ಗುರುವಾರ, ಏಪ್ರಿಲ್ 16, 2026

ಹಾರುವ 'ಡ್ರೋನ್'ನ ಜಾಡು ಹಿಡಿಯುತ್ತಾ.. ( ಟೆಕ್ - ಟಾಕ್ - 20 )


ಡ್ರೋನ್ ಅನ್ನು ಬಳಸಿ 'ಮೆಡಿಸಿನ್ ಫ್ರಂ ಸ್ಕೈ' ಎನ್ನುತ್ತಾ ಔಷಧಿಗಳನ್ನು ಮನೆಮನೆಗೆ ತಲುಪಿಸುವುದನ್ನು ಓದಿದೆವು. ಅಲ್ಲದೆ, ಹಾರುವ ವಾಹನಗಳನ್ನು ನೋಡಿದಾಗಲೆಲ್ಲಾ ಮೊದಲಿಗೆ ನೆನಪಾಗುವುದೇ ಏರೋ ಪ್ಲೇನ್ ಅಥವಾ ಹೆಲಿಕ್ಯಾಪ್ಟರ್. ಏರ್ ಶಿಪ್, ಏರ್ ಆಂಬ್ಯುಲೆನ್ಸ್,  ಗ್ಲೈಡರ್, ಪ್ಯಾರಾ ಮೋಟಾರ್, ಏರೋ ಪ್ಲೇನ್, ಹೆಲಿಕ್ಯಾಪ್ಟರ್, ಕ್ವಾಡ್ ಕ್ಯಾಪ್ಟರ್, ಹಾಟ್ ಏರ್ ಬಲೂನ್, ಜೆಟ್ ಹೀಗೆ ತರಹೇವಾರಿಯಾಗಿ ಆಕಾಶದಲ್ಲಿ ಹಾರುವ ವಾಹನಗಳಿದ್ದರೂ ಸಾಮಾನ್ಯವಾಗಿ ಒಂದೇ ಹೆಸರಿನಿಂದ ಗುರುತಿಸುವವರೇ ಹೆಚ್ಚು. ಆದರೆ, ಡ್ರೋನ್ ಹಾಗಲ್ಲ.. ಚಿಕ್ಕವರಿಂದ ದೊಡ್ಡವರವರೆಗೂ ಡ್ರೋನ್ ಚಿರಪರಿಚಿತ. ಈಗ ಹಳ್ಳಿಗಳಲ್ಲಿಯೂ ಅಡಿಕೆ ಕೊಯ್ಲು ಮಾಡಲು, ದೊಡ್ಡ ದೊಡ್ಡ ಮರಗಳಿಗೆ ಅಥವಾ ವಿಸ್ತಾರ ಪ್ರದೇಶಕ್ಕೆ ಔಷಧಿ ಸಿಂಪಡಿಸಲು ಡ್ರೋನ್ ಬಳಕೆ ಮಾಡುತ್ತಾರೆ. ಅಲ್ಲದೇ, ಡ್ರೋನ್ ವಿಡಿಯೋಗ್ರಾಫಿ, ಫೋಟೋಗ್ರಾಫಿ ಇಲ್ಲದ ಮದುವೆಗಳೇ ವಿರಳ ಎನ್ನಬಹುದು. ದಿನನಿತ್ಯದ ಬದುಕಿನಲ್ಲಿ ಬಳಸುವ ಬೈಕ್, ಕಾರು, ಬಸ್ಸುಗಳಂತೆಯೇ ಡ್ರೋನ್ ಕೂಡಾ ಸರ್ವೇಸಾಮಾನ್ಯವಾಗಿಬಿಡಬಹುದಾ ? ಇತ್ತೀಚಿನ ಬೆಳವಣಿಗೆಗಳನ್ನು ಕಂಡರೆ ಆ ದಿನವೂ ದೂರವಿಲ್ಲ. ಎಫ್.ಎ.ಎ ಪ್ರಕಾರ 2019 ರಲ್ಲಿ ಅಮೆರಿಕಾದಲ್ಲಿ 1.1 ಮಿಲಿಯನ್ ಡ್ರೋನ್ ಗಳು ರಿಜಿಸ್ಟರ್ ಆಗಿವೆ. ಬ್ಯುಸಿನೆಸ್ ಇನ್ ಸೈಡರ್ ಪ್ರಕಾರ 2023 ರಲ್ಲಿ ಜಗತ್ತಿನಲ್ಲಿ 2.4 ಮಿಲಿಯನ್ ಡ್ರೋನ್ ಗಳು ಇರಲಿವೆ.


ಡ್ರೋನ್ ಗಳ ಬಳಕೆ ಹಾಗೂ ರಿಜಿಸ್ಟರ್ ಮಾಡಿಕೊಳ್ಳುವುದು ಅಷ್ಟೊಂದು ಸುಲಭದ ಪ್ರಕ್ರಿಯೆಯಲ್ಲ. ಅದು ಅಷ್ಟು ಸುಲಭವಾಗಿದ್ದಿದ್ದರ 1783 ರಲ್ಲೇ ಇದ್ದ ಡ್ರೋನ್ ಗಳು ದಿನ ನಿತ್ಯದ ಬಳಕೆಗೆ ಬರಲು ಇಷ್ಟು ದಿನ ಬೇಕಾಗುತ್ತಿತ್ತೇ ? ಹೌದು. ಮೊದಲು ಡ್ರೋನ್ ನ ಕಾನ್ಸ್ಪೆಪ್ಟ್ ಬಂದದ್ದು 1783 ರಲ್ಲೇ.. ಆದರೆ, ಆಗ ಅದನ್ನು ಡ್ರೋನ್ ಎನ್ನುತ್ತಿರಲಿಲ್ಲವಷ್ಟೇ..


ಡ್ರೋನ್ ಎಂದರೆ ಮನುಷ್ಯನೇ ಇಲ್ಲದೇ ಚಾಲನೆ ಮಾಡುವ ಏರ್ ಕ್ರಾಪ್ಟ್ ಅರ್ಥಾತ್ ಅನ್ ಮ್ಯಾನ್ಡ್ ಏರ್ ಕ್ರಾಫ್ಟ್ ಎಂದು ಕೆಲವರ ವ್ಯಾಖ್ಯಾನವಾದರೆ ಇದೊಂದು ಹಾರುವ ರೋಬೋಟ್. ಈ ಹಾರುವ ರೋಬೋಟ್ ಅನ್ನು ರಿಮೋಟ್ ಕಂಟ್ರೋಲ್ ಮಾಡಲಾಗಿದೆ ಅಥವಾ ಆಟೊಮ್ಯಾಟಿಕ್ ಮಾಡಲಾಗಿದೆ ಎನ್ನುತ್ತಾರೆ. ಹಾಗಾಗಿಯೇ ಮೊದಲಿಗೆ ಇದನ್ನು ಅನ್ ಮ್ಯಾನ್ಡ್ ಏರ್ ಕ್ರಾಫ್ಟ್ (ಯು.ಎ.ವಿ) ಅಥವಾ ಅನ್ ಮ್ಯಾನ್ಡ್ ಏರಿಯಲ್ ಸಿಸ್ಟಮ್ (ಯು.ಎ.ಎಸ್) ಎಂದು ಕರೆಯುತ್ತಿದ್ದರು. ಆದರೆ ,   1980 ರಲ್ಲಿ ಇವುಗಳನ್ನು ಡ್ರೋನ್ ಎನ್ನಲಾಯಿತು. ಬದಲಾವಣೆಗೆ ಯಾವತ್ತಿಗೂ ವಿರೋಧ ಇದ್ದೇ ಇರುತ್ತದೆ ಅಲ್ಲವೇ.. ಈ ಹೆಸರಿನ ಬದಲಾವಣೆಗೆ ವಾಯುಯಾನದ ವೃತ್ತಿಪರರು ವಿರೋಧ ವ್ಯಕ್ತ ಪಡಿಸಿದರು. ಆದರೆ, ಆಗ ಸಾರ್ವಜನಿಕವಾಗಿ ಹೆಚ್ಚು ಚಿರಪರಿಚಿತವಾಗಿದ್ದ ಡ್ರೋನ್ ಎಂಬ ಹೆಸರೇ ಖಾಯಂ ಆಯಿತು. ಗಂಡು ದುಂಬಿಗಳ ಗಟ್ಟಿಯಾದ ಮತ್ತು ಗುಂಯ್ ಗುಟ್ಟುವಿಕೆಯ ಶಬ್ಧ ಹಾಗೂ ಇವುಗಳ ಹಾರಾಟದಲ್ಲಿ ಬಹಳವೇ ಸಾಮ್ಯತೆ ಇದ್ದುದರಿಂದ ಇವು 'ಡ್ರೋನ್'ಗಳಾದವು. 


ಯಾವುದೇ ಚಾಲಕರು, ನಿಯಂತ್ರಕರು ಅಥವಾ ಪ್ರಯಾಣಿಕರು ಇಲ್ಲದ ಇವುಗಳು ಅವುಗಳ ದೀರ್ಘಕಾಲದ ಹಾರಾಟ, ವೇಗ ಮತ್ತು ಎತ್ತರದಿಂದ ಏವಿಯೇಷನ್ ನ ದಿಕ್ಕನ್ನೇ ಬದಲಾವಣೆ ಮಾಡಿದವು. ಸಾಮಾನ್ಯವಾಗಿ ಏವಿಯೇಷನ್ ನಲ್ಲಿ ಜನರಲ್, ಕಮರ್ಷಿಯಲ್ ಹಾಗೂ ಮಿಲಿಟರಿ ಎಂಬ ಮೂರು ವರ್ಗಗಳಿವೆ. ಕಮರ್ಷಿಯಲ್ ಏವಿಯೇಷನ್ ನಲ್ಲಿ ಆಮದು- ರಫ್ತು ಕಾರ್ಯಗಳಾಗುತ್ತವೆ. ಈಗ ಮೆಡಿಸಿನ್ ಗಳನ್ನು ಒಂದು ಜಾಗದಿಂದ ಮತ್ತೊಂದಕ್ಕೆ ತಲುಪಿಸುವ ಕಾರ್ಯ. ಬೆಳೆಗಳಿಗೆ ಔಷಧಿ ಸಿಂಪಡನೆ, ಕಾಡಿನ ಕಾಳ್ಗಿಚ್ಚು ಆರಿಸುವ ಕೆಲಸಗಳನ್ನು ಕಮರ್ಷಿಯಲ್ ಏವಿಯೇಷನ್ ನಿರ್ವಹಿಸಿತ್ತದೆ. ಇನ್ನು ದೇಶದ ರಕ್ಷಣೆ ಹಾಗೂ ಮಿಲಿಟರಿ ಸಂಬಂಧಿಸಿದಂತೆ ಮಿಲಿಟರಿ ಏವಿಯೇಷನ್ ಕಾರ್ಯ. ಒಂದಾನೊಂದು ಕಾಲದಲ್ಲಿ ಮಿಲಿಟರಿಗೆ ಮಾತ್ರ ಸೀಮಿತವಾಗಿದ್ದ ಡ್ರೋನ್ ಗಳು ಈಗ ಮೂರು ವಿಭಾಗದಲ್ಲಿಯೂ ಹಾರಾಟದಲ್ಲಿ ಮುಂದೆಯೇ..


ಮೊದಲ ಅನ್ ಮ್ಯಾನ್ಡ್ ಏವಿಯೇಷನ್ ಎಂದು ಪರಿಗಣಿಸಿರುವುದು ಒಂದು ಹಾಟ್ ಏರ್ ಬಲೂನ್ ಅನ್ನು. ಅಂದರೆ ಇದನ್ನು ಆಕಾಶಬುಟ್ಟಿ ಎಂದೇ ಹೇಳಬಹುದು. ಜೋಸೆಫ್-ಮೈಕೆಲ್ ಮತ್ತು ಜಾಕ್ವೆಸ್-ಎಟಿಯೆನ್ನೆ ಮಾಂಟ್‌ಗೋಲ್ಫಿಯರ್ ಅವರು ಮಾನವರಹಿತ ವಿಮಾನದ ಮೊದಲ ಸಾರ್ವಜನಿಕ ಪ್ರದರ್ಶನವನ್ನು ಆಯೋಜಿಸಿದ್ದು ಫ್ರಾನ್ಸ್‌ನ ಅನ್ನೊನೇಯಲ್ಲಿ. ಅರೆ..! ಈಗ ನಾವು ದೀಪಾವಳಿಯಲ್ಲಿ ಹಾರಿ ಬಿಡುವಂತಹಾ ಹಾಟ್ ಏರ್ ಬಲೂನ್ ಗಳಿಗೆ ಇಷ್ಟೆಲ್ಲಾ ತಾಕತ್ತಿದೆಯಾ ಎನ್ನಬಹುದು. ಇದು ನಡೆದದ್ದು 1783 ರಲ್ಲಿ.. ಅದು  ಹಗುರ ಎಂದು ಹಗುರವಾಗಿ ಪರಿಗಣಿಸಬೇಡಿ ಮತ್ತೆ. ಇಂತಹಾ ಹಾಟ್ ಏರ್ ಬಲೂನ್ ಎಂತಹಾ ಅನಾಹುತವನ್ನು ಮಾಡಬಲ್ಲದು ಎಂದು ಸಾಬೀತಾಗಿದ್ದು 1849 ರಲ್ಲಿ.


ಈ ಮಾನವರಹಿತ ಹಾಟ್ ಏರ್ ಬಲೂನ್ ಗಳಲ್ಲಿ ಸುಮಾರು 11 ರಿಂದ 14 ಕೆ.ಜಿ ಯಷ್ಟು ಸ್ಪೋಟಕಗಳನ್ನು ತುಂಬಬಹುದಾಗಿತ್ತು.ಆಸ್ಟ್ರೀಯನ್ ಲೆಫ್ಟಿನೆಂಟ್ ಫ್ರಾಂಜ್ ವಾನ್ ಉಚಾಟಿಯಸ್ ಇದನ್ನು ಬಲೂನ್ ಬಾಂಬ್ ಎಂದು ಕರೆದನು. ಇದನ್ನೇ ಬಳಸಿಕೊಂಡು ಆಸ್ಟ್ರಿಯಾ ವೆನ್ನಿಸ್ ಮೇಲೆ ದಾಳಿ ನಿಯೋಜಿಸಿತು. ಇನ್ನೇನು ಎಲ್ಲವೂ ಅಂದುಕೊಂಡಂತೆ ಸಾಗುತ್ತಿತ್ತು ಎನ್ನುವಷ್ಟರಲ್ಲಿ ಗಾಳಿ ಬೀಸುವ ದಿಕ್ಕು ಬದಲಾಗಿ ಅಂದುಕೊಂಡ ಜಾಗದಿಂದ ದೂರದಲ್ಲಿ ಬಾಂಬ್ ಸ್ಪೋಟವಾಗಿ ಆಸ್ಟ್ರಿಯಾದ ಸಂಚು ವಿಫಲವಾಯಿತು. ಇದು ಹಗುರ ಎಂದು ಭಾವಿಸಲಾದೀತೇ..??


ನಾವು ಈಗ ಡ್ರೋನ್ ಬಳಸಿ ಫೋಟೋ ಹಾಗೂ ವಿಡಿಯೋ ತೆಗೆದುಕೊಳ್ಳುವುದು ಏನು ಮಹಾ.. 1858 ರಲ್ಲಿಯೇ ಗ್ಯಾಸ್ಪರ್ ಫೆಲಿಕ್ಸ್ ಟೂರ್ನಾಚನ್ ಫ್ರಾನ್ಸ್ ನ ಪ್ಯಾರಿಸ್ ನಲ್ಲಿ ಈ ಹಾಟ್ ಏರ್ ಬಲೂನ್ ಬಳಸಿ ಮೊಟ್ಟ ಮೊದಲ ಫೋಟೋ ತೆಗೆದಿದ್ದ. ಆದರೆ, ದುರದೃಷ್ಟವಶಾತ್ ಆ ಫೋಟೋ ಕಳೆದುಹೋಗಿರುವುದರಿಂದ ಈಗ ಅದು ನೋಡಲು ಲಭ್ಯವಿಲ್ಲ. ಹಾಟ್ ಏರ್ ಬಲೂನ್ ನಲ್ಲಿ ಕ್ಯಾಮೆರಾ ಅಳವಡಿಸಿದ ನಂತರ 1896 ರಲ್ಲಿ ಡೈನಾಮೆಟ್ ಕಂಡು ಹಿಡಿದಿದ್ದ ಅಲ್ಫ್ರೆಡ್ ನೊಬೆಲ್ ರಾಕೆಟ್ ಗೆ ಕ್ಯಾಮೆರಾ ಅಳವಡಿಸುತ್ತಾರೆ. ಇದು ಅನ್ ಮ್ಯಾನ್ಡ್ ವೆಹಿಕಲ್ ನಲ್ಲಿ ಅಳವಡಿಸಿದ ಮೊಟ್ಟ ಮೊದಲ ಕ್ಯಾಮೆರಾ.


ಮೊದಲ ರೇಡಿಯೋ-ನಿಯಂತ್ರಿತ ಕ್ರಾಫ್ಟ್ ಅನ್ನು 1898 ರಲ್ಲಿ ಸಾರ್ವಜನಿಕವಾಗಿ ಪ್ರದರ್ಶನಕ್ಕಿಡುತ್ತಾನೆ ನಿಕೋಲಾ ಟೆಸ್ಲಾ. ಆ ಕ್ರಾಫ್ಟ್ ಒಂದು ದೋಣಿಯ ಆಕಾರದಲ್ಲಿದ್ದು ರೇಡಿಯೋ ಸಿಗ್ನಲ್ ಗಳಿಂದ ಟೆಸ್ಲಾ ನಿಯಂತ್ರಿಸಿದಂತೆಲ್ಲಾ ನಿಯಂತ್ರಣಕ್ಕೆ ಒಳಗಾಗುತ್ತಿರುತ್ತದೆ. ಆಗ ಜನರು ಈತ ಒಬ್ಬ ಮಾಂತ್ರಿಕನಾಗಿರಬಹುದು. ಅಥವಾ ಆ ಕ್ರಾಫ್ಟ್ ನಲ್ಲಿ ಈಗಾಗಲೇ ತರಬೇತಿ ನೀಡಿರುವ ಕೋತಿ ಇರಬಹುದು ಎಂದು ಮಾತನಾಡಿಕೊಳ್ಳುತ್ತಾರೆ. ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ನಡೆದ ಈ ಪ್ರದರ್ಶನವೇ ಮುಂದೆ ರೇಡಿಯೋ ಸಿಗ್ನಲ್ ನಿಯಂತ್ರಿತ ವಿಮಾನಗಳಿಗೆ ಬಲಿಷ್ಟವಾದ ಮಾದರಿ. 


ಮೊದಲ ಪೈಲೆಟ್ ಲೆಸ್ ವಿಮಾನ ಅಭಿವೃದ್ಧಿಯಾಗಿದ್ದು ಮೊದಲ ವರ್ಲ್ಡ್ ವಾರ್ ಸಮಯದಲ್ಲಿ. 1917 ರಲ್ಲಿ ಬ್ರಿಟನ್ ಸಣ್ಣ ರೇಡಿಯೋ ಸಿಗ್ನಲ್ ನಿಂದ ಕಂಟ್ರೋಲ್ ಮಾಡಬಹುದಾದಂತಹಾ ಏರ್ ಕ್ರಾಫ್ಟ್ ಅನ್ನು ಟೆಸ್ಟ್ ಮಾಡಿದರೆ, 1918 ಆಕ್ಟೊಬರ್ ನಲ್ಲಿ ಅಮೆರಿಕಾ ಕೆಟ್ಟರಿಂಗ್ ಬಗ್ ಎನ್ನುವ ಏರಿಯಲ್ ಟಾರ್ಪೆಡೋ ಒಂದನ್ನು ಟೆಸ್ಟ್ ಮಾಡಿತು. ಎರಡೂ ದೇಶಗಳ ಈ ಅಭಿವೃದ್ಧಿ ಹಾಗೂ ಟೆಸ್ಟಿಂಗ್ ಭರವಸೆ ನೀಡಿದ್ದರೂ ಮೊದಲ ವರ್ಲ್ಡ್ ವಾರ್ ನಲ್ಲಿ ಇವು ಬಳಕೆಯಾಗಲಿಲ್ಲ.


ಆದರೆ, ಬ್ರಿಟನ್ ನವರು ಈ ರೀತಿಯ ಸುಮಾರು ರೇಡಿಯೋ ಕಂಟ್ರೋಲ್ಡ್ ಏರ್ ಕ್ರಾಪ್ಟ್ ಗಳನ್ನು ತಯಾರಿಸಿ 1935 ರಲ್ಲಿ ಮಿಲಿಟರಿ ಬಳಕೆಗಾಗಿ ತರಬೇತಿ ನೀಡಲು ಆರಂಭಿಸಿದರು. ಈ ಮಾಡೆಲ್ ಗಳಿಗೆ ನೀಡಿದ ಹೆಸರು "ಕ್ವೀನ್ ಬೀ". ಇದರಿಂದಾಗಿಯೇ ಡ್ರೋನ್ ಎಂಬ ಹೆಸರು ಬಂದಿತು ಎಂದೂ ಹೇಳಲಾಗುತ್ತದೆ. ಬ್ರಿಟನ್ ನಲ್ಲಿ ಅಮೆರಿಕಾದ ಅಡ್ಮಿರಲ್ ವಿಲಿಯಂ ಹ್ಯಾರಿಸನ್ ಸ್ಟ್ಯಾಂಡ್ಲಿ ಕ್ವೀನ್ ಬೀ ಯ ಹಾರಾಟವನ್ನು ನೋಡಿ ಅಮೆರಿಕಾದಲ್ಲಿಯೂ ಹೀಗೆಯೇ ಇದನ್ನು ತಯಾರಿಸಬೇಕೆಂದು ಕಮಾಂಡರ್ ಡೆಲ್ಮರ್ ಫಹ್ರ್ನಿಗೆ ಈ ಕೆಲಸ ವಹಿಸಿದರು. ಕ್ವೀನ್ ಬೀಗೆ ಪರ್ಯಾಯವಾಗಿ ಅಮೆರಿಕಾದಲ್ಲಿ ಫಹ್ರ್ನಿ ಮೊದಲು "ಡ್ರೋನ್" ಎಂಬ ಪದವನ್ನು ಬಳಸಿದರು ಎಂದು ನಂಬಲಾಗಿದೆ.


1982 ರಲ್ಲಿ ಡ್ರೋನ್ ಗಳು ಯುದ್ಧ ಭೂಮಿಯನ್ನು ಪ್ರವೇಶಿಸಿದವು. ಇಸ್ರೇಲ್ ಮತ್ತು ಸಿರಿಯಾ ನಡುವೆ ನಡೆಯುತ್ತಿದ್ದ ಯುದ್ಧದಲ್ಲಿ ಸಿರಿಯಾ ವಿರುದ್ಧ ಇಸ್ರೇಲ್ ಡ್ರೋನ್ ಅನ್ನು ಬಳಸಿತು. ತನ್ನ ಈ ಕೆಲಸಕ್ಕೆ.. ಅತ್ಯಂತ ಕಡಿಮೆ ಸಾವು - ನೋವುಗಳಲ್ಲಿ ಈ ಯುದ್ಧವನ್ನು ಮುಗಿಸಲು ಡ್ರೋನ್ ಬಳಸಿದೆವು ಎನ್ನುವ ಹೇಳಿಕೆ ನೀಡಿತು. ಇದಾದ ನಂತರ 1985 ರಲ್ಲಿ ವಿಯೆಟ್ನಾಂನಲ್ಲಿ ಯುದ್ಧ ಭೂಮಿಯಲ್ಲಿ ವ್ಯಾಪಕವಾಗಿ ಡ್ರೋನ್ ಬಳಕೆಯಾಯಿತು. 1991 ರ ಗಲ್ಫ್ ಯುದ್ಧದ ಸಮಯದಲ್ಲಿ ಡ್ರೋನ್ ಗಳು 24/7 ಹಾರಿದವು. ಒಂದು ಪ್ರಮುಖ ಯುದ್ಧದಲ್ಲಿ ಮೊದಲ ಬಾರಿಗೆ, ಯುದ್ಧದ ಪ್ರಾರಂಭದಿಂದ ಅದರ ಮುಕ್ತಾಯದವರೆಗೆ ಕನಿಷ್ಠ ಒಂದಾದರೂ ಡ್ರೋನ್ ವಾಯುಗಾಮಿಯಾಗಿತ್ತು.


1980 ರ ದಶಕದಲ್ಲಿ ಬಳಸಲಾದ ಡ್ರೋನ್ ನಿಂದ ಸಿಕ್ಕ ಯಶಸ್ಸುಗಳು ಭವಿಷ್ಯದ ಯುದ್ಧಭೂಮಿಯಲ್ಲಿ ಡ್ರೋನ್‌ಗಳು ವಿಸ್ತಾರವಾದ ಪಾತ್ರವನ್ನು ಹೊಂದಿವೆ ಎಂದು ಸ್ಪಷ್ಟವಾಗಿ ತಿಳಿಯಪಡಿಸಿತು. 


ಅಬ್ರಹಾಂ ಕರೆಮ್‌ ಸಹಾಯದಿಂದ ಅಮೆರಿಕಾ ಪ್ರಿಡೇಟರ್ ಡ್ರೋನ್ ಅನ್ನು ಅಭಿವೃದ್ಧಿಪಡಿಸುತ್ತದೆ . ಇದರಿಂದಾಗಿ ಹಿಂದೆಂದಿಗಿಂತಲೂ ಯುದ್ಧಭೂಮಿಗೆ ಶಸ್ತ್ರಸಜ್ಜಿತ ಡ್ರೋನ್‌ಗಳು ಬಂದಂತಾಯಿತು. ಬಹುಶಃ ಇತರ ಯಾವುದೇ ಅನ್ ಮ್ಯಾನ್ಡ್ ವೆಹಿಕಲ್ ಗಿಂತ ಹೆಚ್ಚು, ಪ್ರಿಡೇಟರ್ ಪ್ರಪಂಚದಾದ್ಯಂತ ಗುರಿಗಳನ್ನು ಹೊಡೆಯುವ ಡ್ರೋನ್ ಎಂದೇ ಖ್ಯಾತಿಯಾಗಿದೆ.


ಮೊದಲ ಬಾರಿಗೆ ಮಿಲಿಟರಿ ಕಾರ್ಯ ಕ್ಷೇತ್ರವನ್ನು ಹೊರತುಪಡಿಸಿ ನಾಗರಿಕ ವಾಯುಪ್ರದೇಶದಲ್ಲಿ ಡ್ರೋನ್ಗಳನ್ನು ಅನುಮತಿಸಲಾಗಿದ್ದು ಅಮೆರಿಕಾದಲ್ಲಿ. 2006 ರಲ್ಲಿ ಕತ್ರಿನಾ ಚಂಡಮಾರುತದಿಂದ ಉಂಟಾದ ವಿನಾಶದ ನಂತರ, ಹುಡುಕಾಟ , ರಕ್ಷಣೆ ಮತ್ತು ವಿಪತ್ತು ಪರಿಹಾರ ಕಾರ್ಯಾಚರಣೆಗಳಿಗಾಗಿ ನಾಗರಿಕ ವಾಯುಪ್ರದೇಶದಲ್ಲಿ ಡ್ರೋನ್ ಗಳನ್ನು ಹಾರಲು ಎಫ್.ಎ.ಎ ಅನುಮತಿಸಿತು . ಥರ್ಮಲ್ ಕ್ಯಾಮೆರಾಗಳೊಂದಿಗೆ ಬಂದ ಪ್ರಿಡೇಟರ್ ಡ್ರೋನ್‌ಗಳು 10,000 ಅಡಿಗಳಷ್ಟು ಎತ್ತರದಿಂದಲೇ ಮಾನವರ ಶಾಖದಿಂದ ಅವರನ್ನು ಪತ್ತೆಹಚ್ಚಲು ಸಹಾಯಕವಾದವು. ಇದಾದ ನಂತರ 2015 ರಲ್ಲಿ ಕಮರ್ಷಿಯಲ್ ಡ್ರೋನ್ ಗಳೆಂದು 1000 ಡ್ರೋನ್ ಗಳಿಗೆ ಹಾರಾಟಕ್ಕೆ ಅನುಮತಿ ಸಿಕ್ಕಿದೆ. 


ಈ ಪ್ರಿಡೇಟರ್ ಡ್ರೋನ್ ಅನ್ನು 2000 ದಲ್ಲಿ ಒಸಾಮಾ ಬಿನ್ ಲಾಡೆನ್ ನನ್ನು ಪತ್ತೆ ಪಚ್ಚಲು ಉಪಯೋಗಿಸಲಾದ ಅಫ್ಗಾನಿಸ್ತಾನದಿಂದ ಕಳುಹಿಸಲಾದ ಮಿಸೈಲ್ ಜೊತೆಗೂ ಬಳಸಲಾಗಿತ್ತು. ಪ್ರಿಡೇಟರ್ ಅನ್ನು ಬಿಟ್ಟರೆ ಮತ್ತೊಂದು ಬಲಶಾಲಿ ಡ್ರೋನ್ ಎಂದೇ ಖ್ಯಾತಿಯಾಗಿರುವುದು 'ರಾವೆನ್'.


ಮನುಷ್ಯರೇನೋ ವ್ಯಾಯಾಮ ಅಥವಾ ಡಯೆಟ್ ಮಾಡಿ ತೆಳ್ಳಗಾಗುತ್ತಾರೆ. ನಾವು ಬಳಸುವ ಫೋನ್ ಗಳು ಕೂಡಾ ಈಗೀಗ ತೆಳ್ಳಗಾಗುತ್ತಿವೆ. ಇದರ ಕುರಿತು ಒಂದು ಘಟನೆಯನ್ನು ಹೇಳುತ್ತಾರೆ. ಒಮ್ಮೆ ಐಫೋನ್ ಮಾಡೆಲ್ ಅನ್ನು ಇನ್ನಷ್ಟು ತೆಳ್ಳಗೆ ಮಾಡಲು ಸಾಧ್ಯವೇ ಇಲ್ಲ ಎಂದು ಅಲ್ಲಿನ ಹೆಡ್ ಕೈಯಲ್ಲಿ ಕೊಟ್ಟಾಗ ಆತ ಅದನ್ನು ತೆಗೆದು ಕೋಪದಿಂದ, ಸ್ಟ್ರೆಸ್ ನಿಂದ ಬಿಸಾಡುತ್ತಾನೆ. ಆಗ ಅದು ಹೋಗಿ ಅಕ್ವೇರಿಯಂ ಒಳಗೆ ಬೀಳುತ್ತದಂತೆ. ಕೋಪ ಇಳಿದು ಅದನ್ನು ತೆಗೆದು ನೋಡಿದವನಿಗೆ ಖುಷಿಯಾಗುತ್ತದೆ. ಕಾರಣ. ಅಲ್ಲಿ ಏರ್ ಬಬಲ್ ಗಳು ಸೇರಿರುತ್ತವೆ. ಈ ಹೆಚ್ಚುವರಿ ಗಾಳಿಯನ್ನು ತೆಗೆದಾಗ ಅದಕ್ಕಿಂತಲೂ ತೆಳ್ಳಗಿನ ಮಾಡೆಲ್ ಸಿದ್ಧವಾಗುತ್ತದೆ. ಹೀಗೆ ಪ್ರತಿಯೊಂದು ಬದಲಾವಣೆಗೂ ಪ್ರತಿ ವಸ್ತುವೂ ಸಿದ್ಧವಾಗಲೇ ಬೇಕು. 


ಡ್ರೋನ್ ವೇಗ, ಕಾರ್ಯಕ್ಷಮತೆ, ತೂಕ ಎತ್ತುವಿಕೆ, ಅಧಿಕ ಕಾಲ ಹಾರಾಡುವಿಕೆಯಲ್ಲಿ ಬಡಲಾವಣೆಯಾದಂತೆ ಡ್ರೋನ್ ಆಕಾರ ಕೂಡಾ ಬದಲಾಗುತ್ತಿದೆ. 1990 ರಲ್ಲಿ ಮಿನಿ ಹಾಗೂ ಮೈಕ್ರೋ ಗಾತ್ರದ ಡ್ರೋನ್ ಗಳು ಬಂದಿದ್ದು ಈಗ ಅಮೆರಿಕಾದಲ್ಲಿ ಪಾಕೆಟ್ ಗಾತ್ರದ ಡ್ರೋನ್ ಗಳನ್ನು ಬಳಸಲಾಗುತ್ತಿದೆ. ಇನ್ನು ಮೈಕ್ರೋಸ್ಕೋಪಿಕ್ ಗಾತ್ರದ ಡ್ರೋನ್ ಗಳು ಬರುವ ಕಾಲ ದೂರವೇನಿಲ್ಲ.


ಇನ್ನಷ್ಟು ಡ್ರೋನ್ ಕುರಿತ ಮಾಹಿತಿ ಮತ್ತು ಅನುಕೂಲಗಳು ಇರುವಂತೆಯೇ ಡ್ರೋನ್ ಗೆ ಇರುವ ಅನಾನುಕೂಲವನ್ನು ತಿಳಿಯೋಣ ಮುಂದಿನ ಟೆಕ್ - ಟಾಕ್ ನಲ್ಲಿ.

- ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ