ಬುಧವಾರ, ಏಪ್ರಿಲ್ 15, 2026

ನಿಶಾಂತ್ (ಪುಸ್ತಕ ಯಾನ - 193)


ಪುಸ್ತಕದ ಶೀರ್ಷಿಕೆ : ನಿಶಾಂತ್

ಲೇಖಕರು : ಸಾಯಿಸುತೆ

ಪ್ರಕಾಶಕರು : ಐ. ಬಿ. ಹೆಚ್ ಪ್ರಕಾಶನ

ಮರು ಮುದ್ರಣ : 2001 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 206

ಬೆಲೆ : 60 ರೂ.


ಬದುಕಿನ ಕೆಲ ಸಂದರ್ಭದಲ್ಲಿ ಕೋಪದಲ್ಲಿ ಬರುವ ಮಾತೆಂದರೆ ಸಾಯೋಕ್ಕೆ ಬಂದ್ಯಾ.. ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಎದುರಿಗಿರುವವರು ಹಲವಾರು ಬಾರಿ ಸುಮ್ಮನೆ ನಿಂತುಬಿಡುತ್ತಾರೆ. ಆದರೆ, ಇಲ್ಲಿ ಪ್ರತಿ ಬಾರಿ ಇಂತಹ ಪ್ರಶ್ನೆ ಎದುರಾದಾಗಲೆಲ್ಲಾ "ಸಾಯೋಕಲ್ಲ.. ಬದುಕೋಕೆ ಬಂದಿರೋದು." ಎಂದು ದೃಢವಾಗಿ ನುಡಿದ ನಿಶಾಂತ್ ಪದೇ ಪದೇ ಇಷ್ಟವಾಗುತ್ತಾನೆ. 


ಭೂಮೀನ ಹಾಸಿಗೆ, ಆಕಾಶನ ಹೊದಿಕೆಯನ್ನಾಗಿ ಮಾಡಿ ಹೋದ ಹೆತ್ತ ತಾಯಿ ಆತನನ್ನು ಕಲ್ಯಾಣಿಯ ಮೆಟ್ಟಿಲ ಬಳಿ ಬಿಟ್ಟ ನಂತರ ಅನಾಥನೆಂಬ ಪಟ್ಟ ಸಿಕ್ಕಿತ್ತು. ಇಂತಹಾ ಹಲವಾರು ಅನಾಥ ಮಕ್ಕಳು ತನ್ನ ತಾಯಿ ಯಾರು ಎಂಬ ಭಾವದಲ್ಲಿ ಅನಾಥರಂತೆಯೇ ಬದುಕಿ ಬಿಡುತ್ತಾರೆ. ಆದರೆ, ಅಪರೂಪಕ್ಕೆ ಕೆಲವರಿಗೆ ಒಂದು ಊರೇ ತನ್ನ ಮನೆ ಎಂದು ಭಾವಿಸುವಂತೆ.. ಊರಿನ ತಾಯಂದಿರೇ ಆತನ ತಾಯಿಯರಾಗಿ ಬೆಳೆಯುವ ಅವಕಾಶವೂ ದಕ್ಕಿ ಬಿಡುತ್ತದೆ. 


ಉಸ್ತಾದ್ ಚಿಕ್ಕಣ್ಣನವರ ಕೈಗೆ ಸಿಕ್ಕ ಹುಡುಗ 'ನಿಶಾಂತ್' ಆಗಿ ಬೆಳೆದ. ತಂದೆಯಂತೆ ಮಮತೆ ತೋರುತ್ತಿದ್ದ, ಜವಾಬ್ದಾರಿ ಹೊತ್ತಿದ್ದ ಉಸ್ತಾದರ ಮಾತಿಗೆ ಹಾಗೂ ವಿದ್ಯೆಗೆ ಬೆಲೆ ಕೊಟ್ಟು ಹಳ್ಳಿಯಲ್ಲಿಯೇ ಉಳಿದಿದ್ದರೆ ಅವರಂತೆಯೇ ಗರಡಿಯಲ್ಲಿಯೇ ಸಾಧನೆ ಮಾಡಿರುತ್ತಿದ್ದನೇನೋ.. ಆದರೆ, ಆತನಿಗೆ ಓದುವ ಹಂಬಲ, ಸಾಧಿಸುವ ಹಂಬಲ. ಸಾಧನೆಯ ಹಾದಿಯಲ್ಲಿ ನಡೆಯಲು ಆತ ನಿರ್ಧರಿಸಿಯಾಗಿತ್ತು. ಉಸ್ತಾದರು ಆತನಿಗೆ ಶರ್ಮರ ವಿಳಾಸಕೊಟ್ಟು ಅಲ್ಲಿ ಹೋಗಿ ಸಹಾಯ ಕೇಳಿದರೆ ಅವರು ನಿರಾಕರಿಸಲಾರರು ಎಂದು ಹೇಳಿ ಅಲ್ಲಿಗೆ ಕಳಿಸಿಯಾಗಿತ್ತು. 


ಆದರೆ, ಬಂದ ದಿನವೇ ಆತನಿಗೆ ಸಿಕ್ಕಿದ್ದು ಅವಮಾನ. ಆ ಮನೆಯ ಮಗನಾದ ಅಜಿತ್ ಬಹಳ ಗರ್ವದಿಂದಲೇ ಶ್ರೀಮಂತಿಕೆಯ ಅಹಂ ಅನ್ನು ಪ್ರದರ್ಶಿಸಿದ್ದ. ಭವಾನಿಯವರಿಂದ ಕೊಂಚಮಟ್ಟಿಗಿನ ಮಾತುಕತೆ ಸಿಕ್ಕಿತಾದರೂ ಶರ್ಮ ಊರಲ್ಲಿಲ್ಲದ್ದರಿಂದ ಆತ ನಂತರ ಬಂದು ಅವರನ್ನು ಭೇಟಿಯಾಗಿದ್ದ. 


ಶರ್ಮರನ್ನು ಭೇಟಿಯಾದ ನಂತರವೂ ಆತ ತನ್ನ ಸ್ವಾಭಿಮಾನದ ಹಾಗೂ ಮುಚ್ಚಿಡದ ಮನಸ್ಸಿನ ಮಾತಿನಿಂದ ಶರ್ಮಾರಿಂದ ಪಡೆದುಕೊಳ್ಳುವ ಸಹಾಯವನ್ನು ಕಳೆದುಕೊಂಡಾಗಿತ್ತು. ಅಲ್ಲದೇ ಅಜಿತ್ ಜೊತೆಯಾದ ಜಗಳದಿಂದ ಭವಾನಿಯವರೂ ಆತನನ್ನು ಬೆಂಬಲಿಸಿರಲಿಲ್ಲ. 


ಅಂತಹಾ ಸಂದರ್ಭದಲ್ಲಿ ಆತನಿಗೆ ಜೊತೆಯಾದದ್ದು ಪೋಲಿಸ್ ಪೇದೆ ವಿಠೋಬ. ಪರಿಚಯವೇ ಇಲ್ಲದವನು ಅಂತಃಕರಣದಿಂದ ಆತನ ಪೊಲೀಸ್ ಕ್ವಾರ್ಟಸ್ ನಲ್ಲಿ ಈತನನ್ನು ಗೆಳೆಯನಂತೆ, ತಮ್ಮನಂತೆ ಆದರಿಸಿದ. ಆದರೆ, ಆತನ ಮೇಲೆ ತನ್ನ ಸಂಪೂರ್ಣ ಜವಾಬ್ದಾರಿಯನ್ನು ಹೇರದೆ, ತನ್ನ ಉದ್ದೇಶ ತಿಳಿಸಿ ತನಗೊಂದು ಕೆಲಸ ಹುಡುಕಿಕೊಂಡಿದ್ದ ನಿಶಾಂತ್. 


ನಂತರ ಕಾಲೇಜಿನಲ್ಲಿ ಅಜಿತ್ ಹಾಗೂ ನಿಶಾಂತ್ ಇಬ್ಬರು ಪದೇ ಪದೇ ಭೇಟಿಯಾಗುತ್ತಿದ್ದರು. ಅವರ ನಡುವಿನ ಮುಖಾಮುಖಿ, ವೈಮನಸ್ಸು ನಿಶಾಂತ್ ಎಷ್ಟೇ ತಡೆದರೂ.. ಅಜಿತ್ ನಿಂದಾಗಿ ದಿನೇ-ದಿನೇ ಹೆಚ್ಚುತ್ತಲೇ ಹೋಗುತ್ತಿತ್ತು. ಆದರೆ, ಆತನ ತಂಗಿ ಅರ್ಚನಾಗೆ ಮಾತ್ರ ನಿಶಾಂತ್ ಎಂದರೆ ಒಂದು ರೀತಿಯ ಮೆಚ್ಚು. 


ಅರ್ಚನಾ ಹಾಗೂ ತರಂಗಿಣಿ ಇಬ್ಬರೂ ಚಿಕ್ಕಂದಿನಿಂದ ಅಕ್ಕ-ತಂಗಿಯರಂತೆ ಬೆಳೆದ ಗೆಳತಿಯರು. ಅರ್ಚನಾ ಹೆಚ್ಚಿನ ಬಾರಿ ತರಂಗಿಣಿಯ ಮನೆಗೆ ಹೋಗುವುದಿತ್ತು, ತರಂಗಿಣಿ ಅರ್ಚನಾ ಮನೆಗೆ ಬಂದು ಉಳಿಯುತ್ತಿದ್ದದ್ದು ಅಪರೂಪವೇ... ಆಕೆಯ ತಂದೆ ಜರ್ಮನ್ ಹಾಗೂ ತಾಯಿ ಭಾರತೀಯರು. ತಂದೆ ಡಿ.ಎಫ್ ಆಚಾರ್ಯ ಅವರದ್ದು ಕಲಿಯಲ್ಲಿ ಎತ್ತಿದ ಕೈ ಹಾಗೂ ಚಿಂತನೆಗಳಲ್ಲಿಯೂ ಬಹಳ ವಿಭಿನ್ನರು ಹಾಗೂ ಉತ್ತಮರು. ತರಂಗಿಣಿಗೆ ತಾಯಿ ಇರಲಿಲ್ಲ. ತಂದೆಯಂತೆಯೇ ಹೆಚ್ಚು ಮೌನ ಹಾಗೂ ಮಿತ ಭಾಷೆಯ ಹುಡುಗಿ, ಮುಗ್ಧೆ ಶರ್ಮರ ಮನೆಯಲ್ಲಿ ಎಲ್ಲರಿಗೂ ಪ್ರೀತಿ. ಅವರಿಬ್ಬರ ಗೆಳೆತನಕ್ಕೂ ನೀರೆರೆಯುತ್ತಿದ್ದರು ಮನೆಯವರು. ತಮ್ಮ ಮನೆಗೆ ಈ ಹುಡುಗಿ ಶಾಶ್ವತವಾಗಿ ಸೇರಲಿ ಎಂಬ ಮಹದಾಸೆಯು ಅದರಲ್ಲಿತ್ತು. 


ಆದರೆ ದುಡುಕುತನದ, ಅಹಂಕಾರದ ಮಾತಿನ, ಶ್ರೀಮಂತಿಕೆಯ ಗತ್ತಿನ ಅಜಿತ್ ಗಿಂತಲೂ.. ಸ್ವಾಭಿಮಾನಿ, ತನ್ನ ಯಾವುದೇ ಕೆಲಸವನ್ನು ತಾನೇ ಮಾಡಿಕೊಳ್ಳುವ ಹಾಗೂ ಗೌರವಯುತ ನಡವಳಿಕೆಯ ನಿಶಾಂತ್ ಅರ್ಚನಾ ಹಾಗೂ ತರಂಗಿಣಿಯನ್ನು ಸೆಳೆಯುತ್ತಿದ್ದದ್ದು ಅಜಿತ್ ಗೆ ಕಣ್ಣು ಕಿಸುರು. ಅವರಿಬ್ಬರನ್ನೂ ಸೆಳೆಯುತ್ತಿದ್ದ ನಿಶಾಂತ್ ಗೆ ಒಂದು ಗತಿ ಕಾಣಿಸಬೇಕೆಂದು ಯೋಚಿಸುತ್ತಿದ್ದ ಅಜಿತ್ ಆತನ ಪ್ರಾಣತೆಗೆಯುವ ಮಟ್ಟಕ್ಕೂ ಹೋಗಿದ್ದನು. ಆತನ ಹುಟ್ಟಿನ ರಹಸ್ಯ ತಿಳಿದು ಆತನ ತಾಯಿಯ ಚರಿತ್ರೆಯನ್ನು ಹಾಗೂ ಆತನ ಹುಟ್ಟನ್ನು ಕೆಟ್ಟದಾಗಿ ಬಿಂಬಿಸಲು ಹೊರಟಿದ್ದನು. 


ಡಿ. ಎಫ್ ಆಚಾರ್ಯ ಅವರು ಆತನ ಹುಟ್ಟನ್ನು ಬೇರೆಯದ್ದೇ ರೀತಿ ವಿಶ್ಲೇಷಿಸಿದ್ದು ಇಷ್ಟವಾಗಿತ್ತು. ಅವರು ಕರ್ಣನ ಹುಟ್ಟು ಹಾಗೂ ಈತನ ಹುಟ್ಟನ್ನು ಸಮೀಕರಿಸಿದ್ದರು. ಆತನ ತಾಯಿಯನ್ನು ಒಮ್ಮೆಯಾದರೂ ನೋಡುವ ಹಾಗೂ ಜೀವನದಲ್ಲಿ ಭೇಟಿ ಮಾಡುವ ಅವಕಾಶವಾದರೂ ಕರ್ಣನಿಗಿತ್ತು ಎಂದುಕೊಳ್ಳುತ್ತಿದ್ದ ನಿಶಾಂತ್ ಗು5 ಮುಂದೆ ಆ ದಿನ ಎದುರಾಗುವುದಿತ್ತು. 


ಅರ್ಚನಾ ನಿಶಾಂತ್ ಕುರಿತು ತೋರುತ್ತಿದ್ದ ಭಾವವನ್ನು ಮೊದಲಿಗೆ ಅದು ಪ್ರೇಮವೆಂದುಕೊಂಡರೂ.. ಅದು ಪ್ರೇಮವಾಗಿರಲಿಲ್ಲ. ನಿಷ್ಕಲ್ಮಶ ವಾತ್ಸಲ್ಯ, ಮಮತೆಯೊಂದು ಮನುಷ್ಯನನ್ನು ಆ ರೀತಿಯಲ್ಲಿಯೂ ಸೆಳೆಯುತ್ತದೇನೋ..


ಶರ್ಮರಿಗೆ ತಮ್ಮ ಪತ್ನಿ ಭವಾನಿಯ ಕುರಿತು ಅಪರಿಮಿತ ಪ್ರೇಮ. ಮಕ್ಕಳಿದ್ದರೂ.. ಪತ್ನಿಗೆ ಮೊದಲ ಆದ್ಯತೆ. ಅವರ ಈ ವಿಚಿತ್ರ ಪ್ರೇಮ ಭವಾನಿಯವರಿಗೆ ಮೊದಮೊದಲಿಗೆ ಉಸಿರು ಕಟ್ಟಿಸುವಂತಾಗುತ್ತಿತ್ತು. ಎಲ್ಲಿಯೇ ಹೊರಟರೂ.. ಇಬ್ಬರು ಜೊತೆಯಲ್ಲಿಯೇ. ಸ್ವಾತಂತ್ರವೇ ಇಲ್ಲದ, ಸಕಲವನ್ನು ನೀಡಿದ ಪಂಜರದ ಪಕ್ಷಿಯಂತಹಾ ಬದುಕು ಅವರದ್ದು. ಆದರೆ, ಅದಕ್ಕೂ ಒಂದು ಕಾರಣವಿತ್ತು. ಭವಾನಿಯವರ ಬದುಕಲ್ಲಿಯೂ ಒಂದು ಪ್ರೇಮದ ಕಥೆ ಇತ್ತು. 


ಅಚಾನಕ್ಕಾಗಿ ಭೇಟಿಯಾಗುವ ಎಸ್.ಪಿ ನಿರ್ಮಲ್ ಕುಮಾರ್ ಅವರನ್ನು ಒಂದು ಸಹಾಯಕ್ಕೆಂದು ಭವಾನಿಯವರೇ ಸಂಪರ್ಕಿಸುತ್ತಾರೆ. ಅದು ನಿಶಾಂತ್ ಮೇಲೆ ನಡೆಯುತ್ತಿದ್ದಂತಹ ಆಸಿಡ್ ದಾಳಿಯನ್ನು ತಡೆಯಲು. ನಿರ್ಮಲ್ ಕುಮಾರ್ ಭವಾನಿಯವರ ಮಾತಿಗೆ ಅಷ್ಟು ಬೆಲೆ ಕೊಟ್ಟಿದ್ದಕ್ಕೆ..?? ಭವಾನಿಯವರು ಅದನ್ನು ತಡೆಯಲು ಹೊರಟದ್ದೇಕೆ..??


ಉಸ್ತಾದ್ ಚಿಕ್ಕಣ್ಣನವರ ಮಾತಿಗೆ ಬೆಲೆಕೊಡಲು ಅವರು ಮಾಡಿದ್ದ ಸಹಾಯವೇನು..?? ಶರ್ಮರವರನ್ನು ನಿಶಾಂತ್ ನ ಯಾವ ಮಾತು ರೊಚ್ಚಿಗೆಬ್ಬಿಸಿತ್ತು..??


ಅರ್ಚನಾ ಹಾಗೂ ತರಂಗಿಣಿಗೆ ನಿಶಾಂತ್ ಕುರಿತು ಇದ್ದ ಭಾವನೆಗಳೇನು..?? ಶರ್ಮ ಮನೆಯವರಿಗೆ ತರಂಗಿಣಿಯ ಕುರಿತು ಇದ್ದ ಆಸೆ ಕನಸುಗಳು ಈಡೇರಿದವೇ..?? ಭವಾನಿಯವರ ಪ್ರೇಮ ಪ್ರಕರಣವೇನು.. ಅದಕ್ಕೂ ಈಗಿನ ಬದುಕಿಗೂ ಇದ್ದ ಸಂಬಂಧವೇನು..?? ವಿಠೋಬಾ ಹಾಗೂ ನಿಶಾಂತ್ ಇಬ್ಬರ ಬದುಕುಗಳು ಬೆಸೆದದ್ದು ಹೌದಾದರೂ.. ಅವರ ನಡುವಿನ ಭಾಂಧವ್ಯ ಹೇಗಿತ್ತು..??


ಈ ಎಲ್ಲರ ಬದುಕು ಒಂದು ಚುಕ್ಕೆಯಲ್ಲಿ ಕನೆಕ್ಟ್ ಆಗುತ್ತದೆ. ಆ ಪ್ರಕರಣ ಅಂದಿನ ಕರ್ಣನ ಹುಟ್ಟಿನಂತೆ ರಹಸ್ಯವಾಗಿರದಿದ್ದರೂ.. ಅದರ ನಂತರದ ಪರಿಣಾಮವೇನು..??


"ಧರ್ಮ ಸೂಕ್ಷ್ಮಗಳು ತೀರಾ ಸೂಕ್ಷ್ಮ. ಕರ್ಣನು ಕೃಷ್ಣನಿಗೆ ಜನ್ಮ ವೃತ್ತಾಂತ ತಿಳಿಸುವಾಗ, ಕನ್ಯೆಗೆ ವಿವಾಹವಾಗುವ ಮೊದಲು ಮಗು ಹುಟ್ಟಿದರೆ 'ಕಾನೀನ' ಎಂದು ಹೆಸರು. ವಿವಾಹಕ್ಕೆ ಮುನ್ನ ಗರ್ಭವತಿಯಾಗಿ ವಿವಾಹದ ನಂತರ ಮಗುವು ಹುಟ್ಟಿದರೆ ಮಗುವಿಗೆ 'ಸಹೋಢ' ಎಂದು ಹೆಸರು. ಈ ಕಾನೀನ ಹಾಗೂ ಸಹೋಢರ ಜನ್ಮಕ್ಕೆ ಒಂದೇ ತಾಯಿ ಕಾರಣವಾದರೂ.. ತಂದೆ ಯಾರೆಂದು ಹೇಳುತ್ತಾರೆ..??

ಈ ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ನಿಶಾಂತ್ ಕಾದಂಬರಿಯನ್ನು.


ಸ್ವಾಭಿಮಾನ, ಹೀಗೆಯೇ ಇರಬೇಕೆಂಬ ಕೆಚ್ಚು ಕಾಣುವಂತೆ ಅಷ್ಟೇ ಪ್ರಾಮಾಣಿಕತೆಯೂ ಕಂಡುಬರುತ್ತದೆ. ಒಳ್ಳೆಯತನಕ್ಕೆ ಎದುರಾಗುವ ಸವಾಲುಗಳ ಜೊತೆಗೆ, ಭಟ್ಟರ ಪತ್ನಿಯಂತಹವರ ತಾಯಿಯರ ಮಮತೆ, ಮಕ್ಕಳಿಲ್ಲದಿದ್ದರೂ.. ಮಗನಂತೆ ಸಾಕಿದ ಉಸ್ತಾದ್ ರೀತಿಯವರ ಮಮತೆಯೂ ಕಾಣಸಿಗುತ್ತದೆ. ಆತ್ಮೀಯ ಓದು.

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ