ಬುಧವಾರ, ಏಪ್ರಿಲ್ 22, 2026

ಭಾರತದಾದ್ಯಂತ ನೀರಿನಷ್ಟೇ ವ್ಯಾಪಕ ಮಾರ್ಕೆಟ್ ಉಳ್ಳ ಬಿಸ್ಲೆರಿ ( ಬ್ಯುಸಿನೆಸ್ ಡೈರಿ ಪುಟ - 06)


ಇತ್ತೀಚೆಗೆ ಕೆಲ ತಿಂಗಳಿನ ಹಿಂದೆ ಬಿಸ್ಲೆರಿ ನ್ಯೂಸ್ ನಲ್ಲಿ ಸುದ್ದಿಯಲ್ಲಿತ್ತು. ಅದೂ ಎರಡು ಕಾರಣಕ್ಕೆ. ಈಗ ಬಿಸ್ಲೆರಿಯನ್ನು ಮುನ್ನಡೆಸುವ ರಮೇಶ್ ಚೌಹಾಣ್ ಅವರ ಮಗಳು ಜಯಂತಿ ಚೌಹಾಣ್ ತಾನು ಬಿಸ್ಲೆರಿಯನ್ನು ಮುನ್ನಡೆಸುವುದಿಲ್ಲ ಎಂದು ನೀಡಿದ ಹೇಳಿಕೆ ವೈರಲ್ ಆಗಿತ್ತು. ಜೊತೆಗೆ, ಟಾಟಾ ಕಂಪೆನಿ ಬಿಸ್ಲೆರಿಯನ್ನು 7000 ಕೋಟಿಗೆ ಕೊಂಡುಕೊಳ್ಳುತ್ತದೆ ಎನ್ನುವ ಪುಕಾರು ಎದ್ದಿತು. ಇದಕ್ಕೆ ತೆರೆ ಬಿದ್ದಿದ್ದನ್ನು ಹೇಳುವ ಮುನ್ನ ಬಿಸ್ಲೆರಿ ಕಂಪೆನಿಯ ಕುರಿತು ತಿಳಿದುಕೊಳ್ಳೋಣ.


ಇಂದು ಅಂಗಡಿಗೆ ಹೋಗಿ ಮಿನಿರಲ್ ವಾಟರ್ ಕೊಡಿ ಎನ್ನುವ ಬದಲು ಬಿಸ್ಲೆರಿ ಕೊಡಿ ಎನ್ನುವಷ್ಟು ಬ್ರ್ಯಾಂಡ್ ನೇಮ್ ಪಡೆದಿರುವ ಬಿಸ್ಲೆರಿ ಕಂಪೆನಿ ಮೂಲತಃ ಭಾರತದ್ದಲ್ಲ.. ಇದಕ್ಕೆ ಬಿಸ್ಲೆರಿ ಎನ್ನುವ ಹೆಸರು ಬಂದದ್ದು ಕೂಡಾ ಆ ವ್ಯಕ್ತಿಯ ಸರ್ ನೇಮ್ ನಿಂದ. ಸಿಗ್ನೋರ್ ಫೆಲಿಸ್ ಬಿಸ್ಲೆರಿ ಮೂಲತಃ ಇಟಲಿಯವರು. ಆತ ಇಟಲಿಯ ಬ್ಯುಸಿನೆಸ್ ಮನ್, ಕೆಮಿಸ್ಟ್, ಸಂಶೋಧಕರೂ ಆಗಿದ್ದವರು. ಇವರು ಹುಟ್ಟಿದ್ದು 1851 ರ ನವೆಂಬರ್ 20 ರಂದು. ಇಟಲಿಯ ವೆರೋಲನೌವದಲ್ಲಿ. ಆಗೆಲ್ಲಾ ಆಲ್ಕೋಹಾಲ್ ಹೆಚ್ಚು ರೂಢಿಯಲ್ಲಿದ್ದ ದಿನಗಳು. ಅಲ್ಲದೆ, ಯುರೋಪ್ ನಲ್ಲಿ ಕುಡಿಯುವ ಶುದ್ಧ ನೀರು ಸಹಾ ಕಡಿಮೆಯೇ.. ಎರಡನೇ ಮಹಾಯುದ್ಧದ ಸಂಧರ್ಭ. ಆ ಸಂಧರ್ಭದಲ್ಲಿ ಸಿಂಕೋನಾ, ಕೆಲವು ಮೂಲಿಕೆಗಳು ಹಾಗೂ ಐರನ್ ಸಾಲ್ಟ್ ಗಳನ್ನು ಬಳಸಿ ಒಂದು ಕುಡಿಯುವ ಪಾನೀಯವನ್ನು ತಯಾರಿಸಿದರು. ಅದೇ 'ಫೆರೋ-ಚೀನ ಬಿಸ್ಲೆರಿ'. ಇಂದಿನ ಬಿಸ್ಲೆರಿಯ ಮೂಲ ಇದೇ.. 


ಅದೇ ಸಮಯದಲ್ಲಿ ಮಲೇರಿಯಾ ಸಹಾ ಇದ್ದುದರಿಂದ ಕ್ವಿನೈನ್, ಐರನ್ ಹಾಗೂ ಆರ್ಸೆನಿಕ್ಗಳನ್ನು ಬಳಸಿ ಒಂದು ದ್ರಾವಣ ತಯಾರಿಸಿದರು. ಅದೇ ನೋಸೆರಾ ಉಂಬ್ರಾ. ಸಿಗ್ನೋರ್ ಫೆಲಿಸ್ ಬಿಸ್ಲೆರಿಯ ಫ್ಯಾಮಿಲಿ ಡಾಕ್ಟರ್ ಆಗಿದ್ದ ಹಾಗೂ ಕ್ಲೋಸ್ ಫ್ರೆಂಡ್ ಕೂಡಾ ಆಗಿದ್ದ ಡಾ. ರೊಸ್ಸಿ ಈ ಮಾರಾಟದ ಕಂಪೆನಿಯ ಪಾರ್ಟನರ್ ಆದರು. ಕಾಲಕ್ರಮೇಣ, ಸಿಗ್ನೋರ್ ಫೆಲಿಸ್ ಬಿಸ್ಲೆರಿ ಕಾಲವಾದರು. ಡಾ. ರೊಸ್ಸಿಯೇ ಬಿಸ್ಲೆರಿ ಕಂಪೆನಿಯ ಮುಖ್ಯಸ್ಥರಾದರು. ಆದರೆ, ಕೆಲವರ ಸಂದೇಹದ ಪ್ರಕಾರ ರೊಸ್ಸಿ ಮೋಸದಿಂದ ಆ ಕಂಪೆನಿಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು ಎಂದೂ ಹೇಳುತ್ತಾರೆ. ಇದಕ್ಕೆ, ಪೂರಕವಾಗಿ ಬಿಸ್ಲೆರಿಯವರಿಗೆ ಅಳಿಯ ಇದ್ದು.. ಅಳಿಯ ಕೂಡಾ ಕಂಪೆನಿಯ ಅಡ್ವೈಸರ್ ಆಗಿದ್ದರು ಎನ್ನುತ್ತಾರೆ. 


ತಮ್ಮ ಕುಟುಂಬದಲ್ಲಿ ಸರಣಿ ಆಘಾತಕಾರಿ ಘಟನೆಗಳು ನಡೆಯತೊಡಗಿದ್ದರಿಂದ ಡಾ. ರೊಸ್ಸಿ ನಂತರ ಈ ಕಂಪೆನಿಯನ್ನು ಮಾರಿದರು ಎನ್ನಲಾಗುತ್ತದೆ. ರೊಸ್ಸಿ ಈ ಕಂಪೆನಿಯನ್ನು ಮಾರಿದ್ದು ಖುಶ್ರೋ ಸುಂಟುಕ್ ಗೆ. ಈತ ಬೇರಾರೂ ಅಲ್ಲ.. ಬಿಸ್ಲೆರಿ ಕಂಪೆನಿಯ ಲೀಗಲ್ ಅಡ್ವೈಸರ್ ಹಾಗೂ ರೋಸ್ಸಿಯವರ ಆಪ್ತ ಸ್ನೇಹಿತ ಕೂಡಾ ಆಗಿದ್ದವರ ಮಗ. ಖುಶ್ರೋ ಸುಂಟುಕ್ ಕೂಡಾ ಲಾಯರ್. ಇವರ ಕುಟುಂಬ ಮೂಲ ಪಾರ್ಸಿಯ ವ್ಯಾಪಾರಿ ಕುಟುಂಬವಾಗಿದ್ದು ಖುಶ್ರೋಗೆ ಲಾಯರ್ ಆಗಿರುವುದಕ್ಕಿಂತ ಯಾವುದಾದರೂ ಬ್ಯುಸಿನೆಸ್ ಮಾಡಬೇಕೆನ್ನುವ ಮನಸ್ಸಿತ್ತು. ಹಾಗಾಗಿ, ಬಿಸ್ಲೆರಿ ಕಂಪೆನಿಯನ್ನು ಕೊಂಡು ಕೊಂಡ ಎನ್ನುವ ಮಾತೂ ಇದೆ.


ಇದೆಲ್ಲದರ ಫಲವಾಗಿ 1965 ರಲ್ಲಿ ಬಿಸ್ಲೆರಿ ಕಂಪೆನಿ ಭಾರತದಲ್ಲಿ ಶುರುವಾಯಿತು. ಮುಂಬಯಿಯ ಥಾಣೆಯಲ್ಲಿ ಮೊದಲ ಘಟಕ ಶುರುವಾಯಿತು. ಆದರೆ, ಭಾರತದಲ್ಲಿ ಆ ಸಮಯ ಹೇಗಿತ್ತು ಎಂದರೆ.. ನೀರು ಧಾರಾಳವಾಗಿ ಸಿಗುತ್ತಿದ್ದ ಸಮಯ. ಹರಿಯುವ ನೀರನ್ನು ಧಾರಾಳವಾಗಿ ಹಿಡಿದಿಟ್ಟು ಕುಡಿಯುತ್ತಿದ್ದ ಬಡ ಕುಟುಂಬಗಳು ಹಾಗೂ ಮಧ್ಯಮ ವರ್ಗದ ಕುಟುಂಬಗಳು ಈ ಐಡಿಯಾವನ್ನು ಕಂಡು ನಕ್ಕರು. ನೀರನ್ನು ಯಾರಾದರೂ ಪ್ಯಾಕೇಜಿಂಗ್ ಮಾಡಿ ಕುಡಿಯುತ್ತಾರಾ..?? ಎಂದು ಆಡಿಕೊಂಡರು. ಆದರೆ, ಈ ಪ್ಯಾಕೇಜಿಂಗ್ ನೀರು ವರವಾಗಿ ಪರಿಣಮಿಸಿದ್ದೂ ಇದೆ. ಭಾರತದಲ್ಲಿದ್ದ ಫೈವ್ ಸ್ಟಾರ್ ಹೋಟೆಲ್ ನವರಿಗೆ, ಭಾರತಕ್ಕೆ ಬಂದಿರುತ್ತಿದ್ದ ವಿದೇಶಿಯರಿಗೆ ಇಲ್ಲಿನ ನೀರು ಸರಿ ಹೊಂದುತ್ತಿರಲಿಲ್ಲ. ದೆಹಲಿಯಲ್ಲಿ ಹಾಗೂ ಮುಂಬೈನಲ್ಲಿ ಆಗ ನೀರು ಕಲುಷಿತವಾಗುತ್ತಿತ್ತು ಸಹಾ.. ಎಷ್ಟೋ ಬಾರಿ ಮೇಲ್ಮಧ್ಯಮ ವರ್ಗದವರು ಈ ನೀರನ್ನು ಕುಡಿದು ಅಸ್ವಸ್ಥಗೊಂಡರು. ಬಡ ಕುಟುಂಬದವರು ವಿಧಿ ಇಲ್ಲದೇ ಅದೇ ನೀರನ್ನು ಕುಡಿಯುತ್ತಾ ಅದಕ್ಕೇ ಹೊಂದಿಕೊಂಡರು. ಆ ಸಮಯದಲ್ಲಿ ಕೇವಲ ಮೇಲು ವರ್ಗದವರ ಪ್ರತಿನಿಧಿಯಂತಾಗಿದ್ದು ಬಿಸ್ಲೆರಿ. ಬಿಸ್ಲೆರಿ ಕೇವಲ ಒಂದು ವರ್ಗದವರಿಗೆ ಬ್ರ್ಯಾಂಡ್ ಎಂದಾದಾಗ ಸುಂಟುಕ್ ಗೆ ನಿರಾಶೆಯಾಯಿತು. ತಾನಂದುಕೊಂಡು ರೀತಿಯ ಬ್ಯುಸಿನೆಸ್ ಇದಲ್ಲ.. ಹಾಗೂ, ಈ ಬ್ಯುಸಿನೆಸ್ ಅದಕ್ಕೆ ಹೊಂದಿಕೆಯಾಗಲಾರದು ಎಂದುಕೊಂಡು ತಾನು ಈ ಕಂಪೆನಿಯನ್ನು ಕೊಂಡ ನಾಲ್ಕು ವರ್ಷಕ್ಕೇ ಎಂದರೆ 1969 ರಲ್ಲಿ ಮಾರಾಟ ಮಾಡಲು ಸಿದ್ಧರಾದರು.


ಈ ಸಮಯದಲ್ಲಿ ಈ ಸುದ್ದಿ ಕೇಳಿ ಬಿಸ್ಲೆರಿಯನ್ನು ಕೊಂಡುಕೊಳ್ಳಲು ಮುಂದಾಗಿದ್ದು ಚೌಹಾಣ್ ಬ್ರದರ್ಸ್ ಎಂದೇ ಖ್ಯಾತರಾಗಿದ್ದ ರಮೇಶ್ ಚೌಹಾಣ್. 1949 ರಲ್ಲಿ ಸ್ನ್ಯಾಕ್ಸ್ ರೂಪದಲ್ಲಿ ತಿನ್ನುವ ತಿನಿಸುಗಳನ್ನೂ ಹಾಗೂ ಪಾನೀಯ ರೂಪದಲ್ಲಿ ಬಿವರೇಜ್ ಗಳನ್ನು ಜಯಂತಿಲಾಲ್ ಚೌಹಾಣ್ ಪಾರ್ಲೆ ಕಂಪೆನಿ ಎಂಬ ಹೆಸರಿನಲ್ಲಿ ಶುರು ಮಾಡಿದ್ದರು. 1969 ರ ಹೊತ್ತಿಗೆ ಜಯಂತಿಲಾಲ್ ಚೌಹಾಣ್ ನಿಧಾನರಾಗಿ ಅವರ ಮಕ್ಕಳಾದ ಪ್ರಕಾಶ್ ಚೌಹಾಣ್ ಹಾಗೂ ರಮೇಶ್ ಚೌಹಾಣ್ ಸುಪರ್ದಿಗೆ ಬಂದಿತ್ತು ಪಾರ್ಲೆ ಕಂಪೆನಿ. ಇವರೇ ಚೌಹಾಣ್ ಬ್ರದರ್ಸ್ ಎಂದು ಖ್ಯಾತರಾಗಿದ್ದವರು. ಬಿಸ್ಲೆರಿ ಕುರಿತು ರಮೇಶ್ ಚೌಹಾಣ್ ತಲೆಯಲ್ಲಿ ಸಾಕಷ್ಟು ಐಡಿಯಾಗಳಿದ್ದವು. ಕೊಂಚವೂ ಹಿಂದೆ ಮುಂದೆ ನೋಡದೆ 4 ಲಕ್ಷ ರೂಪಾಯಿಗೆ ಬಿಸ್ಲೆರಿ ಕಂಪೆನಿಯನ್ನು ಕೊಂಡುಕೊಂಡರು. ಕೇವಲ ಸ್ಟಾರ್ ಹೋಟೆಲ್ ಗಳಲ್ಲಿ ಮಾತ್ರ ಲಭ್ಯವಿದ್ದ ಬಿಸ್ಲೆರಿ ಈಗ ಬೀದಿ ಬದಿಯ ಸಣ್ಣ ಸಣ್ಣ ಅಂಗಡಿಗಳಲ್ಲಿಯೂ ದೊರೆಯುವಂತಾಯಿತು. 


ರಮೇಶ್ ಚೌಹಾಣ್ ತಮ್ಮ 27 ನೇ ವಯಸ್ಸಿನಲ್ಲಿಯೇ ಇಂಡಿಯನ್ ಸಾಫ್ಟ್ ಡ್ರಿಂಕ್ ನ ಜನಕ ಎಂದೇ ಹೆಸರಾಗಿದ್ದವರು. ಪಾರ್ಲೆ ಕಂಪೆನಿಯ ಮೂಲಕ ಗೋಲ್ಡ್ ಸ್ಪಾಟ್, ಲಿಮ್ಕಾ, ಮಾಜಾ ಹಾಗೂ ತಮ್ಸ್ ಅಪ್ ಗಳನ್ನು ತಯಾರಿಸಿದ್ದವರು. ಈ ಮೂಲಕ ಕೋಕಾ ಕೋಲಾಗೆ ಭಾರತದ ಪ್ರತಿಸ್ಪರ್ಧಿಗಳನ್ನು ಎದುರಾಗಿಸಿದವರು. ವಿಪರ್ಯಾಸವೆಂದರೆ ಕಂಪೆನಿಯ ಮಾರ್ಕೆಟಿಂಗ್ ನ ನಿರ್ಧಾರಕ್ಕೆ ಬೆಲೆಕೊಟ್ಟು 1993 ರಲ್ಲಿ ಇವೆಲ್ಲವನ್ನೂ ಕೋಕಾಕೋಲಾ ಕಂಪೆನಿಗೇ ಮಾರಬೇಕಾಯಿತು. 400 ಕೋಟಿ ರೂಪಾಯಿಗೆ ಇದನ್ನು ಮಾರಿದರೂ.. ತಾನು ಬ್ರ್ಯಾಂಡ್ ಗಾಗಿ ಮತ್ತೇನನ್ನಾದರೂ ಮಾಡುವ ಕೆಚ್ಚು ಇದ್ದೇ ಇತ್ತು. ಹಾಗಾಗಿ.. 1993 ರಿಂದ ಆಚೆಗೆ ಬಿಸ್ಲೆರಿಯ ಮೇಲೆ ತಮ್ಮ ಗಮನವನ್ನು ಹೆಚ್ಚು ಕೇಂದ್ರೀಕರಿಸಿ ಅದರತ್ತ ಗಮನ ಹರಿಸಿದರು. 


ಬಿವರೇಜ್, ಸಾಫ್ಟ್ ಡ್ರಿಂಕ್ಸ್, ಸೋಡಾ ಎಂದೆನ್ನುತ್ತಿದ್ದ ಕಾಲದಲ್ಲಿ ಕೇವಲ ಶುದ್ಧತೆಯ ನೀರನ್ನು ಮಾರುವುದು ಸುಲಭದ ಮಾತಾಗಿರಲಿಲ್ಲ. ಮೊದಲಿಗೆ ಬಿಸ್ಲೆರಿಯ ಮಿನಿರಲ್ ವಾಟರ್ ಅನ್ನು ಗಾಜಿನ ಬಾಟಲಿಗಳಲ್ಲಿ ಮಾರಾಟ ಮಾಡಲಾಗುತ್ತಿತ್ತು. ಗಾಜಿನ ಬಾಟಲಿ ಒಡೆದು ಹೋಗುವ ಆತಂಕದ ಜೊತೆಗೆ ಆಗ ಬಿಸ್ಲೆರಿಗೆ ತನ್ನದೇ ಆದ ಡಿಸ್ಟ್ರಿಬ್ಯುಟರ್ಸ್ ಹಾಗೂ ಸಾಗಾಣಿಕೆಯ ಟ್ರಕ್ ಗಳೂ ಇರಲಿಲ್ಲ. ಹಾಗಾಗಿ, ಮೊದಲಿಗೆ ಬಾಟಲಿಯನ್ನು ಬದಲಾಯಿಸಿತು. ಗಾಜಿನ ಬಾಟಲಿ ಬದಲಾಗಿ ಪಿ.ವಿ.ಸಿಯಿಂದ ಮಾಡಿದ ಬಾಟಲ್ ಗಳು ಬಂದವು. ಆದರೆ, ಇವುಗಳು ಕೂಡಾ ಅಷ್ಟೊಂದು ಸಮರ್ಪಕವೆನಿಸಲಿಲ್ಲ. ಬಾಟಲ್ ಗಳು ಪಾರದರ್ಶಕವಾಗಿರಲಿಲ್ಲ ಹಾಗೂ ನೀರಿನ ಶುದ್ದತೆಯೂ ಹೆಚ್ಚು ಕಾಲ ಉಳಿಯುತ್ತಿರಲಿಲ್ಲ. ಹಾಗಾಗಿ, ಇವುಗಳ ಸ್ಥಾನವನ್ನು ಅಲಂಕರಿಸಿದ್ದು ಪಿ.ವಿ.ಟಿ ಬಾಟಲ್ ಗಳು. ಎಂದರೆ, ಈಗ ನಾವು ಉಪಯೋಗಿಸುತ್ತಿರುವ ಬಾಟಲ್ ಗಳು. ಇವು ಪಾರದರ್ಶಕವೂ ಹೌದು. ಜೊತೆಗೆ ಹೆಚ್ಚು ಕಾಲ ನೀರಿನ ಶುದ್ಧತೆಯನ್ನೂ ಉಳಿಸಿಕೊಳ್ಳುವಂತಹವು. ಈಗ ಭಾರತದಾದ್ಯಂತ ಬಿಸ್ಲೆರಿಯ 122 ನೀರಿನ ಘಟಕಗಳಿದ್ದು, 4500 ಡಿಸ್ಟ್ರಿಬ್ಯುಟರ್ಸ್ ಹಾಗೂ ತನ್ನದೇ 5000 ನೀರಿನ ಟ್ರಕ್ ಗಳಿವೆ. ಇಂದು ಭಾರತದಲ್ಲಷ್ಟೇ ಅಲ್ಲದೆ, ವಿದೇಶದಲ್ಲಿಯೂ ನೀರಿನಂತೆ ಹರಡಿಕೊಂಡಿದೆ.ಅಷ್ಟೇ ಅಲ್ಲ.. ಕೇವಲ 1 ಹಾಗೂ 2 ಲೀಟರ್ ಬಾಟಲ್ ನಲ್ಲಿ ಮಾತ್ರ ಲಭ್ಯವಿದ್ದ ನೀರು ಈಗ ಅಗತ್ಯತೆಗೆ ತಕ್ಕಂತೆ ಕ್ಯಾನ್ ನ ರೂಪ ಪಡೆದಿದೆ. 


ಬಿಸ್ಲೆರಿಗೆ ದೇಶೀಯ ಪ್ರತಿಸ್ಪರ್ಧಿಗಳೂ ಹುಟ್ಟಿಕೊಂಡರು. ಬಿಸ್ಲೆರಿಯನ್ನೇ ಕಾಪಿ ಮಾಡಿ ಇಂಗ್ಲೀಷ್ ಲೇಬಲ್ ನ ಅದರ ಒಂದು ಅಕ್ಷರವನ್ನು ಆಚೀಚೆ ಮಾಡಿ ಕಳಪೆ ನೀರಿನ ಮಾರಾಟ ಮಾಡಿ ಅದರ ಬ್ರ್ಯಾಂಡ್ ನೇಮ್ ಗೆ ಕುತ್ತು ತರುವ ಪ್ರಯತ್ನವನ್ನೂ ಮಾಡಿದರು. ಆದರೆ, ಬಿಸ್ಲೆರಿಯ ಜನಪ್ರಿಯತೆ ಕುಗ್ಗಲಿಲ್ಲ. ಬದಲಾಗಿ ಅದಕ್ಕೊಂದು ಅರ್ಥಗರ್ಭಿತ ಸ್ಲೋಗನ್ ಅನ್ನೂ ಬಳಸಿತು. "ಬಿಸ್ಲೆರಿಯನ್ನು ಬಳಸುವಾಗ ಕೇವಲ ಮುಚ್ಚುಳ ತೆರೆಯದಿರಿ.. ಅದನ್ನು ಕೊಳ್ಳುವಾಗ ನಿಮ್ಮ ಕಣ್ಣನ್ನೂ ತೆರೆದುಕೊಂಡಿರಿ" ಎಂದಿತು. ಆದರೂ, ಮತ್ತಷ್ಟು ಪ್ರಬಲ ಪ್ರತಿಸ್ಪರ್ಧಿಗಳು ಹುಟ್ಟಿಕೊಂಡರು. ಕಿನ್ಲೇ ಕೂಡಾ ಅದರಲ್ಲೊಂದು. ಇವರೆಲ್ಲರ ಮಧ್ಯದಲ್ಲಿ ತಾನು ವಿಭಿನ್ನವಾಗಿ ಗುರುತಿಸಿಕೊಂಡು ಎದ್ದು ಕಾಣುವಂತೆ ಮಾಡಲು ತನ್ನ ನೀಲಿ ಬಣ್ಣದ ಬಾಟಲ್ ಕ್ಯಾಪ್ ಹಾಗೂ ಅದರ ಮೇಲಿನ ನೀಲಿ ಲೇಬಲ್ ಅನ್ನು ಹಸುರು ಬಣ್ಣಕ್ಕೆ ಬದಲಾಯಿಸಿಕೊಂಡಿತು. 'ಅಕ್ವಾ ಗ್ರೀನ್' ಎಂಬ ಹೊಸ ಹೆಸರಿನೊಂದಿಗೆ ಹೊರಬಂದಿತು. 'ಬಿಸ್ಲೆರಿ ವೆರಿ ವೆರಿ ಎಕ್ಸ್ಟ್ರಾರ್ಡಿನರಿ', 'ಎಲ್ಲ ನೀರೂ ಬಿಸ್ಲೆರಿಯಲ್ಲ' ಎನ್ನುವ ಘೋಷ ವಾಕ್ಯಗಳನ್ನೂ ನೀಡಿದೆ.


ಬಿಸ್ಲೆರಿ ಪ್ಲಾಸ್ಟಿಕ್ ನಿಂದ ಪರಿಸರಕ್ಕೆ ಹಾನಿ ಮಾಡುತ್ತಿದೆ ಎನ್ನುವವರ ಮಾತಿಗೆ ಪ್ರತ್ಯುತ್ತರವಾಗಿ ಕಳೆದ ಮಕ್ಕಳ ದಿನಾಚರಣೆಯಂದು ತನ್ನ ಪ್ರಮುಖ ಸುಸ್ಥಿರ ಕಾರ್ಯಕ್ರಮದ ಅಡಿಯಲ್ಲಿ ಸೂಕ್ತವಾದ ಪ್ಲಾಸ್ಟಿಕ್ ಪ್ರತ್ಯೇಕತೆ, ವಿಲೇವಾರಿ ಮತ್ತು ಮರುಬಳಕೆಯ ಕಾರಣವನ್ನು ಚಾಲನೆ ಮಾಡಲು ದೆಹಲಿಯ ಯುವ ಬದಲಾವಣೆ ಮಾಡುವವರೊಂದಿಗೆ ಸಹಕರಿಸಿದೆ. ಅದೇ.. 'ಬಾಟಲ್ಸ್ ಫಾರ್ ಚೇಂಜ್' . ಪ್ಲಾಸ್ಟಿಕ್ ಅನ್ನು ಮರುಬಳಸುವ ತಂತ್ರದಿಂದ ಇದನ್ನು ತನ್ನ ಜನಪ್ರಿಯತೆಗೆ ಬಳಸಿಕೊಂಡಿತು. ಅಷ್ಟೇ ಅಲ್ಲ.. ಬಿಸ್ಲೆರಿ ಇಂಟರ್‌ನ್ಯಾಶನಲ್ ಗಾಜಿಯಾಬಾದ್ ನಗರ ನಿಗಮ್ ಮತ್ತು ಐ.ಪಿ.ಸಿ.ಎ ನೊಂದಿಗೆ ಗಜಾಬ್ ಸ್ಟ್ರೀಟ್ ಅನ್ನು ಪ್ರಾರಂಭಿಸಲು ಪಾಲುದಾರಿಕೆ ಮಾಡಿಕೊಂಡಿದೆ , ಇದು ಮರುಬಳಕೆಯ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ ಮಾಡಿದ ವಿಶಿಷ್ಟವಾದ ಬೀದಿಯಾಗಿದೆ. ಒಂದು ಕಾಲದಲ್ಲಿ ಕೊಳಕು ಮತ್ತು ಹೊಲಸುಗಳಿಂದ ಆವೃತವಾಗಿದ್ದ ಕೈಬಿಟ್ಟ ಬೀದಿಯನ್ನು ಸುಂದರಗೊಳಿಸಲು ಈ ಉಪಾಯ ಕಂಡುಕೊಳ್ಳಲಾಗಿದೆ.


2000 ರಲ್ಲಿ ಕೆಲವು ಬಿಸ್ಲೆರಿ ಬಾಟಲ್ ಗಳ ಮೇಲೆ ಐ.ಎಸ್.ಐ ಮಾರ್ಕ್ ಇಲ್ಲದ್ದನ್ನು ಗಮನಿಸಿದ್ದ ಬಿ.ಐ.ಎಸ್ ದೆಹಲಿಯಲ್ಲಿದ್ದ ಘಟಕದ ಲೈಸೆನ್ಸ್ ಕ್ಯಾನ್ಸಲ್ ಮಾಡಲು ಮಾಡಿತ್ತು. ಆದರೆ, ಕಾನೂನು ಹೋರಾಟದ ಮೂಲಕ ಒಂದೂವರೆ ತಿಂಗಳ ನಂತರ ಆ ಘಟಕ ಮತ್ತೆ ಆರಂಭವಾಯಿತು.


ಈಗಿನ ಅಕ್ವಾಗಾರ್ಡ್ ಹಾಗೂ ವಾಟರ್ ಪ್ಯೂರಿಫಯರ್ ಗಳು ಕೂಡಾ ಬಿಸ್ಲೆರಿಗೆ ಪ್ರತಿಸ್ಪರ್ಧಿಗಳು ಎನ್ನಿಸಿದರೂ ಇದರ ವ್ಯಾಪಾರವೇನೂ ಕುಂದಿಲ್ಲ.. ಕೋವಿಡ್ ಸಮಯದಲ್ಲಿ ಸಹಾ ಇದರ ವ್ಯಾಪಾರ ಗಣನೀಯವಾಗಿ ಏರಿಕೆಯಾಗಿತ್ತು. ಆನ್ಲೈನ್ನಲ್ಲಿ ಬಿಸ್ಲೆರಿ ತರಿಸಿಕೊಂಡವರ ಸಂಖ್ಯೆಯೇನೂ ಕಮ್ಮಿಯಿರಲಿಲ್ಲ. 


ಯಾವುದಕ್ಕೂ ಜಗ್ಗದೇ, ಕುಗ್ಗದೇ ನಡೆಯುತ್ತಿರುವ ಬ್ಯುಸಿನೆಸ್ ರಮೇಶ್ ಚೌಹಾಣ್ ಕೈಯಿಂದ ಕೈತಪ್ಪಿ ಹೋಗುವುದರಲ್ಲಿತ್ತು. ಮಗಳು ಜಯಂತಿ ಚೌಹಾಣ್ ಕಂಪೆನಿ ವೈಸ್ ಪ್ರೆಸಿಡೆಂಟ್ ಆಗಿ ಎರಡು ವರ್ಷ ಕಾರ್ಯ ನಿರ್ವಹಿಸಿದ್ದರೂ ಸಹಾ ಕಂಪೆನಿಯ ಮುಖ್ಯಸ್ಥೆಯಾಗುವುದಕ್ಕೆ ಒಪ್ಪಿರಲಿಲ್ಲ. ಕಾರಣವಿಷ್ಟೇ.. ಆಕೆಗೆ ಬ್ಯುಸಿನೆಸ್ ನಲ್ಲಿ ಆಸಕ್ತಿ ಇರಲಿಲ್ಲ. ಆಕೆ ಫ್ಯಾಷನ್ ಡಿಸೈನಿಂಗ್ ಹಾಗೂ ಟ್ರಾವೆಲಿಂಗ್ ನಲ್ಲಿ ಆಸಕ್ತಳಾಗಿದ್ದಳು. ಹಾಗಾಗಿ, ಟಾಟಾದವರು 7000 ಕೋಟಿಗೆ ಬಿಸ್ಲೆರಿಯನ್ನು ಕೊಂಡುಕೊಳ್ಳಲು ಮುಂದಾಗಿದ್ದರು. ಆದರೆ, ಈಗ ಜಯಂತಿ ಚೌಹಾಣ್ ತಾನೇ ಬಿಸ್ಲೆರಿಯನ್ನು ಮುಂದುವರಿಸಲು ಒಪ್ಪಿದ್ದಾರೆ. ಮುಂದಿನ ಬಿಸ್ಲೆರಿಯ ನಡೆಗಳನ್ನು ಕಾದು ನೋಡಬೇಕಿದೆ.


ಬಿಸ್ಲೆರಿಯ ಬ್ಯುಸಿನೆಸ್ ತಂತ್ರ ನಾಲ್ಕು 'ಪಿ' ಗಳಲ್ಲಿ ಅಡಗಿದೆ. ಪ್ರಾಡಕ್ಟ್, ಪ್ರೈಸ್, ಪ್ಲೇಸ್, ಪ್ರೊಮೋಷನ್. ಬಿಸ್ಲೆರಿಯ ಬ್ಯುಸಿನೆಸ್ ನಿಂದ ಕಲಿಯಬೇಕಿರುವುದು. ಯಾವುದೇ ಉತ್ಪನ್ನ ಎಲ್ಲಾ ವರ್ಗದ ಗ್ರಾಹಕರನ್ನೂ ಆಕರ್ಷಿಸಿ ಕೈಗೆಟುಕುವ ದರದಲ್ಲಿ ದೊರೆಯಬೇಕು. ಅಷ್ಟೇ ಅಲ್ಲ ಪ್ರತಿ ಸಣ್ಣ - ಪುಟ್ಟ ಸ್ಥಳದಲ್ಲಿಯೂ ದೊರೆಯಬೇಕು. ಎಷ್ಟೇ ಬೆಳೆದರೂ ನಮ್ಮನ್ನು ನಾವು ಅಡ್ವರ್ಟೈಸ್ ಮಾಡಿಕೊಳ್ಳುತ್ತಾ ಇರುವುದು ಅತಿ ಮುಖ್ಯ ಅಷ್ಟೇ ಅಲ್ಲ.. ಮುಂದಾಲೋಚನೆ, ದೂರದರ್ಶಿತ್ವ, ಛಲ ಯಾವುದೇ ಬ್ಯುಸಿನೆಸ್ ಅನ್ನೂ ಮುಂಚೂಣಿಗೆ ತರಬಲ್ಲದು.ಸುಲಭವಾಗಿ ಸಿಗುವ ಸಂಪನ್ಮೂಲವನ್ನೂ ಮಾರ್ಪಡಿಸಿ ಜನರ ಮುಂದಿಡುವ ಜಾಣ್ಮೆಯಲ್ಲಿಯೂ ಇದೆ ಬ್ಯುಸಿನೆಸ್ ನ ತಂತ್ರಗಾರಿಕೆ. 


( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ