ಗುರುವಾರ, ಏಪ್ರಿಲ್ 16, 2026

ಮುಂದಿನ ಬಿಗ್ ಬಾಸ್ ಆಗಬಹುದಾ ಈ ಇಂಟರ್ನೆಟ್ ಆಫ್ ಥಿಂಗ್ಸ್ ? ( ಟೆಕ್ - ಟಾಕ್ - 15 )


ಏನಪ್ಪಾ ಇದು ಇಲ್ಲಿಯೂ ಬಿಗ್ ಬಾಸ್ ಅಂದುಕೊಂಡ್ರಾ.. ಅರೆ! ಇಷ್ಟ ಪಟ್ಟು ಅಥವಾ ಬೈದುಕೊಂಡೇ ಬಿಗ್ ಬಾಸ್ ನ ಒಂದಾದರೂ ಕ್ಲಿಪ್ಪಿಂಗ್ ನೋಡಿಯೇ ಇರುತ್ತೀರಿ ಅಲ್ಲವಾ..? ನಾವೇನಾದರೂ ಬಿಗ್ ಬಾಸ್ ಗೆ ಹೋದರೆ ಅಂತಾ ಊಹಿಸಿಕೊಂಡು ನೋಡಿ... ಕೇವಲ ಊಹೆ ಅಲ್ಲ.. ಮುಂದೊಂದು ದಿನ ಬಿಗ್ ಬಾಸ್ ನಂತೆಯೇ ಯಾರಾದರೂ ನಮ್ಮನ್ನು ಸದಾ ಗಮನಿಸಲು ಶುರುವಿಟ್ಟುಕೊಂಡರೆ..??


ನಾವು ಎಲ್ಲಿ ಹೋಗುತ್ತೇವೆ , ಎಲ್ಲಿ ಬರುತ್ತೇವೆ, ಹೇಗೆ ಓಡಾಡುತ್ತೇವೆ, ಯಾರ ಜೊತೆಗೆ ಎಷ್ಟು ಮಾತನಾಡುತ್ತೇವೆ, ಹೇಗೆ ಮಾತನಾಡುತ್ತೇವೆ, ಏನು ಮಾತನಾಡುತ್ತೇವೆ, ಯಾವ ರೀತಿ ಸ್ಪಂದಿಸುತ್ತೇವೆ ಇದೆಲ್ಲದರ ಜೊತೆಗೆ ನಮ್ಮ ಆರೋಗ್ಯ ಹೇಗಿದೆ, ಎಷ್ಟು ಆಹಾರ ತಿನ್ನಬೇಕು, ಎಷ್ಟು ನೀರು ಕುಡಿಯಬೇಕು, ಎಷ್ಟು ಕ್ಯಾಲೋರಿ ಕರಗಿಸಬೇಕು ಇದನ್ನು ಸದಾ ಕಾಲ ಮಾನಿಟರ್ ಮಾಡಿದರೆ ಹೇಗಿರುತ್ತದೆ ? ಕೇಳುವುದಕ್ಕೆ ಹೇಗನ್ನಿಸುತ್ತಿದೆ.. ಅರೆ! ಮತ್ತೊಬ್ಬರ ಮೇಲೆ ಕಣ್ಣಿಡುವುದಕ್ಕೆ ಇದನ್ನು ಬಳಸಬಹುದಲ್ಲಾ.. ಅಂದರೆ, ಮಕ್ಕಳ ಮೇಲೆ ಅಥವಾ ವಯಸ್ಸಾದವರ ಮೇಲೆ ಹೀಗೆ ನಿಗಾ ವಹಿಸಲು ಬಳಸಬಹುದು ಅಲ್ಲವಾ ಎನ್ನಿಸುತ್ತದೆ. 


ಹೌದು.. ಈ ಇಂಟರ್ನೆಟ್ ಆಫ್ ಥಿಂಗ್ಸ್ ಟೆಕ್ನಾಲಜಿ ಪೂರಕವೂ ಹೌದು ಮಾರಕವೂ ಹೌದು. ಮೊದಲಿಗೆ ನಾವು ಈಗಾಗಲೇ ಬಳಸುತ್ತಿರುವ ಇಂತಹಾ ಡಿವೈಸ್ ಗಳ ಕುರಿತು ತಿಳಿಯೋಣ. 


ಕೀಪ್ಯಾಡ್ ಗಳ ಬದಲಾಗಿ ಸ್ಮಾರ್ಟ್ ವಾಚ್ ಬಂದ ಹಾಗೆ ಈಗ ವಾಚ್ ಗಳ ಬದಲಾಗಿ ಸ್ಮಾರ್ಟ್ ವಾಚ್ ಬಂದಿದೆ. ಸ್ಮಾರ್ಟ್ ಫ್ರಿಡ್ಜ್ ಬಂದಿದೆ. ಸ್ಮಾರ್ಟ್ ಫೈರ್ ಅಲಾರಂ, ಸ್ಮಾರ್ಟ್ ಡೋರ್ ಲಾಕ್, ಸ್ಮಾರ್ಟ್ ಬೈಸಿಕಲ್, ಮೆಡಿಕಲ್ ಸೆನ್ಸಾರ್ , ಫಿಟ್ ನೆಸ್ ಟ್ರ್ಯಾಕ್ಟರ್, ಸ್ಮಾರ್ಟ್ ಸೆಕ್ಯೂರಿಟಿ ಸಿಸ್ಟಮ್ ಹೀಗೆ ಎಲ್ಲವೂ ಸ್ಮಾರ್ಟ್ ಆಗುತ್ತಿವೆ. ಈ ಡಿವೈಸ್ ಗಳು ಸ್ಮಾರ್ಟ್ ಹೇಗೆ ? ಮಾಮೂಲು ಡಿವೈಸ್ ಗಳಿಗಿಂತ ಇದು ಹೇಗೆ ಭಿನ್ನ.. ಗೊತ್ತೇ ??


ಹಳ್ಳಿಯಲ್ಲಿ ಒಬ್ಬ ರೈತ ಮೋಟಾರ್ ಸ್ಟಾರ್ಟ್ ಮಾಡಲು ರಾತ್ರಿ ಲೈನ್ ಬಂತು ಎಂದು ಎಷ್ಟೋ ಹೊತ್ತಿಗೆ ಹೊಲಕ್ಕೆ ಹೋಗಿ ಮೋಟಾರ್ ಆನ್ ಮಾಡಿ ಆಫ್ ಮಾಡಿ ಬರಬೇಕಿತ್ತು. ಆ ಸಮಯದಲ್ಲಿ ಪ್ರಾಣಿಗಳ ದಾಳಿಯಾಗಿ ಘಾಸಿಯಾಗಿದ್ದೂ ಇದೆ. ಈಗ ಹಾಗಿಲ್ಲ. ಕೈಯ್ಯಲ್ಲಿ ಮೊಬೈಲ್ ಫೋನ್ ಇದ್ದರೆ ಸಾಕು ಮೊಬೈಲ್ ನಲ್ಲಿ ಬಟನ್ ಒತ್ತಿದರೆ ಹೊಲದಲ್ಲಿನ ಮೋಟಾರ್ ಆನ್ ಆಗುತ್ತದೆ. ಕೇವಲ ಮನೆ ಎಂದಲ್ಲ ವಿದೇಶಕ್ಕೆ ಹೋದರೂ ಆತ ಮೊಬೈಲ್ ಮೂಲಕ ಎಲ್ಲಿಯೋ ಇರುವ ತನ್ನ ಹೊಲದ ಮೋಟಾರ್ ಅನ್ನು ಆನ್ ಆಫ್ ಮಾಡಬಲ್ಲ. ಕೇವಲ ಇಷ್ಟೇ ಅಲ್ಲ.. ಹೊಲದ ಮಣ್ಣಿನ ತೇವ ಎಷ್ಟಕ್ಕೆ ಬಂದರೆ ನೀರು ಸಾಕು ಎನ್ನಿಸುತ್ತದೆಯೋ ಆಗ ಮೋಟಾರ್ ತನ್ನಿಂದ ತಾನೇ ಆಫ್ ಆಗುವಂತೆ ವ್ಯವಸ್ಥೆ ಇದೆ. ಮಣ್ಣಿನ ಉಷ್ಣಾಂಶ, ತೇವಾಂಶ, ಬೆಳೆಯ ಮೇಲಿನ ದಾಳಿ ತಡೆಯಲು ಹೀಗೆ ಪ್ರತಿ ಸೆಕಂಡ್ ನ ಅಪ್ಡೇಟ್ ಅನ್ನು ಆತ ಕುಳಿತ ಜಾಗದಲ್ಲಿ ಪಡೆಯಬಹುದು.


ನೀವು ಕೆಲಸಕ್ಕೆ ಎಂದೋ ಅಥವಾ ಸಮಾರಂಭಕ್ಕೆ ಎಂದೋ ಮೂರ್ನಾಲ್ಕು ದಿನ ಮನೆ ಬಿಟ್ಟು ಎಲ್ಲಿಯೋ ಹೋಗಬೇಕಾದ ಪರಿಸ್ಥಿತಿ ಇರುತ್ತದೆ. ಬಸ್ಸಿನಲ್ಲಿ ಕುಳಿತಾಗ ಲೈಟ್, ಫ್ಯಾನ್, ಮೋಟಾರ್ ಎಲ್ಲವೂ ಆನ್ ಆಗಿಯೇ ಇದ್ದದ್ದು ನೆನಪಾಗುತ್ತದೆ. ಮತ್ತೊಬ್ಬರ ಬಳಿ ಸ್ಪೇರ್ ಕೀ ಇರುವುದಿಲ್ಲ. ಮೈನ್ ಸ್ವಿಚ್ ಕೂಡಾ ಮನೆಯ ಒಳಗಿದ್ದರೆ.. ?? ಈಗ ಅದಕ್ಕೆ ಗಾಬರಿಯಾಗಬೇಕಿಲ್ಲ. ಎಲ್ಲಿಂದಲಾದರೂ ಕುಳಿತು ನೀವು ಮನೆಯ ಎಲ್ಲಾ ಸ್ವಿಚ್ ಗಳನ್ನು ನಿಯಂತ್ರಣ ಮಾಡಬಹುದು. ಅಷ್ಟೇ ಅಲ್ಲ.. ಮನೆಯ ಬಾಗಿಲನ್ನು ಸಹಾ ನೀವು ಎಲ್ಲಿಂದಲಾದರೂ ತೆಗೆದು , ಹಾಕಿಕೊಳ್ಳುವಂತೆ ಮಾಡಬಹುದು.


ಕತ್ತಲೆಯಾದರೆ ಮನೆಯಲ್ಲಿ ಲೈಟ್ ತನ್ನಿಂದ ತಾನೇ ಹೊತ್ತಿಕೊಳ್ಳುವಂತೆ, ಮನೆಯ ನೀರಿನ ಟ್ಯಾಂಕ್ ನೀರು ತುಂಬಿದ ನಂತರ ತನ್ನಿಂತಾನೇ ಮೋಟಾರ್ ಆಫ್ ಆಗುವಂತೆ ಹೀಗೆ ಸಣ್ಣ ಪುಟ್ಟದರಿಂದ ನಿಮ್ಮ ನಾಳಿನ ಮೀಟಿಂಗ್, ಶಾಪಿಂಗ್ ಪ್ಲಾನ್ ಮಾಡಲು ಸಹಾ ಈ ಇಂಟರ್ನೆಟ್ ಆಫ್ ಥಿಂಗ್ಸ್ ಬಳಕೆಯಾಗುತ್ತಿದೆ.


ಈ ಮಾಮೂಲು ಡಿವೈಸ್ ಗಳಿಗೆ ಯಾವ ರೀತಿಯಲ್ಲಿಯಾದರೂ ಇಂಟರ್ನೆಟ್ ಕನೆಕ್ಟ್ ಮಾಡಿ , ಸೆನ್ಸಾರ್, ಪ್ರೋಗ್ರಾಮಿಂಗ್, ನೆಟ್ವರ್ಕ್ ಎಲ್ಲವನ್ನೂ ಅಳವಡಿಸಿ ಸ್ಮಾರ್ಟ್ ಸಿಸ್ಟಮ್ ಗಳನ್ನಾಗಿ ಬದಲಾವಣೆ ಮಾಡಲಾಗಿದೆ. ಇಲ್ಲಿ ಮನುಷ್ಯನ ಇರುವಿಕೆಯೇ ಇಲ್ಲದೆ ಮಶೀನ್ ಮಶೀನ್ ಗಳೇ ತಮ್ಮಿಂದ ತಾವೇ ಮಾತನಾಡಿಕೊಳ್ಳಬಲ್ಲವು..ಅರ್ಥ ಮಾಡಿಕೊಂಡು ಕೆಲಸ ಮಾಡಬಲ್ಲವು. ಮನುಷ್ಯನ ಕೆಲಸ, ಸಮಯ ಹಾಗೂ ಹಣ ಎಲ್ಲವನ್ನೂ ಉಳಿಸಬಲ್ಲವು. ಈಗಿನ ಟೆಕ್ನಾಲಜಿ ಬಳಕೆಯನ್ನು ಹೆಚ್ಚೆಚ್ಚು ಸಮರ್ಥವಾಗಿ ನಿಭಾಯಿಸಬಲ್ಲವು. ಸಮರ್ಥವಾಗಿ ಮಾನಿಟರ್ ಮಾಡಬಲ್ಲವು. ಇದೆಲ್ಲದಕ್ಕೂ ಮುಖ್ಯ ಕಾರಣ ಇಂಟರ್ನೆಟ್ ಆಫ್ ಥಿಂಗ್ಸ್.


ಈ ಇಂಟರ್ನೆಟ್ ಆಫ್ ಥಿಂಗ್ಸ್ ಅಥವಾ ಐ.ಓ.ಟಿ ಎಂದು ಕರೆಯಲಾಗುವ ಟೆಕ್ನಾಲಜಿ ಶುರುವಾದದ್ದು ಹೇಗೆ ಗೊತ್ತಾ ?? ತಿಳಿಯೋಣ ಬನ್ನಿ. 


ಈಗ ಈ ಐ.ಓ.ಟಿ ಯನ್ನು ಟೆಕ್ ಕ್ಷೇತ್ರದಲ್ಲಿ ನಾಲ್ಕನೇ ಕೈಗಾರಿಕಾ ಕ್ರಾಂತಿ ಅಂದರೆ ಪೋರ್ಥ್ ಇಂಡಸ್ಟ್ರಿಯಲ್ ರೆವೆಲ್ಯೂಷನ್ ಎಂದೇ ಹೆಸರಾಗಿರುವ ಈ ಪದ ಬಂದದ್ದು ಕಂಪ್ಯೂಟರ್ ಸೈನ್ಟಿಸ್ಟ್ ಕೆವಿನ್ ಆಸ್ಟಿನ್ ನಿಂದ. ಆತ 1999 ರಲ್ಲಿ ಪ್ರೊಕ್ಟಾರ್ ಮತ್ತು ಗ್ಯಾಂಬಲ್ ಎಂಬ ಕಂಪನಿಯಲ್ಲಿ ತನ್ನ ಹೊಸ ಸೆನ್ಸಾರ್ ಪ್ರಾಜೆಕ್ಟ್ ಒಂದಕ್ಕೆ ತನ್ನ ಪ್ರೆಸೆಂಟೇಷನ್ ನಲ್ಲಿ ನೀಡಿದ ಹೆಸರು ಇದು. 


ಸೆನ್ಸಾರ್ ಹಾಗೂ ಇಂಟಲಿಜೆನ್ಸ್ ಅನ್ನು ಮಾಮೂಲು ಡಿವೈಸ್ ಗಳಿಗೆ ಅಳವಡಿಸುವ ಈ ಹೆಸರು ಬಂದದ್ದು 1980 ರಲ್ಲಿಯೇ ಮೊದಲಿಗೆ ಕಾರ್ನೆಗಿ ಮೆಲನ್ ಯೂನಿವರ್ಸಿಟಿ ವಿದ್ಯಾರ್ಥಿಗಳಿಂದ ಬಳಕೆಗೆ ಬಂದಿತ್ತು. ಅಲ್ಲಿನ ಕಾಲೇಜಿನಲ್ಲಿ ಕೋಕಾ ಕೋಲಾ ವೆಂಡಿಂಗ್ ಮೆಷಿನ್ ಒಂದಿತ್ತು. (ಈಗ ನಮ್ಮ ಬೆಂಗಳೂರಿನಲ್ಲಿ ಹಣ ಹಾಕಿದರೆ ಇಡ್ಲಿ ಕೊಡುವ ಮಶೀನ್ ಇದೆಯಲ್ಲ.. ಅದೇ ಇದು.  ಕೆಲವರು ಇದನ್ನು ಏ.ಟಿ.ಎಂ ಎನ್ನುತ್ತಾರೆ. ಆದರೆ, ಇವು ಏ.ಟಿ.ಎಂ ಅಲ್ಲ.. ಈ ರೀತಿಯ ಮೆಷಿನ್ ಗಳಿಗೆ ವೆಂಡಿಂಗ್ ಮೆಷಿನ್ ಎನ್ನುತ್ತಾರೆ ನೆನಪಿರಲಿ ) 

ಯೂನಿವರ್ಸಿಟಿಯಲ್ಲಿರುವ ಆ ಕೋಲಾ ವೆಂಡಿಂಗ್ ಮೆಷಿನ್ ನಲ್ಲಿ ಅವರಿಗೆ ಬೇಕಾದ ಕೋಲ್ಡ್ ಆಗಿರುವ ಕೋಲಾ ಯಾವಾಗಲೂ ಸಿಗುತ್ತಿರಲಿಲ್ಲ. ಇಲ್ಲವೇ, ಆ ಮಶೀನ್ ನಲ್ಲಿ ಖಾಲಿಯಾಗಿರುತ್ತಿತ್ತು.. ಇದು ಗೊತ್ತಾಗುತ್ತಿರಲಿಲ್ಲ. ಇದಕ್ಕೆ ಒಂದು ಪರಿಹಾರ ಕಂಡು ಹಿಡಿಯಬೇಕೆಂದು ಅದರಲ್ಲಿ ಬದಲಾವಣೆ ಮಾಡಿ ಆ ವೆಂಡಿಂಗ್ ಮೆಷಿನ್ ಅನ್ನು ಸ್ಮಾರ್ಟ್ ಆಗಿ ರೂಪಿಸಿದರು. ತದನಂತರ ಅದರಲ್ಲಿ ಕೋಲಾ ಲಭ್ಯವಿದೆಯೋ ಇಲ್ಲವೋ.. ಅದು ಕೂಲ್ ಆಗಿದೆಯೋ ಇಲ್ಲವೋ ಎಂದು ತಿಳಿಯುತ್ತಿತ್ತು..


1990 ನಲ್ಲಿ ಮೊದಲ ಬಾರಿಗೆ ಜಾನ್ ರಾಮ್ ಕಿ ತನ್ನ ಟೋಸ್ಟರ್ ಅನ್ನು ಇಂಟರ್ನೆಟ್ ಗೆ ಕನೆಕ್ಟ್ ಮಾಡಿದ. ನಂತರ ಕೇಂಬ್ರಿಡ್ಜ್ ಯೂನಿವರ್ಸಿಟಿ ವಿದ್ಯಾರ್ಥಿಗಳು ಕಾಫಿ ರಿಪೋರ್ಟ್ ಪಡೆಯಲು ವೆಬ್ ಕ್ಯಾಮ್ ಅನ್ನು ಬಳಸಿದರು. ಹೀಗೆ ಮಶೀನ್ ನಿಂದ ಮಶೀನ್ ಗೆ ಇಂಟರ್ನೆಟ್ ಮೂಲಕ ಸಂಪರ್ಕ ಉಂಟಾಯಿತು. ಹಾಗೆ ನೋಡಿದರೆ 1832 ರಲ್ಲಿ ಮೊದಲು ಎಲೆಕ್ಟ್ರೋ ಮ್ಯಾಗ್ನೆಟಿಕ್ ಟೆಲಿಗ್ರಾಫ್ ಅನ್ನು ಎರಡು ಮೆಷಿನ್ ಗಳೇ ತಮ್ಮಿಂದ ತಾವು ಸಂಪರ್ಕ ಮಾಡುವಂತೆ ಮಾಡಿದ್ದರು.


ಇದೆಲ್ಲವೂ ಮುಂದುವರಿದು 2000 ದಲ್ಲಿ ಎಲ್.ಜಿ ತನ್ನ ಮೊದಲ ಸ್ಮಾರ್ಟ್ ಫ್ರಿಡ್ಜ್ ಬಿಡುಗಡೆ ಮಾಡಿತು. 2007 ರಲ್ಲಿ ಮೊದಲ ಐಫೋನ್, 2009 ರಲ್ಲಿ ಗೂಗಲ್ ಡ್ರೈವರ್ ಲೆಸ್ ಕಾರ್ ಅನ್ನು ಬಿಡುಗಡೆ ಮಾಡಿತು. 2011 ರಲ್ಲಿ ಥರ್ಮೋಸ್ಟ್ಯಾಟ್ ಅನ್ನು ಗೂಗಲ್ ಬಿಡುಗಡೆ ಮಾಡಿತು. 


ಗೂಗಲ್ ವಾಯ್ಸ್ ಕಂಟ್ರೋಲರ್ ಗಳಿವೆ. ಅಮೆಜಾನ್ ಎಕೋ ಪ್ಲಸ್ ವಾಯ್ಸ್ ಕಂಟ್ರೋಲರ್ ಗಳು, ಅಮೆಜಾನ್ ಡ್ಯಾಶ್ ಬಟನ್, ಆಗಸ್ಟ್ ಡೋರ್ ಬೆಲ್ ಕ್ಯಾಮ್, ಆಗಸ್ಟ್ ಸ್ಮಾರ್ಟ್ ಲಾಕ್, ಬೆಲ್ ಕಿನ್ ವಿಮೋ ಸ್ಮಾರ್ಟ್ ಲೈಟ್ ಸ್ವಿಚ್ , ನೆಸ್ಟ್ ಸ್ಮೋಕ್ ಅಲಾರಂ ಹೀಗೆ ಮಾರುಕಟ್ಟೆಯಲ್ಲಿ ಹಲವಾರು ಐ.ಓ.ಟಿ ಡಿವೈಸ್ ಗಳು ಲಭ್ಯವಿವೆ. 


ಕೇವಲ ವಾಯ್ಸ್ ನಿಂದಲೇ ಕಂಟ್ರೋಲ್ ಮಾಡುತ್ತೇವೆ ಎನ್ನುವುದು ನಿಜವೇ ಆದರೂ ನಮ್ಮ ಲೈಫ್ ಸ್ಟೈಲ್ ತಿಳಿಯಲು ಮೀಡಿಯಾ, ಅಲಾರಂ, ವಾಯ್ಸ್, ಕಾಲ್, ನಾವು ಸರ್ಚ್ ಮಾಡಿದ್ದು, ಶಾಪಿಂಗ್ ಡೀಟೈಲ್ಸ್ ಹೀಗೆ ಎಲ್ಲವನ್ನೂ ಆಟೊಮ್ಯಾಟಿಕ್ ಆಗಿ ಹಿಡಿದಿಟ್ಟುಕೊಳ್ಳುತ್ತಿರುವ ಐ.ಓ.ಟಿ ಹೇಗಿದೆ ಗೊತ್ತಾ.. 2025 ರ ಹೊತ್ತಿಗೆ 41.6 ಬಿಲಿಯನ್ ಡಿವೈಸ್ ಗಳು ಇಂಟರ್ನೆಟ್ ಮೂಲಕ ನಮ್ಮ ಡೇಟಾಗಳನ್ನೆಲ್ಲಾ ಹಿಡಿದಿಡಲಿದೆ. 


ಐ. ಓ. ಟಿ ಜೊತೆಗೆ ಈಗ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಕೂಡಾ ಸೇರಿದೆ. ಈ ರೆವಲ್ಯೂಷನ್ ಕಾಂಬಿನೇಷನ್ ಹೇಗಿದೆ ಗೊತ್ತಾ..?? ಅದರ ಕುರಿತು ಮುಂದಿನ ಟೆಕ್ - ಟಾಕ್ ನಲ್ಲಿ ತಿಳಿಯೋಣ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ