ಗುರುವಾರ, ಏಪ್ರಿಲ್ 16, 2026

ಕೋಬೋಟ್ ಮತ್ತು ಮೆಡಿಸಿನ್ ಫ್ರಮ್ ಸ್ಕೈ ( ಟೆಕ್ - ಟಾಕ್ - 19 )


ರೋಬೋಟ್ ಅಂತಾ ಬರೆಯುವ ಬದಲಿಗೆ ನಿದ್ದೆಗಣ್ಣಲ್ಲಿಯೋ ಅಥವಾ ಅಕ್ಷರ ಬದಲಾಗಿಯೋ ಕೋಬೋಟ್ ಎಂದು ಬರೆದಿರಬಹುದಾ ? ಎಂದು ಯೋಚಿಸುತ್ತಿದ್ದೀರಾ..! ಖಂಡಿತಾ ಇಲ್ಲ.. ನೀವು ಸರಿಯಾಗಿಯೇ ಓದುತ್ತಿದ್ದೀರಿ. ಇದು ಕೋಬೋಟ್. ಕೋಬೋಟ್ ಎಂದರೆ ಕೊಲ್ಯಾಬರೆಟೀವ್ ರೋಬೋಟ್ ಎಂದರ್ಥ. ರೋಬೋಟ್ ಗಳು ಉದ್ಯೋಗಿಗಳ ಜೊತೆಗೆ ಜೊತೆಯಾಗಿ ಆಗ ಅವರು ನೀಡುವ ಆಜ್ಞೆಗೆ ತಕ್ಕ ಹಾಗೆ ವರ್ತಿಸುವ , ಉದ್ಯೋಗಿಗಳಿಗೆ ಸಹಕಾರ ನೀಡುವ ಹಾಗೆ ತಯಾರಾಗಿವೆ. ಅವೇ ಕೋಬೋಟ್ ಗಳು. ಇವು ಸಂಪೂರ್ಣ ಆಟೋ ಮ್ಯಾಟಿಕ್ ಕೂಡಾ ಅಲ್ಲ. ಜೊತೆಗೆ ಸಂಪೂರ್ಣ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ನಿಂದಲೂ ಕೂಡಿರುವುದಿಲ್ಲ. ರೋಬೋಟ್ ಗಳು ಮಾನವನ ಉದ್ಯೋಗವನ್ನು ಕಿತ್ತುಕೊಳ್ಳಲಿವೆ ಎಂದಾಗ ರೋಬೋಟ್ ಗಳು ಮಾನವನಿಗೆ ಸಹಕಾರಿಯಾಗಲಿವೆ ಎಂದು ತೋರಿಸಿದ್ದೇ ಈ ಕೋಬೋಟ್ ಗಳು.


ಇನ್ನೂ ಸರಳವಾಗಿ ಹೇಳುವುದಾದರೆ ರೋಬೋಟ್ ಟೀಚರ್ ಗಳು, ರೋಬೋಟ್ ಸರ್ವರ್ ಗಳು , ರೋಬೋಟ್ ಸರ್ಜನ್ ಗಳು ಬಂದಿವೆ ಎಂದಾಗ ಇವುಗಳು ಮನುಷ್ಯರನ್ನು ಕೆಲಸದಿಂದ ತೆಗೆದು ಹಾಕಿ ಅವರ ಜಾಗವನ್ನು ಆಕ್ರಮಿಸುತ್ತವೆ ಎಂದಾಗಿತ್ತು. ಆದರೆ, ಹಾಗಾಗಿಲ್ಲ. ಬದಲಾಗಿ ಇವುಗಳು ಮನುಷ್ಯರಿಗೆ ಸಹಾಯಕರಾಗಿದ್ದು ಅವರ ಕೆಲಸದ ಹೊರೆಯನ್ನು ಕಡಿಮೆ ಮಾಡುತ್ತಿವೆ. ಮನುಷ್ಯನ ಕೆಲಸಕ್ಕೆ ವೇಗಕ್ಕೆ ತಕ್ಕಂತೆ ಚುರುಕಾಗಿಸಿಕೊಂಡು ಅವರ ಜೊತೆ ಕೈ ಸೇರಿಸಿ ಕೆಲಸ ಮಾಡುತ್ತವೆ. ಈ ಕೋಬೋಟ್ ಗಳಿಗೆ ತುಂಬಾ ಕಡಿಮೆ ಟ್ರೈನ್ ಮಾಡಬಹುದು ಅಥವಾ ಟ್ರೈನ್ ಮಾಡದಿದ್ದರೂ ನಡೆಯುತ್ತದೆ. ಅಲ್ಲದೇ ಮಾಮೂಲು ರೋಬೋಟ್ ಗಳನ್ನು ಹೆಚ್ಚು ಭಾರ ಎತ್ತುವಂತೆ ಹಾಗೂ ಬಲವಾಗಿ ನಿರ್ಮಿಸಲಾಗಿರುತ್ತದೆ. ಆದರೆ, ಕೋಬೋಟ್ ಗಳು ಅಷ್ಟೊಂದು ಬಲವಾಗಿ ನಿರ್ಮಾಣವಾಗಿರುವುದಿಲ್ಲ. ಮೊದಲೆಲ್ಲಾ ಇಂಡಸ್ಟ್ರಿಗಳಲ್ಲಿ ಮಾತ್ರ ಹೆಚ್ಚಾಗಿದ್ದ ಇವುಗಳ ಉಪಯೋಗ ಈಗ ಎಲ್ಲಾ ಕ್ಷೇತ್ರದಲ್ಲಿಯೂ ಹೆಚ್ಚಾಗಿದೆ. ಅದರಲ್ಲೂ ಆರೋಗ್ಯ ಕ್ಷೇತ್ರದಲ್ಲಿ ಇದು ಇನ್ನೂ ಹೆಚ್ಚೇ ಇದೆ. ಇವುಗಳ ಹೆಚ್ಚಿನ ಉಪಯುಕ್ತತೆಯ ಅರಿವಾಗಿದ್ದು ಕೋವಿಡ್ ಕಾಲದಲ್ಲಿ ಎಂದರೂ ತಪ್ಪಾಗಲಾರದು.


ಮೆಕ್ಸಿಕೋದಲ್ಲಿ ಕೋವಿಡ್ ಕಾಲದಲ್ಲಿ ಹೆಚ್ಚು ಅಪಾಯ ಇದ್ದಾಗ ರೂಮಿ ಎನ್ನುವ ಕಂಪನಿಯ ವತಿಯಿಂದ ರೂಮಿಬಾಟ್ ಗಳನ್ನು ಬಿಡುಗಡೆ ಮಾಡಲಾಯಿತು. ಇವುಗಳು ರೋಗಿಯ ದೇಹದ ಟೆಂಪರೇಚರ್, ಬ್ಲಡ್ ಆಕ್ಸಿಜನ್ ಲೆವೆಲ್ ಹಾಗೂ ಮೆಡಿಕಲ್ ಹಿಸ್ಟರಿ ಎಲ್ಲವನ್ನೂ ಟ್ರ್ಯಾಕ್ ಮಾಡುತ್ತಿದ್ದವು. 


ವಿಶ್ವ ಆರೋಗ್ಯ ಸಂಸ್ಥೆಯ ಸ್ಟ್ಯಾನ್ಡರ್ಡ್ ಪ್ರಕಾರ 300 ಜನರಿಗೆ ಒಬ್ಬರು ನರ್ಸ್ ಇರಬೇಕಿತ್ತು. ಆದರೆ ಈಗ 670 ಜನರಿಗೆ ಒಬ್ಬರು ನರ್ಸ್ ಇದ್ದಾರೆ. ಡಾಕ್ಟರ್ ಗಳ ಪ್ರಮಾಣ ಕೂಡಾ ಹೆಚ್ಚೇನೂ ಇಲ್ಲ. 1000 ಜನರಿಗೆ ಒಬ್ಬರಂತೆ ಡಾಕ್ಟರ್ ಇದ್ದಾರೆ ಎಂದಿತ್ತು ಕೋವಿಡ್ ಕಾಲದ ವಿಶ್ವಸಂಸ್ಥೆಯ ಅಂಕಿ - ಅಂಶ. ಇಂತಹಾ ಸಮಯದಲ್ಲಿ ಕೋಬೋಟ್ ಗಳು ಹೆಚ್ಚೆಚ್ಚು ಬಳಕೆಯಾಗಿದ್ದು. 


ಉದಾಹರಣೆಗೆ 200 ಹಾಸಿಗೆಯ ಒಂದು ಆಸ್ಪತ್ರೆ ಇದೆ ಎಂದು ಭಾವಿಸಿಕೊಂಡರೆ ಅಲ್ಲಿ ಎಲ್ಲರಿಗೂ ಸಮಯಕ್ಕೆ ಸರಿಯಾಗಿ ಅವರ ಆರೋಗ್ಯ ಗಮನಿಸಿ ಊಟ- ತಿಂಡಿಯ ವ್ಯವಸ್ಥೆಯನ್ನು ಸರಿಯಾಗಿ ಮಾಡುವುದೂ, ಲ್ಯಾಬ್ ಸ್ಯಾಮ್ಪಲ್ ಗಳನ್ನು ಕಲೆಕ್ಟ್ ಮಾಡುವುದು, ಅದನ್ನು ಲ್ಯಾಬ್ ಗೆ ಕಳುಹಿಸುವುದು, ಅಲ್ಲಿನ ವೇಸ್ಟ್ ಮ್ಯಾನೇಜ್ಮೆಂಟ್ ನೋಡಿಕೊಳ್ಳುವುದು, ಸಮಯಕ್ಕೆ ಸರಿಯಾಗಿ ಬೇಕಾದ ಉಪಕರಣಗಳನ್ನು ಒದಗಿಸುವುದು ಹೀಗೆ ಬರೀ ಓಡಾಟದ ಕೆಲಸವೇ ದಿನಕ್ಕೆ 53 ಮೈಲುಗಳಿಗಿಂತ ಹೆಚ್ಚಾಗಬಹುದು. ಇದನ್ನು ಹೊರತುಪಡಿಸಿ ಪ್ರತಿ ರೋಗಿ ಅಲ್ಲಿಂದ ಹೊರಟ ನಂತರ ಇಡೀ ಕೊಠಡಿ ಸ್ಯಾನಿಟೈಸ್ ಮಾಡುವುದು, ಅಲ್ಲಿರುವಾಗ ಅವರ ಕೊಠಡಿಯ ಸ್ವಚ್ಛತೆ ನೋಡಿಕೊಳ್ಳುವುದು, ಯಾವುದಾದರೂ ರೋಗಿ ಒಳಬರುವ ಮುನ್ನ ಅವರ ದೇಹದ ಟೆಂಪರೇಚರ್ ಚೆಕ್ ಮಾಡುವುದು, ಮುನ್ನೆಚ್ಚರಿಕೆಯ ಕ್ರಮ, ಲ್ಯಾಬ್ ನಲ್ಲಿ ಮಾಡಬೇಕಾದ ಟೆಸ್ಟ್ ಹೀಗೆ ಇನ್ನೂ ಹಲವಾರು ಕೆಲಸಗಳಿರುತ್ತವೆ.


ಅಷ್ಟೇ ಏಕೆ..?? ನಂಬಲೇಬೇಕಾದ ವಿಚಾರವೆಂದರೆ ಈಗ ಮೆಡಿಕಲ್ ಕ್ಷೇತ್ರದಲ್ಲಿ ಸರ್ಜರಿಯನ್ನೂ ಮಾಡುತ್ತವೆ. ಸರ್ಜನ್ ಗಳೇ ಸ್ಪೆಷಲೈಜೇಷನ್ ಮಾಡಿ ಬಂದಾಗಲೂ ಇವರಿಂದ ಇದು ಸಾಧ್ಯವಾ ಎಂಬ ಅನುಮಾನದ ದೃಷ್ಟಿ ಬೀರುವ ಕಾಲದಲ್ಲಿ ಈ ಕೋಬೋಟ್ ಗಳು ಸರ್ಜರಿಯನ್ನೂ ಮಾಡುತ್ತವೆ. ಇಂತಹಾ ಕೆಲವು ಕೋಬೋಟ್ ಮತ್ತು ಮೆಡಿಕಲ್ ಕ್ಷೇತ್ರದ ರೋಬೋಟ್ ಗಳ ಬಗ್ಗೆ ತಿಳಿಯೋಣ.


ರೋಬೋಟ್ ಪರಿಕಲ್ಪನೆ ಹೇಗೆ ಒಂದು ನಾಟಕದಿಂದ ಶುರುವಾಯಿತೋ ಹಾಗೆ ಆ ಕಾಲದ ಚಿತ್ರಕಾರ ಲಿಯೋನಾರ್ಡೊ ಡಾ ವಿನ್ಸಿ ರೋಬೋಟ್ ಅನ್ನು ತನ್ನ ಕಲ್ಪನೆಯ ಮೂಲಕ ಚಿತ್ರಕಲೆಯಲ್ಲಿ ಮೂಡಿಸಿದ್ದ. 'ರೋಬೋಟಿಕ್ ನೈಟ್' ಎನ್ನುವ ಹ್ಯುಮನಾಯ್ಡ್ ರೋಬೋಟ್ ಅನ್ನು 1495 ರಲ್ಲಿಯೇ ರೂಪಿಸಿದ್ದ. ಆತನ ಹೆಸರನ್ನೇ ಹೊಂದಿರುವ ಒಂದು ಸೂಪರ್ ಸರ್ಜಿಕಲ್ ರೋಬೋಟ್ ಇದೆ.


ವೈದ್ಯಕೀಯ ಎರರ್ ನಿಂದಾಗಿ ಯು.ಎಸ್ ನಲ್ಲಿ ವರ್ಷಕ್ಕೆ ಸುಮಾರು 2,50,000 ಜನರು ಪ್ರಾಣ ಬಿಡುತ್ತಾರೆ ಎನ್ನುತ್ತದೆ ಅಂಕಿ-ಅಂಶ. ಇವುಗಳಲ್ಲಿ ಕೆಲವನ್ನು ತಡೆಗಟ್ಟಬಹುದು ಎನ್ನುತ್ತಾರೆ. ಬೇರೆ ದೇಶಗಳಲ್ಲಿ ಕೂಡಾ ಪರಿಸ್ಥಿತಿ ಹೆಚ್ಚು ಕಡಿಮೆ ಹೀಗೆಯೇ ಇದೆ. 


ಸರ್ಜರಿಗಳನ್ನು ಮಾಡಬೇಕಾದರೆ ಅಲ್ಲಿನ ವಾತಾವರಣ, ಉಪಕರಣ, ರೋಗಿಯ ದೇಹ ಸ್ಥಿತಿ ಹೇಗೆ ಗಣನೆಗೆ ಬರುತ್ತದೋ ಒಬ್ಬ ಸರ್ಜನ್ ನ ಮನಸ್ಥಿತಿ ಕೂಡಾ ಅಷ್ಟೇ ಮುಖ್ಯ. ಗಡಿಬಿಡಿಯಲ್ಲಿ ಅಥವಾ ಯಾವುದೋ ಯೋಚನೆಯನ್ನು ತಲೆಯಲ್ಲಿಟ್ಟುಕೊಂಡು ಅಥವಾ ಹಿಂದಿನ ತಪ್ಪನ್ನು ಮನಸ್ಸಿನಲ್ಲಿಯೇ ಇಟ್ಟುಕೊಂಡು ಅಥವಾ ತುಂಬಾ ಒತ್ತಡ ಮಾಡಿಕೊಂಡು ನಾವೇ ಸಣ್ಣ ಪುಟ್ಟ ಸನ್ನಿವೇಶಗಳನ್ನು ನಿಭಾಯಿಸಲು ಹೆಣಗಾಡುವಾಗ ಒಬ್ಬರ ಜೀವನದ ಪ್ರಮುಖ ಆಪರೇಷನ್ ಮಾಡುವ ಸರ್ಜನ್ ಅದೆಷ್ಟು ಏಕಾಗ್ರತೆಯಿಂದ ಹಾಗೂ ಶಾಂತ ಚಿತ್ತದಿಂದ ತನ್ನ ಕೆಲಸವನ್ನು ಮಾಡಬೇಕಾಗುತ್ತದೆ. ಅಲ್ಲವಾ..?? ಅದಕ್ಕಾಗಿಯೇ ಈ ನಿಟ್ಟಿನಲ್ಲಿ ಸರ್ಜನ್ ಗೆ ನೆರವಾಗಲು ಮೊದಲೆಲ್ಲಾ ಅಂದರೆ 1980 ರಲ್ಲಿ ರೋಬೋಟಿಕ್ ಆರ್ಮ್ ಗಳನ್ನು ಬಳಸಲಾಗುತ್ತಿತ್ತು. ಆದರೆ, ಈಗ ಸರ್ಜಿಕಲ್ ರೋಬೋಟ್ ಗಳನ್ನು ಬಳಸಲಾಗುತ್ತಿದೆ. 


ಅತ್ಯಂತ ಕರಾರುವಕ್ಕಾಗಿ ಕಂಟ್ರೋಲ್ ಮಾಡುವಲ್ಲಿ ಇಂತಹಾ ರೋಬೋಟ್ ಗಳದ್ದೇ ಮೇಲುಗೈ. ಮ್ಯಾಗ್ನಿಫೈಡ್ 3ಡಿ ಹೆಚ್.ಡಿ ಕಂಟ್ರೋಲ್ ಬಳಸಿ ಮಾನಿಟರ್ ಮಾಡಲಾಗುತ್ತದೆ. ಈ ರೀತಿಯ ಸರ್ಜರಿ ಮಾಮೂಲಿನ ಟ್ರೆಡಿಷನಲ್ ಸರ್ಜರಿಗಿಂತಲೂ ವಿಭಿನ್ನ. ಹಾಗೂ ಅದಕ್ಕೆ ಹೋಲಿಸಿದರೆ ಆಪರೇಷನ್ ಸಮಯ ಕೊಂಚ ಹೆಚ್ಚೇ ಆದರೂ ಗುಣಮುಖವಾಗುವುದಕ್ಕೆ ತೆಗೆದುಕೊಳ್ಳುವ ಸಮಯ ಕಡಿಮೆ. ಇಂತಹಾ ಸರ್ಜಿಕಲ್ ರೋಬೋಟ್ ಗಳಲ್ಲಿ ಪ್ರಮಖ ಸ್ಥಾನದಲ್ಲಿರುವುದು ಡಾ ವಿನ್ಸಿ ಸರ್ಜಿಕಲ್ ರೋಬೋಟ್. 


ಆಸ್ಪತ್ರೆಗಳಲ್ಲಿ ಮೆಡಿಕಲ್ ಎರರ್ ಬಿಟ್ಟರೆ ಮತ್ತೆ ರೋಗಿಗಳ ಸಾವಿಗೆ  ಕಾರಣವಾಗುತ್ತಿದ್ದದ್ದು ಸೋಂಕು ಅಂದರೆ ಇನ್ಫೆಕ್ಷನ್. 2011 ರ ಸಿ.ಡಿ.ಸಿ ರಿಪೋರ್ಟ್ ಪ್ರಕಾರ ಅಮೆರಿಕಾದಲ್ಲಿ ಆಸ್ಪತ್ರೆಯಲ್ಲಿ ಉಂಟಾಗುತ್ತಿದ್ದ ಸೋಂಕಿನಿಂದ 7,22,000 ಜನರು ವರ್ಷವೊಂದಕ್ಕೆ ಸಾವಿಗೀಡಾಗುತ್ತಿದ್ದರು. ರೋಗಿಗಳ ನಡುವೆ 100% ಸ್ಟೆರಿಲಿಟಿ ಇಲ್ಲದೇ ಹೋದದ್ದು, ಸಮಯದ ಅಭಾವ, ಕಣ್ಣಿಗೆ ಕಾಣದ ರೋಗಾಣುಗಳು ಹೀಗೆ ಇದಕ್ಕೆ ಹಲವಾರು ಕಾರಣಗಳು. ಈಗ ಪರಿಸ್ಥಿತಿ ಬದಲಾಗಿದೆ. ಈಗ ಫುಲ್ ಸ್ಪೆಕ್ಟ್ರಮ್ ಅಲ್ಟ್ರಾ ವಯಲೆಟ್ ರೇ ಗಳನ್ನು ಬಳಸಿ ಇನ್ಪೆಕ್ಷನ್ ಉಂಟು ಮಾಡುವ ರೋಗಾಣುಗಳನ್ನು ಕೊಳ್ಳಬಹುದು. ಇದಕ್ಕಾಗಿಯೇ ಕ್ಸೆನೆಕ್ಸ್ ಜರ್ಮ್ ಜಾಪ್ಪಿಂಗ್ ರೋಬೋಟ್ ಮೀಸಲಾಗಿದೆ. 


ಇಷ್ಟೇ ಅಲ್ಲ, ಒಬ್ಬ ರೋಗಿ ಆಸ್ಪತ್ರೆಯಲ್ಲಿ ಹೆಚ್ಚು ದಿನಗಳ ಕಾಲ ಇದ್ದಾಗ ಅಥವಾ ಗುಣಪಡಿಸಲು ಕಷ್ಟವಿರುವ ಖಾಯಿಲೆ ತನಗಿದೆ ಎಂದು ತಿಳಿದಾಗ ಒತ್ತಡಕ್ಕೆ ಹಾಗೂ ಖಿನ್ನತೆಗೊಳಗಾಗಬಹುದು. ಕೋವಿಡ್ ಕಾಲದಲ್ಲಿಯೇ ಗಮನಿಸಿದರೆ ತನ್ನ ಸುತ್ತಮುತ್ತ ತನ್ನವರು ಯಾರೂ ಇಲ್ಲದಾದಾಗ, ರೋಗ ಹರಡುವ ಭಯದಿಂದ ಆಸ್ಪತ್ರೆಯಲ್ಲಿ ಸಿಬ್ಬಂದಿಗಳೂ ತನ್ನ ಸುತ್ತ ಹೆಚ್ಚು ಇರದಾದಾಗ ಒಬ್ಬಂಟಿಯಾಗುವ ರೋಗಿ ಮಂಕಾಗುವುದು, ಖಿನ್ನತೆಗೊಳಗಾಗುವ ಸಾಧ್ಯತೆ ಹೆಚ್ಚಾಗಿತ್ತು. ಇದನ್ನು ನಿವಾರಿಸಲೆಂದೇ ಒಂದು ವಿಭಿನ್ನ ಥೆರಪಿಟಿಕ್ ರೋಬೋಟ್ ಅನ್ನು ಬಳಸಲಾಗುತ್ತದೆ. ಪಾರೋ ಥೆರಪಿಟಿಕ್ ರೋಬೋಟ್ ಅತ್ಯಂತ ಹೆಚ್ಚು ಜನಪ್ರಿಯ ರೋಬೋಟ್. ಈ ರೋಬೋಟ್ ಅನ್ನು ಮರೆವಿನ ಖಾಯಿಲೆ ಎಂದೇ ಕರೆಯಲಾಗುವ ಡಿಮೆನ್ಷಿಯಾ ಥೆರಪಿಗೂ ಬಳಸಲಾಗುತ್ತದೆ.


1990 ರಿಂದಲೇ ರೇಡಿಯೇಷನ್ ಥೆರಪಿಗಾಗಿ ಒಂದು ರೋಬೋಟಿಕ್ ಸರ್ಜರಿ ಸಿಸ್ಟಮ್ ಅನ್ನು ಬಳಸಲಾಗುತ್ತಿದೆ. ಅದೇ ಸೈಬರ್ ನೈಫ್. ಟ್ಯೂಮರ್ ಗಳು ಎಂದರೆ ಗಡ್ಡೆಗಳಾಗಿದ್ದಲ್ಲಿ ಸಬ್ ಮಿಲಿ ಮೀಟರ್ ಗಳಷ್ಟು ನಿಖರತೆಗಾಗಿ ಬಳಸಲಾಗುತ್ತದೆ. ನಾವು ಕೈಯಲ್ಲಿ ಒಂದು ಆಧಾರದ ಮೇಲೆ ರೇಖೆ ಎಳೆಯುವುದಕ್ಕೂ, ಸ್ಕೇಲ್ ಬಳಸಿ ರೇಖೆ ಎಳೆಯುವುದಕ್ಕೂ ಹೇಗೆ ವ್ಯತ್ಯಾಸವಿರುತ್ತದೋ ಹಾಗೆ ಈ ಮನುಷ್ಯರು ಕೈಯ್ಯಲ್ಲಿ ಮಾಡುವ ರೇಡಿಯೇಷನ್ ಥೆರಪಿಗೂ ಸೈಬರ್ ನೈಫ್ ನಿಂದ ಮಾಡುವ ರೇಡಿಯೇಷನ್ ಥೆರಪಿಗೂ ಇರುವ ವ್ಯತ್ಯಾಸ. 


ಒಂದು ಆಸ್ಪತ್ರೆಯಲ್ಲಿ ರೋಗಿಯ ಹಾಗೂ ಆಸ್ಪತ್ರೆಯ ಎಲ್ಲಾ ಮೇಲ್ವಿಚಾರಣೆ ಎಂದರೆ ಊಟ- ತಿಂಡಿ ನೀಡುವುದು, ಲ್ಯಾಬ್ ಸ್ಯಾಂಪಲ್ ಗಳ ಕಲೆಕ್ಷನ್, ವೇಸ್ಟ್ ಮ್ಯಾನೇಜ್ಮೆಂಟ್ ಹೀಗೆ ಹೆಚ್ಚು ಸಮಯ ಮತ್ತು ಒತ್ತಡದ ಕೆಲಸಗಳಿಗೆ ಸಿಬ್ಬಂದಿಗಳ ಬದಲಿಗೆ ಟಗ್ ರೋಬೋಟ್ ಗಳನ್ನು ಬಳಸಲಾಗುತ್ತಿದೆ. ಮೊದಲ ಬಾರಿಗೆ ಈ ಟಗ್ ರೋಬೋಟ್ ಗಳನ್ನು ಕ್ಯಾಲಿಫೋರ್ನಿಯಾ ಯೂನಿವರ್ಸಿಟಿಯ ಸ್ಯಾನ್ ಫ್ರಾನ್ಸ್ಸಿಸ್ಕೊ ಮೆಡಿಕಲ್ ಸೆಂಟರ್ ನಲ್ಲಿ ಬಳಸಲಾಯಿತು. ಈಗ ಇಂತಹಾ 25 ಟಗ್ ರೋಬೋಟ್ ಗಳು ಬಳಕೆಯಾಗುತ್ತಿವೆ. 


ಮೊದಲೆಲ್ಲಾ ರೋಬೋಟಿಕ್ ಸರ್ಜರಿ ಎಂದರೆ ಡಾಕ್ಟರ್ ಗಳ ಪ್ರಕಾರ ರೋಬೋಟ್ ಗಳ ಸಹಾಯದಿಂದ ಮಾಡುವ ಲ್ಯಾಪ್ರಾಸ್ಕೋಪಿ ಎಂದಿತ್ತು. ಆದರೆ, 1980 ರಿಂದ ಈಚೆಗೆ ಅದರ ವ್ಯಾಖ್ಯಾನವೇ ಬದಲಾಗಿದೆ. 2010 ರಲ್ಲಿ ಅಮೆರಿಕಾದಲ್ಲಿ ಕೇವಲ 131 ಡಾ ವಿನ್ಸಿ ರೋಬೋಟ್ ಗಳಿದ್ದರೆ, 2017 ರಲ್ಲಿ 45% ಆಸ್ಪತ್ರೆಗಳಲ್ಲಿದ್ದವು. ಈಗ 70 % ಗೂ ಹೆಚ್ಚಿನ ಆಸ್ಪತ್ರೆಯಲ್ಲಿ ಇವು ಕಾರ್ಯ ನಿರ್ವಹಿಸುತ್ತಿವೆ. ಭಾರತದಲ್ಲಿ ಇವುಗಳ ಸಂಖ್ಯೆ 500. ಇದರಲ್ಲಿ 70 ಡಾ ವಿನ್ಸಿ ರೋಬೋಟಿಕ್ ಸರ್ಜನ್ ಗಳು ಸರ್ಕಾರಿ ಆಸ್ಪತ್ರೆಯಲ್ಲಿವೆ. 


ಈಗ ವೈದ್ಯಕೀಯ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಬದಲಾವಣೆ ಉಂಟಾಗುತ್ತಿದೆ. ಅದಕ್ಕೆ ಸಾಕ್ಷಿ ಮೆಡಿಕಲ್ ಕ್ಷೇತ್ರದಲ್ಲಿ ಬಳಕೆಯಾದ ಡ್ರೋನ್. ಡ್ರೋನ್ ಎಂದರೆ ಹೆಚ್ಚಿನವರು ಮದುವೆ ಮನೆಗಳಲ್ಲಿ ವಿಡಿಯೋ ಕವರೇಜ್ ಗೆ ಮಾತ್ರ ಬಳಸಲಾಗುವ ಡ್ರೋನ್ ಗಳನ್ನು ನೋಡಿರಬಹುದು. ಅದರ ಬಳಕೆಗೆ ಕೆಲವು ನಿಯಮಗಳು ಸಹಾ ಇವೆ. ಅವೆಲ್ಲದರ ಚೌಕಟ್ಟಿನಲ್ಲಿ ಈಗ ಮೆಡಿಕಲ್ ಕ್ಷೇತ್ರದಲ್ಲಿ ಡ್ರೋನ್ ಕಾಲಿಟ್ಟಿವೆ. 


ಯಾವುದಾದರೂ ಬರ ಪೀಡಿತ ಪ್ರದೇಶಗಳಿಗೆ ಅಥವಾ ಅತ್ಯಂತ ತುರ್ತಾಗಿ ಎಲ್ಲಿಗೋ ಮೆಡಿಕಲ್ ಉಪಕರಣಗಳನ್ನು ತಲುಪಿಸಬೇಕಾಗಿರುತ್ತದೆ. ಈಗಿನ ಟ್ರಾಫಿಕ್ ಸಮಸ್ಯೆಯನ್ನು ಗಣನೆಗೆ ತೆಗೆದುಕೊಂಡರೆ ಆಂಬ್ಯುಲೆನ್ಸ್ ಎಲ್ಲಾ ಸಮಯದಲ್ಲಿಯೂ ಬಳಕೆಯಾಗಲಾರದು ಅಥವಾ ಎಲ್ಲಾ ಮುಗಿದ ನಂತರ ಅವುಗಳು ತಲುಪಬಹುದು ಸಿನಿಮಾದಲ್ಲಿ ಎಲ್ಲಾ ಮುಗಿದ ನಂತರ ಪೋಲೀಸರು ಬರುವಂತೆ. 

ಸದ್ಯಕ್ಕೆ ವೇಗವಾಗಿ ಅವುಗಳನ್ನು ತಲುಪಿಸಲು ಬಳಸಲಾಗುತ್ತಿದ್ದ ಮಾರ್ಗ ಎಂದರೆ ಹೆಲಿಕ್ಯಾಪ್ಟರ್ ಗಳು. ಆದರೆ, ಹೆಲಿಕ್ಯಾಪ್ಟರ್ ಇಳಿಯಲು ಸ್ಥಳಾವಕಾಶ ಇಲ್ಲದ ಜಾಗದಲ್ಲಿ ಈಗ ಡ್ರೋನ್ ಗಳನ್ನು ಬಳಸಲಾಗುತ್ತಿದೆ.


2017 ರಲ್ಲಿ ಮೆಕ್ಸಿಕೋದಲ್ಲಿ ಒಫೆಲಿಯಾ ಮತ್ತು ಎಮ್ಮಾ ಚಂಡಮಾರುತಗಳು ಅಪ್ಪಳಿಸಿದಾಗ ರಿಪಬ್ಲಿಕ್ ಐರ್ಲೆಂಡ್ ಮತ್ತು ಆರನ್ ಐಲ್ಯಾನ್ಡ್ ಗಳ ರಸ್ತೆ ಹಾಗೂ ಬಂದರುಗಳು ಎಲ್ಲದಕ್ಕೂ ಹಾನಿಯಾಗಿ ಸುಮಾರು ನಾಲ್ಕು ತಿಂಗಳು ಸುತ್ತಲೂ ನೀರಿನಿಂದ ಆವೃತವಾಗಿಬಿಟ್ಟಿದ್ದವು. ಆಗ ಊಟ, ತಿಂಡಿ ಹಾಗೂ ಆರೋಗ್ಯಕ್ಕೆ ಸಂಬಂಧಿಸಿದ ಸಾಮಾಗ್ರಿಗಳನ್ನು ವಿಂಗ್ ಕಾಪ್ಟರ್ ಎನ್ನುವ ಡ್ರೋನ್ ಮೂಲಕ ಕಳುಹಿಸಲಾಗಿತ್ತು. ಈ ಡ್ರೋನ್ 6 ಕೆ.ಜಿ ಭಾರವನ್ನು ಹೊರಬಲ್ಲದು. 


ಭಾರತದಲ್ಲಿ ಮೊದಲ ಬಾರಿಗೆ ಡ್ರೋನ್ ನಲ್ಲಿ ಮೆಡಿಸಿನ್ ತಲುಪಿಸಿದ್ದು ಮೇಘಾಲಯದಲ್ಲಿ. 2021 ರಲ್ಲಿ ನವೆಂಬರ್ 26 ರಂದು ನಾಂಗ್ ಸ್ಟಾಯ್ನ್ ಎನ್ನುವ ಪುಟ್ಟ ಹಳ್ಳಿಯ ಪ್ರಾಥಮಿಕ ಆರೋಗ್ಯ ಘಟಕವೊಂದರಿಂದ ವೆಸ್ಟ್ ಕಾಶಿ ಹಿಲ್ಸ್ ಜಿಲ್ಲೆಯ ಮವೈಟ್ ಎನ್ನುವಲ್ಲಿಗೆ ಡ್ರೋನ್ ಮೂಲಕ ಔಷಧಿ ತಲುಪಿಸಲಾಯಿತು. 25 ಕಿಲೋಮೀಟರ್ ದೂರವನ್ನು 25 ನಿಮಿಷಗಳಲ್ಲಿ ಕ್ರಮಿಸಲಾಯಿತು. ಟೆಕ್ ಈಗಲ್ ಎನ್ನುವ ಕಂಪನಿ ತಯಾರಿಸಿದ ಈ ಅಕ್ವಿಲಾ ಎಕ್ಸ್2 ಎನ್ನುವ ಡ್ರೋನ್ ಭಾರತದಲ್ಲೇ ಮೊದಲು ಮೆಡಿಸಿನ್ ಅನ್ನು ಕೊಂಡೊಯ್ಯಲು ಬಳಸಲಾದ ಡ್ರೋನ್. 


ಡನ್ ಜೋ ಎನ್ನುವ ಹೋಮ್ ಡೆಲಿವರಿ ಸೇವೆ ನೀಡುವ ಕಂಪನಿ ಈಗ ಟೆಕ್ ಕಂಪನಿ ಸ್ಕೈ ಏರ್ ಜೊತೆಗೂಡಿ ಡ್ರೋನ್ ಮೂಲಕ ಮೆಡಿಸಿನ್ ಹಾಗೂ ವ್ಯಾಕ್ಸಿನ್ ಗಳನ್ನು ಡ್ರೋನ್ ಮೂಲಕ ಕಳುಹಿಸುವ ಯೋಜನೆ ಹೊಂದಿದೆ. ಇದೇ "ಮೆಡಿಸಿನ್ ಫ್ರಮ್ ಸ್ಕೈ". ಮೊದಲು ಹೈದರಾಬಾದ್ ನಲ್ಲಿ ಸೆಪ್ಟೆಂಬರ್ ನಲ್ಲಿ 12 ಕೆ ಜಿ ಮೆಡಿಸಿನ್ ಹಾಗೂ 20 ವಾಯಲ್ ವ್ಯಾಕ್ಸಿನ್ ಕಳುಹಿಸುವ ಮೂಲಕ ಇದರ ಪ್ರಯೋಗ ಯಶಸ್ವಿಯಾಗಿದೆ. ಕಳೆದ ವಾರ ಅರುಣಾಚಲ ಪ್ರದೇಶದಲ್ಲಿ ಕೂಡಾ ಈ ಪ್ರಯೋಗ ಯಶಸ್ವಿಯಾಗಿದೆ. 2022 ರ ಜೂನ್ ನಿಂದ ಕರ್ನಾಟಕದಲ್ಲಿಯೂ ಈ ಪ್ರಯೋಗ ನಡೆಯುತ್ತಿದೆ. 


ಇಷ್ಟೇ ಅಲ್ಲ.. ಭಾರತದ ರಾಜ್ಯಗಳಲ್ಲಿ ಡ್ರೋನ್ ಗಳ ವಿಶೇಷ ಬಳಕೆ,ಡ್ರೋನ್ ಕಾರಿಡಾರ್,  ಡ್ರೋನ್ ಪರಿಕಲ್ಪನೆ ಬಂದದ್ದು ಹೇಗೆ, ಡ್ರೋನ್ ಎಂಬ ಪದ ಬಳಸುವುದಕ್ಕೆ ವಿರೋಧವಿದ್ದದ್ದು ಏಕೆ ಎಂಬುದೆಲ್ಲವನ್ನೂ ತಿಳಿಯೋಣ ಮುಂದಿನ ಟೆಕ್ - ಟಾಕ್ ನಲ್ಲಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ