ಪುಸ್ತಕದ ಶೀರ್ಷಿಕೆ : ನಿಯುಕ್ತಿ ಪುರಾಣ
ಲೇಖಕರು : ನಾಗರಾಜ ವಸ್ತಾರೆ
ಪ್ರಕಾಶಕರು : ಸಾಹಿತ್ಯಲೋಕ ಪಬ್ಲಿಕೇಶನ್ಸ್
ಪ್ರಥಮ ಮುದ್ರಣ : 2024
ಪುಟಗಳು : 448
ಬೆಲೆ : 530 ರೂ.
ನಿಯುಕ್ತಿಪುರಾಣ ಸಾಹಿತ್ಯಲೋಕ ಪಬ್ಲಿಕೇಶನ್ಸ್ 100ನೇ ಕೃತಿ. ಐತಿಹಾಸಿಕ ಕಾದಂಬರಿ ಎಂಬ ಅಡಿಬರಹವಿದ್ದರೂ.. ಪುರಾಣ ಹಾಗೂ ಇತಿಹಾಸಗಳೆರಡೂ ವಿಭಿನ್ನವೇ.. ಇಲ್ಲಿ ಇತಿಹಾಸವಿದೆ, ಪುರಾಣವಿದೆ, ಜನಪದೀಯ ಕಥೆಗಳಿವೆ. ಇದೆಲ್ಲವೂ ಸಂಯುಕ್ತವಾಗಿ ರೂಪುಗೊಂಡಿರುವುದೇ "ನಿಯುಕ್ತಿ ಪುರಾಣ". ಲೇಖಕರೇ ಹೇಳಿರುವಂತೆ ಇದು ಮೊದಲ ಭಾಗವಷ್ಟೇ.. ಇದರ ನಂತರ ಪ್ರಯುಕ್ತಿ ಪುರಾಣ ಹಾಗೂ ಸಂಯುಕ್ತಿ ಪುರಾಣವೆಂಬ ಮತ್ತೆರಡು ಪುಸ್ತಕಗಳನ್ನು ತರುವ ಇರಾದೆಯಿದೆ ಎನ್ನುತ್ತಾರೆ. ಇದೇ ಕಾದಂಬರಿಯಲ್ಲಿ ರಾಯ ಪ್ರಯುಕ್ತ ಎಂಬ ವಿಚಾರ ಬರುತ್ತದೆ. ಇದು ಮುಂದಿನ ಪುಸ್ತಕಕ್ಕೆ ಕೊಡುತ್ತಿರುವ ಸುಳಿವು ಹವುದಾ..? ಮುಂದಿನ ಭಾಗಕ್ಕೂ.. ಇದಕ್ಕೂ ಕೊಂಡಿಯಾಗಬಹುದಾದ ವಿಚಾರವಂತೂ ಇದ್ದೇ ಇದೆ.
ಪುಸ್ತಕವನ್ನು ಅರ್ಪಿಸಿರುವುದು
ತನ್ನತ್ತ ನೋಡೆಂದು
ಕೂಗಿ ಕರೆಕರೆದು ಈ ಪಾಟಿ ಬರೆಸಿದ
ಶ್ರೀರಂಗಪಟ್ಟಣದ
ಬಂಗಾರದೊಡ್ಡಿ ನಾಲೆಗೆ
ಮಲೆಯೂರು ಗುರುಸ್ವಾಮಿಗಳ ಬಂಗಾರದೊಡ್ಡಿ ಕಾದಂಬರಿ ಓದಿದ್ದರೂ.. ಈ ಲೇಖಕರ ಬಂಗಾರದೊಡ್ಡಿ ನಾಲೆ ಹಾಗೂ ಅದರ ಕುರಿತ ವಿಸ್ಕೃತ ವಿಚಾರವನ್ನು ಓದಲು ನಾನಂತೂ ಕಾದಿದ್ದೇನೆ.
ಮೊದಲಿಗೆ ನಿಯುಕ್ತಿ ಎಂದರೆ ಏನೆಂದು ತಿಳಿಯುವುದಾದರೆ.. ಅದಕ್ಕೆ ವಿಭಿನ್ನ ರೀತಿಯ ಅರ್ಥೈಸುವಿಕೆ ಇದ್ದರೂ.. ಮುಖ್ಯವಾಗಿ "ಯಾವುದೇ ಹುದ್ದೆಯನ್ನು ಜವಾಬ್ದಾರಿಯುತವಾಗಿ ನಿರ್ವಹಿಸಲು ಒಬ್ಬರನ್ನೂ ಆಯ್ಕೆ ಮಾಡುವ ನೇಮಕಾತಿ ಪ್ರಕ್ರಿಯೆ" ಎನ್ನಬಹುದು. ಇದು ಮೈಸೂರಿನ ರಾಜವಂಶದ ಕಥೆ ಎಂದಾದರೂ ಇದರಲ್ಲಿ "ನಿಯುಕ್ತಿ" ಎಂಬುದು ಸಹಾ ಮುಖ್ಯವಾಗುತ್ತದೆ. ಎಲ್ಲಾ ರಾಜವಂಶದಲ್ಲಿಯೂ ವಂಶಪಾರಂಪರ್ಯವಾಗಿ ಅಧಿಕಾರ ಹಸ್ತಾಂತರವಾಗುವುದಾದರೂ.. ಆ ಅಧಿಕಾರಕ್ಕೆ ಹುದ್ದೆಗೆ ಅವರು ಸಮರ್ಥರೋ.. ಇಲ್ಲವೋ ಎಂಬುದು ಸಹಾ ಅಷ್ಟೇ ಮುಖ್ಯವಾಗುತ್ತದೆ. ಅನಿವಾರ್ಯ ಪರಿಸ್ಥಿತಿಯಲ್ಲಿ ಬೇರೆಯದ್ದೇ ಪರಿಸ್ಥಿತಿಯೂ ಎದುರಾಗಬಹುದು. ಇಲ್ಲಿ ರಾಜರಷ್ಟೇ ಮುಖ್ಯವಾಗಿ 'ಹಳೆ ಪೈಕರು' ಬರುತ್ತಾರೆ. ರಾಜನೇ ಒಂದು ರಾಜ್ಯ ಆಡಳಿತದ ಮುಖ್ಯಸ್ಥನಾದರೂ.. ಆತನಿಗೆ ತಿಳುವಳಿಕೆ ಕೊಡಲು ಆತನದ್ದೇ ಸಚಿವಾಲಯ ಹಾಗೂ ರಾಜಗುರುಗಳು, ಹಿರಿಯರು ಇದ್ದೇ ಇರುತ್ತಾರೆ. ಆದರೆ, ಇಲ್ಲಿ ಕಾಣುವ ಹಳೆ ಪೈಕರಿಗೆ ವಿಭಿನ್ನ ಹಿನ್ನೆಲೆಯಿದೆ. ಅವರಿಗೆ ಸಿಗುವ ಗೌರವದ ಜೊತೆಗೆ ದೈವೀಕ ಪ್ರೇರಣೆಯೂ ಕಾಣುತ್ತದೆ. 12 ಅಥವಾ 18 ಜನರ ಇವರ ಗುಂಪಿನಲ್ಲಿ ಮುಖ್ಯಸ್ಥರಾದ 'ಪರಿಪೂರ್ಣ'ರ ಮಾತಿನಲ್ಲಿ ಎಲ್ಲರಿಗೂ ನಂಬಿಕೆ. ಇವರ ಆಯ್ಕೆ, ಅಸ್ತಿತ್ವ ಎಲ್ಲದಕ್ಕೂ ನಿಗೂಢತೆಯ ಸ್ಪರ್ಶವನ್ನೂ ಗಮನಿಸಬಹುದು.
ಇಲ್ಲಿನ ಘಟನೆಯ ಕಾಲಘಟ್ಟ 1576 - 1617. ಇದು ಮೇಲ್ನೋಟಕ್ಕೆ ಮೈಸೂರಿನ ರಾಜವಂಶದ ಕಥೆಯಾಗಿ ಕಂಡರೂ.. ಸುತ್ತಮುತ್ತಲಿನ ಸ್ಥಳಪುರಾಣಗಳಿವೆ. ಅಲ್ಲದೆ, ಸ್ವಾತಂತ್ರ್ಯಕ್ಕೂ ಮುಂದಿನ ದಿನಗಳ ವಿದೇಶಿಯರ ಪ್ರವೇಶದ ಕಥೆಯಿದೆ. ಅಕ್ಕ-ಪಕ್ಕದ ರಾಜ್ಯಗಳ ಸಂಸ್ಕೃತಿ, ಭಾಷೆ ಹಾಗೂ ಬದುಕಿನ ರೀತಿಯೂ ಕಾಣುತ್ತದೆ. ನನಗೆ ಮೈಸೂರು ಎಂದಾಗ ಮೂರು ವಿಚಾರಗಳು ನೆನಪಾಗುತ್ತವೆ. ಅದರಲ್ಲಿ ಮೊದಲನೆಯದು ಮೈಸೂರಿನ ದಸರಾ ಉತ್ಸವ. ಅದರಲ್ಲಿಯೂ ತಾಯಿ ಚಾಮುಂಡಿಯ ಆರಾಧನೆ. ಎರಡನೆಯದ್ದು ಮನೆಮನೆಯಲ್ಲಿಯೂ ಕೂರಿಸುವ ನವರಾತ್ರಿಯ ಗೊಂಬೆಗಳು ಹಾಗೂ ಎಲ್ಲದಕ್ಕಿಂತ ಮುಖ್ಯವಾಗಿ ನೆನಪಾಗುವುದು ಮೈಸೂರು ರಾಜವಂಶದೊಡನೆ ತಳುಕು ಹಾಕಿಕೊಂಡ ತಲಕಾಡು, ಮಾಲಂಗಿ ಜೊತೆಗೆ ಅಲಮೇಲಮ್ಮನ ಶಾಪ. ಕೆ. ಎನ್ ಗಣೇಶಯ್ಯ ಅವರ ಪದ್ಮಪಾಣಿ ಕಥಾಸಂಕಲನದಲ್ಲಿ "ಮರಳು ತೆರೆಯೊಳಗೆ" ಎಂಬ ಕಥೆ ಬೇರೆಯದ್ದೇ ನೋಟವನ್ನು ಕಟ್ಟಿಕೊಟ್ಟಿತ್ತು. ಇಲ್ಲಿಯೂ ಈ ಪ್ರಸಂಗ ವಿಭಿನ್ನವಾಗಿದೆ.
ಮಾಲಿಂಗಿ ತಾಯೇ ಆಲಂಗಿಸೆನ್ನ
ನವಿಲಂತೆ ತೆರೆದು ಗರಿ ಸವರಿಸೆನ್ನ...
ಕಾವೇರಿ ಸೀಮೆಯಲ್ಲಿ ಚಾಲ್ತಿಯಲ್ಲಿರುವ ಈ ಜಾನಪದ ಹಾಡು ಸೂಚಿಸುವ ಮಾಲಿಂಗಿಯೇ ಮಾಲಂಗಿ ಹಾಗೂ ಇಲ್ಲಿ ನವಿಲು ಎಂಬ ಶಬ್ದಕ್ಕೂ ಒಂದು ವಿಭಿನ್ನ ಕೊಂಡಿಯಿದೆ. ಕಾವೇರಿಯ ಉತ್ತರ ತಟದಲ್ಲಿ ಐದು ಲಿಂಗಗಳಾಗಿ ಹೊಂದಿರುವ ಶಿವನದ್ದು ಒಂದು ಕಥೆಯಾದರೆ.. ತಲಕಾಡಿನಲ್ಲಿ ಸುರಿದ ಮರಳಿನ ಮಳೆಯದ್ದೇ ಮತ್ತೊಂದು ಕಥೆ. ತಲಕಾಡು, ಮಾಲಿಂಗಿಗಳ ಸಂಗತಿಯನ್ನು ಹೇಳುವಂತೆ ಮೈಸೂರು ಹಾಗೂ ಶ್ರೀರಂಗಪಟ್ಟಣದ ಕಥೆಯನ್ನು ಕೇವಲ ಪೌರಾಣಿಕ ಅಥವಾ ಜಾನಪದ ಮೇಲೆ ಹೇಳುವುದಿಲ್ಲ ಲೇಖಕರು. ಇತಿಹಾಸ ಎಂದರೆ ಹೀಗೆ ಇತ್ತು ಎಂಬ ಅರ್ಥ. ಇತಿಹಾಸವೂ ಜನರ ಹೇಳಿಕೆಯ ಮೇಲೆ ಹಾಗೂ ಸಂಶೋಧನೆಗಳ ಮೇಲೆಯೇ ರೂಪಿತವಾಗಿದ್ದಲ್ಲವಾ ಎಂದೆನ್ನಿಸುತ್ತದೆ.
ಬೆಂಗಳೂರಿನ ಕಥೆಯ ಕುರಿತು ಕೇಳುವಾಗ ಅಲ್ಲಿ ಕೋಟೆಯ ಬಾಗಿಲು ನಿಲ್ಲಲು ಗರ್ಭಿಣಿಯೊಬ್ಬಳ ಆತ್ಮಾರ್ಪಣೆಯಾದ ಕಥೆ ಹಾಗೂ ಕೆರೆಗೆ ಹಾರವಾದ ಭಾಗೀರಥಿಯ ಕಥೆ ಅಚಾನಕ್ಕಾಗಿ ನೆನಪಾಗುವುದು ಇಲ್ಲಿನ ರಾಯಬಲಿಯನ್ನು ಕಂಡಾಗ. ಇಲ್ಲಿನ ಕಥೆ ಬರುವುದು ಬೆಟ್ಟದ ಚವುಡಿ ಅಂದರೆ ಚಾಮುಂಡಿ, ಆಕೆಯ ತಪ್ಪಲಿನಲ್ಲಿರುವ ತಂಗಿ ಉರಿಮಸಣಿಯರ ಹಿನ್ನೆಲೆಯಲ್ಲಾದರೂ.. ಇದಕ್ಕೆ ಮಲೆಯೊಡೆಯ ಮಾದಪ್ಪನೂ ಸೇರ್ಪಡೆಯಾಗುತ್ತಾನೆ. ಈ ಕಥಾ ಹಿನ್ನೆಲೆಯನ್ನು ಓದುವಾಗ ನನಗೆ ನಿಜಕ್ಕೂ ಅಚ್ಚರಿಯೆನ್ನಿಸಿದ್ದು ಚಾಮುಂಡಿಗೂ ಸಿಕ್ಕ ಶಾಪದ ಕುರಿತು ತಿಳಿದಾಗ. ಹಾಗಾದರೆ, ಏನಿದರ ಹಿನ್ನೆಲೆ ಹಾಗೂ ಶಾಪ ಎಂಬುದನ್ನು ನೀವೇ ಓದಿ ನೋಡಿ. ಅಷ್ಟಕ್ಕೂ ರಾಯಬಲಿಯಾದವರು ಯಾರು ಎಂಬುದು ಕೂಡಾ ತಿಳಿಯುತ್ತದೆ.
ಶ್ರೀರಂಗಪಟ್ಟಣದಲ್ಲಿ ನಡೆಯುತ್ತಿದ್ದ ದಸರಾ ಹಂಪಿಯಲ್ಲಿ ನಡೆಯುತ್ತಿದ್ದರ ಮುಂದುವರಿಕೆಯೇ.. ಅಲ್ಲಿನಷ್ಟು ವೈಭೋಗ ಇಲ್ಲಿದ್ದಿದ್ದರೂ ಶಾಸ್ತ್ರ-ಸಂಪ್ರದಾಯವೆಲ್ಲವೂ ಅಲ್ಲಿಯಂತೆಯೇ. ಮುನ್ನೊಡೆಯ ಎಂದು ಕರೆಸಿಕೊಳ್ಳುವ ರಾಜ ಒಡೆಯರು ಶ್ರೀರಂಗಪಟ್ಟಣವನ್ನು ಗೆದ್ದು ತಿರುಮಲರಾಯರಿಂದ ಶ್ರೀರಂಗಪಟ್ಟಣವನ್ನು ಪಡೆದಾಗ ತಿರುಮಲರಾಯರು ತಮ್ಮ ಸಂಸಾರದೊಡನೆ ಶ್ರೀರಂಗಪಟ್ಟಣವನ್ನು ತೊರೆಯುತ್ತಾರೆ. ಈ ಸಂಧರ್ಭಕ್ಕೂ ಉತ್ಸವಕ್ಕೂ ನಂಟೊಂದಿದೆ.
ವೆಂಕಟಪತಿರಾಯರು ಮುನ್ನೊಡೆಯನೆದುರು ರತ್ನಸಿಂಹಾಸನದ ಮಹಿಮೆಯನ್ನು ಹೇಳುವಾಗ ಭುವನೇಶ್ವರಿದೇವಿಯ ಪ್ರಸಂಗ ಬರುತ್ತದೆ. ದೇವರಲ್ಲೂ ಭೇದವೇ..! ಚಾಮುಂಡಿ ಹಾಗೂ ಭುವನೇಶ್ವರಿಯರಲ್ಲಿ ಮುನ್ನೊಡೆಯ ಭೇದವೆಣಿಸದಿದ್ದರೂ.. ಇಲ್ಲಿ ಅದು ರಾಯಬಲಿಗೆ ಮುನ್ನುಡಿಯಾಗಿದ್ದೇಕೆ..
ಬೆಟ್ಟದ ಚಾಮರಾಜರಿಂದ ಶುರುವಾಗುವ ಚರಿತ್ರೆ ಮುನ್ನೊಡೆಯನಿಂದ ಮುಂದುವರಿಯುತ್ತದೆ. ಶ್ರೀಮನ್ಮಹಿಷೂರು ಸಂಸ್ಥಾನವೆಂದು ಹೆಸರು ಪಡೆಯುತ್ತದೆ. ಬೆಟ್ಟದ ಚಾಮರಾಜರು ಮೈಸೂರಿನ ಎಂಟನೇ ಒಡೆಯರು. ಮುಂದೆ ಇವರೇ ಬೆಟ್ಟಯ್ಯನಾಗುತ್ತಾರೆ. ಚಿನ್ನಾರಿ-ರನ್ನಾರಿಯರ ಜೊತೆ ಗಾಂಧರ್ವ ವಿವಾಹ ವಾಗುವ ಇವರು ಅವಳಿ ಮಕ್ಕಳ ಜನ್ಮಕ್ಕೂ ಕಾರಣರಾಗುತ್ತಾರೆ. ಮುಂದೆ ಅವರು ಮಹಿಷೂರಿನ ಚರಿತ್ರೆಯ ಹಾದಿಯನ್ನು ಬದಲಿಸುವುದು ಬೇರೆಯದ್ದೇ ಕತೆ. ಪಟ್ಟದರಸು ಗಾಂಧರ್ವ ವಿವಾಹವಾದರೂ.. ರಾಣಿಯಾಗುವವಳು ಅರಸುಕುಲದಿಂದಲೇ ಬಂದಿರಬೇಕು. ಹಾಗೆ ಪಟ್ಟದರಸಿಯಾಗಿದ್ದು ಗೌರಾಜಮ್ಮಣ್ಣಿ. ಮುಂದೆ ಬೆಟ್ಟದರಸು ಇದೆಲ್ಲದರಿಂದ ವಿಮುಖನಾದಾಗ ಪಟ್ಟಕ್ಕೆ ಬಂದದ್ದೇ ರಾಜ ಒಡೆಯ ಅಂದರೆ ಮುನ್ನೊಡೆಯ. ಬೆಟ್ಟದೊಡೆಯನಿಗೆ ವ್ಯತಿರಿಕ್ತವೆನಿಸುವಷ್ಟು ರಾಜಕೀಯದಲ್ಲಿ ತೊಡಗಿ ಮಹಿಷೂರಿನ ರಾಜ್ಯಾಡಳಿತ ಮಾಡಿ ರಾಜ್ಯ ವಿಸ್ತರಿಸುತ್ತಾನೆ.
ಮುನ್ನೊಡೆಯನಿಗೆ 7 ರಾಣಿಯರು. ಇದರಲ್ಲಿ ಹೆಚ್ಚಿನ ಪ್ರಸ್ತಾಪ ಬರುವುದು ಎಡವನಹಳ್ಳಿಯ ತಿಮ್ಮಾಜಮಣಿಯದ್ದು. ಹಾಗೆಂದು, ಈಕೆ ಪಟ್ಟದರಸಿಯೇನಲ್ಲ.. ಬದಲಾಗಿ, ಮುನ್ನೊಡೆಯನ ನಾಲ್ಕನೇ ರಾಣಿ. ಅಮ್ಮಣ್ಣಿ ಎಂಬ ಪದಕ್ಕೂ ಇಲ್ಲಿ ವಿಭಿನ್ನ ಅರ್ಥವಿದೆ. ಈಕೆಗೆ ಅಂತಪುರದಾಚೆಗಿನ ವಿದ್ಯಮಾನಗಳಲ್ಲಿ, ಅದರಲ್ಲಿಯೂ.. ರಾಜ್ಯದ ಆಡಳಿತದಲ್ಲಿ, ಅಲ್ಲಿನ ಸ್ಥಿತಿ-ಗತಿಯಲ್ಲಿ, ಎಲ್ಲವನ್ನೂ ತಿಳಿದುಕೊಂಡು ಆಲೋಚಿಸುವಲ್ಲಿ ವಿಭಿನ್ನವಾದ ಆಸಕ್ತಿ. ನೇರಾನೇರವಾಗಿ ರಾಜಕೀಯದಲ್ಲಿ ಪಾಲ್ಗೊಳ್ಳದಿದ್ದರೂ.. ಈಕೆಯ ಕೊಡುಗೆಯೂ ಮಹಿಷೂರಿನ ಮೇಲೆ ಇದ್ದೇ ಇದೆ. ಈಕೆಯ ದೃಷ್ಟಿಯಿಂದ ಯಾವುದೂ ಸುಲಭದಲ್ಲಿ ತಪ್ಪಿಸಿಕೊಳ್ಳುತ್ತಿರಲಿಲ್ಲ. ಈಕೆಗೆ 'ಕಟಾಕ್ಷಗಿತ್ತಿ' ಎಂದು ಬಿರುದಿತ್ತು. ಬೇಹಿನ ಸೂರಣ ಹಾಗೂ ರಾಣಿಯ ಸಂಭಾಷಣೆಗಳು ಮಹಿಷೂರಿನ ಹಾಗೂ ಸುತ್ತಮುತ್ತಲಿನ ವಿಚಾರವನ್ನು ನಮಗೆ ತಿಳಿಸುವುದಲ್ಲದೆ, ರಾಣಿಯ ಆಸಕ್ತಿಯನ್ನು ಜೊತೆಗೆ ಸೂರಣನಂತಹಾ ಬೇಹುಗಾರ ಕಾರ್ಯ ನಿರ್ವಹಿಸುವ ಪರಿಯನ್ನು ತಿಳಿಸುತ್ತದೆ.
ಶೆರಗಣಾಂಬು, ಸೆರಾಗಣಾಂಬು ಹಾಗೂ ತೆರಕಣಾಂಬಿ ಈ ಮೂರು ಪದಗಳು ಇನ್ನಿಲ್ಲದಷ್ಟು ಕುತೂಹಲವನ್ನು ಮೂಡಿಸುತ್ತವೆ. ತೆರಕಣಾಂಬಿಗೂ ಈ ಪದಗಳಿಗೂ ಪರಸ್ಪರ ಸಂಬಂಧವಿದೆಯಾ ಎನ್ನುವುದನ್ನು ಹುಡುಕಿ ಹೊರಟಾಗ ಸಿಗುವುದು ಶೇರುಮಾನ ಬಾಬಾ. ಕೇರಳ ಹಾಗೂ ಮಲಬಾರಿನ ತೀರದ ಕಥೆಗಳನ್ನು ಹಾಗೂ ಫಿರಂಗಿಯವರ ಕುರಿತ ವಿಚಾರಗಳನ್ನು ಶೇರಮಾನ ಬಾಬಾನಿಂದ ತಿಳಿದುಕೊಳ್ಳುವಾಗ ಸ್ವಾತಂತ್ರ್ಯಪೂರ್ವದ ದಿನಗಳ ಚಿತ್ರಣ ಕಂಡುಬರುತ್ತದೆ. ಅಲ್ಲಾಹು ಹಾಗೂ ಕರುಂಬ ಭಗವತಿಗೂ, ಜನಮಾನಸದಲ್ಲಿ ನೆಲೆಸಿದ್ದ ದೇವತೆಗಳಿಗೂ ಇರುವ ನಂಬಿಕೆಗಳು ಹಾಗೂ ವಿವಿಧ ಪ್ರಸಂಗಗಳು ಕಾಣುತ್ತವೆ. ಎಲ್ಲಿಯ ಈದುಚಂದೆ, ಎಲ್ಲಿಯ ಜೇನುದ್ದೀನನ ಮಗ ಶೇರಮಾನ ತಾಜುದ್ದೀನ ಹಾಗೂ ಎಲ್ಲಿಯ ಶೇರುಮಾನ ಬಾಬಾ..! ಕಾದಂಬರಿಯುದ್ದಕ್ಕೂ ಆವರಿಸಿಕೊಳ್ಳುವ ಶೇರುಮಾನನ ಹಿನ್ನೆಲೆಯಲ್ಲಿ ದೈವೀಕತೆ ಇದೆ. ಪವಾಡವಿದೆ ಹಾಗೂ ಶೆರಗಣಾಂಬು ಎಂದು ಆತ ಪದೇಪದೇ ಉಚ್ಛರಿಸುವ ಪದಕ್ಕೂ ಕುತೂಹಲವಿದೆ.
ರಾಜ್ಯಾಡಳಿತವನ್ನು ತೊರೆದು ಹೊರಟ ಬೆಟ್ಟದೊಡೆಯ ನೆಲೆಸಿದ್ದಾದರೂ ಎಲ್ಲಿ..? ಆತನನ್ನು ಹಿಂಬಾಲಿಸಿ ಹೊರಟ ಗೌರಮ್ಮ ಹಾಗೂ ಆತನ ಮಿಲನ ಮುಂದೆ ಯಾವ ಘಟನೆಗೆ ಕಾರಣವಾಯಿತು..? ಅವರಿಬ್ಬರ ತಾಳ್ಮೆ, ಕಠಿಣವಾದ ಬದುಕು, ದೈವ ನಿಷ್ಠೆ ಎಲ್ಲವೂ ಮತ್ತೆ ಮಹಿಷೂರಿಗೆ ಕೊಂಡಿಯಾದ ಬಗೆ ಹೇಗೆ...?
ಚನ್ನಪಟ್ಟಣದ ಗೊಂಬೆಗಳದ್ದು ಹಾಗೂ ನಕ್ಷೆಯದ್ದು ವಿಭಿನ್ನವಾದ ಚಿತ್ರಣ. ಲೋಹದ ಗುಂಡಿನ ಕುರಿತಾದ ಒಗಟು ತಿಮ್ಮಾಜಮ್ಮಣ್ಣಿಯ ದೃಷ್ಟಿಗೆ ಬಿದ್ದು ಅದು ತಿಳಿಯಿತಾದರೂ.. ಚನ್ನಪಟ್ಟಣದ ಗೊಂಬೆಗಳು ಮತ್ತೊಂದು ಕಥೆಗೆ ಮುನ್ನುಡಿಯಾಗುತ್ತವೆ. ಎಲ್ಲಿಯ ಚನ್ನಪಟ್ಟಣದ ಗೊಂಬೆಗಳು ಹಾಗೂ ಎಲ್ಲಿಯ ಪರ್ಷಿಯಾದ ಕಂಜೀಪೆಗಳು..!
ಶ್ರೀರಂಗಪಟ್ಟಣದ ತಿರುಮಲ ರಾಯರಿಗೆ ಇಬ್ಬರು ಹೆಂಡತಿಯರು ಅಲಮೇಲು ಹಾಗೂ ರಂಗನಾಯಕಿ. ಇವರಿಬ್ಬರ ತಾಯಂದಿರು ಸತಿ ಹೋಗುವಾಗ ತಮ್ಮ ಮೂಗಿನಲ್ಲಿದ್ದ ಗಿಣಿ ಹಾಗೂ ನವಿಲಿನ ಮೂಗುತಿಗಳನ್ನು ಹೆಣ್ಣುಮಕ್ಕಳಿಗೆ ಕೊಟ್ಟು ಎಂದಿಗೂ ಇವುಗಳನ್ನು ಕಳಚಬಾರದೆಂದು ಹೇಳಿದ್ದರು. ಆದರೆ ಮೂಗುತಿ ಸೇವೆಗಾಗಿ ಅದನ್ನು ರಂಗನಾಯಕಿ ಕೊಡಲು ಒಪ್ಪಿದ ಸಂದರ್ಭದಲ್ಲಿ ನಡೆದ ಘಟನೆಯೇನು..? ಈ ಮೂಗುತಿಗಳೇ ಬರೆದ ದುರಂತದ ಘಟನೆಯೇನು..?
ಇಬ್ಬರು ರಾಣಿಯರ ಮೂಗುತಿಗಳು ಒಂದೇ ರೀತಿ ಕಂಡರೂ ಅಲ್ಲೊಂದು ಸೂಕ್ಷ್ಮವಿತ್ತು. ಆ ಸೂಕ್ಷ್ಮತೆಯಾದರೂ ಏನು..? ಈ ಮೂಗುತಿಗಳ ಕುರಿತ ಪ್ರಸ್ತಾಪ, ವರ್ಣನೆ ಹಾಗೂ ಅದನ್ನು ತೊಟ್ಟವರು ಪಡೆದ ಕಲೆ, ದೈವೀಕವಾದ ಮೂಗುತಿ ಸೇವೆ ಇದೆಲ್ಲವನ್ನು ನೋಡುವಾಗ ನಮಗೆ ಪುಸ್ತಕದ ಮುಖಪುಟದಲ್ಲಿನ ಚಿತ್ರದ ಅರ್ಥ ದಕ್ಕುತ್ತದೆ. ಅಲ್ಲಿರುವ ಗಿಣಿ ಹಾಗೂ ನವಿಲಿನ ಮೂಗುತಿಗಳು ನನ್ನನ್ನು ಎಷ್ಟು ಗಾಢವಾಗಿ ಸೆಳೆಯುತ್ತವೆ. ಓದಿನ ವರ್ಣನೆಗೇ ಹೀಗೆ ಸಿಗುವಾಗ ಆ ಮೂಗುತಿಗಳು ನೋಡಿದವರ ಮನಸ್ಸಿನಲ್ಲಿ ಉಂಟು ಮಾಡಿರಬಹುದಾದ ಭಾವ ಅತಿಶಯೋಕ್ತಿಯಲ್ಲವೆಂದೆನ್ನಿಸಿತು. ಮೂಗುತಿ ಸೇವೆಗೆ ತನ್ನ ಮೂಗುತಿ ಕೊಟ್ಟದ್ದು ರಂಗನಾಯಕಿಯಾದರೂ.. ಅಲಮೇಲಮ್ಮನ ಶಾಪ ಎಂದು ಜನಪದದಲ್ಲಿ ನೆಲೆಯಾಗಿರುವ ಬಗೆಯಾದರೂ ಏಕೆ ನೀವೇ ಓದಿ ನೋಡಿ.
ಮಾಲಿಂಗಿ ಮಡುವಾಗುವ ವಿಚಾರ ಕೇಳಿರುವ ನಮಗೆ ಇಲ್ಲಿ ಮಾಲಂಗಿ ಮಡು ಎಂದೇ ಹೆಸರಿದ್ದರೂ.. ಅಲ್ಲಿ ನಡೆದ ಪವಾಡ ಮೃತ್ಯು ಕೂಪವಾಗದ ಮಾಲಂಗಿಯ ವೈಶಿಷ್ಟ್ಯವನ್ನು ಸಾರುತ್ತದೆ. ಆ ಪವಾಡ ಹಾಗೂ ವೈಶಿಷ್ಟ್ಯವನ್ನು ನೀವೇ ಓದಿ.
ತಿರುಮಲರಾಯರು ಹಾಗೂ ಅವರ ಇಬ್ಬರು ಪತ್ನಿಯರ ಕೊನೆಯ ಕ್ಷಣಗಳ ಭೀಕರ ಚಿತ್ರಣವಂತೂ ತಲ್ಲಣಿಸುವಂತೆ ಮಾಡುತ್ತದೆ. ಅದಕ್ಕೆ ಕಾರಣವಾಗಿದ್ದು ಬೆಟ್ಟದೊಡೆಯನ ಅವಳಿ ಮಕ್ಕಳಲ್ಲಿ ಒಬ್ಬರು ಎಂಬುದು ದುರಂತಗಾಥೆ. ಬೆಟ್ಟದರಸು ಹಾಗೂ ವಿಕ್ರಮರಿಗೆ ನೇರಂಬಟ್ಟ ಹಾಗೂ ಸೊಟ್ಟಂಬಟ್ಟರೆಂಬ ಹೆಸರು. ಅಸಲಿಗೆ ಬೆಟ್ಟದರಸು ಹಾಗೂ ವಿಕ್ರಮ ಎಂಬುದಕ್ಕಿಂತ.. ನೇರುಗ, ಸೊಟ್ಟುಗ ಅಥವಾ ನೇರಂಬಟ್ಟ ಸೊಟ್ಟಂಬಟ್ಟರೆಂಬ ಹೆಸರುಗಳೇ ಹೆಚ್ಚು ಓದಿಸಿಕೊಳ್ಳುವುದರಿಂದ ಮನಸ್ಸಿನಲ್ಲಿ ಅವೇ ನೆಲೆ ನಿಂತಿವೆ.
ದುರಂತ ಇಷ್ಟಕ್ಕೇ ಮುಗಿಯುವುದಿಲ್ಲ. ತಿರುಮಲರಾಯರ ಸಂಸಾರ ಕೊನೆಗೊಂಡ ಸಂದರ್ಭದಲ್ಲಿ ಗಮನಿಸದ ವಿಚಾರವೊಂದು ಬಯಲಿಗೆ ಬರುವುದು ಮಾಚವ್ವನ ಸಾವಿನಿಂದ. ಮಾಚವ್ವ ಧರಿಸಿದ್ದ ಗಿಣಿ, ನವಿಲಿನ ಮೂಗುತಿಗಳಿಂದ..!
ಮಾಚವ್ವನಿಗೂ ಹಾಗೂ ಮಹಿಷೂರಿನ ರಾಜವಂಶದ ಮುನ್ನೊಡೆಯರ ಮೊದಲ ಸೊಸೆ ಹೊನ್ನಾಜಮ್ಮನಿಗೂ ಸಂಬಂಧವಿದ್ದರೂ.. ಅಷ್ಟೇ ಸಂಬಂಧ ಒಡೆಯರ ವಂಶಕ್ಕೆ ದೊರೆತ ಶಾಪಕ್ಕೂ ಇದೆ. ಅಷ್ಟಕ್ಕೂ.. ಮಾಚವ್ವನ ಹಿನ್ನೆಲೆಯೇನು ಹಾಗೂ ಆಕೆ ಶಾಪವಿತ್ತದ್ದಾದರೂ ಏಕೆ..?
ಮುನ್ನೊಡೆಯನ ಮೂವರು ಮಕ್ಕಳ ಸಾವಿನ ನಂತರ ಸಾಲು ಸಾವುಗಳು ಸಂಭವಿಸಿದವು. ಮೊಮ್ಮಗನಾದ ಚಾಮರಾಜನನ್ನು ಸಿಂಹಾಸನಕ್ಕೆ ನಿಯೋಜಿಸುವ ವಿಚಾರವಿದ್ದರೂ.. ಮುನ್ನೊಡೆಯನಿಗೆ ಅದು ಸಮಾಧಾನ ತರಲಿಲ್ಲ. ತಿಮ್ಮಾಜಮ್ಮಣಿಯ ಸೂಚನೆಯ ಮೇರೆಗೆ 'ಕಂಠೀರವ ನರಸರಾಜ'ನು ಸಿಂಹಾಸನದ ವಾರಸುದಾರನಾಗುತ್ತಾನೆ. ಕಂಠೀರವ ನರಸರಾಜರ ಸಂಬಂಧದ ಕುರಿತು ಓದಿ ತಿಳಿಯಿರಿ. ಬೆಟ್ಟದರಸು ಹಾಗೂ ವಿಕ್ರಮರಸ್ಸು ಸಂಸ್ಥಾನದ ದಳವಾಯಿ ಹಾಗೂ ದಂಡೊಡೆಯರಾದರು. ಮೇಲುಕೋಟೆಯ ವೈಯಿರಮುಡಿ ಹಾಗೂ ರಾಜಮುಡಿಯ ವಿಚಾರಗಳನ್ನು ಇಲ್ಲಿ ಕಾಣಬಹುದು.
ಮುನ್ನೊಡೆಯನ ಮುಂದಿನ ದಿನಗಳು ಹೇಗಿದ್ದವು..? ತಿಮ್ಮಾಜಮ್ಮ ದೂರ ನಿಲ್ಲಬೇಕೆಂದುಕೊಂಡರೂ ಅದು ಸಾಧ್ಯವಾಗದೆ, ಅವಳ ಬದುಕಿನಲ್ಲಿ ನಡೆದ ವಿಧಿಯ ಕೈವಾಡವೇನು ಓದಿ ನೋಡಿ.
1. ಕಥನ ಕ್ರಮ, ಘಟನೆಗಳನ್ನು ಒಂದಕ್ಕೊಂದು ಬೆಸೆದಿರುವ ಪರಿ, ಕಥೆಯೊಳಗಿನ ಕಥೆಯಂತೆ ಅಥವಾ ಒಟ್ಟಾರೆ ಚಿತ್ರಣವನ್ನು ಕುತೂಹಲದಿಂದಲೇ ಒಂದಕ್ಕೊಂದು ಬೆಸೆದಿರುವ ಪರಿ ಇಷ್ಟವಾಯಿತು. ಫಜಲ್ (Puzzle) ಅನ್ನು ಕೂಡಿಸಿದಾಗ ಒಟ್ಟಿಗೆ ಕಾಣುವ ಸುಂದರ ಚಿತ್ರಣದಂತಿದೆ.
2. ಬೃಹತ್ ಕಾದಂಬರಿಯಾದ್ದರಿಂದ ಕೊನೆಗೆ ಕೊಟ್ಟಿರುವ ಕಾಲಸೂಚಿ, ಒಡೆಯರ ಕಾಲಮಾನ, ಟಿಪ್ಪಣಿಗಳು ಹಾಗೂ ನಕ್ಷೆಗಳು ಮೆಲುಕು ಹಾಕಿಕೊಳ್ಳಲು ಬಹಳ ಸಹಾಯಕವಾಗಿದೆ.
3. ಕಾದಂಬರಿಯಲ್ಲಿ ಕುತೂಹಲದಿಂದ ಓದಿಸಿಕೊಳ್ಳುವ ಕೆಲವು ಪಾತ್ರಗಳು ಕಾಲ್ಪನಿಕವೋ, ಪೌರಾಣಿಕವೋ ಅಥವಾ ಐತಿಹಾಸಿಕವೋ ಎಂಬ ಆಲೋಚನೆಯಲ್ಲಿ ನಂಬಲು ಹಾಗೂ ನಂಬದಿರಲು ಆಗದಂತಹಾ ಸಂದರ್ಭವನ್ನು ನಿವಾರಿಸುವಂತೆ.. ಪಾತ್ರ ಕಾಲ್ಪನಿಕವೋ, ಪೌರಾಣಿಕವೋ, ಐತಿಹಾಸಿಕವೋ ಎಂಬುದನ್ನು ಕೊನೆಯಲ್ಲಿ ಸೂಚಿಸಿ ಸಂವೇಹವನ್ನು ಪರಿಹರಿಸಿದ್ದಾರೆ.
4. ರಾಜರ ಬಹುಪತ್ನಿತ್ವ ಕಂಡಂತೆಯೇ ಇಲ್ಲಿ ಸತಿ ಪದ್ಧತಿಯೂ ಕಾಣುತ್ತದೆ. ಸತಿ ಪದ್ಧತಿಗೆ ಹೊರತಾಗಿರುವ ಕೆಲವು ಸಂದರ್ಭಗಳೂ ಇವೆ. ಮಕ್ಕಳ ಕಾರಣಕ್ಕೆ ಸತಿಗೆ ಒಳಗಾಗದೆ ಉಳಿಯುತ್ತಾರೆ ಎಂಬುದು ಹೌದಾದರೂ.. ಮಾಚವ್ವನ ಸತಿಯಿಂದ ಪಾರಾದ ಪ್ರಸಂಗ ವಿಭಿನ್ನವಾದ ಕತೆ ಹೇಳುತ್ತದೆ.
5. ಕಾದಂಬರಿ ಸಂಪೂರ್ಣ ಗ್ರಂಥಸ್ಥ ಭಾಷೆಯಲ್ಲಿಲ್ಲದ್ದರಿಂದ ಓದು ನಿಧಾನಗತಿಯಲ್ಲಿ ಸಾಗುತ್ತದೆ ಎಂಬುದು ಹೌದಾದರೂ.. ಪದಗಳ ವೈಶಿಷ್ಟ್ಯತೆಯೊಂದಿಗೆ ಹಾಗೂ ಈ ರಾಣಿಯನ್ನು ಸಂಬೋಧಿಸುವ ಪರಿ, ನೀಡುವ ಗೌರವ ಹೀಗೆ ಸಣ್ಣಪುಟ್ಟ ವಿಚಾರಗಳನ್ನು ಕಟ್ಟಿಕೊಟ್ಟಿದ್ದಾರೆ. ಮೈಸೂರಿನ ಪ್ರಾಂತ್ಯದ ಕನ್ನಡದ ಪದಗಳು ಭಾಷಾ ಲಾಲಿತ್ಯದೊಂದಿಗೆ ಮಿಳಿತಗೊಂಡಿದೆ. ಉಚ್ಚಾರಣೆಗಳು ಆಡುಮಾತಿದಂತೆಯೇ ದಾಖಲಾಗಿವೆ. (ಉದಾ : ಹವುದು, ಯಾತಕು, ಯಿಸ್ಟೇಯಾ, ಯಿಲ್ಲವಲ್ಲೋ )
6. ರಾಜವಂಶಗಳಲ್ಲಿ ಗದ್ದುಗೆಗಾಗಿ ನಡೆಸುವ ಸಂಚುಗಳು ಹಾಗೂ ಕುಕೃತ್ಯಗಳು ದಾಯಾದಿಗಳಿಂದ ಮಾತ್ರವಲ್ಲದೆ.. ಪಟ್ಟದ ರಾಣಿಯವರ ಮನೆಯವರ ಕಡೆಯಿಂದ, ದಳವಾಯಿಗಳಿಂದಲೂ ರೂಪಿತವಾದ ಚಿತ್ರಣಗಳಿವೆ.
7. ಬಿರುದುಗಳಿಗೆ ಹಿನ್ನೆಲೆ ಇರುವುದು ಹೌದಾದರೂ.. ಅದಕ್ಕೆ ಬೇಕಾದ ಜ್ಞಾನ ಆಸ್ಥಾನದಲ್ಲಿ ಕಾಣದಿದ್ದಾಗ ತಿಳುವಳಿಕಯ್ಯನ ಹಾಗೂ ಬಾಲಸರಸ್ವತಿಯ ಮೂಲಕ ಕಟ್ಟಿಕೊಟ್ಟಿರುವ ಪರಿ ಅನುಭವದಿಂದ ಸಿಗುವ ಅರಿವನ್ನು ತೋರುತ್ತದೆ.
8. ಯುದ್ಧದ ಚಿತ್ರಣಗಳಲ್ಲಿ ಮುಖ್ಯವಾಗಿ ಬೇಕಾಗುವ ಪ್ಲಾನಿಂಗ್, ಅದರಲ್ಲಿಯೂ ಸುತ್ತಮುತ್ತಲಿನ ವಿಚಾರವನ್ನು ತಿಳಿದುಕೊಳ್ಳುವ ಬಗ್ಗೆ, ಬೇಹುಗಾರಿಕೆ, ಛದ್ಮನಾಮ, ಫಿರಂಗಿ, ಅಶ್ವಪಡೆ ಸುತ್ತಮುತ್ತಲಿನ ಕಂದಕ, ನದಿ ಉಳಿದ ವಿಚಾರಗಳ ಜೊತೆಗೆ ಗೋಳವೆಂಬ ಲೋಹದ ಚೆಂಡಿನ ಕುರಿತು ಪ್ರಸ್ತಾಪಿಸಿರುವ ಬಗೆ ಇಷ್ಟವಾಯಿತು.
9. ಕುಟುಂಬದ ಹಿರಿತನ, ವಿವಾಹ ಮೊದಲ ಮಗನಿಗೆ. ಉಳಿದ ಗಂಡುಮಕ್ಕಳು ವಿವಾಹವಿಲ್ಲದೆ ಎಷ್ಟಾದರೂ ಕೂಡಿಕೆ ಮಾಡಿಕೊಳ್ಳಬಹುದೆನ್ನುವ ವಿಚಾರ ಅಚ್ಚರಿ ತರಿಸಿತು. (ಒಂದು ಸಂಧರ್ಭದಲ್ಲಿ ಮಾತ್ರ ಇದರ ಉಲ್ಲೇಖವಿದೆ. ಇದು ಹಳೆಯ ಕಾಲಮಾನದ ವಿಚಾರ). ಮಾತುಳ, ಪೈತೃಕರ ವಿಚಾರವನ್ನೂ ಗಮನಿಸಬಹುದು.
10. ಸಾಮಾನ್ಯವಾಗಿ ಒಡವೆಗಳು ಒಬ್ಬರಿಂದ ಮತ್ತೊಬ್ಬರಿಗೆ ಪಾರಂಪರಿಕವಾಗಿ ದಾಟಿ ಬರುವುದು ಹೌದಾದರೂ.. ನಮ್ಮ ಕಡೆಯಲ್ಲಿ ಮೂಗುತಿ ಮಾತ್ರ ದೇಹದೊಡನೆ ಮಣ್ಣಿಗೆ ಸೇರುವ ಚಿನ್ನ, ಅದನ್ನು ಯಾರೂ ತೆಗೆಯಲಾರರು. ಆದರೆ, ಇಲ್ಲಿ ಇದಕ್ಕೆ ವ್ಯತಿರಿಕ್ತವಾದ ಸನ್ನಿವೇಶ ಕಂಡದ್ದು ತಾಯಂದಿರಿಂದ ಮೂಗುತಿ ಪಡೆದ ಅಲಮೇಲು ಹಾಗೂ ರಂಗನಾಯಕಿಯರ ವಿಚಾರದಲ್ಲಿ. ಇದು ಮೂಗುತಿಯ ವಿಚಾರಕ್ಕೆ ಬಂದ ಹಿನ್ನೆಲೆಯೋ ಅಥವಾ ಅಲ್ಲಿ ಈ ರೀತಿಯ ಆಚರಣೆ ಇರಲಿಲ್ಲವೋ ತಿಳಿಯಲಿಲ್ಲ. ಹೆಣ್ಣಿನ ಆಭರಣ, ಅದರಲ್ಲೂ ಮೂಗುತಿಯ ಮಹತ್ವ, ಪುರಾಣದಲ್ಲಿಯ ಕಥೆಯನ್ನು ಉಲ್ಲೇಖಿಸಿ ಮೂಗುತಿಗೆ ಕೊಟ್ಟಿರುವ ಮಾನ್ಯತೆ ಎಲ್ಲಕ್ಕಿಂತಲೂ ಮಿಗಿಲಾದದ್ದು.
"ಭಾಷೆ ಅನ್ನೋದು ತಾನು ತನ್ನ ಕಣ್ಣಾರೆ ನೋಡಿ ಕಂಡುಕೊಂಡಿರೋ ಜಗತ್ತನ್ನಷ್ಟೇ ತನ್ನೊಳಗೆ ಇಟ್ಟುಕೊಂಡಿವುದು. ಅಷ್ಟೇ ಕಟ್ಟಿಕೊಂಡಿರುವುದು." ಎಂಬುದನ್ನು ಪಾತ್ರವೊಂದರ ಮೂಲಕ ಹೇಳಿಸಿರುವ ಲೇಖಕರು ಭಾಷೆ, ಪದಲಾಲಿತ್ಯದ ಜೊತೆಗೆ ಕಥಾನಕವನ್ನು ಕಟ್ಟಿಕೊಟ್ಟಿರುವ ಬಗೆ, ಪವಾಡ, ದೈವಿಕತೆ, ಜಾನಪದ ಪುರಾಣ, ಇತಿಹಾಸ ಎಲ್ಲವನ್ನೂ ಮುಖ್ಯವಾಗಿಸಿ ನಾವು ಕಾಣದ ಜಗತ್ತೊಂದನ್ನು ಕಟ್ಟಿಕೊಟ್ಟಿದ್ದಾರೆ. ಈ ಜಗತ್ತಿಗೆ ಒಳ ಸೇರಿದಷ್ಟು ಸುಲಭವಲ್ಲ ಇದರಿಂದ ಹೊರಬರುವುದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ