ಪುಸ್ತಕದ ಶೀರ್ಷಿಕೆ : ನನ್ನೆದೆಯ ಹಾಡು
ಲೇಖಕರು : ಸಾಯಿಸುತೆ
ಪ್ರಕಾಶಕರು : ಸುಧಾ ಎಂಟರ್ಪ್ರೈಸಸ್
ಪ್ರಥಮ ಮುದ್ರಣ : 1997
ದ್ವಿತೀಯ ಮುದ್ರಣ : 2010 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 188
ಬೆಲೆ : 110 ರೂ.
ನನ್ನೆದೆಯ ಹಾಡು ಕಾದಂಬರಿ ನವಿರಾದ ಭಾವವನ್ನು ಹುಟ್ಟಿಸುತ್ತಲೇ.. ಅತಿಯಾದರೆ ಅಮೃತವೂ ವಿಷ ಎಂಬಂತೆ ತಂದೆಯ ಅತಿ ಪ್ರೀತಿಯೇ ಮಗನ ಪಾಲಿಗೆ ಉರುಳಾದ ದುರಂತ ಕಥೆಯೊಂದನ್ನು ಹೇಳುತ್ತಾ ಸಾಗುತ್ತದೆ. ಆದರೂ.. ತಂದೆಗೆ ಮಗನ ಮೇಲಿರುವ ಪ್ರೀತಿ, ಕಾಳಜಿ ಕಂಡು ಕೆಲವೊಮ್ಮೆ ಅಸೂಯೆಯಾಗುತ್ತದೆ.
ಊರಿನ ದೊಡ್ಡ ಮನೆಯವರನಿಸಿಕೊಂಡಿದ್ದ ಸಂಪತ್ ಗಿರಿಯವರಿಗೆ ಒಬ್ಬನೇ ಮಗ. ಮದುವೆಯಾದ ವರ್ಷದಲ್ಲೇ ಮಗನನ್ನು ಹೆತ್ತು ಇವರ ಕೈಗೆತ್ತು ಕಣ್ಮುಚ್ಚಿಕೊಂಡಿದ್ದರು ಮಡದಿ. ಇವರ ಜೊತೆ ಇದ್ದದ್ದು ಇವರ ದೊಡ್ಡಮ್ಮ ಗಿರಿಯಮ್ಮ. ವಿಷ್ಣುವಿಗೆ ಪ್ರೀತಿಯ ಅಜ್ಜಿ.
ಅಮ್ಮನಿಲ್ಲದ ಮಗುವಿಗೆ ಏನೂ ಕೊರತೆಯಾಗಬಾರದೆಂದು ಬೆಳೆದಿದ್ದರೂ.. ಇನ್ನೂ ಚಿಕ್ಕ ಮಗುವೆಂದೇ ಭಾವಿಸಿ ಎಲ್ಲವನ್ನೂ ನಿಯಂತ್ರಿಸುತ್ತಿದ್ದರು ಅವನ ತಂದೆ. ಅವನು ಏನು ತಿನ್ನಬೇಕು, ಏನು ಬಿಡಬೇಕು ಎಂದು ನಿರ್ಧಾರ ಮಾಡುತ್ತಿದ್ದು ಅವನ ತಂದೆಯೇ. ಇಷ್ಟೇ ಹಾಲು, ಇಷ್ಟೇ ತುಪ್ಪ, ಇಷ್ಟೇ ಬೆಣ್ಣೆ.. ಅವನಿಗೆ ಸೇರುತ್ತೋ ಬಿಡುತ್ತೋ ತಿನ್ನಬೇಕು ಇಂತಹ ಪ್ರೀತಿಯ ಸರ್ವಾಧಿಕಾರಿಯ ಮಗ. ಮಗನಿಗೆ ಎಣ್ಣೆ ಸ್ನಾನ, ಓದು ಇವೆಲ್ಲದರ ಕಾಳಜಿ ತೆಗೆದುಕೊಳ್ಳುತ್ತಿದ್ದವರು ಆತನನ್ನು ದೂರಕ್ಕೆ ಕಳುಹಿಸಲು ಒಪ್ಪುತ್ತಿರಲಿಲ್ಲ.
ಮನೆಯಲ್ಲಿ ಅಡುಗೆ ಕೆಲಸ ನೋಡುತ್ತಿದ್ದವನು ವೆಂಕಟ. ವಿಷ್ಣುವಿನ ಪಾಲಿಗೆ ಸ್ನೇಹಿತನಂತೆಯೇ ಇದ್ದ. ಅವನು ವಿಷ್ಣುವಿನ ಎಲ್ಲಾ ಕೆಲಸವನ್ನು ಮಾಡಿಕೊಡುತ್ತಿದ್ದ. ಆತ್ಮೀಯತೆ ಇದ್ದರೂ ತೀರಾ ಗೆರೆದಾಟಿ ಅಡಿ ಮುಂದಿಡಲಾರ ವೆಂಕಟ. ಮನೆಯಲ್ಲಿನ ಎಲ್ಲರಿಗೂ ತಂದೆಯ ಮೇಲೆ ಮಗನಿಟ್ಟ ಗೌರವ, ಹಾಕಿದ ಗೆರೆದಾಟದ ನಿಷ್ಠೆಯ ಜೊತೆಗೆ ತಂದೆ ಮಗನ ಮೇಲಿಟ್ಟ ಮಮತೆಯು ಚೆನ್ನಾಗಿಯೇ ಅರ್ಥವಾಗಿತ್ತು.
ವಿಷ್ಣುಗಿರಿಪುರದಲ್ಲಿದ್ದ ದೇವಾಲಯದಲ್ಲಿ ಸಂಪತ್ ಗಿರಿಯವರ ಮನೆಯವರಿಗೆ ದೇವಸ್ಥಾನದ ಆಡಳಿತದ ಸರ್ವಾಧಿಕಾರ ತಲೆತಲಾಂತರದಿಂದ ಬಂದಿದ್ದು... ಅಷ್ಟೇ ನಿಷ್ಠೆಯಿತ್ತು. ಮನೆದೇವರಾಗಿದ್ದರಿಂದ ಹೆಚ್ಚು ಭಕ್ತಿಯಿಂದ ನಡೆದುಕೊಳ್ಳುತ್ತಿದ್ದರು. ಇತ್ತೀಚೆಗೆ ದೇವಸ್ಥಾನದಲ್ಲಿ ಪೂಜೆ ಮಾಡುತ್ತಿದ್ದ ಭಟ್ಟ ಒಂದು ಸಮಸ್ಯೆಯಾಗಿದ್ದ. ಅವನ ತಂದೆ, ತಾತ ಸಜ್ಜನರಾಗಿದ್ದು ದೇವನಿಷ್ಟರಾಗಿದ್ದವರು. ಆದರೆ, ಅದಕ್ಕೆ ವಿರುದ್ಧವಾಗಿ ವರ್ತಿಸುತ್ತಿದ್ದವನು ಭಟ್ಟ. ಊರಿನ ಗೌಡರ ಮಗಳು ರಾಜೇಶ್ವರಿಯನ್ನು ಕೆಣಕಿ ರಾದ್ದಂತ ಮಾಡಿಕೊಂಡಿದ್ದ. ವಿಷ್ಣುವಿನ ವಯಸ್ಸಿನವನೇ. ದೇವಾಲಯದ ಜಗಲಿ ಈಗ ಎಲೆ ಕಲ್ಸೋ ಆಟದ ಅಡ್ಡೆಯಾಗಿತ್ತು. ಹಾಡು ಹಾಕಿಕೊಂಡು ಕುಣಿತದ ಅಡ್ಡವೂ ಆಗುತ್ತಿತ್ತು. ಪೂಜೆಗೆ ಬೇರೆಯವರನ್ನು ನೇಮಿಸಬೇಕೆಂದುಕೊಂಡ ಯೋಚನೆ ಬಂದ ಸಮಯದಲ್ಲಿಯೇ ಆತ ದೊಡ್ಡ ಗಲಾಟೆಯನ್ನೂ ಮಾಡಿದ್ದ.
ಆದರೂ. ಊರಿನವರೆಲ್ಲರ, ಗೌಡರ ನಿರ್ಧಾರದ ಮೇಲೆ ವೆಂಕಟನ ಊರಿನಲ್ಲಿ ಮೊದಲು ಕೆಲಸ ಮಾಡುತ್ತಿದ್ದ ಸೋಮಯಾಜುಲು ಅವರ ಏಕೈಕ ಮಗಳು ಶ್ರೀದೇವಿಯೊಡನೆ ಈ ಊರಿಗೆ ಬಂದಾಗಿತ್ತು. ಬಡತನದ ಕುಟುಂಬವೇ ಆಗಿದ್ದ ಅವರು ಅಣ್ಣನ ಮನೆಯಲ್ಲಿ ಮಗಳನ್ನು ಬಿಟ್ಟಿದ್ದವರು. ಈಗ ಈ ಊರಿಗೆ ಬಂದಿದ್ದರು.
ಸೋಮಯಾಜುಲು ಅವರ ಪತ್ನಿ ಮದುವೆಯಾದ ನಂತರವೂ ಪ್ರೇಮವನ್ನು ಬಿಡದೆ ತನ್ನದೇ ಊರಿನ ವಿರೂಪಾಕ್ಷಿಯ ಜೊತೆ ಹಿಂದೆ-ಮುಂದೆ ಯೋಚಿಸದೆ ಮನೆ ಬಿಟ್ಟು ಹೊರಟಾಗಿತ್ತು. ಆಗ ಅವಳ ಪಾಲಿಗೆ ಮಗಳು ಇರಲಿಲ್ಲ. ಮಗಳು ಬೆಳೆದದ್ದೆಲ್ಲವೂ ಸೋಮಯಾಜುಲು ಅವರ ಅತ್ತಿಗೆಯ ಬಳಿ. ದೊಡ್ಡಮ್ಮನಿಗೂ ಅವಳೆಂದರೆ ತುಂಬು ಪ್ರೀತಿ. ಆದರೆ, ಓಡಿ ಹೋದ ಅಮ್ಮ ವನಜಾಕ್ಷಿಯ ನೆರಳು ಆಕೆಯನ್ನು ಬಿಡುವಂತಿರಲಿಲ್ಲ. ಇಲ್ಲಿಯೂ ಸೋಮಯಾಜುಲು ಅವರಿಗೆ ಭೂತದ ನೆರಳು ಕಾಡುತ್ತಿತ್ತು. ಪೂಜೆ ಮಾಡುವವರು , ಎಲ್ಲರಿಂದ ಗೌರವ ಕೊಡಿಸಿಕೊಳ್ಳುವಂತಿರಬೇಕು ಬದಲಾಗಿ ಅಪವಾದದ ಕರಿಛಾಯೆ ಇರಬಾರದು ಎಂದು ಅವರನ್ನು ಕೆಲಸದಿಂದ ಬಿಡಿಸುವ ನಿರ್ಧಾರ ಮಾಡಿದ್ದ ಸಂಪತ್ ಗಿರಿಯವರು ಸಹಾ ತಪ್ಪು ಆತನದಲ್ಲವೆಂದು ತಿಳಿದಾಗ ಸುಮ್ಮನಾಗಿದ್ದರು.
ಭಟ್ಟನ ಉಪಟಳದಿಂದ ಸೋಮಯಾಜುಲು ಅವರಿಗೆ ತೊಂದರೆಯಾಗಬಹುದೆಂದು ಹಾಗೂ ಶ್ರೀದೇವಿಯ ಮೇಲೆಯೂ ಆತನ ಕಣ್ಣಿದ್ದರಿಂದ ಅವರ ಮನೆಯ ಕಾವಲಿಗೆ ಕೆಂಚ ನೇಮಕವಾಗಿದ್ದ. ಆದರೂ ಭಟ್ಟನ ಉಪಟಳವಂತೂ ಮೇರೆ ಮೀರುತ್ತಿತ್ತು.
ಗಿರಿಯಮ್ಮನವರಿಗೆ ಹಾಗೂ ವೆಂಕಟನಿಗೆ ಶ್ರೀದೇವಿ ಎಂದರೆ ಮನೆಮಗಳಂತೆ ಎಂಬ ತುಂಬು ಆತ್ಮೀಯತೆ. ಆಕೆ ಸಡಗರದಿಂದ, ಲವಲವಿಕೆಯಿಂದ ಓಡಾಡುತ್ತಾ.. ಹಸೆ ಬರೆಯುತ್ತಾ, ಸುಶ್ರಾವ್ಯವಾಗಿ ಹಾಡು ಹಾಡುತ್ತಾ ದೇವಾಲಯವನ್ನು ಚೊಕ್ಕಟಗೊಳಿಸುವ ಕೆಲಸ ಮಾಡುತ್ತಾ ತನ್ನನ್ನು ತಾನು ತೊಡಗಿಸಿಕೊಂಡಿದ್ದಳು. ಕ್ರಮೇಣ ವಿಷ್ಣುವಿನ ಕವನಗಳ ಸೆಳೆತಕ್ಕೆ ಸಿಕ್ಕಿ ಅವನ ಅಭಿಮಾನಿಯೂ ಆಗಿದ್ದಳು. ಮೆಲ್ಲಗೆ ಇಬ್ಬರ ನಡುವೆ ಸ್ನೇಹವೂ ಚಿಗುರಿತ್ತು. ಶಾಲೆ ಕಾಲೇಜುಗಳಲ್ಲಿ ಆತನ ಕವಿತೆಗಳನ್ನು ಅಪಹಾಸ್ಯ ಮಾಡುವಾಗ ಆತ ಅಂತರ್ಮುಖಿಯಂತೆ ಕೇವಲ ಬರೆದಿದ್ದನ್ನು ವೆಂಕಟನ ಮುಂದೆ ಹೇಳುತ್ತಿದ್ದವನು, ಈಗ ಶ್ರೀದೇವಿಯ ಜೊತೆ ಹಾಡಿಸುವಷ್ಟು ಮುಂದುವರೆದಿದ್ದ.
ಸಂಪತ್ ಗಿರಿಯವರಿಗೆ ಮಗ ಶ್ರೀದೇವಿಯ ಜೊತೆಗೆ ಗೆಳೆತನ ಬೆಳೆಸುವುದು ವನಜಾಕ್ಷಿಯ ಕಾರಣದಿಂದ ಇಷ್ಟವಾಗಿರಲಿಲ್ಲ. ಅಲ್ಲದೇ ಒಡಕು ಮಾತುಗಳು ಎಲ್ಲೆಡೆಯೂ ಇತ್ತು. ದೊಡ್ಡಪ್ಪನ ಮಗಳು ಪದ್ಮಜೆಯ ವಿವಾಹದಂದು ನಡೆದ ಘಟನೆ ಆಕೆಯನ್ನು ಕಾಡುತ್ತಿತ್ತು. ವಿವಾಹ ಬೇಡವೆಂಬ ಪರಿಸ್ಥಿತಿಯಲ್ಲಿದ್ದಾಗ ಅನಿರೀಕ್ಷಿತವಾಗಿ ದೇವರೇ ಅವಳಿಗಾಗಿಯೇ ಎಂಬಂತೆ ಸಂಬಂಧವೊಂದನ್ನು ಕಳುಹಿಸಿದ.
ಕಾರುಕೆಟ್ಟು ನಿಂತ ಸಂದರ್ಭದಲ್ಲಿ ಅನಿಕೇತ್ ಹಾಗೂ ಆತನ ಪತ್ನಿ ತಾರಾ ಜೊತೆಗೆ ಬಂದಿದ್ದ ಆತನ ತಮ್ಮ ಅನಿರುದ್ಧ ವಿದೇಶದಲ್ಲಿದ್ದು ಓದಿ ಬಂದವನು. ಶ್ರೀದೇವಿಯನ್ನು ಮನಸಾರೆ ಇಷ್ಟಪಟ್ಟಿದ್ದ. ಸಂಪತ್ ಗಿರಿಯವರು ಮಗನನ್ನು ಆಕೆಯಿಂದ ದೂರವಿರಿಸಲು.. ಆತನ ಮಾವನ ಬಳಿ ನೇಪಾಳಕ್ಕೆ ಕಳುಹಿಸಿದ್ದರು. ಆತ ತಿರುಗಿ ಬರುವಷ್ಟರಲ್ಲಿ ಶ್ರೀದೇವಿಯ ವಿವಾಹ ಅನಿರುದ್ಧನೊಡನಾಗಿ ಗಂಡನ ಮನೆ ಸೇರಿಯಾಗಿತ್ತು.
ಅನಿರುದ್ಧ ಬಹಳ ವಿವೇಕಿ ಹಾಗೂ ತಿಳಿದಿದ್ದವನು. "ಜಗತ್ತೇ ಪರಿಶುದ್ಧ ಪ್ರೀತಿಗಾಗಿ ಆತುರದಿಂದ ಹಾತೊರೆಯುತ್ತಿದೆ. ಪ್ರತಿಫಲವನ್ನು ಅಪೇಕ್ಷಿಸದೆ ನಾವು ಅದನ್ನು ಹಂಚಬೇಕು. ಕೊಡು ಕೊಡು ಪ್ರತಿಫಲಾಪೇಕ್ಷೆ ಇಲ್ಲದೆ"ಎಂಬ ಸ್ವಾಮಿ ವಿವೇಕಾನಂದರ ಮಾತು ಸೆಳೆದಿತ್ತು. ಪ್ರೀತಿ ಎನ್ನುವ ಪದವನ್ನು ಒಂದು ಚೌಕಟ್ಟಿನಲ್ಲಿ ಇರಿಸಿ ನೋಡಲು ಇಷ್ಟವಾಗಲಿಲ್ಲ. ಪ್ರೀತಿ ಸರ್ವವ್ಯಾಪಿ ಆನಂದಕರವಷ್ಟೇ ಅಲ್ಲ, ಆರೋಗ್ಯಕರವೂ ಹೌದು ಎಂದು ನಂಬಿದ್ದವನು.
ಶ್ರೀದೇವಿಯನ್ನು ಯಾರಾದರೂ ಪ್ರೇಮಿಸಿರಬಹುದಾ..?? ಎಂಬ ಭಾವ ಮನಸ್ಸಿನಲ್ಲಿ ಹುಟ್ಟಿದರೂ ಆತನ ಪ್ರಶ್ನೆಗೆ ಉತ್ತರವಿರಲಿಲ್ಲ. ಮುಗ್ದೆ ಶ್ರೀದೇವಿಗೆ ಪ್ರೀತಿಯ ಸುಳಿವಿರಲಿಲ್ಲ. ಆಕೆ ಎಲ್ಲರನ್ನೂ ಪ್ರೀತಿಸುತ್ತಿದ್ದವಳು. ವಿಷ್ಣುವಿಗೆ ಅವಳ ಅನುಪಸ್ಥಿತಿಯಲ್ಲಿ ಪ್ರೀತಿಯ ಅರಿವಾಗಿತ್ತು. ತನ್ನ ಪ್ರೀತಿ ಪಡೆಯುವಷ್ಟರಲ್ಲಿ ದೂರಾಗಿದ್ದಕ್ಕೆ ಕಾರಣರು ಯಾರು..?? ತಂದೆಯೇ..? ವಿಧಿಯೇ..? ಯಾರನ್ನು ದೂಷಿಸುತ್ತಾನೆ ?
ವೆಂಕಟನಿಗೆ ಇದರ ಸುಳಿವಿದ್ದರೂ ಸಂಪತ್ ಗಿರಿಯವರ ಮನಸ್ಥಿತಿಯ ಅರಿವಿದ್ದವನು ಇದು ಆಗುವ ಮಾತಲ್ಲವೆಂದು ಸುಮ್ಮನಿದ್ದನು. ತಂದೆಯ ಆಜ್ಞೆ ಮೀರಿ ಮಗನು ನಡೆಯದ್ದರಿಂದ, ಆತ ತನ್ನ ಮನಸ್ಸಿನ ಮಾತನ್ನು ಯಾರಿಟ್ಟಿಗೂ ಹೇಳಿರಲಿಲ್ಲ. ಆದರೆ, ವಿಷ್ಣು ಇದೇ ಕೊರಗಿಟ್ಟುಕೊಂಡು ಎಲ್ಲದರಲ್ಲೂ ಹಿಂದುಳಿಯುತ್ತಾ ಸಾಗಿದಾಗ ಆತನ ಪರಿಸ್ಥಿತಿ ಹದಗೆಟ್ಟಿತು. ಅದಕ್ಕೆ ತಂದೆಯ ಪ್ರತಿಕ್ರಿಯೆಯೇನು? ವಿಷ್ಣುವಿನ ಆರೋಗ್ಯ ಮನಸ್ಸು ಸುಧಾರಿಸಿತೇ..??
ವಿಷ್ಣು ಹಾಗೂ ವೆಂಕಟನನ್ನು ವಿಷ್ಣುವಿನ ಪ್ರೀತಿಯ ಕುರಿತು ಅನಿರುದ್ಧ ಪ್ರಶ್ನಿಸಿದರೂ ಆ ಹುಡುಗಿ ಯಾರೆಂದು ಇಬ್ಬರೂ ಬಾಯಿ ಬಿಟ್ಟರಲಿಲ್ಲ. ಅನಿರುದ್ಧ ವಿಷ್ಣುವನ್ನು ಭೇಟಿಯಾದದ್ದು ಹೇಗೆ..??
ಅಷ್ಟೊಂದು ದಬ್ಬಾಳಿಕೆ ನಡೆಸುತ್ತಿದ್ದ ಭಟ್ಟ ಶ್ರೀದೇವಿಯನ್ನು ವಿವಾಹವಾಗಲು ಹವಣಿಸುತ್ತಿದ್ದವನು, ಕೆಟ್ಟದ್ದನ್ನೇ ಮಾಡಲು ಹೊಂಚು ಹಾಕುತ್ತಿದ್ದವನು ಎಲ್ಲಿ ಮರೆಯಾಗಿದ್ದ..?? ಆತನ ಪರಿಸ್ಥಿತಿ ಏನಾಗಿತ್ತು..?? ಅಂದು ಜಾತ್ರೆಯಲ್ಲಿ ನಡೆದ ಘಟನೆ ಏನು..??
ಶ್ರೀದೇವಿಗೆ ವಿಷ್ಣು ತನ್ನನ್ನು ಪ್ರೀತಿಸುತ್ತಿದ್ದ ವಿಚಾರ ತಿಳಿಯುತ್ತದೆಯಾ..? ವನಜಾಕ್ಷಮ್ಮನವರ ಮಗಳು ಮತ್ತೆ ವನಜಾಕ್ಷಮ್ಮನವರ ಹಾದಿಯನ್ನೇ ಹಿಡಿಯುವಂತಾಯಿತೇ..??
ಮಗಳನ್ನು, ಗಂಡನನ್ನು ಬಿಟ್ಟು ಹೋಗಿದ್ದ ವನಜಾಕ್ಷಮ್ಮನವರು ಮತ್ತೆ ಮತ್ತೆ ಮಗಳನ್ನು ಹುಡುಕಿಕೊಂಡು ಬರಲು ಕಾರಣವೇನು..?? ಇದೆಲ್ಲದಕ್ಕೂ ಶ್ರೀದೇವಿ ಪ್ರತಿಕ್ರಿಯಿಸಿದ್ದು ಹೇಗೆ..?? ಸೋಮಯಾಜುಲು ಅವರ ಮನಸ್ಸಿನಲ್ಲಿ ಏನಿತ್ತು..?? ಮಗಳು ಅಳಿಯ ಕರೆದರೂ ಸೋಮಯಾಜುಲು ಅವರು ಬರಲು ಒಪ್ಪದ್ದೇಕೆ..??
ಈ ಕಾದಂಬರಿ ಓದಿ ಮುಗಿಸಿದಾಗ ವಿಷ್ಣು ಶ್ರೀದೇವಿಯವರ ಜೊತೆಗೆ ವೆಂಕಟ ಹಾಗೂ ಕೆಂಚರು ಬಹಳವೇ ಇಷ್ಟವಾಗುತ್ತಾರೆ. ಅನಿರುದ್ಧನದ್ದು ಬಹಳ ಉನ್ನತ ವ್ಯಕ್ತಿತ್ವ. ತಂದೆಯ ಮುದ್ದಿನ ಮಗನಾದ ವಿಷ್ಣು ಶ್ರೀದೇವಿಯ ಜೊತೆಯಾಗಿದ್ದರೆ ಆತನ ಬದುಕು ಹೇಗಿರುತ್ತಿತ್ತು ಎಂಬ ಭಾವವು ಬಂದರೂ.. ಒಂದು ವೇಳೆ ವನಜಾಕ್ಷಮ್ಮನ ಕರಿ ನೆರಳು ಆಕೆಯ ಮೇಲೆ ಬಿದ್ದಿರದಿದ್ದರೆ, ಆಕೆ ವಿಷ್ಣುವಿನ ಜೊತೆಯಾಗುತ್ತಿದ್ದಳೇನೋ ಎಂದೆನಿಸಿತು. ಕಥೆಯ ಅಂತ್ಯ ಮನಸ್ಸನ್ನು ಭಾರವಾಗಿಸುತ್ತದೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ