"ನಾವೂ ಕನ್ನಡದವರೇ.. ಆದರೆ, ಮಗುವಿಗೆ ಕನ್ನಡ ಬರುವುದಿಲ್ಲ. ಈಗಿನ ಕಾಲದಲ್ಲಿ ಕನ್ನಡ ಎಲ್ಲಿದೆ ಹೇಳಿ..?? ಎಲ್ಲರೂ ಇಂಗ್ಲೀಷ್ ನಲ್ಲೇ ಮಾತನಾಡುತ್ತಾ ಇರುತ್ತಾರೆ. ಅಷ್ಟೇ ಅಲ್ಲ, ಇಲ್ಲಿ ಈಗ ಕನ್ನಡಿಗರಿಂಗಿಂತಲೂ ತಮಿಳು, ತೆಲುಗು ಹಾಗೂ ಹಿಂದಿಯಲ್ಲೇ ವ್ಯವಹಾರ ಮಾಡುತ್ತಾರೆ. ಎಲ್ಲರಿಗೂ ಗೊತ್ತಿರುವ ಭಾಷೆ ಇಂಗ್ಲೀಷ್ ಅಲ್ಲವಾ.
ಕಾಲಕ್ಕೆ ತಕ್ಕ ಕೋಲ ಅಲ್ಲವಾ..?" ಎಂದ ಪಂಕಜ ಅವರಿಗೆ
"ಅವರೆಲ್ಲರೂ ತಮ್ಮ ತಮ್ಮ ಮಾತೃಭಾಷೆಗಳಲ್ಲಿ ಮಾತನಾಡುತ್ತಿರುವಾಗ ನಾವು ಮಾತ್ರ ಅವರವರಿಗೆ ಅವರವರದ್ದೇ ಭಾಷೆಯಲ್ಲೋ ಅಥವಾ ಇಂಗ್ಲೀಷ್ ನಲ್ಲೋ ಪ್ರತ್ಯುತ್ತರ ಕೊಡುತ್ತಾ ನಮ್ಮ ಭಾಷೆಯನ್ನೇ ಮರೆಯುವುದಿಲ್ಲವಾ..?? " ಎಂದಾಗ
"ನಮ್ಮ ಮಾತೃಭಾಷೆಯನ್ನು ಅವರುಗಳು ಕಲಿಯಬೇಕು. ಆಗ ಅವರೊಡನೆ ಸೂಕ್ತ ಸಂವಹನ ಸಾಧ್ಯ. ಈಗ, ನಾವು ಅವರ ಮಾತೃಭಾಷೆ ಕಲಿತು ಅದರಲ್ಲಿ ಮಾತನಾಡುತ್ತಿಲ್ಲವಾ..??" ಎಂದು ವರಸೆ ಬದಲಾಯಿಸಿದರು ಅವರು.
"ಅವರು ನಮ್ಮ ಭಾಷೆಯನ್ನು ಕಲಿಯಬೇಕೆಂದರೆ ಮೊದಲು ನಾವು ನಮ್ಮ ಭಾಷೆಯ ಕುರಿತು ಅಭಿಮಾನ ಬೆಳೆಸಿಕೊಳ್ಳಬೇಕು. ಆಗ, ಅವರೂ ನಮ್ಮ ಭಾಷೆ ಕಲಿಯಲು ಆಸಕ್ತರಾಗುತ್ತಾರೆ.
ಎಲ್ಲದಕ್ಕೂ ಮೊದಲು ನಾವು ಸರಿಯಾಗಿ ನಮ್ಮ ಭಾಷೆಯ ಕುರಿತು ಜ್ಞಾನ ಬೆಳೆಸಿಕೊಳ್ಳಬೇಕು. ನಮ್ಮ ಮಕ್ಕಳಿಗೂ ಅದನ್ನು ಆದರಿಸಲು, ಬಳಸಲು, ಪ್ರೇಮಿಸಲು ತಿಳಿ ಹೇಳಬೇಕು. ನಮ್ಮನ್ನೇ ನೋಡಿ ಮಕ್ಕಳು ಕಲಿಯುವುದು. ಅಲ್ಲವಾ..?! "
"ಒಮ್ಮೆ ಒಬ್ಬ ಖ್ಯಾತ ಕವಿಗೆ ಯಾರೋ ಹೇಳಿದರಂತೆ.
ನೀವು ತುಂಬಾ ಚೆನ್ನಾಗಿ ಬರೆಯುತ್ತೀರಿ ಎಂದರಂತೆ..
ಆಗ, ಅದಕ್ಕೆ ಅವರು ನಾನು ಬರೆಯುವುದು ಸೊಗಸಲ್ಲ ತಮ್ಮ, ಬರೆಯುವುದಕ್ಕೆ ಕನ್ನಡ ಭಾಷೆಯೇ ಅಷ್ಟು ಸೊಗಸಾಗೈತಿ ಎಂದರಂತೆ.
ಭಾಷೆಯ ಬಗ್ಗೆ ಅಷ್ಟು ಅಭಿಮಾನ ಇಟ್ಟುಕೊಂಡಿದ್ದ ಆ ಕವಿಯೇ ದ.ರಾ. ಬೇಂದ್ರೆ. "
ಭಾಷೆಯ ಬಗ್ಗೆ ಹೊಗಳುತ್ತಾ ಇಷ್ಟೆಲ್ಲಾ ಮಾತನಾಡುತ್ತಿರುವಾಗ ಪಂಕಜ ಅವರಿಗೂ ಆಸಕ್ತಿ ಬಂದಿತ್ತು. " ಅದೆಲ್ಲಾ ಸರಿ, ಈಗ ಮಕ್ಕಳಿಗೆ ಭಾಷೆಯ ಕುರಿತು ಕಲಿಸುವುದು ಹೇಗೆ..?? ಕಷ್ಟವಾಗುವುದಿಲ್ಲವಾ..? " ಎಂದಾಗ
" ಮಕ್ಕಳಿಗೆ ಹೇಳಿದ್ದನ್ನು ಗ್ರಹಿಸುವ ಶಕ್ತಿ ಹೆಚ್ಚಾಗಿಯೇ ಇರುತ್ತದೆ. ಅವರಿಗೆ ಅಷ್ಟೇನೂ ಕಷ್ಟವಾಗುವುದಿಲ್ಲ. ನಿಮಗೆ ಒಂದು ಘಟನೆ ಹೇಳುತ್ತೇನೆ ಕೇಳಿ. ಇತಿಹಾಸದ ಆ ದೊಡ್ಡ ಘಟನೆಯನ್ನು ಪುಟ್ಟದಾಗಿ ಹೇಳುತ್ತೇನೆ. ಆಗಲಾದರೂ ನಿಮಗೆ ಮಾತೃಭಾಷೆಯ, ದೇಶ ಭಕ್ತಿಯ ಕುರಿತು ಕೊಂಚವಾದರೂ ಅರಿವು ಬರುತ್ತದೇನೋ ನೋಡೋಣ.
ಇಸ್ರೇಲ್ ಎಂಬ ಪುಟ್ಟ ದೇಶ ಇನ್ನೂ ಉಗಮವಾಗಿರಲಿಲ್ಲ. ಎರಡನೇ ಮಹಾಯುದ್ಧದ ನಂತರ, ಹಿಟ್ಲರ್ ನ ರಣ ಮಾರಣಹೋಮದ ನಂತರ ಯಹೂದಿಗಳು ಎಲ್ಲೆಲ್ಲೋ ಹರಿದು ಹಂಚಿ ಹೋಗಿದ್ದರಂತೆ. ಆಗ ವಿಶ್ವ ಸಂಸ್ಥೆಯ ಮಧ್ಯಸ್ಥಿಕೆಯಿಂದ ಮತ್ತೆ ಇಸ್ರೇಲ್ ಎಂಬ ದೇಶ ಜನ್ಮ ತಳೆಯಿತು. ಆಗ, ಇಡೀ ದೇಶದಲ್ಲಿ ಅವರ ಭಾಷೆ ಹಿಬ್ರೂವನ್ನು ಮಾತನಾಡುವವರು ಇದ್ದದ್ದೇ 4 ಜನ. ಅದರಲ್ಲಿ ಪೂರ್ಣ ಸರಿಯಾಗಿ ಗೊತ್ತಿದ್ದದ್ದೇ ಇಬ್ಬರಿಗೆ. ಆದರೆ ಈಗ ಆ ಹಿಬ್ರೂ ಭಾಷೆ ಜಗತ್ತಿನ ಅತಿ ಹೆಚ್ಚು ಮಾತನಾಡುವ ಭಾಷೆಗಳಲ್ಲಿ ಒಂದು.
ಅದನ್ನು ಕಲಿಸುವವರು ಅವರೊಳಗೇ ಒಂದು ಒಪ್ಪಂದ ಮಾಡಿಕೊಂಡಿದ್ದರಂತೆ. ಅವರು ಸಂವಹನ ಮಾಡುವಾಗ ಅವರೊಡನೆ ಬಳಸುವ ಭಾಷೆ ಹಿಬ್ರೂವೇ ಆಗಿರಬೇಕಿತ್ತಂತೆ. ಅವರ ಮಾತೃಭಾಷಾ ಪ್ರೇಮ ಹಾಗೂ ದೇಶ ಪ್ರೇಮ ನಮ್ಮೆಲ್ಲರಿಗೂ ಮಾದರಿಯಾಗಿದೆ.
ನಮ್ಮಲ್ಲಿಯೂ ಇದೇ ರೀತಿ ಮಾಡಿದಲ್ಲಿ.. ಮನೆಯಲ್ಲಿ ದಿನಾ ಮಾತನಾಡುವಾಗ ಕನ್ನಡ ಬಳಸಬಹುದು. ಮನೆಯಲ್ಲಿ ಹಾಡು ಹಾಡುವಾಗ ಇಲ್ಲವೇ ಹಾಡು ಹಾಕುವಾಗ ಕನ್ನಡ ಹಾಡನ್ನೇ ಹಾಕಿದಲ್ಲಿ, ಮಕ್ಕಳ ಜೊತೆ ಸಂವಹನ ನಡೆಸುವಾಗ, ಟಿ.ವಿ ಹಾಕುವಾಗ ಕನ್ನಡ ಬಳಸಬಹುದು. ಕನ್ನಡದ ಒಳ್ಳೊಳ್ಳೆ ಪುಸ್ತಕಗಳನ್ನು ಕೊಡಿಸಿ ಅವರ ಜ್ಞಾನ ಹೆಚ್ಚಿಸಬಹುದು.
ಇದರರ್ಥ ಬೇರೆ ಭಾಷೆಗಳನ್ನು ಕಡೆಗಣಿಸಬೇಕು ಅಥವಾ ಕಡೆಗಣಿಸಿ ಕನ್ನಡ ಒಂದನ್ನೇ ಕಲಿಸಿ ಎಂದಲ್ಲ. ಬದಲಿಗೆ, ಎಲ್ಲಾ ಭಾಷೆಗಳನ್ನೂ ಕಲಿಸಿ. ಆದರೆ, ಕನ್ನಡ ಕಲಿಸುವಿಕೆಗೆ ಹೆಚ್ಚು ಒತ್ತು ನೀಡಿ ಎಂದಷ್ಟೇ.
ಮಾತೃಭಾಷೆ ಅದರಲ್ಲೂ ನಮ್ಮ ಕನ್ನಡ ಎಲ್ಲಕ್ಕಿಂತಲೂ ಮಿಗಿಲು" ಎಂದಾಗ ಪಂಕಜ ಅವರ ಕಣ್ಣಿನಲ್ಲಿ ಬದಲಾವಣೆಯ ಬೆಳಕು ಕಂಡಿತ್ತು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ