ಸೋಮವಾರ, ಏಪ್ರಿಲ್ 20, 2026

ಪಾರಿಜಾತ... ಕಿರಣ (ಪುಸ್ತಕ ಯಾನ - 271)


ಪುಸ್ತಕದ ಶೀರ್ಷಿಕೆ : ಪಾರಿಜಾತ... ಕಿರಣ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 2002

ಎರಡನೇ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)


ಪ್ರೀತಿ ಮುರಿಯುವುದಕ್ಕೆ ಹಲವು ದಾರಿಗಳು. ಕೆಲವೊಮ್ಮೆ ಹೊರಗಿನಿಂದ ಖಳನಾಯಕರಿದ್ದರೆ.. ಇನ್ನು ಕೆಲವೊಮ್ಮೆ ಮನೆಯಲ್ಲಿ ಕೆಲವರು ಆ ಪಾತ್ರವಹಿಸುತ್ತಾರೆ. ಇನ್ನು ಕೆಲವೊಮ್ಮೆ ಅವರ ಅಹಂಕಾರ, ಅಹಂಭಾವ ಹಾಗೂ ನಾನು ಎಂಬ ಸ್ವಾರ್ಥ ಕೂಡಾ ಅವರ ಪ್ರೀತಿಯನ್ನು ನಾಶಪಡಿಸಬಲ್ಲದು. ಇಲ್ಲಿ ಪಾರಿಜಾತ ಹಾಗೂ ಕಿರಣರ ನಡುವಿನ ಪ್ರೀತಿ ಬೇರಾವ ಖಳನಾಯಕರ ಪ್ರಯತ್ನವೂ ಇಲ್ಲದೆ ಮುರಿದು ಹೋಗುತ್ತದೆ. ಅದಕ್ಕೆ ಕಾರಣವೆಂದರೆ, ಕೌಟುಂಬಿಕ ಕಾರಣಗಳು. ಈ ಕಾದಂಬರಿ ಕೇವಲ ಪ್ರೇಮಕಥೆಯೊಂದರ ಕಥಾಹಂದರವಲ್ಲ. ಹಾಗೆಂದು, ಪ್ರೇಮವಿಲ್ಲದೆಯೂ ಈ ಕಾದಂಬರಿಯನ್ನು ವಿಶ್ಲೇಷಿಸಲು ಅಸಾಧ್ಯ. ಇದು ಪಾರಿಜಾತದ ಗಮಲಿನಷ್ಟೇ ಆಹ್ಲಾದ ತರುವ ಕಾದಂಬರಿ. 


ಕಿರಣನ ತಾಯಿ ಸುಬ್ಬಮ್ಮ. ತಂದೆ ಶ್ರೀನಿವಾಸರಾಯರು. ಶ್ರೀನಿವಾಸರಾಯರ ಒಬ್ಬಳೇ ತಂಗಿ ಪಂಕಜಾಳ ಮಗಳೇ ಪಾರಿಜಾತ. ಕಿರಣನಿಗೆ ಅತ್ತೆಯ ಮಗಳು ಪಾರಿಜಾತಳ ಮೇಲೆ ಬಹಳವೇ ಮನಸ್ಸು. ಅದಕ್ಕೆ ತಂದೆಯ ಪ್ರೋತ್ಸಾಹವೂ ಇದ್ದೇ ಇತ್ತು. ಆದರೆ, ಸುಬ್ಬಮ್ಮನವರಿಗೆ ತನ್ನ ಅಣ್ಣನ ಮಗಳಾದ ಮಲ್ಲಿಕಾಳನ್ನು ಮಗನ ಜೊತೆ ವಿವಾಹ ಮಾಡಿಸಬೇಕೆಂಬ ಮಹದಾಸೆ. ಅದಕ್ಕೆ ಕಿರಣನ ಒಪ್ಪಿಗೆ ಇರಲಿಲ್ಲ. ಸುಬ್ಬಮ್ಮನವರಿಗೆ ಕಿರಣನಿಗಿಂತ ಮೊದಲು ಇಬ್ಬರು ಹೆಣ್ಣುಮಕ್ಕಳು. ಸುಪ್ರಭಾ ಹಾಗೂ ಸುಜಾತ. ಅವರಿಬ್ಬರನ್ನು ಅಣ್ಣ-ತಮ್ಮಂದಿರಾದ ಡಾಕ್ಟರ್ ಹುಡುಗರಿಗೆ ಕೊಟ್ಟು ವಿವಾಹ ಮಾಡಿದ್ದರು. ಅಳಿಯಂದಿರನ್ನೂ.. ಮಕ್ಕಳನ್ನು ಜೊತೆಯಲ್ಲಿ ಇಟ್ಟುಕೊಂಡಿದ್ದರು ಸುಬ್ಬಮ್ಮ. ಬೀಗರಿಗೂ ಅಲ್ಲಿಯೇ ವ್ಯವಸ್ಥೆ ಮಾಡಿಕೊಟ್ಟಿದ್ದರು.


ಇತ್ತ ಪಾರಿಜಾತಳ ಮನೆಯಲ್ಲಿ ಹೆಣ್ಣುಮಕ್ಕಳು ನೋಡಲು ಚೆನ್ನಾಗಿದ್ದರಾದರೂ.. ಹಣ ಬಲ ಇರಲಿಲ್ಲ. ಪಾರಿಜಾತಳ ಮೊದಲನೆಯ ಅಕ್ಕ ಕಾಲೇಜ್ ಲೆಕ್ಚರರನ್ನು ವಿವಾಹವಾಗಿದ್ದಳು. ಎರಡನೇ ಅಕ್ಕ ರಾಧಿಕಾ ಲಾಯರನ್ನು ವಿವಾಹವಾಗಿದ್ದಳಾದರೂ.. ಆಕೆ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಅತ್ತೆಯ ಮನೆಯಲ್ಲಿ ಬಹಳ ಜಿಪುಣತನ. ಎಷ್ಟೇ ದುಡಿದರೂ ಸಂಬಳವನ್ನು ಮನೆಗೆ ನೀಡಬೇಕಿತ್ತು. ಆಕೆ ಕುಟುಂಬದಿಂದ ಹೊರಬಂದು ಬೇರೆ ಮನೆ ಮಾಡುವಂತಿಲ್ಲ ಎಂಬ ನಿಬಂಧನೆಯ ಮೇರೆಗೆ ಅವಳ ವಿವಾಹವಾಗಿತ್ತು . ತಮ್ಮ ಪ್ರಭುವನ್ನು ಇಂಜಿನಿಯರ್ ಆಗಿ ಮಾಡಬೇಕೆಂಬುದು ತಾಯಿ ಪಂಕಜಳ ಮಹದಾಸೆ. ಪಾರಿಜಾತಳ ತಂದೆ ರಾಮನಾಥ್ ರವರು ಹೆಣ್ಣುಮಕ್ಕಳು ಚೆನ್ನಾಗಿದ್ದರೆ ಸಾಕು, ಸಾಲವಾದರೂ ಚಿಂತೆ ಇಲ್ಲ ಎಂಬ ಮನಸ್ಸಿನಲ್ಲಿ ಪಾರಿಜಾತಳನ್ನು ಕಿರಣನ ಜೊತೆ ವಿವಾಹ ಮಾಡಲು ಮುಂದಾಗಿದ್ದರು. 


ಸುಬ್ಬಮ್ಮನವರಿಗೆ ತಮಗೆ ಹಣ ಇದೆಯೆನ್ನುವ ಅಹಂಕಾರವೂ ಇತ್ತು. ವರದಕ್ಷಿಣೆಯಾಗಿ ಐದು ಲಕ್ಷ ಕೊಡಬೇಕೆಂಬ ಬೇಡಿಕೆಯನ್ನಿಟ್ಟಿದ್ದರು. ಪಂಕಜಮ್ಮನವರಿಗೆ ಅತ್ತಿಗೆ ಸುಬ್ಬಮ್ಮನವರ ಬುದ್ಧಿ ಗೊತ್ತಿದ್ದದ್ದೇ.. ಅಷ್ಟು ಖರ್ಚು ಮಾಡಿ ವಿವಾಹ ಮಾಡಿದರೂ ಆಕೆಗೆ ಅಸಮಾಧಾನ ಇದ್ದೇ ಇರುತ್ತದೆ. ಜೊತೆಗೆ ಮನೆಯಲ್ಲಿ ಹೆಣ್ಣು ಮಕ್ಕಳ ಕಾಟವೆಂದು, ಕಿರಣನೂ ಮನೆಯಲ್ಲಿ ತಾಯಿ-ತಂಗಿಯರನ್ನು ಎದುರಿಸಿ ಹೆಂಡತಿಗೆ ರಕ್ಷಣೆ ಕೊಡಲಾರನೆಂದು ಹೇಳಿ ಪಾರಿಜಾತಳನ್ನು ಆ ವಿವಾಹದಿಂದ ವಿಮುಖಳನ್ನಾಗಿ ಮಾಡುತ್ತಿದ್ದರು. 


ಪಾರಿಜಾತಳ ಗೆಳತಿ ಮೋಹನಾಂಗಿಯೂ ಮದುವೆಯಾದ ತನ್ನ ಮೂವರು ಮಲಅಕ್ಕಂದಿರು ಸುಖವಾಗಿಲ್ಲವೆಂದು ಹೇಳುತ್ತಾ.. ಇದರಿಂದ ವಿವಾಹದ ಕುರಿತು ಅಷ್ಟೇನೂ ಸಿಹಿ ಕನಸುಗಳಿಲ್ಲದ ಪಾರಿಜಾತ.. ಕಿರಣನಿಗೆ ತಾನು ಈಗಲೇ ಮದುವೆಯಾಗಲಾರೆನೆಂದು ಹೇಳಿದಳು. 


ಇತ್ತ ಮೋಹನಾಂಗಿ ತನ್ನ ತಾಯಿ ಹವ್ಯಾಸಿ ನಾಟಕಕಾರ್ತಿಯಾದ ಪದ್ಮಿನಿಯ ಜೊತೆಗೆ ಮೈಸೂರಿಗೆ ಸೇರಿದ್ದಳು. ಪಾರಿಜಾತಳಿಗೂ ಅಲ್ಲಿಗೆ ಆಹ್ವಾನಿಸಿದಳು. ಪದ್ಮಿನಿಯ ಅಣ್ಣ ನಾಗೇಂದ್ರರಾವ್ ಜಾಹೀರಾತುಗಳ ನಿರ್ದೇಶಕ. ಮೋಹನಾಂಗಿ ತನಗೆ ಫೋಟೋಜೆನಿಕ್ ಫೇಸ್ ಇಲ್ಲದ್ದರಿಂದ ತಾನು ಸೆಲೆಕ್ಟ್ ಆಗಲಿಲ್ಲವೆಂದು ಹೇಳಿ, ಅಚಾನಕ್ಕಾಗಿ ನಿನ್ನ ಫೋಟೋ ತೋರಿಸಿದಾಗ ಅವರು ಒಪ್ಪಿದ್ದಾರೆ. ಹಾಗಾಗಿ ನೀನು ಆಯ್ಕೆ ಆಗಬಹುದೆಂದು ಹೇಳಿ ಅವಳನ್ನು ಅಲ್ಲಿಗೆ ಕರೆಸಿಕೊಂಡಿದ್ದಳು. 


ತನ್ನ ಅದೃಷ್ಟ ಪರೀಕ್ಷೆಗೆಂದು ಅಲ್ಲಿಗೆ ಹೋದಳು ಪಾರಿಜಾತ. ಮನೆಯಲ್ಲಿ ಈ ವಿಚಾರ ಆಕೆಯ ತಾಯಿಗೆ ತಿಳಿದಿತ್ತು. ಅದರಿಂದ ಬರುವ ಆದಾಯದಿಂದ ತಮ್ಮ ಮನೆಗೆ ಅನುಕೂಲವಾಗುತ್ತದೆಂದೂ.. ಈ ವಿಷಯ ತನ್ನ ಗಂಡನಿಗೆ ತಿಳಿದರೆ ಅದಕ್ಕೆ ಒಪ್ಪಲಾರರೆಂದು ಅದನ್ನು ಮುಚ್ಚಿಟ್ಟು ಮಗಳನ್ನು ಜಾಹೀರಾತು ಪ್ರಪಂಚಕ್ಕಿಳಿಸಿದರು ಪಂಕಜಮ್ಮ. ಈ ನಡುವೆ ಕಿರಣ ಬಂದು ಹೋದರೂ ಆ ವಿಷಯವನ್ನು ಎಲ್ಲರಿಂದ ಮುಚ್ಚಿಟ್ಟರು. 


ಶ್ರೀನಿವಾಸರಾಯರು ಹಾಗೂ ರಾಮನಾಥರಲ್ಲಿ ಒಂದು ಮಾತುಕತೆಯಾಗಿತ್ತು. ಪಾರಿಜಾತ ಹಾಗೂ ಕಿರಣ ಇಬ್ಬರಿಗೂ ಬೇರೆ ಮನೆ ಮಾಡಿ ಕೊಡುವುದಾಗಿಯೂ.. ತನ್ನ ಹೆಂಡತಿಯ ಕಾಟದಿಂದ ದೂರವಿಟ್ಟು ಅವರಿಬ್ಬರನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿಯೂ.. ತನ್ನ ಅಂಗಡಿಯನ್ನು ಅವರಿಗೆ ವಹಿಸಿಕೊಡುವ ವಿಚಾರ ಮಾತನಾಡಿದ್ದು, ಹಣದ ವ್ಯವಸ್ಥೆಯನ್ನೂ ಮಾಡಿದ್ದು ಪಂಕಜಮ್ಮನವರಿಗೆ ತಿಳಿದಿರಲಿಲ್ಲ. ಪಂಕಜಮ್ಮ ಈಗ ಇಬ್ಬಂದಿಗೆ ಸಿಲುಕಿದ್ದರು.


ರಾಮನಾಥ್ ಅವರಿಗೆ ವಿಷಯ ತಿಳಿದದ್ದು ತನ್ನ ಭಾವ ಶ್ರೀನಿವಾಸರವರ ಪ್ರಸ್ತಾಪದಿಂದ. ಆದರೆ, ಅಷ್ಟರಲ್ಲಾಗಲೇ ಕಾಲ ಮಿಂಚಿಹೋಗಿತ್ತು. ಪಾರಿಜಾತ ಹಾಗೂ ಆಕೆಯ ತಾಯಿಯ ತಿರಸ್ಕಾರದಿಂದ ವಿಮುಖನಾದ ಕಿರಣ ಮಲ್ಲಿಕಾಳನ್ನೇ ಆಯ್ಕೆಮಾಡಿಕೊಂಡಿದ್ದ. ರಾಮನಾಥ್ ರವರು ಮಗಳನ್ನು ಎಚ್ಚರಿಸಿದ್ದರು. ಅಲ್ಲಿಂದ ಹಿಂತಿರುಗಿ ಬಂದರೆ ತನ್ನ ಮಗಳೆಂದೂ.. ಇಲ್ಲವಾದಲ್ಲಿ ಸಂಬಂಧ ಮುಂದುವರೆಯುವುದಿಲ್ಲವೆಂದೂ ಹೇಳಿದ್ದರು. ಕಿರಣನೂ ಇಲ್ಲದೆ, ಆಕೆ ಹಿಂದಿರುಗಲು ಒಪ್ಪಲಿಲ್ಲ. 


ಇತ್ತ ಮೋಹನಾಂಗಿ ಹೇಳಿದಂತೆ ಆಕೆ ಜಾಹೀರಾತು ಪ್ರಪಂಚಕ್ಕೆ ಇಳಿಯದಿದ್ದದ್ದು ಅವಳ ಮುಖ ಹೊಂದಿಕೆಯಾಗಲಿಲ್ಲವೆಂದಲ್ಲ.. ಬದಲಾಗಿ ಆಕೆ ನಾಗೇಂದ್ರರಾವ್ ಅವರ ಮಗ ರಾಜೇಂದ್ರನನ್ನು ಮದುವೆಯಾದಳು. ಗೆಳತಿಯಿಂದ ಮೋಹನಾಂಗಿ ಈ ವಿಚಾರವನ್ನು ಮುಚ್ಚಿಟ್ಟದ್ದೇಕೆ..? ರಾಜೇಂದ್ರನ ಹಿನ್ನೆಲೆಯೇನು.. ಮೋಹನಾಂಗಿ ಆತನನ್ನು ಮದುವೆಯಾಗಲು ಕಾರಣವೇನು..? ಇದರಲ್ಲಿ ಪದ್ಮಿನಿಯ ಪಾಲೆಷ್ಟು.. ಮೋಹನಾಂಗಿಯ ಮಲಅಕ್ಕಂದಿರ ಹಾಗೂ ಆಕೆಯ ಬದುಕಿನ ಕಥೆಯೇನು..?


ಮಲ್ಲಿಕಾ ಮೊದಲಿಗೆ ಕಿರಣನಿಗೆ ಇಷ್ಟವಾಗದಿದ್ದದ್ದು ಆಕೆಯ ಚೆಲ್ಲುಚೆಲ್ಲು ವರ್ತನೆ ಹಾಗೂ ಆಕೆಯ ದಿರಿಸಿನಿಂದಾಗಿ. ಆದರೆ, ಅದನ್ನು ಮೀರಿಸುವಂತೆ ಮಲ್ಲಿಕಾ ಇದ್ದದ್ದು ಹೇಗೆ.. ಕಿರಣ ತನ್ನನ್ನು ಮದುವೆಯಾಗುವಂತೆ ಮಾಡಲು ಆಕೆ ತನ್ನ ಅತ್ತೆ ಸುಬ್ಬಮ್ಮನೊಡನೆ ಸೇರಿ ರೂಪಿಸಿದ ಸಂಚೇನು..? ಮಲ್ಲಿಕಾಳನ್ನು ಕಿರಣ ಮದುವೆಯಾದರೆ ಮನೆಯವರೆಲ್ಲರಿಗೂ ಆಗುತ್ತಿದ್ದ ಲಾಭವೇನು..? 


ಪಾರಿಜಾತಳಿಗೆ ಎಲ್ಲಾ ನಿಜ ಅರಿವಾದಾಗ ಆಕೆಯ ಪರಿಸ್ಥಿತಿ ಹೇಗಿತ್ತು..? ಸ್ವಂತ ತಾಯಿಯನ್ನು ಮೀರಿಸುವಂತೆ ನೋಡಿಕೊಳ್ಳುತ್ತಿದ್ದ ಪದ್ಮಿನಿಯ ಸ್ವಾರ್ಥದ ಹಿಂದಿನ ಹುನ್ನಾರವೇನು..?


ಪಾರಿಜಾತ ಹಾಗೂ ಕಿರಣ ಇಬ್ಬರು ಒಂದಾಗಲಿ ಎನ್ನುವ ಓದುಗರ ಮನದಾಸೆ ಇಲ್ಲಿ ಎಷ್ಟರಮಟ್ಟಿಗೆ ಸಾಕಾರಗೊಳ್ಳುತ್ತದೆ ಎಂಬುದನ್ನು ನೀವೇ ಓದಿ ಅರಿಯಿರಿ.


ಮತ್ತೊಬ್ಬರ ಸ್ವಾರ್ಥ, ಸಂಚುಗಳನ್ನರಿಯದೆ.. ಬದುಕು ಕರೆದೊಯ್ದ ದಾರಿಯಲ್ಲಿ ನಡೆದ ಪಾರಿಜಾತ.. ತಾನು ಪ್ರೀತಿಸಿದ ಹುಡುಗಿ ತನ್ನವರ ಸಂಚಿನಿಂದಲೇ ತನ್ನನ್ನು ಒಪ್ಪದೇ ಹೋದ ಪರಿಸ್ಥಿತಿಯಲ್ಲಿ, ದುಡುಕು ಬುದ್ಧಿಯಲ್ಲಿ ಮತ್ತೊಬ್ಬಳನ್ನು ಮದುವೆಯಾಗಲು ಹೊರಟ ಕಿರಣ. ಇವರಿಬ್ಬರ ಪ್ರೇಮ ಮಾತ್ರವೇ ಗೆದ್ದು.. ಅವರು ಬದುಕಿನಲ್ಲಿ ಮತ್ತಷ್ಟು ಪ್ರೌಢವಾಗಿ ಆಲೋಚಿಸಲಿ ಹಾಗೂ ಅನುಭವಗಳು ಕಟ್ಟಿಕೊಟ್ಟ ಪಾಠ ಅವರ ಬದುಕಲ್ಲಿ ಬೆಳಕಾಗಲಿ ಎಂದು ಹಾರೈಸುವಂತೆ ಮಾಡಿದ ಕಾದಂಬರಿ.


ಈ ಕಾದಂಬರಿಯಲ್ಲಿ ನನಗೆ ಬಹಳ ಇಷ್ಟವಾದ ಪಾತ್ರ ಶ್ರೀನಿವಾಸರಾಯರದ್ದು. ಹೆಂಡತಿಯ ದರ್ಪ-ದೌಲತ್ತುಗಳಿಗೆ ತಮ್ಮದೇ ರೀತಿಯಲ್ಲಿ ಉತ್ತರ ಕೊಟ್ಟು, ತಮ್ಮ ಸ್ವಾಭಿಮಾನವನ್ನು ಬಿಡದೆ ತಮ್ಮದೇ ಆದ ಸ್ವಂತ ವ್ಯಕ್ತಿತ್ವ ರೂಪಿಸಿಕೊಂಡವರು. ಅಷ್ಟೇ ಅಲ್ಲದೆ.. ಮಗನಿಗೆ ಚಂದದ ಭವಿಷ್ಯ ರೂಪಿಸಿಕೊಡಲು ಹೊರಟು ತೊಳಲಾಡಿದವರು. ಮಗನಷ್ಟೇ ಪ್ರೀತಿಯನ್ನು ತಂಗಿಯ ಮಗಳಾದ ಪಾರಿಜಾತಳಿಗೂ ತೋರಿದವರು. ಅವರಿಬ್ಬರ ಭವಿಷ್ಯವನ್ನು ಕನಸು ಕಂಡು ಮನೆಗೆ ಪಾರಿಜಾತ.. ಕಿರಣ ಎಂಬ ಫಲಕವನ್ನು ಕೆತ್ತಿಸಿ ಇಟ್ಟವರು. ಭಾವನ ಜೊತೆಯಲ್ಲಿ ತನ್ನ ಯೋಜನೆಯನ್ನೆಲ್ಲಾ ರೂಪಿಸಿದವರು. ಬೇಸರವಾದಾಗ ಯಾವುದೂ ಬೇಡವೆಂದು ಹೊರಟರೂ.. ಮತ್ತೆ ಅವರನ್ನು ಬದುಕಿನತ್ತ ಸೆಳೆದು ತಂದದ್ದು ಮಕ್ಕಳ ಮೇಲಿನ ಅಗಾಧವಾದ ಪ್ರೇಮ ಹಾಗೂ ಅವರ ಭವಿಷ್ಯ ಬೆಳಗುವ ತಂದೆಯ ಜವಾಬ್ದಾರಿ. ಹೆಚ್.ಜಿ ರಾಧಾದೇವಿಯವರ ಕಾದಂಬರಿಗಳಲ್ಲೆಲ್ಲಾ ನನಗೆ ಬಹಳ ಇಷ್ಟವಾದ ತಂದೆಯ ಪಾತ್ರವಿದು. 


ಸೊಗಸಾದ ಕಾದಂಬರಿಯ ನವಿರಾದ ಓದು. ಈ ಕಾದಂಬರಿ ಮರುಮುದ್ರಣವಾಗಿ ಓದುಗರ ಕೈ ಸೇರಿದ್ದು ಬಹಳ ಖುಷಿ ತಂದಿದೆ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ