ಪುಸ್ತಕದ ಶೀರ್ಷಿಕೆ : ಯಾರ ಗೆಲುವು
ಲೇಖಕರು : ಕುಮುದ
ಪ್ರಕಾಶಕರು : ಲಹರಿ ಪ್ರಕಾಶನ
ಪ್ರಥಮ ಮುದ್ರಣ : 2009
ಇದು ಕುಮುದ ಅವರ ಯಾರ ಗೆಲುವು ? ಮತ್ತು ಅಭೀಷ್ಟ ಎಂಬ ಎರಡು ಕಾದಂಬರಿಗಳ ಸಂಯುಕ್ತ ಸಂಪುಟ. ನಾನು ಈಗ ಪರಿಚಯಿಸುತ್ತಿರುವ ಕಾದಂಬರಿ "ಯಾರ ಗೆಲುವು ?"
ವಿಶಾಲ್ ಗೆ ತನ್ನ ಪತ್ನಿ ವಿಶಾಖಳ ನಡೆಯಿಂದ ಬಹಳ ಬೇಸರವಾಗಿತ್ತು. ಆಕೆ ಮನೆಯಲ್ಲಿ ಹಠ ಹಿಡಿದು ಕೂತಿದ್ದಳು. ಪತ್ನಿಯ ಮಾತಿಗೆ ಬೆಲೆಕೊಟ್ಟರೆ ಜನ್ಮ ಕೊಟ್ಟ ತಂದೆಯನ್ನು ದೂರ ಮಾಡಿಕೊಳ್ಳಬೇಕಾಗಿ ಬರುತ್ತಿತ್ತು. ಅವಳ ಮಾತಿಗೆ ಒಪ್ಪದಿದ್ದರೆ, ಮನೆಯ ನೆಮ್ಮದಿಯೇ ಹಾಳಾಗಿ ಹೋಗುತ್ತಿತ್ತು. ಏನು ಮಾಡಲೂ ಮನಸ್ಸಿಲ್ಲ ಆತನಿಗೆ. ವಿಶಾಖಳ ನಡತೆ ಆತನಿಗೆ ಢಾಳಾಗಿಯೇ ಕಾಣಿಸುತ್ತಿತ್ತು. ತಂದೆಯ ಕುರಿತು ಸ್ವಲ್ಪವೂ ಪ್ರೀತಿ, ಮಮತೆ, ಗೌರವ ಇಲ್ಲದಂತೆ ವರ್ತಿಸುತ್ತಿದ್ದಳು. ಮೊದಮೊದಲು ಹಿಂದೆ ಅದನ್ನೆಲ್ಲಾ ಹೀಯಾಳಿಸಿ ಮಾತನಾಡುತ್ತಿದ್ದರೆ.. ಈಗ ಎದುರಿಗೆ ಹಂಗಿಸುತ್ತಿದ್ದಳು. ಆದರೆ, ತನ್ನ ತಂದೆ ಸೊಸೆಯ ಬಗ್ಗೆ ಒಂದು ಮಾತನಾಡದೆ, ದೂರದೇ ಇದ್ದದ್ದು ಆತನಿಗೆ ಅಚ್ಚರಿಯ ಜೊತೆಗೆ ಮಾನಸಿಕ ಹಿಂಸೆಯನ್ನು ಸಹಾ ನೀಡುತ್ತಿತ್ತು. ಎಲ್ಲವನ್ನು ನೋಡಿಯೂ ನೋಡದಂತೆ.. ಕೇಳಿಯೂ ಕೇಳದಂತೆ ಇರುವುದು ಆತನಿಗೆ ಕಷ್ಟವೇ.. ತಂದೆ-ತಾಯಿಯರು ಪಟ್ಟ ಕಷ್ಟ, ಬಡತನದ ಬದುಕು ಆತನಿಗೆ ಗೊತ್ತಿಲ್ಲದೇನಲ್ಲ.
ವಿಶಾಲ್ ನ ತಂದೆ ಗೋವಿಂದರಾವ್ ರವರು ಸರ್ಕಾರಿ ನೌಕರಿಯಲ್ಲಿದ್ದರು. ಪಿ.ಡಬ್ಲ್ಯು.ಡಿ ಯಲ್ಲಿ ಗುಮಾಸ್ತರು. ಆದರೆ, ನಿಯತ್ತಾಗಿ ತಮ್ಮ ಕೆಲಸವನ್ನು ಮಾಡುತ್ತಿದ್ದವರು. ಗಿಂಬಳಕ್ಕೆ ಆಸೆ ಪಟ್ಟವರಲ್ಲ. ಆದರೂ.. ಒಮ್ಮೆ ತಮ್ಮದಲ್ಲದ ತಪ್ಪಿಗೆ ಸಸ್ಪೆಂಡ್ ಆಗಿ ಮನೆಯಲ್ಲಿರಬೇಕಾದ ಸಂದರ್ಭ ಒದಗಿ ಬಂದಿತ್ತು. ಆ ಸಮಯದಲ್ಲಿ ವಿಶಾಲ್ ತಾಯಿ ಅಡುಗೆ ಕೆಲಸಗಳನ್ನು ಮಾಡಿ ಮನೆ ನಿರ್ವಹಣೆ ಮಾಡುತ್ತಿದ್ದದ್ದು ನೆನಪಾಗಿತ್ತು ಆತನಿಗೆ.
ಗೋವಿಂದರಾವ್ ಅವರ ಮನೆಯಲ್ಲಿ ಆತನ ತಂದೆ-ತಾಯಿ ಚಿಕ್ಕಂದಿನಲ್ಲಿಯೇ ತೀರಿ ಹೋಗಿದ್ದರು. ಆಗಿನ್ನೂ ಎಸ್.ಎಸ್.ಎಲ್.ಸಿ ಓದುತ್ತಿದ್ದ ಇವರಿಗೆ ಮೂವರು ಜನ ತಂಗಿಯರು ಹಾಗೂ ಒಬ್ಬ ತಮ್ಮನ ಜವಾಬ್ದಾರಿ ಹೆಗಲೇರಿತ್ತು. ಮನೆಯಲ್ಲಿ ಎಲ್ಲರನ್ನು ನೋಡಿಕೊಳ್ಳಲು ಸೋದರತ್ತೆ ಜಾನಕಿಬಾಯಿ ಇದ್ದರು. ಆಕೆಗೆ ಗಂಡ ಸತ್ತು, ಮಕ್ಕಳಿಲ್ಲದರಿಂದ ಇವರ ಮನೆ ಆಶ್ರಯಕ್ಕೆ ಬಂದಿದ್ದರು.
ಗೋವಿಂದರಾವ್ ಅವರ ತಂಗಿಯರಾದ ಹೇಮ,ರಮಾ, ರಾಗಿಣಿಯರನ್ನು ಮದುವೆ ಮಾಡಿ ಬಾಣಂತನ ಮಾಡಿ ಎಲ್ಲರಿಗೂ ನೆಲೆ ಮಾಡಿದ ನಂತರ ಸೋದರತ್ತೆಯ ಮನಸ್ಸಿನಲ್ಲಿ ಕೊರೆಯುತ್ತಿದ್ದ ವಿಚಾರದ ಕುರಿತಾಗಿ ಯೋಚಿಸಿದ್ದರು. ಅದೆಂದರೆ.. ಗೋವಿಂದರಾವ್ ಅವರ ಮದುವೆ. ಈಗಾಗಲೇ ಮನೆಯ ಜವಾಬ್ದಾರಿಯಿಂದ ಮದುವೆ ತಡವಾಗಿತ್ತು. ಇವರ ಮನೆಯ ಪರಿಸ್ಥಿತಿ ಹಾಗೂ ಸಂಬಳವನ್ನು ನೋಡಿ ಎಷ್ಟೋ ಜನ ಹೆಣ್ಣುಮಕ್ಕಳು ಇವರ ಮದುವೆಯಾಗಲು ನಿರಾಕರಿಸುತ್ತಿದ್ದರು. ಎಲ್ಲವನ್ನೂ ತಿಳಿಸಿ ಮದುವೆಯಾಗಬೇಕು ಎನ್ನುವ ನಿರ್ಧಾರ ಗೋವಿಂದರಾವ್ ಅವರದ್ದು. ಅಲ್ಲದೇ ಅತ್ತೆಯನ್ನು ಚೆನ್ನಾಗಿ ನೋಡಿಕೊಳ್ಳುವ ಹುಡುಗಿ ಬೇಕಾಗಿತ್ತು ಅವರಿಗೆ.
ಬಹಳ ಪ್ರಯತ್ನದ ನಂತರ ಪದ್ಮಾವತಿ ಗೋವಿಂದರಾವ್ ಅವರಿಗೆ ಕೂಡಿ ಬಂದಿದ್ದಳು. ಅವರ ಮನೆಯಲ್ಲಿ ಆರು ಜನ ಮಕ್ಕಳು. ಪದ್ಮಾವತಿ ಮೂರನೆಯವಳು. ತಂಗಿಗೂ ಮದುವೆಯಾಗಿತ್ತು. ಪದ್ಮಾವತಿಯ ಮನೆಯಲ್ಲಿ ಅವರ ತಾಯಿ ಆಗಾಗ ಹಂಗಿಸುತ್ತಿದ್ದುದರಿಂದ ಹಾಗೂ ವಿದ್ಯೆ ತಲೆಗೆ ಹತ್ತದಿದ್ದರಿಂದ ಆಕೆ ಸೋಮಾರಿಯಾಗಿ ಬೆಳೆದಿದ್ದಳು. ಇದನ್ನು ಬೇರೆಯ ರೀತಿ ಹೇಳಿದ್ದರು ಮದುವೆಯ ದಲ್ಲಾಳಿ.
ರಾಜಾರಾಂ ಹಾಗೂ ಮೀರಾಬಾಯಿ ದಂಪತಿಗಳಿಗೆ ತಮ್ಮ ಮಗಳನ್ನು ಆದಷ್ಟು ಬೇಗ ಸಾಗ ಹಾಕಿದ್ದರೆ ಸಾಕಾಗಿತ್ತು. 12 ವರ್ಷ ವಯಸ್ಸಿನ ಅಂತರವಿದ್ದರೂ ಅವರು ಲೆಕ್ಕಿಸಿರಲಿಲ್ಲ. ಅಲ್ಲದೇ ಹುಡುಗನ ಮನೆಯವರ ಸಾಧುತನವನ್ನು, ಮುಗ್ಧತೆಯನ್ನು ಉಪಯೋಗಿಸಿಕೊಂಡು ಮಗಳಿಗೆ ಏನನ್ನೂ ಮಾಡದೆ ಸಾಗ ಹಾಕಿದ್ದರು ಅವರು.
ಈ ಎಲ್ಲವೂ ಗೋವಿಂದರಾವ್ ಅವರ ತಂಗಿಯರ ದೃಷ್ಟಿಯಲ್ಲಿ ಆಡಿಕೊಳ್ಳುವ ವಿಚಾರವಾಗಿತ್ತು. ವಯಸ್ಸಿನ ಅಂತರದಿಂದ ಪತ್ನಿಯ ಇಷ್ಟಾನಿಷ್ಟಗಳನ್ನು ಗಣನೆಗೆ ತೆಗೆದುಕೊಳ್ಳದ ಗಂಡ. ಅಲ್ಲಿಗೂ ಇಲ್ಲಿಗೂ ತೀರಾ ವ್ಯತ್ಯಾಸವನ್ನೇನು ಕಾಣದ ಪದ್ಮಾವತಿ ದಿನೇದಿನೇ ಒರಟಾಗುತ್ತಾ ಹೋದಳು. ಪ್ರತಿನಿತ್ಯ ಮನೆ ಅಶಾಂತಿಯ ಬೀಡಾದಾಗ ತಾನು ಯಾಕಾದರೂ ಮದುವೆಯಾದೆ ಎಂದು ಆಲೋಚಿಸುವಂತಾಗಿತ್ತು ಗೋವಿಂದರಾವ್ ಅವರಿಗೆ. ಆದರೆ, ಜಾನಕಿಬಾಯಿಯವರ ಗುಣ ಆಕೆಯನ್ನು ತಿದ್ದುವುದರಲ್ಲಿ ಗೆದ್ದಿತ್ತು. ವಿಚಾರವನ್ನು ಅರ್ಥ ಮಾಡಿಕೊಂಡ ಅವರು ನಿಧಾನವಾಗಿ ಆಕೆಗೆ ತಿಳಿ ಹೇಳುತ್ತಿದ್ದರು. ಆಕೆ ಗರ್ಭಿಣಿಯಾದ ಸಂದರ್ಭದಲ್ಲಂತೂ ಜಾನಕಿಬಾಯಿಯವರ ಮಾತುಗಳನ್ನು ಕೇಳುತ್ತಾ ಒಂದು ಹದಕ್ಕೆ ಬಂದಿದ್ದಳು. ನಂತರ, ಸಂಪೂರ್ಣವಾಗಿ ತನ್ನ ಸೋಮಾರಿತನವನ್ನೆಲ್ಲಾ ತೊರೆದು, ಮೃದುವಾಗಿ, ಎಲ್ಲರನ್ನೂ ಆದರಿಸುತ್ತಾ ಪ್ರೀತಿಸುವವಳಾದಳು.
ಮನೆಯ ಸಾಲವೆಲ್ಲವೂ ತೀರಿತು ಎನ್ನುವಷ್ಟರಲ್ಲಿ ಅತ್ತೆ ತೀರಿಹೋಗಿದ್ದರಿಂದ ಗೋವಿಂದರಾವ್ ಮತ್ತೆ ಸಾಲ ಮಾಡುವಂತಾಯಿತು. ತಮ್ಮ ಸುಧೀಂದ್ರ ತನಗೆ ನೆರವಾಗುತ್ತಾನೆಂದು ಆಸೆ ಪಟ್ಟಿದ್ದರು. ಆದರೆ, ಆತ ಕೆಲಸಕ್ಕೆ ಸೇರಿದ ಮೊದಮೊದಲ ತಿಂಗಳುಗಳಲ್ಲಿ ಮನೆಗೆ ನೆರವಾದನಾದರೂ.. ನಂತರ ಪ್ರೇಮಿಸಿ, ವಿವಾಹವಾಗಿ ಬೇರೆಯ ಮನೆ, ಸಂಸಾರವೆಂದು ಹೊರ ನಡೆದನು.
ಅನ್ಯಾಯದ ಹಣವನ್ನು ಮುಟ್ಟದ ಗೋವಿಂದರಾವ್ ಅವರ ಮೇಲೆ ಅಪವಾದ ಬಂದು ಸಸ್ಪೆಂಡ್ ಆಗಬೇಕಾಗಿ ಬಂದಿತು. ನಿರಾಶಳಾಗದ ಪದ್ಮ ತನಗೆ ಗೊತ್ತಿದ್ದ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಹುಳಿಪುಡಿ, ಸಾಂಬಾರ್ ಪುಡಿ, ಚಟ್ನಿಪುಡಿ ಮಾಡಿ ತಿಳಿದವರಿಗೆ ಮಾರತೊಡಗಿದಳು. ಮಗ ಚೆನ್ನಾಗಿರಲಿ ಎಂಬ ಹಿರಿದಾಸೆ ಅವಳದ್ದು. ಗೋವಿಂದರಾವ್ ಮನಸ್ಸಿಲ್ಲದಿದ್ದರೂ ಇದಕ್ಕೆ ಒಪ್ಪಿದ್ದರು. ಆತನ ಸಾಧುತನಕ್ಕೆ ಹಾಗೂ ಒಳ್ಳೆಯತನಕ್ಕೆ ಬೆಲೆ ಸಿಕ್ಕಿ, ಅದಕ್ಕೆ ಸಹಾಯ ಮಾಡಿದ್ದವರ ತಪ್ಪೊಪ್ಪಿಗೆಯಿಂದ ಸಸ್ಪೆಂಡ್ ವಜಾ ಆಗಿ ಕೆಲಸಕ್ಕೆ ಹೋಗುವಂತಾದರೂ.. ಕೆಲಸ ಯಾಂತ್ರಿಕವಾಗಿ ಸಾಗುತ್ತಿತ್ತು. ಮಾನಸಿಕ ನೋವಿನಿಂದ ಹೊರಬರುವುದು ಅಷ್ಟು ಸುಲಭವಿರಲಿಲ್ಲ.
ವಿಶಾಲ್ ದೊಡ್ಡವನಾಗುವಷ್ಟರಲ್ಲಿ ಪದ್ಮಳ ದಮ್ಮು ಜಾಸ್ತಿಯಾಗಿ ಉಸಿರಾಡಲು ತೊಂದರೆಯಾಗಿ, ಆಸ್ಪತ್ರೆ ಸೇರಿದವಳು ತೀರಿಕೊಂಡಳು. ಅವರ ಕಷ್ಟ ಕಾಲದಲ್ಲಿ ಯಾರೂ ಸಹಾಯಕ್ಕೆ ಬರಲಿಲ್ಲ. ಗೋವಿಂದರಾವ್ ಅವರೇ ತಮಗೆ ತಿಳಿದಂತೆ ಎಲ್ಲವನ್ನು ನಿಭಾಯಿಸಿಕೊಂಡು ಮಗನನ್ನು ನೋಡಿಕೊಂಡರು. ಎಲ್ಲವನ್ನು ಅರ್ಥ ಮಾಡಿಕೊಂಡ ವಿಶಾಲ್ ಕೂಡಾ ಹೆಚ್ಚು ತೊಂದರೆ ಕೊಡಲಿಲ್ಲ. ತಂದೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬುದಷ್ಟೇ ಅವನ ಮನದಲ್ಲಿದ್ದದ್ದು.
ವಿಶಾಲ್ ಕೆಲಸಕ್ಕೆ ಸೇರಿ ಮದುವೆಯ ವಯಸ್ಸಿಗೆ ಬಂದಾಗ ಗೋವಿಂದರಾವ್ ಅವರ ತಂಗಿ ಹೇಮಾ ತನ್ನ ಮಗಳನ್ನು ಕೊಡಬೇಕೆಂಬ ದೂರಲೋಚನೆಯಿಂದ ಅವರ ಜೊತೆ ಮತ್ತೆ ಸಂಬಂಧ ಸರಿಪಡಿಸಿಕೊಳ್ಳಲು ಹೆಣಗಾಡಿದರು. ಗೋವಿಂದರಾವ್ ಅವರನ್ನು ಉಪಾಯವಾಗಿಯೇ ನಿವಾರಿಸಿಕೊಂಡರು. ತಮ್ಮ ವಾಕಿಂಗ್ ಫ್ರೆಂಡ್ ನಾರಾಯಣರಾವ್ ಅವರ ತಮ್ಮನ ಮಗಳಾದ ವಿಶಾಖಳನ್ನೇ ತನ್ನ ಸೊಸೆಯನ್ನಾಗಿ ಮಾಡಿಕೊಂಡರು.
ಮೊದಮೊದಲು ಸರಿಯಾಗಿಯೇ ಇದ್ದ ವಿಶಾಖ ಮನಸ್ಸು ಕಹಿಯಾಗುತ್ತಾ ಬಂದಿತ್ತು. ಅದಕ್ಕೆ ವಿಶಾಲ್ ಪ್ರತಿಯೊಂದಕ್ಕೂ ಅಪ್ಪನನ್ನು ಹೆಚ್ಚು ಆದರಿಸುತ್ತಿದ್ದದ್ದು ಕಾರಣ. ಹಾಗೆಂದು, ಅದಷ್ಟೇ ಕಾರಣವಲ್ಲ..
ವಿಶಾಲ್ ತನ್ನ ಪತ್ನಿಯ ಮಾತಿಗೆ ಬೆಲೆ ಕೊಡದೇ, ತನ್ನ ತಂದೆಯನ್ನು ಚೆನ್ನಾಗಿ ನೋಡಿಕೊಂಡನೇ.. ಅಥವಾ ತಂದೆಯನ್ನು ದೂರ ಮಾಡಿ ಪತ್ನಿಯನ್ನೇ ಆದರಿಸಿದನೇ.. ಇಲ್ಲಿ ಗೆಲುವು ಯಾರದ್ದು..? ಎಂದು ತಿಳಿಯಬೇಕಾದರೆ ಕಾದಂಬರಿ ಓದಿ.
ವಿಶಾಖಳನ್ನೇ ತನ್ನ ಸೊಸೆಯಾಗಿಸಿಕೊಂಡ ಗೋವಿಂದರಾವ್ ಅವರ ನಡೆಗೆ ಮತ್ತೊಂದು ಕಾರಣವೂ ಇದ್ದಿತು. ಅದೇನು..
ಸೊಸೆ ಅಷ್ಟೆಲ್ಲಾ ಅಂದರೂ ಸ್ವಾಭಿಮಾನಿಯಾದ ಗೋವಿಂದರಾವ್ ಅವರು ಎಲ್ಲವನ್ನೂ ಸಹಿಸುತ್ತಿದ್ದೇಕೆ ನಂತರ ಅವರು ತೆಗೆದುಕೊಂಡ ತೀರ್ಮಾನವೇನು..?
ಹಿನ್ನೆಲೆಯನ್ನು ಹೊರತುಪಡಿಸಿದರೆ ಇಂದಿನ ದಿನಗಳಲ್ಲಿ ಸರ್ವೇಸಾಮಾನ್ಯವಾಗಿ ಕಾಣುವಂತಹಾ ಕೌಟುಂಬಿಕ ಸಮಸ್ಯೆಯನ್ನು ತೆರೆದಿಟ್ಟಿರುವ ಪರಿ, ಬದಲಾವಣೆಯ ಹಾದಿಯನ್ನು ಸೂಚಿಸುವ ರೀತಿ ಹಾಗೂ ಕಾದಂಬರಿಯಲ್ಲಿರುವ ಮೌಲ್ಯಗಳು ಕಾದಂಬರಿಯನ್ನು ಇಷ್ಟಪಡುವಂತೆ ಮಾಡುತ್ತವೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ