ಪುಸ್ತಕದ ಶೀರ್ಷಿಕೆ : ನಂ. ೬೭ ಹ್ಯಾರಿಸ್ ರಸ್ತೆ
ಲೇಖಕರು : ನವರತ್ನರಾಮ್
ಪ್ರಕಾಶಕರು : ಹೇಮಂತ ಸಾಹಿತ್ಯ
ಪ್ರಥಮ ಮುದ್ರಣ : 1990
ಎರಡನೇ ಮುದ್ರಣ : 2013 (ನನ್ನ ಓದಿಗೆ ಸಿಕ್ಕಿದ್ದು)
ಡಿಸೆಂಬರ್ 3 ನವರತ್ನರಾಮ್ ಅವರ ಜನ್ಮದಿನ.
ನಂ. ೬೭ ಹ್ಯಾರಿಸ್ ರಸ್ತೆ ಇದು ನವರತ್ನರಾಮ್ ಅವರು ಬರೆದಿರುವ ಹಾಸ್ಯ ಶೈಲಿಯ ಕಾದಂಬರಿ. ಹಾಗೆಂದು, ಇದು ಸಂಪೂರ್ಣ ಹಾಸ್ಯಮಯ ಕಾದಂಬರಿಯಲ್ಲ. ಇಲ್ಲಿನ ಸಂಭಾಷಣೆಗಳು ಮುದ ನೀಡುವಂತೆ ಹಾಸ್ಯ ಶೈಲಿಯಲ್ಲಿ ರಚಿತವಾಗಿವೆ. ಹೂವು ದೇವರ ಸೇವೆಗೆ ಪುಸ್ತಕದಲ್ಲಿರುವ ಮತ್ತೊಂದು ಕಾದಂಬರಿ ಇದು. (ಈಗಾಗಲೇ ಹೂವು ದೇವರ ಸೇವೆಗೆ ಕಾದಂಬರಿಯನ್ನು ಪರಿಚಯಿಸಿದ್ದೇನೆ)
ರಾಜೇಶನ ತಂದೆ ಕೋದಂಡರಾಮಯ್ಯನವರು ಶ್ರೀರಂಗಪಟ್ಟಣದ ಬಳಿಯ ಹಳ್ಳಿಯಲ್ಲಿ 60 ಎಕರೆ ಗದ್ದೆಯ ಒಡೆಯರಾಗಿ, ಬಂಗಾರದ ಬೆಳೆಯನ್ನೇ ಬೆಳೆಯುತ್ತಿದ್ದರೂ.. ಅವರು ತೃಪ್ತರಲ್ಲ. ಬೇರೆ ರೈತರ ಗದ್ದೆಗಳಲ್ಲಿ ಬೆಳೆಯುವುದಕ್ಕಿಂತ ಹೆಚ್ಚಾಗಿ ಕಾಳು ಬಂದರೂ.. ಅವರ ಕೊರಗು ತಪ್ಪುತ್ತಿರಲಿಲ್ಲ. ಆಸೆಯೆಂಬುದು ಅವರ ಜೀವನದಲ್ಲಿ ತಪ್ಪಿಯೇ ಇರಲಿಲ್ಲ. ಎಷ್ಟು ಬಂದರೂ ಸಾಲದು. ಆದರೆ, ಭೂಮಿತಾಯಿಯ ಬಗ್ಗೆ ಮಾತ್ರ ಬಹಳ ಅಭಿಮಾನ. ಬ್ಯಾಂಕಿಗಿಂತ ಭೂಮಿಯೇ ವಾಸಿ ಎಂಬ ಅವರ ಆಲೋಚನಾಲಹರಿ ಅಚ್ಚರಿ ಹುಟ್ಟಿಸುತ್ತದೆ. ಇದಷ್ಟೇ ಅಲ್ಲದೆ.. ಬಡ್ಡಿಗೆ ಹಣವನ್ನು ಸಾಲವಾಗಿ ಕೊಡುವ ವ್ಯವಹಾರವನ್ನೂ ಪ್ರಾರಂಭಿಸಿದರು. ಅದೂ ತಮ್ಮದೇ ಭೂಮಿಯನ್ನು ಉಳುವ ಬಡರೈತರಿಗೆ ವಿಪರೀತ ಬಡ್ಡಿಯ ದರದಲ್ಲಿ ಸಾಲ ಕೊಡುತ್ತಿದ್ದರು.
ಗಂಡನ ಈ ಅತಿಯಾಸೆ ಹಾಗೂ ಜಿಪುಣಬುದ್ಧಿ ಪಾರ್ವತಮ್ಮನವರಿಗೆ ಹಿಡಿಸುತ್ತಿರಲಿಲ್ಲ. ಅವರು ಬುದ್ಧಿ ಹೇಳುತ್ತಿದ್ದರೂ ಕೋದಂಡರಾಮಯ್ಯನವರು ಮಾತ್ರ ಬದಲಾಗುವಂತಿರಲಿಲ್ಲ.
ಕೋದಂಡರಾಮಯ್ಯ ಹಾಗೂ ಪಾರ್ವತಮ್ಮ ದಂಪತಿಗಳಿಗೆ ಇರುವುದು ಒಬ್ಬನೇ ಮಗ ರಾಜೇಶ. ಆತನಿಗೆ ಕೊಡುವ ಹಣದ ವಿಚಾರದಲ್ಲಿಯೂ ಬಹಳ ಬಿಗಿಯಾಗಿದ್ದರು ಕೋದಂಡರಾಮಯ್ಯನವರು. ಹಣದ ಮೇಲೆ ಅತಿಯಾಸೆ ಇದ್ದವರು ಅದನ್ನು ಡಬಲ್ ಮಾಡಿಕೊಳ್ಳುವ ವ್ಯವಹಾರ ಮಾಡುತ್ತಿದ್ದ ಒಬ್ಬನ ಮೋಸದ ಜಾಲಕ್ಕೂ ಸಿಲುಕಿದರು. ಅದಾದ ನಂತರವಂತೂ ಅವರ ಲೇವಾದೇವಿಯ ವ್ಯವಹಾರವನ್ನು ಇನ್ನಷ್ಟು ಹೆಚ್ಚಿಸಿ, ಬಡ್ಡಿಯನ್ನು ನಿಷ್ಕರುಣೆಯಿಂದ ವಸೂಲಿ ಮಾಡುವುದರಲ್ಲಿ ನಿಸ್ಸೀಮರಾದರು.
ರಾಜೇಶ ಬಿ.ಎಸ್ಸಿ ಫೈನಲ್ ಓದುವಷ್ಟರಲ್ಲಿ ಸಾಹುಕಾರ್ ಕೋದಂಡಯ್ಯನವರಾಗಿದ್ದರು. ಸಾಹುಕಾರರೆಂದ ಮೇಲೆ ಬಸ್ಸು, ಲಾರಿಯಲ್ಲಿ ಓಡಾಡುವುದು ಸಾಧ್ಯವೇ..? ಹಾಗಾಗಿ ಅವರಿವರ ಮಾತು ಕೇಳಿ ಕಾರು ಮನೆಗೆ ಬಂದಿತು. ಫಿಯೆಟ್ ಕಾರು ಬಂದಮೇಲೆ ಹೊಸ ಸಮಸ್ಯೆಯಾದದ್ದು ಡ್ರೈವರ್ ನದ್ದು. ಆದರೆ, ಅದಕ್ಕೆಂದು ಯಾರನ್ನಾದರೂ ನೇಮಿಸಿಕೊಂಡರೆ ಸಂಬಳ ನೀಡಬೇಕಿತ್ತು. ಹಾಗಾಗಿ, ಅವರೇ ಕಲಿಯುವ ಆಲೋಚನೆ ಮಾಡಿದರೂ ಅದು ಸಾಧ್ಯವಿರಲಿಲ್ಲವಾದ್ದರಿಂದ.. ರಾಜೇಶನ ನೆನಪಾಗಿ ರಾಜೇಶನೇ ಕಾರು ಕಲಿತ. ಮುಂದೆ ಪೆಟ್ರೋಲ್ ಹೊರೆಯೆನ್ನಿಸಿತು. ಇದಾವುದರ ಲೆಕ್ಕಾಚಾರವೂ ಗೊತ್ತಿಲ್ಲದ ಸಾಹುಕಾರರಿಗೆ ಇದೆಲ್ಲವೂ ಹೊರೆಯಾಗತೊಡಗಿತ್ತು. ಆದರೂ ಕಾರು ಮಾರುವಂತಿರಲಿಲ್ಲ. ಇದು ಸಾಹುಕಾರರ ಆಲೋಚನಾ ಶಕ್ತಿ ಹಾಗೂ ನಡೆಯ ಒಂದು ಉದಾಹರಣೆಯಷ್ಟೇ..
ರಾಜೇಶನಿಗೆ ಮುಂದೆ ಇಂಜಿನಿಯರ್ ಆಗುವ ಆಸೆಯಿತ್ತು. ಆದರೆ, ಕೋದಂಡಯ್ಯನವರು ಡೊನೇಷನ್ ಕೊಡುವ ಮಾತೆತ್ತಿದರೆ ಹೌಹಾರುತಿದ್ದರು. ಆದರೆ, ಮೆರಿಟ್ ಸೀಟು ಗಳಿಸಿದ ರಾಜೇಶ ಬೆಂಗಳೂರಿಗೆ ಹೊರಟು ನಿಂತ. ಆದರೆ, ಕಾಲೇಜು ಹಾಸ್ಟೆಲ್ ಭರ್ತಿಯಾಗಿತ್ತು. ಈಗ ಉಳಿಯುವ ವ್ಯವಸ್ಥೆಗೆ ಅಷ್ಟು ಹಣ ಖರ್ಚು ಮಾಡಲು ಸಿದ್ದರಿರದ ಕೋದಂಡಯ್ಯನವರು ನಾಜೂಕಾಗಿಯೇ ಹೋಟೆಲ್ ನಲ್ಲಿ ಇರಬೇಡವೆಂದು.. ರೂಮು ಮಾಡಿಕೋ ಎಂದು ಬುದ್ಧಿವಾದವನ್ನು ಧಾರಾಳವಾಗಿ ಕೊಟ್ಟರು. ತಾಯಿ ಮಾತ್ರ ಯಾವುದಕ್ಕೂ ತಾಪತ್ರಯ ಮಾಡಿಕೊಳ್ಳಬೇಡ, ದುಡ್ಡು ಸಾಲದಾದಾಗ ನನಗೆ ಬರೆ ಎಂದು ಮುಚ್ಚಟ್ಟೆಯಿಂದ ಗುಟ್ಟಾಗಿ ಹಣ ಕೊಟ್ಟಿದ್ದರು. ತಾಯಿಯ ಮನಸೇ ಹಾಗಲ್ಲವೇ..?!
ಇನ್ನು ಮುಂದೆ ರಾಜೇಶನ ವಿವರಗಳೇ ಹೆಚ್ಚು ಕಾದಂಬರಿಯಲ್ಲಿ. ರಾಜೇಶನಿಗೆ ಅದಾಗಲೇ ಕಿಚ್ಚಿಯೊಡನೆ ಸ್ನೇಹವಾಗಿತ್ತು. ಹುಡುಗಿಯರು ಸಹಾ ಕಿಚ್ಚಿಯೊಡನೆ ಯಾವ ಸಂಕೋಚವೂ ಇಲ್ಲದೆ ಸಲುಗೆಯಿಂದ ಬೆರೆಯುತ್ತಿದ್ದರು. ಇದೆಲ್ಲದಕ್ಕೂ ಅವನ ಸ್ನೇಹಮಯಿ ಹಾಗೂ ನಿಷ್ಕಲ್ಮಶವಾದ ಸ್ವಭಾವವೇ ಕಾರಣವಾಗಿತ್ತು. ಕಿಚ್ಚಿಯ ತಂದೆ ಚೆನ್ನಗಿರಿಯಲ್ಲಿ ಹೈಸ್ಕೂಲ್ ಹೆಡ್ ಮಾಸ್ಟರ್ ಆಗಿದ್ದವರು. ಸರ್ವಿಸಿನಲ್ಲಿದ್ದಾಗಲೇ ತೀರಿಕೊಂಡಿದ್ದರು. ತಾಯಿಗೆ ಪೆನ್ಷನ್ ಬರುತ್ತಿದ್ದರೂ.. ಕಿಚ್ಚಿಯ ಓದಿಗೆ ಆ ಹಣ ಸಾಕಾಗುತ್ತಿತ್ತು. ಇರುವ ಒಂದೆಕರೆ ಗದ್ದೆಯಿಂದ ತಾಯಿ ಬದುಕುತ್ತಿದ್ದರು. ಬಡತನದಲ್ಲಿದ್ದರೂ ಆತನ ತಾಯಿ ಆತನಿಗೆ ತೋರುತ್ತಿದ್ದ ಮಮತೆಯಂತೂ ಹೃದಯ ತುಂಬಿ ಬರುವಂತೆ ಮಾಡುತ್ತದೆ.
ದೀಪಾ, ಕಿಚ್ಚಿ ಹಾಗೂ ರಾಜೇಶ ಆತನ ರೂಮಿಗೆ ಭೇಟಿ ನೀಡಿ, ಆತನ ಮನೆಯ ಬಗ್ಗೆ ತಿಳಿದುಕೊಂಡರು. ಕಿಚ್ಚಿಯ ಗೂಡು ಅರ್ಥಾತ್ ರೂಮು ಇದ್ದದ್ದು ವಿಜಯನಗರ ಬಡಾವಣೆಯಲ್ಲಿ. ಮತ್ತೆ ಅಲ್ಲಿಂದ ಹೊರಟ ರಾಜೇಶ ಮೆಜೆಸ್ಟಿಕ್ ಗೆ ಹೋಗುವ ಬಸ್ಸಿಗಾಗಿ ಕಾಯುತ್ತಿರುತ್ತಾನೆ. ಆಗ ಕಿಚ್ಚಿಯ ಮಾತು, ನಿಷ್ಕಪಟ ಸ್ವಭಾವ, ಹಾಸ್ಯಪ್ರಿಯತೆ, ಆದರಿಸಿದ ರೀತಿ, ತಾಯಿಯ ಕುರಿತ ಗೌರವ ಎಲ್ಲದರಲ್ಲೂ ಎಂತಹಾ ಶ್ರೀಮಂತಿಕೆ ಎಂದು ತನ್ನೊಡನೆ ಬೇಡವೆಂದರೂ ಹೋಲಿಕೆ ಮಾಡಿಕೊಂಡ. ಆದರೆ, ಅದೇ ಯೋಚನೆಯ ಅನ್ಯಮನಸ್ಕತೆಯಿಂದ ಹೊರಬರುವಷ್ಟರಲ್ಲಿ ಆತನಿಗಾದ ಅನುಭವ ವಿಲಕ್ಷಣವೆನಿಸಿತ್ತು.
ಅಂತಹಾ ವಿಲಕ್ಷಣ ವ್ಯಕ್ತಿ ಈಗಲೂ ಬೆಂಗಳೂರಿನಂತಹಾ ನಗರದಲ್ಲಿ ಇದ್ದಾರೆಯೇ ಅಥವಾ ಹಿಂದಿನ ಶತಮಾನದವರು ಯಾರಾದರೂ ಬಂದಿದ್ದಾರಾ ಅಥವಾ ಅದು ಪ್ರೇತವೇ..? ಎಂದು ಅನುಮಾನಗೊಂಡ. ಆರಡಿ ಎತ್ತರವಿದ್ದ.. 60ಕ್ಕೂ ಹೆಚ್ಚು ವಯಸ್ಸಾಗಿದ್ದ ಅವರು ಹ್ಯಾಟ್ ಅನ್ನೂ ತೆಗೆಯದೆ, ಆಟೋದೊಳಗೆ ಕೂರಲು ತಡವರಿಸುವವರೆಗೂ ಆತನಿಗಾದ ಅನುಭವ ಆತನನ್ನು ಭಯಪಡಿಸಿತ್ತು. ಆತನ ಕಲ್ಪನೆಗಳಂತೂ ನಗೆ ತರಿಸುತ್ತವೆ. ಆದರೆ, ಆ ಮುದುಕರು ಕುಳಿತಿದ್ದ ಜಾಗದಲ್ಲಿ ಮಂದ ಬೆಳಕಿನಲ್ಲೂ ಹೊಳೆಯುವ ಚಿನ್ನದ ಪ್ರೇಮಿನ ಕನ್ನಡಕ, ಅದರ ಪಕ್ಕದಲ್ಲಿ ತೀರಾ ಹಳೆಯ ಕಾಲದ ದೊಡ್ಡ ಪರ್ಸು ಕಂಡವನು.. ಬಸ್ಸು ಬರುವ ಸದ್ದು ಕೇಳಿ ಜೀವ ಬಂದಂತಾಗಿ ಅವೆರಡನನ್ನೂ ತೆಗೆದು ಆತುರದಿಂದಲೇ ಜೇಬಿಗಿಟ್ಟುಕೊಂಡ.
ನಂತರ, ಆತನ ಕುತೂಹಲ ಇನ್ನೂ ಹೆಚ್ಚಾಗಿ ಆ ಪರ್ಸನ್ನು ತೆಗೆದು ನೋಡಿದಾಗ ಅಲ್ಲಿ ಆತನಿಗೊಂದು ವಿಸಿಟಿಂಗ್ ಕಾರ್ಡ್ ಸಿಕ್ಕಿತ್ತು. ಅದರ ಮೇಲೆ
ಆರ್. ಎಸ್. ಎಸ್ ರಾವ್ ಬಿ.ವಿ.ಎಸ್ಸಿ, ಎಂ.ವಿ.ಎಸ್ಸಿ (ಲಂಡನ್) 67 ಹ್ಯಾರಿಸ್ ರೋಡು, ಬೆಂಗಳೂರು ಕಂಟೋನ್ಮೆಂಟ್ ಎಂಬ ವಿಳಾಸವಿತ್ತು.
ಇದು ಅವರದ್ದೇ ಹೆಸರಾಗಿರಬಹುದಾ..? ಫಾರಿನ್ ರಿಟರ್ನ್ ಹಾಗೂ ವಿದ್ಯಾವಂತರಾಗಿ ಕಾಣುವ ಇವರು ಈಗಲೂ ಕಂಟೋನ್ಮೆಂಟಿನ ಹ್ಯಾರಿಸ್ ರಸ್ತೆಯಲ್ಲಿ ಇನ್ನೂ ಜೀವಂತವಾಗಿದ್ದಾರೋ ಇಲ್ಲ ದಿವಂಗತರೆಂಬ ಪಟ್ಟ ಪಡೆದು ಗೋರಿಯಲ್ಲಿದ್ದಾರೋ ಎಂಬ ಆಲೋಚನೆ. ಬ್ರಿಟಿಷರ ಕಾಲದಲ್ಲಿದ್ದ ಹ್ಯಾರಿಸ್ ರಸ್ತೆ ಈಗಲೂ ಬೆಂಗಳೂರು ದಂಡಿನ ಪ್ರದೇಶದಲ್ಲಿರಲು ಸಾಧ್ಯವೇ..? ಅಂತೂ ಈ ಆಲೋಚನೆಗಳನ್ನೇ ಹೊತ್ತವನಿಗೆ ಅರೆನಿದಿರೆಯಲ್ಲಿಯೂ ಅದೇ ಯೋಚನೆ.
ಮಾರನೇ ದಿನ ಹಿಂದಿನ ದಿನದ ವಿಚಾರಗಳನ್ನೆಲ್ಲಾ ಕಿಚ್ಚಿಯ ಜೊತೆ ಹಂಚಿಕೊಳ್ಳುವಾಗ ಇದನ್ನೂ ಹಂಚಿಕೊಂಡ. ಅವರ ಕಲ್ಪನೆಗಳು ರೆಕ್ಕೆ-ಪುಕ್ಕ ಪಡೆಯತೊಡಗಿದವು. ಸಹಪಾಠಿಯಾಗಿದ್ದ ಗ್ರೇಸಿ ಈ ಹ್ಯಾರಿಸ್ ರಸ್ತೆ ಇದೆ ಎಂದಾಗ ಅಲ್ಲಿಗೆ ಹೋಗುವ ಮನಸ್ಸಾಗಿ ಆಟೋರಿಕ್ಷದಲ್ಲಿ ಹೊರಟವನಿಗೆ.. ಆಟೋರಿಕ್ಷಾದವನೇ ಎಲ್ಲಿದೆ ಆ ರೋಡು ಎಂದು ಅನುಮಾನಿಸಿದ.
ಹಾಗಾದರೆ ನಂ. ೬೭ ಹ್ಯಾರಿಸ್ ರಸ್ತೆ ನಿಜಕ್ಕೂ ಇತ್ತೇ..? ಆ ಮುದುಕರ ಹಿನ್ನೆಲೆಯೇನು..? ರಾಜೇಶ ಹಾಗೂ ಕಿಚ್ಚಿಗೆ ಆದ ವಿಭಿನ್ನ ಅನುಭವಗಳೇನು..? ರಾಜೇಶನ ತಂದೆ ಬದಲಾದರೇ..? ಎಲ್ಲದಕ್ಕೂ ಉತ್ತರ ತಿಳಿಯಲು ಓದಿ ಈ ಕಾದಂಬರಿಯನ್ನು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ