ಬುಧವಾರ, ಏಪ್ರಿಲ್ 22, 2026

ಹೆಣ್ಣು ಸಂಸಾರದ ಕಣ್ಣು ಮಾತ್ರವಲ್ಲ ಸಮಾಜದ ಕಣ್ಣು ಸಹ


 ಮೊಲೆ, ಮುಡಿ ಬಂದಡೆ ಹೆಣ್ಣೆಂಬರು

ಗಡ್ಡ ಮೀಸೆ ಬಂದಡೆ ಗಂಡೆಂಬರು

ನಡುವೆ ಸುಳಿವ ಆತ್ಮನು

ಹೆಣ್ಣೂ ಅಲ್ಲ ಗಂಡೂ ಅಲ್ಲ ಕಾಣಾ! ರಾಮನಾಥ


ಎನ್ನುವ ಜೇಡರ ದಾಸಿಮಯ್ಯನ ವಚನವನ್ನು ಕೇಳಿದಾಗ ಗಂಡು ಹಾಗೂ ಹೆಣ್ಣು ಇಬ್ಬರನ್ನು ಗುರುತಿಸುವುದು ಇದೇ ಆಧಾರದ ಮೇಲೆಯೇ ಅಲ್ಲವಾ ಎಂದೆನ್ನಿಸದಿರದು. ಆತ್ಮಕ್ಕಿಲ್ಲದ ಲಿಂಗದ ಹಂಗು ದೇಹಕ್ಕೆ ಮಾತ್ರ. ಈ ವ್ಯತ್ಯಾಸದ ಗುರುತಿಸುವಿಕೆ ಇಂದು ಇಲ್ಲಿಯೇ ನಿಲ್ಲದು. ಹೆಣ್ಣೆಂದರೆ ಹೀಗೆಯೇ ಇರಬೇಕು ಎನ್ನುವ ಕಟ್ಟುಪಾಡಿಗೆ ಮುಂದುವರಿಯುತ್ತದೆ. ಹೆಚ್ಚು ಧೈರ್ಯ ಪ್ರದರ್ಶಿಸುವ ಹೆಣ್ಣನ್ನು, ಮುಂದಾಳತ್ವಕ್ಕೆ ಮುಂದಾಗುವ ಹೆಣ್ಣನ್ನು ಗಂಡುಬೀರಿ ಎಂದೂ.. ಗಂಡು ಕೊಂಚ ನಾಚಿದರೆ, ಹೆಚ್ಚು ಅಲಂಕಾರ ಮಾಡಿಕೊಂಡರೆ, ಎಲ್ಲರಿಗೂ ಕಾಣುವಂತೆ ಅತ್ತರೆ ಹೆಣ್ಣಿಗ ರಾಮ ಎಂದೂ ಹಣೆಪಟ್ಟಿ ನೀಡಿಬಿಡುತ್ತಾರೆ. 


ಹೆಣ್ಣಿಗೆ ಧೈರ್ಯ ಪ್ರದರ್ಶಿಸುವ, ಮುಂದಾಳತ್ವ ವಹಿಸಿ ಮುಂದೆ ಸಾಗುವ ಹಕ್ಕಿಲ್ಲವಾ..? ತನ್ನ ಧೈರ್ಯ, ಬುದ್ಧಿವಂತಿಕೆಯಿಂದ ತನ್ನ ವ್ಯಕ್ತಿತ್ವವನ್ನು ಅನಾವರಣಗೊಳಿಸಿಕೊಳ್ಳುವುದಕ್ಕೆ ಕೊಕ್ಕೆ ಏಕೆ ? ಈ ಟೀಕೆ, ಟಿಪ್ಪಣಿಗಳನ್ನು ಮೀರಿ ಮುಂದೆ ಸಾಗಿದರೂ ಗಂಡಿಗೆ ಸಿಗದ ಮನ್ನಣೆ, ಪ್ರಶಸ್ತಿ, ಅಧಿಕಾರಗಳು ಸಿಕ್ಕಾಗ ಅವಳು ಅದನ್ನು ತನ್ನ ಪ್ರತಿಭೆಯಿಂದಲೇ ಪಡೆದುಕೊಂಡಿದ್ದರೂ.. ಅವಳ ಕುರಿತು ಅಸಹನೆ ಕಕ್ಕಲು ಅದಕ್ಕೊಂದು ಕೊಂಕು. ಅವಳ ಚಾರಿತ್ರ್ಯದ ಕುರಿತು ಮಾತನಾಡುತ್ತಾ ಅವಳಿಗೆ ಕೆಲಸದ ಸ್ಥಳದಲ್ಲಿ ಮಾನಸಿಕ ಕಿರುಕುಳ ಶುರುವಾಗಬಹುದು. 


ಹೆಣ್ಣು ಉದ್ಯೋಗದಲ್ಲಿದ್ದಾಗ ಅನುಭವಿಸುವ ಹಿಂಸೆಗಳಲ್ಲಿ ಮಾನಸಿಕ ಕಿರುಕುಳ ಒಂದು ಬಗೆಯಾದರೆ, ದೈಹಿಕ ಕಿರುಕುಳ ಮತ್ತೊಂದು ಬಗೆಯದ್ದು. ದೈಹಿಕ ಕಿರುಕುಳದ ಕುರಿತು ಅವಳೇನಾದರೂ ಮಾತನಾಡಿದರೆ ತಪ್ಪು ಅವಳದ್ದೇ ಎಂಬಂತೆ ಮಾತನಾಡುವ ಮಂದಿ ಅವಳನ್ನೇ ಕುಗ್ಗಿಸಬಹುದು.


ಈ ರೀತಿಯ ಘಟನೆಗಳು ಹೆಣ್ಣಿನ ಶೀಲ, ಚಾರಿತ್ರ್ಯವನ್ನೇ ಪ್ರಶ್ನಿಸುವಂತೆ ಮಾಡುವಾಗ ನನ್ನಲ್ಲಿ ಉದ್ಭವಿಸುವ ಪ್ರಶ್ನೆ ಗಂಡಿಗೆ ಏಕೆ ಈ ಶೀಲ, ಚಾರಿತ್ರ್ಯದ ಕುರಿತ ಭಯವಿಲ್ಲ..? ಇಷ್ಟೇ ಅಲ್ಲ.. ಈ ಲೈಂಗಿಕ ಕಿರುಕುಳ ಅತ್ಯಾಚಾರವಾಗಿ ಬದಲಾದಾಗ ಆಪಾದನೆ ಬರುವುದು ಹೆಣ್ಣಿನ ಮೇಲೆಯೇ.. ಅವಳು ಅಷ್ಟೊತ್ತಿನಲ್ಲಿ ಹೊರಗೇಕೆ ಹೋಗಬೇಕಿತ್ತು ? ಅವಳು ಪ್ರಚೋದನಕಾರಿಯಾದ ಬಟ್ಟೆ ಧರಿಸುವ ಅಗತ್ಯವಿತ್ತೇ ? ಹೀಗೆ ಪ್ರಶ್ನೆಗಳ ಸರಮಾಲೆಯೇ ಶುರು. ಆದರೆ, ಏನೂ ಅರಿಯದ ಪುಟ್ಟ ಹೆಣ್ಣು ಹಸುಳೆಗಳ ಮೇಲೆಯೂ ಅತ್ಯಾಚಾರವಾಗುವಾಗ ಅದಕ್ಕೇನು ಹೇಳಬಲ್ಲರು ? ಇಷ್ಟೇ ಅಲ್ಲದೆ, ಅತ್ಯಾಚಾರ ಮಾಡಿದ ಆಪರಾಧಿಯೊಂದಿಗೇ ಆ ಹುಡುಗಿಯ ಮದುವೆ ಮಾಡುವ ತೀರ್ಮಾನ ಮಾಡಿದಾಗ ಗಂಡಿನ  ಅಪರಾಧಕಲ್ಲ ಅಲ್ಲಿ ಶಿಕ್ಷೆಯಾಗಿದ್ದು.. ಬದಲಾಗಿ, ಅಲ್ಲಿ ಶಿಕ್ಷೆ ಅನುಭವಿಸುವುದು ಹೆಣ್ಣು. ಕೆಲವರು ಈ ರೀತಿ ಶಿಕ್ಷೆ ಅನುಭವಿಸಿದರೆ ಎಷ್ಟೋ ಹೆಣ್ಣು ಮಕ್ಕಳ ಮನೆಯಲ್ಲಿ ಆ ಕುರಿತು ಸುದ್ದಿ ಹೊರಹೋಗಲು ಬಿಡುವುದೇ ಇಲ್ಲ. ಅಪರಾಧಿ ಅದೆಷ್ಟು ಆರಾಮವಾಗಿ ತಪ್ಪಿಸಿಕೊಳ್ಳಬಲ್ಲನೋ.. ಅಷ್ಟೇ ಸುಲಭವಾಗಿ ಮತ್ತೊಂದು ಅಂತಹದ್ದೇ ಅಪರಾಧವನ್ನೂ ಮಾಡಬಲ್ಲನು.


ಮಿತಿ ಹೇರುವ ಸುತ್ತಮುತ್ತಲಿನ ಸಮಾಜದಿಂದ ಮಿತಿಯನ್ನು ದಾಟಿ ಬೆಳೆಯಬಲ್ಲ ಹೆಣ್ಣಿಗೆ ಬಹಳ ಮುಖ್ಯವಾದದ್ದು ಮಾನಸಿಕ ಸ್ಥೈರ್ಯ. ದೈಹಿಕ ಸಧೃಢತೆ ಆರೋಗ್ಯ ಎಷ್ಟು ಮುಖ್ಯವೋ ಮಾನಸಿಕ ಆರೋಗ್ಯ, ಮಾನಸಿಕ ಸ್ಥೈರ್ಯವೂ ಅಷ್ಟೇ ಮುಖ್ಯ. ತನ್ನವರಿಂದಲೇ ಅದು ಸಿಕ್ಕಾಗ ಅವಳಲ್ಲಿ ಉಂಟಾಗುವ ಆತ್ಮವಿಶ್ವಾಸದ ಗುಣಮಟ್ಟ ವಿಶಿಷ್ಟವಾದದ್ದು. ಹೆಣ್ಣು ಸಂಸಾರದ ಕಣ್ಣು ಮಾತ್ರವಲ್ಲ ಸಮಾಜದ ಕಣ್ಣು ಸಹಾ ಹೌದು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ