ಪುಸ್ತಕದ ಶೀರ್ಷಿಕೆ : ಏ ಬೀಳ್ತೀಯಾ ಹುಷಾರು !
ಲೇಖಕರು : ನಡಹಳ್ಳಿ ವಸಂತ್
ಪ್ರಕಾಶಕರು : ಭೂಮಿ ಬುಕ್ಸ್
ಪ್ರಥಮ ಮುದ್ರಣ : 2011
ಪುಟಗಳು : 130
ಬೆಲೆ : 95 ರೂ.
ನಡಹಳ್ಳಿ ವಸಂತ್ ಅವರು 'ಆಪ್ತ ಸಲಹಾ ಮನೋವಿಜ್ಞಾನ'ದಲ್ಲಿ ಕೌನ್ಸಿಲಿಂಗ್ ನಲ್ಲಿ ಎಂ.ಎಸ್ ಡಿಗ್ರಿ ಪಡೆದವರು. ಮಕ್ಕಳ ಮನೋಗುಣ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಆಂಥೋನಿ ರಾಬಿನ್ಸ್, ಸ್ಟೀಫನ್ ಕೋವೇ ಹಾಗೂ ಡಾಕ್ಟರ್ ಮೀನಗುಂಡಿ ಸುಬ್ರಮಣ್ಯ ಮುಂತಾದವರ ಬರಹಗಳನ್ನು ಆಧರಿಸಿ ಆಪ್ತ ಸಲಹೆಯಲ್ಲಿ ತೊಡಗಿಕೊಂಡಿರುವವರು. ನಾಡಿನ ಹೆಸರಾಂತ ಪತ್ರಿಕೆಗಳಲ್ಲಿ ಜನಪ್ರಿಯ ಲೇಖನಗಳನ್ನು ಬರೆದವರು. ಅಂತಹಾ ಕೆಲವು ಲೇಖನಗಳ ವಿಸ್ಕೃತ ರೂಪವನ್ನು ನಾವು ಈ ಪುಸ್ತಕದಲ್ಲಿ ಕಾಣಬಹುದು.
ಮಕ್ಕಳ ಲಾಲನೆ, ಪಾಲನೆ ಪಾಠಗಳು ಎಂದ ಮಾತ್ರಕ್ಕೆ ಇದು ಕೇವಲ ಮಕ್ಕಳ ಪೋಷಕರಿಗೆ ಮಾತ್ರ ಅನ್ವಯಿಸಬೇಕಿಲ್ಲ. ಇದು ನಮ್ಮೆಲ್ಲರ ಜೀವನಕ್ಕೂ ಅನ್ವಯಿಸುವಂತಹದ್ದು. ಇಲ್ಲಿನ ಎಷ್ಟೋ ಸಂದರ್ಭದಲ್ಲಿ ನಮ್ಮ ಬದುಕಿನಲ್ಲಿ ಆದ ಘಟನೆಗಳು ಅಥವಾ ನಾವು ಆ ಘಟನೆಗೆ ನೀಡಿದ ಪ್ರತಿಕ್ರಿಯೆಯನ್ನು ನೆನಪಿಸಿಕೊಳ್ಳಬಹುದು. ಅದನ್ನು ಬದಲಾಯಿಸಿಕೊಳ್ಳುವ ರೀತಿ ಅಥವಾ ಆ ಪ್ರತಿಕ್ರಿಯೆಯ ಹಿಂದೆ ಇರುವ ಆಲೋಚನೆಯ ಪರಿಯನ್ನು ಸಹಾ ಕಾಣಬಹುದು. ಇದು ನಮ್ಮ ಜೀವನಘಟ್ಟದ ಪಾಲನೆಯ ಕಥೆಯೂ ಆಗಿರಬಹುದು ಅಥವಾ ಲಾಲನೆಯ ಕತೆಯೂ ಆಗಿರಬಹುದು.
'ಬೀಳ್ತೀಯಾ ಹುಷಾರು' ಎನ್ನುತ್ತಾ ಮಗುವಿನ ಪ್ರತಿ ಹೆಜ್ಜೆಯಲ್ಲೂ ಅತಿ ಎಚ್ಚರಿಕೆ ವಹಿಸಿದರೆ ಏನಾಗುತ್ತೆ ಗೊತ್ತಾ ಎನ್ನುವ ಪ್ರಶ್ನೆಯೊಂದಿಗೇ ನಾವು ಪುಸ್ತಕವನ್ನು ತೆರೆಯುತ್ತೇವೆ. ಸಾಮಾನ್ಯವಾಗಿ ನಾವೂ ಹೀಗೆಯೇ ಅಲ್ಲವೇ..? ಎಚ್ಚರಿಕೆಯ ಕರೆಘಂಟೆಯನ್ನು ಕಂಡಾಗ ಯೋಚಿಸುವುದು. ಮನಸ್ಸು ಅದರತ್ತಲೇ ಹೆಚ್ಚು ವಾಲುತ್ತದೆ. ಅತಿ ಎಚ್ಚರಿಕೆ ಕೆಲವೊಮ್ಮೆ ಸಾಮಾನ್ಯ ಪ್ರತಿಕ್ರಿಯೆಗಳನ್ನು ಬದಲಾಯಿಸಿದರೆ, ಇನ್ನು ಕೆಲವೊಮ್ಮೆ ಅಂತಹಾ ಎಚ್ಚರಿಕೆ ಎಲ್ಲಿ ಬರಬಹುದು ಎನ್ನುತ್ತಾ ಭಯದಿಂದ ಅಂತಹ ಕೆಲಸವನ್ನು ಮಾಡದಂತೆಯೇ ಹಿಂಜರಿಯುತ್ತಾ ಉಳಿಯುವಂತೆ ಮಾಡಿಬಿಡಬಹುದು.
ಈ ಪುಸ್ತಕ ಓದಿದ ನಂತರ ನಮ್ಮೆಲ್ಲಾ ನಡವಳಿಕೆಗಳು ಬದಲಾಗಿ ಮಕ್ಕಳನ್ನು ತಿದ್ದಿ ಬಿಡುತ್ತೇವೆ ಎಂದರ್ಥವಲ್ಲ. ಬದಲಾಗಿ ಮಕ್ಕಳನ್ನು ತಿದ್ದುವುದು, ಉಪದೇಶ, ಬುದ್ಧಿವಾದ, ಶಿಕ್ಷೆಗಳನ್ನು ನೀಡುವ ಬದಲಾಗಿ ನಮ್ಮ ನಡವಳಿಕೆಗಳನ್ನು ಬದಲಾಯಿಸಿಕೊಂಡಲ್ಲಿ ಪೇರೆಂಟಿಂಗ್ ನಲ್ಲಿ ಒಂದು ದೊಡ್ಡ ಹೆಜ್ಜೆ ಮುಂದಿಡಬಹುದು. ಈ ಪುಸ್ತಕದಲ್ಲಿ ಮಕ್ಕಳ ಇಂಟಲಿಜೆಂಟ್ ಕೋಶೆಂಟ್ ಅಂದರೆ ಬುದ್ಧಿವಂತಿಕೆಯ ಮಟ್ಟವನ್ನು ಹೆಚ್ಚಿಸಬೇಕು ಎನ್ನುವ ಮಾಹಿತಿಗಳಿಗಿಂತ ಮಕ್ಕಳ ಎಮೋಷನಲ್ ಕೋಶೆಂಟ್ ಅಂದರೆ ಭಾವನಾತ್ಮಕ ಸ್ಥಿರತೆಯ ಮಟ್ಟವನ್ನು ಹೆಚ್ಚಿಸುವುದರ ಕುರಿತಾಗಿ ಹೆಚ್ಚಿನ ಲೇಖನಗಳಿವೆ.
ಮಕ್ಕಳ ಕಲಿಕೆಯಲ್ಲಿ ಮಕ್ಕಳು ಹೇಳಿದ್ದನ್ನು ಕೇಳಿ ಅಥವಾ ತಮ್ಮ ಪಾಠದ ಮೂಲಕ ಕಲಿಯುವುದಕ್ಕಿಂತಲೂ ತಮ್ಮ ಸುತ್ತಮುತ್ತಲಿನದ್ದು ಹಾಗೂ ಸುತ್ತಮುತ್ತಲಿನವರನ್ನು ನೋಡಿ ಕಲಿಯುವುದೇ ಹೆಚ್ಚು. ಇತರರು ಮಾಡಿದ್ದನ್ನು ನೋಡಿ ಕಲಿಯುವ ಈ ವಿಧಾನಕ್ಕೆ ಮಾಡೆಲಿಂಗ್ ಮೂಲಕ ಕಲಿಕೆ ಎನ್ನುತ್ತಾರೆ. ಮಕ್ಕಳ ಕಲಿಕೆಯಲ್ಲಂತೂ ಇದರ ಪಾತ್ರ ಮಹತ್ತರ ಎನ್ನುತ್ತಾರೆ. ಇದಕ್ಕೆ ಉದಾಹರಣೆ ನೀಡುವುದಾದರೆ ದೊಡ್ಡವರಂತೆ ತುಟಿ ಚಲನೆ ಮಾಡುತ್ತಾ ಮಾತು ಕಲಿಯುವುದು, ಬರೆದಂತೆ ಬರೆಯುತ್ತಾ ಅಕ್ಷರ ಕಲಿಯುವುದು, ಹೆಣ್ಣು ಮಗು ಸೀರೆ ಉಡಲು ಪ್ರಯತ್ನಿಸುವುದು, ಸೈಕಲ್ ಕಲಿಕೆ, ಹಾಡು ಹಾಗೂ ಮತ್ತಿತರ ಕಲಿಕೆ, ತಮ್ಮ ನೆಚ್ಚಿನ ಹೀರೋನ ಹಾವಭಾವ, ಉಡುಗೆ-ತೊಡುಗೆ, ಕೇಶಾಲಂಕಾರವನ್ನು ಅನುಸರಿಸುವ ಬಗ್ಗೆ, ಗುರುವಿನಂತೆ ಹಾಡುವ ಶಿಷ್ಯ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಹಾಗಾಗಿ ನನ್ನ ಮಗ ಅಥವಾ ಮಗಳು ಪುಸ್ತಕ ಓದಲ್ಲ ಎನ್ನುವ ಬದಲಾಗಿ ಮೊದಲು ಮನೆಯಲ್ಲಿ ದೊಡ್ಡವರು ಪುಸ್ತಕ ಓದುವುದನ್ನು ಕಂಡಾಗ ಸಾಮಾನ್ಯವಾಗಿ ಮಕ್ಕಳು ಸಹಾ ಅದನ್ನೇ ಅನುಸರಿಸುವ ರೀತಿಯನ್ನು ಹಾಗೂ ಅದರ ಮಹತ್ವವನ್ನು ಹೇಳುತ್ತಾರೆ.
ಸಾಮಾನ್ಯವಾಗಿ ಪೋಷಕರು ಹೇಳುವ ಮತ್ತೊಂದು ದೂರು ಎಂದರೆ ಮಕ್ಕಳು ಟಿವಿ ಹೆಚ್ಚಾಗಿ ನೋಡುತ್ತಾರೆ ಎಂಬುದಾಗಿ. ಅದಕ್ಕೆ ಕಾರಣವನ್ನು ತಿಳಿಯಹೊರಟರೆ ಪೋಷಕರೇ ಪ್ರಮುಖವಾಗಿ ಕಾಣಸಿಗುತ್ತಾರೆ. ಒಂದೆರಡು ವರ್ಷದ ಮಗು ಊಟ ಮಾಡುವುದಕ್ಕೆ ತರಲೆ ಮಾಡುತ್ತಿರುವಾಗ ಹಿಂದೆಲ್ಲಾ ಆಕರ್ಷಕವಾಗಿ ಕಥೆ ಹೇಳುತ್ತಾ ಊಟ ಮಾಡಿಸುವ ಹಿರಿಯರು ಇರುತ್ತಿದ್ದರು. ಆದರೆ, ಈಗ ಅದರ ಬದಲಾಗಿ ಟಿ.ವಿ ಹಾಗೂ ಮೊಬೈಲ್ ಗಳು ಆ ಸ್ಥಾನವನ್ನು ಆಕ್ರಮಿಸಿವೆ. ಮಕ್ಕಳ ತುಂಟಾಟಗಳನ್ನು ತಪ್ಪಿಸಲು ಟಿ.ವಿ ಮುಂದೆ ಕೂರಿಸಿಬಿಟ್ಟರೆ ಸುಲಭವೆನ್ನುವ ಪೋಷಕರ ಆ ಒಂದು ಕ್ಷಣಿಕ ನಿರ್ಧಾರ ಮಕ್ಕಳನ್ನು ಟಿ.ವಿಗೆ ಅಡಿಕ್ಟ್ ಮಾಡಿಬಿಡುತ್ತದೆ. ಆದರೆ, ಇದನ್ನು ತಿದ್ದಿಕೊಳ್ಳಬಹುದಾದ ಬಹಳಷ್ಟು ಸಂದರ್ಭಗಳನ್ನು ಸಹಾ ಲೇಖಕರು ಹೇಳಿದ್ದಾರೆ.
ಸಾಮಾನ್ಯವಾಗಿ ನಮ್ಮ ಚಿಕ್ಕಂದಿನಲ್ಲಿಯೂ ಈ ಅನುಭವಗಳಾಗಿರಬಹುದು. ಅವನನ್ನು / ಅವಳನ್ನು ನೋಡು ಎಂದು ಮಗುವನ್ನು ಮತ್ತೊಂದು ಮಗುವಿಗೆ ಹೋಲಿಸುವ ಮಾತುಗಳನ್ನು ಕೇಳಿರುತ್ತೇವೆ. ಕ್ರಮೇಣ ಮಕ್ಕಳಿಗೇ ಗೊತ್ತಿಲ್ಲದಂತೆ ಆ ಮಗುವನ್ನು ದ್ವೇಷಿಸಲು ಶುರುಮಾಡುವ ಸಾಧ್ಯತೆಗಳಿರಬಹುದು ಅಥವಾ ಆ ಮಕ್ಕಳಿಗೆ ಕೀಳಿರಿಮೆಯೂ ಕಾಡಬಹುದು. ಅಂತಹಾ ಹೋಲಿಸುವ ಮಗು ಮನೆಯಲ್ಲಿಯೇ ಇದ್ದರಂತೂ ಸಿಬ್ಲಿಂಗ್ ರೈವರ್ಲಿ ಶುರುವಾಗಬಹುದು. ಹಾಗಾಗಿ ಪ್ರತಿ ಮಗುವೂ ಭಿನ್ನ ಹಾಗೂ ಅನನ್ಯ ಎಂದು ಹೇಳುತ್ತಾ ಅವರ ಸ್ವಂತಿಕೆಯನ್ನು ಉಳಿಸಿ ಬೆಳೆಸುವ ಮಾತುಗಳನ್ನು ತೆರೆದಿಡುತ್ತಾರೆ.
ಮಕ್ಕಳು ಬೆಳೆಯುತ್ತಾ ಹೋದಂತೆ ಅವರಲ್ಲಿ ಅನುಮಾನಗಳ ಅಥವಾ ಕುತೂಹಲದ ಪ್ರಶ್ನೆಗಳ ಸರಮಾಲೆಯೇ ಉಂಟಾಗಬಹುದು. ಆದರೆ, ನಾವು ಅವರ ಕುತೂಹಲಗಳಿಗೆ ಉತ್ತರಿಸಲಾಗದೆ ಕೆಲವೊಮ್ಮೆ ಮಕ್ಕಳ ಬಾಯಿ ಮುಚ್ಚಿಸಿ ಆ ಕ್ಷಣಕ್ಕೆ ಪಾರಾಗಿಬಿಡಬಹುದು. ಆದರೆ, ಅದರ ಮುಂದಿನ ಪರಿಣಾಮಗಳು ಏನಾಗಬಹುದು ಎನ್ನುವುದನ್ನು ಹೇಳುತ್ತಾರೆ. ಮಕ್ಕಳ ಕುತೂಹಲಕ್ಕೆ ತಕ್ಕ ಉತ್ತರವನ್ನು ಅವರಿಗೆ ಅರ್ಥವಾಗುವಂತೆ ಅರ್ಥೈಸಿ ಹೇಳಿಕೊಟ್ಟರೆ ಅವರ ಮುಂದಿನ ನಡೆಗಳು ಅದೆಷ್ಟು ಜ್ಞಾನ ಸಂಪಾದನೆಗೆ ಅವಕಾಶ ಮಾಡಿಕೊಡಬಹುದಲ್ಲವಾ..!
"ತಪ್ಪು ಮಾಡಲು ಅವಕಾಶ ಕೊಡಿ" ಎನ್ನುತ್ತಾರೆ ಲೇಖಕರು "ವಿವೇಕವಂತರಾದ ತಂದೆ-ತಾಯಿಗಳು ಮಕ್ಕಳು ತಪ್ಪು ಮಾಡುವುದಕ್ಕೆ ಅವಕಾಶ ಮಾಡಿಕೊಡುತ್ತಾರೆ" ಎಂದಿದ್ದಾರೆ ಗಾಂಧೀಜಿ. ದೊಡ್ಡವರ ನಿರ್ಧಾರಗಳೇನೂ ಯಾವಾಗಲೂ ಸರಿಯಾಗಿರುತ್ತವೆ ಎನ್ನುವ ಆಧಾರವಿಲ್ಲ. ದೊಡ್ಡವರೆಲ್ಲಾ ಜಾಣರಲ್ಲ ಎನ್ನುವ ಹಾಡು ನೆನಪಾಗಿಬಿಡುತ್ತದೆ. ಅಷ್ಟಕ್ಕೂ ಮಕ್ಕಳಿಗೆ ತಪ್ಪು ಮಾಡಲು ಅವಕಾಶ ಮಾಡಿಕೊಡಬೇಕಾಗುವುದಾದರೂ ಏಕೆ..?
ದ್ವೇಷ, ಅಸೂಯೆ ಬೆಳೆಯದಂತೆ ಸ್ನೇಹಮಯಿಯಾಗಿ.. ಸ್ನೇಹ ಬಳಗವನ್ನು ಹೆಚ್ಚಿಸಿಕೊಳ್ಳುವುದು, ದ್ವೇಷರಹಿತವಾದ ಜೀವನವನ್ನು ಬದುಕುವಂತೆ ಮಾಡುವುದು,ತಮ್ಮಲ್ಲಿರುವ ಪ್ರೀತಿಯನ್ನು ಹಂಚಿಕೊಳ್ಳುವುದು, ಧನಾತ್ಮಕ ಚಿಂತನೆಯನ್ನು ಪ್ರಚೋದಿಸುವುದು, ಅವರ ಜೀವನವನ್ನು ಸ್ವಂತ ನಿರ್ಧಾರವನ್ನು ತೆಗೆದುಕೊಂಡು ಸ್ವಂತ ಕಾಲುಗಳ ಮೇಲೆ ನಿಲ್ಲುವಂತೆ ಮಾಡುವುದರ ಹಿಂದೆ ಪೋಷಕರ ಪಾತ್ರ, ಭಾವನೆ ಹಾಗೂ ಬುದ್ಧಿ ಜೊತೆಗೆ ಶಿಕ್ಷೆ ಮತ್ತು ಶಿಕ್ಷಣದ ಮಹತ್ವ, ಮಕ್ಕಳು ಹಣವನ್ನು ನಿಭಾಯಿಸುವ ರೀತಿ, ಪೋಷಕರು ಶಿಸ್ತಿನ ಸಿಪಾಯಿಗಳಾಗದೆ ಮಕ್ಕಳಲ್ಲಿ ಹಾಸ್ಯ ಪ್ರಜ್ಞೆಯನ್ನು ಮೂಡಿಸಬೇಕಾದ ಅವಶ್ಯಕತೆ.. ಹೀಗೆ ಹಲವಾರು ವಿಷಯಗಳ ಕುರಿತು ಪೋಷಕರಿಗೆ ಚಂದದ ಕಿವಿಮಾತುಗಳನ್ನು ತಮ್ಮ ಕೆಲವು ಅನುಭವಗಳು ಹಾಗೂ ಕೆಲ ಘಟನೆಗಳ ಮೂಲಕ ತೆರೆದಿಟ್ಟಿದ್ದಾರೆ ಲೇಖಕರು.
ಇದೆಲ್ಲದರ ಜೊತೆಗೆ ಸತ್ಯಕಥೆ, ನೀತಿಕಥೆಗಳ ಸಾರ್ಥಕತೆ ಹಾಗೂ ಆಪ್ತ ಸಲಹೆಯ ಕುರಿತಾದ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಮನೋವೈಜ್ಞಾನಿಕ ವಿಚಾರದಲ್ಲಿ ಹೆಚ್ಚಿನ ಆಸಕ್ತಿ ಇರುವವರು ಓದಬೇಕಾದ ಪುಸ್ತಕ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ