ಬುಧವಾರ, ಏಪ್ರಿಲ್ 22, 2026

ಫ್ಲಿಫ್ ಕಾರ್ಟ್ ನಲ್ಲಿ ಮುಗಿಯಿತೇ ಬನ್ಸಾಲ್ ರ ಅಧ್ಯಾಯ..?? ( ಬ್ಯುಸಿನೆಸ್ ಡೈರಿ ಪುಟ - 20)


ಅರೆ..! ಫ್ಲಿಫ್ ಕಾರ್ಟ್ ಗೂ ಬನ್ಸಾಲ್ ಅವರಿಗೂ ಇರುವ ಸಂಬಂಧವಾದರೂ ಏನು ಎಂಬುದು ಗೊತ್ತಿದ್ದರಲ್ಲವೇ ಅವರ ಮುಗಿಯಿತೆನ್ನುವ ಅಧ್ಯಾಯದ ಚಿತ್ರಣ ದೊರೆಯುವುದು.. ನೀವು ಈ ವಾರದ ವಾರ್ತೆಯನ್ನು ಗಮನಿಸಿದ್ದೀರಾದರೆ.. ಅದರಲ್ಲಿ ಫ್ಲಿಪ್ ಕಾರ್ಟ್ ನಿಂದ ತಮ್ಮ ಉಳಿದಿದ್ದ ಎರಡು ಪರ್ಸೆಂಟ್ ಸ್ಟೇಕ್ ಅನ್ನು ಮಾರಿ ಅಲ್ಲಿಂದ ಹೊರನಡೆದ ಬಿನ್ನಿ ಬನ್ಸಾಲ್ ಎನ್ನುವ ವಾರ್ತೆಯನ್ನು ಗಮನಿಸಿರುತ್ತೀರಿ. ಇದು ಒಬ್ಬರು ಬನ್ಸಾಲ್ ರ ಕಥೆಯಾದರೆ ಮತ್ತೊಬ್ಬರು ಯಾರು ?? ಇವರಿಬ್ಬರ ಹಾಗೂ ಫ್ಲಿಪ್ ಕಾರ್ಟ್ ನ ಕುರಿತು  ತಿಳಿಯೋಣ ಬನ್ನಿ. 


ಫ್ಲಿಪ್ ಕಾರ್ಟ್ ಎಂಬ ಹೆಸರು ಈಗ ಎಲ್ಲರಿಗೂ ಚಿರಪರಿಚಿತವಾದದ್ದು. ಹಾಗೆಂದು.. ಈ ಹೆಸರಿನ ಅಂಗಡಿಯನ್ನು ಹುಡುಕಿಕೊಂಡು ಹೋಗಿ ಶಾಪಿಂಗ್ ಮಾಡುತ್ತೇನೆ ಎಂದರೆ ಖಂಡಿತವಾಗಿಯೂ ಸಾಧ್ಯವಿಲ್ಲ. ಏಕೆಂದರೆ, ಇದು ಶಾಪಿಂಗ್ ಕಟ್ಟಡವೇ ಇರದಂತಹಾ ಆನ್ಲೈನ್ ಬ್ಯುಸಿನೆಸ್ ನಡೆಸುವಂತಹ ಈ-ಕಾಮರ್ಸ್ ವೆಬ್ಸೈಟ್. ಈಗ 10-15 ವರ್ಷದ ಮುಂಚೆ "ನಾನು ಬ್ಯುಸಿನೆಸ್ ಮಾಡುತ್ತೇನೆ. ಆದರೆ, ಮಾರಾಟಕ್ಕೆ ಜಾಗವಾಗಲಿ, ಕಟ್ಟಡವಾಗಲಿ ಬೇಕಿಲ್ಲ" ಎಂದು ಯಾರಾದರೂ ಹೇಳಿದರೆ ನಕ್ಕು ಬಿಡುತ್ತಿದ್ದರೇನೋ.. ಆದರೆ, ಈಗ ಆನ್ಲೈನ್ ಬ್ಯುಸಿನೆಸ್ ಗಳ ಭರಾಟೆ ಜೋರಾಗಿದೆ. ಇಂದು ಭಾರತದ ಹಳ್ಳಿ-ಹಳ್ಳಿಗಳಿಗೂ ತಲುಪಿವೆ ಇವು. ಚಿಕ್ಕ ಮಗುವಿನಿಂದ, ವಯಸ್ಸಾದವರವರೆಗೂ ಅಮೆಜಾನ್, ಫ್ಲಿಫ್ ಕಾರ್ಟ್, ಸ್ನಾಪ್ ಡೀಲ್, ಮೀಶೋ.. ಹೀಗೆ ಮುಂತಾದ ಆನ್ಲೈನ್ ಬ್ಯುಸಿನೆಸ್ ಗಳ ಹೆಸರನ್ನು ಕೇಳದೆ ಇರುವವರೇ ಇಲ್ಲವೇನೋ.. ಹಾಗಾದರೆ, ಈ ಆನ್ಲೈನ್ ಬ್ಯುಸಿನೆಸ್ ಅಷ್ಟೊಂದು ಸುಲಭದ ಕೆಲಸವಾ..??


ಗ್ರಾಹಕರ ದೃಷ್ಟಿಯಿಂದ ನೋಡುವುದಾದರೆ ಆನ್ಲೈನ್ ವ್ಯಾಪಾರವೇ ನಮಗೆ ಕಂಫರ್ಟ್ ಎಂದು ಹೇಳುವವರು ಹೆಚ್ಚಿನ ಮಂದಿ. ಏಕೆಂದರೆ, ಇಂದಿನ ಟ್ರಾಫಿಕ್ ನಲ್ಲಿ, ಮಳೆಯಲ್ಲಿ ಅಥವಾ ತಮ್ಮ ಕೆಲಸದ ಒತ್ತಡದಲ್ಲಿ ಏನನ್ನಾದರೂ ಮರೆತಿದ್ದರೆ ಅಥವಾ ತಕ್ಷಣಕ್ಕೆ ಏನನ್ನಾದರೂ ಕೊಳ್ಳುವುದಿದ್ದರೆ ಮೊಬೈಲ್ ತೆಗೆದು ಆನ್ಲೈನ್ ನಲ್ಲಿ ಆರ್ಡರ್ ಮಾಡಿ, ಹಣ ಪಾವತಿಸಿ, ವಿಳಾಸ ನೀಡಿದರೆ ಸಾಕು. ಕೆಲವೊಮ್ಮೆ ಆರ್ಡರ್ ಮಾಡಿದ ವಸ್ತು ನಮ್ಮ ಕೈ ಸೇರಿದ ನಂತರ ಹಣ ಪಾವತಿಸಿದರೆ ಸಾಕಷ್ಟೇ.. ಕೊಂಡುಕೊಂಡ ವಸ್ತುವನ್ನು ನಾವು ಇಷ್ಟವಾಗದಿದ್ದರೂ ಇಟ್ಟುಕೊಳ್ಳಲೇಬೇಕು ಎಂದೇನಿಲ್ಲ. ಟಚ್ & ಫೀಲ್ ಮಾಡಿ ನಮಗೆ ಇಷ್ಟವಾಗದಿದ್ದರೆ ಅದನ್ನು ಹಿಂತಿರುಗಿಸುವ ಕೆಲಸವೂ ಈಗ ಬೆರಳ ತುದಿಯಲ್ಲಿಯೇ ಇದೆ. ಭಾರತದಲ್ಲಿ ಮೊದಲಿಗೆ ಕ್ಯಾಶ್ ಆನ್ ಡೆಲಿವರಿ ಹಾಗೂ ಸುಲಭದ ರಿಟರ್ನ್ ಪಾಲಿಸಿಗಳನ್ನು ಮೊತ್ತಮೊದಲಿಗೆ ಈ-ಕಾಮರ್ಸ್ ವೆಬ್ಸೈಟ್ ಮೂಲಕ ಬಳಕೆಗೆ ತಂದದ್ದೇ ಫ್ಲಿಪ್ ಕಾರ್ಟ್.


ವ್ಯಾಪಾರಿಗಳ ದೃಷ್ಟಿಯಿಂದ ಗಮನಿಸುವುದಾದರೆ.. 24/7 ಆನ್ಲೈನ್ ವ್ಯವಹಾರ ನಡೆಸುವುದನ್ನು ಸುಲಭವಲ್ಲವೇ ಅಲ್ಲ. ಅಷ್ಟಕ್ಕೂ ಬ್ಯುಸಿನೆಸ್ ಆಗುತ್ತಿರುವ ಯಾವುದಾದರೂ ಶಾಪಿಂಗ್ ಕಾಂಪ್ಲೆಕ್ಸ್ ಗಳನ್ನೋ ಅಥವಾ ಪುಟ್ಟ ಅಂಗಡಿಗಳನ್ನೋ ಗಮನಿಸಿದರೆ ವ್ಯವಹಾರ, ಪೈಪೋಟಿ, ಅಂಗಡಿಯವರ ಕಷ್ಟ ನಮಗೆ ಅರ್ಥವಾಗುತ್ತದೆ. ಅಂತಹುದರಲ್ಲಿ 24/7 ಆನ್ಲೈನ್ ಸಪೋರ್ಟ್ ನೀಡುತ್ತಾ.. ಒಂದು ಈ-ಕಾಮರ್ಸ್ ಬ್ಯುಸಿನೆಸ್ ಅನ್ನು ವಿದೇಶಿಯರಿಗೆ ಪೈಪೋಟಿ ನೀಡುವಂತೆ ರಚಿಸುವುದೆಂದರೆ ಸುಲಭದ ಮಾತಲ್ಲವೇ ಅಲ್ಲ. ಇಂತಹಾ  ಫ್ಲಿಪ್ ಕಾರ್ಟ್ ಇಂದು ಮೊಬೈಲ್ ಫೋನ್, ಮ್ಯೂಸಿಕ್, ಸಿನಿಮಾ, ಲ್ಯಾಪ್ಟಾಪ್, ಪುಸ್ತಕಗಳು, ಇ-ಬುಕ್ಸ್, ಗೃಹೋಪಯೋಗಿ, ಎಲೆಕ್ಟ್ರಾನಿಕ್ ಗೂಡ್ಸ್, ಕ್ಲಾತ್ & ಆಕ್ಸಸರೀಸ್, ಸ್ಪೋರ್ಟ್ಸ್ & ಫಿಟ್ನೆಸ್, ಬೇಬಿ ಕೇರ್, ಗೊಂಬೆಗಳು, ಆಭರಣಗಳು, ಫುಟ್ ವೇರ್ ಹೀಗೆ 80ಕ್ಕೂ ಹೆಚ್ಚಿನ ಕ್ಯಾಟಗರಿಯ 150ಮಿಲಿಯನ್ ಗೂ ಹೆಚ್ಚಿನ ಪ್ರಾಡಕ್ಟ್ ಗಳನ್ನು ಮಾರಾಟ ಮಾಡುತ್ತಿದೆ. ಆದರೆ, ಫ್ಲಿಫ್ ಕಾರ್ಟ್ ಎನ್ನುವ ಮೂಲತಃ ಆನ್ಲೈನ್ ಬ್ಯುಸಿನೆಸ್ ಶುರುವಾದದ್ದು ಕೇವಲ ಪುಸ್ತಕಗಳ ಮಾರಾಟಕ್ಕೆ ಮಾತ್ರ. 


ಫ್ಲಿಫ್ ಕಾರ್ಟ್ ಎನ್ನುವ ಐಡಿಯಾ ಬಂದದ್ದು ಮೂಲತಃ ಚಂಡೀಗಡದವರಾದ.. ಆದರೆ, ಒಬ್ಬರಿಗೊಬ್ಬರು ಸಂಬಂಧಿಕರಲ್ಲದ ಒಂದೇ ಸರ್ ನೇಮ್ ಹೊಂದಿದ್ದ ಬಿನ್ನಿ ಬನ್ಸಾಲ್ ಹಾಗೂ ಸಚಿನ್ ಬನ್ಸಾಲ್ ಎನ್ನುವವರಿಗೆ. ಸಚಿನ್ ಬನ್ಸಾಲ್ ಹುಟ್ಟಿದ್ದು 1981 ರಲ್ಲಿ. ಅವರು ಪ್ರೊಫೆಷನಲ್ ಗೇಮರ್ ಆಗಲು ತಮ್ಮದೇ ಆದ ಕನಸು ಹೊಂದಿದ್ದರು. ಅದಕ್ಕಾಗಿ ದೆಹಲಿಯ ಐ.ಐ.ಟಿಯಿಂದ ಕಂಪ್ಯೂಟರ್ ಸೈನ್ಸ್ ಇಂಜಿನಿಯರ್ ಪದವಿಯನ್ನು ಪಡೆದರು. ನಂತರ ಅವರು ಕೆಲಸಕ್ಕೆ ಸೇರಿದ್ದು ಮೊದಲಿಗೆ ಟೆಕ್ ಸ್ಪಾನ್ ಎನ್ನುವ ಕಂಪನಿಯಲ್ಲಿ. ಬೆನ್ನಿ ಬನ್ಸಾಲ್ ಹುಟ್ಟಿದ್ದು 1982ರಲ್ಲಿ. ಇವರ ತಂದೆ ಬ್ಯಾಂಕ್ ಮ್ಯಾನೇಜರ್ ಆಗಿದ್ದವರು. ತಾಯಿ ಸರ್ಕಾರಿ ಕೆಲಸದಲ್ಲಿದ್ದವರು. ಇವರೂ ದೆಹಲಿಯ ಐ.ಐ.ಟಿಯಿಂದ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ಪದವಿ ಪಡೆಯುತ್ತಾರೆ. ಒಮ್ಮೆ ಇಬ್ಬರಿಗೂ ಪ್ರಾಜೆಕ್ಟ್ ನ ಯಾವುದೋ ಹಂತದಲ್ಲಿ ಲ್ಯಾಬ್ ನಲ್ಲಿ ಒಬ್ಬರಿಗೊಬ್ಬರ ಪರಿಚಯವಾಗಿ, ಗೆಳೆತನವಾಗುತ್ತದೆ. ಬಿನ್ನಿ ಸಾರ್ನೆಫ್ ಎನ್ನುವ ಕಂಪನಿಯಲ್ಲಿ ಕೆಲಸಕ್ಕೆ ಸೇರುತ್ತಾರೆ 


2006ರಲ್ಲಿ ಮೊದಲಿಗೆ ಸಚಿನ್ ಗೆ ಅಮೆಜಾನ್ ನಲ್ಲಿ ಸೀನಿಯರ್ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ಸಿಗುತ್ತದೆ. ಅಷ್ಟರಲ್ಲಾಗಲೇ ಗೂಗಲ್ ಗೆ ಪ್ರಯತ್ನಿಸಿ ಎರಡು ಬಾರಿ ರಿಜೆಕ್ಟ್ ಆಗಿರುತ್ತಾರೆ. ಸಚಿನ್ ಅವರ ಸಲಹೆಯ ಮೇರೆಗೆ ಅವರ ಜೊತೆಯಲ್ಲಿಯೇ ಅಮೆಜಾನ್ ನಲ್ಲಿಯೇ ಕೆಲಸಕ್ಕೆ ಸೇರುತ್ತಾರೆ. ಇಬ್ಬರ ಜೋಡಿ ಪಯಣ ಶುರುವಾಗುತ್ತದೆ. ಇಬ್ಬರೂ ಅಮೆಜಾನ್ ನಲ್ಲಿ ಕೆಲಸ ಮಾಡುತ್ತಿರುವಾಗ ಅಲ್ಲಿನ ರಿಟೇಲ್ ಸೆಕ್ಟರ್ ನಲ್ಲಿ ಆಗಿ ಕೆಲಸ ಮಾಡುವ ಅವಕಾಶ ಸಿಗುತ್ತದೆ. ಇಬ್ಬರೂ ಒಂದೇ ವಿಭಾಗದಲ್ಲಿ ಕೆಲಸ ಮಾಡುತ್ತಿರುವಾಗ ಪರಸ್ಪರರ ಐಡಿಯಾಗಳು ಒಂದೇ ಎಂಬುದರ ಅರಿವಾಗುತ್ತದೆ. ಭಾರತದಲ್ಲಿ ಆಗಿನ್ನೂ ಅಮೆಜಾನ್ ಇಂಡಿಯಾ ಶುರುವಾಗಿರಲಿಲ್ಲ. ಭಾರತದಲ್ಲಿದ್ದ ಈ-ಕಾಮರ್ಸ್ ಬ್ಯುಸಿನೆಸ್ ನಲ್ಲಿ ಇರುವ ಲ್ಯಾಗ್ ಅನ್ನು ಕಂಡು ಅವರಿಬ್ಬರಿಗೂ ಒಂದು ಉತ್ತಮ ಉಪಾಯ ಹೊಳೆಯುತ್ತದೆ. ಭಾರತದ ಇ-ಕಾಮರ್ಸ್ ಇಂಡಸ್ಟ್ರಿಯನ್ನು ಬದಲಾಯಿಸಬೇಕು ಎನ್ನುವ ತೀರ್ಮಾನಕ್ಕೆ ಬರುತ್ತಾರೆ.


2007ರಲ್ಲಿ ಇಬ್ಬರು ಅಮೆಜಾನ್ ನಿಂದ ಕೆಲಸ ಬಿಟ್ಟು ತಮ್ಮದೇ ಆದ ಈ-ಕಾಮರ್ಸ್ ವೆಬ್ಸೈಟ್ ಅನ್ನು ರಚಿಸುತ್ತಾರೆ. ಭಾರತೀಯ ಗ್ರಾಹಕರಿಗೆ ಅನುಕೂಲಕರವಾಗುವಂತೆ ಪುಸ್ತಕ ಮಾರಾಟಕ್ಕಾಗಿ ಆನ್ಲೈನ್ ಬುಕ್ ಸ್ಟೋರ್ ಅನ್ನು ತೆರೆಯುತ್ತಾರೆ. ಪುಸ್ತಕದ ಪುಟ ತಿರುಗಿಸುವ ಹಾಗೂ ಅದನ್ನು ಕಾರ್ಟ್ ಗೆ ಸೇರಿಸುವ ಐಡಿಯಾದಿಂದ ಅದಕ್ಕೆ 'ಫ್ಲಿಪ್ ಕಾರ್ಟ್' ಎನ್ನುವ ಹೆಸರಿಡುತ್ತಾರೆ. ಬೆಂಗಳೂರಿನ ಕೋರಮಂಗಲದಲ್ಲಿದ್ದ ತಮ್ಮ ಅಪಾರ್ಟ್ಮೆಂಟ್ ಅನ್ನೇ ತಮ್ಮ ಕಛೇರಿನ್ನಾಗಿಸಿಕೊಂಡು 4ಲಕ್ಷ ಬಂಡವಾಳದಿಂದ ಶುರು ಮಾಡಿದ ಈ ಬ್ಯುಸಿನೆಸ್ ನಲ್ಲಿ ಅವರು ಮೊದಲ ವರ್ಷ ಗಳಿಸಿದ್ದೆಷ್ಟು ಗೊತ್ತೇ..?? ಕೇವಲ 20 ಆರ್ಡರ್ ಗಳನ್ನು ಪೂರೈಸಿದ್ದರು.


ನೋಡುವವರಿಗೆ ಇದಿಷ್ಟೇ ಎಂದು ಕಂಡರೂ.. ಅವರು ತಮ್ಮ ಪ್ರಯತ್ನವನ್ನು ಕೈಬಿಡಲಿಲ್ಲ. ಮೊದಮೊದಲಿಗೆ ಗ್ರಾಹಕರು ಮಾತ್ರವಲ್ಲ.. ವ್ಯಾಪಾರಿಗಳು ಸಹಾ ಇವರನ್ನು ನಂಬಲು ಸಿದ್ಧವಿರಲಿಲ್ಲ. ಕ್ರಮೇಣ ಗ್ರಾಹಕರಿಗೆ 24/7 ಸಪೋರ್ಟ್ ಎಂದು ಘೋಷಿಸಿ ತಮ್ಮ ಮಾತಿನಂತೆ ನಡೆದುಕೊಂಡು ಉತ್ತಮ ಸೇವೆ ನೀಡಿದಾಗ ಗ್ರಾಹಕರ ನಂಬಿಕೆ ಗಳಿಸಿಕೊಳ್ಳುತ್ತಾರೆ. ಅದಾದ ಆರು ತಿಂಗಳ ನಂತರ ಬ್ಯುಸಿನೆಸ್ ಅವರ ಕೈ ಹಿಡಿದು ಅವರನ್ನು ಲಾಭದತ್ತ ಕೊಂಡೊಯ್ಯುತ್ತದೆ. 2009ರಲ್ಲಿ ಎಕ್ಸೆಲ್ ಎಂಬ ಕಂಪೆನಿಯಿಂದ  ಒಂದು ಮಿಲಿಯನ್ ಡಾಲರ್ ಮೊದಲ ಹೂಡಿಕೆಯಾಗುತ್ತದೆ. 2009ರ ಕೊನೆಯ ಹೊತ್ತಿಗೆ ಪುಸ್ತಕ ಮಾರಾಟದಿಂದ ಅವರಿಗೆ ಬರುತ್ತಿದ್ದ ಲಾಭ 40ಮಿಲಿಯನ್. ಆ ಸಮಯದಲ್ಲಿ 150 ಉದ್ಯೋಗಿಗಳಿಗೆ ಉದ್ಯೋಗ ನೀಡಿದ ಅವರು ಮುಂಬೈ ಹಾಗೂ ದೆಹಲಿಯಲ್ಲಿಯೂ ತಮ್ಮ ಕಛೇರಿಗಳನ್ನು ತೆರೆಯುತ್ತಾರೆ.


2010ರಲ್ಲಿ ಟೈಗರ್ ಗ್ಲೋಬಲ್ 10ಮಿಲಿಯನ್ ಡಾಲರ್ ಗಳನ್ನು ಹೂಡಿಕೆ ಮಾಡುತ್ತದೆ. ಅದೇ ಸಮಯದಲ್ಲಿ ಫ್ಲಿಫ್ ಕಾರ್ಟ್ ಬೆಂಗಳೂರು ಮೂಲದ ಸೋಶಿಯಲ್ ಬುಕ್ ಡಿಸ್ಕವರಿ ಸರ್ವಿಸ್ ಆಗಿದ್ದ "ವೀ-ರೀಡ್" ಎನ್ನುವ ಕಂಪನಿಯನ್ನು ಕೊಂಡುಕೊಳ್ಳುತ್ತದೆ.  ಬ್ಯುಸಿನೆಸ್ ಇನ್ನೂ ಹೆಚ್ಚಾಗುತ್ತದೆ. ನಂತರ ಇದೇ ರೀತಿಯಾಗಿ ಅವರು ಮೊಬೈಲ್ ಗಳನ್ನೂ ಮಾರಾಟ ಮಾಡಲು ಶುರು ಮಾಡುತ್ತಾರೆ. ಆದರೆ, ಪುಸ್ತಕದ ಕಡೆ ಒಲವು ತೋರಿಸಿದಷ್ಟು.. ಮೊಬೈಲ್ ಕೊಂಡುಕೊಳ್ಳುವುದರ ಕಡೆ ಗಮನ ಹರಿಸುವುದಿಲ್ಲ. ಕಾರಣವೆಂದರೆ, ಅಷ್ಟು ಹಣ ನೀಡಿ.. ನೋಡದ ಯಾವುದೋ ಒಂದು ಪ್ರಾಡಕ್ಟ್ ಅನ್ನು ಕೊಂಡುಕೊಳ್ಳುವುದು ಅವರಿಗೆ ಸಮ್ಮತವಿರುವುದಿಲ್ಲ. ಅಲ್ಲದೆ, ಹಣವನ್ನು ಮೊದಲೇ ಪಾವತಿಸಬೇಕಾಗಿದದ್ದು ಅವರಿಗೆ ಅಪನಂಬಿಕೆ ಮೂಡಿಸಿತ್ತು. ಆಗಲೇ ಫ್ಲಿಫ್ ಕಾರ್ಟ್ ಈ-ಕಾಮರ್ಸ್ ಬ್ಯುಸಿನೆಸ್ ನಲ್ಲಿ ಹೊಸ ಹೆಜ್ಜೆ ಇಟ್ಟದ್ದು. ಪ್ರಾಡಕ್ಟ್ ಅವರ ಕೈ ಸೇರಿದ ನಂತರ ಗ್ರಾಹಕರು ಹಣ ಪಾವತಿಸಿದರೆ ಪರವಾಗಿಲ್ಲ ಎನ್ನುತ್ತಾ ಗ್ರಾಹಕರಿಗೆ ಮೊದಲೇ ಹಣ ಪಾವತಿಯಿಂದ ವಿನಾಯಿತಿ ನೀಡಿ ಕ್ಯಾಶ್-ಆನ್-ಡೆಲಿವರಿಯನ್ನು.. ಇಷ್ಟವಾಗದಿದ್ದರೆ ಅಲ್ಲದೆ ರಿಟರ್ನ್ ಮಾಡುವ ಆಯ್ಕೆಯನ್ನು ಕೂಡಾ ಕೊಟ್ಟಿತ್ತು. 


ಇದಾದ ನಂತರ ಫ್ಲಿಫ್ ಕಾರ್ಟ್ ಹಲವು ಹೊಸ-ಹೊಸ ಪ್ರಯತ್ನಗಳನ್ನು ಮಾಡಿತು. ಹೊಸ ಕಂಪನಿಗಳನ್ನು ಕೊಂಡುಕೊಂಡಿತು. ಕೆಲವು ಪ್ರಯತ್ನಗಳು ಯಶಸ್ವಿಯಾದರೆ ಇನ್ನು ಕೆಲವು ಪ್ರಯತ್ನಗಳು ವಿಫಲವಾದವು. ಅದಕ್ಕೊಂದು ಪುಟ್ಟ ಉದಾಹರಣೆ ನೀಡುವುದಾದರೆ 2012ರಲ್ಲಿ ತನ್ನದೇ ಆದ ಸ್ವಂತ ಮ್ಯೂಸಿಕ್ ಸ್ಟ್ರೀಮಿಂಗ್ ಸರ್ವಿಸ್ ಅನ್ನು ನೀಡಲು "ಫ್ಲೈಟ್" ಎನ್ನುವ ಆಯ್ಕೆ ನೀಡಿತು. ಆದರೆ ಅದು ಗ್ರಾಹಕರನ್ನು ಅಷ್ಟಾಗಿ ಸೆಳೆಯದ ಕಾರಣ, ಅದನ್ನು ಮೊಟಕುಗೊಳಿಸಲಾಯಿತು. 2014ರಲ್ಲಿ 400ಮಿಲಿಯನ್ ಡಾಲರ್ ಗಳನ್ನು ನೀಡಿ "ಮಿಂತ್ರಾ"ವನ್ನು ಕೊಂಡುಕೊಂಡಿತು  2018ರಲ್ಲಿ 70 ಮಿಲಿಯನ್ ಡಾಲರ್ ನೀಡಿ ಫ್ಯಾಶನ್ ವೆಬ್ಸೈಟ್ ಆಗಿದ್ದ "ಜಬಾಂಗ್"ನ್ನು ಕೊಂಡುಕೊಂಡಿತು. 2018ರಲ್ಲಿ ಫೋನ್-ಪೇ ಹಾಗೂ ಈ ಕಾಮರ್ಸ್ ಕಾರ್ಪೊರೇಷನ್ ಈ-ಬೇ ಯನ್ನು ಕೊಂಡುಕೊಂಡಿತು. ಹೂಡಿಕೆಗಳು ಹರಿದು ಬರುತ್ತಿದ್ದವು. ಹಲವು ಹೊಸ-ಹೊಸ ಕಂಪನಿಗಳು ಫ್ಲಿಪ್ಕಾರ್ಟ್‌ನ ಅಧಿಪತ್ಯಕ್ಕೆ ಒಳಗಾದವು.ಇದರಿಂದ ಮೌಲ್ಯ ಹಾಗೂ ಜನಪ್ರಿಯತೆ ಹೆಚ್ಚಾಗುತ್ತಾ ಹೋಯಿತು.


ಸಚಿನ್ ಬನ್ಸಾಲ್ ತಮ್ಮ ದಿಟ್ಟ ನಡೆ, ನಿರ್ಧಾರಗಳಿಂದ ಫ್ಲಿಪ್ ಕಾರ್ಟ್ ನ ಜನಪ್ರಿಯತೆ ಹಾಗೂ ಲಾಭ ಹೆಚ್ಚಿಸುವಲ್ಲಿ ಮುಖ್ಯ ಕಾರಣಕರ್ತರಾಗಿದ್ದರು. 2018ರ ವರೆಗೂ ಫ್ಲಿಪ್ ಕಾರ್ಟ್ ನ ಸಿ.ಇ.ಓ ಆಗಿದ್ದ ಅವರು 2016ರಲ್ಲಿ ಆ ಸ್ಥಾನದಿಂದ ನಿರ್ಗಮಿಸಿ ಎಕ್ಸಿಕ್ಯೂಟಿವ್ ಚೇರ್ಮನ್ ಆದರು. ತೆರವಾದ ಆ ಸಿ.ಇ.ಓ ಸ್ಥಾನಕ್ಕೆ ಬಂದದ್ದು ಬಿನ್ನಿ ಬನ್ಸಾಲ್. ಆದರೆ, 2017ರಲ್ಲಿ ಆ ಸಿ.ಇ.ಓ ಸ್ಥಾನಕ್ಕೇರಿದ್ದು ಟೈಗರ್ ಗ್ಲೋಬಲ್ ಎಕ್ಸಿಕ್ಯೂಟಿವ್ ನ ಸಿ.ಈ.ಓ ಆಗಿದ್ದ ಕಲ್ಯಾಣ್ ಕೃಷ್ಣಮೂರ್ತಿ. ಅದುವರೆಗೂ ಫ್ಲಿಫ್ ಕಾರ್ಟ್‌ಗೆ ಹೆಚ್ಚಿನಂಶ ಹೂಡಿಕೆ ಮಾಡಿದ್ದು ಎಕ್ಸೆಲ್ ಇಂಡಿಯಾ ಹಾಗೂ ಟೈಗರ್ ಗ್ಲೋಬಲ್ ಎಕ್ಸಿಕ್ಯೂಟಿವ್.


2018ರಲ್ಲಿ ಅದುವರೆಗೂ ಈ-ಕಾಮರ್ಸ್ ನಲ್ಲಿ ನಡೆದಿರದ ಒಂದು ದೊಡ್ಡ ಅಕ್ವಿಜೇಶನ್ ನಡೆಯಿತು. ವಾಲ್ ಮಾರ್ಟ್ ಎನ್ನುವ ಕಂಪನಿ 16ಬಿಲಿಯನ್ ಡಾಲರ್ ಗಳನ್ನು ನೀಡಿ ಫ್ಲಿಫ್ ಕಾರ್ಟ್ ನ 77% ಶೇರುಗಳನ್ನು ತನ್ನ ಸ್ವಾಧೀನಕ್ಕೊಳಪಡಿಸಿಕೊಂಡಿತು. ಇದಾದ ಬಳಿಕ ಸಚಿನ್ ತಮ್ಮ ಬಳಿ ಇದ್ದ 5% ಶೇರುಗಳನ್ನು ಮಾರಿ ತಮ್ಮ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡಿ, ಅಂಕಿತ್ ಅಗರ್ವಾಲ್ ಎನ್ನುವವರ ಜೊತೆಗೂಡಿ ಹೊಸದೊಂದು ಕಂಪನಿಯನ್ನು ಶುರು ಮಾಡಿದರು. ಅದೇ "ನವಿ". ಅಲ್ಲಿಗೆ ಒಬ್ಬರು ಬನ್ಸಾಲ್ ನ ನಂಟು ಫ್ಲಿಫ್ ಕಾರ್ಟ್ ನೊಡನೆ ಕಡಿದುಹೋಗಿತ್ತು. 


ಫ್ಲಿಪ್ಕಾರ್ಟ್ ನ 77% ಶೇರುಗಳು ವಾಲ್ ಮಾರ್ಟ್ ಬಳಿ ಇದ್ದರೆ ಇನ್ನೂ 23% ಬಿನ್ನಿ ಬನ್ಸಾಲ್, ಟೆನ್ಸೆಂಟ್, ಮೈಕ್ರೋಸಾಫ್ಟ್, ಎಕ್ಸೆಲ್ ಇಂಡಿಯಾ, ಟೈಗರ್ ಗ್ಲೋಬಲ್ ಬಳಿ ಹಂಚಿಹೋಗಿತ್ತು. ಈ ಯಾವ ನಡೆಗಳೂ ಫ್ಲಿಫ್ ಕಾರ್ಟ್ ನ ಮೇಲೆ ನೆಗೆಟಿವ್ ಆದ ಪರಿಣಾಮ ಬೀರಲಿಲ್ಲ. ಇದರ ಜೊತೆ ಇನ್ನಷ್ಟು ಕಂಪನಿಗಳನ್ನು ಫ್ಲಿಫ್ ಕಾರ್ಟ್ ಕೊಂಡುಕೊಂಡಿತು. ಮಾಲರ್ಸ್, ಜೀವ್ಸ್, ಮೆಕ್ ಮೋಚಾ, ಕ್ಲಿಯರ್ ಟ್ರಿಪ್, ಚೆಕ್ ಪ್ಯಾಕ್ ಮುಂತಾದವು.


ಬೆಂಗಳೂರಿನಲ್ಲಿ 90 ನಿಮಿಷದ ವೇಗದ ಡೆಲಿವರಿಗೆ "ಫ್ಲಿಫ್ ಕಾರ್ಟ್ ಕ್ವಿಕ್" ಎಂಬ ಹೆಸರಿನಲ್ಲಿ ಹೊಸದೊಂದು ವೇಗದ ಡೆಲಿವರಿ ಆಪ್ಷನ್ ನೀಡಿದ್ದರು. ತಾಜಾ ಹಣ್ಣು- ತರಕಾರಿಗಳ ಆಯ್ಕೆಗಾಗಿ "ನಿಂಜಾ ಕಾರ್ಟ್" ಎನ್ನುವ ಆಯ್ಕೆ ಬಂದಿತು. 2021 ಜುಲೈ 2ರಂದು ಫ್ಲಿಫ್ ಕಾರ್ಟ್ ತನ್ನದೇ "ಶಾಪ್ಸಿ" ಎನ್ನುವ ಆಪ್ ಅನ್ನು ಕೂಡ ಲಾಂಚ್ ಮಾಡಿತು.


ಕಲ್ಯಾಣ್ ಕೃಷ್ಣಮೂರ್ತಿ ಸಿ.ಇ.ಓ ಆದ ಬಳಿಕ ಬಿನ್ನಿ ಬನ್ಸಾಲ್ ಸಿಂಗಾಪುರದಲ್ಲಿದ್ದ ಮುಖ್ಯ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಾ ಗ್ರೂಪ್ ಸಿ.ಇ.ಓ ಆಗಿ ಬೋರ್ಡ್ ಮೆಂಬರ್ ಆಗಿದ್ದರು. ಆದರೆ, ಇತ್ತೀಚಿನ ನಡೆ ಎಂದರೆ ಅವರು ತಮ್ಮ ಬಳಿ ಉಳಿದಿದ್ದ 2% ಸ್ಟೇಕ್ ಗಳನ್ನು ವಾಲ್ಮಾರ್ಟ್ ಗೆ ಮಾರಿದ್ದಾರೆ. ಟೈಗರ್ ಗ್ಲೋಬಲ್ ಕೂಡ ತನ್ನ ಶೇರುಗಳನ್ನು ಮಾರಿಯಾಗಿದೆ. ಈಗ ಸದ್ಯಕ್ಕೆ ವಾಲ್ ಮಾರ್ಟ್ 80% ಪಾಲುದಾರಿಕೆಯನ್ನು ಹೊಂದಿದೆ. ಈಗ ಬಿನ್ನಿ ತಮಗೆ ಬಂದ ಹಣವನ್ನು ಫೋನ್-ಪೇ ಅಲ್ಲಿ ತೊಡಗಿಸಿ ಅಲ್ಲಿ ಮುಂದುವರಿಯಬಹುದು ಎಂದು ಅಂದಾಜಿಸಲಾಗಿದ್ದರೂ.. ಇನ್ನೂ ಯಾವುದೇ ಆಫೀಶಿಯಲ್ ಆದ ಸ್ಪಷ್ಟನೆ ಸಿಕ್ಕಿಲ್ಲ. 


ಸಚಿನ್ ಬನ್ಸಾಲ್ ಅಗಲಿ ಅಥವಾ ಬಿನ್ನಿ ಬನ್ಸಾಲ್ ಆಗಲಿ ತಾವು ಫ್ಲಿಫ್ ಕಾರ್ಟ್ ನಿಂದ ಹೊರ ನಡೆಸುತ್ತಿರುವ ಕುರಿತಾಗಿ ಯಾವುದೇ ರೀತಿಯ ಅಫಿಶಿಯಲ್ ಕಾರಣಗಳನ್ನು ನೀಡಿಲ್ಲ. ಫ್ಲಿಫ್ ಕಾರ್ಟ್ ಕಡೆಯಿಂದ ಕೂಡ ಅಧಿಕೃತವಾಗಿ ಇಂತಹದ್ದೇ ಕಾರಣಗಳು ಎಂದು ಸ್ಪಷ್ಟವಾಗಿಲ್ಲ. ಬ್ಯುಸಿನೆಸ್ ನಲ್ಲಿ ಕಾಲ ಹೇಗೆ ಬೇಕಾದರೂ ತಿರುವುಮುರುವಾಗಬಹುದು. 


ಬ್ಯುಸಿನೆಸ್ ನಲ್ಲಿ ಸ್ಥಾನಗಳು ಹೇಗೆ ಬೇಕಾದರೂ ಬದಲಾಗಬಹುದು ಎಂಬುದಕ್ಕೆ ಇದೇ ಸಾಕ್ಷಿ. ಸ್ಥಾಪಿಸಿದ ಸಂಸ್ಥಾಪಕರೇ ಕೊನೆಯವರೆಗೂ ಆ ಬ್ಯುಸಿನೆಸ್ ಅನ್ನು ಮುಂದುವರಿಸಿಕೊಂಡು ಹೋಗುತ್ತಾರೆ ಎನ್ನುವುದಕ್ಕೆ ಯಾವುದೇ ಗ್ಯಾರೆಂಟಿಯಿಲ್ಲ. ಇನ್ನು ಮುಂದೆ ಫ್ಲಿಪ್ ಕಾರ್ಟ್ ಹಾಗೆಯೇ ಮುಂದುವರೆಯುತ್ತದೆಯಾ ಅಥವಾ ಎಷ್ಟು ಬದಲಾವಣೆಗಳಾಗುತ್ತವೆ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ಇತ್ತೀಚಿಗೆ ಟ್ವಿಟ್ಟರ್ ಅನ್ನು ಕೊಂಡುಕೊಂಡ ಎಲಾನ್ ಮಸ್ಕ್ ಅವರ ಮಾಡಿದ ಭಾಗಶಃ ಬದಲಾವಣೆಗಳನ್ನು ಗಮನಿಸಿರುತ್ತೇವೆ. ಹಾಗೆಯೇ ಮೆಟಾ ಕೊಂಡುಕೊಂಡ ಇನ್ಸ್ಟಾಗ್ರಾಮ್ ಹಾಗೂ ವಾಟ್ಸಪ್ ಗಳು ಹಾಗೆಯೇ ಅದೇ ಹೆಸರಿನಲ್ಲಿ ಮುಂದುವರೆಯುತ್ತಾ.. ಜನರನ್ನು ಆಕರ್ಷಿಸುತ್ತಿವೆ. ಎರಡೂ ರೀತಿಯ ಬದಲಾವಣೆಗಳನ್ನು ಅಲ್ಲಗಳೆಯಲು ಆಗುವುದಿಲ್ಲ. ಬ್ಯುಸಿನೆಸ್ ಎಂದಿಗೂ ಭಾವನಾತ್ಮಕ ಬಂಧದ ಮೇಲೆ ನಿಂತಿಲ್ಲ. ನಿಲ್ಲುವುದೂ ಇಲ್ಲ. ಇಲ್ಲಿ ಎಲ್ಲಾ ವ್ಯವಹಾರದ್ದೇ ಮೇಲುಗೈ ಎನ್ನುತ್ತಾ ಬ್ಯುಸಿನೆಸ್ ನ ನಿರ್ದಯತೆಯ ಪಾಠ ಹೇಳುತ್ತಿದೆ ಫ್ಲಿಪ್ ಕಾರ್ಟ್.


( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ