ಮಂಗಳವಾರ, ಏಪ್ರಿಲ್ 21, 2026

ಮನಸೇ ಒಳಮನಸೇ

ಮೆದುಳು ಹಾಗೂ ಮನಸ್ಸು ಎರಡರಲ್ಲಿ ಅತ್ಯಂತ ಬಲಶಾಲಿ ಮನಸ್ಸು ಎಂದೇ ಹೇಳುತ್ತೇನೆ. ಮನಸ್ಸಿಗೆ ಅಲ್ಲಿ ಬಚ್ಚಿಟ್ಟ ವಿಷಯ ಹೇಳಲು ಇಷ್ಟವಿಲ್ಲದಿರುವಾಗ ಸುಪ್ತಮನಸ್ಸು ಸಹಾ ಆ ಸತ್ಯವನ್ನು ಅಷ್ಟು ಸುಲಭವಾಗಿ ಹೊರಗೆಡವುವುದಿಲ್ಲ. ಆದರೆ, ಇಂತಹಾ ಸ್ಥಿತಿ ಬೇರೆ ಪರಿಣಾಮವನ್ನೇ ಮೂಡಿಸಬಹುದು. ಮುಖ ನೋಡಿ ಮನಸ್ಸಿನ ಮಾತನ್ನು ಹೊರಗೆಡಹುತ್ತೇನೆ ಎನ್ನುವವರಿಗೂ ಸವಾಲಾಗಬಲ್ಲದು ಮನುಷ್ಯನ ಮುಖದ ಮೇಲಿನ ನಗು. ಹಾಗೆಯೇ.. ಮನಸ್ಸಿನ ಮೇಲೆ ಪರಿಣಾಮ ಬೀರಬಲ್ಲದು ಮಾತು.


ಡಾ|| ಎಂ. ಶಿವರಾಂ ಅವರ ಯೋಚಿಸಿದರೆ ಪುಸ್ತಕದಲ್ಲಿ ಮನಸ್ಸಿನ ಮೇಲಿನ ಪರಿಣಾಮದ ಕುರಿತಾಗಿ ಒಂದು ಪ್ರಯೋಗವಿದೆ. ಯೋಚಿಸುವಾಗ ನಮ್ಮ ಮನಸ್ಸು ಕೇಳಿಸಿಕೊಂಡ ವಿಚಾರಗಳಿಗೆ ಬದ್ಧವಾಗಿ ಆ ನಿಟ್ಟಿನಲ್ಲಿಯೇ ಆಲೋಚಿಸುತ್ತಿರುತ್ತದೆ. ಕಾರ್ಲ್ ಡಂಕರ್ ಎನ್ನುವ ಮನೋ ವೈಜ್ಞಾನಿಕ ಸಂಶೋಧಕನ ಸಂಶೋಧನೆಯೊಂದನ್ನು ಸರಳವಾಗಿ ವಿವರಿಸಿದ್ದಾರೆ. 


ವಿದ್ಯಾರ್ಥಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುತ್ತಾರೆ. ಮೇಜಿನ ಮೇಲೆ ಇಬ್ಬರಿಗೂ ಒಂದೇ ರೀತಿಯ ಸಾಮಗ್ರಿಗಳನ್ನು ಇಟ್ಟಿರುತ್ತಾರೆ. ಒಂದು ಮೊಳ ದಾರ, ಒಂದು ಕಬ್ಬಿಣದ ಗುಂಡು ಹಾಗೂ ಮೊಳೆ. ಆ ಕಬ್ಬಿಣದ ಗುಂಡಿಗೆ ಅದಾಗಲೇ ದಾರ ಕಟ್ಟಿ ಆಗಿರುತ್ತದೆ. ಮೊದಲ ಗುಂಪಿಗೆ ಇಲ್ಲಿರುವ ವಸ್ತುಗಳನ್ನು ಉಪಯೋಗಿಸಿ ಗುಂಡನ್ನು ಪೆಂಡುಲಂನಂತೆ ತೂಗಾಡಿಸಿ ಎಂದು ಹೇಳುತ್ತಾರೆ. ಆದರೆ, ಆ ಗುಂಪು ಈ ಪರೀಕ್ಷೆಯಲ್ಲಿ ಯಶಸ್ವಿಯಾಗುವುದಿಲ್ಲ. ಅಲ್ಲಿ ಸುತ್ತಿಗೆ ಇಲ್ಲ ಎನ್ನುವ ಕಾರಣ ಕೊಟ್ಟು ಸುಮ್ಮನಾಗುತ್ತಾರೆ. 


ಎರಡನೇ ಗುಂಪಿಗೆ ಇದೇ ಟಾಸ್ಕ್ ಅನ್ನು ನೀಡುವಾಗ ಪೆಂಡುಲಂ ಎನ್ನುವ ಪದವನ್ನು ಬಳಸುವುದಿಲ್ಲ. ಆ ಗುಂಪು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತಾರೆ. ಅಲ್ಲಿದ್ದ ಗುಂಡನ್ನೇ ಸುತ್ತಿಗೆಯಂತೆ ಉಪಯೋಗಿಸಿ, ಮೊಳೆ ಹೊಡೆದು ದಾರದಲ್ಲಿ ಕಟ್ಟಿದ್ದ ಗುಂಡನ್ನು ತೂಗಿ ಬಿಡುತ್ತಾರೆ.


ಹಾಗೆಂದು, ಎರಡನೇ ಗುಂಪಿನವರು ಬುದ್ಧಿವಂತರು ಹಾಗೂ ಮೊದಲನೇ ಗುಂಪಿನವರು ದಡ್ಡರು ಎಂದರ್ಥವಲ್ಲ. ಬದಲಾಗಿ ಅವರಿಗೆ ಟಾಸ್ಕ್ ನೀಡುವಾಗ ಉಪಯೋಗಿಸಿದ ಪದದ ಕುರಿತು ಅವರು ಆಲೋಚಿಸಲು ತೊಡಗುತ್ತಾರೆ. ಪೆಂಡುಲಂ ಎಂದಾಗ ಆ ಗುಂಡನ್ನು ಕೇವಲ ಪೆಂಡುಲಂ ಎಂದು ಮಾತ್ರವೇ ನೋಡಿ ಆಲೋಚಿಸುತ್ತಾರೆ. ಆದರೆ, ಎರಡನೇ ಗುಂಪಿನವರಿಗೆ ಆ ಶಬ್ದವನ್ನೇ ಹೇಳದಿದ್ದಾಗ.. ಆ ಗುಂಡನ್ನು ಬಹುಪಯೋಗಿಯಂತೆ ಕಾಣುತ್ತಾರೆ. ಹಾಗಾಗಿ, ಯೋಚಿಸುವಾಗ ನಾವು ಕೇಳಿಸಿಕೊಂಡ ವಿಷಯದಿಂದ ನಾವು ಪೂರ್ವಗ್ರಹಪೀಡಿತರಾಗುತ್ತೇವೆ ಎನ್ನುವ ತರ್ಕವನ್ನು ನೀಡುತ್ತಾರೆ ಡಂಕರ್.


ಕೆಲವೊಮ್ಮೆ ಮನಸ್ಸಿಗೂ ಅನಾರೋಗ್ಯ ಕಾಡುತ್ತದೆ. ಹಾಗೆ ಕಾಡಿದಾಗ ಅದನ್ನೂ ಸೂಕ್ಷ್ಮವಾದ ಸ್ಥಿತಿ ಎಂದೇ ಪರಿಗಣಿಸಿ, ಅದಕ್ಕೆ ಸರಿಯಾದ ಚಿಕಿತ್ಸೆಯನ್ನು ಪಡೆದಾಗ ಮಾತ್ರವೇ ಮನುಷ್ಯ ಆರೋಗ್ಯವಂತನಾಗಿರಬಲ್ಲ. ತ್ರಿವೇಣಿಯವರ 'ಶರಪಂಜರ' ಕಾದಂಬರಿಯಲ್ಲಿ ಇಂತಹಾ ಪ್ರಸಂಗವನ್ನು ಕಾಣಬಹುದು. ಕಾವೇರಿಯ  ಬದುಕು ಇಂತಹಾ ಪ್ರಸಂಗಕ್ಕೆ ನಿದರ್ಶನವೆನ್ನಬಹುದು. ಆದರೆ, ಮನೆಯಲ್ಲಿ ಹಾಗೂ ಸುತ್ತಮುತ್ತಲಿನವರು ಅವರನ್ನು ಮತ್ತೆ ಹೇಗೆ ಕಂಡರೆ ಅವರಿಗೂ ಮಾಮೂಲು ಬದುಕಿಗೆ ಒಗ್ಗಿಕೊಳ್ಳಲು ಸುಲಭವಾಗುತ್ತದೆ ಎಂಬುದನ್ನೂ ಕಾಣಬಹುದು.


ಇಂದು ಹೆಚ್ಚಿನವರು ಖಿನ್ನತೆಯಿಂದಾಗಿ ಬಳಲುತ್ತಿದ್ದಾರೆ. ಅದರಲ್ಲೂ ಯುವ ಜನಾಂಗವೇ ಹೆಚ್ಚು. ಅದಕ್ಕೆ ಕಾರಣ ಓದಿನ ಕುರಿತಾದ ಒತ್ತಡ, ಕೆಲಸದ ಒತ್ತಡ ಕಾರಣವಾಗಿರಬಹುದು ಅಥವಾ ಕುಟುಂಬದಲ್ಲಿ ಅವರು ತೆರೆದುಕೊಳ್ಳುವ ರೀತಿ ಹಾಗೂ ಅವರಿಗೆ ಸಿಗುವ ಪ್ರೀತಿ ಎಲ್ಲದರ ಮೇಲೂ ಇದು ಅವಲಂಬಿತವಾಗಿರುತ್ತದೆ. ಓದು/ ಕೆಲಸದ ಒತ್ತಡ ಹಾಗೂ ಮನೆಯಲ್ಲಿನ ಒತ್ತಡ ಎರಡೂ ಸೇರಿದರೆ ಮನುಷ್ಯನ ಸ್ಥಿತಿ ನಿಜಕ್ಕೂ ಗಂಭೀರ ಹಾಗೂ ಆತಂಕಕಾರಿ. 


ಮನಸ್ಸಿನ ಮಾತುಗಳನ್ನು ಮುಕ್ತವಾಗಿ ಹೊರ ಹಾಕುವವರಲ್ಲಿ ಹೆಚ್ಚಿನವರು ಹೆಂಗಸರು ಅಥವಾ ಗಂಡಸರು ಎಂದು ಹೇಳಲಾಗದು. ಬದಲಾಗಿ, ಸಮರ್ಥ ವ್ಯಕ್ತಿ, ಸರಿಯಾದ ವಾತಾವರಣ ಸಿಕ್ಕರೆ ಮಾತ್ರವೇ ಗಂಡಾಗಲಿ.. ಹೆಣ್ಣಾಗಲಿ.. ತಮ್ಮ ಮನಸ್ಸನ್ನು ತೆರೆದುಕೊಳ್ಳಬಲ್ಲರು. ಇಲ್ಲವಾದಲ್ಲಿ ಅದು ಅಸಾಧ್ಯ. ತೀರಾ ಹತ್ತಿರದವರಿಗೂ ಹೇಳಿಕೊಳ್ಳಲಾಗದ ಸತ್ಯಗಳು ಬಹಳಷ್ಟಿರಬಹುದು. ಅಂತಹಾ ಸತ್ಯಗಳು ಮನಸ್ಸಿನ ಮೂಲೆಯಲ್ಲಿ ಕುಳಿತು ಆ ವ್ಯಕ್ತಿಯನ್ನು ಭವಿಷ್ಯದಲ್ಲಿ ಯಾವುದೋ ಬಗೆಯಲ್ಲಿ ಹೆದರಿಸಬಹುದು. ಭವಿಷ್ಯದಲ್ಲಿ ದೈತ್ಯಾಕಾರವಾಗಿ ಬೆಳೆಯುವ ಸಮಸ್ಯೆಗೆ ಇಂದಿನ ಯಾವುದೋ ಚಿಕ್ಕ ಘಟನೆಯೂ ಕಾರಣವಾಗಿರಬಹುದು. ಮನಸ್ಸನ್ನು ಹಾಗೂ ಮಾನಸಿಕ ಆರೋಗ್ಯವನ್ನು ಬಹಳ ವಿಸ್ತಾರವಾದ ನೆಲೆಗಟ್ಟಿನಲ್ಲಿ ನೋಡಿದರೂ ಕಾಣದ್ದೇ ಹೆಚ್ಚಿರಬಹುದು. ಆದರೂ ಮನಸ್ಸಿನ ಮೂಲೆಯಲ್ಲೆಲ್ಲೋ.. ಕೆಲವು ಪರಿಣಾಮಕಾರಿ ವಿಚಾರಗಳು ಉಳಿದು ಹೋಗಿರಬಹುದು. ಇಂತಹಾ ಮಾನಸಿಕ ಸಮಸ್ಯೆಯನ್ನು ಕೇಂದ್ರವಾಗಿಟ್ಟುಕೊಂಡು ರಚಿಸಿರುವ ಮನೋವೈಜ್ಞಾನಿಕ ಕಾದಂಬರಿ ವಿವೇಕಾನಂದ ಕಾಮತ್ ಅವರ 'ಪದರುಗಳು'. ಹೊರಗೆ ದುಡಿಯುವ ತಂದೆ-ತಾಯಿಯ ಅನಿವಾರ್ಯತೆಯಲ್ಲಿ ಹೆಣ್ಣು ಮಗುವಿನ ಒಂದು ಪ್ರಸಂಗ ಬೀರಿದ ಪ್ರಭಾವ ಸುಪ್ತ ಮನಸ್ಸಿನಲ್ಲಿಯೇ ಉಳಿದು ಮಾಡುವ ಪರಿಣಾಮಗಳ ಚಿತ್ರಣ ಇಲ್ಲಿ ಕಾಣುತ್ತದೆ.


ಈ ನಿಟ್ಟಿನಲ್ಲಿ ಯೋಚಿಸಿದಾಗ ಹೆಣ್ಣು ಗುಟ್ಟನ್ನು ತನ್ನಲ್ಲಿ ಬಚ್ಚಿಟ್ಟುಕೊಳ್ಳುವುದು ಅಸಾಧ್ಯ ಎನ್ನುವುದಕ್ಕೆ ಅಪವಾದದಂತಹಾ ಪ್ರಸಂಗ. ಆದರೆ, ಪುರುಷರಿಗಿಂತ ಮಹಿಳೆಯರಲ್ಲಿಯೇ ಇಂತಹಾ ಮಾನಸಿಕ ತೊಂದರೆಗಳನ್ನು ಕಾಣುವಾಗ ಅವರ ಸೂಕ್ಷ್ಮತೆಯೇ ಇದಕ್ಕೆ ಕಾರಣವೇನೋ ಎಂದೂ ಅನ್ನಿಸುತ್ತದೆ. ಡಾ|| ಸಿ. ಆರ್. ಚಂದ್ರಶೇಖರ್ ಅವರು ಮಹಿಳೆಯರ ಮಾನಸಿಕ ಅಸ್ವಸ್ಥತೆಗಳು ಎಂಬ ಪುಸ್ತಕದಲ್ಲಿ ಇಂತಹಾ ಹಲವಾರು ಘಟನೆಗಳಿಗೆ ಬೆಳಕು ಚೆಲ್ಲಿದ್ದಾರೆ.


ಗಂಡಿನ ಪ್ರಾಮುಖ್ಯತೆ ಹೆಚ್ಚಾಗಿದ್ದಾಗ ಮನೆಯಲ್ಲಿ ಮಹಿಳೆ ಹೇಳದೆ ಉಳಿಯುವ ತನ್ನ ಸಮಸ್ಯೆಗಳು ಆಕೆಯನ್ನು ಹೇಗೆಲ್ಲಾ ಕಾಡಬಹುದು ಎನ್ನುವ ಚಿತ್ರಣವಿದೆ. ಇತ್ತೀಚೆಗೆ ಹೆಣ್ಣು ಆರ್ಥಿಕ ಸ್ವಾವಲಂಬಿಯಾಗಿ ಹಾಗೂ ಧೈರ್ಯವಂತೆಯಾದರೂ.. ನೆಮ್ಮದಿ, ಸಂತೋಷವನ್ನು ಕಂಡುಕೊಳ್ಳದವರೂ ಇದ್ದಾರೆ. ಮಹಿಳೆಯರ ಮಾನಸಿಕ ಆರೋಗ್ಯದ ಸ್ಥಿತಿ ಅಂದಿಗಿಂತ ಇಂದಿಗೆ ವಿಭಿನ್ನವಾಗಿದೆ ಎಂದುಕೊಂಡರೂ ಮಾನಸಿಕವಾಗಿ ನರಳುವವರು ಇದ್ದೇ ಇರುತ್ತಾರೆ. 


ಶಾಲೆ, ಕಾಲೇಜುಗಳಿಗೆ ಹೋಗುತ್ತಿರುವ ಹೆಣ್ಣು ಮಕ್ಕಳಲ್ಲಿ ಕಂಡುಬರಬಹುದು. ತಮ್ಮ ಸಹಪಾಠಿಗಳ ಜೊತೆಗೆ ಇರುವ, ಇದ್ದ ಸಂಬಂಧಗಳು, ಸಮಸ್ಯೆಗಳನ್ನು ತಮ್ಮ ಮನೆಯಲ್ಲಿ ಹಂಚಿಕೊಳ್ಳಲು ಸಾಧ್ಯವಾಗದಿದ್ದಾಗ ಖಿನ್ನತೆ ಕಾಡಬಹುದು.


ಪರಿಸರದ ಯಾವ ಅಂಶವೂ ಇಲ್ಲದೇ.. ಶರೀರದಲ್ಲಿಯೇ ಉತ್ಪತ್ತಿಯಾಗುವ 'ಒಳಜನ್ಯ ಖಿನ್ನತೆ'ಯೂ ಕಾಡಬಹುದು. ಮಹಿಳೆಯರ ಮೆದುಳಿನ ನರಕೋಶದಲ್ಲಿ ಉಂಟಾಗುವ 'ಡೋಪಮಿನ್' ಎಂಬ ನರವಾಹಕದ ಕೊರತೆಯಿಂದ ಮಹಿಳೆಯರ ಮುಟ್ಟು ನಿಲ್ಲುವ ಸಂಧರ್ಭದಲ್ಲಿ ಖಿನ್ನತೆ ಕಾಡಬಹುದು.


ಮನೆಗಳಲ್ಲಿ ಮಹಿಳೆಯರು ತಿಂಗಳಿಗೊಮ್ಮೆ ಬೇಸರ, ಸಿಡುಕುತನ, ನಿರಾಸಕ್ತಿ, ತಲೆನೋವು, ಮೈ-ಕೈ ನೋವುಗಳಿಂದ ಬಳಲುತ್ತಿದ್ದರೆ ಅದು ಅವರ ಋತುಸ್ರಾವದ ಹಿಂದಿನ ಒಂದು ವಾರವಿರಬಹುದು. ಋತುಸ್ರಾವ ಮುಗಿದ ನಂತರವೂ ಒಂದೆರಡು ದಿನ ಈ ಚಿಹ್ನೆಗಳು ಕಾಣಬಹುದು. ಇದು ಋತುಸ್ರಾವದ ಸಮಯದಲ್ಲಿ ಕಾಣಿಸುವ ಖಿನ್ನತೆಯ ಲಕ್ಷಣವೂ ಆಗಿರಬಹುದು. ಇದಕ್ಕೆ ಕಾರಣ ಹಾಗೂ ಪರಿಹಾರಗಳನ್ನು ತಿಳಿದು ಆಕೆಯನ್ನು ನೋಡಿಕೊಳ್ಳುವ ಬಗೆ, ಆರೈಕೆ ಮಾಡುವ ಬಗೆಗಳಿಂದ ಅವರನ್ನು ಇದರಿಂದ ಆಚೆ ತರಬಹುದು.


ಖಿನ್ನತೆಯ ಚಿಕಿತ್ಸೆ ಹೊರಗಿನಿಂದ ನೀಡಬಹುದಾದರೂ.. ಒಳಗಿನಿಂದಲೂ ಅದನ್ನು ಪರಿಹರಿಸಿಕೊಳ್ಳುವ ಮನಸ್ಥಿತಿ ಇರಬೇಕು. ಅದಕ್ಕೆ ಬೇಕಾದ ವಾತಾವರಣವನ್ನು ಸೃಷ್ಟಿಸಿಕೊಳ್ಳುವ ಅವಕಾಶ ನೀಡುವುದು ಮನೆಯವರ ಮನಸ್ಥಿತಿಯ ಮೇಲೂ ಅವಲಂಬಿತ.


ಹಿಸ್ಟೀರಿಯಾ - ಉನ್ಮಾದ : ಮೊದಲೆಲ್ಲಾ ಉನ್ಮಾದಕ್ಕೊಳಗಾದ ಮಹಿಳೆಯರನ್ನು ಹೊಡೆಯುವುದು, ಹೆದರಿಸುವುದು, ಬರೆ ಹಾಕುವುದು, ಉಪವಾಸವಿರುವುದು, ಒಂಟಿಯಾಗಿ ಕೋಣೆಯಲ್ಲಿ ಕೂಡಿ ಹಾಕುವುದೆಲ್ಲವನ್ನೂ ಮಾಡುತ್ತಿದ್ದರು. ಕೆಲವರು ಇದಕ್ಕೆ ಪರಿಹಾರ ಕೇವಲ ವಿವಾಹವೆಂದು ನಂಬಿ ಆ ಹೆಣ್ಣುಮಕ್ಕಳಿಗೆ ವಿವಾಹವನ್ನೂ ಮಾಡುತ್ತಿದ್ದರು. ವೈದ್ಯರಿಗೂ ಇದರ ಕುರಿತು ಅರಿವು ಕಮ್ಮಿಯಿದ್ದ ದಿನಗಳ ಚಿತ್ರಣವನ್ನು ಕಟ್ಟಿಕೊಡುತ್ತಲೇ.. ವಿಶ್ವಯುದ್ದದ ಸಂದರ್ಭದಲ್ಲಿ ಸೈನಿಕರು ಅನುಭವಿಸುತ್ತಿದ್ದ ಹಿಸ್ಟೀರಿಯಾ ಕುರಿತು ಅಧ್ಯಯನ ಮಾಡಿದ ಮನೋವಿಜ್ಞಾನದ ಪಿತಾಮಹನೆಂದೇ ಖ್ಯಾತನಾದ 'ಸಿಗ್ಮಂಡ್ ಫ್ರಾಯ್ಡ್' ವೈದ್ಯಕೀಯ ಕೊಟ್ಟ ಜ್ಞಾನದ ಬಗೆಗೂ ಬೆಳಕು ಚೆಲ್ಲುತ್ತಾರೆ.


ಮಹಿಳೆಯರಲ್ಲಿ ಕಾಣುವ ಇನ್ನೊಂದು ಮುಖ್ಯ ಮಾನಸಿಕ ಸಮಸ್ಯೆ ಎಂದರೆ ಬಾಣಂತಿ ಸನ್ನಿ. ಇದಲ್ಲದೇ ಇದೇ ಸಂದರ್ಭದಲ್ಲಿ ಕಂಡುಬರುವ  ಹೆರಿಗೆ ನಂತರದ ಮಂಕುತನ, ಚಿತ್ತ ಚಂಚಲತೆ. ಅವುಗಳಿಂದ ಬಾಣಂತಿಯನ್ನು ಹೊರಗೆ ಕರೆತರುವ ಬಗೆಯನ್ನು ಹೇಳುತ್ತಾ ಧೈರ್ಯ ತುಂಬುತ್ತಾರೆ.


ವಯಸ್ಸಾದ ತಾಯಿ ಹಾಗೂ ತಡವಾಗಿ ಜನಿಸಿದ ಮಗುವಿಗೆ ಉಂಟಾಗಬಹುದಾದ ಬುದ್ಧಿಮಾಂದ್ಯತೆಯ ವೈಜ್ಞಾನಿಕ ಕಾರಣವನ್ನು ವಿವರಿಸುತ್ತಾ ತಾಯ್ತನದ ಮೇಲೆ ಉಂಟಾಗುವ ಪರಿಣಾಮದೊಂದಿಗೆ ಅದರ ಪರಿಹಾರವನ್ನೂ ಹೇಳುತ್ತಾರೆ.


ಕೆಲವು ಮಹಿಳೆಯರಿಗೆ ಸೌಂದರ್ಯ ಪ್ರಜ್ಞೆ ಕೊಂಚ ಹೆಚ್ಚೇ ಇರುತ್ತದೆ. ಅಂತಹವರಲ್ಲಿ ತೊನ್ನು ಅಥವಾ ಬಿಳಿ ಮಚ್ಚೆ ಕಾಣಿಸಿಕೊಂಡಾಗ ಅವರಲ್ಲಿ ಬದಲಾಗುವ ನಡವಳಿಕೆ, ಅನುಭವಿಸುವ ಕೀಳಿರಿಮೆ ಹಾಗೂ ಯಾರಲ್ಲೂ ಹೇಳಿಕೊಳ್ಳಲಾಗದ ಸಂಧಿಗ್ಧತೆ ಅದರಿಂದ ಉಂಟಾಗುವ ಮಾನಸಿಕ ತುಮುಲಗಳನ್ನೂ ಹೇಳಿದ್ದಾರೆ. ಆ ರೀತಿಯ ಸಮಸ್ಯೆ ಉಂಟಾದಾಗ ಸಂಗಾತಿ ತೋರುವ ನಿರ್ಲಕ್ಷ್ಯ ಅಥವಾ ಅಸಹನೆಯಿಂದ ತೊಳಲುವ ಹೆಣ್ಣು ಮಕ್ಕಳ ಸಂಗತಿಗಳೂ ಇಲ್ಲಿವೆ.


ಹಾಗೆಂದು, ಈ ಮಾನಸಿಕ ಅಸ್ವಸ್ಥತೆ ಮಹಿಳೆಯರಲ್ಲಿ ಮಾತ್ರವೇ..?? ಖಂಡಿತಾ ಇಲ್ಲ. ಗಂಡಸರಿಗೂ ಈ ರೀತಿಯ ಮಾನಸಿಕ ಅಸ್ವಸ್ಥತೆ ಕಾಡಬಹುದು. ಆದರೆ, ಮಹಿಳೆಯರಲ್ಲಿ ಇದರ ತೀವ್ರತೆ ಹೆಚ್ಚು. ಅಲ್ಲದೇ, ಆಕೆಯ ದೇಹರಚನೆಯ, ಹಾರ್ಮೋನ್ ಗಳ, ಭಾವ ತೀವ್ರತೆಯ ದೃಷ್ಟಿಯಿಂದಲೂ ನಾವು ಗಮನಿಸಬೇಕಾಗುತ್ತದೆ. ಇದರ ಕುರಿತು ಬೆಳಕು ಚೆಲ್ಲುತ್ತದೆ ಈ ಪುಸ್ತಕ.


ಮನಸ್ಸು ದಿನಕಳೆದಂತೆ, ವರ್ಷ ಕಳೆದಂತೆ ಮಾಗುತ್ತಾ ಹೋಗುತ್ತದೆ. ಇದು ಮತ್ತಷ್ಟು ಜಟಿಲವೂ.. ಸೂಕ್ಷ್ಮವೂ ಆಗಬಹುದು. ಆದರೆ, ಮನಸ್ಸನ್ನು ಹಾಗಾಗಿಸಿಕೊಳ್ಳದೆ ಶಾಂತರೂಪಿಯಾಗಿಸಿಕೊಳ್ಳುವತ್ತ ಚಿತ್ತ ಹರಿಸಿಕೊಳ್ಳುವುದು ಅಷ್ಟೇ ಮುಖ್ಯ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ