ಬದುಕಿನಲ್ಲಿ ಏಳು-ಬೀಳು, ಸೋಲು-ಗೆಲುವುಗಳು ಮನುಷ್ಯನ ಆತ್ಮವಿಶ್ವಾಸ ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಬೇಕು. ದುರಂತವೆಂದರೆ, ಕೆಲವೊಮ್ಮೆ ಸೋಲುಗಳಿಂದ ಕುಗ್ಗಿ ಪ್ರಯತ್ನವನ್ನೇ ಮಾಡದೆ ಮೂಲೆ ಸೇರುವವರು ಹಲವರಿದ್ದರೆ, ಸಣ್ಣಪುಟ್ಟದ್ದಕ್ಕೂ ಆತ್ಮಹತ್ಯೆ ಮಾಡಿಕೊಳ್ಳುವವರು ಕೆಲವರು. ಸೋಲನ್ನೇ ತಮ್ಮ ಮೆಟ್ಟಿಲನ್ನಾಗಿಸಿಕೊಂಡು ಬದುಕಿನಲ್ಲಿ ಮೇಲೇರುವವರು ಇನ್ನು ಹಲವಾರು. ಹೀಗೆ ದೈಹಿಕ ನ್ಯೂನತೆಗಳಿದ್ದರೂ ಲೆಕ್ಕಿಸದೆ ಅದನ್ನೆಲ್ಲಾ ಮೆಟ್ಟಿ ನಿಂತು ಮುಂದೆ ಸಾಗುವವರು ಸ್ಪೂರ್ತಿಯಾಗುತ್ತಾರೆ.
ಇತ್ತೀಚೆಗೆ ಓದಿದ ಕೌಶಿಕ್ ಕೂಡುರಸ್ತೆ ಅವರ 'ಇಂತಿ ನಿಮ್ಮ ಆತ್ಮೀಯ' ಕೂಡ ಸೋತು ಗೆದ್ದವರ ಬದುಕಿನ ಕಥೆಯೇ..
ಗೆಳೆಯರೊಡನೆ ಬರುತ್ತಿದ್ದ ಸುನೀತಾ ತನ್ನದಲ್ಲದ ತಪ್ಪಿಗೆ ಬಲಿಯಾಗಿ ತನ್ನ ಮುಖವನ್ನು ವಿರೂಪಗೊಳಿಸಿಕೊಂಡಿದ್ದಳು. ಆಕೆ ಕೆಲಸ ಮಾಡುತ್ತಿದ್ದದ್ದು ಬೆಂಗಳೂರಿನಲ್ಲಾದರೂ ಮೂಲತಃ ಕೇರಳದವರು. ಅಷ್ಟರಲ್ಲಾಗಲೇ ಬದುಕು ಮೇಲಿಂದ ಮೇಲೆ ಸೋಲಿನ ರುಚಿಯನ್ನೇ ಉಣಿಸಿತ್ತು. ಇದು ಆಕೆ ಕಂಡ ಬದುಕಿನ ದೊಡ್ಡ ದುರಂತವೆಂದರೂ ತಪ್ಪಾಗಲಾರದು. ಆದರೆ, ಆಕೆಯನ್ನು ಮತ್ತೆ ಜೀವನ ಪ್ರೀತಿಯತ್ತ ಮುಖ ಮಾಡಿಸಿದ್ದು ಜಯಪ್ರಕಾಶ್ ಅವರ ಪ್ರೇಮ. ಗೆಳೆಯನೇ ಆಗಿದ್ದ ಜಯಪ್ರಕಾಶ್ ಆಕೆಯನ್ನು ಮದುವೆಯಾಗಿದ್ದು ಆಕೆಯ ಮೇಲಿನ ಅನುಕಂಪದಿಂದಲ್ಲ.. ಬದಲಾಗಿ ಪ್ರೀತಿಗೆ.
ಮುಖವೇ ಇಲ್ಲದೆ ವಿರೂಪವಾಗಿದ್ದ ತನ್ನ ಮುಖ, ಕಿವಿ ಎಲ್ಲವನ್ನೂ ತಕ್ಕ ಮಟ್ಟಿಗೆ ಸರಿಪಡಿಸಿಕೊಳ್ಳಲು ಮೇಲಿಂದ ಮೇಲೆ 27 ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಾರೆ. ಅದೇನೂ ಸುಲಭದ ಶಸ್ತ್ರಚಿಕಿತ್ಸೆಗಳಲ್ಲ. ಒಂದು ಇಂಜೆಕ್ಷನ್ ಗೆ ಹೆದರುವ ನಾವು, ಅಷ್ಟು ಶಸ್ತ್ರಚಿಕಿತ್ಸೆಗಳು ಎಂದಾಗ ಎಷ್ಟು ಕಷ್ಟವೆಂಬುದನ್ನು ಊಹಿಸಿಕೊಳ್ಳಬೇಕು. ಅಷ್ಟು ದೃಢವಾಗಿ ನಿಂತದ್ದು ಬದುಕಿನಲ್ಲಿ ಸಿಕ್ಕ ಆತ್ಮೀಯ ಹಾಗೂ ನಿಷ್ಕಲ್ಮಶ ಪ್ರೀತಿಯ ಕಾರಣಕ್ಕೆ. ಆಕೆ ಬರಹಗಾತಿಯೂ ಹೌದು. ಈಗ ಮಕ್ಕಳಾದ ಆತ್ಮೀಯ ಹಾಗೂ ಆತ್ಮಿಯ ಜೊತೆಗೆ ಚೆಂದದ ಬದುಕು ನಡೆಸುತ್ತಿದ್ದಾರೆ.
ಕುಡುಕು, ತಂದೆ ಅಜ್ಜಿಯೊಡನೆ ಕಳೆದ ಬಾಲ್ಯ, ಸರಿಯಾದ ಓದಿಗೆ ಅವಕಾಶವಿಲ್ಲದ ಮನೆಯಲ್ಲಿ ತಮ್ಮ ಛಲದಿಂದಲೇ ಬದುಕಿ ಬಂದವರು. ಬರೋಬ್ಬರಿ ಮೂರು ಪ್ರೀತಿಗಳನ್ನು ಕಳೆದುಕೊಂಡು ನಿಜವಾದ ಪ್ರೀತಿಯನ್ನು ಪಡೆದುಕೊಂಡು ಈಗ ಸಹಜ ಬದುಕಿನತ್ತ ಮುಖ ಮಾಡಿದ್ದಾರೆ. ಚಂದದ ಬದುಕಿನಲ್ಲಿ ಎದುರಾದ ಅವಘಡವನ್ನು ಎದುರಿಸಿ ನಿಂತ ಗೆಲುವು ಇವರದ್ದು.
ಹೀಗೆ ಸಹಜ ಬದುಕು ಪರೀಕ್ಷೆಯನ್ನು ನೀಡಿದಾಗಲೆಲ್ಲಾ ಮತ್ತೆ ಸುಧಾರಿಸಿಕೊಂಡು ಬಂದು ನಿಂತವರಲ್ಲಿ ನನಗೆ ಮೊದಲಿಗೆ ನೆನಪಾಗುವುದು ಸುಧಾ ಚಂದ್ರನ್. ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ್ತಿಯಾದ ಈಕೆ ಅಪಘಾತವೊಂದರಲ್ಲಿ ಕಾಲನ್ನು ಕಳೆದುಕೊಂಡು ಕೃತಕ ಕಾಲನ್ನು ಅಳವಡಿಸಿಕೊಂಡಾಗ ನಡೆಯುವುದೇ ಕಷ್ಟವಿತ್ತು. ಅಂತಹದ್ದರಲ್ಲಿ ಅಂತಹಾ ಕಾಲನ್ನು ಹೊತ್ತು ಮತ್ತೆ ಭರತನಾಟ್ಯದತ್ತ ಮುಖ ಮಾಡಿದರು ಹಾಗೂ ಅಂತಹವರಿಗೆ ಮಾದರಿಯಾದವರು. ಇದು ನಮಗೆ ಶಾಲಾ ಪಠ್ಯಪುಸ್ತಕದಲ್ಲಿಯೂ ಇದ್ದ ಸ್ಫೂರ್ತಿ ತುಂಬುವ ಪ್ರಸಂಗ.
1977 ರಲ್ಲಿ ಕೆನಡಾದ ಟೆರ್ರಿ ಫಾಕ್ಸ್ ಗೆ 20 ವರ್ಷವಿದ್ದಾಗಲೇ ಕ್ಯಾನ್ಸರ್. ಬಾಸ್ಕೆಟ್ ಬಾಲ್, ಹಾಕಿ ಹಾಗೂ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದರು. ಆಗ ಕ್ಯಾನ್ಸರ್ ಚಿಕಿತ್ಸೆ ಫಲಕಾರಿಯಾಗದೆ ಬಲಗಾಲನ್ನು ಕತ್ತರಿಸಿ ತೆಗೆಯಬೇಕಾಗಿ ಬರುತ್ತದೆ. ಆ ಸಂದರ್ಭದಲ್ಲಿ ಅವರು ಅಮೆರಿಕದಲ್ಲಿ ಅಪಘಾತದಲ್ಲಿ ಕಾಲನ್ನು ಕಳೆದುಕೊಂಡಿದ್ದ ಒಬ್ಬರು ಮ್ಯಾರಥಾನ್ ಸ್ಪರ್ಧೆಯಲ್ಲಿ ಓಡಿದ ಸುದ್ದಿಯನ್ನು ಓದಿ ತಾವು ಮತ್ತೆ ಕೃತಕ ಕಾಲನ್ನು ಅಳವಡಿಸಿಕೊಂಡು ಓಡಬಹುದೆಂದುಕೊಂಡರು. ಆದರೆ, ಅದಷ್ಟು ಸುಲಭವಿರಲಿಲ್ಲ. ಸತತ ಪ್ರಯತ್ನ ಮಾಡಿ ಕೇವಲ ನಡೆಯುವುದಲ್ಲ, ಓಡಲಾರಂಭಿಸಿದರು.
ಸೋಲಿನಿಂದ ಗೆಲುವಿನ ಹಾದಿಯತ್ತ ಹೆಜ್ಜೆ ಹಾಕಿದರಾದರೂ ಬದುಕು ಸಾವಿನಿಂದ ಆವರಿಸಿತು. ಆದರೆ, ಜನರ ನೆನಪಿನಿಂದ ಈಗಲೂ ಅವರು ಜೀವಂತವಿದ್ದು ಸ್ಪೂರ್ತಿದಾಯಕವಾಗಿದ್ದಾರೆ. ಇವರ ಕುರಿತಾದ ಪುಸ್ತಕ ಹಾಗೂ ಸಿನಿಮಾಗಳು ಸಹಾ ಬಂದಿವೆ.
ಫೋರ್ ಸೀಸನ್ಸ್ ಹೋಟಲ್ ಸಮೂಹ ಪ್ರತಿವರ್ಷ ಟೆರಿ ಫಾಕ್ಸ್ ಸ್ಮರಣಾರ್ಥ ಮ್ಯಾರಥಾನ್ ಸ್ಪರ್ಧೆಗಳನ್ನು ಪ್ರಾಯೋಜಿಸಿ ಇದುವರೆಗೆ 36 ಕೋಟಿ ಡಾಲರ್ ಗಳನ್ನು ಕ್ಯಾನ್ಸರ್ ನಿಧಿಗೆ ಕೊಟ್ಟಿದೆ.
ಒಬ್ಬರಿಂದ ಮತ್ತೊಬ್ಬರು ಸ್ಪೂರ್ತಿ ಹೊಂದಿ ಸಾಗುತ್ತಾರೆ ಎನ್ನುವುದಕ್ಕೆ ಜೀವಂತ ಉದಾಹರಣೆ ನಡೆದದ್ದು 1985ರಲ್ಲಿ. ಸ್ಟೀವ್ ಫಾನ್ಯೋ ಎಂಬ 18ರ ಯುವಕ ಮತ್ತೊಮ್ಮೆ ಓಟ ನಡೆಸಿ ಒಂದೂವರೆ ಕೋಟಿ ಡಾಲರನ್ನು ಫಾಕ್ಸ್ ನಿಧಿಗೆ ಸಂಗ್ರಹಿಸಿಕೊಟ್ಟ. ಆದರೆ, ಆತ ಅಪಘಾತವೊಂದರಲ್ಲಿ ಕಾಲು ಕಳೆದುಕೊಂಡ ನಂತರ ಕೃತಕ ಕಾಲಿನ ಸಹಾಯದಿಂದ ಓಡಿದ್ದು.
1987ರಲ್ಲಿ ಫಾಕ್ಸ್ ರಿಂದ ಸ್ಪೂರ್ತಿಗೊಂಡ ರಿಕ್ ಹ್ಯಾನ್ಸನ್ ಪಾರ್ಶ್ವವಾಯು ಪೀಡಿತನಾದರೂ.. ಗಾಲಿಕುರ್ಚಿಯಲ್ಲಿ ಕುಳಿತು 26 ತಿಂಗಳಲ್ಲಿ 34 ದೇಶಗಳಲ್ಲಿ ಸುತ್ತಾಡಿ ಎರಡೂವರೆ ಕೋಟಿ ಡಾಲರ್ ಸಂಗ್ರಹಿಸಿಕೊಟ್ಟಿದ್ದಾರೆ. ರಿಕ್ ಹ್ಯಾನ್ಸನ್ ಹೆಸರಿನಲ್ಲಿಯೇ ಫೌಂಡೇಶನ್ ಕೂಡಾ ಇದೆ.
ನಮ್ಮ ದೇಶದಲ್ಲಿಯೂ ಇಂತಹಾ ಹಲವಾರು ಸ್ಪೂರ್ತಿದಾಯಕ ವ್ಯಕ್ತಿಗಳಿದ್ದಾರೆ. ಹೆಜ್ಜೆಹೆಜ್ಜೆಗೂ ಬರುವ ಅಡೆತಡೆಗಳನ್ನು ಮೀರಿ ನಿಲ್ಲುತ್ತಾರೆ. ಉತ್ತಮ ಉದಾಹರಣೆ ಎಂದರೆ ಪ್ಯಾರಾಲಂಪಿಕ್ಸ್ ಕ್ರೀಡೆಗಳು. ನಾನೀಗ ಮಾಲತಿ ಹೊಳ್ಳ ಅವರ ಕುರಿತು ಹೇಳುತ್ತಿರುವೆ. ಇವರು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ 300ಕ್ಕೂ ಹೆಚ್ಚು ಬಹುಮಾನಗಳನ್ನು ಗೆದ್ದಿದ್ದಾರೆ. ವೀಲ್ ಚೇರ್ ನಲ್ಲಿ ತಿರುಗುವ ಅಂಗವಿಕಲೆಯಂತೆ ಕಾಣುವ ಹೆಣ್ಣುಮಗಳ ಸಾಧನೆ ಇದು.
1958ರಲ್ಲಿ ಉಡುಪಿಗೆ ಸಮೀಪದ ಪುಟ್ಟ ಹಳ್ಳಿಯಲ್ಲಿ ಹುಟ್ಟಿದ ಇವರು 14 ತಿಂಗಳಿದ್ದಾಗಲೇ ಪೋಲಿಯೋ ಜ್ವರಕ್ಕೆ ಬಲಿಯಾಗಿ ತಮ್ಮ ಕಾಲು ಕಳೆದುಕೊಂಡಿದ್ದರು. ಆದರೆ, ಓಡಲು ಕಾಲುಗಳು ಹಾಗೂ ಹಾರಲು ರೆಖೆಗಳು ಬೇಕು ಎಂಬುದನ್ನು ಅರಿತು ನಡೆದ ಸಾಧಕಿ. ತಮ್ಮ ಆತ್ಮ ಚರಿತ್ರೆ 'ಎ ಡಿಫರೆಂಟ್ ಸ್ಪಿರಿಟ್'ನಲ್ಲಿಯೂ ತಮ್ಮ ಜೀವನಗಾಥೆಯನ್ನು ತೆರೆದಿಟ್ಟಿದ್ದಾರೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಚಿಕಿತ್ಸೆಯಿಂದ ಸ್ವಲ್ಪ ಚೇತರಿಸಿಕೊಂಡ ಇವರು ಚೆನ್ನೈನಲ್ಲಿರುವ ಈಶ್ವರಿ ಪ್ರಸಾದ ದತ್ತಾತ್ರೇಯ ಆರ್ಥೋಪೆಡಿಕ್ ಸೆಂಟರ್ ಸೇರಿಸುತ್ತಾರೆ. ಚೆನ್ನೈನಲ್ಲಿನ ಅವರ ಹಾಸ್ಟೆಲ್ ನಲ್ಲಿ ವಿಪರೀತ ಶಿಸ್ತಿತ್ತು. ಇವರಂತೆಯೇ 150 ಮಕ್ಕಳಿದ್ದರೂ.. ಅಲ್ಲಿನ ಆಟೋಟ ಸ್ಪರ್ಧೆ ಅಥವಾ ಮನೋರಂಜನಾ ಸ್ಪರ್ಧೆಯಲ್ಲಿ ಗೆಲ್ಲುತ್ತಾ ಸಾಗುತ್ತಿದ್ದಂತೆ ಆತ್ಮವಿಶ್ವಾಸ ಮೂಡಿಸಿಕೊಂಡವರಿಗೆ ಮುಂದೆ ತಂದೆಯೂ ಬೆನ್ನೆಲುಬಾಗಿ ನಿಂತರು.
1979ರಲ್ಲಿ ಕೇಂದ್ರ ಸರ್ಕಾರದಿಂದ ಬಂದ ನಿಯಮದಂತೆ ಅಂಗವಿಕಲರನ್ನು ಅರ್ಜುನ ಪ್ರಶಸ್ತಿಗೆ ಪರಿಗಣಿಸುವ ಅಗತ್ಯವಿಲ್ಲ ಎಂದಿತ್ತು. ಆದರೆ, ಆಟವೊಂದರಲ್ಲಿ ಯಶಸ್ಸು ಪಡೆಯಲು ಸಾಮಾನ್ಯ ಸ್ಪರ್ಧಿಗಳಿಗಿಂತ ಎರಡು ಪಟ್ಟು ಶ್ರಮ ಹಾಕುವವರು ಅಂಗವಿಕಲ ಕ್ರೀಡಾಪಟುಗಳು. ಇದನ್ನು ಬಹಿರಂಗವಾಗಿಯೇ ಪ್ರಶ್ನಿಸಿದ ಮಾಲತಿ ಹೊಳ್ಳರವರ ಧೈರ್ಯ ಇತರರಿಗೂ ಪ್ರಶ್ನಿಸುವ ಧೈರ್ಯ ತುಂಬಿತ್ತು. ಕೊನೆಗೂ ಕೇಂದ್ರ ಸರ್ಕಾರ ತನ್ನ ಈ ಹೊಸ ನಿಯಮವನ್ನು ಹಿಂತೆಗೆದುಕೊಂಡಿತ್ತು. ಇವರ ಒಂದೊಂದು ವಿಚಾರಗಳೂ ನಮ್ಮಲ್ಲಿ ಧೈರ್ಯ ತುಂಬುತ್ತಾ ಹುಮ್ಮಸ್ಸು ತುಂಬುತ್ತಾ ಹೋಗುತ್ತದೆ. ಅನುಭವಿಸಬೇಕಾಗಿದ್ದ ನೋವು, ಸಂಕಟಗಳನ್ನು ಮೀರಿ ನಿಂತು ಮಾದರಿಯಾಗಿದ್ದಾರೆ. ಐಡೆಂಟಿಟಿ, ತೃಪ್ತಿ, ಕೆಲಸ, ಖ್ಯಾತಿ ಎಲ್ಲವೂ ಕೊಟ್ಟ ಸಮಾಜಕ್ಕೆ ನಾನು ಪ್ರತಿಯಾಗಿ ಏನನ್ನಾದರೂ ನೀಡಬೇಕೆಂದು ಅವರು 2005ರಲ್ಲಿ ಮಾತೃ ಫೌಂಡೇಶನ್ ಅನ್ನು ಸ್ಥಾಪಿಸುತ್ತಾರೆ. ಈಗ 20ಕ್ಕೂ ಹೆಚ್ಚು ಅಂಗವಿಕಲ ಮಕ್ಕಳಿಗೆ ಆಸರೆಯಾಗಿದ್ದಾರೆ.
ಅವರು ಮಾತೃ ಫೌಂಡೇಶನ್ ನಲ್ಲಿರುವ ಮಕ್ಕಳಿಗೆ ಹೇಳುವ ಮಾತು ಇಂತಿದೆ. "ಪ್ರತಿಯೊಬ್ಬನೊಳಗೂ ಒಬ್ಬ ಹೀರೋ ಇದ್ದೇ ಇರುತ್ತಾನೆ. ನಿಮ್ಮೊಳಗೂ ಒಬ್ಬ ಹೀರೋ ಇದ್ದಾನೆ ಎಂಬುದನ್ನು ನೆನಪಲ್ಲಿಟ್ಟುಕೊಳ್ಳಿ. ನಿಮ್ಮ ತಾಕತ್ತು ಏನೆಂಬುದನ್ನು ಸಂದರ್ಭ ಬಂದಾಗ ಈ ಸಮಾಜಕ್ಕೆ ತೋರಿಸಿಕೊಡಿ."
ಸಾಧನೆಗೆ ಬರುವ ಅಡ್ಡಿ-ಆತಂಕಗಳು ನಾವು ನಿವಾರಿಸಿಕೊಳ್ಳುವಷ್ಟು ಕಾಲದಷ್ಟೂ ಮಾತ್ರವೇ ಅಲ್ಪ. ನಾವು ಅದನ್ನು ಸೋಲಿಸಿ ಹೆಜ್ಜೆ ಮುಂದಿಟ್ಟಾಗ ಮಾತ್ರವೇ ಬದುಕಲ್ಲಿ ಗೆಲ್ಲಬಲ್ಲೆವು. ನಾವು ಒಮ್ಮೆಲೇ ಗೆಲ್ಲುವುದಕ್ಕೂ.. ಸೋತು ಗೆಲ್ಲುವುದಕ್ಕೂ ವ್ಯತ್ಯಾಸವಿದೆ. ಸೋಲು ಹಾಗೂ ಕೆಟ್ಟ ದಿನಗಳು ನಮಗೆ ಗೆಲುವಿನ ಅಗತ್ಯತೆಯನ್ನು ಮತ್ತಷ್ಟು ಮನದಟ್ಟಾಗುವಂತೆ ಮಾಡುತ್ತವೆ. ಮತ್ತಾರಿಗೂ ಸ್ಪೂರ್ತಿಯಾಗಲು ಅಲ್ಲ.. ನಮಗೆ ನಾವೇ ಸ್ಪೂರ್ತಿಯಾಗಲು ಗೆಲ್ಲಬೇಕು. ಇದರಿಂದ ಇನ್ನಷ್ಟು ಜನ ಸ್ಪೂರ್ತಿಗೊಳ್ಳಬಹುದು ಅಥವಾ ನಾವೇ ಒಂದಷ್ಟು ಜನರಿಗೆ ಆಸರೆಯಾಗಬಹುದು.
ಆಕರಗಳು :
ಇಂತಿ ನಿಮ್ಮ ಆತ್ಮೀಯ - ಸುನೀತಾ-ಜಯಪ್ರಕಾಶ್
ಕ್ಷಣ ಹೊತ್ತು ಆಣಿಮುತ್ತು - ೪ - ಎಸ್. ಷಡಕ್ಷರಿ
ಗಿಫ್ಟೆಡ್ - ಸುಧಾ ಮೆನನ್ - ವಿ. ಆರ್. ಫಿರೋಸ್ (ಕನ್ನಡಕ್ಕೆ : ಎ. ಆರ್. ಮಣಿಕಾಂತ್, ಹ. ಚ. ನಟೇಶ ಬಾಬು )
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ