ಜಾನ್ಸನ್ & ಜಾನ್ಸನ್ ಎಂಬ ಹೆಸರು ಕೇಳಿದ ತಕ್ಷಣ ಮೊದಲಿಗೆ ನೆನಪಾಗುವುದು ಅವರ ಬೇಬಿಕೇರ್ ಪ್ರಾಡಕ್ಟ್ ಗಳು. 2010 ರಿಂದ ಈಚೆಗೆ ಜಾನ್ಸನ್ ಬೇಬಿ ಪೌಡರ್ ಮೇಲೆ ಬಂದ ಆರೋಪದಿಂದ ಕೆಲವು ದಿನಗಳು ಅದರ ಜನಪ್ರಿಯತೆ ಕುಗ್ಗಿ ಶೇರ್ ಮೇಲೆ ವ್ಯತಿರಿಕ್ತ ಪರಿಣಾಮವಾದದ್ದು ಹೌದಾದರೂ ಇಂದಿಗೂ ಜಾನ್ಸನ್ ಜನಪ್ರಿಯವೇ . ಈ ಆರೋಪ ಹಾಗೂ ಸತ್ಯಾಸತ್ಯಗಳ ಬಗ್ಗೆ ಇದೇ ಲೇಖನದಲ್ಲಿ ತಿಳಿಸುತ್ತೇನೆ. ವರ್ಷಕ್ಕೆ 93.8 ಬಿಲಿಯನ್ ಡಾಲರ್ ಗಳಷ್ಟು ಆದಾಯ ಹೊಂದಿ 60ಕ್ಕೂ ಹೆಚ್ಚು ದೇಶಗಳಲ್ಲಿ ತಯಾರಿಕಾ ಘಟಕವಿದ್ದು, 120 ದೇಶಗಳಿಗೆ ತನ್ನ ಪ್ರಾಡಕ್ಟ್ ಗಳನ್ನು ಮಾರಾಟ ಮಾಡುತ್ತಿದೆ ಜಾನ್ಸನ್ & ಜಾನ್ಸನ್ ಇದು ಮೂಲತಃ ಅಮೆರಿಕಾದ ಕಂಪನಿ.
ಜಾನ್ಸನ್ ಕೇವಲ ಬೇಬಿ ಕೇರ್ ಪ್ರಾಡಕ್ಟ್ ಗಳಿಗೆ ಮಾತ್ರ ಸೀಮಿತವಾಗಿಲ್ಲ. ಮೂಲತಃ ಇದು ಮೆಡಿಕಲ್ ಸರ್ಜಿಕಲ್ ಪ್ರಾಡಕ್ಟ್ ಗಳನ್ನು ತಯಾರಿಸಬೇಕೆಂಬ ಆಶಯದಿಂದ ಶುರುವಾದ ಕಂಪನಿ. ಇದನ್ನು ಮೊದಲಿಗೆ ಶುರು ಮಾಡಿದವರು ಫಾರ್ಮಸಿಸ್ಟ್ ಆಗಿದ್ದ ರಾಬರ್ಟ್ ವುಡ್ ಜಾನ್ಸನ್. ತನ್ನ 16ನೇ ವಯಸ್ಸಿನಲ್ಲಿ ತಮ್ಮ ಪ್ರೊಫೆಷನಲ್ ಟ್ರೈನಿಂಗ್ ಅನ್ನು ಶುರು ಮಾಡಿದ ಇವರು ಫಾರ್ಮಾಸ್ಯುರ್ಟಿಕಲ್ ಅಪ್ರೆಂಟಿಸ್ ಆಗಿ, ತನ್ನ ತಾಯಿಯ ಕಸಿನ್ ಆಗಿದ್ದ ಜೇಮ್ಸ್ ಅವರ ಬಳಿ ನ್ಯೂಯಾರ್ಕ್ ನಲ್ಲಿ ಕೆಲಸಕ್ಕೆ ಸೇರುತ್ತಾರೆ. ಅಲ್ಲಿ ಸ್ನೇಹಿತರಾಗಿಡ್ಡಿ ತಮ್ಮ ಸಮಾನಮನಸ್ಕರಾದ ಕೆಮೆಸ್ಟ್ ಹಾಗೂ ಫಾರ್ಮಸಿಸ್ಟ್ ಆಗಿದ್ದ ಜಾರ್ಜ್ ಜಾನ್ ಸೀಬುರಿ.
ಇಬ್ಬರೂ ಸೇರಿ 1874ರಲ್ಲಿ ಒಂದು ಹೊಸ ರೀತಿಯ ಬ್ಯಾಂಡೇಜ್ ನ್ನು ಕಂಡುಹಿಡಿಯುತ್ತಾರೆ. ಪುಟ್ಟ ಗಾಯವಾದರೆ ನಾವೀಗ ಅಂಟಿಸಿಕೊಳ್ಳುತ್ತೇವಲ್ಲ.. ಸ್ಟಿಕ್ಕಿಂಗ್ ಪ್ಲಾಸ್ಟರ್. ಅದೇ ಬ್ಯಾಂಡೇಜ್ ನ್ನು ಅವರು ಕಂಡುಹಿಡಿದದ್ದು. ಆ ಸಮಯದಲ್ಲಿ ಅವರಿಬ್ಬರೂ ಸೇರಿ ತಮ್ಮದೇ ಕಂಪನಿಯನ್ನು ಶುರು ಮಾಡುತ್ತಾರೆ.1876 ರಲ್ಲಿ ವರ್ಲ್ಡ್ ಫೇರ್ ನಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತದೆ. ಮಾಡ್ರನ್ ಸರ್ಜರಿಯ ಜನಕ ಎಂದೇ ಖ್ಯಾತರಾದ ಜೋಸೆಫ್ ಲಿಸ್ಟರ್ ಅವರ ಭಾಷಣ ಕೇಳುವ ಅವಕಾಶ ದೊರೆಯುತ್ತದೆ. ಆಗ ಅವರ ಭಾಷಣದಿಂದ ಒಂದು ಹೊಸ ವಿಧಾನವನ್ನು ತಿಳಿಯುತ್ತಾರೆ. ಅದೇ ಆಂಟಿಸೆಪ್ಟಿಕ್ ಸರ್ಜರಿ ಹಾಗೂ ಸ್ಟೆರಿಲೈಜೇಷನ್ ಕುರಿತಾಗಿ. ಈ ಭಾಷಣ ಅವರಲ್ಲಿ ಮತ್ತಷ್ಟು ಹೊಸ ಆಲೋಚನೆಗಳನ್ನು ಹುಟ್ಟುಹಾಕುತ್ತದೆ.
1886 ರಲ್ಲಿ ತನ್ನ ಇಬ್ಬರು ಸೋದರರಾದ ಜೇಮ್ಸ್ ವುಡ್ ಜಾನ್ಸನ್ ಹಾಗೂ ಎಡ್ವರ್ಡ್ ಜಾನ್ಸನ್ ಅವರ ಜೊತೆ ಸೇರಿ ಸ್ಟೆರಿಲೈಜೇಷನ್ ಟೆಕ್ನಿಕ್ ಗಳ ಕುರಿತು, ಸರ್ಜಿಕಲ್ ಡ್ರೆಸ್ಸಿಂಗ್ ಹಾಗೂ ಆಪರೇಷನ್ ನಂತರದ ಸ್ಟೆರಿಲೈಸೇಶನ್ ಕುರಿತು ಹೆಚ್ಚಿನ ಮಾಹಿತಿಯನ್ನು ಕಲೆಹಾಕಿ.. ಹೊಸ ಕಂಪನಿಯನ್ನು ಕೇವಲ 14 ಉದ್ಯೋಗಿಗಳಿಂದ ಶುರು ಮಾಡುತ್ತಾರೆ. ಅದಕ್ಕೆ ತಮ್ಮ ಕುಟುಂಬದ ಹೆಸರಾದ ಜಾನ್ಸನ್ & ಜಾನ್ಸನ್ ಎಂದೇ ಕರೆಯುತ್ತಾರೆ. ಇದಕ್ಕೆ ರಾಬರ್ಟ್, ಅವರ ಸಹಿಯನ್ನೇ ಲೋಗೋವನ್ನಾಗಿ ಮಾಡಿಕೊಳ್ಳುತ್ತಾರೆ. 1887ರಲ್ಲಿ ಕಂಪನಿಯ ಮೊದಲೆರಡು ಪ್ರಾಡಕ್ಟ್ ಬಿಡುಗಡೆಯಾಗುತ್ತವೆ. ಮೊದಲನೆಯದ್ದು ಈ ಎಲ್ಲದರ ಕುರಿತ ಮಾಹಿತಿಯಿದ್ದ ಮೆಡಿಕಲ್ ಮ್ಯಾನುಯಲ್ ಹಾಗೂ ಮತ್ತೊಂದು ಇಂದು ನಾವು ಬಳಸುವ ಪ್ರಥಮ-ಚಿಕಿತ್ಸಾ ಕಿಟ್. ಈ ಪ್ರಥಮ-ಚಿಕಿತ್ಸಾ ಕಿಟ್ ವಿಶೇಷವಾಗಿ ರೈಲ್-ರೋಡ್ ಉದ್ಯೋಗಿಗಳಿಗೆಂದೇ ಡಿಸೈನ್ ಮಾಡಿದ್ದು. ಬರುಬರುತ್ತಾ ಎಲ್ಲೆಡೆಯೂ ಪ್ರಥಮಚಿಕಿತ್ಸೆಗೆ ಉಪಯುಕ್ತವಾಯಿತು.
1894ರ ಹೊತ್ತಿಗೆ 14 ಜನ ಉದ್ಯೋಗಿಗಳಿಂದ ಶುರುವಾಗಿದ್ದ ಕಂಪನಿ 14 ಬಿಲ್ಡಿಂಗ್ ಗಳನ್ನು ಹೊಂದಿ, 400 ಜನರಿಗೆ ಉದ್ಯೋಗ ಒದಗಿಸಿರುತ್ತದೆ. ಬ್ಯುಜಿನೆಸ್ ಬೆಳೆಯುತ್ತಾ ಹೋದಂತೆ ಸಂಶೋಧನೆಗಳು ಬೆಳೆಯುತ್ತಾ.. 'ಹೆರಿಟೇಜ್ ಬೇಬಿ ಬ್ಯುಸಿನೆಸ್' ಎಂಬ ಹೆಸರಿನಲ್ಲಿ ತಾಯಿ-ಮಕ್ಕಳಿಗೆಂದೇ ವಿಶೇಷವಾದ ಪ್ರಾಡಕ್ಟ್ ಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸುತ್ತಾರೆ. ಪ್ರಮುಖವಾಗಿ ಎರಡು ಪ್ರಾಡಕ್ಟ್ ಗಳನ್ನು ಬಿಡುಗಡೆ ಮಾಡುತ್ತಾರೆ. ಅದೇ ಇಂದಿಗೂ ಜನಪ್ರಿಯವಾಗಿರುವ ಜಾನ್ಸನ್ ಬೇಬಿ ಪೌಡರ್ ಹಾಗೂ ಮತ್ತೊಂದು ಮೆಟರ್ನಿಟಿ ಕಿಟ್. ಮನೆಯಲ್ಲಿಯೇ ಹೆರಿಗೆಯಾಗುವ ಹೆಣ್ಣುಮಕ್ಕಳಿಗೆಂದೇ ವಿಶೇಷವಾಗಿ ಡಿಸೈನ್ ಮಾಡಲಾಗಿದ್ದ ಈ ಕಿಟ್ ಜನನದ ಸಮಯದಲ್ಲಿ ಆಂಟಿಸೆಪ್ಟಿಕ್ ಹಾಗೂ ಸುರಕ್ಷತೆಯಿಂದ ಕೂಡಿರಲಿ ಎಂದಾಗಿತ್ತು.
1935 ರಲ್ಲಿ ಬೇಬಿ ಆಯಿಲ್ ಅನ್ನು ಬಿಡುಗಡೆ ಮಾಡಿತು. ನಂತರ ಮಕ್ಕಳಿಗೆಂದೇ ವಿಶೇಷವಾಗಿ ಕಣ್ಣೀರು ಬರೆದಂತಹಾ ನೋ-ಟಿಯರ್ಸ್ ಶ್ಯಾಂಪೂವನ್ನು ಬಿಡುಗಡೆ ಮಾಡಿತು. ಜಾನ್ಸನ್ ಪ್ರಾಡಕ್ಟ್ ಗಳಲ್ಲಿ ಮೊಟ್ಟ ಮೊದಲಿಗೆ ಕಾಣಿಸಿಕೊಂಡ ಜಾಹೀರಾತು ಹಾಗೂ ಲೇಬಲ್ ಮೇಲಿದ್ದ ಮಗುವಿನ ಚಿತ್ರ ರಾಬರ್ಟ್ ಅವರ ಮೊಮ್ಮಗಳಾದ ಮೇರಿ ಲಿಯಾಳದ್ದು.
ಬ್ಯುಸಿನೆಸ್ ಬೆಳೆಯುತ್ತಾ ಹೋದಂತೆ.. 1896-97ರ ಸಮಯದಲ್ಲಿ ಮಾಸ್ ಪ್ರೊಡಕ್ಷನ್ ಹೆಚ್ಚಾಗುತ್ತಾ ಹೋಯಿತು. ಹೆಲ್ತ್-ಕೇರ್ ಹಾಗೂ ಸ್ಯಾನಿಟೈಸೇಶನ್ ಪ್ರಾಡಕ್ಟ್ ಗಳು ಬಳಕೆದಾರರಿಗೆ ಸುಲಭವಾಗಿ ಹಾಗೂ ಕಡಿಮೆ ದರದಲ್ಲಿ ಸಿಗುವಂತೆ ಮಾಡಲಾಗುತ್ತಿತ್ತು. ಮಹಿಳೆಯರನ್ನು ದೃಷ್ಟಿಯಲ್ಲಿಟ್ಟುಕೊಂಡು ಮೊದಲಿಗೆ ಕಡಿಮೆ ದರದ ಸ್ಯಾನಿಟರಿ ಮೆನ್ಸುರೇಶನಲ್ ಪ್ಯಾಡ್ ಗಳನ್ನು ತಯಾರಿಸಿದ ಹೆಗ್ಗಳಿಕೆ ಜಾನ್ಸನ್ ಕಂಪೆನಿಯದ್ದು. ಅದು ಸ್ಟೇಫ್ರೀ ಎಂಬ ಹೆಸರಿನ ಪ್ಯಾಡ್ ಶುರು ಮಾಡಿದ್ದು ಜಾನ್ಸನ್ ಕಂಪೆನಿಯೇ ಆದರೂ 2013 ಜುಲೈ 31ರಂದು ಎನರ್ಜೈಸರ್ ಎನ್ನುವ ಕಂಪನಿ ಅದನ್ನು ಕೊಂಡುಕೊಂಡಿತು.
ಮಕ್ಕಳಿಗೆಂದೇ ವಿಶೇಷವಾದ ಎಣ್ಣೆ, ಪೌಡರ್, ಶ್ಯಾಂಪೂವನ್ನು, ಡೆಂಟಲ್ ಪ್ಲಾಸ್ ಎಂದು ಹೇಳುವ ನವಿರಾದ ನೂಲಿನಂತಹ ಪ್ರಾಡಕ್ಟ್ ನ್ನು ಮೊದಲು ಮಾಸ್ ಪ್ರೊಡಕ್ಷನ್ ಮಾಡಿದ ಕೀರ್ತಿಯೂ ಇದರದ್ದೇ. 1931ರಲ್ಲಿ ಅಮೆರಿಕಾದ ಮೊದಲ ಗರ್ಭನಿರೋಧಕ ಗಳನ್ನು ತಯಾರಿಸಿದ ಖ್ಯಾತಿಯೂ ಇವರದ್ದೇ.
1959ರಲ್ಲಿ ಮೊದಲ ಬಾರಿಗೆ ಎರಡು ಫಾರ್ಮಾಸ್ಯುಟಿಕಲ್ ರಿಸರ್ಚ್ ಕಂಪನಿಗಳನ್ನು ಖರೀದಿ ಮಾಡಿದರು. ಅವುಗಳು.. ಅಮೇರಿಕಾದ ಮ್ಯಕ್ನೈಲ್ ಲ್ಯಾಬೋರೇಟರೀಸ್ ಹಾಗೂ ಯುರೋಪ್ ಮೂಲದ ಕ್ಲಿಯೆಜ್ ಕೆಮಿ. 2 ವರ್ಷಗಳ ನಂತರ ಜಾನ್ಸೇನ್ ಫಾರ್ಮಾಸ್ಯುಟಿಕಲನ್ನು ಖರೀದಿಸಿದರು. ಎಲ್ಲವೂ ಆರೋಗ್ಯ ಕ್ಷೇತ್ರದಲ್ಲಿ ಸಂಶೋಧನಾತ್ಮಕವಾಗಿ ಜಾನ್ಸನ್ ಗೆ ಬಹಳ ಸಹಕಾರಿಯಾಗಿ ರಿಸರ್ಚ್ & ಡೆವಲಪ್ಮೆಂಟ್ ನಲ್ಲಿ ಸಹಾಯಕಾರಿಯಾದವು.
ಮ್ಯಕ್ನೈಲ್ ಲ್ಯಾಬ್ ಅವರ ಪ್ರಸಿದ್ಧ ಪ್ರಾಡಕ್ಟ್ ಎಂದರೆ ಡಾಕ್ಟರ್ ಪ್ರಿಸ್ಕ್ರೈಬ್ ಮಾಡುತ್ತಿದ್ದ ಥೈಲೆನಾಲ್. ನೋವುನಿವಾರಕ ಆಸ್ಪರಿನ್ ಇರುವಂತಹಾ ಥೈಲೆನಾಲ್ (ಆಸಿಟಮಿನೋಫೆನ್). ಇದು ಕೂಡಾ ಜಾನ್ಸನ್ ಅವರ ಪ್ರಸಿದ್ದ ಪ್ರಾಡಕ್ಟ್ ಎಂದಾಯಿತು.
20ನೇ ಶತಮಾನದ ಇನ್ನೋವೇಟಿವ್ ಹಾಗೂ ಕರಾರುವಕ್ಕಾದ ಫಾರ್ಮಸ್ಯುಟಿಕಲ್ ರಿಸರ್ಚ್ ಗಳನ್ನು ಮಾಡುತ್ತಿದ್ದ ಡಾಕ್ಟರ್ ಪೌಲ್ ಜಾನ್ಸೇನ್ ಜಾನ್ಸನ್ ರಿಸರ್ಚ್ ನಲ್ಲಿದ್ದವರೇ. ಸಂಶೋಧನಾ ಕೇಂದ್ರವನ್ನು ಬಹಳ ಸಮರ್ಪಕವಾಗಿ ಬಳಸಿಕೊಂಡು ಮಾರ್ಕೆಟ್ನಲ್ಲಿ ಪ್ರಿಸ್ಕ್ರಿಪ್ಷನ್ ನಲ್ಲಿ ಕೊಡಲಾಗುವ ಮೆಡಿಸಿನ್ ಗಳ ಸಿಂಹಪಾಲಿನ ತಯಾರಿಕೆಯನ್ನು ಮಾಡಿದರು. ಗ್ಯಾಸ್ಟ್ರೋಎಂಟೆರಾಲಜಿ,ಸ್ತ್ರೀಯರ ಆರೋಗ್ಯ,ಮಾನಸಿಕ ಸ್ವಾಸ್ಥ್ಯ, ನ್ಯೂರಾಲಜಿ, ಹೆಚ್.ಐ.ವಿ ಹೀಗೆ ಹಲವಾರು ಕಾಯಿಲೆಗಳಿಗೆ ಮೆಡಿಸಿನ್ ಗಳನ್ನು ಕಂಡುಹಿಡಿದರು. ವಿಶ್ವಯುದ್ಧ-2 ನಂತರವಂತೂ ಜಾನ್ಸನ್ ನವರ ಮಾರ್ಕೆಟ್ 15% ನಿಂದ 70%ಕ್ಕೇರಿತು.
1918ರ ಸಮಯದಲ್ಲಿ ಮೊದಲನೇ ವಿಶ್ವಯುದ್ಧದ ನಂತರ ಎಲ್ಲೆಡೆ ಫ್ಲು ಭಯಾನಕವಾಗಿ ಹರಡುತ್ತಿತ್ತು. ಆ ಸಂದರ್ಭದಲ್ಲಿ ಮಾಸ್ಕ್ ಗಳನ್ನು ತಯಾರಿಸಿ ಎಲ್ಲೆಡೆ ಹಂಚಿದರು ಜಾನ್ಸನ್ ಕಂಪೆನಿಯವರು. ಎರಡನೇ ವಿಶ್ವಯುದ್ಧದ ಸಂದರ್ಭದಲ್ಲಿ ತಮ್ಮ ಕಂಪನಿಯ ಉದ್ಯೋಗಿಗಳ ಉದ್ಯೋಗದ ಸಮಯವನ್ನು ಕಡಿಮೆ ಮಾಡಲು ಸರ್ಕಾರದಿಂದ ಆದೇಶ ಬಂದಿತ್ತು. ಅಂತಹಾ ಕ್ಲಿಷ್ಟಕರ ಪರಿಸ್ಥಿತಿಯಲ್ಲಿಯೂ.. ಜಾನ್ಸನ್ ಕಂಪನಿಯಿಂದ ಯಾರನ್ನೂ ಕೆಲಸದಿಂದ ತೆಗೆಯದೆ.. ಇದ್ದುದಕ್ಕಿಂತ ಹೆಚ್ಚು ಸಂಬಳವನ್ನು ಕೊಟ್ಟು ಕಡಿಮೆ ಅವಧಿಗೆ ದುಡಿಸಿಕೊಂಡರು.
ಜಾನ್ಸನ್ ಕಂಪೆನಿಗಿದ್ದ ಪ್ರತಿಸ್ಪರ್ಧಿಗಳು ಕಡಿಮೆಯೇನಲ್ಲ. ಇದುವರೆಗೂ ಅವರ ಮೇಲೆ ಹಲವಾರು ಕಾನೂನಾತ್ಮಕ ಹೋರಾಟಗಳು ನಡೆದಿವೆ. ನಮಗೆಲ್ಲ ಗೊತ್ತಿರುವಂತೆ ಜಾನ್ಸನ್ ಬೇಬಿ ಪೌಡರ್ ಪ್ರಕರಣ ಮಾತ್ರವಲ್ಲದೆ.. ಹಲವಾರು ವಿವಾದಗಳು ಆ ಕಂಪನಿಯ ಮೇಲಿವೆ. ಇದುವರೆಗೂ ಅವರ ಬ್ಯುಸಿನೆಸ್ ಪಾಸಿಟಿವ್ ಸೈಡ್ ಮಾತ್ರ ನೋಡಿದ ನಾವು ಈಗ ಅದರ ಮೇಲಿರುವ ಕೇಸುಗಳು ಹಾಗೂ ವಿವಾದಗಳ ಕುರಿತು ನೋಡೋಣ ಬನ್ನಿ.
1982 ರಲ್ಲಿ ಮೊದಲ ಬಾರಿಗೆ ಆ ಕಂಪನಿಯ ಥೈಲೆನಾಲ್ ಮೇಲೆ ಕೇಸ್ ರಿಜಿಸ್ಟರ್ ಆಗುತ್ತದೆ. ಅದಕ್ಕೆ ಕಾರಣ ಆ ಮಾತ್ರೆಯನ್ನು ಸೇವಿಸಿದ 7 ಜನ ಸಾವನಪ್ಪಿದ್ದರು. ಹಾಗಾಗಿ ಆ ಮಾತ್ರೆಯನ್ನು ತಯಾರಿಸಿ ಕಳುಹಿಸಲಾಗಿದ್ದ 30ಮಿಲಿಯನ್ ಬಾಟಲ್ ಗಳನ್ನು ಹಿಂಪಡೆದು ಪರೀಕ್ಷಿಸಲಾಯಿತು. ಅಮೆರಿಕಾದ ಫುಡ್ & ಡ್ರಗ್ ಅಡ್ಮಿನಿಸ್ಟ್ರೇಷನ್ ಅಂದರೆ ಎಫ್.ಡಿ.ಎ ಅವರ ವಿಚಾರಣೆಯ ನಂತರ ತಿಳಿದು ಬಂದದ್ದೇನೆಂದರೆ.. ಆ ಮಾತ್ರೆಯಲ್ಲಿ ಸೈನೈಡ್ ಬಳಸಲಾಗಿದ್ದರೂ.. ಅದು ಬಳಕೆಯಾದದ್ದು ಗ್ರಾಹಕರ ಕಡೆಯಿಂದಲೇ ಹೊರತು ಕಂಪೆನಿಯಿಂದಲ್ಲ. ಇದರ ನಂತರ ಎಫ್.ಡಿ.ಎ ಒಂದು ಮಹತ್ವದ ನಿರ್ಧಾರವನ್ನು ಹೊರಹಾಕಿತು. ಅದೇನೆಂದರೆ ಯಾವುದೇ ಕ್ಯಾಪ್ಸುಲ್ ಆಗಿದ್ದರೂ.. ಅದರಲ್ಲಿ ಪೂರ್ಣ ಪ್ರಮಾಣದ ಸಾಲಿಡ್ ಫಿಲ್ ಆಗಿ, ಅದನ್ನು ತೆರೆಯಲಾಗದಂತೆ ಅದರ ಮೇಲೆ ಜೆಲ್ ಕೋಟಿಂಗ್ ಹೊಂದಿರಬೇಕೆಂಬುದು.
2009-2013ರ ಸಮಯದಲ್ಲಿ ಮೆಕ್ನೈಲ್ ಪ್ರಾಡಕ್ಟ್ ಗಳಾದ ಥೈಲೆನಾಲ್, ಮಾರ್ಟಿನ್, ಜೈರ್ಟೆಕ್, ವಿಸಿನ್ ಐ ಎಂಬ ಔಷಧಿಗಳ ಕುರಿತು ನೆಗೆಟಿವ್ ರಿಪೋರ್ಟ್ ಬಂದಿತು. ಅದೇನೆಂದರೆ ಆ ಪ್ರಾಡಕ್ಟ್ಗಳಲ್ಲಿ ಕೆಲವು ಮೆಟಲ್ ಪೀಸ್ ಕಂಡುಬಂದಿದ್ದವಲ್ಲದೇ.. ಬ್ಯಾಕ್ಟೀರಿಯಗಳು ಕೂಡಾ ಇದ್ದವು. ಎಫ್.ಡಿ.ಎ ವಿಚಾರಣೆ ನಡೆಸಿದಾಗ ಕಂಡುಬಂದದ್ದೆಂದರೆ.. ಈ ಬಾರಿ ತಪ್ಪಿದ್ದದ್ದು ಜಾನ್ಸನ್ ಕಂಪೆನಿಯವರದ್ದೇ.. ತಯಾರಿಕಾ ಘಟಕದಲ್ಲಿ ಉಂಟಾದ ಏರುಪೇರು ಈ ಪ್ರಾಡಕ್ಟ್ ಗಳನ್ನು ಕಲುಷಿತಗೊಳಿಸಿತ್ತು.
1998ರಲ್ಲಿ ಜಾನ್ಸನ್ ಕಂಪೆನಿ ಡೆಪ್ಯೂ ಸಿಂಥೆಸ್ ಎನ್ನುವ ಪ್ರಖ್ಯಾತ ಜಾಯಿಂಟ್ ರಿಪ್ಲೇಸ್ಮೆಂಟ್ ತಯಾರಿಕಾ ಕಂಪನಿಯೊಂದನ್ನು ಖರೀದಿಸಿತು. ಇದರಿಂದ ಹೆಚ್ಚಿನವರು ತಮ್ಮ ದೇಹ ಸೌಂದರ್ಯವನ್ನು ಮಾರ್ಪಡಿಸಿಕೊಳ್ಳಲು ಬೇಕಾದ ಚಿಕಿತ್ಸೆಗೆ ಉಪಯುಕ್ತವಾಗುತ್ತಿತ್ತು. ಹಿಪ್ ರಿಪ್ಲೇಸ್ಮೆಂಟ್ ಮಾಡಲು ಮೆಟಲ್-ಆನ್-ಮೆಟಲ್ ಡಿಸೈನ್ ಮಾಡಿದ ಮೊದಲ ಮ್ಯಾನುಫ್ಯಾಕ್ಚರಿಂಗ್ ಕಂಪನಿ ಎಂಬ ಹೆಗ್ಗಳಿಕೆಯನ್ನು ಇದು ಪಡೆದರೂ.. ಇದನ್ನು ಬಳಸಿದ 70,000 ಗ್ರಾಹಕರು ತೊಂದರೆಗೊಳಗಾದರು. ಎ.ಎಸ್.ಆರ್ ಹಿಪ್ ಪ್ರಾಡಕ್ಟ್ ಗಳನ್ನು ಕೆಲವೇ ತಿಂಗಳುಗಳಲ್ಲಿ ನಿಲ್ಲಿಸಲಾಯಿತು.
ಇದಾದ ನಂತರ ಜಾನ್ಸನ್ ಪ್ರಡಾಕ್ಸಾ ಮತ್ತು ಕ್ಸಾರೆಲ್ಟೋ ಎನ್ನುವ ಎರಡು ಮೆಡಿಕೇಶನ್ ಗಳನ್ನು ತಯಾರಿಸಿತು. ಇವು ಬ್ಲಡ್ ಥಿನ್ನರ್ ಗಳು. ಇವುಗಳ ಮುಖ್ಯ ಕಾರ್ಯವೆಂದರೆ, ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆದು ರಕ್ತ ಪರಿಚಲನೆಯನ್ನು ಸರಾಗಗೊಳಿಸುತ್ತಿದ್ದವು. ಹಾರ್ಟ್ ಅಟ್ಯಾಕ್ ಅಥವಾ ಸ್ಟ್ರೋಕ್ ಆಗುವ ಚಾನ್ಸ್ ಹೆಚ್ಚಿರುವವರಿಗೆ ಬ್ಲಡ್ ಥಿನ್ನರ್ ಗಳನ್ನು ಡಾಕ್ಟರ್ ಗಳು ರೆಫರ್ ಮಾಡುತ್ತಾರೆ. ಪ್ರಡಾಕ್ಸಾ ಮತ್ತು ಕ್ಸಾರೆಲ್ಟೋ ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತಿತ್ತಾದರೂ.. ವ್ಯತಿರಿಕ್ತವಾಗಿ ಹೆಚ್ಚುವರಿ ಬ್ಲೀಡಿಂಗ್ ಅನ್ನು ಉಂಟುಮಾಡುತ್ತಿತ್ತು. ನೂರಕ್ಕೂ ಹೆಚ್ಚಿನ ಸಾವು ಹಾಗೂ ಸಾವಿರಕ್ಕೂ ಹೆಚ್ಚಿನವರಿಗೆ ತೊಂದರೆಯಾದಾಗ ಇದನ್ನು ಕೂಡಾ ನಿಲ್ಲಿಸಲಾಯಿತು.
ಕೋವಿಡ್ ಸಂದರ್ಭದಲ್ಲಿಯೂ ತನ್ನ ರಿಸರ್ಚ್ & ಡೆವಲಪ್ಮೆಂಟ್ ವತಿಯಿಂದ ಕೋವಿಡ್ ಲಸಿಕೆಂದನ್ನು ಕಂಡುಹಿಡಿದರಾದರೂ.. ಕೇವಲ ಒಂದೇ ಡೋಸೇಜ್ ಸಾಕು ಎನ್ನುತ್ತಾ ಟ್ರಯಲ್ ಗಾಗಿ ಪರ್ಮಿಷನ್ ಪಡೆದರು. ಆದರೆ, ಈ ಟ್ರಯಲ್‌ಗೆ ಒಳಗಾದ 10 ಜನರಲ್ಲಿ 6 ಜನರು ರಕ್ತ ಹೆಪ್ಪುಗಟ್ಟುವಿಕೆಯಿಂದ ಸಾವನ್ನಪ್ಪಿದಾಗ ಈ ಲಸಿಕೆಯನ್ನು ಹೊರತರದೆ ಆ ಪ್ರಯತ್ನವನ್ನು ಅಲ್ಲಿಗೇ ಬಿಡಲಾಯಿತು.
ಇನ್ನು ಜಾನ್ಸನ್ ಕಂಪನಿ ಗೆ ಹೆಚ್ಚು ವಿವಾದ ಹಾಗೂ ಅದರ ರೆಪ್ಯೂಟೇಶನ್ ಗೆ ಹೆಚ್ಚು ಹಾನಿ ಮಾಡಿದ ಕೇಸ್ ಎಂದರೆ ಜಾನ್ಸನ್ ಟಾಲ್ಕಂ ಪೌಡರ್. ವಿಪರ್ಯಾಸವೆಂದರೆ,ಜಾನ್ಸನ್ ಟಾಲ್ಕಂ ಪೌಡರ್ ಬಳಸುತ್ತಿರುವವರಲ್ಲಿ ಮಕ್ಕಳಿಗಿಂತ ವಯಸ್ಕರೇ ಹೆಚ್ಚಂತೆ.. ಜಾನ್ಸನ್ ಕಂಪನಿಯ ಸಂಶೋಧನೆಯ ಪ್ರಕಾರ ಈ ಪೌಡರ್ 10% ಮಕ್ಕಳಿಗೆ ಬಳಕೆಯಾದರೆ 70% ಬಳಸುತ್ತಿರುವುದು ವಯಸ್ಕರು. ಜಾನ್ಸನ್ ಬೇಬಿ ಪೌಡರ್ ಹಾಗೂ ಶೋವರ್-ಟು-ಶೋವರ್ ಪೌಡರ್ ಗಳಲ್ಲಿ ಮೊದಲಿಗೆ ಟಾಲ್ಕಮ್ ಪೌಡರ್ ನ ಅಂಶವಿತ್ತು. ಇದಾದ ನಂತರ ಈ ಟಾಲ್ಕಂ ಪೌಡರ್ ಅಂಶದ ಬದಲಾಗಿ ಇದನ್ನು ರೀ-ಫಾರ್ಮುಲೇಟ್ ಮಾಡಿ ಇದಕ್ಕೆ ಕಾರ್ನ್ ಸ್ಟಾರ್ಚ್ ಅನ್ನು ಬಳಸುತ್ತಿದ್ದೇವೆ ಎಂಬ ಹೇಳಿಕೆಯನ್ನು ನೀಡಿದ್ದರು. ಇದಾದ ನಂತರ ಕಂಪನಿಯವರು ಇದನ್ನು ಅಮೇರಿಕಾದ ಹೊರತಾಗಿ ಬೇರೆಲ್ಲಿಯೂ ಮಾರಾಟ ಮಾಡುವುದಿಲ್ಲವೆಂದು ಹೇಳಿಕೆ ನೀಡಿದ್ದರು. ಇದರಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿದ್ದು, ಇದು ಓವರಿಯನ್ ಕ್ಯಾನ್ಸರ್ ಉಂಟುಮಾಡುವಲ್ಲಿ ಹೆಚ್ಚಿನ ಪಾತ್ರವಹಿಸುತ್ತದೆ ಎಂದು ಓವೆರಿಯನ್ ಕ್ಯಾನ್ಸರ್ ಪಾಸಿಟಿವ್ ಮಹಿಳೆಯೊಬ್ಬರು ಧನಿ ಎತ್ತುವುದರ ಮೂಲಕ ಕೇಸ್ ರಿಜಿಸ್ಟರ್ ಮಾಡಿದರು. ಅಲ್ಲಿಂದ ಇಲ್ಲಿಯವರೆಗೂ.. ಜಾನ್ಸನ್ ಟಾಲ್ಕಂ ಪೌಡರ್ ಮೇಲಿರುವ ಕೇಸ್ಗಳು ಬರೋಬ್ಬರಿ 38,000ಕ್ಕೂ ಅಧಿಕ. ಆ ಮಹಿಳೆಗೆ 4ಬಿಲಿಯನ್ ಪರಿಹಾರ ಧನ ನೀಡುವಂತೆ ಆದೇಶಿಸಿತು ಕೋರ್ಟ್. ಆದರೆ, ಇಂದಿಗೂ ಟಾಲ್ಕಂ ಪೌಡರ್ ನ ದಾವೆಗಳು ಮುಗಿದಿಲ್ಲ. ಇನ್ನೂ ಜಾನ್ಸನ್ ಕಂಪೆನಿ ಕಡೆಯಿಂದ ಕಾನೂನಾತ್ಮಕ ಹೋರಾಟಗಳು ನಡೆಯುತ್ತಲೇ ಇವೆ. ಎಷ್ಟೋ ಕೇಸುಗಳನ್ನು ಕೋರ್ಟಿನ ಆಚೆಯೂ ಪರಿಹರಿಸಿಕೊಳ್ಳಲು ಪ್ರಯತ್ನಿಸಿದೆ. ಆದರೆ, ಆಫೀಶಿಯಲ್ ಮೂಲಗಳ ಪ್ರಕಾರ.. ಇದಿನ್ನೂ ಸಂಪೂರ್ಣವಾಗಿ ಬಗೆಹರಿಯದ ವಿಚಾರ. ಅಲ್ಲದೆ, ಮೂಲ ತಯಾರಿಕಾ ಘಟಕದಲ್ಲಿ ಪರೀಕ್ಷಿಸಿದ ಪೌಡರ್ ನಲ್ಲಿ ಕೊಂಚ ಕ್ಯಾನ್ಸರ್ ಕಾರಕ ಅಂಶವು ಪತ್ತೆಯಾಗಿದೆ ಎಂದು ಹೇಳಿದ್ದರೂ.. ಕೋರ್ಟಿನಲ್ಲಿ ಕೇಸುಗಳು ಇರುವುದರಿಂದ ಈ ಕುರಿತು ಸಂಪೂರ್ಣ ಆಫೀಶಿಯಲ್ ಮಾಹಿತಿ ಲಭ್ಯವಿಲ್ಲ.
ಇದೆಲ್ಲದಕ್ಕೂ ಕಾರಣಗಳನ್ನು ಹುಡುಕುತ್ತಾ ಹೋದಾಗ ಕಂಡದ್ದು.. ಒಂದು ಬಾರಿಯೇನೋ ಗ್ರಾಹಕರ ತಪ್ಪಾಗಿತ್ತು. ಆದರೆ, ಬೇರೆಯ ಕೇಸುಗಳಲ್ಲಿ ಜಾನ್ಸನ್ ಕಂಪನಿಯ ಉದ್ಯೋಗಿಗಳೇ ಲಂಚ ಪಡೆದು ಈ ಅಕ್ರಮದಲ್ಲಿ ಭಾಗಿಯಾಗಿರುವ ಸಾಕ್ಷಿಗಳಿವೆ. ಅಲ್ಲದೆ, ಜಾನ್ಸನ್ ಕಂಪನಿಯ ಪ್ರತಿಸ್ಪರ್ಧಿ ಕಂಪನಿಗಳು ಇದನ್ನು ಮಾಡಿಸಿವೆ ಎನ್ನಲಾದರೂ.. ಇದಕ್ಕೆ ಅಧಿಕೃತವಾದ ಮಾಹಿತಿಗಳಿಲ್ಲ. ಕೆಲಸಗಾರರ ನಿರ್ಲಕ್ಷ್ಯ, ಸೆಕ್ಯೂರಿಟಿಯ ಅಜಾಗರೂಕತೆ, ಲಂಚ ಕಾರಣವಾಗಿದೆ. ಕಂಪನಿಯ ಒಳಜಗಳಗಳು ಸಹಾ ಇದಕ್ಕೆ ಕಾರಣವೆಂದು ಹೇಳಲಾಗುತ್ತದೆ. ಕಾರಣಗಳೇನಿದ್ದರೂ.. ಬ್ಯುಸಿನೆಸ್ ನಲ್ಲಿ ಇಷ್ಟು ನೆಗೆಟಿವ್ ಅಂಶಗಳು ಖಂಡಿತವಾಗಿ ಮುಂದೊಂದು ದಿನ ಬ್ಯುಸಿನೆಸ್ ಗೆ ಮುಳುವಾಗವುದರಲ್ಲಿ ಯಾವುದೇ ಸಂದೇಹವಿಲ್ಲ.
ಬ್ಯುಸಿನೆಸ್ ನಲ್ಲಿ ಯಾವ ತಪ್ಪು ಮಾಡಿದರೆ ಹಾಗೂ ಎಲ್ಲಿ ನಿರ್ಲಕ್ಷ್ಯ ಮಾಡಿದರೆ ಯಾವ ರೀತಿಯ ಅಪಾಯವಾಗುತ್ತದೆ.. ಹಾಗೂ ಅಂತಹಾ ಅಪಾಯ ಕೇವಲ ಬ್ಯುಸಿನೆಸ್ ಗಲ್ಲ. ಅಮಾಯಕರ ಸಾವಿನಲ್ಲಿಯೂ ಅಂತ್ಯವಾಗಬಹುದು. ಬ್ಯುಸಿನೆಸ್ ನಲ್ಲಿ ಜಾಗರೂಕತೆ ಎಷ್ಟು ಮುಖ್ಯವಾಗುತ್ತದೆ ಎಂಬುದನ್ನು ಅವರ ನೆಗೆಟಿವ್ ಅಂಶಗಳಿಂದ ಕಲಿಯಬೇಕಾಗಿದೆ. ಇನ್ನು ಮಾರ್ಕೆಟಿಂಗ್, ಸಂಶೋಧನೆ ಹಾಗೂ ಹೊಸದನ್ನು ತಲುಪಿಸುವ ಪರಿ. ಇವೆಲ್ಲವೂ.. ನೆಗೆಟಿವ್ ಎಫೆಕ್ಟ್ ನ ಆಚೆಯೂ ಲಾಭ ತರುತ್ತಿವೆ ಎಂಬುದು ಗಮನಿಸಬೇಕಾದ ಅಂಶ. ತನ್ನ ಪಾಸಿಟಿವ್ ಹಾಗೂ ನೆಗೆಟಿವ್ ಶೇಡ್ ಎರಡರಿಂದಲೂ ಬ್ಯುಸಿನೆಸ್ ನ ಪಾಠ ಹೇಳುತ್ತಿದೆ ಜಾನ್ಸನ್ ಅಂಡ್ ಜಾನ್ಸನ್.
( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ