ಬುಧವಾರ, ಏಪ್ರಿಲ್ 15, 2026

ಆತ್ಮಾರ್ಪಣೆ ಅಥವಾ ಅಮರ ಸತಿ ಶಾಂತಲೆ (ಪುಸ್ತಕ ಯಾನ - 187)


ಪುಸ್ತಕದ ಶೀರ್ಷಿಕೆ : ಆತ್ಮಾರ್ಪಣೆ ಅಥವಾ ಅಮರ ಸತಿ ಶಾಂತಲೆ

ಲೇಖಕರು : ಶ್ರೀವಿಜಯ ಹಾಸನ

ಪ್ರಕಾಶಕರು : ಮಾಣಿಕ್ಯ ಪ್ರಕಾಶನ

ಪ್ರಥಮ ಮುದ್ರಣ : 2017

ಪುಟಗಳು : 76

ಬೆಲೆ : 60 ರೂ.


ಆತ್ಮಾರ್ಪಣೆ ಅಥವಾ ಅಮರ ಸತಿ ಶಾಂತಲೆ ಎಂಬ ಶೀರ್ಷಿಕೆಯನ್ನು ಕಂಡಾಗಲೇ ಶಾಂತಲೆಯ ಅಂತ್ಯದ ಕುರಿತ ಸ್ಪಷ್ಟತೆ ಕಂಡು ಬರುತ್ತದೆ. ಇಲ್ಲಿ ಆತ್ಮಾಹುತಿ ಎಂದು ಅಥವಾ ಆತ್ಮಹತ್ಯೆ ಎಂದು ಉಲ್ಲೇಖಿಸದೆ ಆತ್ಮಾರ್ಪಣೆ ಎಂದು ಉಲ್ಲೇಖಿಸಿರುವುದು ಆಕೆ ಮಾಡಿದ ತ್ಯಾಗಕ್ಕೆ ನೀಡಿದ ಗೌರವಯುತ ಅರ್ಪಣೆ ಎಂದೆನಿಸಿತು.


ಶ್ರೀವಿಜಯ ಹಾಸನ ಎಂಬ ಕಾವ್ಯನಾಮದಲ್ಲಿ ಬರೆಯುತ್ತಿರುವವರು ಶ್ರೀಮತಿ ಎಲ್. ಹೇಮಾಕ್ಷಮ್ಮನವರು. ಹಾಸನದವರೇ ಆದ ಇವರು ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ಈಗ ನಿವೃತ್ತಿಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿ ಇವರ ಸಾಹಿತ್ಯ ಸಾಧನೆಗಾಗಿ ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಡಾ. ನಾಡೋಜ, ದೇ.ಜ.ಗೌ ಪ್ರಶಸ್ತಿ, ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿ, ಕುವೆಂಪುಶ್ರೀ ಪ್ರಶಸ್ತಿ, ಶಾರದಾ ರಾಜೋತ್ಸವ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.


ಭಕ್ತಿ ವಿಜಯ ಎಂಬ ಭಕ್ತಿ ಗೀತೆಗಳ ಸಂಕಲನ, ಪೂಜಾ ಫಲ ಹಾಗೂ ಕನಸಿನೊಳಗೊಂದು ಕನಸು ಎಂಬ ಕಥಾ ಸಂಕಲನ, ಗಡಿಗೆ ಹಾಗೂ ರಸಪಾಕ ಎನ್ನುವ ಚುಟುಕು ಸಂಕಲನಗಳು, ಪ್ರಾಮಾಯಣ ಎಂಬ ಹಾಸ್ಯ ಸಂಕಲನ, ಐದು ಮುತ್ತುಗಳು ಎಂಬ ಮಕ್ಕಳ ನಾಟಕ, ಶಿವಮೊಗ್ಗ ಎಂಬ ಮಕ್ಕಳ ಕಥೆಗಳು, ಚಿಲಿಪಿಲಿ ಚಿತ್ತಾರ ಹಾಗೂ ಗುಬ್ಬಿಗೂಡು ಎಂಬ ಮಕ್ಕಳ ಕವನ ಸಂಕಲನಗಳು, ಆನಂದ ಯಾತ್ರೆ ಎಂಬ ಪ್ರವಾಸ ಕಥನ, ರಾವಣಾಂತರಂಗ ಎಂಬ ಪೌರಾಣಿಕ ಕಾದಂಬರಿ, ಅಂಗಳಕ್ಕೊಂದು ಚಿತ್ತಾರ ಎಂಬ ಕವನ ಸಂಕಲನ, ಅಶೋಕ ಸುಂದರಿ ಎಂಬ ಪೌರಾಣಿಕ ಕಥಾಸಂಕಲನ ಹಾಗೂ ಆತ್ಮಾರ್ಪಣೆ ಎನ್ನುವ ಐತಿಹಾಸಿಕ ನಾಟಕಗಳನ್ನು ರಚಿಸಿ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿಗಳನ್ನು ಹೊರತಂದಿದ್ದಾರೆ.


ಈಗಾಗಲೇ ಈ ಬಳಗದಲ್ಲಿ ನಾನು ಇವರ ರಾವಣಾಂತರಂಗ ಎಂಬ ಪೌರಾಣಿಕ ಕಾದಂಬರಿಯ ಪರಿಚಯ ಮಾಡಿದ್ದೇನೆ. ಶಾಂತಲೆಯ ಕುರಿತಾದ ಹಲವಾರು ವಿಭಿನ್ನ ಕೃತಿಗಳು ಬಂದಿದ್ದರೂ.. ನಾನು ಓದಿದ ಮೊದಲ ನಾಟಕ ಇದು. 


ಒಂದೇ ದೇಗುಲ 

ಎರಡು ಗರ್ಭಗುಡಿ 

ದೇಹವೆರಡು 

ಆತ್ಮ ಒಂದು 

ಪಾರ್ವತಿ ಪರಮೇಶ್ವರ 

ಅರ್ಧನಾಾರೀಶ್ವರ 

ಶಾಂತಲೇಶ್ವರ 

ನಿಮ್ಮಿಬ್ಬರ ಪಾದಪದ್ಮಗಳಿಗೆ 

ಸಮರ್ಪಣೆ 

"ಆತ್ಮಾರ್ಪಣೆ"

ಎಂದು ಈ ಕೃತಿಯನ್ನು ಅರ್ಪಣೆ ಮಾಡಿದ್ದಾರೆ. 


ಕೆ. ವಿ. ಅಯ್ಯರ್ ಅವರ ಶಾಂತಲೆಯ ಕುರಿತ ಕಾದಂಬರಿಯನ್ನು ಓದಿದವರು ಅದನ್ನು ಮರೆಯುವಂತಿಲ್ಲ. ಆಕೆಯ ಸಾವು ಅರ್ಥಾತ್ ಆತ್ಮಾರ್ಪಣೆ ಸರಳವಾಗಿ ಕಂಡರೂ.. ಅದರ ಹಿಂದಿನ ದೃಢ ಸಂಕಲ್ಪ ಹಾಗೂ ಉದ್ದೇಶವನ್ನು ಅರ್ಥ ಮಾಡಿಕೊಳ್ಳುವುದು ಅಷ್ಟು ಸುಲಭವೂ ಅಲ್ಲ. ಕೆ. ವಿ. ಅಯ್ಯರ್ ಅವರ ಐತಿಹಾಸಿಕ ಕಾದಂಬರಿ ಶ್ರೀ ವಿಷ್ಣುಕಾಂತೆ ಶಾಂತಲಾ ಕೃತಿಯೊಂದನ್ನೇ ಆಧಾರವಾಗಿಟ್ಟುಕೊಂಡು ರಚಿಸಿರುವ ನಾಟಕ ಇದು.


ರಾಜಮಾತೆ ಮಹಾದೇವಿ, ಹೊಯ್ಸಳರ ದೊರೆ ವಿಷ್ಣುವರ್ಧನ, ಮಹಾಮಂತ್ರಿಗಳಾದ ಗಂಗರಾಜು, ಮಂತ್ರಿಗಳಾದ ಹೇಮಾದ್ರಿ, ವಿಷ್ಣುವರ್ಧನರ ಸಾಕು ಮಗ ಕುವರ ವಿಷ್ಣು, ವಿಷ್ಣುವರ್ಧನರ ಹಿರಿಯರಾಣಿ ಶಾಂತಲೆ ಹಾಗೂ ಕಿರಿಯ ರಾಣಿ ಲಕ್ಷ್ಮಿ, ಶಾಂತಲೆಯ ತಂದೆ ಮಾರಸಿಂಗಮಯ್ಯ ಹಾಗೂ ಶಾಂತಲೆಯ ತಾಯಿ ವೆರಾಂಕಬ್ಬೆಯ ಪಾತ್ರವನ್ನೊಳಗೊಂಡ ನಾಟಕ. ಇದನ್ನು ಹೊರತುಪಡಿಸಿ ಸೂತ್ರಧಾರರಾಗಿ ಇಬ್ಬರು ಸೈನಿಕರಿದ್ದಾರೆ.


ಬೃಹತ್ ಐತಿಹಾಸಿಕ ಕಾದಂಬರಿಯೊಂದನ್ನು ಪುಟ್ಟ ನಾಟಕವನ್ನಾಗಿ ರಚಿಸುವುದು ಅಷ್ಟು ಸುಲಭವಲ್ಲ. ಇಲ್ಲಿ ಹಲವಾರು ಪಾತ್ರಗಳ ಹೆಸರುಗಳು ಬಂದರೂ.. ಪಾತ್ರವರ್ಗದ ಸಂಭಾಷಣೆಗಳು ಮೇಲಿನ ಪಾತ್ರಗಳಿಗಷ್ಟೇ ಸೀಮಿತವಾಗಿದೆ. ಕಥೆಯನ್ನು ಹೇಳುವಾಗ ಇಲ್ಲಿ ಲಾವಣಿಯನ್ನು ಅರ್ಥಪೂರ್ಣವಾಗಿ ಬಳಸಿ ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶಾಂತಲೆಯೇ ಪ್ರಧಾನ ಪಾತ್ರದಲ್ಲಿರುವ ಈ ನಾಟಕ ಕಾದಂಬರಿಗಿಂತ ವಿಭಿನ್ನವಾಗಿಯೇನೂ ಕಂಡು ಬರಲಿಲ್ಲ. ಕಾದಂಬರಿಯ ಕೆಲವು ವಿಚಾರಗಳನ್ನು ಈ ನಾಟಕದಲ್ಲಿ ಕೈ ಬಿಡಲಾಗಿದೆ.


ಪ್ರೌಢಶಾಲೆಯ ಅಥವಾ ಕಾಲೇಜು ವಿದ್ಯಾರ್ಥಿಗಳಿಗೆ ಸುಲಲಿತವಾಗಿ ಮಾಡಿಸಬಹುದಾದ ಹಾಗೂ ಇದರಿಂದ ಇತಿಹಾಸವನ್ನು ಸುಲಭವಾಗಿ ದಾಟಿಸಬಹುದಾದಂತಹ ನಾಟಕ. 


ಇದು ದುರಂತ ನಾಟಕವಾದರೂ.. ನಾಟಕದ ವಸ್ತು ಇತಿಹಾಸ ಜೊತೆಗೆ ಜಾನಪದವು ಸೇರಿದ್ದರೂ.. ಐತಿಹಾಸಿಕವಾದ ಸಂಭಾಷಣೆಗಳ ರೀತಿಯಲ್ಲಿಯೇ ನಾಟಕ ಸಾಗುತ್ತದೆ. ಈ ನಾಟಕದಲ್ಲಿ ತೀರಾ ಕ್ಲಿಷ್ಟ ಪದಗಳನ್ನು ಬಳಸದೆ, ಸುಲಭವಾಗಿ ಅರ್ಥೈಸಿಕೊಳ್ಳುವಂತಹಾ ಸಂಭಾಷಣೆಗಳಿವೆ. 


ನಾಟಕದ ಅಂತ್ಯ ಶಾಂತಲೆ ಹಾಗೂ ಕುವರ ವಿಷ್ಣು ಇಬ್ಬರ ಆತ್ಮಾರ್ಪಣೆಯೊಂದಿಗೆ ಮುಕ್ತಾಯವಾಗುತ್ತದೆ. ಕೆ. ವಿ. ಅಯ್ಯರ್ ಅವರ ಕಾದಂಬರಿಯನ್ನು ಓದದೇ ಇದ್ದವರು ಇದನ್ನು ಓದಿ ನಂತರ ಆ ಕಾದಂಬರಿಯನ್ನು ಓದಿದರೆ ಇನ್ನಷ್ಟು ಪರಿಣಾಮಕಾರಿಯಾಗಿರುತ್ತದೆ ಎಂದೆನಿಸಿತು. 


ನಾಟಕದಲ್ಲಿ ಅಥವಾ ಐತಿಹಾಸಿಕ ಕಾದಂಬರಿಗಳನ್ನು ಹೆಣೆಯುವಾಗ ಯಾವುದಾದರೂ ಕೆಲವು ಬದಲಾವಣೆಗಳನ್ನು ಕಥಾ ಹರವಿನಲ್ಲಿ ಅಥವಾ ಕಥಾ ಪರಿಸರದಲ್ಲಿ ಮಾಡಿಕೊಳ್ಳುತ್ತಾರೆ. ಆದರೆ, ಇಂತಹಾ ಯಾವುದೇ ಬದಲಾವಣೆಗಳು ಸಹಾ ಕಂಡು ಬರಲಿಲ್ಲ. ಬದಲಾಗಿ ಕಥೆಯನ್ನು ಇನ್ನಷ್ಟು ಸುಲಲಿತವಾಗಿ ಹಾಗೂ ಸರಳವಾಗಿ ಕಡಿಮೆ ಪಾತ್ರಗಳೊಂದಿಗೆ ಹೆಣೆದಿದ್ದಾರೆ. 


ಇದು ಓದಿನ ಮೊದಲ ದಿನಗಳಲ್ಲಿ ಹೊಸ ಓದುಗರಿಗೆ ಸೂಕ್ತವಾಗಿದ್ದರೂ.. ಶಾಂತಲೆಯ ಕುರಿತು ಹೆಚ್ಚಿನ ಮಾಹಿತಿ ಅಥವಾ ಹೆಚ್ಚಿನ ಅಧ್ಯಯನಕ್ಕಾಗಿ ಓದ ಬಯಸುವವರಿಗೆ ಕೊಂಚ ನಿರಾಸೆಯುಂಟು ಮಾಡಬಹುದೆನ್ನಿಸಿತು.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ