ಇವತ್ತು ನಾವು ಕುಳಿತಲ್ಲಿಂದಲೇ ಬೇಕಾದ್ದನ್ನು ಹುಡುಕುತ್ತೇವೆ. ಕೆಲಸ ಕೂಡಾ ಈಗ ಕುಳಿತ ಕಡೆಯಿಂದಲೇ ಗಳಿಸಿಕೊಂಡು ಅಲ್ಲಿಂದಲೇ ಕಾರ್ಯ ನಿರ್ವಹಿಸುತ್ತವೆ. ಹಣ-ಕಾಸಿನ ವ್ಯವಹಾರಕ್ಕೆ ನೇರಾನೇರ ಹೋಗಬೇಕೆಂದಿಲ್ಲ.. ಬಿಲ್ ಪಾವತಿ ಮಾಡಲು ಸರತಿ ಸಾಲಿನಲ್ಲಿ ನಿಲ್ಲಬೇಕಿಲ್ಲ. ಅಷ್ಟೇ ಏಕೆ..?? ಈಗ ಲೈಟ್ , ಫ್ಯಾನ್, ಟಿ.ವಿ ಎಲ್ಲವನ್ನೂ ಕುಳಿತ ಕಡೆಯಿಂದಲೇ ಬರೀ ವಾಯ್ಸ್ ಮೂಲಕ ನಿಯಂತ್ರಿಸುತ್ತೇವೆ. ಈಗ ಐ.ಓ.ಟಿ ಎಂದರೆ ಇಂಟರ್ನೆಟ್ ಆಫ್ ಥಿಂಗ್ಸ್ ಜಗತ್ತನ್ನೇ ಆವರಿಸಿಕೊಳ್ಳುತ್ತಿದೆ. 5-ಜಿ ಟೆಕ್ನಾಲಜಿ ಬಳಸಲು ಸಿದ್ಧವಾಗುತ್ತಿದ್ದೇವೆ. ಅಂಥದ್ದರಲ್ಲಿ ಈ ಇಂಟರ್ನೆಟ್ ಬಗ್ಗೆ ತಿಳಿದುಕೊಳ್ಳಲು ಏನಿದೆ ಎನ್ನುತ್ತೀರಾ..?? ಇಂಟರ್ನೆಟ್ ಸಂಪರ್ಕವೇ ಎಲ್ಲಕ್ಕೂ ಮೂಲ ಕನೆಕ್ಷನ್ ಆಗಿರುವಾಗ ಅದರ ಇತಿಹಾಸದಲ್ಲೊಮ್ಮೆ ಇಣುಕಿ ಬರೋಣ ಬನ್ನಿ.
ಇವತ್ತು ಎಲ್ಲದಕ್ಕೂ ಇಂಟರ್ನೆಟ್ ಬೇಕು. ಅದೂ ಕೂಡಾ ಮೂಲಭೂತ ಸೌಕರ್ಯಗಳಲ್ಲಿ ಒಂದು ಎಂಬಂತಾಗಿಬಿಟ್ಟಿದೆ. ಆಹಾರ, ನೀರು, ನಿದ್ದೆಯಂತೆ ಇಂಟರ್ನೆಟ್ ನಮ್ಮನ್ನು ಅಲ್ಲಲ್ಲ ಇಡೀ ಜಗತ್ತನ್ನು ಆವರಿಸಿಕೊಂಡಿದೆ. 1990 ರಿಂದ ಈಚೆಗೆ ವ್ಯಾಪಕವಾಗಿ ಬಳಕೆಗೆ ಬಂದ ಇಂಟರ್ನೆಟ್ ಅನ್ನು ಕಂಡು ಹಿಡಿದದ್ದು ದಾಖಲಾಗಿದ್ದು 1960 ರಲ್ಲಿ. ಅದೂ ಯು.ಎಸ್.ಎ ನಲ್ಲಿ. ಬೇರೆ - ಬೇರೆ ಕಂಪನಿಗಳು ಇಂಟರ್ನೆಟ್ ಕುರಿತು ಸಂಶೋಧನೆ ಮಾಡುತ್ತಿದ್ದರೂ ಆರ್ಫಾನೆಟ್ (ಅಡ್ವಾನ್ಸ್ಡ್ ರಿಸರ್ಚ್ ಪ್ರಾಡಕ್ಟ್ ಏಜೆನ್ಸಿ) ನಲ್ಲಿ ಒಂದು ಮಾಡೆಲ್ ತಯಾರಿಸಿ ಅದರಿಂದ 1969 ರ ಅಕ್ಟೊಬರ್ ನಲ್ಲಿ ಅಧಿಕೃತವಾಗಿ ಒಂದು ಕಂಪ್ಯೂಟರ್ ನಿಂದ ಮತ್ತೊಂದಕ್ಕೆ ಒಂದು ಮೆಸೇಜ್ ಕಳುಹಿಸಲಾಯಿತು. ಅದು ಮೊದಲ ಇಂಟರ್ನೆಟ್ ಬಳಕೆ ಎಂದು ದಾಖಲಾಗಿದೆ.
ಆದರೆ, ಈ ಪದ ಇಂಟರ್ ನೆಟ್ವರ್ಕ್ ಎಂಬುದರ ಸಂಕ್ಷಿಪ್ತ ರೂಪ. ನೆಟ್ವರ್ಕ್ ಅನ್ನು ಶಾರ್ಟ್ ಮಾಡಿ ನೆಟ್ ಎಂದೇ ಬಳಸಲಾಯಿತು. ಈ ಪದವನ್ನು 1974 ರಲ್ಲಿ ಬಳಸಲಾಯಿತು. ಅಂದಿನಿಂದ ಇಂದಿನವರೆಗೂ ಅದು ಇಂಟರ್ನೆಟ್ ಆಗಿಯೇ ಉಳಿದಿದೆ. 1849 ರಲ್ಲಿ ಇಂಟರ್ನೆಟೆಡ್ ಎಂಬ ಪದ ಬಳಕೆಯಲ್ಲಿತ್ತು. ಆ ಪದದ ಅರ್ಥವೂ ಇದೇ.. ಅಂತರ್ಸಂಪರ್ಕಿತ ಅಥವಾ ಹೆಣೆದುಕೊಂಡಿದೆ ಎಂದು. ಇಂಟರ್ನೆಟ್ ಎಂದರೆ ಮತ್ತೇನಲ್ಲ ಹೆಚ್ಚಿನ ಡಿವೈಸ್ ಗಳು ಒಂದಕ್ಕೊಂದು ಮಾಹಿತಿಗಾಗಿ ಪರಸ್ಪರ ಸಂಪರ್ಕವಾಗಿರುತ್ತವೆ. ಮೊದಲೆಲ್ಲಾ ವೈರ್ ಮೂಲಕ ಇದ್ದ ಕನೆಕ್ಷನ್ ಈಗ ವೈಯರ್ ಲೆಸ್ ಆಗಿದೆ. ಇಂಟರ್ನೆಟ್ ಬಳಕೆಯ ದಾರಿ ಹಾಗೂ ಕನೆಕ್ಟಿವಿಟಿ ಕುರಿತು ತಿಳಿಯೋಣ ಬನ್ನಿ.
1960 ರ ದಶಕದಲ್ಲಿ ಇಂಟರ್ನೆಟ್ ಬಳಕೆ ಯು.ಎಸ್.ಎ ನಲ್ಲಿ ಡಿಪಾರ್ಟ್ಮೆಂಟ್ ಆಫ್ ಡಿಫೆನ್ಸ್ ನಲ್ಲಿ ಮಾತ್ರ ಬಳಕೆಯಾಗುತ್ತಿದ್ದು 1970 ರಲ್ಲಿ ಇದು ವಿಸ್ತರಿಸಿ ಪ್ರಾದೇಶಿಕ, ಶೈಕ್ಷಣಿಕ ಹಾಗೂ ಮಿಲಿಟರಿ ಜಾಲಗಳಲ್ಲಿಯೂ ಬಳಕೆಗೆ ಬಂದಿತು. 1980 ರಲ್ಲಿ ನ್ಯಾಷನಲ್ ಸೈನ್ಸ್ ಫೌಂಡೇಶನ್ ನೆಟ್ವರ್ಕ್ ಧನಸಹಾಯ ಹಾಗೂ ವಿಸ್ತರಣೆಗೆ ಬಳಸಿಕೊಂಡಿತು. ಇದು ಹೆಚ್ಚಿನ ಸಹಾಯವಾಗಿದ್ದರಿಂದ 1990 ರ ದಶಕದಲ್ಲಿ ಇನ್ನೂ ಹೆಚ್ಚಿನ ವಾಣಿಜ್ಯ ನೆಟ್ವರ್ಕ್ ಮತ್ತು ಉದ್ಯಮಗಳ ಸಂಪರ್ಕಕ್ಕೆ ಬಳಸಿಕೊಳ್ಳಲಾಯಿತು. 2000 ದಿಂದ ಈಚೆಗೆ ಎಲ್ಲೆಡೆಯೂ ಇದರ ಬಳಕೆಯಾಯಿತು. ಇದು ಎಷ್ಟು ಪರಿಣಾಮ ಬೀರಿತು ಎಂದರೆ 2006 ರ ನವೆಂಬರ್ ನಲ್ಲಿ ಯು.ಎಸ್.ಎ ಟುಡೇ ಯಲ್ಲಿ ಹೊಸ 7 ಅದ್ಭುತಗಳ ಪಟ್ಟಿಯಲ್ಲಿ ಇಂಟರ್ನೆಟ್ ಅನ್ನು ಸಹಾ ಸೇರಿಸಲಾಯಿತು.
ಈಗ ಏನಾದರೂ ಸಂಶಯ ಬಂದರೆ ಅದರ ನಿವಾರಣೆಗೆ ಗೂಗಲ್ ಮಾಡು ಎನ್ನುವುದು ಸರ್ವೇಸಾಮಾನ್ಯವಾಗಿಬಿಟ್ಟಿದೆ. ಗೂಗಲ್ ಎಂಬುದು ಬ್ರೌಸರ್. ಇದು ಒಂದು ರೀತಿಯ ಅಪ್ಲಿಕೇಶನ್ ಅಷ್ಟೇ.. ಹೀಗೆ , ಗೂಗಲ್ ಮಾಡು ಎನ್ನುವುದರ ಬದಲು ಇಂಟರ್ನೆಟ್ ನಲ್ಲಿ ಹುಡುಕು ಎಂದು ಹೇಳುವುದೂ ಉಂಟು. ವರ್ಲ್ಡ್ ವೈಡ್ ವೆಬ್ ನಲ್ಲಿ ಹುಡುಕು ಎನ್ನುವುದೂ ಇದೆ. ವರ್ಲ್ಡ್ ವೈಡ್ ವೆಬ್ ಎನ್ನುವುದಕ್ಕಿಂತ ಡಬ್ಲ್ಯೂ. ಡಬ್ಲ್ಯೂ. ಡಬ್ಲ್ಯೂ ಎಂದರೇ ಬೇಗ ಗೊತ್ತಾಗುತ್ತದೆ. ಅಲ್ಲವಾ ? ಹಾಗಾದರೆ ವರ್ಲ್ಡ್ ವೈಡ್ ವೆಬ್ ಹಾಗೂ ಇಂಟರ್ನೆಟ್ ಎಂದರೆ ಒಂದೆಯಾ ?
ಇಂಟರ್ನೆಟ್ ವರ್ಲ್ಡ್ ವೈಡ್ ಇದೆ. ಆದರೆ, ವರ್ಲ್ಡ್ ವೈಡ್ ವೆಬ್ ಹಾಗೂ ಇಂಟರ್ನೆಟ್ ಎರಡೂ ಬೇರೆ ಬೇರೆ. ವರ್ಲ್ಡ್ ವೈಡ್ ವೆಬ್ ಇಂಟರ್ನೆಟ್ ನ ಒಂದು ಭಾಗ ಅಷ್ಟೇ.. ವರ್ಲ್ಡ್ ವೈಡ್ ವೆಬ್ 1990 ರಲ್ಲಿ ಬಂದ ಮೊದಲ ವೆಬ್ ಬ್ರೌಸರ್. ಇದನ್ನು ಕಂಡು ಹಿಡಿದದ್ದು ಟಿಮ್ ಬರ್ನರ್ಸ್ ಲೀ. ಇದರಲ್ಲಿ ಅನೇಕ ವೆಬ್ ಪೇಜ್ ಗಳು ಹಾಗೂ ಮಾಹಿತಿಗಳನ್ನು ಸ್ಟೋರ್ ಮಾಡಲಾಗಿದ್ದು ಬಳಕೆದಾರರ ಅವಶ್ಯಕತೆ ಮೇರೆಗೆ ಅದರ ಮಾಹಿತಿಗಳನ್ನು ಒದಗಿಸಲಾಗುತ್ತದೆ. ಇಂಟರ್ನೆಟ್ ಎಂಬುದನ್ನು ಇನ್ಪ್ರಾಸ್ಟ್ರಕ್ಚರ್ ಎಂದುಕೊಂಡರೆ ಇದನ್ನು ಸರ್ವೀಸ್ ಎನ್ನಬಹುದು. ಇದು ಸಂಪೂರ್ಣ ಸಾಫ್ಟ್ವೇರ್ ಆಧಾರಿತ.
ಇಂಟರ್ನೆಟ್ ಬರೀ ಸಾಫ್ಟ್ವೇರ್ ಅನ್ನೇ ಒಳಗೊಂಡಿಲ್ಲ. ಬದಲಾಗಿ, ಇದು ಹಾರ್ಡ್ವೇರ್ ಹಾಗೂ ಸಾಫ್ಟ್ವೇರ್ ಗಳ ಮಿಶ್ರಣ. ಇಂಟರ್ನೆಟ್ ನ ಸಂವಹನದ ಮೂಲ ಸೌಕರ್ಯದಲ್ಲಿ ಹಾರ್ಡ್ವೇರ್ ಘಟಕಗಳು ಹಾಗೂ ಸಾಫ್ಟ್ವೇರ್ ಲೇಯರ್ ಗಳಿವೆ. ರೂಟರ್, ಕೇಬಲ್ ಗಳು, ರೇಡಿಯೋ ಲಿಂಕ್ ಗಳು , ರಿಪೀಟರ್ ಗಳು, ಮೊಡೆಮ್ ಇಷ್ಟೇ ಅಲ್ಲದೇ ನೆಟ್ವರ್ಕ್ ಪ್ರೋಟೋಕಾಲ್ ಗಳೂ ಇವೆ. ಟೆಲಿಫೋನ್ ಸರ್ಕ್ಯೂಟ್ ಮೂಲಕ ಮೋಡೆಮ್ ಗಳು, ಡಯಲ್-ಅಪ್ ಕೇಬಲ್ ಗಳಿಂದ ಬ್ರಾಡ್ ಬ್ಯಾಂಡ್ ಅನ್ನು ತಲುಪಿದರೆ ಅಲ್ಲಿಂದ ಮುಂದಿನದ್ದು ವೈಯರ್ ಲೆಸ್. ಇನ್ನೂ ಸುಲಭವಾಗಿ ಹೇಳುವುದಾದರೆ ಇಂಟರ್ನೆಟ್ ಸಂಪರ್ಕವು ರೂಟರ್ ವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ವೈರ್ ಮೂಲಕ ಸಂಪರ್ಕದಲ್ಲಿದ್ದರೆ ನಂತರದ್ದು ಸಿಗ್ನಲ್ ಮೂಲಕ ವೈಯರ್ ಲೆಸ್ ಕನೆಕ್ಷನ್. ಉದಾಹರಣೆಗೆ ವೈ-ಫೈ ನಿಂದ ಬಳಕೆದಾರರ ಡಿವೈಸ್ ಗಳಿಗೆ ಇದು ವೈಯರ್ ಲೆಸ್. ಉಪಗ್ರಹ/ ಸೆಲ್ಯುಲಾರ್ ದೂರವಾಣಿಗಳಿಂದ ಈಗ 3ಜಿ, 4ಜಿ ಯಿಂದ 5ಜಿ ಗೆ ಮುನ್ನಡೆಯುತ್ತಿದ್ದೇವೆ. 1960 ರಲ್ಲಿದ್ದ ಆರ್ಪಾನೆಟ್ ನಿಂದ ಈಗ ನಾವು ಬಳಸುತ್ತಿರುವ ಟಿ.ಸಿ.ಪಿ/ಐ.ಪಿ ಮಾಡೆಲ್ ಗೆ ಅಪ್ಗ್ರೇಡ್ ಮಾಡಿದವರು ರಾಬರ್ಟ್ ಡಬ್ಲ್ಯೂ. ಟೇಲರ್, ರಾಬರ್ಟ್ ಖ್ಹಾನ್, ವಿಂಟನ್ ಸೆರ್ಫ್
ಜಗತ್ತಿನಾದ್ಯಂತ ಒಂದೇ ರೀತಿಯ ಸಂಪರ್ಕ ಇರಬೇಕೆಂದರೆ ಅದಕ್ಕೆ ನೀತಿ - ನಿಯಮ ರೂಪಿಸಲು ಒಂದು ಸಂಸ್ಥೆಯೂ ಇರಬೇಕಲ್ಲವಾ.. ಇಂಟರ್ನೆಟ್ ಯಾವುದೇ ಕೇಂದ್ರೀಯ ಆಡಳಿತ ಮಂಡಳಿ ಇಲ್ಲದೇ ಕಾರ್ಯ ನಿರ್ವಹಿಸುತ್ತದೆ.
ಮೊಬೈಲ್ ನಲ್ಲಿ ನೆಟ್ವರ್ಕ್ ಸೆಟ್ಟಿಂಗ್ ಗಳಲ್ಲಿ ನೀವು ಗಮನಿಸಿರಬಹುದು ಐ.ಪಿ.ವಿ4 ಅಥವಾ ಐ.ಪಿ.ವಿ6 ಎನ್ನುವ ಕೋರ್ ಪ್ರೋಟೋಕಾಲ್ ಗಳೂ ಇರುತ್ತವೆ. ಇವುಗಳ ಪ್ರಮಾಣೀಕರಣ ನೋಡಿಕೊಳ್ಳುವುದು ಇಂಟರ್ನ್ಯಾಷನಲ್ ಇಂಜಿನಿಯರಿಂಗ್ ಟಾಸ್ಕ್ ಫೋರ್ಸ್ ನ ಚಟುವಟಿಕೆ.
ಜಾಗತಿಕ ಇಂಟರ್ನೆಟ್ ನ ಏಕೈಕ ಸಮನ್ವಯ ಸಂಸ್ಥೆಯೊಂದಿದೆ. ಅದೇ ಐ.ಸಿ.ಎ.ಎನ್.ಎನ್. ಇದನ್ನೇ ಇಂಟರ್ನೆಟ್ ಕಾರ್ಪೊರೇಷನ್ ಎನ್ನುತ್ತೇವೆ. ಸ್ಥಳಗಳನ್ನು ನಿಯೋಜಿಸಿದ ಹೆಸರು , ಸಂಖ್ಯೆಗಳನ್ನು ನೀಡುವುದು. ವೆಬ್ಸೈಟ್ ಗಳ ಡೊಮೈನ್ ಹೆಸರುಗಳು, ಐ.ಪಿ ವಿಳಾಸ, ಪ್ರೋಟೋಕಾಲ್ ನ ಅಪ್ಲಿಕೇಶನ್ ನಂಬರ್ ಇದೆಲ್ಲವನ್ನೂ ಜಾಗತಿಕವಾಗಿ ಏಕೀಕೃತಗೊಳಿಸುವುದು ಇಂಟರ್ನೆಟ್ ಕಾರ್ಪೊರೇಷನ್. ಇದಕ್ಕೆ 5 ಪ್ರಾದೇಶಿಕ ಕೇಂದ್ರಗಳಿವೆ.
ಆಫ್ರಿಕಾದಲ್ಲಿ ಆಫ್ರಿಕನ್ ನೆಟ್ವರ್ಕ್ ಮಾಹಿತಿ ಕೇಂದ್ರವಿದೆ. ಉತ್ತರ ಅಮೆರಿಕಾದಲ್ಲಿ ಅಮೆರಿಕನ್ ರಿಜಿಸ್ಟ್ರಿ ಫಾರ್ ಇಂಟರ್ನೆಟ್ ನಂಬರ್ ಇದೆ. ಏಷ್ಯಾ-ಫೆಸಿಪಿಕ್ ಗಾಗಿ ಏಷ್ಯಾ-ಫೆಸಿಪಿಕ್ ಮಾಹಿತಿ ಕೇಂದ್ರವಿದೆ. ಲ್ಯಾಟಿನ್ ಅಮೆರಿಕನ್ ಹಾಗೂ ಕೆರಿಬಿಯನ್ ಗಾಗಿ ಲ್ಯಾಕ್ ನಿಕ್ ಇದೆ. ಯುರೋಪ್ ನಲ್ಲಿ ರೈಪ್ ನೆಟ್ವರ್ಕ್ ಕೋ-ಆರ್ಡಿನೇಷನ್ ಸೆಂಟರ್ ಇದೆ. ಇದಿಷ್ಟೂ ಇಂಟರ್ನೆಟ್ ಬಳಸುವ ಮೂಲದ ಕುರಿತಾದರೆ ನಾವು ಇಂಟರ್ನೆಟ್ ಬಳಸುವ ಡಿವೈಸ್ ಗಳ ಕುರಿತು ತಿಳಿಯೋಣ.
ನಾವು ಇಂಟರ್ನೆಟ್ ಬಳಸುವ ಪ್ರತಿಯೊಂದು ಲ್ಯಾಪ್ಟಾಪ್ ಅಥವಾ ಪಿ.ಸಿ ಗಳಿಗೂ ಒಂದೊಂದು ಯುನಿಕ್ ನಂಬರ್ ಇರುತ್ತದೆ. ಅದೇ ಐ.ಪಿ.ಅಡ್ರೆಸ್. ನಮಗೆ ಆಧಾರ್ ಅಥವಾ ಪ್ಯಾನ್ ನಂಬರ್ ಇರುತ್ತದಲ್ಲಾ ಹಾಗೆ. ಸ್ಟ್ಯಾಟಿಕ್, ಡೈನಮಿಕ್, ಪ್ರೈವೇಟ್ ಹಾಗೂ ಪಬ್ಲಿಕ್ ಐ.ಪಿ ಅಡ್ರೆಸ್ ಗಳೆಂಬ ನಾಲ್ಕು ರೀತಿ ಇದೆ. ಮೊದಲೆಲ್ಲಾ ಹೆಚ್ಚಿನ ಸೈಬರ್ ಕ್ರೈಮ್ ಗಳ ಪತ್ತೆ ಆಗುತ್ತಿದ್ದದ್ದು ಈ ಐ.ಪಿ. ಅಡ್ರೆಸ್ ನ ಜಾಡು ಹಿಡಿದು. ಈಗ ಕ್ರಿಮಿನಲ್ ಗಳು ಕೂಡಾ ಬುದ್ಧಿವಂತರಾಗಿದ್ದಾರೆ. ನಿಜವಾದ ಐ.ಪಿ. ಅಡ್ರೆಸ್ ಪತ್ತೆಯಾಗದಂತೆಯೂ ಸೈಬರ್ ಕ್ರೈಮ್ ಮಾಡುತ್ತಾರೆ. ಈ ಐ.ಪಿ ಅಡ್ರೆಸ್ ಹೇಗಿರುತ್ತದೆ ಗೊತ್ತಾ..??
196. 89. 8. 90
ಹೀಗೆ ನಾಲ್ಕು ಅಂಕಿಗಳಿರುತ್ತವೆ. ಪ್ರತಿಯೊಂದು ಅಂಕಿಯ ರೇಂಜ್ ಸಹಾ 0 ಯಿಂದ 255.
0. 0. 0. 0 ಯಿಂದ ಶುರುವಾಗಿ 255. 255. 255. 255 ರ ವರೆಗೂ ಈ ಸಂಖ್ಯೆಗಳಿರುತ್ತವೆ. ನಮ್ಮ ಫೋನ್ ನಂಬರ್ ಗಳು ಇರುತ್ತವಲ್ಲಾ ಹಾಗೆ.
ನಿಮ್ಮ ಕಂಪ್ಯೂಟರ್ ಅಥವಾ ಲ್ಯಾಪ್ಟಾಪ್ ನಲ್ಲಿ ನೀವೇ ಈ ಐ. ಪಿ ವಿಳಾಸವನ್ನು ತಿಳಿಯಬಹುದು. ಹೇಗೆ ಗೊತ್ತೇ ? ವಿಂಡೋಸ್ ನ ಸ್ಟಾರ್ಟ್ ಬಟನ್ ಗೆ ಹೋಗಿ ನೆಟ್ವರ್ಕ್ ಎಂದು ಸರ್ಚ್ ಮಾಡಿ. ನಂತರ ಸ್ಟೇಟಸ್ ಅನ್ನು ಕ್ಲಿಕ್ ಮಾಡಿ. ಅದಾದ ನಂತರ ಪ್ರಾಪರ್ಟಿಸ್ ಅನ್ನು ಕ್ಲಿಕ್ ಮಾಡಿದಲ್ಲಿ ಅಲ್ಲಿ ನಿಮ್ಮ ಐ.ಪಿ ಅಡ್ರೆಸ್ ಕಾಣಿಸುತ್ತದೆ.
ಇಂಟರ್ನೆಟ್ ನಲ್ಲಿ ಬರುವ ಜಾಹೀರಾತುಗಳು ಜನರನ್ನು ಹೆಚ್ಚು ತಲುಪುತ್ತವೆ. ಈಗ ಎಂದಲ್ಲ 2000 ರಲ್ಲಿಯೇ ಅಮೇರಿಕಾದಲ್ಲಿ ಈ ಕುರಿತು ಸಂಶೋಧನೆ ನಡೆದು ಇದು ಸಾಬೀತಾಗಿದೆ ಸಹಾ. ಆ ಸಮಯದಲ್ಲಿ ಇಂಟರ್ನೆಟ್ ನ ಅತಿ ದೊಡ್ಡ ಅಡ್ವರ್ಟೈಸಿಂಗ್ ಕಂಪನಿ "ಡಬಲ್ ಕ್ಲಿಕ್" ಜನರ ಪ್ರೈವೆಸಿಯನ್ನು ಉಲ್ಲಂಘಿಸಿದ್ದು ಸಾಬೀತಾಗಿತ್ತು. ಅದು ಹೇಗೆಂದರೆ 'ಕುಕೀಸ್'ಗಳನ್ನು ಬಳಸಿ ಬಳಕೆದಾರರ ಮಾಹಿತಿಗಳನ್ನು ತನ್ನ ಹಾರ್ಡ್ ಡ್ರೈವ್ ಗಳಲ್ಲಿ ಸ್ಟೋರ್ ಮಾಡಿತ್ತು.
ಇಂಟರ್ನೆಟ್ ನ 'ಕುಕೀಸ್'ಗಳ ಕುರಿತು ತಿಳಿದಿದೆಯಾ ? ಈಗಲೂ ನೀವು ಇಂಟರ್ನೆಟ್ ನಲ್ಲಿ ಸರ್ಚ್ ಮಾಡುವಾಗ ಕೆಲವು ವೆಬ್ಸೈಟ್ ಗಳು ಕುಕೀಸ್ ಗಳನ್ನು ಅಕ್ಸೆಪ್ಟ್ ಮಾಡುತ್ತೀರಾ ಎಂದು ಕೇಳುತ್ತವೆ. ನಾವೂ ಸುಮ್ಮನೆ ಅಕ್ಸೆಪ್ಟ್ ಕೊಡುತ್ತೇವೆ. ನೀವು ಗಮನಿಸಿದರೆ ಅದರಲ್ಲಿ ಅವರು ಮಾಹಿತಿ ಟ್ರ್ಯಾಕ್ ಮಾಡುವ ಕುರಿತು ಹೇಳಿರುತ್ತಾರೆ. ಅದು ಒಂದು ರೀತಿಯಲ್ಲಿ ಸಿಗರೇಟ್ ಪ್ಯಾಕ್ ಮೇಲೆ ಸ್ಮೋಕಿಂಗ್ ಈಸ್ ಇಂಜೂರಿಯಸ್ ಟು ಹೆಲ್ತ್ ಎಂದು ಬರೆದಿರುವಂತೆ.
ಕುಕೀಸ್ ಗಳೆಂದರೆ ಮತ್ತೇನೂ ಅಲ್ಲ ನಮ್ಮ ಎಲೆಕ್ಟ್ರಾನಿಕ್ ಹೆಜ್ಜೆ ಗುರುತುಗಳನ್ನು ಅಂದರೆ ನಾವು ಇಂಟರ್ನೆಟ್ ನಲ್ಲಿ ನೋಡಿದ್ದು, ಹುಡುಕಿದ್ದು, ಕೇಳಿದ್ದು, ಬಳಸಿದ್ದು ಎಲ್ಲವನ್ನೂ ತನ್ಮೂಲಕ ಮಾನಿಟರ್ ಮಾಡುತ್ತವೆ. ಇದು ಡಿಜಿಟಲ್ ಫೂಟ್ ಪ್ರಿಂಟ್ ಗೆ ಉದಾಹರಣೆ.
ಇಂಟರ್ನೆಟ್ ನಲ್ಲಿಯೂ ನಮ್ಮ ಹೆಜ್ಜೆ ಗುರುತುಗಳಿವೆ. ಅದನ್ನು ಗೊತ್ತಾಗದಂತೆ ಮಾಡುವ ತಂತ್ರಗಳು ಇದೆ. ಇವುಗಳ ಸ್ಕ್ಯಾಮ್ ಕೂಡಾ ಇದೆ. ಡಿಜಿಟಲ್ ಫೂಟ್ ಪ್ರಿಂಟ್ ಹಾಗೂ ಡಾರ್ಕ್ ವೆಬ್ ನ ಅನಾವರಣ ಮುಂದಿನ ವಾರದ 'ಟೆಕ್- ಟಾಕ್'ನಲ್ಲಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ