ಬುಧವಾರ, ಏಪ್ರಿಲ್ 22, 2026

ಮಹೀಂದ್ರಾ & ಮಹೀಂದ್ರಾ ( ಬ್ಯುಸಿನೆಸ್ ಡೈರಿ ಪುಟ - 08)


"ನಾವು ಆಕ್ಟರ್ ಗಳನ್ನು 'ಎಂಟರ್ಟೈನರ್ಸ್' ಎಂದು ಹಾಗೂ ಉದ್ಯಮಿಗಳನ್ನು 'ಹೀರೋ'ಗಳು ಎಂದು ನಮ್ಮ ಮುಂದಿನ ಪೀಳಿಗೆಗೆ ಪರಿಚಯಿಸಿ ಕೊಡಬೇಕು. ಹೀರೋ ಎಂಬ ಪದದ ನಿಜವಾದ ಅರ್ಥ ನಮ್ಮ ಮುಂದಿನ ಪೀಳಿಗೆಗೆ ತಿಳಿಯಬೇಕಿದೆ. " ಎಂಬ ಹೇಳಿಕೆ ನೀಡಿದವರು ಉದ್ಯಮ ಕ್ಷೇತ್ರದ ಹೀರೋ ಹಾಗೂ ಮೋಟಿವೇಷನಲ್ ಲೀಡರ್ ಎಂದೇ ಹೆಸರಾಗಿರುವ ಆನಂದ್ ಮಹೀಂದ್ರಾ ಅವರು. ರತನ್ ಟಾಟಾ ಅವರನ್ನು ಬಿಟ್ಟರೆ ಆನಂದ್ ಮಹೀಂದ್ರಾ ಇಂದಿನ ಬ್ಯುಸಿನೆಸ್ ನಲ್ಲಿ ರೋಲ್ ಮಾಡೆಲ್ ಎನಿಸಿಕೊಂಡಿದ್ದಾರೆ.


ಆನಂದ್ ಮಹೀಂದ್ರಾ 2020 ರ ಏಪ್ರಿಲ್ ನಿಂದ ಮಹೀಂದ್ರಾ ಗ್ರೂಪ್ಸ್ ನ ಎಕ್ಸಿಕ್ಯೂಟಿವ್ ನ ಛೇರ್ಮನ್ ಜಾಗದಿಂದ ಕೆಳಗಿಳಿದಿದ್ದರೂ ನಾನ್ ಎಕ್ಸಿಕ್ಯೂಟಿವ್ ನ ಛೇರ್ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆನಂದ್ ಮಹೀಂದ್ರಾ ಅವರು ಮಹೀಂದ್ರಾ ಗ್ರೂಪ್ಸನ್ನು ಬೆಳೆಸಿರುವ ಪರಿ ಅಚ್ಚರಿಗೆ ದೂಡುತ್ತದೆ. 1991 ರಲ್ಲಿ 1520 ಕೋಟಿಗಳಷ್ಟು ಇದ್ದ ವಹಿವಾಟು 2020ರಲ್ಲಿ 96241 ಕೋಟಿ ಬೆಲೆಬಾಳುತ್ತದೆ. ಅಂದರೆ 60 ಪಟ್ಟು ತಮ್ಮ ಬಿಸಿನೆಸ್ ಸಾಮ್ರಾಜ್ಯವನ್ನು ಬೆಲೆ ಬಾಳುವಂತೆ ಮಾಡಿದ್ದಾರೆ. ಆದರೆ, ಇದರ ಹಿಂದಿನ ಅವರ ಶ್ರಮ ಹೇಗಿತ್ತು ಗೊತ್ತೇ..?


 ಇನ್ನೇನು ಮಣ್ಣಲ್ಲಿ ಮಣ್ಣಾಗಿ ಹೋಗಬೇಕಿದ್ದ ಮಹೀಂದ್ರಾ ಸಾಮ್ರಾಜ್ಯವನ್ನು.. ಬೂದಿಯಿಂದ ಮೇಲೆದ್ದ ಫಿನಿಕ್ಸ್ ನಂತೆ ಯಶಸ್ಸಿನ ಉತ್ತುಂಗಕ್ಕೆ ಕೊಂಡೊಯ್ದಿದ್ದು ಕಡಿಮೆ ಸಾಧನೆ ಏನಲ್ಲ. ಮಹೀಂದ್ರಾ ಪತನಕ್ಕೆ ಕಾರಣವೇನು ಹಾಗೂ ಆ ಸೋಲಿನಿಂದ ಎದ್ದು ಬಂದ ಬಗೆ ಏನು ಎಂಬುದರ ಜೊತೆಗೆ ಆನಂದ್ ಮಹೀಂದ್ರಾರ ಪಾತ್ರವೇನಿತ್ತು ಎಂಬುದನ್ನು ತಿಳಿದುಕೊಳ್ಳೋಣ


1945 ಅಕ್ಟೋಬರ್ 2 ರಂದು ಜಗದೀಶ್ ಚಂದ್ರ ಮಹೀಂದ್ರಾ ಹಾಗೂ ಕೈಲಾಸ್ ಚಂದ್ರ ಮಹೀಂದ್ರಾ ಎಂಬ ಇಬ್ಬರ ಸಹೋದರರು ತಮ್ಮ ಸ್ನೇಹಿತರಾಗಿದ್ದ ಮಾಲಿಕ್ ಗುಲ್ಹಾಮ್ ಮೊಹಮ್ಮದ್ ಇವರೊಟ್ಟಿಗೆ ಸೇರಿ ಒಂದು ಸ್ಟೀಲ್ ಟ್ರೇಡಿಂಗ್ ಕಂಪೆನಿಯನ್ನು ಪಂಜಾನಿನ ಲೂಧಿಯಾನದಲ್ಲಿ ಶುರು ಮಾಡಿದರು. ಆ ಕಂಪನಿಗೆ ಮಹೀಂದ್ರಾ & ಮೊಹಮ್ಮದ್ ಎಂದು ತಮ್ಮ ಕೊನೆಯ ಹೆಸರುಗಳನ್ನು ಸೇರಿಸಿ ನಾಮಕರಣ ಮಾಡಿದರು. 


1947ರ ಸಮಯದಲ್ಲಿ ಸ್ವಾತಂತ್ರ್ಯ ಸಿಕ್ಕ ನಂತರ ಭಾರತ ಹಾಗೂ ಪಾಕಿಸ್ತಾನಗಳೆರಡೂ ಬೇರೆ ಬೇರೆ ಸ್ವತಂತ್ರ ದೇಶಗಳಾದವು. ಮೊಹಮ್ಮದ್ ಅವರಿಗೆ ಪಾಕಿಸ್ತಾನದ ಮೊಟ್ಟ ಮೊದಲ ಹಣಕಾಸು ಸಚಿವರಾಗುವ ಯೋಗ ಬಂದಿತು. ಪಾಕಿಸ್ತಾನಕ್ಕೆ ಹೋಗುವುದೋ ಅಥವಾ ಈ ಕಂಪನಿಗಾಗಿ ಭಾರತದಲ್ಲಿ ಉಳಿಯುವುದೋ ಎಂಬ ನಿರ್ಧಾರ ಮಾಡುವಾಗ ಹಣಕ್ಕಿಂತ ಅಧಿಕಾರವನ್ನೇ ಆಯ್ದುಕೊಂಡರು. ತಮ್ಮ ಪಾಲಿನ ಶೇರುಗಳನ್ನು ಮಹೀಂದ್ರಾ ಸೋದರರಿಗೆ ಮಾರಿ ತಾವು ಪಾಕಿಸ್ತಾನಕ್ಕೆ ಹೊರಟರು. ಆಗ, ಮಹೀಂದ್ರಾ & ಮೊಹಮ್ಮದ್ ಎಂದು ಇದ್ದ ಕಂಪೆನಿಯ ಹೆಸರನ್ನು ಮಹೀಂದ್ರಾ & ಮಹೀಂದ್ರಾ ಎಂದು ಮಹೀಂದ್ರಾ ಕುಟುಂಬಸ್ಥರಾದ ಹರಿಕೃಷ್ಣನ್ ಹಾಗೂ ಜಯಕೃಷ್ಣನ್ ಬದಲಾಯಿಸುತ್ತಾರೆ.


ಮಹೀಂದ್ರಾ ಎಂದರೆ ನಮಗೆ ನೆನಪಾಗುವುದು ಆಗಿನ ಕಾಲದ ಪೊಲೀಸ್ ಜೀಪುಗಳು, ಟ್ರ್ಯಾಕ್ಟರ್ ಗಳು ಹಾಗೂ ಎಸ್.ಯು.ವಿ ಕಾರುಗಳು. ಸ್ಟೀಲ್ ಟ್ರೇಡಿಂಗ್ ಮಾಡುತ್ತಿದ್ದ ಕಂಪನಿಯು ಜೀಪ್ ಅನ್ನೋ ತಯಾರಿಸಲು ಮೊದಲಿಟ್ಟದ್ದು ಹೀಗೆ. 


1949ರ ಸಮಯದಲ್ಲಿ ಅಮೆರಿಕದಲ್ಲಿ ಎರಡನೇ ವಿಶ್ವ ಯುದ್ಧದ ಸಮಯ.ಆಗ, ಅಲ್ಲಿನ ವಿಲ್ಲೀಸ್ ಜೀಪ್ ಗಳ ತಯಾರಿ ಹೆಚ್ಚಿದ್ದರೂ ಕೊಳ್ಳುವವರಿರಲಿಲ್ಲ. ಹಾಗಾಗಿ, ನಷ್ಟದಲ್ಲಿ ನಡೆಯುತ್ತಿದ್ದ ಆ ಕಂಪನಿಯ ನಷ್ಟವನ್ನು ಸರಿದೂಗಿಸಲು ಬೇರೆಯ ದೇಶಗಳಿಗೂ ಈ ಜೀಪುಗಳನ್ನು ಮಾರಾಟ ಮಾಡಲು ನಿರ್ಧರಿಸಿ ಸೇಲ್ ನ ಜಾಹೀರಾತು ನೀಡಿತು. ಈ ಸುದ್ದಿ ಕೇಳಿದ ಮಹೀಂದ್ರಾ ಸಹೋದರರು ಅಮೆರಿಕಕ್ಕೆ ಹೋಗಿ ಅಲ್ಲಿ ಜೀಪುಗಳನ್ನು ಪರೀಕ್ಷಿಸಿದಾಗ ಅವು ಭಾರತದ ರಸ್ತೆಗಳಿಗೆ ಹಾಗೂ ರಫ್ ಅಂಡ್ ಟಫ್ ಬಳಕೆಗೆ ಸರಿಯಾಗಿವೆ ಎನ್ನಿಸಿತು. ಅಲ್ಲಿಂದ ಜೀಪುಗಳನ್ನು ಕೊಂಡುಕೊಂಡು ಭಾರತದಲ್ಲಿ ತಮ್ಮ ಕಂಪನಿಯ ವತಿಯಿಂದ ಮಾರಾಟ ಮಾಡತೊಡಗಿದರು. ಭಾರತದಲ್ಲಿ ಇವುಗಳ ಸಕ್ಸಸ್ ರೇಟ್ ಹೆಚ್ಚಾಯಿತು. ಇದನ್ನು ಕಂಡ ಮಹೀಂದ್ರಾ ಸೋದರರು 1959 ರಲ್ಲಿ ವಿಲ್ಲೀಸ್ ಕಂಪನಿಯ ಜೊತೆಗೆ ಅಗ್ರಿಮೆಂಟ್ ಮಾಡಿಕೊಂಡು, ತಯಾರಿಕೆಯ ಸೂತ್ರವನ್ನೆಲ್ಲಾ ತಿಳಿದುಕೊಂಡು ಭಾರತದಲ್ಲಿ ಅವುಗಳ ತಯಾರಿಕೆಗೆ ಮುಂದಡಿಯಿಟ್ಟರು. ಆಗಿನ ಕಾಲದ ಹೆಚ್ಚಿನ ಪೋಲೀಸು ಜೀಪುಗಳು ಮಹೀಂದ್ರಾ ಕಂಪನಿಯವೇ.


ವಾಹನ ಮಾರಾಟ ಕ್ಷೇತ್ರದಲ್ಲಿ ತಮ್ಮ ಬೆಳವಣಿಗೆಯನ್ನು ಮತ್ತಷ್ಟು ವಿಸ್ತರಿಸಲು 1961 ರಲ್ಲಿ ಟ್ರ್ಯಾಕ್ಟರ್ ಗಳು ಹಾಗೂ ಟ್ರಕ್ ಗಳ ಮಾರಾಟವನ್ನು ಅಮೆರಿಕಾದ ಕಂಪನಿಯೊಂದರ ಜೊತೆ ಕೈಗೂಡಿಸಿ ಟೈ ಅಪ್ ಮಾಡಿಕೊಂಡು ಮುಂದುವರಿಸಿದರು. ವಿಶ್ವ ವ್ಯಾಪಿ ಅತಿ ಹೆಚ್ಚು ಮಾರಾಟವಾಗುವ ಟ್ರ್ಯಾಕ್ಟರ್ ಹಾಗೂ ಟ್ರಕ್ ಗಳು ಎನ್ನುವ ಹೆಗ್ಗಳಿಕೆ ಮಹೀಂದ್ರಾ ಕಂಪನಿಗೆ ಸಲ್ಲುತ್ತದೆ. 


ಮಹೀಂದ್ರಾ ಕಂಪನಿ ಮತ್ತಷ್ಟು, ಮಗದಷ್ಟು ವಿಸ್ತರಿಸಿದ್ದು ಆನಂದ್ ಮಹೀಂದ್ರಾ ಕಾಲದಲ್ಲಿ. ಆನಂದ್ ಮಹೀಂದ್ರಾ  ಅವರು ಜಗದೀಶ್ ಮಹೀಂದ್ರಾ ಅವರ ಮೊಮ್ಮಗ. ಇಂದಿರಾ ಮಹೀಂದ್ರಾ ಹಾಗೂ ಹರೀಶ್ ಮಹೀಂದ್ರಾ ಅವರ ಮಗ . ಹುಟ್ಟಿದ್ದು 1955 ರಲ್ಲಿ. ತಮಿಳುನಾಡಿನ ಲಾರೆನ್ಸ್ ಸ್ಕೂಲ್ ನಲ್ಲಿ ಅವರ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಯಿತು. ನಂತರ ಮ್ಯಾಂಚೆಸ್ಟರ್ ನಲ್ಲಿದ್ದ ಹಾರ್ವರ್ಡ್ ವಿಶ್ವವಿದ್ಯಾನಿಲಯದಿಂದ 1977 ರಲ್ಲಿ ಫಿಲ್ಮ್ ಮೇಕಿಂಗ್ ಹಾಗೂ ಆರ್ಕಿಟೆಕ್ಚರ್ ಕುರಿತ ಪದವಿ ಪಡೆದರು. ಆದರೆ ,ಅವರಿಗೆ ಅದು ತಮ್ಮ ಕ್ಷೇತ್ರವಲ್ಲ ಎಂಬುದು ಆದಷ್ಟು ಬೇಗ ಅರಿವಾಗಿ ನಂತರ ಅದೇ ವಿಶ್ವವಿದ್ಯಾಲಯದಲ್ಲಿ ಹಾರ್ವರ್ಡ್ ಬ್ಯುಸಿನೆಸ್ ಸ್ಕೂಲ್ ನಿಂದ 1981 ರಲ್ಲಿ ಎಂ.ಬಿ.ಎ ಪದವಿಯನ್ನು ಪಡೆದರು. ಮೈಕ್ರೋಸಾಫ್ಟ್ ನ ಬಿಲ್ ಗೇಟ್ಸ್ ಸಹ ಇವರ ಸಹಪಾಠಿಯಾಗಿದ್ದವರೇ..


ಭಾರತಕ್ಕೆ ವಾಪಸ್ ಬಂದ ಆನಂದ್ ಮಹೀಂದ್ರಾದ ಸ್ಟೀಲ್ ಕಂಪನಿಯ ಘಟಕವೊಂದರಲ್ಲಿ ಹಣಕಾಸು ವಿಭಾಗದಲ್ಲಿ ಎಕ್ಸಿಕ್ಯೂಟಿವ್ ಅಸಿಸ್ಟೆಂಟ್ ಆಗಿ ಕೆಲಸಕ್ಕೆ ಸೇರಿದರು. ಅದಾದ, ಎಂಟು ವರ್ಷಗಳ ಬಳಿಕ ಅಂದರೆ 1997 ರಲ್ಲಿ ಎಂ ಬಿ ಹುದ್ದೆಗೇರಿದರು. 1989 ರಲ್ಲಿ ಪ್ರೆಸಿಡೆಂಟ್ ಆಗಿ ಕಾರ್ಯನಿರ್ವಹಿಸಿದ ಇವರು.. ಆ ಸಮಯದಲ್ಲಿ ಮಹೀಂದ್ರಾವನ್ನು ರಿಯಲ್ ಎಸ್ಟೇಟ್ ಬ್ಯುಸಿನೆಸ್ ಹಾಗೂ ಹಾಸ್ಪಿಟಲ್ ಕ್ಷೇತ್ರಕ್ಕೂ ವಿಸ್ತರಿಸಿದರು. 1991ರಲ್ಲಿ ಡೆಪ್ಯುಟಿ ಎಂ.ಡಿ ಯಾಗಿ ನೇಮಕವಾದರು. 2003ರಲ್ಲಿ ವೈಸ್ ಚೇರ್ಮನ್ ಆಗಿ ಹಾಗೂ 2012 ರಿಂದ ಚೇರ್ಮನ್ ಆಗಿ ಮಹೀಂದ್ರಾದ ಗದ್ದುಗೆಗಳನ್ನು ಹಂತ ಹಂತವಾಗಿ ಮೇಲೇರಿದರು. 


 1996 ರಲ್ಲಿ ಮಹೀಂದ್ರಾದ ವತಿಯಿಂದ ಒಂದು ಕಾರನ್ನು ತಯಾರಿಸಲು ತೀರ್ಮಾನಿಸಿದರು. ಆಗ ಕಾರು ತಯಾರಿಕೆಯಲ್ಲಿ ಮುಂಚೂಣಿಯಲ್ಲಿದ್ದ ಮಲ್ಟಿ ನ್ಯಾಷನಲ್ ಕಂಪನಿ ಫೋರ್ಡ್ ನೊಂದಿಗೆ ಕೈಜೋಡಿಸಿ ಮಹೀಂದ್ರಾ ಎಸ್ಕಾರ್ಟ್ ಎನ್ನುವ ಕಾರನ್ನು ಬಿಡುಗಡೆ ಮಾಡಿದರು. ಆದರೆ, ಭಾರತದಲ್ಲಿ ಆಗಲೇ ಪ್ರಾಬಲ್ಯದಲ್ಲಿದ್ದ ಮಾರುತಿ ಸುಜುಕಿ ಹಾಗೂ ಹುಂಡೈ ಕಾರುಗಳು ಇವರಿಗೆ ಪೈಪೋಟಿ ನೀಡಿದ್ದಷ್ಟೇ ಅಲ್ಲದೆ.. ಬೆಲೆ ಹಾಗೂ ಇನ್ನಿತರ ಕಾರಣಗಳಿಂದ ತನ್ನ ಮೊದಲ ಪ್ರಯತ್ನದಲ್ಲಿ ಮಹೀಂದ್ರಾ ವಿಫಲವಾಯಿತು. 


2000 ನೇ ಇಸವಿಯ ಸಮಯದಲ್ಲಿ ಕಂಪನಿ ಬಹಳ ನಷ್ಟದಲ್ಲಿತ್ತು. ಅದರ ಜೊತೆಗೆ ಮಹೀಂದ್ರಾ ಎಸ್ಕಾರ್ಟ್ ಕೂಡ ವಿಫಲವಾಗಿದ್ದು.. ಭಾರತದಲ್ಲಿ ಇನ್ನೇನು ಮಹೀಂದ್ರಾ ಕಂಪನಿ ಮುಚ್ಚಿ ಹೋಗಿಬಿಡುತ್ತದೆ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಈಗ ಆನಂದ್ ತೆಗೆದುಕೊಳ್ಳುವ ಒಂದು ನಿರ್ಧಾರ ಕಂಪನಿಯ ಅಳಿವು ಉಳಿವನ್ನು ತೀರ್ಮಾನಿಸಲಿತ್ತು . ಆನಂದ್ ತಲೆಯಲ್ಲಿ ಹೊಚ್ಚ ಹೊಸ ಐಡಿಯಾ ಓಡುತ್ತಿತ್ತು. ಛಲ ಬಿಡದ ಆನಂದ್ ಯಾವ ಕಂಪೆನಿಯ ಸಹಾಯವೂ ಇಲ್ಲದೆ, ತನ್ನದೇ ಆದ ಸ್ವಂತ ಕಾರನ್ನು ತಯಾರಿಸಿಯೇ ತೀರುತ್ತೇನೆ ಎನ್ನುವ ಹಠಕ್ಕೆ ಬಿದ್ದರು. 


ಆಗಿನ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್ ಅಂದರೆ ಎಸ್.ಯು.ವಿಗಳ ರೀತಿಯ ಕಾರ್ ತಯಾರಿಸಲು ಪಣ ತೊಟ್ಟರು. "ಅಷ್ಟು ಟೆಕ್ನಾಲಜಿ ಗೊತ್ತಿದ್ದ ಫೋರ್ಡ್ ಜೊತೆಗೆ ಕೈಗೂಡಿಸಿದಾಗಲೇ ವಿಫಲವಾಗಿದ್ದ ಕಾರು ತಯಾರಿಕೆ ಈಗ ಇವರನ್ನು ಕೈಹಿಡಿಯುತ್ತದಾ.. ಇದೊಂದು ಹುಚ್ಚು ಆಲೋಚನೆ", "ಸೋತು ಕಂಪೆನಿಯನ್ನು ಮುಳುಗಿಸುತ್ತಾನೆ" ಎನ್ನುತ್ತಾ ಸುತ್ತಮುತ್ತಲಿನವರು ವ್ಯಂಗ್ಯ ಮಾಡಿದರು. ಆದರೆ , ಆನಂದ್ ಇದರಲ್ಲಿ ತಾವು ಗೆದ್ದೇ ಗೆಲ್ಲುತ್ತೇವೆ ಎನ್ನುವ ವಿಶ್ವಾಸದೊಂದಿಗೆ  300 ಜನ ತಂತ್ರಜ್ಞರನ್ನು ಬಳಸಿ, ಉಳಿದವರಿಗೆ ಹೋಲಿಸಿದರೆ ಕಡಿಮೆ ಹಣದಲ್ಲಿ ಅಂದರೆ 550 ಕೋಟಿಯ ಪ್ರಾಜೆಕ್ಟ್ ಅನ್ನು ಪ್ಲಾನ್ ಮಾಡಿ ಬೋಲೇರೋ ಎಸ್.ಯು.ವಿ ಯನ್ನು ತಯಾರಿಸಿದರು.ಇದು ಮುಂದಿನ 10 ವರ್ಷಗಳ ಕಾಲ ಟಾಪ್ 1 ಸ್ಥಾನದಲ್ಲಿತ್ತು. 


ಇಲ್ಲಿಂದ ಕಂಪನಿಯ ಗೆಲುವಿನ ಹಾದಿ ತೆರೆಯಿತು. 2000-01 ಶುರುವಾದ ಈ ಗೋಲ್ಡನ್ ಟೈಮ್ ಮುಂದುವರೆಯಿತು. ಆದರೆ, ಪೈಪೋಟಿ ನೀಡಲು ಮಾರುತಿ ಹಾಗೂ ಕಾಂಟೆಸ್ಸಾಗಳು ಇದ್ದೇ ಇದ್ದವು. 2002ರಲ್ಲಿ ಮಹೀಂದ್ರಾ ವತಿಯಿಂದ ಹೊಚ್ಚ ಹೊಸ ಮಾಡೆಲ್ ಮಹೀಂದ್ರಾ ಸ್ಕಾರ್ಪಿಯೋವನ್ನು ಬಿಡುಗಡೆ ಮಾಡಿದರು. ಬಹಳಷ್ಟು ಜನ ಇದನ್ನು ಇಷ್ಟಪಟ್ಟು ಕೊಂಡುಕೊಂಡರು. ಇಲ್ಲಿಂದ ಮುಂದಕ್ಕೆ ಥಾರ್, ಎಕ್ಸ್.ಯು.ವಿ 300, ಎಕ್ಸ್.ಯು.ವಿ ಫೈವ್ 500, ಎಕ್ಸ್,ಯು,ವಿ 700 ಇನ್ನು ಮುಂತಾದ ಮಾಡೆಲ್ ಗಳು ಬಿಡುಗಡೆಯಾದವು. ಇಂದಿಗೂ ಸುರಕ್ಷಿತವಾದ ಕಾರುಗಳ ಪಟ್ಟಿಯಲ್ಲಿ ಮಹೀಂದ್ರಾ ಎಕ್ಸ್.ಯು.ವಿ ಯದ್ದೇ ಮೊದಲ ಸ್ಥಾನ. 


 'ಆಲದ ಮರದ ನೆರಳಲ್ಲಿ ಇತರ ಗಿಡಗಳು ಬೆಳೆಯಲಾರವು' ಎನ್ನುತ್ತಾರೆ. ಆದರೆ ಆನಂದ್ ಈ ಮಾತನ್ನು ಸುಳ್ಳು ಮಾಡಿದವರು. ಆನಂದ್ ಕೇವಲ ತಾವು ಬೆಳೆಯಲಿಲ್ಲ.. ಜೊತೆಗೆ ನಷ್ಟದ ಹಾದಿಯಲ್ಲಿದ್ದ ಎಷ್ಟೋ ಕಂಪನಿಗಳನ್ನು ಕೊಂಡುಕೊಂಡು ಅಥವಾ ಇನ್ವೆಸ್ಟ್ ಮಾಡಿ ಅವುಗಳಿಗೂ ಸಹ ಹೊಸ ರೂಪದಲ್ಲಿ ಜೀವ ನೀಡಿದರು. ಹೀಗೆ ತಮ್ಮ ಬ್ಯುಸಿನೆಸ್ ಅನ್ನು ವಿಸ್ತರಿಸುತ್ತಾ ಹೋದರು. ಹೀಗೆ ಮಹೀಂದ್ರಾದ ಜೊತೆಯಾದ ಕಂಪೆನಿಗಳಲ್ಲಿ ಕೆಲವು ಫೇಮಸ್ ಆಗಿರುವವೆಂದರೆ..


 1999 ರಲ್ಲಿ ಗುಜರಾತಿನ ದೊಡ್ಡ ಟ್ರ್ಯಾಕ್ಟರ್ ಕಂಪನಿಯು ನಷ್ಟದ ಹಾದಿಯಲ್ಲಿತ್ತು. ಅದನ್ನು ಕೊಂಡುಕೊಂಡ ಮಹಿಂದ್ರ ಗ್ರೋಮ್ಯಾಕ್ಸ್ ಅಗ್ರಿ ಎಕ್ಯೂಪ್ಮೆಂಟ್ ಲಿಮಿಟೆಡ್ ಎನ್ನುವ ಹೆಸರು ನೀಡಿದರು. ಶಕ್ತಿಮಾನ್ ಎನ್ನುವ ಟ್ರಾಕ್ಟರ್ ಇದೇ ಕಂಪನಿಯ ಹೆಸರಾಂತ ಪ್ರಾಡಕ್ಟ್. 


 ಸ್ವರಾಜ್ ಮಸ್ದಾ ಎನ್ನುವ ಟ್ರ್ಯಾಕ್ಟರ್ ಬಹಳ ಹೆಸರಾಂತ ಟ್ರ್ಯಾಕ್ಟರ್. 2007ರಲ್ಲಿ ಪಂಜಾಬ್ ನ ಸ್ವರಾಜ್ ಎನ್ನುವ ನಷ್ಟದಲ್ಲಿದ್ದ ಟ್ರ್ಯಾಕ್ಟರ್ ಕಂಪನಿಯನ್ನು ಮಹೀಂದ್ರಾ ತನ್ನೊಡನೆ ಸೇರಿಸಿಕೊಂಡು ತಯಾರಿಸಿದ ಟ್ರ್ಯಾಕ್ಟರ್ ಇದು. 


 ದ್ವಿಚಕ್ರ,ಕಾರು, ಟ್ರಕ್, ಟ್ರ್ಯಾಕ್ಟರ್ ಮಾತ್ರವಲ್ಲದೆ ಆಕಾಶದಲ್ಲಿಯೂ ತಮ್ಮ ಛಾಪು ಮೂಡಿಸಲು 2009 ರಲ್ಲಿ ಆಸ್ಟ್ರೇಲಿಯನ್ ಕಂಪನಿಯಾದ ಏರ್ ವ್ಯಾನ್ ನಲ್ಲಿ ಪಾಲುದಾರರಾದರು. 


ಹಗರಣದಲ್ಲಿ ಭಾಗಿಯಾಗಿ ನಷ್ಟದಲ್ಲಿದ್ದ ಸತ್ಯಂ ಕಂಪ್ಯೂಟರ್ಸ್ ಅನ್ನೋ ಕೊಂಡುಕೊಂಡು ಟೆಕ್ ಮಹೀಂದ್ರಾ ಎನ್ನುವ ಹೆಸರಿನಲ್ಲಿ ಟೆಕ್ನಾಲಜಿಯಲ್ಲಿಯೂ ಮುಂದುವರಿದರು.


 2010ರಲ್ಲಿ ರೇವಾ ಎಲೆಕ್ಟ್ರಿಕಲ್ ಕಾರ್ ನಲ್ಲಿ 55 ಪರ್ಸೆಂಟ್ ಪಾಲುದಾರರಾಗಿದ್ದ ಇವರು 2016ರಲ್ಲಿ ಅದರ ಸಂಪೂರ್ಣ ಮಾಲೀಕರಾದರು. ಎಲೆಕ್ಟ್ರಿಕ್ ವಾಹನಗಳ ಸಾಮ್ರಾಜ್ಯಕ್ಕೂ ಅಡಿಯಿಟ್ಟರು..


ಆನಂದ್ ಗೆ ಹೊಸ ಆವಿಷ್ಕಾರಗಳಲ್ಲಿ ಹೆಚ್ಚಿನ ಆಸಕ್ತಿ. ಹಾಗೆಯೇ, ಉದಯ್ ಕೋಟಕ್ ಎನ್ನುವ ವ್ಯಕ್ತಿಯೊಬ್ಬರು ತನ್ನ ಸ್ಟಾರ್ಟ್ ಅಪ್ ಐಡಿಯಾದೊಂದಿಗೆ ಬಂದಾಗ ಅವರ ಐಡಿಯಾವನ್ನು ಕೇಳಿ ಅದಕ್ಕೆ ಮೆಚ್ಚಿ, ನಂಬಿಕೆಯಿಂದ ತಮ್ಮ ಸ್ವಂತ ಹಣದಿಂದ ಒಂದು ಲಕ್ಷವನ್ನು ಮೊದಲಿಗೆ ಹೂಡಿಕೆ ಮಾಡಿದರು. ಅದರ ಫಲವೇ ಇಂದಿನ ಕೋಟಕ್ ಮಹೀಂದ್ರಾ ಬ್ಯಾಂಕ್.  


 ಹೀಗೆ 27 ಕಂಪನಿಗಳನ್ನು ಕೊಂಡುಕೊಂಡು.. 9 ಕ್ಕೂ ಹೆಚ್ಚು ಕಂಪೆನಿಗಳಲ್ಲಿ ಪಾಲುದಾರಿಕೆ ಪಡೆದುಕೊಂಡಿದೆ. ಇಂದು ಮಹೀಂದ್ರಾ ಗ್ರೂಪ್ ಏರೋ ಸ್ಪೇಸ್, ಕೃಷಿ, ಕನ್ಸ್ಟ್ರಕ್ಷನ್ ,ಡಿಫೆನ್ಸ್, ಹಣಕಾಸು, ಆಸ್ಪತ್ರೆ, ಇನ್ಸೂರೆನ್ಸ್, ಐ.ಟಿ ,ಲಾಜಿಸ್ಟಿಕ್ಸ್, ರಿಯಲ್ ಎಸ್ಟೇಟ್ ಹೀಗೆ 22 ರಂಗಗಳಲ್ಲಿ.. ನೂರಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಪ್ರಾಬಲ್ಯ ಸ್ಥಾಪಿಸಿದೆ. ಏಷ್ಯಾ,ಆಫ್ರಿಕಾ,ಯೂರೋಪ್ ನಲ್ಲಿ ಎಲ್ಲೆಡೆಯಲ್ಲಿಯೂ ತಮ್ಮ ವ್ಯಾಪಾರದ ಸಾಮ್ರಾಜ್ಯವನ್ನು ಹರಡಿದೆ.


 ಆನಂದ್ ಕೇವಲ ಬಿಸಿನೆಸ್ ಮಾತ್ರವಲ್ಲದೆ.. ಸಾಮಾಜಿಕವಾಗಿಯೂ ಜನರಿಗೆ ಉಪಕಾರ ಮಾಡುತ್ತಾ ಮಾದರಿಯಾಗಿದ್ದಾರೆ. 1996 ರಿಂದ ತಮ್ಮದೇ ಎನ್.ಜಿ.ಓ ಅಡಿಯಲ್ಲಿ ನನ್ಹಿ ಕಲಿ ಎನ್ನುವ ಕಾರ್ಯಕ್ರಮದಿಂದ ಸವಲತ್ತುಗಳು ಸಿಗದ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ದೊರಕಿಸಿಕೊಡುತ್ತಿದ್ದಾರೆ. ಎಕನಾಮಿಕ್ ಫೋರಂನ ಕೋ-ಚೇರ್ ಪರ್ಸನ್ ಆಗಿದ್ದಾರೆ. 2007ರಲ್ಲಿ ಎನ್‌.ಡಿ ಟಿ.ವಿ ವತಿಯಿಂದ ಮೋಸ್ಟ್ ಇನ್ಸ್ ಪೈರಿಂಗ್ ಲೀಡರ್ ಪ್ರಶಸ್ತಿ ಸಿಕ್ಕಿದೆ. 2018ರಲ್ಲಿ ಮಹೀಂದ್ರಾ ಫಾರ್ಚುನ್ ಇಂಡಿಯಾದಿಂದ ಬಿಡುಗಡೆ ಮಾಡಿದ ಟಾಪ್ 500 ಕಂಪನಿಗಳಲ್ಲಿ 17ನೇ ಸ್ಥಾನದಲ್ಲಿದೆ.


 ಬ್ಯುಸಿನೆಸ್ ನ ಸಕ್ಸಸ್ ಮಂತ್ರದಲ್ಲಿ ಯಾವ ಗುಟ್ಟು ಸಹಾ ಇಲ್ಲ ಎನ್ನುತ್ತಾರೆ ಆನಂದ್. ಅದು ಕೇವಲ ಗಮನವಿಟ್ಟು ಕಲಿಯುವುದು, ಸರಿಯಾದ ತಯಾರಿ ಹಾಗೂ ಶ್ರಮ ಹಾಕಿ ದುಡಿಯುವುದು ಅಷ್ಟೇ.. 


 ಬ್ಯುಸಿನೆಸ್ ಎಂದರೆ ಅದೊಂದು ಅದೃಷ್ಟ ಪರೀಕ್ಷೆಯಲ್ಲ. ಬದಲಾಗಿ ಪರಿಶ್ರಮದ ಒಟ್ಟು ಮೊತ್ತ. ಕಂಡ ಕನಸುಗಳನ್ನು ನನಸಾಗಿಸುವಲ್ಲಿ ಎಷ್ಟೇ ಕಷ್ಟದ ಹಾದಿ ಇದ್ದರೂ.. ಎಷ್ಟೇ ವ್ಯಂಗ್ಯದ, ಮೊನಚು ಮಾತುಗಳು ಕೇಳಿ ಬಂದರೂ ಅದಕ್ಕೆ ಉತ್ತರ ಕೊಡಬೇಕಾಗಿರುವುದ್ದು ಕೇವಲ ನಮ್ಮ ಕೆಲಸದಿಂದ ಅಷ್ಟೇ.. ಇನ್ನೋವೇಟಿವ್ ಆಗಿ ಯೋಚಿಸುತ್ತಾ ಹೋದಂತೆ ಅದನ್ನು ಕಾರ್ಯರೂಪಕ್ಕೆ ತಂದರೂ... ಅವುಗಳಲ್ಲಿ ಕೆಲವನ್ನಷ್ಟೇ ಜನರು ಒಪ್ಪಿಕೊಳ್ಳುವುದು. ಆದರೆ, ಹಾಗೆ ಜನರು ಮೆಚ್ಚಿಕೊಂಡದೆಲ್ಲವೂ ಟಾಪ್ ಸ್ಥಾನದಲ್ಲಿ ಉಳಿಯಬೇಕೆಂದರೆ ಆ ರೀತಿಯ ಇನ್ನೋವೇಟಿವ್ ಆಲೋಚನೆ, ಪರಿಶ್ರಮ, ಸರಿಯಾದ ತಯಾರಿ ಎಂದಿಗೂ ಹುಸಿ ಹೋಗಬಾರದು. ಮರಳಿ, ಮರಳಿ ಪ್ರಯತ್ನಿಸುತ್ತಿರಬೇಕು ಎನ್ನುವ ಪಾಠ ಹೇಳುತ್ತದೆ ಮಹೀಂದ್ರಾ & ಮಹೀಂದ್ರಾ. 


( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ