ಕವನ ಸಂಕಲನ : ಶತಮಾನದ ಕಾವ್ಯ
ಸಂಪಾದಕರು : ಎಚ್. ಎಸ್ ವೆಂಕಟೇಶಮೂರ್ತಿ
*****************************************
ಕವಿತೆಯ ಶೀರ್ಷಿಕೆ : ಒಲವೋ ಹಗೆಯೋ
ಕವಿ : ತೀ. ನಂ. ಶ್ರೀ
ಮೂಲ ಕವನ ಸಂಕಲನ : ಒಲುಮೆ
1932 ರಲ್ಲಿ ತಮ್ಮ 20ನೇ ಹರೆಯದಲ್ಲಿ ತೀ.ನಂ.ಶ್ರೀ ಅವರು ಬರೆದಿರುವ ಪ್ರೇಮಕವನಗಳ ಸಂಕಲನವೇ 'ಒಲುಮೆ'. ಹೊಸಗನ್ನಡದಲ್ಲಿ ಇದು ಮೊದಲ ಪ್ರೇಮ ಕವಿತೆಗಳ ಸಂಕಲನ. ಇದರಲ್ಲಿ ಒಟ್ಟು 26 ಕವಿತೆಗಳಿವೆ. ಇದರಲ್ಲಿ 18 ಕವಿತೆಗಳು ಗಾಥಾಸಪ್ತಶತಿಯಿಂದ, ಎರಡು ಗ್ರೀಕ್ ಕವಿತೆಗಳ ಅನುವಾದ ಹಾಗೂ ಎರಡು ಇಂಗ್ಲಿಷ್ ಕವಿತೆಗಳ ಅನುವಾದವಿದೆ.
( ಎಂ ರಾಮಚಂದ್ರ ಅವರ 'ಬಾಡದ ಹೂವುಗಳು' ಎಂಬ ವಿಮರ್ಶಾ ಸಂಕಲನದಿಂದ ಆಯ್ದ ಮಾಹಿತಿ ಇದು )
ಈ ಕವಿತೆಯನ್ನು ಓದುವಾಗ ಇದು ಗಂಡಿನ ದೃಷ್ಟಿಯಿಂದಲೋ ಅಥವಾ ಹೆಣ್ಣಿನ ದೃಷ್ಟಿಯಿಂದಲೋ ಎನ್ನುವುದನ್ನು ಅರಿಯುವುದು ಸಹಾ ಮುಖ್ಯವಾಗುತ್ತದೆ. ಈಗಿನ ಕಾಲಘಟ್ಟದಲ್ಲಿ ಇದು ಯಾವ ವ್ಯಕ್ತಿಗಾದರೂ ಸೂಕ್ತವೆನಿಸಬಹುದೇನೋ.. ಆದರೆ, ಇದನ್ನು ಕವಿ ಬರೆದಿರುವ ಭಾವ ಹೆಣ್ಣಿನ ದೃಷ್ಟಿಯಿಂದ. ಇದು ಪ್ರೇಮ ಕವಿತೆಯಾದರೂ.. ಇಲ್ಲಿ ಗಂಡಿನ ನಡೆಯನ್ನು ಪ್ರಶ್ನಿಸುವ ಹೆಣ್ಣು ತನ್ನ ಜೊತೆಯಲ್ಲಿ ನಡೆದುಕೊಳ್ಳುವ ರೀತಿಗೂ.. ಇತರರೊಡನೆ ನಡೆದುಕೊಳ್ಳುವ ರೀತಿಗೂ ಹೋಲಿಸುತ್ತಾಳೆ.
ಮಿಕ್ಕವರಲಿ ನಗೆಗೂಡುತ ಬೆರೆವೆ
ನನ್ನೊಂದಿಗೆ ಬರಿಗೋಳನೆ ಕರೆವೆ;
ಒಲವೋ ಹಗೆಯೋ - ಯಾವುದಿದು ?
ಹೆರರೇನೆನ್ನಲಿ, ಕೇಳುತ ನಲಿವೆ,
ಸರಸವನಾಡಲು ನನ್ನಲಿ ಮುನಿವೆ;
ಒಲವೋ ಹಗೆಯೋ - ಯಾವುದಿದು ?
ಇತರರೊಡನೆ ನಗುನಗುತ್ತ ಮಾತನಾಡಿ ತನ್ನ ಜೊತೆಗೆ ಸಪ್ಪಗೆ ಮಾತನಾಡಿದಾಗಲೋ ಅಥವಾ ಸಾಮಾನ್ಯವಾಗಿ ನಡೆದುಕೊಂಡಾಗಲೋ ಅವಳ ಮನದಲ್ಲಿ ಉದಯಿಸಿದ ಭಾವ, ಬೇರೆಯವರು ಏನೆಂದರೂ ಕೇಳುತ್ತಾ ನಲಿಯುವೆ. ಆದರೆ, ನಾನು ಸರಸವನ್ನೇ ತೋರಿದರೂ ಮುನಿಸಿಕೊಳ್ಳುತ್ತೀಯ. ಇದು ಒಲವೋ ಅಥವಾ ದ್ವೇಷವೋ ಎಂದು ಪ್ರಶ್ನಿಸುತ್ತಾಳೆ.
ಕುಳಿತರೆ ನಿಂತರೆ ಹುಳಕನೆ ಬಗೆವೆ,
ತುಸು ತಪ್ಪಾದರು ಕಲಹವ ತೆಗೆವೆ;
ಒಲವೋ ಹಗೆಯೋ - ಯಾವುದಿದು ?
ಪ್ರಣಯವ ಬೀರಲು, ಕಪಟವಿದೆನುವೆ,
ಸುಮ್ಮನೆ ಸಾರಲು, ಒಲವಿಲ್ಲೆನುವೆ;
ಒಲವೋ ಹಗೆಯೋ - ಯಾವುದಿದು ?
ಮೊಸರಲ್ಲಿ ಕಲ್ಲು ಹುಡುಕುವ ಗಂಡನಂತೆ.. ಕೂತರೂ ತಪ್ಪು ನಿಂತರೂ ತಪ್ಪು ಎನ್ನುತ್ತಾ ಚಿಕ್ಕ-ಪುಟ್ಟದಕ್ಕೂ ಜಗಳವಾಡುವಾಗ ಹಾಗೂ ತೋರುವ ಪ್ರೀತಿಯನ್ನು ಇದು ನಾಟಕವೆಂದು ಜರಿದಾಗ, ಸಪ್ಪಗಾಗಿ ಸುಮ್ಮನಿದ್ದರೆ ಪ್ರೀತಿಯೇ ಇಲ್ಲವೆಂದು ದೂಷಿಸುವ ಗಂಡಿನ ಬಗೆಯನ್ನು ಇದು ಒಲವೋ.. ದ್ವೇಷವೋ.. ಎಂದು ಕೇಳುವ ಪರಿ ಇದೆ.
ದೂರಿದೆನಲ್ಲವೆ ನಿನ್ನನು ಹೆಚ್ಚು?
ನನಗಾದರೊ, ಈ "ಹಗೆ"ಯೂ ಮೆಚ್ಚು!
ಒಲವೋ ಹಗೆಯೋ - ಯಾವುದಿದು ?
ಆದರೆ ಇಷ್ಟೆಲ್ಲ ದೂರಿದರೂ.. ಹೆಣ್ಣು ಎಂದಿಗೂ ಗಂಡನನ್ನು ದ್ವೇಷಿಸಲಾರಳು. ಒಂದೊಮ್ಮೆ ಆತನೇ ದ್ವೇಷಿಸಿದರೂ.. ಆ ಹಗೆಯೂ ಮೆಚ್ಚು ಎಂದು ಮೆಚ್ಚಿಕೊಳ್ಳುವ ಪ್ರೀತಿಯ ಮಾತು ಇಲ್ಲಿದೆ. ನಿನ್ನನ್ನು ಹೆಚ್ಚು ದೂರಿದೆನೇ..? ಎನ್ನುವ ಪರಿತಾಪವೂ ಕಾಣುತ್ತದೆ. ಗಂಡಿನ ನಡೆಯನ್ನು ಪ್ರಶ್ನಿಸುವ ಕೆಚ್ಚು ಹಾಗೂ ಅದನ್ನು ಮೆಚ್ಚುವ, ಮತ್ತಷ್ಟು ಹೆಚ್ಚು ಪ್ರೀತಿಸುವ ಹೆಣ್ಣಿನ ಸಹಜ ಗುಣವೂ ಈ ಕವಿತೆಯನ್ನು ಸರಳವಾದರೂ ಹೆಚ್ಚು ಭಾವಪೂರ್ಣವೆನ್ನುವಂತೆ ಮಾಡುತ್ತದೆ.
*****************************************
ಕವಿತೆಯ ಶೀರ್ಷಿಕೆ : ಕಟ್ಟುವೆವು ನಾವು ಹೊಸ ನಾಡೊಂದನು
ಕವಿ : ಗೋಪಾಲ ಕೃಷ್ಣ ಅಡಿಗರು
ಮೂಲ ಕವನ ಸಂಕಲನ: ಕಟ್ಟುವೆವು ನಾವು
ಹಿಂದೆ ಟಿ.ಎನ್ ಸೀತಾರಾಮ್ ಅವರ ಧಾರಾವಾಹಿಯೊಂದನ್ನು ನೋಡುವಾಗ ಅವರ ಪಾತ್ರದ ಮೂಲಕ ಈ ಕವಿತೆಯನ್ನು ನಾನು ಮೊದಲ ಬಾರಿಗೆ ಕೇಳಿದ್ದು. ಅವರು ವಾಚಿಸುವ ಪರಿ ಕವಿತೆಗಳನ್ನು ಮತ್ತಷ್ಟು ಅರ್ಥಪೂರ್ಣವನ್ನಾಗಿಸಿ.. ಓದುವ ಹುಕಿ ಹುಟ್ಟಿಸುತ್ತದೆ. ಅಡಿಗರ ರಚನೆಯಲ್ಲಿ 'ಯಾವ ಮೋಹನ ಮುರಳಿ ಕರೆಯಿತು' ಭಾವಗೀತೆ ನನ್ನ ಮೆಚ್ಚಿನ ಗೀತೆಯಾದರೂ.. ಇದು ಅಡಿಗರ ನಾನು ಮತ್ತೆ ಮತ್ತೆ ಓದುವ ಕವಿತೆಗಳಲ್ಲಿ ಒಂದು. ಈ ಕವಿತೆ ದೀರ್ಘವಾಗಿದೆ. ಇದರಲ್ಲಿ ನನಗಿಷ್ಟವಾದ ಕೆಲ ಸಾಲುಗಳ ಕುರಿತಾಗಿ ಹೇಳುವ ಪ್ರಯತ್ನ ಮಾಡಿದ್ದೇನೆ.
ಕಟ್ಟುವೆವು ನಾವು ಹೊಸನಾಡೊಂದನು- ರಸದ
ಬೀಡೊಂದನು.
ಹೊಸನೆತ್ತರುಕ್ಕುಕ್ಕಿ ಆರಿಹೋಗುವ ಮುನ,
ಹರೆಯದೀ ಮಾಂತ್ರಿಕನ ಮಾಟ ಮಸುಳುವ ಮುನ್ನ,
ಉತ್ಸಾಹ ಸಾಹಸದ ಉತ್ತುಂಗ ವೀಚಿಗಳ
ಈ ಕ್ಷುಬ್ಧಸಾಗರವು ಬತ್ತಿ ಹೋಗುವ ಮುನ್ನ
ಕಟ್ಟುವೆವು ನಾನು ಹೊಸ ನಾಡೊಂದನು!
ಹೊಸನಾಡು ಕಟ್ಟುವ ಆಸೆ ಯುವಕರಲ್ಲಿ ಮೂಡಿದಾಗ.. ಅವರ ಮೂಲಕವೇ ಅವರ ಕನಸುಗಳನ್ನು ಹೇಳಿಸುವಂತೆ ರಚಿಸಿರುವ ಕವಿತೆ ಅವರ ಜೀವನೋತ್ಸಾಹವನ್ನು ಹೇಳುತ್ತದೆ. ಕೇವಲ ಹೊಸನಾಡನ್ನು ಮಾತ್ರ ಕಟ್ಟುವುದಲ್ಲ.. ಅದು ರಸದ ಬೀಡು ಹೌದು. ಯುವ ಜನಾಂಗವನ್ನು ಬಿಸಿನೆತ್ತರಿನವರು ಎನ್ನುತ್ತೇವೆ. ಅಂತಹಾ ಸಾಹಸಿಗಳು.. ತಮ್ಮ ಯೌವ್ವನದಲ್ಲಿಯೇ.. ಹರೆಯದ ಮಾಂತ್ರಿಕನ ಮಾಟ ಮುಗಿಯುವ ಮೊದಲೇ.. ಉತ್ಸಾಹ, ಸಾಹಸಗಳು ಉತ್ತುಂಗವಾಗಿರುವಾಗಲೇ ಕೆಲಸ ಮಾಡಬೇಕು ಎಂದು ಆಲೋಚಿಸುವ ಪರಿ ಅವರ ಸಾಹಸವನ್ನು, ಧೃಡ ನಿರ್ಧಾರವನ್ನು ಹೇಳುತ್ತದೆ.
ಜಾತಿಮತಭೇದಗಳ ಕಂದಕವು ಸುತ್ತಲೂ,
ದುರ್ಭೇದ್ಯವನೆ ಕೋಟೆಕೊತ್ತಲಗಳು ;
ರೂಢಿರಾಕ್ಷಸನರಸುಗೈಯುವನು, ತೋಳ್ತಟ್ಟಿ
ತೊಡೆತಟ್ಟಿ ಕರೆಯುವನು ಸಂಗ್ರಾಮಕೆ!
ನಾವು ಹಿಂದೆಗೆವೆವೇ? ವೀರ ತರುಣರು ನಾವು!
ಒಂದೆ ನೆಗೆತಕೆ ನೆಗೆವೆವೋ ಕಂದಕವನು,
ಕುಟ್ಟಿ ಪುಡಿಮಾಡುವೆವು ಕೋಟೆಗಳನು,
ಎದೆಯ ಮೆಟ್ಟಿ ಮುರಿಯುವೆವಸುರಟ್ಟೆಗಳನು!
ಬೇಧಿಸಲು ದುರ್ಗಮ ಎನಿಸುವ ಕೋಟೆ-ಕೊತ್ತಲಗಳ ಸುತ್ತ ಇರುವ ಕಂದರ ಬೇರಾವುದರದ್ದೂ ಅಲ್ಲ..! ಜಾತಿ-ಮತ ಭೇದಗಳದ್ದು. ಅದನ್ನೇ ರೂಢಿಸಿಕೊಂಡಿರುವವರನ್ನು ತೊಡೆತಟ್ಟಿ ಯುದ್ಧಕ್ಕೆ ಕರೆದು ಅವರ ಎದೆಯನ್ನು ಮೆಟ್ಟಿ, ರಟ್ಟೆಗಳನ್ನು ಮುರಿದು ಬಿಸಾಡುತ್ತೇವೆ. ಒಂದೇ ನೆಗೆತಕ್ಕೆ ಕಂದರವನ್ನು ಹಾರುತ್ತೇವೆ, ಹಿಂತೆಗೆಯುವುದಿಲ್ಲ. ಕೋಟೆಗಳನ್ನು ಕುಟ್ಟಿಯೇ ಪುಡಿ ಮಾಡುತ್ತೇವೆ. ಏಕೆಂದರೆ, ವೀರ ತರುಣರು ನಾವು ಎನ್ನುವಾಗ ಅವರ ಧೈರ್ಯ ಹಾಗೂ ಬಲಪ್ರದರ್ಶನವೂ ಆಗುತ್ತದೆ.
ಹೀಗೆ ಹಲವಾರು ಸಾಲುಗಳು ಅವರ ಧೈರ್ಯ, ಶೌರ್ಯ ಜೊತೆಗೆ ದೃಢನಿರ್ಧಾರವನ್ನು ಹೇಳುತ್ತದೆ. ಅವರ ಹಾರಾಟಕ್ಕೆ ಗಡಿ ಆಕಾಶವೇ.. ಏಕೆಂದರೆ, ಅದು ಎಲ್ಲೆ ಇಲ್ಲದ್ದು. ಈ ಹೋರಾಟಕ್ಕೆ ತಡೆಯೇ ಇಲ್ಲ. ತಡೆಯುವವರು ಬೇಕಾದರೆ ಬನ್ನಿರಿ ಎಂದು ಸವಾಲು ಹಾಕಿ ಕೆಡುಕು ಜನರನ್ನು ಆಹ್ವಾನಿಸುತ್ತಾರೆ. ಅಂತಹವರು ಬಂದರೆ ಅಂತಹವರ ಸ್ಮಶಾನದ ಮೇಲೆಯೇ ಹೊಸ ನಾಡೊಂದನ್ನು.. ಅದರಲ್ಲಿಯೂ ಸುಖದ ಬೀಡೊಂದನ್ನು ಕಟ್ಟುತ್ತೇವೆ ಎಂದು ಕೊಡುವ ಸಂದೇಶ ಮಾರ್ಮಿಕವೂ ಹೌದು ಅಗತ್ಯವೂ ಹೌದು. ಉತ್ಸಾಹ ತುಂಬುವ ಕವಿತೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ