ಪುಸ್ತಕದ ಶೀರ್ಷಿಕೆ : ಮುಗಿಲ ತಾರೆ
ಲೇಖಕರು : ಸಾಯಿಸುತೆ
ಪ್ರಕಾಶಕರು : ಸುಧಾ ಎಂಟರ್ಪ್ರೈಸಸ್
ಪ್ರಥಮ ಮುದ್ರಣ : 1983
ನಾಲ್ಕನೇ ಮುದ್ರಣ : 2013 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 150
ಬೆಲೆ : 100 ರೂ.
ಮನೆಯಲ್ಲಿ ಕೌಸಲ್ಯಾಬಾಯಿ ಹಾಗೂ ಭಾಷ್ಯಂರವರ 25ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಆದರೆ, ಆ ಸಂಭ್ರಮದಲ್ಲೂ ಎಲ್ಲೋ ಮುಳ್ಳು ಮುರಿದಂತೆ.. ಒಂದು ಅಗೋಚರ ನೋವು. ಆದರೆ, ಹಿರಿಯ ಮಗಳಾದ ಚೈತ್ರ ಅದನ್ನು ತೋರಿಸಿಕೊಳ್ಳದೆ ಆದಷ್ಟು ಅಪ್ಪ-ಅಮ್ಮನ ಸಂತೋಷಕ್ಕೆ, ಸಂತೋಷವಾಗಿರುವಂತೆ ಓಡಾಡುತ್ತಿದ್ದಳು. ಆದರೂ, ಮನದಲ್ಲಿ ಹಳೆಯ ನೆನಪುಗಳ ಒಯ್ದಾಟ ನಡೆಯುತ್ತಲೇ ಇತ್ತು. ಕಿರಿಯ ಮಗಳಾದ ಸ್ಮಿತಾ ಹಾಗೂ ಅಳಿಯ ಸಂದೀಪ್ ಬಂದದ್ದು ಆ ವಾರ್ಷಿಕೋತ್ಸವಕ್ಕೆ ಮೆರಗು ತಂದಿತ್ತು. ಚೈತ್ರಳ ಗಂಡ ಹಾಗೂ ಭಾಷ್ಯಂರವರ ಅಕ್ಕನ ಮಗನಾದ ದಿವಾಕರ ಕೂಡ ಬಂದಿದ್ದ.
ಕೌಸಲ್ಯರವರು ತಮ್ಮ ಜೀವನದ ವೈವಾಹಿಕ ಜೀವನದ ಸಿಹಿ-ಕಹಿಗಳನ್ನು ಮೆಲುಕು ಹಾಕಿದರು. ಭಾಷ್ಯಂರವರ ಕೋಪದ ಮುಂದೆ ಏನು ಮಾಡಿದರೂ ಕಷ್ಟವೇ ಇತ್ತು .ಅಂತಹಾ ಗಂಡನ ಕೋಪದ ಎದುರು ಮಧುರ ಭಾವ ಮೂಡಿದ್ದು ಕಡಿಮೆ. ಚೈತ್ರ, ಸ್ಮಿತ ಹುಟ್ಟಿದ ಮೇಲೆಯೇ ಅವರು ಜೀವನದಲ್ಲಿ ಒಳ್ಳೆಯ ದಿನಗಳನ್ನು ಕಂಡದ್ದು. ಭಾಷ್ಯಂ ಅವರಿಗೆ ತಮಗೆ, ತಮ್ಮ ಓದಿಗೆ ಸರಿಸಮಾನವಾದ ಹುಡುಗಿ ಸಿಗಲಿಲ್ಲವೆಂಬ ಅಸಮಾಧಾನ. ಅದು ಹೆಂಡತಿಯ ಮೇಲೆ ಕೋಪದ ರೂಪದಲ್ಲಿ ಪ್ರಕಟವಾಗುತ್ತಿತ್ತು. ಆದರೆ, ಮಕ್ಕಳಂತೂ ಅಪ್ಪನ ಪಾಲಿಗೆ ಬಹಳವೇ ಮುದ್ದು. ಕಿರಿಯ ಮಗಳಾದ ಸ್ಮಿತಾ ಚೈತ್ರಳಷ್ಟು ಗಂಭೀರವಲ್ಲ. ಚೈತ್ರಳ ಆಕರ್ಷಕ ವ್ಯಕ್ತಿತ್ವವೇ ವಿಭಿನ್ನ.
ಚೈತ್ರ ಹಾಗೂ ದಿವಾಕರ್ ನಡುವೆ ವಿರಸವಿತ್ತು. ಚೈತ್ರ ಅದಕ್ಕಾಗಿ ಸಿಡಿದು ಬಂದಿದ್ದಳು ಎಂದುಕೊಂಡರೂ.. ಅದಕ್ಕೆ ಕಾರಣವೇನೆಂಬುದು ಯಾರಿಗೂ ತಿಳಿದಿರಲಿಲ್ಲ. ಭಾಷ್ಯಂ ಅವರಿಗೆ ದಿವಾಕರನ ಹಠ -ಛಲದ ಬಗ್ಗೆ ಕೆಲವೊಮ್ಮೆ ಮೆಚ್ಚುಗೆ ಇದ್ದರೆ, ಕೆಲವೊಮ್ಮೆ ಭಯವೂ ಹುಟ್ಟಿಸುತ್ತಿತ್ತು. ಅಕ್ಕನ ಮಗನೇ ಆದ್ದರಿಂದ ಪರಸ್ಪರ ಸಂಬಂಧವೂ ಬೆಳೆದು, ಪ್ರೇಮ ವಿವಾಹದಂತೆ ಇಬ್ಬರ ವಿವಾಹವೂ ಆಗಿ ಮುಂಬೈನಲ್ಲಿ ಒಟ್ಟಿಗೆ ಇದ್ದರು. ಎಲ್ಲಾ ಸುಗಮವೇ ಆಗಿತ್ತು ಎನ್ನುವಷ್ಟರಲ್ಲಿ ಚೈತ್ರ ವಾಪಾಸ್ ಬಂದಿದ್ದಳು. ಕೌಸಲ್ಯರವರಿಗೆ ಮಗಳು ಹಾಗೆ ಒಡಕು ಸಂಸಾರವನ್ನು ಇಟ್ಟುಕೊಂಡು ಬಾಳುವುದು ಕೊಂಚವೂ ಇಷ್ಟವಿರಲಿಲ್ಲ. "ಅವನಿಗೇನು ಗಂಡಸು, ಸುಲಭವಾಗಿ ಬಚಾವಾಗಬಲ್ಲ. ನೀನೇನು ಮಾಡ್ತಿ" ಎನ್ನುವಂತಹಾ ವ್ಯಂಗ್ಯದ ಮಾತುಗಳು ಆಗಾಗ ಅವರ ಬಾಯಿಯಿಂದ ಬರುತ್ತಿದ್ದವು. ಒತ್ತಾಯ ಮಾಡಿ ಗಂಡನ ಜೊತೆ ಕಳಿಸಲು ನೋಡಿದರೂ ಚೈತ್ರ ಸುಲಭಕ್ಕೆ ಒಪ್ಪಲಿಲ್ಲ.
ಚೈತ್ರಳ ಮೇಲಿನ ಕೋಪಕ್ಕಾಗಿ ದಿವಾಕರ ಬಂದರೂ.. ಆತನ ತಂದೆ-ತಾಯಿ ತಮ್ಮ ಮನೆಯ ಸಮಾರಂಭಕ್ಕೆ ಬರಲಿಲ್ಲವೆಂದುಕೊಂಡು ಗಿರಿಜಮ್ಮ ಹಾಗೂ ಶ್ರೀಕಂಠಯ್ಯನವರನ್ನು ನೋಡಿ ಬರಲು ಎಲ್ಲರೂ ಹೊರಟರು. ಚೈತ್ರ ಅಲ್ಲಿಗೆ ಹೋಗಿ ಬಂದ ನಂತರವೂ ಅವಳ ಮನಸ್ಸು ಬದಲಾಗಲಿಲ್ಲ. ಬದಲಾಗಿ ಎಲ್ಲರಲ್ಲೂ ಅಸಮಾಧಾನ ಹೆಚ್ಚಿತ್ತು. ಗಿರಿಜಮ್ಮನವರ ಪ್ರೀತಿಯ ತಮ್ಮ ಭಾಸ್ಕರ ಎಲ್ಲರಿಗೂ ಭಾಷ್ಯಂ ಆಗಿದ್ದವನು. ಮಗಳು ತಂದೆಯ ಮುಂದೆ ತನ್ನ ಜೀವನದ ಪರಮ ಸತ್ಯವೊಂದನ್ನು ಬಿಚ್ಚಿಟ್ಟಳು. ಅದನ್ನು ಕೇಳಿದ ನಂತರ, ಅವರಿಗೆ ಮತ್ತೆ ಮಗಳನ್ನು ದಿವಾಕರನ ಬಳಿ ಕಳುಹಿಸುವ ಮನಸ್ಸಾಗಿರಲಿಲ್ಲ. ಬದಲಾಗಿ ಅವಳು ಸ್ವಾಭಿಮಾನದಿಂದ ಬದುಕು ಕಟ್ಟಿಕೊಳ್ಳಲು ಉನ್ನತ ವಿದ್ಯಾಭ್ಯಾಸ ಕೊಡಿಸಲು ಸಿದ್ಧರಾದರು. ಗಂಡನ ಈ ನಿಲುವನ್ನು ಅರಗಿಸಿಕೊಳ್ಳಲಾಗಿರಲಿಲ್ಲ ಕೌಸಲ್ಯರಿಂದ.
ಸಂದೀಪ್ ಮನೆಯಲ್ಲಿ 15 ಜನರಿಗೂ ಮಿಕ್ಕಿ ಜನರಿದ್ದರು. ದ್ವಾರಕಾನಾಥ್ ಅವರ ದಕ್ಷ ಯಜಮಾನಿಕೆಯಲ್ಲಿ ಯಾರೂ ಅಸಮಾಧಾನದ ಸೊಲ್ಲೆತ್ತುತ್ತಿರಲಿಲ್ಲ. ಅಮ್ಮನಿಲ್ಲದ ಮಗುವೆಂದು ಕೊಂಚ ಹೆಜ್ಜೆ ಮುದ್ದಿನಿಂದ ಹಾಗೂ ಸೌಲಭ್ಯಗಳನ್ನು ನೀಡಿ ಬೆಳೆಸಿದ್ದರು ಸಂದೀಪನನ್ನು. ಓದಿನಲ್ಲಿ ಬುದ್ಧಿವಂತನಾಗಿದ್ದರೂ.. ಕೆಲಸವನ್ನು ಹಚ್ಚಿಕೊಳ್ಳದೆ ಜೀವನವನ್ನು ಎಂಜಾಯ್ ಮಾಡುವಂತೆ ಬದುಕುತ್ತಿದ್ದ. ಸಂದೀಪನಿಗೆ ತನ್ನದೇ ಮನಸ್ಥಿತಿಯ ಸ್ಮಿತಾಳ ಜೊತೆಯಾಗಿತ್ತು. ಆದರೆ, ಭಾಷ್ಯಂರವರಿಗೆ ದೊಡ್ಡ ಮಗಳ ಬದುಕು ಕಂಡ ನಂತರ ತಮ್ಮ ಚಿಕ್ಕ ಮಗಳ ಭವಿಷ್ಯವನ್ನು ಆಲೋಚಿಸಿ ಮಗಳು, ಅಳಿಯನನ್ನು ಕರೆದು ಬುದ್ಧಿ ಹೇಳಿದ್ದರು.
"ಪ್ರಯೋಜನವಿಲ್ಲದ ವಸ್ತುವನ್ನು ಯಾರೂ ಗೌರವಿಸಲಾರರು. ಅದು ವ್ಯಕ್ತಿಯ ಜೀವನಕ್ಕೂ ಅನ್ವಯಿಸುತ್ತೆ." ಬುದ್ಧಿವಂತನಾದ ಸಂದೀಪನಿಗೆ ಇದರ ಅರ್ಥವನ್ನು ಬಿಡಿಸಿ ಹೇಳಬೇಕಾಗಿರಲಿಲ್ಲ.
ತನ್ನ ಆತ್ಮೀಯ ಗೆಳತಿ ಸುಚಿತ್ರಾ ಬಂದಿದ್ದಾಗ ತನ್ನ ತಾಯಿಯ ಅಸಮಧಾನವನ್ನು ಕೇಳಿ ಬೇಸತ್ತಿದ್ದ ಚೈತ್ರ "ಈಗ ಯುವತಿಯರ ಎಲ್ಲಾ ಆತ್ಮಹತ್ಯೆಯ ಪ್ರಕರಣಗಳಿಗೂ ನೇರವಾಗಿ ಅವಳ ಹೆತ್ತವರೇ ಕಾರಣವೆನಿಸುತ್ತೆ. ಸಮಾಜದತ್ತ ಕೈ ತೋರಿ ಹಳೆ ಸಿದ್ದಾಂತವನ್ನು ಅವಳ ಮುಂದಿಟ್ಟು ಕೊಂದು ಬಿಡ್ತಾರೆ. ಮದುವೆಯಾಗಿ ಕಳಿಸಿದ ಮೇಲೆ, ಅವಳಿಗೂ ತಮಗೂ ಸಂಬಂಧವೇ ಇಲ್ಲವೆಂದು ವರ್ತಿಸುತ್ತಾರೆ. ಅವಳು ಜೀವಂತಶವವಾಗಿ ಗಂಡನ ಬಳಿ ಇದ್ದರೂ ಸಮವೇ.. ಇವರುಗಳು ಮಾತ್ರ ಸಮಾಜದ ಎದುರು ತಲೆ ಎತ್ತಿ ಬಾಳಬೇಕು" ಎನ್ನುವ ಕಟುನುಡಿ ಉತ್ತರವಾಗಿ ಬಂದಿದ್ದಾಗ ಸುಚಿತ್ರ ಅವಳಲ್ಲಿ ಬದಲಾವಣೆಯಾಗಲೆಂದು ತಮ್ಮ ಮನೆಗೆ ಕರೆದೊಯ್ದಿದ್ದಳು ಚೈತ್ರಳನ್ನು.
ಸುಚಿತ್ರಳ ಬದುಕು ಬೇರೆಯದ್ದೇ ರೀತಿ. ಆಕೆಯನ್ನು ಹಾಗೂ ಮನೆಯನ್ನು ನೋಡಿಕೊಳ್ಳುತ್ತಿದ್ದವಳು ಪುಟ್ಟಮ್ಮ. ತಾಯಿ ಸುಲೋಚನಾ ಸ್ವತಂತ್ರ ಪ್ರವೃತ್ತಿಯ ಹೆಣ್ಣು. ಗಂಡ ಹಾಗೂ ಮಗಳನ್ನು ಅಷ್ಟು ಹಚ್ಚಿಕೊಂಡವರಲ್ಲ. ಪದ್ಮನಾಭ ಅವರು ಹೆಂಡತಿಯ ಮುಂದೆ ಬಾಯಿ ಕಳೆದುಕೊಂಡಂತಾಗುತ್ತಿದ್ದರೂ.. ಮಗಳಿಗಾಗಿಯೇ ಒಟ್ಟಾಗುತ್ತಿದ್ದರು. ಆದರೆ ಮಗಳ ಮದುವೆಯ ವಿಚಾರದಲ್ಲಿ ಮಾತ್ರ ಇಬ್ಬರದ್ದು ವಿರುದ್ಧ ದಿಕ್ಕು. ಹಾಗಾಗಿ ಸುಚಿತ್ರಾಳ ಮದುವೆ ಅಲ್ಲಲ್ಲಿಗೇ ನಿಲ್ಲುತ್ತಿತ್ತು. ಆದರೆ, ಅಂದು ಸುಚಿತ್ರ ಆಡಿದ ಮಾತು ಆಕೆಯ ತಾಯಿಯ ಮರ್ಮಕ್ಕೆ ತಾಗಿತ್ತು. ಸುಚಿತ್ರ ಬದುಕು ಬದಲಾಗುವಂತಿತ್ತು. ಆದರೆ, ಅದೆಲ್ಲಾ ಅಷ್ಟು ಸುಲಭವೇ..??
ಸುಚಿತ್ರ ಜೊತೆಗೆ ಹೊರಗೆ ಹೋದಾಗ ಚೈತ್ರಳನ್ನು ಕಂಡಿದ್ದ ಸತೀಶ್ ಚಂದ್ರನಿಗೂ ಹಾಗೂ ಚೈತ್ರಳಿಗೂ ಬೇರೆಯದ್ದೇ ರೀತಿಯ ಆಲೋಚನೆಗಳು. ದಿವಾಕರನ ಗೆಳೆಯನೆಂದು ಸುಚಿತ್ರಳ ಬಳಿ ಪರಿಚಯಿಸಿಕೊಂಡವನು ಚೈತ್ರಾಳನ್ನು ತಲುಪಿದ್ದ. ಅವನಾಡಿದ ಮಾತುಗಳು ಚೈತ್ರದ ಮೇಲೆ ಪರಿಣಾಮ ಬೀರಿದವೇ..??
ಸ್ಮಿತಾ ಗರ್ಭಿಣಿ ಎಂಬ ವಿಚಾರ ಹಾಗೂ ತಾಯಿಯ ಅನಾರೋಗ್ಯ ಎರಡೂ ಬೇಡವೆಂದರು ಚೈತ್ರಾಳ ನಿರ್ಧಾರದ ಮೇಲೆ ಪರಿಣಾಮ ಬೀರುತ್ತಿದ್ದವು. ಜೊತೆಗೆ ಅತ್ತೆ-ಮಾವರ ಕಾಳಜಿಯ ಮಾತುಗಳು ಕೂಡಾ. ಚೈತ್ರಳ ಪಾಲಿಗೆ ತಂದೆಯ ಆಸರೆಯಿತ್ತಾದರೂ.. ಅವರಿಗೂ ಮಗಳ ಸಂಸಾರವನ್ನು ಒಡೆಯಬೇಕೆಂಬ ಮನಸಿರಲಿಲ್ಲ. ಆದರೆ, ಮುಂಬೈಯಲ್ಲಿ ದಿವಾಕರನ ಜೊತೆ ಮಾತನಾಡಲು ಹೋದಾಗ ಅವನ ನಡೆ ಅವರನ್ನು ಒಂದುಗೂಡಿಸುವ ವಿಚಾರದಿಂದ ವಿಮುಖವಾಗಿತ್ತು. ದಿವಾಕರ ಅವರ ಕಣ್ಣಲ್ಲಿ ಮತ್ತಷ್ಟು ಅಪರಾಧಿಯಾದ. ಆತನ ತಂದೆ-ತಾಯಿಯರಿಗೂ ಸತ್ಯದ ಅರಿವಾಗಿತ್ತು.
ಬದುಕು ಅಷ್ಟು ಸರಳವಲ್ಲ. ಆದರೆ, ಅದನ್ನು ಸರಳವಾಗಿಸುವ ಪ್ರಕ್ರಿಯೆಯಲ್ಲಿ ಮತ್ತಷ್ಟು ಸಂಕೀರ್ಣಗೊಳಿಸಿಕೊಳ್ಳಬಾರದು. ಚೈತ್ರಾಳ ಮೃದು ಹೃದಯ ಅಷ್ಟು ಕಠಿಣವಾಗಲು ಕಾರಣವೇನು..?? ದಿವಾಕರನ ಆ ಘೋರ ತಪ್ಪೇನು..?? ಎಲ್ಲರ ಕಣ್ಣಿಗೂ ಒಳ್ಳೆಯವನಾಗಿ ಕಾಣುತ್ತಿದ್ದ ದಿವಾಕರನ ಒಳ್ಳೆಯತನದ ಹಿಂದಿದ್ದ ಕರಾಳ ಸತ್ಯವೇನು..?? ಸತೀಶ್ ಚಂದ್ರ ಯಾರು..?? ಚೈತ್ರಳ ಬಾಳಲ್ಲಿ ಅವನ ಪಾತ್ರವೇನು..?? ಭಾಷ್ಯಂರವರ ಕಠಿಣ ನಿರ್ಧಾರದ ಹಿಂದಿನ ಮನಸ್ಥಿತಿಯೇನು..?? ಕೌಸಲ್ಯರವರಿಗೆ ಸತ್ಯ ತಿಳಿದಿದ್ದರೆ ಅದನ್ನು ಅರಗಿಸಿಕೊಳ್ಳುತ್ತಿದ್ದರೇ..?? ಸುಚಿತ್ರಳ ವಿವಾಹವಾಯಿತೇ..?? ಅವಳ ತಂದೆ-ತಾಯಿ ಒಂದಾದರೇ..?? ಸಂದೀಪ್ ತನ್ನ ಮಾವನ ಉಪದೇಶದಿಂದ ಬದಲಾದನೇ..?? ಇದೆಲ್ಲವೂ ಸ್ಮಿತಾಳ ಮೇಲೆ ಬೀರಿದ ಪರಿಣಾಮವೇನು..? ಉಳಿದವರು ಸತ್ಯ ತಿಳಿಯದಿದ್ದರೂ ಚೈತ್ರಳನ್ನೇ ಬೆಂಬಲಿಸಿದ್ದೇಕೆ..??
ಹೆಣ್ಣು ತನ್ನ ಸಾಂಸಾರಿಕ ಜೀವನವನ್ನು ಮುರಿದುಕೊಂಡು ಮುಂದೆ ಸಾಗುವುದು ಅಷ್ಟು ಸುಲಭವಲ್ಲ. ಅದಕ್ಕೆ ಬಹಳಷ್ಟು ಸ್ಥೈರ್ಯ ಬೇಕು. ಅದಕ್ಕೆ ಚಿಕ್ಕ-ಪುಟ್ಟ ಕಾರಣಗಳಿಂದ ಅದನ್ನು ಮುರಿಯಲು ಸಾಧ್ಯವಿಲ್ಲ. ಆದರೆ, ತಮ್ಮ ನೈತಿಕತೆಯನ್ನು ಬಲಿಕೊಟ್ಟು ಅಂತಹಾ ಸಂಸಾರದಲ್ಲಿ ಮುಂದುವರೆಯುವುದು ಸರಿಯಲ್ಲ ಎನ್ನುವ ಚೈತ್ರಳ ನಡೆ ಆದರ್ಶನೀಯ. ಇಂದಿನ ಸಮಾಜದಲ್ಲಿ ಕೌಸಲ್ಯರಂತಹಾ ತಾಯಂದಿರನ್ನು ಯಥೇಚ್ಛವಾಗಿ ಕಾಣಬಹುದಾದರೂ.. ಭಾಷ್ಯಂರಂತಹಾ ತಂದೆಯರನ್ನು ಕಾಣುವುದು ಸ್ವಲ್ಪ ಕಷ್ಟವೇ.. ಆದರೆ, ಅಂತಹಾ ತಂದೆಯೊಬ್ಬರು ಜೊತೆಗಿದ್ದರೆ ಮಕ್ಕಳ ಮನಸ್ಥಿತಿ ಎಷ್ಟೇ ಕುಸಿದರೂ.. ಮತ್ತೆ ಸಮಾಜದ ವಿರುದ್ಧ ಸ್ಪರ್ಧೆಗೆ ಇಳಿಯುವಲ್ಲಿ ಅವರನ್ನು ಸಿದ್ಧಗೊಳಿಸಬಲ್ಲದು. ಆತ್ಮಸ್ಥೈರ್ಯದಿಂದ ಬದುಕು ಕಟ್ಟಿಕೊಳ್ಳಲು ನೆರವಾಗಬಲ್ಲದು.
ಈ ಕಾದಂಬರಿ ಇಲ್ಲಿಗೇ ಕೊನೆಯಾಗುವುದಿಲ್ಲ. 'ಶರದೃತುವಿನ ಚಂದ್ರ' ಎಂಬ ಕಾದಂಬರಿ ರೂಪದಲ್ಲಿ ಮುಂದುವರಿಯುತ್ತದೆ. ಆ ಕಾದಂಬರಿಯನ್ನು ಓದಿದ ನಂತರ ಅದನ್ನು ಪರಿಚಯಿಸುವೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ