ಪುಸ್ತಕದ ಶೀರ್ಷಿಕೆ : ಕರ್ನಾಟಕದ ಗಾಂಧಿ ಡಾ. ಹೊ. ಶ್ರೀನಿವಾಸಯ್ಯ
ಲೇಖಕರು : ಪ್ರೊ. ಜಿ. ಬಿ. ಶಿವರಾಜು
ಪ್ರಕಾಶಕರು : ಡಾ. ಹೊ. ಶ್ರೀನಿವಾಸಯ್ಯ ಚಾರಿಟಬಲ್ ಟ್ರಸ್ಟ್
ಪ್ರಥಮ ಮುದ್ರಣ : 2016
ಪುಟಗಳು : 84
ಬೆಲೆ : 10 ರೂ.
ಡಾ. ಹೊ. ಶ್ರೀನಿವಾಸಯ್ಯ ಅಪ್ಪಟ ಗಾಂಧಿ ಅನುಯಾಯಿ ಹಾಗೂ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದುಡಿದವರು. 1949ರಲ್ಲಿ ಇಂಜಿನಿಯರಿಂಗ್ ಪದವಿ ಪಡೆದು ವೃತ್ತಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆದರೂ ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯ ಲೋಕಕ್ಕೆ 80ಕ್ಕೂ ಹೆಚ್ಚು ಗ್ರಂಥಗಳನ್ನು ಕೊಡುಗೆಯಾಗಿ ನೀಡಿದ್ದಾರೆ. 1924 ರಲ್ಲಿ ಗಾಂಧೀಜಿಯವರನ್ನು ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಬಹಳ ಸಮೀಪದಲ್ಲಿ ಕಂಡರು. ಆಗ ಅವರಿಗೆ ಇನ್ನೂ 9 ವರ್ಷ ವಯಸ್ಸು. 1946ರಲ್ಲಿ ಮದರಾಸಿನಲ್ಲಿ ಅಖಿಲ ಭಾರತ ಹಿಂದಿ ಸಮ್ಮೇಳನದಲ್ಲಿ ಗಾಂಧೀಜಿಯವರ ಜೊತೆ ಸೇವಾಕಾರ್ಯದಲ್ಲಿ ತೊಡಗಿಸಿಕೊಂಡರು. 12ನೇ ವಯಸ್ಸಿನಿಂದಲೇ ಖಾದಿ ಧರಿಸಲು ಪ್ರಾರಂಭಿಸಿದವರು ನಂತರ ಅದನ್ನೇ ಮುಂದುವರಿಸಿಕೊಂಡು ಬಂದರು.
ಗಾಂಧೀ, ಖಾದಿ, ಪ್ರಕೃತಿ ಚಿಕಿತ್ಸೆ, ಯೋಗ, ಸಾಹಿತ್ಯದ ಪ್ರೀತಿಯ ಇವರ ಬದುಕು ಅನುಕರಣೀಯ. ಡಾ. ಹೊ. ಶ್ರೀನಿವಾಸಯ್ಯ ಅವರು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ. ಅವರ ತಂದೆ ಹೊನ್ನಯ್ಯನವರು ಹೊಟ್ಟೆಪಾಡಿಗಾಗಿ ನಾಗಮಂಗಲ ತಾಲೂಕಿನ ದೇವಲಾಪುರದ ಹತ್ತಿರದ ಪುಟ್ಟ ಗ್ರಾಮ ಚೌದ್ರಿಕೊಪ್ಪಲಿನಿಂದ ಬಂದವರು. ತಾಯಿ ಶ್ರೀಮತಿ ತಿಮ್ಮಮ್ಮನವರು. ತಮ್ಮ ಬಡತನದ ಬದುಕನ್ನು ಶಾಪವೆಂದು ತಿಳಿಯದೇ ಪರಿಶ್ರಮದಿಂದ ವರವನ್ನಾಗಿಸಿಕೊಂಡು ಬಾಳಿದವರು ಈ ದಂಪತಿ. ಉದ್ಯೋಗ ಅರಸಿ ಬೆಂಗಳೂರಿಗೆ ಬಂದಾಗ ಕೌನ್ಸಿಲರ್ ಒಬ್ಬರ ಮನೆಯಲ್ಲಿ ಜವಾನರ ಕೆಲಸ, ನಂತರ ಅಠಾರಾ ಕಚೇರಿಯಲ್ಲಿ ದಫೇದಾರ್ ಆಗಿದ್ದವರು. ಹೊನ್ನಪ್ಪ ಮತ್ತು ತಿಮ್ಮಮ್ಮ ದಂಪತಿಗಳ 12 ಜನ ಮಕ್ಕಳಲ್ಲಿ ಹೊ. ಶ್ರೀನಿವಾಸಯ್ಯ ಹತ್ತನೆಯ ಮಗ. ತಂದೆ ಚಿಕ್ಕಂದಿನಲ್ಲಿಯೇ ವಿಧಿವಶರಾಗಿದ್ದರಿಂದ ಅವರ ಜೀವನ ರೂಪಗೊಂಡಿದ್ದು ತಾಯಿ ತಿಮ್ಮಮ್ಮನವರ ಮಾರ್ಗದರ್ಶನದಲ್ಲಿ. ಚಿಕ್ಕಂದಿನಿಂದಲೂ ತಾಯಿಯವರನ್ನು ಕೇಳದೆ ಶ್ರೀನಿವಾಸಯ್ಯನವರು ಯಾವ ಕೆಲಸವನ್ನೂ ಮಾಡುತ್ತಿರಲಿಲ್ಲ. ಆದರೆ, ಸ್ವಾತಂತ್ರ್ಯ ಸಂಗ್ರಾಮದ ಎಷ್ಟೋ ಸಾಹಸಗಳನ್ನು ಅವರ ತಾಯಿಗೆ ತಿಳಿಯದಂತೆ ಮಾಡಿದ್ದಾರೆ. ಅದು ಸ್ವಾತಂತ್ರ್ಯಕ್ಕಾಗಿ ಶ್ರೀನಿವಾಸಯ್ಯನವರು ತೋರುತ್ತಿದ್ದ ಪ್ರೀತಿಯನ್ನು ತೋರುತ್ತದೆ.
ವಿದ್ಯಾರ್ಥಿ ದೆಸೆಯಿಂದಲೂ ಶಿಸ್ತಿನಿಂದ ಬದುಕುವುದನ್ನು ರೂಢಿ ಮಾಡಿಕೊಂಡಿದ್ದರು. ಗ್ರಾಮೀಣ ಜನಪದ ಕಲೆಗಳಲ್ಲಿ ಇವರಿಗೆ ವಿಶೇಷ ಆಸಕ್ತಿ. ಕನ್ನಡ ಮಾಧ್ಯಮದಲ್ಲಿ ಓದುತ್ತಿರುವಾಗಲೇ ಸಂಸ್ಕೃತ ಹಾಗೂ ಹಿಂದಿಯಲ್ಲಿಯೂ ವಿಶೇಷ ಆಸಕ್ತಿ ತೋರಿದರು. ಗೀತಾ ಸಂದೇಶದ ಬಗ್ಗೆ ಲೇಖನ ಬರೆಯುತ್ತಿದ್ದರು. ಅಬ್ರಹಾಂ ಲಿಂಕನ್, ಶಿವಾಜಿ ಮೊದಲಾದ ಗಣ್ಯರ ವಿಚಾರ ಓದಿ ರಾಷ್ಟ್ರಪ್ರೇಮ ಗಳಿಸಿಕೊಂಡರು. 'ದಿವಾಕರ' ಎಂಬ ಹಸ್ತಪತ್ರಿಕೆಯನ್ನು ಹೊರಡಿಸಿದ್ದರು.
ಇವರ ಬಾವ ಹೊಲಿಸಿದ ಖಾದಿ ಶರ್ಟ್ ನಿಂದ ಖಾದಿ ಬಟ್ಟೆ ಧರಿಸುವುದನ್ನು ರೂಡಿಸಿಕೊಂಡವರು... ಖಾದಿ ಬದುಕನ್ನೇ ಅಪ್ಪಿಕೊಂಡರು. 1942ರ ನಂತರ ಸ್ವಾತಂತ್ರ್ಯ ಚಳುವಳಿಯಲ್ಲಿ ಬಾಪೂಜಿಯ ಕರೆಯ ಮೇರೆಗೆ ಸಕ್ರಿಯವಾಗಿ ತೊಡಗಿಸಿಕೊಂಡರು. ಚಳುವಳಿಯನ್ನು ಚುರುಕುಗೊಳಿಸುವ ಅಂಗವಾಗಿ ರಹಸ್ಯ ಪತ್ರಿಕೆಗಳ ಪ್ರಕಟಣೆ ಮತ್ತು ಹಂಚಿಕೆಯಲ್ಲಿ ಪ್ರಮುಖ ಪಾತ್ರ ವಹಿಸಿದರು. ಆ ಪತ್ರಿಕೆಗಳು ಮಲ್ಲೇಶ್ವರಂ ಪ್ರೌಢಶಾಲೆ ಮತ್ತಿತರ ಕಡೆ ಬ್ರಿಟಿಷರ ಪ್ರತಿಭಟನೆಯ ಅಂಗವಾಗಿ ಕೈಬಾಂಬು ಇಡುವುದು, ಶಾಲಾ ಕಟ್ಟಡಕ್ಕೆ ಬೆಂಕಿ ಹಚ್ಚುವುದು ಮೊದಲಾದ ಚಟುವಟಿಕೆಗಳಲ್ಲಿ ತೊಡಗಿದ್ದರು.
ಪೋಲೀಸರು ಅವರ ಮನೆಯನ್ನು ಆಗಾಗ ಶೋಧಿಸುತ್ತಿದ್ದರೂ ಏನೂ ಸಿಗುತ್ತಿರಲಿಲ್ಲ. ಸ್ವಾತಂತ್ರ್ಯ ಚಳುವಳಿಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿದ್ದುದನ್ನು ಗಮನಿಸಿದ ಬ್ರಿಟಿಷ್ ಸರ್ಕಾರ ಶ್ರೀನಿವಾಸಯ್ಯನವರಿಗೆ ಆರು ತಿಂಗಳು ಜೈಲು ಶಿಕ್ಷೆ ವಿಧಿಸಿತು. 1946ರಲ್ಲಿ ವಿದ್ಯಾರ್ಥಿಗಳ ವಂದೇ ಮಾತರಂ ಸಂಗ್ರಾಮದಲ್ಲಿಯೂ ಭಾಗವಹಿಸಿದ್ದರು. 1943ರಲ್ಲಿ ಚರಕಾ ಕೇಂದ್ರ ಸ್ಥಾಪನೆ, ವಯಸ್ಕರ ಶಿಕ್ಷಣ ಕೇಂದ್ರ, ಖಾದಿ ಮತ್ತು ಗಾಂಧಿ ಸಾಹಿತ್ಯ ಮಾರಾಟದಲ್ಲಿ ತೊಡಗಿಸಿಕೊಂಡರು. 1943-44ರಲ್ಲಿ ವಿದ್ಯಾರ್ಥಿ ಸ್ವಯಂಸೇವಕರಾಗಿ ಆಹಾರ ಹಂಚಿಕೆಯಲ್ಲಿ ಸೇವೆ ಮಾಡಿದರು. ವಿದ್ಯಾರ್ಥಿ ಕಾಂಗ್ರೆಸ್ ಕಾರ್ಯದರ್ಶಿಯಾಗಿ ಗ್ರಾಮ ಸೇವಾ ಶಿಬಿರದಲ್ಲಿ ಸೇವೆ ಸಲ್ಲಿಸಿದರು. ಅದೇ ವರ್ಷ ಬಂಗಾಳದ ಗ್ರಾಮಪೀಡಿತ ಜನರಿಗೆ ಹಣ ಸಂಗ್ರಹಣೆ ಮಾಡಿದರು.
ಶ್ರೀ ಟಕ್ಕರ್ ಬಾಪಾ ಅವರ ಸಂಪರ್ಕ ಸಿಕ್ಕು, ಸಿದ್ದವನಹಳ್ಳಿ ಕೃಷ್ಣಶರ್ಮರ ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ಸ್ವಾತಂತ್ರ್ಯ ಚಳುವಳಿಯ ಘಟನೆಗಳನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ಸ್ವಾತಂತ್ರ್ಯ ಹೋರಾಟಕ್ಕಾಗಿ ಇವರು ಜೈಲು ಶಿಕ್ಷೆ ಅನುಭವಿಸಿದ್ದರು. ಅದಕ್ಕಾಗಿ ಸರ್ಕಾರದಿಂದ ಯಾವುದೇ ಗೌರವ ಸಂಭಾವನೆಯನ್ನಾಗಲಿ, ಮಾಶಾಸನವನಾಗಲಿ ಪಡೆಯದೆ ನಿಸ್ವಾರ್ಥ ದೇಶ ಸೇವೆಯಲ್ಲಿ ಆದರ್ಶದಿಂದ ಬದುಕಿದರು.
ಮೆರವಣಿಗೆ, ಜೈಕಾರ, ದಸ್ತಗಿರಿಗಳಲ್ಲಿ ಶ್ರೀನಿವಾಸಯ್ಯನವರು ತಮ್ಮ ತಾಯಿಗೆ ಗೊತ್ತಾಗದಂತೆ ಭಾಗವಹಿಸುತ್ತಿದ್ದರು ಒಮ್ಮೆ ಅವರ ತಾಯಿಯನ್ನು 'ಎಲ್ಲರಂತೆ ದೇಶಕೋಸ್ಕರ ನಾವೇಕೆ ಜೈಲಿಗೆ ಹೋಗಬಾರದು?' ಎಂದು ಪ್ರಶ್ನಿಸಿದ್ದರು. ಆಗ ಅವರ ತಾಯಿ "ಹೋಗಕೂಡದು. ಹೋಗುವುದಾದರೆ ಮೊದಲೇ ಹೇಳಿಬಿಡು ಈಗಲೇ ಪ್ರಾಣ ಕಳೆದುಕೊಳ್ಳುತ್ತೇನೆ." ಎಂದು ಕಣ್ಣೀರು ಹಾಕಿದ್ದರಂತೆ.
ಶ್ರೀನಿವಾಸಯ್ಯನವರು ಸ್ನೇಹಿತರಿಗೆ ಮೊದಲೇ ಜೈಲಿಗೆ ಹೋಗುತ್ತೇನೆ ಎಂದು ಹೇಳಿದ್ದರು. ಅದಕ್ಕಾಗಿ ಪತ್ರಿಕೆ ಹಂಚುವ ಕೆಲಸವನ್ನು ತನ್ನ ಸ್ನೇಹಿತ ರಾಜಾರಾಮ್ ಅವರಿಗೂ ವಹಿಸಿದ್ದರು. ಇದಾದ ಸ್ವಲ್ಪ ದಿನಗಳಲ್ಲಿಯೇ ಪೊಲೀಸರು ಬಂದು ಶ್ರೀನಿವಾಸಯ್ಯನವರನ್ನು ದಸ್ತಗಿರಿ ಮಾಡಿ ಜೈಲಿಗೆ ಹಾಕಿದರು. ತಾಯಿಯವರು ಈ ಘಟನೆಯಿಂದ ಹೆದರಿದ್ದಾರೆ ಎಂದುಕೊಂಡಿದ್ದರಾದರೂ.. ತಾಯಿ ಧೈರ್ಯವಾಗಿಯೇ ಇದ್ದರು. ತಾಯಿಗೆ ತನ್ನ ಮಗನ ದೇಶ ಸೇವೆ ಹಾಗೂ ದೇಶಕ್ಕಾಗಿನ ಸ್ವಾತಂತ್ರ್ಯದ ಹೋರಾಟದ ಅಗತ್ಯತೆಯ ಅರಿವಾಗಿತ್ತು.
ಸ್ವಾತಂತ್ರ್ಯದ ಆಕಾಂಕ್ಷೆ, ಕನಸು, ಓಡಾಟ, ಸಾಹಸ ವಿಧ್ವಂಸಕ ಸಾಹಸ ಕಾರ್ಯಗಳು, ಬಾಂಬು ಸ್ಪೋಟ, ಗುಪ್ತ ಪತ್ರಿಕೆ ಹಂಚಿಕೆ ಇಂತಹಾ ರೋಮಾಂಚಕ ಸಂಗತಿಗಳು ಅವರ ಬದುಕಲ್ಲಿ ಜರುಗಿದ್ದರೂ ನಂತರ ಗಾಂಧೀ ಮಾರ್ಗದಲ್ಲಿ ನಡೆದರು. ಚರಕಾ ಬಳಕೆ, ಹಿಂದಿ ತರಬೇತಿ, ಓದದೆ ಅಲೆಯುತ್ತಿದ್ದ ಹುಡುಗರನ್ನು ಕಲೆಹಾಕಿ ರಚನಾತ್ಮಕ ಕಾರ್ಯ ಮಾಡಬೇಕೆಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ಅದೇ ಹಾದಿಯಲ್ಲಿ ನಡೆಯುತ್ತಿದ್ದರು.
ಸ್ವಾತಂತ್ರ್ಯ ಸಂಗ್ರಾಮದ ಇವರ ಹೋರಾಟ ವ್ಯರ್ಥವಾಗಲಿಲ್ಲ. ಸ್ವಾತಂತ್ರ್ಯ ಬಂದಾಗಂತೂ ಇವರೆಲ್ಲರ ಆನಂದ ಹೇಳತೀರದು. ಖಾದಿ ಬಟ್ಟೆ ತೊಡುವುದು ಇವರ ಧ್ಯೇಯವಾಯಿತು. ಒಂದು ಕಾಸನ್ನೂ ವ್ಯಯ ಮಾಡುತ್ತಿರಲಿಲ್ಲ. ಸದಾ ದೇಶಪ್ರೇಮದ ಹಂಬಲ.
ಸ್ವಾತಂತ್ರ್ಯ ಬಂದ ನಂತರವೂ ಇವರ ಸಾಮಾಜಿಕ ಸೇವೆ ನಿಲ್ಲಲಿಲ್ಲ. ಹಳ್ಳಿಗಳಲ್ಲಿ ವಯಸ್ಕರ ಶಿಕ್ಷಣ, ಹರಿಜನ ದೇವಸ್ಥಾನ ಪ್ರವೇಶ, ಅಕ್ಷರಭ್ಯಾಸ ಈ ಕಾರ್ಯಕ್ರಮಗಳನ್ನು ರೂಪಿಸಿ ಯೋಜನೆ ತಯಾರಿಸಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿದ್ದರು. ಇವರ ಸ್ವಾತಂತ್ರ್ಯಾ ನಂತರದ ಬದುಕು ಹೇಗಿತ್ತು ಎಂಬುದನ್ನು ನೀವೇ ಓದಿ ನೋಡಿ.
ಆದರೂ.. ನನಗೆ ಈ ಪುಸ್ತಕದಲ್ಲಿ ಕಂಡ ಕೆಲವು ಒಂದು ವಿಚಾರ ಮಾತ್ರ ವೈರುಧ್ಯ ಎನಿಸಿತು. ಶ್ರೀನಿವಾಸ ಅವರು ಮೊದಲಿಗೆ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದವರು. ಆನಂತರ ಗಾಂಧೀ ಮಾರ್ಗದಲ್ಲಿ ನಡೆದವರಾದರೂ.. ಗಾಂಧೀಜಿ ಇದನ್ನು ಒಪ್ಪಿದರೆ..?! ಎಂಬುದು. ಏಕೆಂದರೆ, ಭಗತ್ ಸಿಂಗ್ ನ ಕುರಿತಾದ ಪುಸ್ತಕವನ್ನು ಓದುತ್ತಿದ್ದಾಗ ಗಾಂಧೀಜಿಗೆ ತಮ್ಮ ಮಾರ್ಗಕ್ಕೂ.. ಈ ರೀತಿಯ ಮಾರ್ಗಕ್ಕೂ.. ಯುವ ಕ್ರಾಂತಿಕಾರಿಗಳ ವಿಚಾರದಲ್ಲಿ ಬೇರೆಯದ್ದೇ ನಿಲುವಿತ್ತು. ಈ ಕುರಿತಾಗಿ ನನ್ನ ಮುಂದಿನ ಲೇಖನದಲ್ಲಿ ಭಗತ್ ಸಿಂಗ್ ಅವರ ಕುರಿತಾಗಿ ಹಾಗೂ ಗಾಂಧೀಜಿಯವರ ಈ ಕುರಿತ ಆಲೋಚನೆಯ ನಿಲುವಿನ ಕುರಿತಾಗಿ ಪ್ರಸ್ತಾಪಿಸುವೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ