ಮಂಗಳವಾರ, ಏಪ್ರಿಲ್ 14, 2026

ಕನಸಿನ ಕಣ್ಮಣಿ (ಪುಸ್ತಕ ಯಾನ - 171)


ಪುಸ್ತಕದ ಶೀರ್ಷಿಕೆ : ಕನಸಿನ ಕಣ್ಮಣಿ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀ ಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ

ಎರಡನೇ ಮುದ್ರಣ : 2023


ಡಾಕ್ಟರ್ ರಾಮರಾವ್ ಅವರ ಮಗ ಡಾಕ್ಟರ್ ರಾಜೇಶ್ ತಮ್ಮ ಮನೆಗೆ ಬಂದದ್ದು ಕೊಂಚ ಅಚ್ಚರಿಯೂ ಆಗಿತ್ತು ಶಾರದಮ್ಮನವರಿಗೆ. ಆದರೆ, ಆತ ಅಂದು ಬಂದದ್ದು ಪರ ಊರಿನಲ್ಲಿದ್ದ ತನ್ನ ತಂಗಿ ಪ್ರಮೀಳಾ.. ಸರಳ ಶಿಕ್ಷಕಿಯಾಗಿದ್ದ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಸಹೋದ್ಯೋಗಿ ಜಾನಕಿ ಜೊತೆಗೆ ಒಂದು ಪತ್ರ ಹಾಗೂ ಲಗೇಜ್ ಗಳನ್ನು ಕೊಟ್ಟಿರುತ್ತಾಳೆ.  ಅದನ್ನು ತಂದು ತಲುಪಿಸಲು ಸಾಧ್ಯವೇ.. ಹಾಗೂ ತಮ್ಮ ಮನೆಯಿಂದ ಏನಾದರೂ ತೆಗೆದುಕೊಂಡು ಕೊಟ್ಟರೆ ವಾರಕ್ಕೊಮ್ಮೆ ಜಾನಕಿಗೆ ತಲುಪಿಸಲು ಸಾಧ್ಯವೇ ಎಂದು ತಿಳಿಯುವುದಕ್ಕೆ... ಪ್ರಮೀಳಾ ಸರಳಳ ಸೀನಿಯರ್ ಆಗಿದ್ದರೂ ಇಬ್ಬರಲ್ಲಿಯೂ ಅಂತಹಾ ಆತ್ಮೀಯತೆಯೇನೂ ಇರಲಿಲ್ಲ. ಜಾನಕಿ ವಾಸವಾಗಿದ್ದು ಪ್ರಮೀಳಾಳ ಅತ್ತೆಮನೆಯ ಔಟ್ ಹೌಸಿನಲ್ಲಿಯೇ..


ಸರಳ ತಾಯಿ ಶಾರದಮ್ಮನಿಗೆ ಅವರಿಬ್ಬರ ಜೋಡಿ ನೋಡಿ ಇವರಿಬ್ಬರೂ ಜೋಡಿಯಾದರೆ ಎಷ್ಟು ಚೆಂದ ಎನಿಸಿತು. ಆದರೆ, ಅದಷ್ಟು ಸುಲಭವಾಗಿರಲಿಲ್ಲ. ರಾಜಾರಾಮ್ ಅವರ ಪತ್ನಿ ಸೀತಮ್ಮ ಬಹಳ ಅಹಂಕಾರ ಹಾಗೂ ಗರ್ವದಿಂದಿದ್ದವರು. ತಂದೆ-ಮಗ ಇಬ್ಬರೂ ಅದೇ ಊರಿನಲ್ಲಿ ಡಾಕ್ಟರ್ ಆಗಿ ಪ್ರಾಕ್ಟೀಸ್ ಮಾಡುತ್ತಿದ್ದರು. ಸರಳ ಬಿ.ಎ ಮುಗಿಸಿ ಮಿಡಲ್ ಸ್ಕೂಲ್ ಉಪಾಧ್ಯಾಯನಿಯಾಗಿದ್ದವಳು. ಸರಳ ಅಮ್ಮನ ಆಸೆ ಕೇಳಿ ಆ ಸಂಬಂಧ ಖಂಡಿತ ಕೂಡಿಬರಲಾರದು ಎಂದೇ ನಂಬಿದ್ದಳು. ಆದರೆ, ರಾಜೇಶ್ ಮನಸ್ಸು ಆಕೆಗೆ ತಿಳಿದಿರಲಿಲ್ಲ.


ಶಾರದಮ್ಮ ಹಾಗೂ ಶಾಮಣ್ಣರಿಗೆ ಮೂವರು ಮಕ್ಕಳು. ಶ್ಯಾಮಲಾ, ಸರಳ ಹಾಗೂ ಮುರುಳಿ. ಮುರುಳಿ ಚೊಚ್ಚಲ ಮಗ. ಹಾಗೆಂದು ಆತುರ ಬಿದ್ದು ಬಳಗದಲ್ಲಿಯೇ ವಿವಾಹ ಮಾಡಿದ್ದರು. ಆದರೆ, ಈಗ ಗಂಡ-ಹೆಂಡತಿ ಇಬ್ಬರೂ ಸ್ವಾರ್ಥಿಗಳಾಗಿ ಅವರ ಸಂಸಾರ ಅವರು ನೋಡಿಕೊಂಡಿದ್ದರು. ತಿಂಗಳಿಗೊಮ್ಮೆ ಬೇಕೋ ಬೇಡವೋ ಎನ್ನುವಷ್ಟು ಹಣ ಕೊಟ್ಟು ವರ್ಷಕ್ಕೊಮ್ಮೆ ಬಂದು ಹೋಗಿ ಮಾಡುತ್ತಿದ್ದರು. ಶ್ಯಾಮಲಾ ಅದೃಷ್ಟ ಚೆನ್ನಾಗಿತ್ತು. ವಿದ್ಯಾವಂತೆಯಲ್ಲದಿದ್ದರೂ.. ರೂಪವಂತೆಯಾದ ಅವಳನ್ನು ಡಾಕ್ಟರ್ ನಾರಾಯಣ್ ಮೆಚ್ಚಿ ಮದುವೆಯಾಗಿದ್ದರು. ಆದರೆ, ಆಕೆಯ ಮದುವೆಗೆ ಮಾಡಿದ್ದ ಸಾಲವನ್ನು ತೀರಿಸಲು ಇನ್ನೂ ಹೆಣಗಾಡುತ್ತಿದ್ದರು.


ರಾಜೇಶ್ ಜೊತೆಗೆ ಪ್ರಮೀಳಾ ಮದುವೆಯಾಗಿತ್ತು. ಆದರೆ, ಆಕೆ ಇಲ್ಲದ ಸಮಸ್ಯೆಗಳನ್ನು ಇವೆ ಎಂದುಕೊಂಡು ಅತ್ತೆಯ ಮನೆಯ ಸಮಸ್ಯೆಗಳನ್ನು ದೊಡ್ಡದಾಗಿಸುತ್ತಿದ್ದಳು. ಆಕೆ ಗುಣದಲ್ಲಿ ಅವಳ ಅಮ್ಮನ ಅಪರವತಾರ. ಕಪ್ಪಗೆ ದಪ್ಪಗೆ ಇದ್ದರೂ ದುಡ್ಡಿನ ಆಸೆಗೆ ಗಂಡಿನ ಮನೆಯವರು ಅವಳನ್ನು ಸೊಸೆಯಾಗಿ ತಂದುಕೊಂಡರು. ಅವಳಿಗೆ ಏನೂ ಕಷ್ಟ ಕೊಡುತ್ತಿರಲಿಲ್ಲ. ಆದರೆ, ಆಕೆಗೆ ಅತ್ತೆಮನೆ ಒಗ್ಗದೇ ಗಂಡನನ್ನು ಬೇರೆ ಮನೆ ಮಾಡಿ ಎಂದು ಪೀಡಿಸುತ್ತಿದ್ದಳು. ವಿವಾಹವಾಗಿ ಎರಡು ವರ್ಷ ಕಳೆದರೂ.. ಅಲ್ಲಿ ಹೊಂದಿಕೆ ಇರಲಿಲ್ಲ. ಅತ್ತೆ-ಮಾವನ ಮೇಲೆ ದೂರುತ್ತಾ ಅಲ್ಲಿಂದ ಕರೆ ಮಾಡಲು ಸಾಧ್ಯವಾಗದೇ.. ಅಮ್ಮನಿಗೆ ತನ್ನ ಔಟ್ ಹೌಸ್ ನಲ್ಲಿ ಇದ್ದ ಜಾನಕಿಯ ಮೂಲಕ ಪತ್ರವನ್ನು ಕಳಿಸಿ, ಬೇಕಾದನ್ನೆಲ್ಲ ತರಿಸಿಕೊಳ್ಳುತ್ತಿದ್ದಳು. ಆದರೆ, ಆಕೆಯ ಅಣ್ಣ ಹಾಗೂ ತಂದೆಗೆ ತಾಯಿ-ಮಗಳ ಈ ಬುದ್ಧಿಯ ಅರಿವಿತ್ತು. ಹಾಗಾಗಿ ಅವರ ಅತ್ತೆ-ಮಾವನಿಗೂ ಈ ಕುರಿತು ಹುಷಾರಾಗಿರಲು ಹೇಳಿದ್ದರು. 


ರಾಜೇಶ್ ಸರಳಾಳ ಮನೆಗೆ ಬಂದದ್ದು ಪ್ರಮೀಳಾಳಿಗಾಗಿ ಆಗಿರಲಿಲ್ಲ. ಬದಲಾಗಿ, ಸರಳಳಿಗಾಗಿಯೇ.. ತನ್ನ ತಾಯಿ ತೋರಿಸಿದ ಹುಡುಗಿಯರೆಲ್ಲಾ ಆಕೆಯ ಧನದಾಹಕ್ಕಾಗಿ ತೋರಿಸಿದವರು. ಆದರೆ, ಅದಾವುದರ ಗೊಡವೆಯೂ ಇಲ್ಲದೆ.. ತಂದೆಯ ಗುಣ ಹೊಂದಿದ್ದ ರಾಜೇಶ್ ಸರಳಾಳನ್ನು ದೂರದಿಂದಲೇ ಇಷ್ಟಪಟ್ಟಿದ್ದ. ಆಕೆ ತನ್ನ ತಂದೆಯನ್ನು ಕರೆದುಕೊಂಡು ಕ್ಲಿನಿಕ್ಕಿಗೆ ಬಂದಾಗ ಆಕೆಯನ್ನು ಕಂಡಾಗ.. ಆಕೆಯ ಕುರಿತು ತನ್ನ ತಂದೆಯ ಬಳಿ ವಿಚಾರಿಸಿದ್ದ ನಂತರ ಮೌನವಾಗಿ ಪ್ರೇಮಿಸುತ್ತಿದ್ದ. ಇದನ್ನು ಮೊದಲ ಬಾರಿ ಪತ್ರ ಕಳುಹಿಸುವಾಗ ಅವಳ ಮುಂದೆ ಪ್ರೇಮ ನಿವೇದನೆ ಮಾಡಿ ಅವರ ಬಾಲ್ಯದ ದಿನಗಳನ್ನು ನೆನಪಾಗಿಸಿಕೊಳ್ಳುವಂತೆ ಮಾಡಿದ್ದ. 


ಆದರೆ, ಸರಳ ರಾಜೇಶನ ಮಾತುಗಳಿಗೆ ಬೇರೆಯದ್ದೆ ಅರ್ಥ ಕಂಡುಕೊಂಡು ಆತನೂ ತನ್ನ ತಾಯಿಯಂತೆಯೇ ಎಂದು ತಿಳಿದು ಸಂಪೂರ್ಣವಾಗಿ ಆತನ ನೈಜ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲಾಗಿರಲಿಲ್ಲ. ಮುಂದಿನ ಭೇಟಿಯಲ್ಲಿ ಆತನ ಮನೆಗೆ ಹೋಗಿದ್ದಾಗ ಆತನ ತಾಯಿ ರಾಜೇಶನಿಗೆ ವಧು ಗೊತ್ತಾಯ್ತು ಎಂಬಂತೆ ನಡೆದುಕೊಂಡಿದ್ದನ್ನು ಕೇಳಿ.. ಈತ ನನ್ನ ಜೊತೆ ಆಟವಾಡುತ್ತಿರಬಹುದು ಎಂದೇ ಬಲವಾಗಿ ನಂಬಿ.. ತಾನು ಅವನನ್ನು ಉಪಾಯವಾಗಿ ದೂರವಿಡಲು ಆತನ ಬಳಿ ಹಣಕ್ಕಾಗಿ ಬೇಡಿಕೆಯಿಟ್ಟಳು. ರಾಜೇಶ್ ಅದನ್ನು ಅಪಾರ್ಥ ಮಾಡಿಕೊಂಡು ಆಕೆ ತಾನಂದುಕೊಂಡಂತೆ ಅಲ್ಲ. ಹಣಕ್ಕಾಗಿ ನನ್ನನ್ನು ಪ್ರೇಮಿಸುತ್ತಿದ್ದಾಳೆ ಎಂದುಕೊಂಡು ರಾಜೇಶನು ಆ ಪ್ರೇಮದ ಆಲೋಚನೆಯನ್ನು ಅಲ್ಲಿಗೆ ಬಿಟ್ಟಿದ್ದ. 


ಆದರೆ, ಪ್ರಮೀಳಾಳಿಗಾಗಿ ಕಳುಹಿಸುವ ಪತ್ರ ಹಾಗೂ ಲಗೇಜ್ ವ್ಯವಹಾರ ಮುಂದುವರಿಯುತ್ತಿತ್ತು. ಅದೇ ಸಂದರ್ಭದಲ್ಲಿ ಶಾಲೆಯ 'ಸ್ಕೂಲ್ ಡೇ'ಗಾಗಿ ಟಿಕೆಟ್ ಮಾರಲು ಜಾನಕಿ ಹಾಗೂ ಸರಳ ಅವರ ಮನೆಗೆ ಬಂದಾಗ ಸೀತಮ್ಮ ಮಗನ ಎದುರಲ್ಲಿಯೇ ಆಕೆಯನ್ನು ಹಂಗಿಸಿ ಅವಮಾನ ಮಾಡಿದ್ದಕ್ಕೆ ಆಕೆ ತಕ್ಕ ಪ್ರತ್ಯುತ್ತರ ನೀಡಿ ಜಾನಕಿಗೂ ಹೇಳಿ ಅಲ್ಲಿಂದ ಹೊರಟಳು. ಅಂದಿನಿಂದ ಪ್ರಮೀಳಾಳಿಗೆ ಮಾಡುತ್ತಿದ್ದ ಪಾರ್ಸಲ್ ಸೇವೆಯೂ ತಪ್ಪಿ ಹೋಯಿತು. ಜಾನಕಿಯನ್ನು ಹೆದರಿಸಿ ಬಗ್ಗಿಸಲು ನೋಡಿದರೂ ಆಕೆಯೂ ತಗ್ಗಲಿಲ್ಲ.


ರಾಜೇಶ್ ತಾಯಿಯ ಸಣ್ಣಬುದ್ದಿಗೆ ರೇಗುತ್ತಾನೆ. ಸೀತಮ್ಮನ ತಮ್ಮ ಅನಂತನೂ ಇದೆಲ್ಲವನ್ನೂ ಗಮನಿಸಿರುತ್ತಾನೆ. ರಾಜೇಶನ ಬಳಿ ಸರಳ ಕುರಿತು ಪ್ರಸ್ತಾಪಿಸಿ ನೀನೇಕೆ ಆಕೆಯನ್ನು ಮದುವೆಯಾಗಬಾರದೆಂದು ಕೇಳಿದಾಗ "ಸಂಸಾರಕ್ಕೆ ಯೋಗ್ಯ ಹುಡುಗಿಯಲ್ಲ. ಗಂಡಸರಿಂದ ದುಡ್ಡು ಸೆಳೆಯೋ ಸ್ವಭಾವದವಳು" ಎಂದು ಅವಳ ಕುರಿತು ಹತಾಶೆ ವ್ಯಕ್ತಪಡಿಸುತ್ತಾನೆ.


ಅನಂತ ಆಕೆಯ ಮುಖಲಕ್ಷಣ ಕಂಡು ಆಕೆ ಅಂತಹವಳಲ್ಲವೆಂದರೂ ರಾಜೇಶನಿಗೆ ನಂಬಿಕೆ ಮೂಡುವುದಿಲ್ಲ. ನಂತರ, ಅನಂತನೇ ಸುಮ್ಮನಾಗುತ್ತಾನೆ. ಇಷ್ಟಕ್ಕೇ ಎಲ್ಲರೂ ಸುಮ್ಮನಾಗಿದ್ದರೆ ಸರಳ ಹಾಗೂ ರಾಜೇಶನ ವಿಚಾರಗಳು ಅಂತೆಯೇ ಇರುತ್ತಿದ್ದವೇನೋ.. ಆದರೆ, ಅನಂತನ ಹೆಣ್ಣಿನ ಚಪಲ ಆತನನ್ನು ರಾಜೇಶನ ಅಭಿಪ್ರಾಯದ ಮೂಲಕ ಸರಳಳತ್ತ ದಾರಿಮಾಡಿಕೊಟ್ಟಿತು.


ಸರಳ ಅನಂತನತ್ತ ಬಾಗಿದಳೇ..?? ರಾಜೇಶನ ಕುರಿತು ಸರಳ ತಿಳಿದುಕೊಂಡದ್ದು ಸರಿಯಿತ್ತೇ..?? ರಾಜೇಶನಿಗೆ ಸರಳಳ ಕುರಿತು ಹುಟ್ಟಿದ್ದ ತಪ್ಪು ಅಭಿಪ್ರಾಯ ದೂರವಾಯಿತೇ..?? ಸೀತಮ್ಮರ ಮೆರೆಯುವಿಕೆಗೆ ಸಿಕ್ಕ ಪ್ರತಿಫಲವೇನು..?? ಸರಳ ವಿವಾಹವಾದದ್ದು ಯಾರೊಂದಿಗೆ..?? ತಮ್ಮ ಕನಸಿನ ಕಣ್ಮಣಿ ದೊರೆತದ್ದು ಯಾರಿಗೆ..??


ಒಂದು ಸರಳ ಪ್ರೇಮ ಕತೆಯಾದರೂ.. ಅಡೆ-ತಡೆಗಳನ್ನು ನಿವಾರಿಸಿಕೊಂಡ ಬಗೆ ಇಷ್ಟವಾಯಿತು. ಸೀತಮ್ಮನಂತಹಾ ಹೆಣ್ಣಿನ ಗುಣ ತಾಯ್ತನದ ವಿಭಿನ್ನ ಮಗ್ಗುಲನ್ನು ಪರಿಚಯಿಸಿತು. ಮಗಳಿಗೆ ಹಾಗೂ ಮಗನಿಗೆ ತಾರತಮ್ಯ ಮಾಡುವ ಬಗೆ ಹಾಗೂ ಮಗಳನ್ನು ಹೊಂದಿಕೊಳ್ಳಲು ಬಿಡದೆ ದಾರಿ ತಪ್ಪಿಸುವ ಬಗೆ ಆಕೆಯ ಕುರುಡು ಪ್ರೇಮವನ್ನು ತೋರಿಸಿದರೆ.. ರಾಮರಾವ್ ಹಾಗೂ ರಾಜೇಶನಂತಹವರ ಚಾಣಾಕ್ಷ ನಡೆ ಸಂಸಾರವನ್ನು ದಾರಿ ತಪ್ಪದಂತೆ ನೋಡಿಕೊಳ್ಳುವ ಪರಿ ಇಷ್ಟವಾಯಿತು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ