ಪುಸ್ತಕದ ಶೀರ್ಷಿಕೆ : ಇಂತಿ ನಿಮ್ಮ ಆತ್ಮೀಯ ಸುನೀತಾ-ಜಯಪ್ರಕಾಶ್
ಲೇಖಕರು : ಕೌಶಿಕ್ ಕೂಡುರಸ್ತೆ
ಪ್ರಕಾಶಕರು : ಕೆಂಜಳಿಲು ಪ್ರಕಾಶನ
ಪ್ರಥಮ ಮುದ್ರಣ : 2018
ಪುಟಗಳು : 102
ಬೆಲೆ : 80 ರೂ.
ಕೌಶಿಕ್ ಕೂಡುರಸ್ತೆಯವರು ಬರೆದಿರುವ ಸುನೀತಾ ಹಾಗೂ ಜಯಪ್ರಕಾಶ್ ಅವರ ಪ್ರೇಮಕತೆ ಬರೀ ಪ್ರೇಮಗಾಥೆಯಲ್ಲ. ಇದು ಬದುಕಿನ ಕಥೆ. "ಬಾಹ್ಯ ನಶ್ವರ ಆಂತರ್ಯ ಈಶ್ವರ" ಎಂಬ ಅಡಿಬರಹವೂ ಇದೆ. ಗೊತ್ತಿಲ್ಲದ ಅವರೊಂದಿಗೆ ನಮ್ಮ ಆತ್ಮೀಯತೆಯನ್ನು ಬೆಸೆಯುವುದೂ ಹೌದು. ಕಾಲ್ಪನಿಕ ಪ್ರೇಮಕಥೆಯನ್ನು ಓದುವ ನಮಗೆ ಇದೊಂದು ನೈಜ ಘಟನೆ. ಅವರ ಸಂಕೀರ್ಣವಾದ ಬದುಕಿನ ವಾಸ್ತವ ತಿಳಿಸಿದ ಘಟನೆ. ಒಬ್ಬರ ಬದುಕನ್ನು ಕಥೆಯಾಗಿಸುವುದು, ಅದರಲ್ಲಿಯೂ ನೈಜ ಘಟನೆಯನ್ನು ಅಕ್ಷರ ರೂಪಕ್ಕಿಳಿಸುವುದು ಸವಾಲೇ ಸರಿ. ಎಲ್ಲಿ ಅತಿಶಯೋಕ್ತಿಗಳಿಲ್ಲ. ಎಲ್ಲಿಯೂ ಅವರ ಭಾವನೆಗಳಿಗೆ ಧಕ್ಕೆಯಾಗದಂತೆ, ಸಮಚಿತ್ತದಿಂದ ಕಟ್ಟಿಕೊಟ್ಟದ್ದು ಇಷ್ಟವಾಯಿತು. ಪುಸ್ತಕದ ಹಿಂಬದಿಯಲ್ಲಿ ಈ ದಂಪತಿಗಳ ಚಿತ್ರವೂ ಇದೆ.
ಸೌಂದರ್ಯ ಮಾಸಿದ ನಂತರವೋ ಅಥವಾ ಆಕರ್ಷಣೆ ಕಳೆದ ನಂತರವೂ ದೂರವಾಗುವ ಜೋಡಿಗಳನ್ನು ಹೆಚ್ಚು ಕಾಣುತ್ತಿರುವಾಗ ಇಂತಹಾ ಜೋಡಿ ನಿಜ ಪ್ರೀತಿಯ ಅರ್ಥ ತಿಳಿಸುತ್ತವೆ. ಹುಡುಗಿ ಅಥವಾ ಹುಡುಗಿಗೆ ದೈಹಿಕ ವಿಕಲತೆ ಇಲ್ಲದಿದ್ದರೂ.. ಕೇವಲ ಬಣ್ಣ, ತೂಕ, ಉದ್ದ-ಕುಳ್ಳು ಎಂಬ ಮಾಪನಗಳಿಟ್ಟು ಅವರನ್ನು ನಿರಾಕರಿಸುವವಾರ ನಡುವೆ ಮುಖದ ಅಂದಕ್ಕಿಂತಲೂ ಅಂತರಂಗದ ಸೌಂದರ್ಯದೊಡನೆ ಬದುಕುತ್ತೇನೆ ಎಂದು ಬಾಳುತ್ತಿರುವ ಜಯಪ್ರಕಾಶ್ ಸ್ಪೂರ್ತಿಯಾಗುತ್ತಾರೆ.
ಸುನೀತಾ ಹಾಗೂ ಜಯಪ್ರಕಾಶ್ ಅವರ ಜೀವನ, ದಿನಪತ್ರಿಕೆಯೊಂದರಲ್ಲಿ ಸುದ್ದಿಯಾಗಿ, ನಂತರ ಫೇಸ್ಬುಕ್ನಲ್ಲಿಯೂ ಶೇರ್ ಆಯಿತು. ಪೋಸ್ಟ್ ಓದಿದ ಕೌಶಿಕ್ ಜಯಪ್ರಕಾಶ್ ಅವರನ್ನು ಪರಿಚಯ ಮಾಡಿಕೊಂಡು ಬೆಳ್ಳಂದೂರಿನ ವಾಟರ್ ಮಾರ್ಕ್ ಅಪಾರ್ಟ್ಮೆಂಟ್ ನ ಅವರ ಮನೆಗೆ ಹುಡುಕಿ ಹೋಗುತ್ತಾರೆ. ಮಾತುಕತೆಯ ನಡುವೆ ಸುನೀತಾ ಕೂಡಾ ಬರಹಗಾರರೇ ಎಂದು ತಿಳಿಯುತ್ತದೆ. ಬಿಡುವಿಲ್ಲದ ಅವರ ಕೆಲಸದಿಂದ ಬರೆಯಲು ಸಾಧ್ಯವಾಗದೆ ಉಳಿದದ್ದು ಇವರಿಂದಾಗಿ ಕಾರ್ಯರೂಪಕ್ಕೆ ಬರುತ್ತದೆ. ಅಂದ ಹಾಗೆ ಸುನೀತಾ ಹಾಗೂ ಜಯಪ್ರಕಾಶ್ ಇಬ್ಬರಿಗೂ ಸರಿಯಾಗಿ ಕನ್ನಡ ಬರುತ್ತಿಲ್ಲವಾದ್ದರಿಂದ ಎಲ್ಲಾ ಪ್ರಶ್ನೆಗಳಿಗೂ ಉತ್ತರಗಳನ್ನು ಇಂಗ್ಲೀಷ್ ನಲ್ಲಿಯೇ ಪಡೆಯುತ್ತಾರೆ. 10 ಗಂಟೆಯ ಸಂದರ್ಶನ ರೂಪದ ಅಂಶಗಳನ್ನು ಆಂಗ್ಲಭಾಷೆಯಲ್ಲಿ ಬರೆದು, ನಂತರ ಅದನ್ನು ಕನ್ನಡಕ್ಕೆ ರೂಪಾಂತರಗೊಳಿಸುತ್ತಾರೆ ಕೌಶಿಕ್. ಈ ಪುಸ್ತಕ ಓದಿದ ನಂತರ ನಿಷ್ಕಲ್ಮಶ ಪ್ರೀತಿಯ ಭಾವ ನಮ್ಮನ್ನೂ ಆವರಿಸುತ್ತದೆ.
ಖಂಡಿತವಾಗಿಯೂ ಇದು ನವಿರಾದ ಸಾದಾ-ಸೀದಾ ಜೀವನದ ಕಥೆಯಲ್ಲ. ಬದುಕು ಸುನೀತಾರ ಬದುಕಿನಲ್ಲಿ ಒಂದೊಳ್ಳೆಯ ತಿರುವನ್ನೇ ತಂದಿಡುತ್ತದೆ. ಮುಖವೇ ಇಲ್ಲದಂತೆ ಬದುಕುವ ಪರಿಸ್ಥಿತಿಯುಂಟಾಗುತ್ತದೆ. ತಂದೆ-ತಾಯಿಯರೇ ಮುಜುಗರಗೊಳ್ಳುತ್ತಿರುವ ಸಂದರ್ಭದಲ್ಲಿ ಪ್ರೀತಿಯಿಂದ ಸಂಗಾತಿಯಾಗಿಸಿಕೊಳ್ಳುವುದು ಜಯಪ್ರಕಾಶ್.
"ಕಣ್ಣಲ್ಲಿದ್ದ ಕನಸುಗಳಿಗೆ ಬರವಿಲ್ಲ. ಆದರೆ, ಅದನ್ನು ಸಾಕಾರಗೊಳಿಸಲು ಬೇಕಾದ ಹಾದಿಗೆ ಬರವಿತ್ತು." ಇದು ಸುನೀತಾರ ಬದುಕು. ಕುಡಿತದ ಅಮಲಿನಲ್ಲಿರುತ್ತಿದ್ದ ಅಪ್ಪ. ಬಡತನದ ಬದುಕು. ಆದರೆ, ಸ್ವಾತಂತ್ರ್ಯಕ್ಕೆ ಹೆಚ್ಚು ಅಡ್ಡಿ ಮಾಡುದಿದ್ದರಿಂದ ಒಳ್ಳೆಯ ಅಪ್ಪಂದಿರ ಸಾಲಿಗೆ ಸೇರಿಸುತ್ತೇನೆ ಎನ್ನುತ್ತಾರೆ ಅಪ್ಪನ ಬಗ್ಗೆ. ಎಲ್ಲಿದ್ದರೂ ಸದಾ ಸಂತೋಷವನ್ನು ಆಶಿಸುವ ತಾಯಿಯನ್ನು ಪಡೆದಿರುತ್ತಾರೆ.
ತಮಿಳುನಾಡಿನ ಒಂದು ಸಣ್ಣ ಹಳ್ಳಿ, ತಿರುಪುರದಲ್ಲಿ ಜನಿಸಿದ ಇವರು ಕೊಯಮತ್ತೂರಿಗೆ ಹತ್ತಿರವಿದ್ದರು. ತಾಯಿ ಲತಿಕಾ ಅಂಗನವಾಡಿಯಲ್ಲಿ ಕೆಲಸ ಮಾಡುತ್ತಿದ್ದರು. ತಂದೆ ಮುರಳಿಧರನ್ ಅಲ್ಲಿ-ಇಲ್ಲಿ ಸಣ್ಣ-ಪುಟ್ಟ ಎಲೆಕ್ಟ್ರಿಷಿಯನ್ ಕೆಲಸ ಮಾಡುತ್ತಿದ್ದರು. ಸುನೀತಾರೆ ಮೊದಲ ಮಗಳು. ಅವರ ತಂಗಿ ಅಂಜಲಿ (ಅಂಜು) ಹೆಚ್ಚಿನ ಬಾಲ್ಯ ಕಳೆದದ್ದು ಅಜ್ಜಿಯ ಬಳಿಯೇ.. ಚಿಕ್ಕವಳಿದ್ದಾಗಿನಿಂದ ಇಂಗ್ಲಿಷ್ ಮತ್ತು ಹಿಂದಿ ಭಾಷೆಯ ಮೇಲೆ ಹಿಡಿತ ಚೆನ್ನಾಗಿತ್ತು. ಹಾಗಾಗಿ, ಇವರಿಗೆ ಮುಂದೆ ಬೆಂಗಳೂರಿನಂತಹಾ ಪರಿಚಯವಿಲ್ಲದ ಮಹಾನಗರದಲ್ಲಿಯೂ ಜೀವನ ಸಾಗಿಸಲು ಸುಲಭವಾಗಿತ್ತು. ಯಾರ ಪರಿಚಯವಿಲ್ಲದಿದ್ದರೂ ಕೇವಲ 18 ವರ್ಷ ತುಂಬಿದೆ ಎಂಬ ಧೈರ್ಯದೊಂದಿಗೆ ಬದುಕಬೇಕೆಂಬ ಛಲದೊಂದಿಗೆ ಬೆಂಗಳೂರಿಗೆ ಕಾಲಿಟ್ಟ ಸುನೀತಾಳ ಬದುಕು ಮುಂದೆ ಬದಲಾಯಿತು. ಸುನೀತಾ ಓದಿದ್ದೇನು, ಆಕೆ ಸೇರಿದ ಕೆಲಸ ಯಾವುದು.. ಬದುಕಿನೊಂದಿಗೆ ಗುದ್ದಾಡಿದೆಲ್ಲವನ್ನು ನೀವು ಓದಿಯೇ ತಿಳಿಯಿರಿ.
ತನ್ನ ಬಾಲ್ಯದ ನೋವುಗಳನ್ನೆಲ್ಲಾ ಮರೆಸುವಂತಹಾ ಪ್ರೀತಿ ಮೊದಲಿಗೇ ದೊರಕಲಿಲ್ಲ ಸುನೀತಾಳಿಗೆ. ಬದಲಾಗಿ ಸಿಕ್ಕ ಪ್ರೀತಿಗಳೆಲ್ಲವೂ ಮತ್ತೆ ಅವಳನ್ನು ಪರೀಕ್ಷೆಗೆ ಗುರಿ ಮಾಡಿದಂತಹವೇ.. ಎಲ್ಲವನ್ನೂ ಬಿಟ್ಟು ಅಮ್ಮನ ಮಡಿಲಿಗೆ ಮರಳಬೇಕು ಎನ್ನುವಷ್ಟರಲ್ಲಿಯೇ ಸಂಭವಿಸಿತ್ತು ಆ ಅಪಘಾತ. ಅಪಘಾತ ಸಂಭವಿಸಿದ್ದೇಗೆ ಎಂಬುದನ್ನು ನೀವೇ ಓದಿ.
ಆದರೆ, ಆ ಅಪಘಾತ ಆದ ನಂತರ ಆಕೆ ಬದುಕುವುದೇ ಸಂಶಯವಿತ್ತು. ಆಕೆಯ ಕಂಡೀಶನ್ ಬಹಳ ಸೀರಿಯಸ್ ಆಗಿತ್ತು. ಮುಖ ಸಂಪೂರ್ಣ ಜಜ್ಜಿ ಹೋಗಿ, ಉಸಿರಾಡಲೂ ಕಷ್ಟ ಪಡಬೇಕಿತ್ತು. ತಾಯಿ-ತಂಗಿ ಏನು ಮಾಡಬೇಕೆಂದು ತೋಚದೆಯೇ ಬೆಂಗಳೂರಿಗೆ ಬಂದಿಳಿದರು. ಕೆಲ ಸ್ನೇಹಿತರು ನೆರವಾಗಿದ್ದರೂ.. ಮುಂದಿನ ಬದುಕು ಸಾಗಬೇಕಿತ್ತಲ್ಲವೇ..? ಎಲ್ಲಾ ಸಂದರ್ಭದಲ್ಲೂ ಹೆಚ್ಚಿನ ಧೈರ್ಯ ನೀಡಿದ್ದು ತಂಗಿ ಅಂಜಲಿ.
ಮೊದಲಿನಂತಾಗಲು ಸಾಧ್ಯವೇ ಇರಲಿಲ್ಲ. ಧ್ವನಿ ಉಡುಗಿ ಹೋಗಿತ್ತು. ಮೂಗಿರಬೇಕಾದ ಜಾಗದಲ್ಲಿ ಹಲ್ಲುಗಳಿದ್ದವು. ಕಲಸಿದ ಮುಖ, ಕಿವಿಗಳು. ಆದರೂ, ಆ ಸಂದರ್ಭದಲ್ಲಿ ಅಮ್ಮ ಮತ್ತು ತಂಗಿ ಬಂದಾಗ ಸುನೀತಾ ಕೈಯನ್ನತ್ತಿ ಗಾಳಿಯಲ್ಲಿ ಲೈಫ್ (ಇಂಗ್ಲೀಷ್ ನಲ್ಲಿ) ಎಂದೂ.. ಪಕ್ಕದಲ್ಲಿ ಬೆಳದಿಂಗಳ ಪೂರ್ಣಚಂದಿರನನ್ನು ಬರೆದು ನಗುವಂತೆ ಮೂಡಿಸಿದ ಚಿತ್ತಾರ ನಿಜಕ್ಕೂ ಧೈರ್ಯ ಮೂಡಿಸುವಂತಹದ್ದು.
ಹಲವಾರು ಸರ್ಜರಿಗಳು ನಡೆದವು. ಹೊಸ ರೂಪ ನೀಡಲು ಶ್ರಮಿಸಿದ ಡಾಕ್ಟರ್ ಗಳು ಹಲವರು. ಆಸ್ಪತ್ರೆಯ ಬದುಕಿನ ಕಠಿಣ ಕ್ಷಣಗಳನ್ನು ಸಹಾ ತೆರೆದಿಡುತ್ತಾರೆ. ಹಾಲುಸಿನೇಶನ್ನಲ್ಲಿಯೇ ಬರೋಬ್ಬರಿ 45 ದಿನಗಳನ್ನು ಕಳೆದ ನೆನಪುಗಳನ್ನು ಹೇಳುತ್ತಾರೆ. ಇಂತಹಾ ಸುನೀತಾ ಮತ್ತೆ ಸಾಮಾನ್ಯ ಬದುಕು ನಡೆಸುವುದು ಕಷ್ಟವಾಗಿತ್ತು. ಅಂತಹದ್ದರಲ್ಲಿ ಸಂಗಾತಿ ಜಯಪ್ರಕಾಶ್ ಸಿಕ್ಕಿದ್ದಾದರೂ ಹೇಗೆ..?
ಚೆನ್ನೈ ಎಗ್ಮೋರ್ ನ ಪುಟ್ಟಹಳ್ಳಿ ನುಂಗಂಬಾಕಮ್ ನಲ್ಲಿ ವಾಸವಾಗಿದ್ದರು. ಜಯಪ್ರಕಾಶ್ ರವರ ಅಮ್ಮ ಸುಮತಿ, ಅಪ್ಪ ಪೂರ್ಣಚಂದ್ರ. ಇದ್ದ ಒಬ್ಬನೇ ಅಣ್ಣನ ಹೆಸರು ಸೂರ್ಯಪ್ರಕಾಶ್. ತಂದೆ ಮಿಸ್ಟರ್ ಚೆನ್ನೈ ಆಗಿದ್ದವರು. ಅಣ್ಣನ ಹನ್ನೆರಡನೇ ತರಗತಿ ಮುಗಿದು ಇಂಜಿನಿಯರಿಂಗ್ ಗೆ ಕೊಯಮತ್ತೂರಿನಲ್ಲಿ ಸೀಟು ಸಿಕ್ಕಾಗ ಮೊದಲಿಗೆ ಅಪ್ಪ ಬಾಡಿಗೆ ಮನೆ ಮಾಡಿ ಅವರೊಂದಿಗಿದ್ದರು. ಇತ್ತ ಅಮ್ಮನಿಗೂ, ಇವರಿಗೂ ಬಿಟ್ಟಿರಲಾರದೆ ಚೆನ್ನೈಯನ್ನು ತೊರೆದು ಕೊಯಮತ್ತೂರಿಗೆ ತೆರಳುತ್ತಾರೆ. ಹೊಸ ಜಾಗ, ಹೊಸ ಸ್ನೇಹಿತರು, ಹೊಸ ಶಾಲೆ. ಅಲ್ಲಿಯೇ ನೋಡಿದ್ದು ಸುನೀತಾಳನ್ನು.
ಹೆಚ್ಚು ಕಷ್ಟಗಳನ್ನೇ ಅನುಭವಿಸಿದ ಸುನೀತಾ ಹಾಗೂ ಅತಿ ಹೆಚ್ಚು ಪ್ರೀತಿ, ಕಾಳಜಿಯೊಂದಿಗೆ ಬೆಳೆದಿದ್ದ ಜಯ್ ಮುಂದೆ ಒಂದಾಗಲಿಕ್ಕಿತ್ತು. ಜಯ್ ಮಾತುಗಳ ಮೂಲಕ ಸುನೀತಾ ನಮ್ಮ ಮುಂದೆ ಕಾಣುತ್ತಾ ಹೋಗುತ್ತಾರೆ. ಮುಂದೆ ಸುನೀತಾ ಹಾಗೂ ಜಯಪ್ರಕಾಶ್ ಅವರ ಸ್ನೇಹ ಬೆಳೆದಿದ್ದೇಗೆ.. ಅವರ ಪ್ರೀತಿಯನ್ನು ಸುನೀತಾ ಒಪ್ಪಿದ್ದೇಕೆ.. ಅವಳನ್ನು ಸಂಗಾತಿಯಾಗಿ ಸ್ವೀಕರಿಸಲು ಜಯಪ್ರಕಾಶ್ ನಿರ್ಧರಿಸಿದಾಗ ಸುನೀತಾ ಅವಳ ಹಿಂದಿನ ಪ್ರೇಮಕಥೆಗಳನ್ನು ಹಾಗೂ ನಡೆದ ಹಳೆಯ ಘಟನೆಗಳನ್ನು ಮುಚ್ಚಿಡದೆ ಹಂಚಿಕೊಂಡಿದ್ದರಾದರೂ.. ಅದೆಲ್ಲದರ ಜೊತೆಗೆ ಮುಖವೇ ಇಲ್ಲದ ಮಡದಿಯನ್ನು ಸ್ವೀಕರಿಸಬೇಕಿದ್ದ ಜಯಪ್ರಕಾಶ್ ಗಟ್ಟಿತನಕ್ಕೂ.. ಕೀಳಿರಿಮೆ ಇಲ್ಲದೆ ಹೊಸ ಬದುಕು ಕಟ್ಟಿಕೊಳ್ಳಲು ಹೊರಟ ಸುನೀತಾಳಿಗೂ ದೊಡ್ಡ ಮೆಚ್ಚುಗೆ.
"ಅಂತರಾಳದ ಅಂದವನ್ನು ಬಯಸಿ, ಪ್ರೀತಿ ಕುರುಡಾದರೂ ಪ್ರೀತಿಸುವ ಮನಸ್ಸು ಕುರುಡಲ್ಲ" ಎಂದು ಎಷ್ಟೇ ಕಷ್ಟ ಬಂದರೂ ಅದನ್ನು ಎದುರಿಸಿ ಜೀವನ ಹಂಚಿಕೊಂಡ ಅವರ ಬದುಕಿನಲ್ಲಿ ಕಾಲಿಟ್ಟದ್ದು ಆತ್ಮೀಯ. ಆ ದಿನಗಳು ಹೇಗಿದೆ ನೀವೇ ಓದಿ ನೋಡಿ.
ಸಾಮಾನ್ಯವಾಗಿ ಎಲ್ಲವೂ ಸರಿ ಇರುವವರಿಗೇ ಹೀಯಾಳಿಕೆ, ಟೀಕೆ-ಟಿಪ್ಪಣಿಗಳು ಹಾಗೂ ಕಾಲು ಎಳೆಯುವಿಕೆ ತಪ್ಪಿದ್ದಲ್ಲ. ಅಂತಹದ್ದರಲ್ಲಿ ಬದುಕಿನ ಬಹು ದೊಡ್ಡ ಘಟ್ಟವನ್ನು ದಾಟಿ, ಪ್ರೀತಿಯನ್ನೇ ಬದುಕಾಗಿಸಿಕೊಂಡು ಬದುಕುತ್ತಿದ್ದವರಿಗೆ ಬಂದ ಅಡೆತಡೆಗಳು, ಕೇಳಿದ ಟೀಕೆ-ಟಿಪ್ಪಣಿಗಳು ಹೇಗಿದ್ದವು ಎಂಬುದನ್ನು ಒಮ್ಮೆ ಯೋಚಿಸಿ ನೋಡಿ. ಆದರೆ, ಎಲ್ಲವನ್ನು ಮೀರಿ ನಿಂತದ್ದು ಅದರೊಳಗಿನ ಆತ್ಮಸ್ಥೈರ್ಯ, ಜೀವನಪ್ರೀತಿ ಹಾಗೂ ಪ್ರೀತಿಎಂ ಇದು ಎಲ್ಲರಿಗೂ ಮಾದರಿಯಾಗುವಂತಹದ್ದು.
"ಅಂದವೇ ಶಾಶ್ವತವಲ್ಲ ಎಂದ ಮೇಲೆ ಅದರೊಂದಿಗೆ ಹುಟ್ಟಿದ ಪ್ರೀತಿಯೂ ಶಾಶ್ವತವಲ್ಲ."
"ಬಾಹ್ಯ ನಶ್ವರ ಆಂತರ್ಯ ಈಶ್ವರ" ಎನ್ನುವ ಲೇಖಕರ ಭಾವಪೂರ್ಣ ನಿರೂಪಣೆ ಪುಸ್ತಕದುದ್ದಕ್ಕೂ ಕಾಡುತ್ತದೆ ಹಾಗೂ ಓದಿ ಮುಗಿದ ನಂತರವೂ ಕಾಡುವ ಪುಸ್ತಕ ಇದು.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ