗಿರುವ ಘಟನೆಗಳು ಅದರ ನಂತರ ಅಷ್ಟೊಂದು ವಿಸ್ತಾರವಾಗಿಲ್ಲದಿದ್ದರೂ ಚುಟುಕಾಗಿ ಕಾಣುತ್ತವೆ. 


ಸೀತೆಯ ಕುರಿತ ಆಸಕ್ತರು ವಿಭಿನ್ನ ಓದಿನ ಅನುಭವಕ್ಕೆ ತೆರೆದುಕೊಳ್ಳುವವರು ಓದಬೇಕಾದಂತಹಾ ಪುಸ್ತಕ. ಅವಸರಕ್ಕೆ ದಕ್ಕಿಸಿಕೊಳ್ಳಲಾಗದು.. ಆದರೆ, ನಿಧಾನವಾಗಿ ಇದರ ಸಾರವನ್ನು ಸವಿಯುತ್ತಾ ಓದಿದರೆ, ಒಳ್ಳೆಯ ಓದಿನ ಅನುಭವ ದಕ್ಕುತ್ತದೆ. ಎಲ್ಲಿಯೂ ಕ್ಲಿಷ್ಟ ಪದಗಳು ಕಂಡು ಬರದಿರುವುದು ಓದಿನ ಆಸಕ್ತಿಯನ್ನು ಹೆಚ್ಚಿಸುವುದರಲ್ಲಿ ಸಂದೇಹವಿಲ್ಲ. ಮಹಿಳೆಯಾಗಿ, ಅದರಲ್ಲಿಯೂ ಗಂಡನ ಅಥವಾ ತಂದೆಯ ಗುರುತಿನ ಬದಲಾಗಿ ಭೂಮಿಯಿಂದ ಉದ್ಭವಿಸಿ ಭೂಮಿಕಾ ಎಂದೇ ಶೀರ್ಷಿಕೆ ಹೊಂದಿರುವ ಈ ಪುಸ್ತಕದಲ್ಲಿ ಹೆಣ್ಣಿನ ತಾಳ್ಮೆ, ಮನಸ್ಸು, ಭಾವನೆಗಳು ಪ್ರಮುಖವಾಗಿ ಚಿತ್ರಿತವಾಗಿವೆ.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ