ಇವತ್ತಿನ ಮಾಧ್ಯಮ ಜಗತ್ತಿನಲ್ಲಿ ಆ್ಯಂಕರಿಂಗ್ ಗೆ ಒಂದು ವಿಶೇಷವಾದ ಸ್ಥಾನವಿದೆ. ಸ್ಟೇಜ್ ಕಾರ್ಯಕ್ರಮಗಳ ನಿರೂಪಣೆಗೂ, ರೇಡಿಯೋ ಕಾರ್ಯಕ್ರಮಗಳ ನಿರೂಪಣೆಗೂ, ಟಿ.ವಿ ಕಾರ್ಯಕ್ರಮಗಳ ನಿರೂಪಣೆಗೂ ಬಹಳವೇ ವ್ಯತ್ಯಾಸವಿದೆ. ಅದರಲ್ಲೂ ಸಂದರ್ಶಕರಾಗಿ ಹಾಗೂ ಪ್ಯಾನೆಲ್ ಡಿಸ್ಕಶನ್ ಗೆ ಒಂದು ಬೇರೆಯದ್ದೇ ತೂಕ. ಸೌಂದರ್ಯ, ಮಾತು, ಪ್ರಸೆಂಟೇಶನ್, ಸಮಯಕ್ಕೆ ಸರಿಯಾಗಿ ಮಾತನಾಡುವ ಚಾತುರ್ಯ, ವರ್ತಮಾನದ ಅರಿವು, ಮುಂದೆ ಕುಳಿತಿರುವವರ ಘನತೆ ಇದೆಲ್ಲದರ ಜೊತೆಗೆ ಕಾನ್ಫಿಡೆನ್ಸ್ ಎನ್ನುವುದು ಮಿಳಿತವಾದರೆ ಅವರು ಮೀಡಿಯಾದ ಸ್ಟಾರ್ ಆ್ಯಂಕರ್ ಆಗುವುದರಲ್ಲಿ ಸಂದೇಹವೇ ಇಲ್ಲ. ಸುದ್ದಿ ಪ್ರಪಂಚದಲ್ಲಿ ಪುರುಷರದ್ದೇ ಪ್ರಾಬಲ್ಯವಿದ್ದಾಗ ಜಗತ್ತಿನ ಪ್ರಥಮ ಮಹಿಳಾ ಹೋಸ್ಟ್ ಆಗಿ ಟ್ರೆಂಡ್ ಸೆಟ್ ಮಾಡಿ ಐದು ದಶಕಗಳು ತನ್ನದೇ ಛಾಪು ಮೂಡಿಸಿದ್ದೇ ಬಾರ್ಬರಾ ವಾಲ್ಟರ್ಸ್. ಆ ಕಾಲದಲ್ಲಿಯೇ ಅತಿ ಹೆಚ್ಚು ಸಂಭಾವನೆ ಎಂದರೆ ವರ್ಷಕ್ಕೆ ಒಂದು ಮಿಲಿಯನ್ ಡಾಲರ್ ಸಂಭಾವನೆ ಪಡೆದು ಎಲ್ಲರಿಗೂ ಅಚ್ಚರಿ ಮೂಡಿಸಿದ್ದ ಗಣ್ಯಾತಿಗಣ್ಯರು ಎಂಬುದನ್ನೂ ಲೆಕ್ಕಕ್ಕಿಡದೆ ಪಾಯಿಂಟ್ ಬ್ಲ್ಯಾನ್ಕ್ ಪ್ರಶ್ನೆಗಳನ್ನು ಕೇಳುತ್ತಾ ಒಂದೊಮ್ಮೆ ಎದುರಿಗಿರುವವರನ್ನೂ ಮೌನ ವಹಿಸುವಂತೆ ಮಾಡುತ್ತಿದ್ದವರೇ ಬಾರ್ಬರಾ ಜಿಲ್ ವಾಲ್ಟರ್ಸ್. ಅಷ್ಟೇ ಅಲ್ಲ, ಅಂತಹಾ ಪ್ರಶ್ನೆ ಮಾಡಿದಕ್ಕೆ ಆಕೆ ಯಾವತ್ತೂ ಕ್ಷಮೆ ಯಾಚಿಸಿದ್ದೂ ಇಲ್ಲ.
ಯು.ಎಸ್ ನ ಬಾರ್ಬರಾ 2022 ಡಿಸೆಂಬರ್ 22 ರಂದು ತಮ್ಮ 93 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. 1929 ರಲ್ಲಿ ಯು.ಎಸ್ ನ ಬೋಸ್ಟನ್ ನಲ್ಲಿ ಹುಟ್ಟಿದ ಬಾರ್ಬರಾ ಎಂಟರ್ಟೈನ್ ಮೆಂಟ್ ಜಗತ್ತಿನ ಶೋ ಬ್ಯುಸಿನೆಸ್ ಬುಕ್ಕಿಂಗ್ ಏಜೆಂಟ್ ಹಾಗೂ ನೈಟ್ ಕ್ಲಬ್ ಓನರ್ ಲೂಯಿಸ್ ವಾಲ್ಟರ್ ಹಾಗೂ ದೇನಾ ರ ಮಗಳು. ಮುಂದೆ ಬಾರ್ಬರಾ ಗೆದ್ದದ್ದು 12 ಎಮ್ಮಿ ಅವಾರ್ಡ್ ಗಳನ್ನು. 1953 ರಲ್ಲಿ ನ್ಯೂಯಾರ್ಕ್ ನ ಸಾರಾ ಲಾರೆನ್ಸ್ ಕಾಲೇಜಿನಲ್ಲಿ ಡಿಗ್ರಿ ಮುಗಿಸಿದ ಈಕೆಯ ಜರ್ನಲಿಸಂ ಕೆರಿಯರ್ ಮೊದಲು ಶುರುವಾಗಿದ್ದು 1961 ರಲ್ಲಿ ಎನ್. ಬಿ. ಸಿ ( ನ್ಯಾಷನಲ್ ಬ್ರಾಡ್ ಕಾಸ್ಟಿಂಗ್ ಕಂಪನಿಯಲ್ಲಿ) ರಿಪೋರ್ಟರ್ ಆಗಿ, ಪ್ಯಾನೆಲ್ ಮೆಂಬರ್ ಆಗಿ, ಮಹಿಳೆಯರ ಆಸಕ್ತಿಕರ ಕತೆಗಳ ಶೋ ಗೆ ಸೆಗ್ ಮೆಂಟ್ ಪ್ರೊಡ್ಯೂಸರ್ ಆದ ಬಳಿಕ 1964 ರಲ್ಲಿ "ಟು ಡೇ ಗರ್ಲ್" ಎನ್ನುವ ಶೋ ನಲ್ಲಿ ಆಕರ್ಷಕವಾಗಿ ಪುಟ್ಟ ಮಾತುಗಳು ಹಾಗೂ ಜಾಹೀರಾತುಗಳನ್ನು ಓದಲು ತೊಡಗಿದರು. ನಂತರದ ದಿನಗಳಲ್ಲಿ ತಮ್ಮ ಕೆರಿಯರ್ ನಲ್ಲಿ ಪುಟ್ಟ ಪುಟ್ಟ ಮೆಟ್ಟಿಲುಗಳನ್ನು ಹತ್ತುವಂತೆ ಎನ್.ಬಿ.ಸಿ ಯಲ್ಲಿಯೇ ಬೆಳಿಗ್ಗೆ ಪ್ರಸಾರವಾಗುತ್ತಿದ್ದ ಯು.ಎಸ್ ನ್ಯೂಸ್ ಪ್ರೋಗ್ರಾಮ್ 'ಟು - ಡೇ' ನಲ್ಲಿ ಮೊದಲಿಗೆ ಕಮೆಂಟೇಟರ್ ಆಗಿ ನಂತರದಲ್ಲಿ ನ್ಯೂಸ್ ರೀಡರ್ ಆಗಿ ಮೊದಲ ಮಹಿಳಾ ಕೋ - ಹೋಸ್ಟ್ ಆಗಿ 1974 ರಿಂದ ಕಾರ್ಯ ನಿರ್ವಹಿಸಿದರು. ಕೇವಲ ಪುರುಷರೇ ಹೋಸ್ಟ್ ಮಾಡುತ್ತಿದ್ದ ಶೋ ಗೆ ಕೋ- ಹೋಸ್ಟ್ ಆಗಿ ಎಲ್ಲರ ನಿಲುವನ್ನೂ ಬದಲಿಸಿ ಟ್ರೆಂಡ್ ಸೆಟ್ಟರ್ ಆದರು. ಆಕೆಯ ಬುದ್ಧಿವಂತಿಕೆ ಮತ್ತು ಕ್ಯಾಮೆರಾ ಪ್ರೆಸೆನ್ಸ್ ಜೊತೆಗೆ ಆಕೆ ತನ್ನ ಮುಂದಿನ ಕಾರ್ಯಕ್ರಮಗಳಿಗೆ ಮಾಡಿಕೊಳ್ಳುತ್ತಿದ್ದ ಸಿದ್ಧತೆ ಎಲ್ಲದರಿಂದ ಆಕೆಗೆ ಖ್ಯಾತಿ ದೊರೆತು ಆಕೆಯನ್ನು ಉನ್ನತ ಸ್ಥಾನದಲ್ಲಿ ನಿಲ್ಲುವಂತೆ ಮಾಡಿತು. ಇದರ ಮರುವರ್ಷವೇ ಆಕೆಗೆ ಮೊದಲ ಎಮ್ಮಿ ಅವಾರ್ಡ್ ದೊರೆತದ್ದು.
ಯು.ಎಸ್ ನ ಮೊದಲ ಮಹಿಳಾ ನೆಟ್ವರ್ಕ್ ನ್ಯೂಸ್ ಆ್ಯಂಕರ್ ಆಗಿ ಸೇರಿದ್ದು ಎ.ಬಿ.ಸಿ ನ್ಯೂಸ್ ಅನ್ನು. 1976 ರಲ್ಲಿ ಅಲ್ಲಿ ತಮ್ಮ ಕೆರಿಯರ್ ಶುರು ಮಾಡಿದಾಗ ಆಗಿನ ಯು.ಎಸ್ ಪ್ರೆಸಿಡೆಂಟ್ ಆಗಿದ್ದ ರಿಚರ್ಡ್ ನಿಕ್ಸನ್ ನಿಂದ ಈಗಿನ ಪ್ರೆಸಿಡೆಂಟ್ ಡೊನಾಲ್ಡ್ ಟ್ರಂಪ್ ವರೆಗೂ ಎಲ್ಲರನ್ನೂ ಸಂದರ್ಶನ ಮಾಡಿದ್ದಾರೆ. ಇಷ್ಟೇ ಅಲ್ಲ ಈ ಪಟ್ಟಿಯನ್ನು ನೋಡುತ್ತಾ ಹೋದರೆ ದೊಡ್ಡ ಪಟ್ಟಿಯೇ ಇದೆ. ಯು.ಕೆ ಯ ಪ್ರಧಾನಿ ಮಾರ್ಗರೇಟ್ ಥ್ಯಾಚರ್, ರಷ್ಯಾದ ಪ್ರೆಸಿಡೆಂಟ್ ವ್ಲ್ಯಾದಿಮಿರ್ ಪುಟಿನ್, ಕ್ಯೂಬಾದ ಸರ್ವಾಧಿಕಾರಿ ಎಂದೇ ಹೆಸರಾಗಿದ್ದ ಫಿಡೆಲ್ ಕ್ಯಾಸ್ಟ್ರೊ, ಈಜಿಪ್ಟ್ ನ ಪ್ರೆಸಿಡೆಂಟ್ ಅನ್ವರ್ ಸಾದತ್, ಇಸ್ರೇಲ್ ನ ಪ್ರಧಾನಿ ಮೆನಾಚೆಂ, ಜೊತೆಗೆ ಹಲವಾರು ಪಾಪ್ ಸ್ಟಾರ್, ರಾಕ್ ಸ್ಟಾರ್ ಗಳ ಹೆಸರು ಕಾಣುತ್ತದೆ. ಎ.ಬಿ.ಸಿ ನೆಟ್ವರ್ಕ್ ನಲ್ಲಿ ಆಕೆಯ ಶೋ ಗಳಾದ 'ದಿ ಬಾರ್ಬರಾ ವಾಲ್ಟರ್ಸ್ ಸ್ಪೆಶಲ್ಸ್' ಮತ್ತು '10 ಮೋಸ್ಟ್ ಫ್ಯಾಸಿನೇಟಿಂಗ್ ಪೀಪಲ್' ಕೂಡಾ ಪ್ರಸಿದ್ಧಿ ಪಡೆದಿದ್ದ ಶೋ ಗಳು. 1984 ರ ಎ.ಬಿ.ಸಿ ಮ್ಯಾಗಜಿನ್ ನ '20/20' ಕೂಡಾ ಈಕೆಯ ಸೂಪರ್ ಹಿಟ್ ಶೋ.
ಹೀಗೆ ಮೀಡಿಯಾ ಸೂಪರ್ ಸ್ಟಾರ್ ಆದ ಆಕೆಯ ವೇತನ ಒಂದು ಮಿಲಿಯನ್ ಡಾಲರ್. ಹಾಗೆಂದು, ಈಕೆಗೆ ಕೆರಿಯರ್ ಸುಲಭದ ಹಾದಿಯೇನೂ ಆಗಿರಲಿಲ್ಲ. ಎ.ಬಿ.ಸಿ ನ್ಯೂಸ್ ನಲ್ಲಿಯೇ ಎಷ್ಟೋ ಪೈಪೋಟಿ ಇತ್ತು. ಆದರೆ, ಆಕೆಯ ಸಂದರ್ಶನದ ಶೈಲಿಯಲ್ಲಿ ಪ್ರಶ್ನೆಗಳು ನೇರಾನೇರವಾಗಿದ್ದರೂ ಕುತೂಹಲ ಕೆರಳಿಸುವಂತೆ ಹಾಗೂ ಹಿಂದಿನ ಮತ್ತು ಆಗಿನ ಬದುಕನ್ನು ಮಿಳಿತಗೊಳಿಸಿ ನೋಡುಗರು ಹಾಗೂ ಕೇಳುಗರನ್ನು ಹಿಡಿದಿಟ್ಟುಕೊಳ್ಳುವಂತಿರುತ್ತಿದ್ದವು
ನಂತರದ ದಿನಗಳಲ್ಲಿ ಒಂದೋ ನ್ಯೂಸ್ ಚಾನೆಲ್ ನಲ್ಲಿ ಜಾಗತಿಕ ನಾಯಕರ ಜೊತೆಯ ಚರ್ಚೆ ಅಥವಾ ಸೆಲೆಬ್ರಿಟಿಗಳ ಜೊತೆಗೆ ಆಕೆಯ ರೆಗ್ಯುಲರ್ ಶೋ 'ಬಾರ್ಬರಾ ವಾಲ್ಟರ್ಸ್ ಸ್ಪೆಷಲ್ಸ್' ಅಥವಾ ಲೇಟೆಸ್ಟ್ ಹೆಡ್ ಲೈನ್ ಗಳ ಕುರಿತ ಡೇ ಟೈಮ್ ಶೋ 'ದಿ ವ್ಯೂವ್' ನಲ್ಲಿ ಪ್ಯಾನೆಲ್ ಡಿಸ್ಕಶನ್ ಗಳಲ್ಲಿ ಬಾರ್ಬರಾ ಹೆಸರು ಇದ್ದೇ ಇರುತ್ತಿತ್ತು. ಈಕೆಯ 'ದಿ ವ್ಯೂವ್' ಶೋ ಅನ್ನು ನಕಲು ಮಾಡುವಂತೆ ಅಮೆರಿಕನ್ ಟಾಕ್ ಶೋಗಳಾಗಿ 'ದಿ ಟಾಕ್' ಮತ್ತು 'ದಿ ಚ್ಯೂ' ಶುರುವಾದರೆ ಬ್ರಿಟನ್ ನಲ್ಲಿ 'ಲೂಸ್ ವುಮೆನ್' ಹಾಗೂ ನಾರ್ವೆಯಲ್ಲಿ 'ಸ್ಟುಡಿಯೋ 5' ಗಳು ಶುರುವಾದವು.
2014 ರಲ್ಲಿ ಆಕೆ ತನ್ನ 52 ವರ್ಷದ ವೃತ್ತಿ ಜೀವನದಿಂದ ನಿವೃತ್ತಿ ಹೊಂದಿದರು. ಆಕೆ ಕಾಣಿಸಿಕೊಂಡ ಕೊನೆಯ ಡೇ ಟೈಮ್ ಶೋ 'ದ ವ್ಯೂವ್'. ಹಾಗೆ ತನ್ನ ಫುಲ್ ಟೈಮ್ ಜಾಬ್ ನಿಂದ 2014 ರಲ್ಲಿ ಆಕೆ ನಿವೃತ್ತಿ ಘೋಷಿಸಿದರೂ 'ದಿ ವ್ಯೂವ್' ಶೋ ನಲ್ಲಿ ಪಾರ್ಟ್ ಟೈಮ್ ನಲ್ಲಿ ಮತ್ತೆರಡು ವರ್ಷ ಕೆಲಸ ಮುಂದುವರಿಸಿದರು.
ಆಕೆ ತನ್ನ ನಿವೃತ್ತಿಯ ಸಮಯದಲ್ಲಿ "50 ವರ್ಷದ ನಿಮ್ಮ ವೃತ್ತಿಗೆ ನೀವು ಹೇಗೆ ನಿವೃತ್ತಿ ಹೇಳುತ್ತೀರಿ" ಎಂದಾಗ ಆಕೆಯ ಉತ್ತರದಲ್ಲಿ ಒಂದು ಸಾರ್ಥಕತೆ, ತೃಪ್ತಿ ಇತ್ತು. " ತಾನು ಅಂದುಕೊಂಡೇ ಇಲ್ಲದ ಜೀವನ ಸಿಕ್ಕಿದೆ. ನಾನು ಎಲ್ಲವನ್ನೂ ಇಷ್ಟ ಪಟ್ಟರೂ.. ಮನಸ್ಸಿನಲ್ಲಿ ನಾನು ಇನ್ನೂ ಒಳ್ಳೆಯ ಕೆಲಸ ನಿರ್ವಹಿಸುತ್ತಿದ್ದೇನೆ ಎನ್ನುವಂತೆಯೇ ನಾನು ಇಲ್ಲಿಂದ ಹೊರ ನಡೆಯಬೇಕು ಎಂದುಕೊಂಡಿದ್ದೇನೆ. ಅಷ್ಟೇ ಅಲ್ಲ.. ಇಲ್ಲಿನ ಯುವ ಮಹಿಳಾ ನ್ಯೂಸ್ ಮೇಕರ್ಸ್ ಹಾಗೂ ರಿಪೋರ್ಟರ್ ಗಳನ್ನು ನೋಡಿದಾಗ ಈ ಪರಂಪರೆಯನ್ನು ಬೆಳೆಸಿದ್ದಕ್ಕೆ ಹಾಗೂ ನೋಡುತ್ತಿರುವುದಕ್ಕೆ ಬಹಳ ಖುಷಿಯಿದೆ." ಎನ್ನುತ್ತಾರೆ. ಈಕೆಯ ಮೇಲಿನ ಗೌರವಕ್ಕಾಗಿ ಮೇ 2014 ರಲ್ಲಿ ಎ.ಬಿ.ಸಿ ಯ ನ್ಯೂಯಾರ್ಕ್ ಹೆಡ್ ಕ್ವಾರ್ಟರ್ ಗೆ 'ಬಾರ್ಬರಾ ವಾಲ್ಟರ್ಸ್ ಬ್ಯುಲ್ಡಿಂಗ್' ಎಂದು ಮರು ನಾಮಕರಣ ಮಾಡಲಾಗಿದೆ.
ಬಾರ್ಬರಾ ವಾಲ್ಟರ್ಸ್ ಕುರಿತು ಹೆಚ್ಚಿನ ಓದಿಗಾಗಿ 2008 ರಲ್ಲಿ ಬಿಡುಗಡೆಯಾಗಿರುವ ಆಕೆಯ ಆತ್ಮಕತೆ 'ಅಡಿಷನ್' ಅನ್ನು ಓದಬಹುದಾಗಿದೆ. ಆಕೆಯ ಆತ್ಮಕತೆಗೆ ಅಡಿಷನ್ ಎಂಬ ಹೆಸರೇ ಏಕೆ ? ಎಂದು ಕೇಳುವುದಾದರೆ ಆಕೆ ತನ್ನನ್ನು ತಾನು ಪದೇ ಪದೇ ನಿರೂಪಿಸಿಕೊಳ್ಳಬೇಕಿತ್ತು. ಇಲ್ಲಿ ಕೇವಲ ಆಕೆಯ ವೃತ್ತಿ ಬದುಕಿನ ಚಿತ್ರಣವಲ್ಲದೆ, ವೈಯಕ್ತಿಕ ಬದುಕಿನ ಕಥನವೂ ಕೂಡಿದೆ.
ಇಂಟರ್ನೆಟ್ ನ್ಯೂಸ್, ಬ್ಲಾಗ್, ವ್ಲೋಗ್, ಮೊಬೈಲ್ ವಿಡಿಯೋಗಳ ಕಾಲದಲ್ಲಿಯೂ ಬಾರ್ಬರಾ ವಾಲ್ಟರ್ಸ್ ನ ಜರ್ನಲಿಸಂನ ಗುರುತು ಅಳಿಸಲಾಗದ ಗುರುತೇ. ಕೇವಲ ಮಹಿಳಾ ಜರ್ನಲಿಸಂ ಮಾತ್ರವಲ್ಲ.. ಜರ್ನಲಿಸಂ ಕ್ಷೇತ್ರದಲ್ಲಿ ಸದಾ ನೆನಪಿಟ್ಟುಕೊಳ್ಳಬೇಕಾದ ಹೆಸರು 'ಬಾರ್ಬರಾ ಜಿಲ್ ವಾಲ್ಟರ್ಸ್'.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ