ಮಂಗಳವಾರ, ಏಪ್ರಿಲ್ 21, 2026

ಏಕಲವ್ಯ (ಪುಸ್ತಕ ಯಾನ - 287)


ಪುಸ್ತಕದ ಶೀರ್ಷಿಕೆ : ಏಕಲವ್ಯ

ಲೇಖಕರು : ಡಾ|| ಸಿದ್ದಲಿಂಗಯ್ಯ

ಪ್ರಕಾಶಕರು : ಅಂಕಿತ ಪುಸ್ತಕ

ಮರು ಮುದ್ರಣ : 2003

ಪುಟಗಳು : 64

ಬೆಲೆ : 25 ರೂ. 


ಏಕಲವ್ಯನ ಕಥೆಯನ್ನು ಸಾಮಾನ್ಯವಾಗಿ ನಾವು ಆತ ತನ್ನ ಗುರುವಿಗೆ ಹೆಬ್ಬೆರಳನ್ನು ಅರ್ಪಿಸುವ ಸಂದರ್ಭದವರೆಗೆ ಮಾತ್ರ ಕೇಳಿರುತ್ತೇವೆ. ಏಕಲವ್ಯ ಮುಂದೆ ಹೇಗೆ ಬದುಕಿದ, ಆತನ ಬದುಕು ಹೇಗಿತ್ತು ಎಂಬುದರ ಕುರಿತು ಕುತೂಹಲವಂತೂ ಉಳಿದಿರುತ್ತದೆ. ಏಕಲವ್ಯನ ಕುರಿತಾದ ನಾಟಕಗಳು ಬಂದಿವೆ. ಇಂದು ನಾನು ಪರಿಚಯಿಸುತ್ತಿರುವ ಪುಸ್ತಕ ಡಾ|| ಸಿದ್ದಲಿಂಗಯ್ಯನವರ ಏಕಲವ್ಯ ನಾಟಕ. ಏಕಲವ್ಯನ ಕುರಿತಾಗಿ ಗೋವಿಂದ ಪೈ ಅವರ ಹೆಬ್ಬೆರಳು ಹಾಗೂ ಕುವೆಂಪು ಅವರ ಬೆರಳ್ಗೆ ಕೊರಳ್ ಓದಬೇಕಿದೆ. ಡಾ|| ಸಿದ್ದಲಿಂಗಯ್ಯನವರ 'ಏಕಲವ್ಯ' ನಾಟಕ ನಮಗೆ ಪಿ.ಯು.ಸಿಯಲ್ಲಿ ಕನ್ನಡದ ಪಠ್ಯದ ಭಾಗವೂ ಆಗಿತ್ತು. 


ಒಟ್ಟು 11 ದೃಶ್ಯಗಳ ನಾಟಕ. ಇದು ಕೇವಲ ಏಕಲವ್ಯ, ದ್ರೋಣ ಅಥವಾ ಅರ್ಜುನ ಅಥವಾ ಲೇಖಕರ ನೋಟದಿಂದ ಗ್ರಹಿಕೆಯಾಗಿ ಬರೆಸಿಕೊಂಡದ್ದಲ್ಲ.. ಬದಲಾಗಿ, ಅಲ್ಲಲ್ಲಿ ಹಲವಾರು ಪಾತ್ರಗಳಿವೆ. ನಾಟಕ ಶುರುವಾಗುವುದೇ ಕುರುಕ್ಷೇತ್ರ ಯುದ್ಧದ ದೃಶ್ಯದಿಂದ.

ಕುರುಕ್ಷೇತ್ರ ರಂಗದಲ್ಲಿ ಸೈನಿಕರು ಹೋರಾಟದಲ್ಲಿ ಮಗ್ನರಾಗಿದ್ದಾಗ ಹೋರಾಟ ತಾರಕಕ್ಕೆ ಮುಟ್ಟಿದಾಗ ಏಕಲವ್ಯ ಬಂದು ನಿಲ್ಲಿಸಿ ಎನ್ನುವ ಸಂಧರ್ಭ. 


ಆ ಸಂದರ್ಭದಲ್ಲಿ ಬರುವ ಹಾಡು ಕಾಡಿನ ಹೂವೊಂದು ಊರಿನ ಗುಡಿಯಲ್ಲಿ ಪೂಜೆ ಸಲ್ಲದೆ ಹೋಗುವ ಕತೆಯನ್ನು ಹೇಳುತ್ತದೆ.


ಗಿಳಿಯೊಂದು ಹಾಡಲು ಉಳಿದಂಥ ಮೃಗಗಳು 

ದನಿ ಕಿತ್ತುಕೊಂಡಂಥ ಕಥೆಯ ಕೇಳಿ 


ಎನ್ನುತ್ತಾ ಸೂಚ್ಯವಾಗಿ ಏಕಲವ್ಯನ ಕುರಿತಾದ ಪರಿಚಯ ಮಾಡಿಕೊಡುತ್ತಾರೆ. ಮೇಳದವರು, ಸೈನಿಕರು ಹಾಗೂ ಬೇಡರ ಮಾತುಕತೆಯಲ್ಲಿ ಕಾಡಿನ ನಾಶದ ಕಾಡಿನ ಮರಗಳನ್ನು ಕುಡಿಯುವ ಕಡಿಯುವ ಕುರಿತಾಗಿ.. ಬೇಡರು ಇದಕ್ಕೆಲ್ಲ ಉತ್ತರವಾಗಿ ಏಕಲವ್ಯನಿದ್ದಾನೆ ಎನ್ನುವ ಮಾತು ಹೇಳುತ್ತಾರೆ. ಏಕಲವ್ಯನ ಪೌರುಷದ ವರ್ಣನೆಯೊಂದಿಗೆ ಮೊದಲನೇ ದೃಶ್ಯ ಮುಕ್ತಾಯವಾಗುತ್ತದೆ


ದೃಶ್ಯ ಎರಡರಲ್ಲಿ ಕಾಡಿನ ಜನರು ಏಕಲವ್ಯನ ಬಳಿ ಬಂದು ಸೈನಿಕರ ದಾಂಧಲೆಗಳನ್ನು ಹೇಳುತ್ತಾರೆ. ನಂತರ, ಏಕಲವ್ಯ ತಾನು ಕಂಡ ಕನಸು ನಿಜವಾಯಿತು ಎಂದು ತನ್ನ ಶಕ್ತಿಯ ಮಿತಿಯನ್ನು ಅರಿತವನಂತೆ.. ತಾನು ಬಿಲ್ವಿದೆ ಕಲಿಯುವ ಆಸೆಯನ್ನು ತಾಯಿ ಹಾಗೂ ಮಾವನೊಡನೆ ಹೇಳಿಕೊಳ್ಳುವಾಗ ತಾಯಿ ಅದಕ್ಕೆ ಪುಷ್ಠಿ ಕೊಟ್ಟರೂ.. ಮಾವ "ಬಿಲ್ವಿದ್ಯೆ ಬೇಡರ ಹುಟ್ಟುಗುಣ. ಅರಸು ಮಕ್ಕಳಿಗೆ ಅದು ಕಲಿಕೆ. ಅರಸು ಮಕ್ಕಳಿಗೆ ಅದು ತೊಟ್ಟಬಟ್ಟೆ, ಬೇಡರಿಗೆ ಅದು ಮೈಗಂಟಿದ ಚರ್ಮ." ಅವರನ್ನು ಬೇಡುವುದು ಬೇಡವೆಂಬ ಮನದ ಮಾತನ್ನು ಹೊರ ಹಾಕುತ್ತಾರೆ. ಆದರೆ, ಏಕಲವ್ಯನ ಆಸೆ ಹಾಗೂ ಮಹತ್ವಾಕಾಂಕ್ಷೆಯೇ ಗೆದ್ದು ಬಿಲ್ವಿದ್ಯೆ ಕಲಿಯಲು ಹೊರಡುತ್ತಾನೆ. 


ದೃಶ್ಯ ಮೂರರಲ್ಲಿ ದ್ರೋಣಾಚಾರ್ಯರು ಬಿಲ್ವಿದ್ಯೆ ಬೋಧಿಸುವ ಸಂದರ್ಭದಲ್ಲಿ ಏಕಲವ್ಯ ಅಲ್ಲಿಗೆ ಹೋಗಿ ತಾನು ಕಂಡ ಕನಸಿನಲ್ಲಿ ಸುಳಿದ ಅವರಿಗೆ ನಮಸ್ಕರಿಸಲು ಹೋದಾಗ ಭೀಮ, ಅರ್ಜುನ, ದುರ್ಯೋಧನ ಹಾಗೂ ದ್ರೋಣರ ಮಾತುಕತೆ ಸಾಗುತ್ತದೆ. ಇಲ್ಲಿ ಏಕಲವ್ಯ ತಾನು ಬಿಲ್ಲು ವಿದ್ಯೆ ಕಲಿಯಲು ಶಾಸ್ತ್ರಸಮ್ಮತವಿಲ್ಲವೆಂದು ತಿಳಿದಾಗ ಧಿಕ್ಕಾರ ಹಾಕುವುದಾದರೂ ಯಾರಿಗೆ..? ಓದಿ ನೋಡಿ. 


ದೃಶ್ಯ ನಾಲ್ಕರಲ್ಲಿ.. ಅಪ್ಪನಿಗೆ ಬೇಡವಾದ ಏಕಲವ್ಯ ಮಗನಿಗೆ ಒಡನಾಡಿಯಾಗುವ ದೃಶ್ಯವಿದೆ. ಹೀಗೆ ಅವರಿಬ್ಬರ ಒಡನಾಟ ಯಾವುದಕ್ಕೆ ಮುನ್ನುಡಿಯಾಯಿತು ಹಾಗೂ ದ್ರೋಣರು ಅದಕ್ಕೆ ಪ್ರತಿಕ್ರಿಯಿಸಿದ ಬಗೆ ಹೇಗೆ ಎಂಬುದನ್ನು ಓದಿ ನೋಡಿ


ದೃಶ್ಯ ಐದರಲ್ಲಿ ದ್ರೋಣ ಹಾಗೂ ಭೀಷ್ಮರ ಮಾತುಕತೆ ಇದೆ. ಭೀಷ್ಮರು ತಮ್ಮ ಮೊಮ್ಮಕ್ಕಳು ಅನುಭವಿಸಲಿರುವ ದುರಂತವನ್ನು ಊಹಿಸಿರುವ ಚಿತ್ರಣ ಕಾಣುತ್ತದೆ. "ಲೋಕಕಲ್ಯಾಣಕ್ಕೆ ಅನಿವಾರ್ಯವಾದ ದುರಂತವೊಂದರ ಸಂಭವಕ್ಕಾಗಿ ನಾವೆಲ್ಲ ದುಡಿಯುತ್ತಿದ್ದೇವೆ" ಎನ್ನುವ ಭೀಷ್ಮರು ಹಾಗೂ "ಲೋಕದ ಅಪಮಾನ, ನಿಂದೆ ಅನ್ನದ ಹಂಗು, ಅಹಂಕಾರಗಳ ಜೊತೆಗೆ ಶ್ರದ್ಧೆ, ವಿನಯ, ನಿಷ್ಠೆ, ವಿಧೇಯತೆಗಳ ಸಂಘರ್ಷವನ್ನು ಹೆಚ್ಚಿಸುವ ಲೋಕಕಲ್ಯಾಣ ಅರ್ಥಹೀನವಲ್ಲವೇ..?" ಎನ್ನುವ ದ್ರೋಣರು ಕಾಣುತ್ತಾರೆ. ತಪ್ಪಿತಸ್ಥ ಭಾವದಲ್ಲಿ ತೊಳಲುತ್ತಿರುವ ದ್ರೋಣರು ಹಾಗೂ ಇದೆಲ್ಲವೂ ದಿವ್ಯನಿಯಾಮಕವೆನ್ನುವ ಭೀಷ್ಮರು.. ಇವರಿಬ್ಬರ ಮಾತುಕತೆಯ ಸೂಕ್ಷ್ಮವನ್ನು ಕಟ್ಟಿಕೊಟ್ಟಿದ್ದಾರೆ. 


ಆರನೇ ದೃಶ್ಯದಲ್ಲಿ ದ್ರೋಣರ ಪ್ರತಿಮೆಯನ್ನು ಏಕಲವ್ಯ ಪ್ರತಿಷ್ಠಾಪಿಸುವ ದೃಶ್ಯವಿದೆ ಹಾಗೂ ಹಾಡಿನ ಮೂಲಕ ಆತನ ಅಭ್ಯಾಸವಿದೆ. 


ಏಳನೇ ದೃಶ್ಯದಲ್ಲಿ ಗುರು ದ್ರೋಣರು ಏಕಲಕೆನ ಬಳಿ ಆತನ ಹೆಬ್ಬೆರಳನ್ನು ಗುರುದಕ್ಷಿಣೆಯಾಗಿ ಕೇಳುವ ಸನ್ನಿವೇಶ. ಇದಕ್ಕೆ ಮೂಲವಾದ ಘಟನೆ ಯಾವುದು..? ಅರ್ಜುನ ಹಾಗೂ ಏಕಲವ್ಯನ ತಾಯಿಯ ಪ್ರತಿಕ್ರಿಯೆ ಹೇಗಿದೆ ಎಂಬುದನ್ನು ಚಿತ್ರಿಸಿದ್ದಾರೆ.  


ಎಂಟನೇ ದೃಶ್ಯದಲ್ಲಿ ಸೈನಿಕರು ಕುರುಕ್ಷೇತ್ರ ಯುದ್ಧಕ್ಕೆ ತಯಾರಿ ನಡೆಸುತ್ತಿರುವ ಸಂದರ್ಭವಿದೆ. ಸೈನಿಕರ ನಡುವಿನ ಮಾತುಕತೆಯಲ್ಲಿ ಅವರು ಯುದ್ಧವನ್ನು ಕಾಣುವ ಪರಿಯ ಚಿತ್ರಣವಿದೆ.


ಒಂಬತ್ತನೇ ದೃಶ್ಯದಲ್ಲಿ ದುರ್ಯೋಧನ ಹಾಗೂ ಕರ್ಣರ ಮಾತುಕತೆ. ಅರ್ಜುನನ ಮೇಲೆ ಏಕಲವ್ಯನಿಗೆ ಅಗಾಧವಾದ ಸಿಟ್ಟಿರುವುದರಿಂದ ಆತ ಪಾಂಡವನನ್ನು ಬೆಂಬಲಿಸಲಾರ ಎನ್ನುವ ದುರ್ಯೋಧನ ಹಾಗೂ ನಮ್ಮ ಪಕ್ಷಕ್ಕೆ ಬರಲು.. ಗುರು ದ್ರೋಣರದ್ದೂ ಅದರಲ್ಲಿ ಪಾಲಿದೆಯಲ್ಲವಾ ಎನ್ನುವ ಕರ್ಣ. ಏಕಲವ್ಯನನ್ನು ಕೌರವರ ಪಕ್ಷಕ್ಕೆ ಬರಮಾಡಿಕೊಳ್ಳಲು ಆತನ ಜೊತೆಗೆ ಮಾತುಕತೆಗೆ ಹೋದವರು ಯಾರು..?


ದೃಶ್ಯ ಹತ್ತರಲ್ಲಿ ಯುಧಿಷ್ಠಿರ, ಕೃಷ್ಣ, ಅರ್ಜುನ ಹಾಗೂ ಭೀಮರ ಮಾತುಕತೆ. ಕುರುಕ್ಷೇತ್ರವನ್ನು ಕೃಷ್ಣ ತಪ್ಪಿಸಬಹುದಾಗಿತ್ತು ಎನ್ನುವ ಯುಧಿಷ್ಠಿರನಿಗೆ "ವಿನಾಶವಿಲ್ಲದೆ ಸೃಷ್ಟಿಯಿಲ್ಲ" ಎನ್ನುವ ಕೃಷ್ಣನ ನಿಲುವು ಹೇಗನ್ನಿಸುತ್ತದೆ..? ಭೀಮಾರ್ಜುನರು ಏಕಲವ್ಯನ ವಿಚಾರಕ್ಕೆ ಭಯಪಡುವ ಅಗತ್ಯವಿಲ್ಲ ಎನ್ನುವಾಗ.. ಯುಧಿಷ್ಠಿರ ಏಕಲವ್ಯನ ವೀರತನವನ್ನು ಹೊಗಳಿ ಆತನ ಮುಗ್ಧತೆಯನ್ನು ಮೆಚ್ಚುತ್ತಾನೆ. ಅದನ್ನು ಕೌರವರು ದುರುಪಯೋಗಪಡಿಸಿಕೊಳ್ಳುವುದು ಸಲ್ಲದು ಎನ್ನುವಾಗ ಕೃಷ್ಣ ಯಾರನ್ನು ಬೆಂಬಲಿಸುತ್ತಾನೆ ಹಾಗೂ ಕೃಷ್ಣನ ಮನಸ್ಸಿನಲ್ಲಿದ್ದ ನಿಲುವೇನು..?


ದೃಶ್ಯ 11 ಈ ನಾಟಕದ ಕೊನೆಯ ದೃಶ್ಯ ಹಾಗೂ ನಿರ್ಣಾಯಕ ದೃಶ್ಯ. ಏಕಲವ್ಯನನ್ನು ಪಾಂಡವರ ವತಿಯಿಂದ ಭೇಟಿ ಮಾಡಲು ಹೊರಟವರು ಹಾಗೂ ಕೌರವರ ಕಡೆಯಿಂದ ಭೇಟಿ ಮಾಡಲು ಹೊರಟವರು ಆತನೊಡನಾಡುವ ಮಾತುಕತೆಗಳು ಹಾಗೂ ಏಕಲವ್ಯನ ತೀರ್ಮಾನ ಇದರಲ್ಲಿದೆ.


ಏಕಲವ್ಯನ ಅಚಲ ನಿರ್ಧಾರ, ತಾಳ್ಮೆ ಹಾಗೂ ಆತನಲ್ಲಿ ಮಹತ್ವಾಕಾಂಕ್ಷೆಯ ಬದಲು ರಕ್ಷಣಾ ಮನೋಭಾವ ಹೆಚ್ಚು ಇಷ್ಟವಾಯಿತು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ