ಗುರುವಾರ, ಏಪ್ರಿಲ್ 16, 2026

ಸಿನಿಮಾ ಪ್ರಭಾವಳಿ : ಬಾಕ್ಸ್ ಆಫೀಸ್ ಮತ್ತು ವ್ಯಾಲ್ಯೂ ಸುತ್ತ


ನಮ್ಮ ದೇಶದಲ್ಲಿ ಹೆಚ್ಚಿನ ಕ್ರೇಜ್ ಇರುವುದು ಕ್ರಿಕೆಟ್ ಹಾಗೂ ಸಿನಿಮಾಗಳಲ್ಲಿ.. ಇತ್ತೀಚಿನ ಟ್ರೆಂಡ್ ಗಳಲ್ಲಿ ಸಿನಿಮಾ ನೋಡುವುದೂ ಒಂದು. ಟ್ರೆಂಡಿಂಗ್ ಸಿನಿಮಾ ನೋಡಿಲ್ಲವಾದರೆ ಯಾವುದೋ ಅನ್ಯಗ್ರಹದಿಂದ ಬಂದವರೇನೋ ಎಂಬಂತೆ ನೋಡಲು ಶುರು ಮಾಡಿ ಬಿಡುತ್ತಾರೆ.. ಬೇರೆಯವರು ಹಾಗೆ ಮಾಡದಿದ್ದರೂ ಈಗಿನ.ಸೋಶಿಯಲ್ ಮೀಡಿಯಾ ಪೋಸ್ಟ್, ರೀಲ್ಸ್, ರಿವ್ಯೂ ಎಲ್ಲವನ್ನೂ ನೋಡುತ್ತಾ ನಾವಿನ್ನೂ ಅಪ್ಡೇಟ್ ಆಗಿಲ್ಲವೇನೋ ಎಂದೊಮ್ಮೆ ಅನುಮಾನ ಹುಟ್ಟಿ ಬಿಡುತ್ತದೆ. ಅದರಲ್ಲೂ ಈಗ ಓ.ಟಿ.ಟಿ ಪ್ಲಾಟ್ಫಾರಂ ಬಂದ ನಂತರ ಮೊದಲಿನಂತೆ ಸಿನಿಮಾ ನೋಡಲು ಚಿತ್ರ ಮಂದಿರಕ್ಕೆ ಹೋಗಿಯೇ ನೋಡಬೇಕು ಅಥವಾ ಟಿ.ವಿಯಲ್ಲಿ ಬರುವ ಸಿನಿಮಾಗಳಿಗೇ ಕಾಯಬೇಕು ಎಂದೇನಿಲ್ಲ. ಇನ್ನೊಂದು ವಿಚಾರ.. ಸಿನಿಮಾ ನೋಡಲು ಓ.ಟಿ.ಟಿ ಗಳೂ ಅಲ್ಲದೇ ವಿವಿಧ ದಾರಿಗಳೂ ಸಿಕ್ಕಿವೆ ಈಗ. ಅಮೆಜಾನ್, ನೆಟ್ ಪ್ಲಿಕ್ಸ್, ಸೋನಿ ಲಿವ್, ಜೀ ಫೈ, ಹಾಟ್ ಸ್ಟಾರ್, ವೂಟ್ ಹೀಗೆ ತರಹೇವಾರಿ ಓ.ಟಿ.ಟಿ ಗಳು ಹೆಚ್ಚಾಗುತ್ತಿದ್ದರೂ ಸಿನಿಮಾ ಥಿಯೇಟರ್ ಗಳ ಕ್ರೇಜ್ ಇನ್ನೂ ಕಡಿಮೆಯಾಗಿಲ್ಲ. ಒಂದು ಬಾರಿ ನೋಡುವ ಸಿನಿಮಾ, ಇನ್ನೊಮ್ಮೆ ನೋಡುವಂತದ್ದು, ಮತ್ತೆ ಮತ್ತೆ ನೋಡುವಂತಹದ್ದು, ಥಿಯೇಟರ್ ನಲ್ಲಿ ಆ ಎಫೆಕ್ಟ್ ನಲ್ಲೇ ನೋಡುವಂತಹದ್ದು, ತ್ರಿ-ಡಿ ಎಫೆಕ್ಟ್ ನಲ್ಲಿ ನೋಡುವಂತಹದ್ದು ಎಂದು ಸಿನಿಮಾ ಬಂದ ದಿನವೇ ಇಲ್ಲವೇ ಸಿನಿಮಾ ಟ್ರೈಲರ್ ಅಲ್ಲಲ್ಲ ಈಗೀಗ ಸಿನಿಮಾ ಟೀಸರ್ ಬಂದ ದಿನದಿಂದಲೇ ಅಭಿಪ್ರಾಯ ಮೂಡಿಸುವಂತಹಾ ರಿವ್ಯೂಗಳು ಬರಲು ಶುರುವಾಗುತ್ತವೆ. 


ಈ ರೇಟಿಂಗ್, ರಿವ್ಯೂಗಳು ಯೂಟ್ಯೂಬ್ ನಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಲು ತೊಡಗುತ್ತಿದ್ದಂತೆ ಜನರಿಗೆ ಕುತೂಹಲ ಹೆಚ್ಚುತ್ತಾ ಈ ಸಿನಿಮಾವನ್ನು ನೋಡಲೇಬೇಕು ಎನ್ನುವ ಅಭಿಪ್ರಾಯ ಉಂಟಾಗುತ್ತದೆ. ಇಲ್ಲವಾದರೂ ಯಾವುದೇ ಸಿನಿಮಾ ನೋಡುವಾಗಲೂ ಮೊದಲಿಗೆ ಇಂತಹದ್ದೇ ಸಿನಿಮಾ ನಿರ್ಧರಿಸಬೇಕು. ಆ ಸಿನಿಮಾ ನೋಡಲೇಬೇಕು ಎಂದು ಏಕೆ ನಿರ್ಧರಿಸುತ್ತೇವೆ ? ಒಂದೋ ನಮ್ಮಿಷ್ಟದ ಹೀರೋ ಅಥವಾ ಹೀರೋಹಿನ್ ಮಾಡಿದ್ದರೆ, ಕುತೂಹಲಕಾರಿ ಅಂಶ ಸೆಳೆದರೆ ಇಲ್ಲವೇ ಸಿನಿಮಾ ನಿರ್ಮಾಣ ಭರ್ಜರಿಯಾಗಿದ್ದು ಅದು 'ಸಕ್ಸಸ್' ಎಂದೋ ಅಥವಾ 'ಬಾಕ್ಸ್ ಆಫೀಸ್ ಹಿಟ್' ಎಂದೋ ಖ್ಯಾತಿ ಪಡೆದಿದ್ದರೆ.. ಕಾಂಟ್ರವರ್ಸಿ ಅಥವಾ ಬೇರೆ ರೀತಿ ಖ್ಯಾತಿ ಪಡೆದ ಸಿನಿಮಾ ನೋಡುತ್ತಾರಾದರೂ 'ಬಾಕ್ಸ್ ಆಫೀಸ್ ಹಿಟ್' ಅಥವಾ 'ಪ್ಯಾನ್ ಇಂಡಿಯಾ ' ಸಿನಿಮಾಗಳನ್ನೇ ಆಯ್ಕೆ ಮಾಡಿಕೊಂಡು ನೋಡುವವರ ಸಂಖ್ಯೆಯೂ ಹೆಚ್ಚು. ಖ್ಯಾತಿ ಪಡೆಯುತ್ತಿರುವ ಸಿನಿಮಾಗಳಲ್ಲಿ ಈಗ ಬಡ್ಜೆಟ್ ನಿಂದ ಅಥವಾ ರಿವ್ಯೂ ಗಳಿಂದ ಖ್ಯಾತಿ ಪಡೆಯುತ್ತಿರುವ ಸಿನಿಮಾಗಳೇ ಹೆಚ್ಚು. ಹಾಗೆಂದು ತನ್ನ ಕತೆಯಿಂದ ಮನಸೆಳೆಯದ ಸಿನಿಮಾಗಳೂ ಇಲ್ಲದಿಲ್ಲ. ಆದರೆ, ಅವುಗಳ ಸಂಖ್ಯೆ ತೀರಾ ವಿರಳ ಅಷ್ಟೇ.. 


ಬಾಕ್ಸ್ ಆಫೀಸ್ ಹಿಟ್ ಸಿನಿಮಾಗಳು ಅಷ್ಟೊಂದು ಹಿಟ್ ಸಿನಿಮಾಗಳಾ..?? ಈ ಅನುಮಾನ ನಿಮ್ಮಲ್ಲಿ ಮೂಡಿದ್ದಿದೆಯಾ ? 

ಯಾರಿಗಾದರೂ ನಿನ್ನ ಸಂಬಳ ಎಷ್ಟು ಎಂದು ಕೇಳಿದರೆ ಅಥವಾ ಎಸ್.ಎಸ್.ಎಲ್.ಸಿ ಅಥವಾ ಪಿ.ಯು.ಸಿ ವಿದ್ಯಾರ್ಥಿಗೆ ರಿಸಲ್ಟ್ ಬಂದಾಗ ನಿನ್ನ ರಿಸಲ್ಟ್ ಎಷ್ಟು ಎಂದು ಕೇಳಿದರೆ ನಮಗೆ ಅವರ ನಿಜ ವಿಚಾರ ತಿಳಿದಿಲ್ಲ ಎಂದರೆ ಅದರ ಕುರಿತು ಮುಚ್ಚಿಟ್ಟು ಸುಳ್ಳು ಲೆಕ್ಕ ಹೇಳುವವರೇ ಹೆಚ್ಚು ಅಲ್ಲವಾ..?? ಇಷ್ಟೇ ಯಾಕೆ.. ರಿಯಾಲಿಟಿ ಶೋಗಳಲ್ಲಿ ಎಸ್.ಎಂ.ಎಸ್ ವೋಟಿಂಗ್ ಮೇಲೆ ಗೆಲುವಿನ ನಿರ್ಧಾರ ಮಾಡುವಾಗ ಅವರು ಇಷ್ಟು ವೋಟ್ ಬಂದಿದ್ದವು. ವಿನ್ನರ್ ಗೆ ಇಂತಿಷ್ಟು.. ರನ್ನರ್ ಅಪ್ ಗೆ ಇಂತಿಷ್ಟು ಎಂದು ಯಾವತ್ತಾದರೂ ಹೇಳಿದ್ದು ನೋಡಿದ್ದೀರಾ..?? ವ್ಯಾಪಾರದಲ್ಲಿ ಇಂತಿಷ್ಟೇ ಲಾಭವಾಯಿತು ಎಂದು ರಾಜಾರೋಷವಾಗಿ ಹೇಳಿಕೊಳ್ಳುವವರನ್ನು ನೋಡಿದ್ದೀರಾ..?? ವ್ಯಾಪಾರದಲ್ಲಿ ನಷ್ಟವಾದರೆ ಇಂತಿಷ್ಟು ನಷ್ಟವಾಗುತ್ತಿದೆ ಎಂದು ಗೋಳಾಡುವವರೇ ಹೆಚ್ಚು ಅಲ್ಲವಾ..?? ಈ ಸಿನಿಮಾ ಪ್ರಪಂಚದ ವ್ಯವಹಾರ ತೋರಿಸಿಕೊಂಡಷ್ಟೇ ಇರುತ್ತದಾ.. ಅಥವಾ ಹೀಗೆ ಬಾಕ್ಸ್ ಆಫೀಸ್ ಹಿಟ್ ಗಳ ಲೆಕ್ಕ ತೋರಿಸಿದರೆ ಅವರಿಗಾಗುವ ಲಾಭ ಬೇರೆಯೇ ಇದೆಯಾ..??


ಈ ಕುರಿತು ಹೇಳುವ ಮುನ್ನ ಲಾಭ ಎಂದರೆ ಏನು ಎಂಬುದನ್ನು ತಿಳಿಯೋಣ. ಒಬ್ಬ ರೈತ ಒಂದು ಬೆಳೆ ಬೆಳೆದಾಗ ಆತ ಲಾಭ ಕಾಣಲು ಎಷ್ಟೆಲ್ಲಾ ಅಡೆ- ತಡೆಗಳನ್ನು ದಾಟಬೇಕು. ಅಲ್ಲವಾ.. ಬೆಳೆ ಹಸನಾಗಿ ಬರುತ್ತಿದ್ದರೂ ಸದಾ ಆತನಿಗೆ ತನ್ನ ಬೆಳೆ ಬರುವ ಕಾಲಕ್ಕೆ ಇರುವ ಮಾರ್ಕೆಟ್ ರೇಟಿನದ್ದೇ ಚಿಂತೆ. ಇದರ ನಡುವೆ ಸರಿಯಾದ ಪ್ರಮಾಣದ ನೀರು ಹಾಯಿಸುವಿಕೆ, ಕಳೆ ಕೀಳುವುದು, ಕೀಟ ನಾಶಕ ಸಿಂಪಡಿಸುವುದು, ಗೊಬ್ಬರ ನೀಡುವುದು, ಆಳುಗಳ ಹುಡುಕಾಟ.. ಕೊಯ್ಲಿನ ನಂತರ ಮಾರುಕಟ್ಟೆಗೆ ಸಾಗಿಸುವುದು ಹೀಗೆ ಎಲ್ಲದಕ್ಕೂ ಖರ್ಚು ಮಾಡಬೇಕು. ಇದೆಲ್ಲಾ ಖರ್ಚುಗಳನ್ನು ಕಳೆದು ಕೈ ಸೇರುವ ಹಣ ಆತನ ನಿಜವಾದ ಲಾಭ. ಒಂದು ಬೆಳೆಯಿಂದ 10 ಲಕ್ಷ ರೂ. ಕೈ ಸೇರಿದರೆ ಅದು ಆತನ ಕೃಷಿಯಿಂದ ಬಂದ ಗಳಿಕೆ ಅಷ್ಟೇ.. ಅದು ಲಾಭವಲ್ಲ. ಎಲ್ಲಾ ಖರ್ಚುಗಳನ್ನು ಕಳೆದು ಆತನಿಗೆ 2 ಲಕ್ಷ ಉಳಿಯಿತು ಎಂದರೆ ಅದು ಆತನ ನಿಜವಾದ ಲಾಭ. ಇದು ಒಂದು ರೀತಿಯ ಅದೃಷ್ಟ ಪರೀಕ್ಷೆಯೂ ಹೌದು.


ಸಿನಿಮಾ ಕ್ಷೇತ್ರದಲ್ಲಿ ಸಿಗುವ ಲಾಭ ಕೂಡಾ ಹೀಗಿಯೇ.. ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿ ಏನೂ ಇರುವುದಿಲ್ಲ. ಸಿನಿಮಾದಲ್ಲಿ ಹಣ ತೊಡಗಿಸಿದಾಗ ಇಂತಿಷ್ಟು ಹಣವನ್ನು ತಯಾರಿಸಿಕೆಗೆ, ಡಿಸ್ಟ್ರಿಬ್ಯುಷನ್ ಗೆ, ಇಂತಿಷ್ಟು ಹಣ ಹಕ್ಕುಗಳನ್ನು ಕೊಳ್ಳಲು, ಇಂತಿಷ್ಟು ಹಣವನ್ನು ಮಾರ್ಕೆಟಿಂಗ್ ಗೆ ಎಂದು ವಿಂಗಡಿಸಿಕೊಳ್ಳುತ್ತಾರೆ. ಇದಾದ ನಂತರವೂ ಥಿಯೇಟರ್ ನವರಿಗೆ, ಡಿಸ್ಟ್ರಿಬ್ಯುಟರ್ ಗಳಿಗೆ , ಟ್ಯಾಕ್ಸ್ ಗಳಿಗೆ ದುಡ್ಡು ಕೊಡಬೇಕು. ಉಳಿದದ್ದು ಮಾತ್ರ ಅಲ್ಲವೇ ಲಾಭ. 

ಉದಾಹರಣೆಗೆ ಹೇಳುವುದೇ ಆದರೆ.. 20 ಕೋಟಿ ಹಾಕಿ ಸಿನಿಮಾ ಮಾಡಿದರೆ , 10 ರಿಂದ 15 ಕೋಟಿ ಪೊಮೋಷನ್, ಮಾರ್ಕೆಟಿಂಗ್ ಎಂದು ಖರ್ಚು ಮಾಡಿ, 10 ಕೋಟಿ ಸ್ಯಾಟಲೈಟ್ ಗೆ ಎಂದು ಮೀಸಲಿಟ್ಟು ಆ ಸಿನಿಮಾ ಕೊಟ್ಟರೆ ಡಿಸ್ಟ್ರಿಬ್ಯುಟರ್ ಗಳು ಸಬ್ ಡಿಸ್ಟ್ರಿಬ್ಯುಟರ್ ಗಳಿಗೆ ಕೊಡುತ್ತಾರೆ. ನಂತರ ಥಿಯೇಟರ್ ಹಾಗೂ ಮಲ್ಟಿಫ್ಲೆಕ್ಸ್ ಗಳಲ್ಲಿ ತೆರೆ ಕಂಡಾಗ ಬಂದ ಟಿಕೆಟ್ ಮಾರಾಟದಿಂದ ಥಿಯೇಟರ್ ನವರು 50% ನೀಡಿದರೆ, ಮಲ್ಟಿಫ್ಲೆಕ್ಸ್ ನವರು ಮೊದಲ ವಾರ 40% , ಎರಡನೇ ವಾರದಿಂದ 50% ನೋಡುತ್ತಾರೆ. ಅದರಲ್ಲಿ ರಾಜ್ಯದಿಂದ ರಾಜ್ಯಕ್ಕೆ ಬದಲಾಗುವ ಜಿ.ಎಸ್.ಟಿ ಕಟ್ಟಿ ಉಳಿದಿದ್ದರಲ್ಲಿ ಡಿಸ್ಟ್ರಿಬ್ಯುಟರ್ ಗಳಿಗೆ ಹಂಚಿ ಕೈ ಗೆ ಸಿಗುವುದು 23 ಕೋಟಿಯಂತೆ. 


ಆದರೆ, ನಮಗೆ ಸಿಗುವ ಸುದ್ದಿಯಲ್ಲಿ ಇರುವುದು 100 ಕೋಟಿ, 300 ಕೋಟಿ, 500 ಕೋಟಿ ಈ ರೀತಿಯ ಬಾಕ್ಸ್ ಆಫೀಸ್ ಹಿಟ್ ಸುದ್ದಿ. ಬಾಕ್ಸ್ ಆಫೀಸ್ ಲಾಭ ಎಂದು ತೋರಿಸುವುದು ಟಿಕೆಟ್ ನಿಂದ ಬರುವ ಹಣ. ನೆನಪಿರಲಿ, ಇದು ಎಷ್ಟು ಟಿಕೆಟ್ ಮಾರಾಟವಾಯಿತು ಎಂಬುದರ ಲೆಕ್ಕವಲ್ಲ ಟಿಕೆಟ್ ಕಲೆಕ್ಷನ್ ಗಳ ಒಟ್ಟು ಹಣ. ಅಂದ ಹಾಗೆ, ಈ ಟಿಕೆಟ್ ರೇಟ್ ಗಳು ಎಲ್ಲಾ ಕಡೆಯೂ , ಎಲ್ಲಾ ಸಿನಿಮಾಗಳಿಗೂ ಒಂದೇ ರೀತಿ ಇರುವುದಿಲ್ಲ. ಹೀಗೆ ಭಾರತದ ಹೆಚ್ಚಿನ ಸಿನಿಮಾಗಳ ಬಾಕ್ಸ್ ಆಫೀಸ್ ಹಿಟ್ ಲೆಕ್ಕ ಸಿಗುವುದು. ಅಂದ ಹಾಗೆ ಈ ಲೆಕ್ಕ ಪಾರದರ್ಶಕವಾ ? ರೆನ್ ಟ್ರ್ಯಾಕ್ ಎನ್ನುವ ಇಂಟರ್ ನ್ಯಾಷನಲ್ ಆರ್ಗನೈಸೇಷನ್ ಒಂದರಲ್ಲಿ ಮಾತ್ರವೇ ಈ ಪಾರದರ್ಶಕತೆ ಇರುವುದಂತೆ.


ಈ ಬಾಕ್ಸ್ ಆಫೀಸ್ ನಂಬರ್ ಅನ್ನು ಹೆಚ್ಚು ತೋರಿಸುವುದರಿಂದ ಆಗುವ ಲಾಭಗಳೇನು ? ನಮ್ಮೆಲ್ಲರಿಗೂ ಬಿಗ್ ಸಕ್ಸಸ್, ಬಿಗ್ ಬಜೆಟ್, ಬಿಗ್ ಅಮೌಂಟ್, ಬಿಗ್ ನಂಬರ್ ಗಳ ಮೇಲೆಯೇ ಒಲವು ಹೆಚ್ಚು. ಅಲ್ಲವಾ..??

ಒಂದು ವಸ್ತುವಿನ ಬೆಲೆ ಹೆಚ್ಚಿದ್ದರೆ ಅದರ ಕ್ವಾಲಿಟಿ ಹೆಚ್ಚು, ಒಂದು ಶಾಲೆಯಲ್ಲಿ ಹೆಚ್ಚು ಅಮೌಂಟ್ ಕಟ್ಟಿಸಿಕೊಂಡರೆ ಆ ಶಾಲೆಯ ಶಿಕ್ಷಣ ಚೆನ್ನ ಎನ್ನುತ್ತಾ ಎಲ್ಲದರ ಕ್ವಾಲಿಟಿಯನ್ನು ಬಿಗ್ ನಂಬರ್ ಗಳಲ್ಲಿ ಅಳೆಯುತ್ತೇವಲ್ಲಾ ಇದೂ ಅಂತಹಾ ಸಾಲಿಗೇ ಸೇರುತ್ತದೆ. 


ಒಳ್ಳೆಯ ಅಡ್ವಾನ್ಸ್ ಬುಕ್ಕಿಂಗ್ ನಲ್ಲಿ ಇದರ ಪರಿಣಾಮ ಹೆಚ್ಚು. ಇದು ಯಾರ ಸಿನಿಮಾ.. ಕಥೆ ಏನು ಎನ್ನುವುದಕ್ಕಿಂತ ಐ.ಎಂ.ಡಿ.ಬಿ ರೇಟಿಂಗ್ ನೋಡುವತ್ತ ಗಮನ ಹರಿಸುವ ನಮ್ಮ ಮನಸ್ಸು ಸೆಳೆಯಲು ಇದೂ ಒಂದು ಪರಿಣಾಮಕಾರಿ ಅಂಶ. ಬಿಗ್ ಬಾಕ್ಸ್ ಆಫೀಸ್ ಸಕ್ಸಸ್ ನಿಂದ ನೋಡುಗರಿಗಷ್ಟೇ ಅಲ್ಲ. ಸಿನಿಮಾ ಮಾಡುವವರ ರೇಟಿಂಗ್ ಕೂಡಾ ನಿರ್ಧರಿತವಾಗುತ್ತದಂತೆ. ಈ ಬಾಕ್ಸ್ ಆಫೀಸ್ ಹಿಟ್ ಲಿಸ್ಟ್ ನಲ್ಲಿ ಬಾರದ ನಟರ ಬೇಡಿಕೆ ಹಾಗೂ ಸ್ಟಾರ್ ವ್ಯಾಲ್ಯೂ ಕುಸಿಯುತ್ತಿದೆ. ಹಿಂದಿ ಸಿನಿಮಾ ಇಂಡಸ್ಟ್ರಿಯಲ್ಲಿ ಈ ರೀತಿಯ ಸತತ ಬಾಕ್ಸ್ ಆಫೀಸ್ ಬಾಂಬ್ ಅಥವಾ ಫೇಲ್ಯೂರ್ ನಿಂದ ಬ್ರ್ಯಾಂಡ್ ಕೂಡಾ ಕಡಿಮೆಯಾಗುತ್ತಿದೆ.


ಒಂದು ರೇಟಿಂಗ್, ಒಂದು ರಿವ್ಯೂ ಇಷ್ಟೆಲ್ಲಾ ಮಾಡಬಲ್ಲದು ಎನ್ನುವುದಾದರೆ ಒಂದೊಳ್ಳೆಯ ಕಥೆ ಅಥವಾ ಒಂದು ಫರ್ಫೆಕ್ಟ್ ಸಿನಿಮಾ ಪ್ರಭಾವ ಬೀರಲು ಸಾಧ್ಯವಿಲ್ಲವೇ..?? ಆದರೆ, ಈ ಹಾದಿ ಅಷ್ಟು ಸುಲಭವಿಲ್ಲ. ಈ ಪ್ರಭಾವ ಹೇಗೆ ಮೂಡುತ್ತದೆ ಗೊತ್ತೇ ?

ಮನಃಶಾಸ್ತ್ರಜ್ಞರ ಪ್ರಕಾರ ಒಬ್ಬರ ಮೇಲೆ ಮತ್ತೊಬ್ಬರ ಹೇಳಿಕೆಗಳು ಹೇಗೆ ಪರಿಣಾಮ ಬೀರುತ್ತವೆ ಎಂದರೆ.. ಆ ಮಾತಿನ ಕುರಿತು ನಂಬಿಕೆ ಹುಟ್ಟಿಸಲು ಅಥವಾ ಅನುಮಾನ ಹುಟ್ಟಿಸಲು ಒಂದು ಹತ್ತು ಜನ ಅದೇ ಮಾತನ್ನು ಪುನರುಚ್ಚರಿಸಿದರೆ ಸಾಕು. "ನೀನ್ಯಾಕೆ ಇವತ್ತು ಡಲ್ ಆಗಿ ಕಾಣಿಸುತ್ತಾ ಇದ್ದೀಯ" ಎಂದು ಒಬ್ಬರು ಕೇಳಿದರೆ ಇಲ್ಲ ಎನ್ನುತ್ತೇವೆ. ಮೂರು - ನಾಲ್ಕು ಜನ ಮುಂದೆ ಸಿಕ್ಕವರು ಹಾಗೆ ಕೇಳಿದರೆ ಹಾಗೆಯೇ ಇರಬಹುದೇನೋ ಎಂದು ನಮ್ಮ ಮೇಲೆಯೇ ನಮಗೆ ಅನುಮಾನ ಶುರುವಾಗುತ್ತಿದ್ದ ಹಾಗೆ ಒಂದು ಹತ್ತು ಜನ ಕೇಳುವಷ್ಟರಲ್ಲಿ ನಾವು ನಿಜಕ್ಕೂ ಡಲ್ ಆಗಿ ಬಿಟ್ಟಿರುತ್ತೇವೆ. ರಿವ್ಯೂ ಹಾಗೂ ರೇಟಿಂಗ್ ಗಳಿಂದ ನಮಗೆ ಉಂಟಾಗುವ ಪ್ರಭಾವ ಹೀಗೆಯೇ ಇರುತ್ತದೆ. 10 ಜನರಿಗೆ ಇಷ್ಟವಾದ ಸಿನಿಮಾ ನಮಗೆ ಇಷ್ಟವಾಗಲೇ ಬೇಕು ಎಂದೇನಿಲ್ಲ. ಆದರೆ, ನನಗೆ ಇಷ್ಟವಾಗಲಿಲ್ಲ ಎಂದರೆ ನಮ್ಮನ್ನು ಬೇರೆಯದ್ದೇ ರೀತಿ ನೋಡಿದರೆ ಎಂಬ ಭಾವನೆಯಿಂದ ಅದನ್ನು ಹೇಳದೆ ಸುಮ್ಮನುಳಿಯುತ್ತೇವೆ. 


ಹೀಗೆ.. ಬರೀ ಕಥೆಯಿಂದಲೇ ಸಿನಿಮಾ ಗೆಲ್ಲುತ್ತದೆ ಎಂದು ಹೋದಾಗ ಅಲ್ಲಿ ಮಾರ್ಕೆಟಿಂಗ್ ಕೂಡಾ ಬೇಕಾಗುತ್ತದೆ. ಎಷ್ಟೋ ಒಳ್ಳೆಯ ಸಿನಿಮಾಗಳು ಅಥವಾ ಹೊಸಬರ ಸಿನಿಮಾಗಳನ್ನು ಓ.ಟಿ.ಟಿಯಲ್ಲಿ ಕಂಡಾಗ ಈ ಸಿನಿಮಾ ಥಿಯೇಟರ್ ನಲ್ಲಿ ನೋಡಿದರೆ ಚೆನ್ನಾಗಿರುತ್ತಿತ್ತು ಎಂದುಕೊಳ್ಳುತ್ತಿರುತ್ತೇವೆ. ಆದರೆ, ಅವುಗಳು ಅದಾಗಲೇ ಚಿತ್ರ ಮಂದಿರದಲ್ಲಿ ತೆರೆ ಕಂಡು ಒಂದೆರಡು ದಿನಕ್ಕೇ ಎತ್ತಂಗಡಿಯಾಗಿ ಬಿಟ್ಟಿರುತ್ತವೆ. 


ಅಷ್ಟಕ್ಕೂ ಕತೆ ಇದ್ದರೆ ಮಾತ್ರ ಸಿನಿಮಾ ನೋಡಬೇಕೇ..?? ನಾವು ನೋಡುವುದು ಎಂಟರ್ಟೈನ್ ಮೆಂಟ್ ಗೆ ಎನ್ನುತ್ತೀರಾ.. ಒಂದು ಸಿನಿಮಾ ನೋಡಿದರೆ ಅದರಿಂದ ಏನಾದ್ರೂ ಒಂದು ಪ್ರಯೋಜನವಿರಬೇಕು. ಏನನ್ನಾದರೂ ತಿಳಿದುಕೊಳ್ಳುವಂತೆ, ಮನಸ್ಸಿಗೆ ಸಮಾಧಾನ ನೀಡುವಂತೆ, ನಕ್ಕು ಹಗುರಾಗಿಸುವಂತೆ..ಹೀಗೆ ಏನಾದರೊಂದು. ಅಲ್ಲವಾ.. ಹಾಸ್ಯ, ಹಾರರ್, ಸೈಕಾಲಾಜಿಕಲ್ ಥ್ರಿಲ್ಲರ್, ಫ್ಯಾಮಿಲಿ ಓರಿಯೆಂಟೆಡ್, ಭಕ್ತಿ ಪ್ರಧಾನ, ಪ್ರೇಮ ಕತೆಗಳು ಹೀಗೆ ಹಲವಾರು ಸಿನಿಮಾಗಳಿವೆ.  ಇದೆಲ್ಲದರ ನಡುವೆ ಮಕ್ಕಳ ಸಿನಿಮಾಗಳೇ ಕಂಡು ಬರುತ್ತಿಲ್ಲ. ಹಾಗಾದರೆ, ಮಕ್ಕಳು ಕೂಡಾ ದೊಡ್ಡವರ ಸಿನಿಮಾಗಳನ್ನೇ ನೋಡಬೇಕಾ.. ಸ್ಕೂಲ್ ಟೈಮ್ ನಲ್ಲಿ ವರ್ಷಕ್ಕೆ ಒಂದು ಸಿನಿಮಾ ಇಲ್ಲವೇ ಪ್ರವಾಸಕ್ಕೆ ಕರೆಯುತ್ತಿದ್ದರು. ಮಕ್ಕಳ ಸಿನಿಮಾಗಳೇ ಕಡಿಮೆಯಾದರೆ ಮಕ್ಕಳು ನೋಡಿದ ಸಿನಿಮಾಗಳಿಂದ ಕಲಿಯುವುದಾದರೂ ಏನನ್ನು..?? ಮನೆಮಂದಿಯೆಲ್ಲಾ ಕುಳಿತು ನೋಡುವಂತಹಾ ಸಿನಿಮಾ ಬರುವ ಕಾಲ ಬದಲಾಗುತ್ತಿದೆ. ರೌಡಿಸಂ, ಹಿಂಸೆ, ಕ್ರೌರ್ಯ ಹೆಚ್ಚಾಗಿರುವಂತಹಾ.. ಡಬಲ್ ಮೀನಿಂಗ್ ಡೈಲಾಗ್ ಗಳು ಹಾಸ್ಯ ಎನ್ನಿಸುವಂತಹಾ ಸಿನಿಮಾಗಳ ನಡುವಲ್ಲಿ ರೇಟಿಂಗ್ , ರಿವ್ಯೂ ಗೊಡವೆಗೆ ಹೋಗದಂತಹಾ ಒಳ್ಳೆಯ ಸಿನಿಮಾಗಳಿವೆ. 


ಸಿನಿಮಾ ನೋಡುವಾಗ, ಆಯ್ಕೆ ಮಾಡಿಕೊಳ್ಳುವಾಗ ಯಾವುದನ್ನು ಎಷ್ಟು ನೋಡಬೇಕು, ಎಷ್ಟು ಪ್ರಭಾವ ಹೊಂದಬೇಕು, ಎಷ್ಟು ಪಾಲಿಸಬೇಕು ಎಂಬುದು ನಮಗೆ ಚೆನ್ನಾಗಿ ಅರಿವಿರಬೇಕು. ಎಷ್ಟು ನೆನಪಿಟ್ಟುಕೊಳ್ಳಬೇಕು ಮತ್ತು ಎಷ್ಟನ್ನು ಮನಃಪಟಲದಿಂದ ಅಳಿಸಿ ಬಿಡಬೇಕು ಎಂದೂ ತಿಳಿದಿರಬೇಕು. ರೇಟಿಂಗ್, ರಿವ್ಯೂ, ಪಾಪ್ಯುಲರ್ ಎಂಬುದನ್ನು ಗಮನದಲ್ಲಿ ಇಟ್ಟುಕೊಂಡು ಯೋಚಿಸಿದರೆ ಬಿಗ್ ಥಿಂಗ್ ಸಿನಿಮಾದ ವ್ಯಾಲ್ಯೂ. ಅಲ್ಲವಾ..??

- ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ