ಗುರುವಾರ, ಏಪ್ರಿಲ್ 16, 2026

2ಜಿ ಯಿಂದ 4ಜಿ ವರೆಗೂ.. ( ಟೆಕ್ - ಟಾಕ್ - 23)


ಎಷ್ಟು ದಿನ ಬರೀ 1ಜಿ ಬಳಸಿಯೇ ಇರಲಿಕ್ಕಾಗುತ್ತದೆ. ಅಲ್ಲದೇ, 1ಜಿ ಯಲ್ಲಿ ಒಂದಿಷ್ಟು ಅನಾನುಕೂಲಗಳೂ ಇದ್ದವಲ್ಲಾ.. ಹೆಚ್ಚು ಕಡಿಮೆ 1 ಕೆ.ಜಿ ತೂಕದ ಆಗಿನ ಮೊಬೈಲ್ ಅನ್ನು ಬಳಸಲು ಬರೀ 30 ನಿಮಿಷ ಮಾತನಾಡಲು 10 ಗಂಟೆ ಚಾರ್ಜ್ ಮಾಡಬೇಕೆಂದರೆ ಸುಲಭವೇ ? ಅದೂ ಬರೀ ವಾಯ್ಸ್ ಕಾಲ್ ಗೆ. ಈಗ ಕೀ ಪ್ಯಾಡ್ ಮೊಬೈಲ್ ಬಳಸುವವರನ್ನೇ ಒಂದು ರೀತಿ ನೋಡುವ ಕಾಲ ಇದು.  ಅಲ್ಲದೆ, 1ಜಿ ನೆಟ್ವರ್ಕ್ ಬಳಸುವವರು ಮಾತನಾಡುವಾಗ ಕರೆಯ ಗುಣಮಟ್ಟ ಸಹಾ ಉತ್ತಮವೇನಿರಲಿಲ್ಲ. ಅಲ್ಲದೇ, ಆ ಕರೆಗಳು ಸುರಕ್ಷಿತವಾಗಿಯೂ ಇರುತ್ತಿರಲಿಲ್ಲ. ಎಫ್.ಎಂ ಡೀಮಾಡ್ಯುಲೇಟರ್ ಬಳಸಿ ಆರಾಮವಾಗಿ ಕರೆಯನ್ನು ಕೇಳಿಸಿಕೊಳ್ಳಬಹುದಾಗಿತ್ತು. ಆಗ ನಿಯಮಿತವಾದ ಬಳಕೆದಾರರು ಇದ್ದಂತೆ ನೆಟ್ವರ್ಕ್ ವ್ಯಾಪ್ತಿ ಕೂಡಾ ಒಂದು ಲಿಮಿಟ್ ನಲ್ಲಿತ್ತು. ರೋಮಿಂಗ್ ಕೂಡಾ ಸಾಧ್ಯವಾಗುತ್ತಿರಲಿಲ್ಲ. 


ಇದೆಲ್ಲದಕ್ಕೂ ಉತ್ತರವಾಗಿ ಬಂದದ್ದು ಇದರ ಮುಂದಿನ ಜನರೇಷನ್ 2ಜಿ. 1991 ರಿಂದ ಶುರುವಾಯಿತು ನೋಡಿ 2ಜಿ ಕಾಲ. ಮೊದಲು ಇದನ್ನು ಬಳಸಿದವರು ಫಿನ್ ಲ್ಯಾನ್ಡ್ ನವರು. ಇದರ ಜೊತೆಯಲ್ಲಿ ಮೊಬೈಲ್ ಗಳ ವಿನ್ಯಾಸ ಬದಲಾಯಿತು. ಗಾತ್ರ ಮತ್ತು ತೂಕದಲ್ಲಿ ಚಿಕ್ಕದಾದ ಹಾಗೂ ಬ್ಯಾಟರಿ ಹೆಚ್ಚು ಕಾಲ ಬರುವಂತಹಾ ಮೊಬೈಲ್ ಫೋನ್ ಗಳು ಬಳಕೆಗೆ ಬಂದವು. ಈ ಹೊತ್ತಿನಲ್ಲೇ ನೋಕಿಯಾದ "ಕ್ಯಾಂಡಿ ಬಾರ್" ಫೋನ್ ಗಳು ಹಾಗೂ ನೋಕಿಯಾ 3210 ಫೋನ್ ಗಳು ಹೆಚ್ಚೆಚ್ಚು ಮಾರಾಟವಾದವು. ಮೊಬೈಲ್ ಬಳಕೆಯೇ ವಿರಳವಾಗಿದ್ದ ಕಾಲದಲ್ಲಿ ಈ 2ಜಿ ದೆಸೆಯಿಂದ ಸುಮಾರು ಹದಿನಾರು ಕೋಟಿ ನೋಕಿಯಾ 3210 ಮೊಬೈಲ್ ಗಳು ಮಾರಾಟವಾದವು ಎಂದು ಲೆಕ್ಕ ಹೇಳಿತು ನೋಕಿಯಾ. ಅಷ್ಟು ಕ್ರೇಜ್ ಹುಟ್ಟಿಸಿದ್ದ 2ಜಿ ಯಲ್ಲಿ ಅಂತಹದ್ದು ಏನಿತ್ತು ಗೊತ್ತೇ ?


ವಾಟ್ಸಾಪ್ ಬರುವ ಮುನ್ನ ಮೆಸೇಜ್ ಮಾಡಲು ಒಂದು ಕ್ರೇಜ್ ಇರುತ್ತಿತ್ತಲ್ಲ. ದಿನಕ್ಕೆ 100 ಮೆಸೇಜ್ ಗಳ ಹಾಗೆ ಎಸ್.ಎಂ.ಎಸ್ ಗಳು ಸಿಕ್ಕರೂ ಆ ಕೋಟಾ ಖಾಲಿಯಾಗಿ ಹೋಗುತ್ತಿತ್ತಲ್ಲಾ.. ಈ ಎಸ್.ಎಂ.ಎಸ್ ಎನ್ನುವ ಟೆಕ್ಸ್ಟ್ ಮೆಸೇಜ್ ಬಳಕೆ ಶುರುವಾದದ್ದೇ 2ಜಿ ಯಿಂದಾಗಿ. ಇಲ್ಲಿನ ವಾಯ್ಸ್ ಕಾಲ್ ಗಳು ಡಿಜಿಟಲ್ ರೂಪದಲ್ಲಿ ಇದ್ದುದರಿಂದ ಇವುಗಳನ್ನು ಕದ್ದು ಕೇಳುವುದು ಅಥವಾ ಡಿಕೋಡ್ ಮಾಡುವುದು ಸುಲಭದ ಕೆಲಸವಾಗಿರಲಿಲ್ಲ. ವಾಯ್ಸ್ ಕಾಲ್ ನ ಕ್ವಾಲಿಟಿ ಸುಧಾರಿಸಿತ್ತು. ಅಲ್ಲದೇ, ಕ್ವಾಲ್ಕಮ್ ನವರು ಕೋಡ್ ಡಿವಿಷನ್ ಮಲ್ಟಿಪಲ್ ಆಕ್ಸೆಸ್ ( ಸಿ.ಡಿ.ಎಂ.ಎ) ಎನ್ನುವ ಟೆಕ್ನಾಲಜಿ ಬಳಸಿದ್ದರಿಂದ ಒಂದೇ ಕರೆಯಲ್ಲಿ ಬಹಳಷ್ಟು ಜನರನ್ನು ಕನೆಕ್ಟ್ ಮಾಡಬಹುದಾದ ಕಾನ್ಫರೆನ್ಸ್ ಕಾಲ್ ಸೌಲಭ್ಯ ದೊರೆಯಿತು. ಇಂಟರ್ನಲ್ ರೋಮಿಂಗ್ ಸೌಲಭ್ಯ ಲಭ್ಯವಾಯಿತು. ಆ ಕಾಲಕ್ಕೆ ಹೆಚ್ಚು ಸ್ಪೀಡ್ ಎನ್ನಿಸಿದ್ದ ಆದರೆ ಕಡಿಮೆ ಡೇಟಾ ರೇಟ್ ಎನ್ನಿಸುವ ಇಂಟರ್ನೆಟ್ ಸೌಲಭ್ಯ ಸಿಕ್ಕಿದ್ದು 2ಜಿ ಯಲ್ಲಿಯೇ.. ಸ್ಪೀಡ್ 14 ರಿಂದ 64 ಕೆಬಿ ಪರ್ ಸೆಕೆಂಡ್ ಇತ್ತು.


2ಜಿ ಸೌಲಭ್ಯ ಸುಧಾರಿಸುತ್ತಿತ್ತು. ಈ ಸುಧಾರಿಸುತ್ತಿದ್ದ 2ಜಿ ತಕ್ಷಣಕ್ಕೆ 3ಜಿ ಗೆ ನೆಗೆಯಲಿಲ್ಲ. 2ಜಿ ಯಿಂದ 2.5ಜಿ ಹಾಗೂ 2.75 ಜಿ ಗೆ ಬಂದು ನಂತರ 3ಜಿ ಆಗಿ ಬದಲಾಯಿತು. 2001 ರಿಂದ 2004 ರ ವರೆಗೂ 2.5ಜಿ ಯಿಂದ 2.75ಜಿ ಕಾಲ. ಈ ಸಮಯದಲ್ಲಿ ಇಂಟರ್ನೆಟ್ ಸ್ಪೀಡ್ ಅನ್ನು ಹೆಚ್ಚಿಸಲು ವಿವಿಧ ಟೆಕ್ನಾಲಜಿಗಳ ಬಳಕೆ ಜಾರಿಗೆ ಬಂದವು. ಮೊದಲಿಗೆ ಜಿ.ಪಿ.ಆರ್.ಎಸ್ ನಂತರ ಎಡ್ಜ್ ಮತ್ತು ಸಿ.ಡಿ.ಎಂ.ಎ ಟೆಕ್ನಾಲಜಿಗಳನ್ನು ಬಳಸಿದರು. ಇವುಗಳಿಂದಾಗಿ ಸೆಕೆಂಡಿಗೆ ಕ್ರಮೇಣ 171 ಕೆ.ಬಿ, 384 ಕೆ.ಬಿ ನಂತರ 473 ಕೆಬಿ ವರೆಗೂ ಡೇಟಾ ಸ್ಪೀಡ್ ಏರಿಕೆಯಾಯಿತು. 


2004 ರಿಂದ ಬಂದದ್ದೇ 3ಜಿ. ಇಂಟರ್ನೆಟ್ ಯುಗದಲ್ಲಿ ಅಧಿಕೃತವಾಗಿ ಮೂರನೇ ಜನರೇಶನ್ ಶುರುವಾಯಿತು. ಆದರೆ, 2001 ರಿಂದಲೇ ಡೊಕೊಮೋ ಜಪಾನ್ ನಲ್ಲಿ ತನ್ನ ಸೇವೆಗಳನ್ನು ಅಪ್ ಗ್ರೇಡ್ ಮಾಡಲು ಶುರು ಮಾಡಿತ್ತು. ಅಧಿಕೃತವಾಗಿ 3ಜಿ ಸೇವೆಯನ್ನು ಸಾರ್ವಜನಿಕರಿಗೆ ಮೊದಲು ಕೊಟ್ಟದ್ದು ಜಪಾನ್. 3ಜಿ ಯ ಉದ್ದೇಶ ಏನಾಗಿತ್ತೆಂದರೆ ಗುಣಮಟ್ಟದ ವಾಯ್ಸ್ ಕಾಲ್ ಮತ್ತು ಡೇಟಾ ಕೆಪ್ಯಾಸಿಟಿಯನ್ನು ನೀಡುವುದು. ಹಾಗೂ ಬಹಳ ಅಪ್ಲಿಕೇಶನ್ ಗಳನ್ನು ಬಳಸಲು ಅನುವಾಗುವಂತೆ ಕಡಿಮೆ ದರದಲ್ಲಿ ಇಂಟರ್ನೆಟ್ ಅನ್ನು ಒದಗಿಸುವುದು. ಆದರೆ, ಇದರಲ್ಲಿ ಎಷ್ಟು ಸಾಧ್ಯವಾಯಿತು ? ನೋಡೋಣ ಬನ್ನಿ.


2ಜಿ ಗೆ ಹೋಲಿಕೆ ಮಾಡಿದರೆ ಈಗ ಅದರ 4 ಪಟ್ಟು ವೇಗವಾಗಿತ್ತು 3ಜಿ ಇಂಟರ್ನೆಟ್. ಒಂದು ಸೆಕೆಂಡಿಗೆ 2 ಎಂ.ಬಿ ಗಳಷ್ಟು ವೇಗದಲ್ಲಿ ಡೇಟಾ ಟ್ರಾನ್ಸ್ಫರ್ ಆಗುತ್ತಿತ್ತು. ಬೇರೆ ದೇಶಗಳಲ್ಲಿ 3ಜಿ ವೇಗ ಇಷ್ಟಿದ್ದರೆ ಕೆನಡಾದಲ್ಲಿ ಮಾತ್ರ ಡೇಟಾ ಒಂದು ಸೆಕೆಂಡಿಗೆ 6 ಎಂ.ಬಿ ಗಳಷ್ಟಿತ್ತು. ಈ ಸಮಯದಲ್ಲಿ "ಕ್ಯಾಂಡಿ ಬಾರ್" ಫೋನ್ ಗಳ ಜೊತೆಗೆ "ಫ್ಲಿಪ್ ಫೋನ್"ಗಳ ಹವಾ ಶುರುವಾಯಿತು. ಬ್ಲ್ಯಾಕ್ ಬೆರ್ರಿ ಹಾಗೂ ಆಪಲ್ ಐಫೋನ್ ಗಳು ಶುರುವಾಗಿ ಪ್ರಚಲಿತವಾಗಿದ್ದು ಈ ಸಮಯದಲ್ಲಿಯೇ. 2002 ರಲ್ಲಿ ಬಿಡುಗಡೆಯಾದ ಬ್ಲ್ಯಾಕ್ ಬೆರ್ರಿ 5810 ಮಾಡೆಲ್ ಬ್ಲ್ಯಾಕ್ ಬೆರ್ರಿಯ ಮೊದಲ ಫೋನ್. ಫೋನ್ ಗಳ ಜೊತೆಗೆ ನೆಟ್ವರ್ಕ್ ಕೂಡಾ ಸ್ಟ್ರಾಂಗ್ ಆಯಿತು. ಇಂಟರ್ ನ್ಯಾಷನಲ್ ರೋಮಿಂಗ್ ಸೇವೆ ಕೂಡಾ ಶುರುವಾಯಿತು. ಹೆಚ್ಚಾದ ಇಂಟರ್ನೆಟ್ ವೇಗದಿಂದ ವೀಡಿಯೋ ಸ್ಟ್ರೀಮಿಂಗ್, ವೀಡಿಯೋ ಕಾನ್ಫರೆನ್ಸ್ ಗಳು, ವೀಡಿಯೋ ಚಾಟ್ ಗಳು ಹೆಚ್ಚಾದವು. ಇಂಟರ್ನೆಟ್ ಸ್ಪೀಡ್ ಹೆಚ್ಚಾಗಿದ್ದುದರಿಂದ ತಡೆಯಿಲ್ಲದ ಇಂಟರ್ನೆಟ್ ಇದ್ದಾಗ ಇವುಗಳು ರಿಯಲ್ ಎಂಬ ಭಾವ ಹುಟ್ಟಿಸತೊಡಗಿದವು. 


3ಜಿ ಯಿಂದ 3.5ಜಿ ನಂತರ 3.75ಜಿ ಕೂಡಾ ಶುರುವಾದವು. 2006 ರಿಂದ 2010 ರ ವರೆಗೂ ಇವುಗಳದ್ದೇ ಕಾಲ. ಸೆಕೆಂಡಿಗೆ 2 ಎಂ.ಬಿ ಇದ್ದದ್ದು ಸೆಕೆಂಡಿಗೆ 14.4 ಎಂ.ಬಿ ಸಿಗುವಷ್ಟು ಡೇಟಾ ಸ್ಪೀಡ್ ಹೆಚ್ಚಾಯಿತು. ಇದಕ್ಕಾಗಿ ಈ ಜನರೇಶನ್ ಗಳಲ್ಲಿ ಹೈ ಸ್ಪೀಡ್ ಅಪ್ ಲಿಂಕ್ ಹಾಗೂ ಡೌನ್ ಲಿಂಕ್ ಪ್ಯಾಕೆಟ್ ಗಳನ್ನು ಬಳಸಲಾಯಿತು. 


ಎಷ್ಟೆಲ್ಲಾ ಬದಲಾವಣೆಗಳಾದರೂ 3ಜಿ ಬಳಕೆಯ ಮೂಲ ಉದ್ದೇಶಕ್ಕೂ ಇದರ ಬಳಕೆಗೂ ಬಹಳ ವ್ಯತ್ಯಾಸವಿದ್ದಿತು. ಅಲ್ಲದೇ, ಇವುಗಳು ಅನಾನುಕೂಲಗಳು ಎಂದೂ ಪರಿಗಣಿಸಲ್ಪಟ್ಟವು. 1ಜಿ ಯಿಂದ 2ಜಿ ಬದಲಾವಣೆಗೆ ಸಿಮ್ ಬದಲಾವಣೆ ಮಾಡದಿದ್ದರೂ ಆಗುತ್ತಿತ್ತು. ಆದರೆ, ಈಗ 3ಜಿ ಗೆ ಹೊಂದಿಕೊಳ್ಳಲು ಸಿಮ್ ಕಾರ್ಡ್  ಅಪ್ಗ್ರೇಡ್ ಮಾಡಿ ಬದಲಾಯಿಸಿ ಎಂದರು. ಸಿಮ್ ಬದಲಾವಣೆ ಜೊತೆಗೆ ಸ್ಮಾರ್ಟ್ ಫೋನ್ ಬಳಕೆಯ ಕ್ರೇಜ್ ಹೆಚ್ಚಿತು. ಈ ಸಂದರ್ಭದಲ್ಲಿ ಸ್ಮಾರ್ಟ್ ಫೋನ್ ಗಳ ಬೆಲೆ ಏರಿಕೆಯಾಗಿದ್ದಿತು. ಇಷ್ಟೇ ಅಲ್ಲ.. ಬಳಕೆದಾರರ ಹಾಗೆಯೇ ನೆಟ್ವರ್ಕ್ ಪ್ರೊವೈಡರ್ ಗಳಿಗೂ ತೊಂದರೆಯಾಗಿದ್ದಿತು. ಈ ಸ್ಪೆಕ್ಟ್ರಮ್ ನ ಲೈಸೆನ್ಸ್ ಗಳು ದುಬಾರಿಯಾಗಿದ್ದವು. ಇದನ್ನು ಅಳವಡಿಸಲು ಬಳಸುವ ಉಪಕರಣಗಳು, ಇನ್ಫ್ರಾಸ್ಟ್ರಕ್ಚರ್ ಗಳು ಕೂಡಾ ದುಬಾರಿಯಾದವು. ಕಡಿಮೆ ದರದಲ್ಲಿ ಇಂಟರ್ನೆಟ್ ಒದಗಿಸಬೇಕೆನ್ನುವ 3ಜಿಯ ಉದ್ದೇಶ ವಿಫಲವಾಯಿತು. 


ಬೇರೆ ದೇಶಗಳಲ್ಲಿ 3ಜಿ ಯಲ್ಲಿ ಇಷ್ಟು ಬದಲಾವಣೆಗಳಾಗುತ್ತಿದ್ದಾಗ ನಮ್ಮ ಭಾರತದಲ್ಲಿ 2ಜಿ ಸ್ಪೆಕ್ಟ್ರಮ್ ಹಗರಣ ಶುರುವಾಗಿತ್ತು. ಈ ಹಗರಣದಿಂದ ಉಂಟಾದ ನಷ್ಟವೆಷ್ಟು ಗೊತ್ತೇ ? 1.76 ಲಕ್ಷ ಕೋಟಿ ರೂಪಾಯಿಗಳು. ಆದರೆ, ನೋ-ಲಾಸ್ ಥಿಯರಿಯ ಪ್ರಕಾರ ಕೊನೆಗೆ ಇದರಿಂದ ಏನೂ ನಷ್ಟವಾಗಲಿಲ್ಲ ಎಂದು ಹೇಳಿದ್ದೂ ಇದೆ. ಪರಾಮರ್ಶೆ ಹಾಗೂ ತೀರಾ ಒಳನೋಟ ಹಾಗೂ ಈ ಕೇಸಿನ ವಿವರಗಳನ್ನು ಹೆಚ್ಚೇನೂ ವಿವರಿಸದೆ ಈ 2ಜಿ ಸ್ಪೆಕ್ಟ್ರಮ್ ಹಗರಣದಲ್ಲಿ ಆಗಿದ್ದೇನು ಎಂಬುದನ್ನು ಟೆಕ್ನಿಕಲ್ ಆಗಿ ಹೇಳಿಬಿಡುತ್ತೇನೆ. 2007 ರಿಂದ 2009 ರ ಸಮಯದವರೆಗೂ ಟೆಲಿಕಾಂ ಮಿನಿಸ್ಟರ್ ಆಗಿದ್ದ ಎ.ರಾಜಾ 2008 ರಲ್ಲಿ 122 ಕಂಪೆನಿಗಳಿಗೆ 2ಜಿ ಸ್ಪೆಕ್ಟ್ರಮ್ ಹಂಚಿಕೆಗೆ ಒಪ್ಪಿಗೆ ನೀಡುತ್ತಾರೆ. ಅರೆ... ಇದರಲ್ಲೇನಿದೆ ಎಂದಿರಾ ? ಇಲ್ಲಿಂದಲೇ ಕೆಲವು ಇರಿಸುಮುರಿಸುಗಳು ಶುರುವಾದದ್ದು. 2ಜಿ ಸ್ಪೆಕ್ಟ್ರಮ್ ಹಂಚಿಕೆಗೆ ಅಪ್ಲೈ ಮಾಡಲು 01.10.2007 ರ ವರೆಗೂ ಇದ್ದ ದಿನಾಂಕವನ್ನು 05.09.2007 ಕ್ಕೆ ಇಳಿಸಿಬಿಟ್ಟರು. ಹೀಗಾಗಿ ಎಷ್ಟೋ ಕಂಪೆನಿಗಳು ಅದಕ್ಕೆ ಅಪ್ಲೈ ಮಾಡಲು ಸಾಧ್ಯವಾಗಲೇ ಇಲ್ಲ. ನಂತರದಲ್ಲಿ ಆ ಪ್ರಾಜೆಕ್ಟ್ ಸಿಕ್ಕ ಕಂಪೆನಿಗಳು ಹಣ ಕಟ್ಟಲು ಹಾಗೂ ಡಾಕ್ಯುಮೆಂಟ್ ಸಬ್ಮಿಟ್ ಮಾಡಲು 10.01.2008 ರಂದು ಕೆಲವೇ ಗಂಟೆಗಳನ್ನು ನೀಡಿದರು. ಮೊದಲೇ ಈ ಕುರಿತು ಮಾಹಿತಿ ಹೊಂದಿದ್ದವರು ಮಾತ್ರ ಇಲ್ಲಿ ಹಣ ಕಟ್ಟುವಂತಾಯಿತು. 16.11.2010 ರಂದು ಆಡಿಟರ್ ನೀಡಿದ ವರದಿಯ ಪ್ರಕಾರ ಸುಮಾರು 25 ದಿನಗಳ ಮೊದಲೇ ಪ್ರವೇಶಾತಿ ದಿನಾಂಕವನ್ನು ಕಡಿತಗೊಳಿಸಿದ್ದರು. ಅಲ್ಲದೇ, ಆ 2ಜಿ ಸ್ಪೆಕ್ಟ್ರಮ್ ಹಂಚಿಕೆಗೆ ನಿಗದಿಯಾಗಿದ್ದ ಹಣ 2008 ರ ಮಾರ್ಕೆಟ್ ರೇಟ್ ಪ್ರಕಾರವಲ್ಲ. 2001 ರಲ್ಲಿ ನಿಗದಿಯಾಗಿದ್ದ ದರದಲ್ಲಿ. ಅಷ್ಟೇ ಅಲ್ಲ, ಇಲ್ಲಿ ಸರಿಯಾದ ಆಕ್ಷನ್ ನಡೆದಿರಲಿಲ್ಲ. ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬಂತಾಗಿತ್ತು. ಟ್ರಾಯ್, ಕಾನೂನು ಸಚಿವಾಲಯ, ಹಣಕಾಸು ಸಚಿವಾಲಯ ಎಲ್ಲದರ ನಿಯಮಗಳನ್ನೂ ಮೀರಿ ಈ 122 ಕಂಪೆನಿಗಳಿಗೆ 2ಜಿ ಸ್ಪೆಕ್ಟ್ರಮ್ ಲೈಸೆನ್ಸ್ ನೀಡಿಯಾಗಿತ್ತು. ಟೈಮ್ಸ್ ಪತ್ರಿಕೆ ಇದನ್ನು ಜಗತ್ತಿನ ಎರಡನೇ ಅತ್ಯಂತ ದೊಡ್ಡ ಹಗರಣ ಎಂದು ವರದಿ ಮಾಡಿತು. ಈ ಹಗರಣದಲ್ಲಿ ಎ.ರಾಜಾ ಸೇರಿದಂತೆ 14 ಆರೋಪಿಗಳು ಹಾಗೂ 3 ಕಂಪೆನಿಗಳನ್ನು ಹೆಸರಿಸಲಾಯಿತು. ಈ ಪ್ರಕರಣ ಸಿ.ಬಿ.ಐ ಕೈ ಸೇರಿತು. ಇದಾದ ನಂತರದ್ದು ನಿಮಗೆ ತಿಳಿದೇ ಇದೆ.


ಎಲ್ಲಿ ಏನೇ ಹಗರಣಗಳಾದರೂ ಆವಿಷ್ಕಾರ ನಿಲ್ಲುವುದಿಲ್ಲ. ಅಥವಾ ಅದಕ್ಕೆ ಅಡ್ಡಿಯಾಗುವುದಿಲ್ಲ. ಎಲ್ಲೋ ಒಂದೆಡೆ ಈ ರೀತಿಯ ಘಟನೆ ನಡೆಯುತ್ತಿದ್ದರೂ ಕಾಲಚಕ್ರ ನಾಲ್ಕನೇ ಜನರೇಶನ್ ಇಂಟರ್ನೆಟ್ ಅನ್ನು ಸ್ವಾಗತಿಸಲು ಸಿದ್ಧವಾಗಿತ್ತು. ಅದೇ 4ಜಿ.


2009 ರ ಕೊನೆಯಲ್ಲಿ ಕಮರ್ಷಿಯಲ್ ಬಳಕೆಗಾಗಿ ನಾರ್ವೆಯಲ್ಲಿ 4ಜಿ ಯನ್ನು ಬಳಸಲಾಯಿತು ಎಂದು ಹೇಳಿದರೂ.. 2011 ರ ಮಧ್ಯದವರೆಗೂ ಅದನ್ನು 3.95ಜಿ ಎಂದೇ ಗುರುತಿಸಲಾಯಿತು. 4ಜಿ ಸ್ಪೀಡ್ ಇದ್ದದ್ದು ಒಂದು ಸೆಕೆಂಡಿಗೆ 12.5 ಎಂ.ಬಿ ಯಿಂದ 1 ಜಿ.ಬಿ ವರೆಗೂ. 2011 ರಲ್ಲಿ ಕೆನಡಾದಲ್ಲಿ ಮೊದಲ ಬಾರಿಗೆ ಎಲ್.ಟಿ.ಇ ( ಲಾಂಗ್ ಟರ್ಮ್ ಎವೆಲ್ಯೂಷನ್) ವೈರ್ ಲೆಸ್ ನೆಟ್ವರ್ಕ್ ಜಾರಿಗೆ ಬಂದಿತು. ನಂತರದ ದಿನಗಳಲ್ಲಿ ವಾಯ್ಸ್ ಓವರ್ ಎಲ್.ಟಿ.ಇ ಕೂಡಾ ಜಾರಿಗೆ ಬಂದಿತು. ಇವೆಲ್ಲದರಿಂದ ಸರಾಗವಾಗಿ ರಿಯಲ್ ಟೈಮ್ ನಲ್ಲಿ ಸ್ಟ್ರೀಮ್ ಆಗುತ್ತಿದ್ದ ವೀಡಿಯೋ ಕ್ವಾಲಿಟಿ ಹೆಚ್ಚಾಯಿತು. ಹೆಚ್.ಡಿ ವಿಡಿಯೋ ವಿಡಿಯೋ ಚಾಟ್ ಹೆಚ್ಚಳಕ್ಕೆ ದಾರಿಯಾಯಿತು. ಆನ್ಲೈನ್ ಗೇಮಿಂಗ್ ಹೆಚ್ಚಾಯಿತು. ಇದರ ಜೊತೆಗೆ ಮತ್ತೊಂದು ಬದಲಾವಣೆಯನ್ನೂ ಮಾಡಿಕೊಳ್ಳಬೇಕಾಗಿ ಬಂದಿತು.


2ಜಿ ಯಿಂದ 3ಜಿ ಗೆ ಕೇವಲ ಸಿಮ್ ಬದಲಾವಣೆ ಮಾಡಿದ್ದರೆ ಸಾಕಾಗುತ್ತಿತ್ತು. ಆದರೆ, 3ಜಿ ಯಿಂದ 4ಜಿ ಬದಲಾವಣೆಗೆ ಸ್ಮಾರ್ಟ್ ಫೋನ್ ಬದಲಾವಣೆ ಅವಶ್ಯಕವಾಯಿತು. ಈಗ 4ಜಿ ಯುಗವೂ ಮುಗಿದು ನಮ್ಮ ದೇಶದಲ್ಲಿ 5ಜಿ ಯುಗ ಶುರುವಾಗಿದೆ.


ನಮ್ಮ ದೇಶದಲ್ಲಿ 5ಜಿ ಕಾಲ. ಇದಕ್ಕಿಂತಲೂ ಮುಂದುವರಿದ ಜನರೇಶನ್ ಇದೆಯೇ ? 5ಜಿ ಹಾಗೂ 5ಜಿ ನಂತರ ಮುಂದೆ ಏನು ? 5ಜಿ ಗೂ ನಾವು ಮೊಬೈಲ್ ಬದಲಾಯಿಸಬೇಕಿದೆ. ಇದರ ಆಯ್ಕೆ ಹೇಗಿರಬೇಕು ? ಜೊತೆಗೆ, ಎಲ್ಲರಲ್ಲಿಯೂ ಮೂಡುವ ಇದೊಂದು ಪ್ರಶ್ನೆ.. ಅವರು ಹೇಳುವಷ್ಟೇ ಸ್ಪೀಡ್ , ನೆಟ್ವರ್ಕ್ ಗಳು ಕೊಡುವಷ್ಟೇ ಸ್ಪೀಡ್ ನಮಗೆ ಸಿಗುತ್ತದೆಯಾ ? ಇಲ್ಲವಾದರೆ ಅದಕ್ಕೆ ಕಾರಣವೇನು ? ಎನ್ನುವ ಮಾಹಿತಿ ಮುಂದಿನ ಟೆಕ್ - ಟಾಕ್ ನಲ್ಲಿ. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ