"ಏನು ಮಾಡ್ತಿದ್ದೀಯಪ್ಪಾ ಈಗ " ಎಂದೋ.. "ನಿಮ್ಮ ಮಗ ಈಗ ಏನು ಮಾಡುತ್ತಾ ಇದ್ದಾನೆ" ಎಂದೋ ಯಾರಾದರೂ ಕೇಳಿದಾಗ ಹೆಚ್ಚಿನವರ ಉತ್ತರ ಐ.ಟಿ ಕಂಪನಿಯ ಕೆಲಸ ಅಥವಾ ಬ್ಯುಸಿನೆಸ್. ಬ್ಯುಸಿನೆಸ್ ಎಂಬುದು ಈಗ ಕೇವಲ ವಾಣಿಜ್ಯ ಪದವೀಧರರ ಸ್ವತ್ತಾಗಿ ಮಾತ್ರ ಉಳಿದಿಲ್ಲ. ಬ್ಯುಸಿನೆಸ್ ಎಂಬುದು ಈಗ ಎಲ್ಲೆಡೆ ಹರಡಿರುವ ಜಾಲವಾಗಿದೆ. ರಾಜಕೀಯ ವ್ಯಕ್ತಿಗಳ ನಂತರ ಇರುವ ಪ್ರಭಾವೀ ವ್ಯಕ್ತಿಗಳು ಎಂದರೆ ಈ ಬ್ಯುಸಿನೆಸ್ ಮನ್ ಗಳು ಎಂದರೂ ಅತಿಶಯೋಕ್ತಿ ಏನಿಲ್ಲ. ಆದರೆ, ಆ ಬ್ಯುಸಿನೆಸ್ ಮೆನ್ ಗಳು ಮಾಡುವ ವ್ಯವಹಾರಕ್ಕೊಂದು ವ್ಯಾಲ್ಯೂ ಇರಬೇಕು. ಬ್ರ್ಯಾಂಡ್ ನೇಮ್ ಇರಬೇಕು. ಬ್ರ್ಯಾಂಡ್ ನೇಮ್ ಗಳಿಲ್ಲದೇ ಇರುವ ಉತ್ಪನ್ನಗಳ ಮಾರಾಟದ ಕತೆಯೇನು ? ಎಂದು ಕೇಳಬಹುದು. ಬ್ಯುಸಿನೆಸ್ ಗೆ ಒಂದು ಕಿರೀಟ ತಂದು ಕೊಡುವುದೇ ಉತ್ಪನ್ನಗಳ ಬ್ರ್ಯಾಂಡ್ ನೇಮ್. ಈ ಬ್ರ್ಯಾಂಡ್ ನೇಮ್ ಗಳಲ್ಲಿಯೂ ಎರಡು ರೀತಿಯವು. ಒಂದು , ಜಾಹೀರಾತಿನ ಮೂಲಕ ಜನರಿಗೆ ತಲುಪಿ ಬಾಯಿಂದ ಬಾಯಿಗೆ ಹರಡಿದ ಉತ್ಪನ್ನಗಳು ಒಂದೆಡೆಯಾದರೆ, ಹೆಸರೇ ಇಲ್ಲದ ಉತ್ಪನ್ನಗಳು ಗುಣಮಟ್ಟದಿಂದ ಜನರ ಮನಸ್ಸು ಗೆದ್ದು ಹೆಸರಾದವು.
ಆದರೆ, ಎರಡೂ ರೀತಿಯ ಉತ್ಪನ್ನಗಳನ್ನೂ ಜನರು ಕೊಳ್ಳುವುದು ಗುಣಮಟ್ಟ ಹಾಗೂ ಬೆಲೆಯ ಆಧಾರದ ಮೇಲೆ. ಗುಣಮಟ್ಟ ಚೆನ್ನಾಗಿರುವ ಉತ್ಪನ್ನಗಳ ಬೆಲೆ ಹೆಚ್ಚಿದ್ದರೆ ಸಾಮಾನ್ಯ ವರ್ಗದ ಜನರ ಕೈಗೆಟಕುವುದು ಕಡಿಮೆಯೇ.. ಬೆಲೆ ಹಾಗೂ ಗುಣಮಟ್ಟ ಎರಡನ್ನೂ ಸರಿದೂಗಿಸಿಕೊಂಡು ಹೋಗುವುದು ವ್ಯಾಪಾರದಲ್ಲಿ ಸುಲಭದ ಮಾತಲ್ಲ. ಅದಕ್ಕೆ ಬುದ್ಧಿವಂತಿಕೆ ಬೇಕು. ಇದಕ್ಕೆ ಉದಾಹರಣೆಯಾಗಿ ಹೇಳುವುದಾದರೆ.. ಹಿಂದಿನ ಕಾಲದಿಂದಲೂ, ಈಗಲೂ ಉಪಯೋಗಿಸುವ ಬೆಂಕಿಪೊಟ್ಟಣದ ಬೆಲೆ ಗಮನಿಸಿ ನೋಡಿ. ಅದೇ ಗುಣಮಟ್ಟ ಹಾಗೂ ಬೆಲೆಯಲ್ಲಿ ಒಂದು ಪ್ರಾಡಕ್ಟ್ ಅನ್ನು ಹಲವಾರು ವರ್ಷಗಳ ಕಾಲ ಕಾಯ್ದಕೊಂಡು ಹೋಗುವುದು ಸುಲಭದ ಮಾತಲ್ಲ. ಹೀಗೆ ನೋಡುವುದಾದರೆ ಚಾಕೊಲೇಟ್, ಪಿನ್, ಸ್ಕೇಲ್ ಹೀಗೆ ಹಲವಾರು ವಸ್ತುಗಳ ಪಟ್ಟಿ ಮಾಡಬಹುದು.
ಪ್ರತಿ ದಿನ ಜನರು ಅಗತ್ಯವಾಗಿ ಬಳಸುವ ವಸ್ತುವಿನ ಕಚ್ಚಾ ವಸ್ತುವಿನ ಬೆಲೆ ಹೆಚ್ಚಾದಾಗ ಅದನ್ನು ಸರಿದೂಗಿಸಿಕೊಂಡು ಹೋಗುವುದು ಸುಲಭದ ಮಾತೇನಲ್ಲ. ಅಲ್ಲದೇ, ಒಂದೇ ಪ್ರಾಡಕ್ಟ್ ಅನ್ನು 10 - 15 ವರ್ಷಗಳಿಂದ ಒಂದೇ ಬೆಲೆಯಲ್ಲಿ ನೀಡುತ್ತಿದ್ದು ಅವರಿಗೆ ಲಾಭ ಬೇಕಾಗಿದ್ದು.. ಅದೇ ಗುಣಮಟ್ಟದಲ್ಲಿ, ಬೆಲೆಯನ್ನು ಹೆಚ್ಚು ಮಾಡದೇ ಜನರು ಹೆಚ್ಚು ಬಳಸುವಂತೆ ಮಾಡುವುದಾದರೆ..?? ಜನರು ಹೆಚ್ಚು ಬಳಸಿ, ಬೇಡಿಕೆಯಲ್ಲಿರುವ ವಸ್ತುವನ್ನು ಹೆಚ್ಚು ಉತ್ಪಾದಿಸಲು ಸಾಧ್ಯ. ಅಲ್ಲವೇ..?? ಇಂತಹಾ ಪ್ರಶ್ನೆ ಮೂಡಿದ್ದು ಕೋಲ್ಗೇಟ್ ಪೇಸ್ಟ್ ನ ಕಂಪನಿಯ ಉನ್ನತಾಧಿಕಾರಿಗೆ. ಆಗ, ನಾವು ಬಳಸುವ ಪೇಸ್ಟ್ ಈಗಿನಂತಿರಲಿಲ್ಲ. ಬೇವಿನಕಡ್ಡಿ, ಉಪ್ಪು, ಇದ್ದಿಲು, ಹಲ್ಲುಜ್ಜುವ ಪುಡಿ ( ಟೂಥ್ ಪೌಡರ್ ) ಹೆಚ್ಚೆಚ್ಚು ಬಳಕೆಯಲ್ಲಿದ್ದ ಸಮಯದಲ್ಲಿ ಟೂಥ್ ಪೇಸ್ಟ್ ಆಗಷ್ಟೇ ಎಲ್ಲರ ಮನೆಯಲ್ಲಿಯೂ ಬಳಸಲು ರೂಢಿಗೆ ಬರುತ್ತಿದ್ದ ಕಾಲ. ಅದೇ ಗುಣಮಟ್ಟ, ಅದೇ ಬೆಲೆ ಇದ್ದು ಜನರು ಟೂಥ್ ಪೇಸ್ಟ್ ಅನ್ನು ಹೆಚ್ಚು ಬಳಸುವಂತೆ ಮಾಡುವುದು ಹೇಗೆ ? ಈಗಿನ ಜನರೇಷನ್ ಆಗಿದ್ದಿದ್ದರೆ ನೀಡುತ್ತಿದ್ದ ಉತ್ತರ "ಮಾರ್ಕೆಟಿಂಗ್ ಮಾಡುವುದು" ಎಂದಿರಬಹುದು. ಮಾರ್ಕೆಟಿಂಗ್ ಮಾಡಿದರೆ ಹೆಚ್ಚು ಜನ ಕೊಂಡುಕೊಳ್ಳಬಹುದಾದರೂ ಆಗ ಮಾರ್ಕೆಟಿಂಗ್ ಈಗಿನಷ್ಟು ಸುಲಭವಾಗಿರಲಿಲ್ಲ. ಸೋಶಿಯಲ್ ಮೀಡಿಯಾ ಇಲ್ಲದ, ಟಿ.ವಿ ಹೆಚ್ಚು ಬಳಕೆಯಲ್ಲಿಲ್ಲದ, ಮೊಬೈಲ್ ಇಲ್ಲದ ಕಾಲ. ಹೆಚ್ಚು ರಚನಾತ್ಮಕ ಉತ್ತರ ಬಂದಿತ್ತು. ಅದೆಂದರೆ, ಟೂಥ್ ಪೇಸ್ಟ್ ನ ಟ್ಯೂಬ್ ನ ರಚನೆಯನ್ನು ಕೊಂಚ ಬದಲಾವಣೆ ಮಾಡುವುದು. ಟೂಥ್ ಪೇಸ್ಟ್ ನ ಟ್ಯೂಬ್ ನ ಬಾಯಿಯನ್ನು ಕೊಂಚ ಅಗಲ ಮಾಡುವುದು. ಈ ಉಪಾಯವನ್ನೇ ಆಗ ಅವರು ಅಳವಡಿಸಿದ್ದು. ಅದೇ ಗುಣಮಟ್ಟ, ಅದೇ ಬೆಲೆಯಲ್ಲಿ ಟೂಥ್ ಪೇಸ್ಟ್ ಬಳಕೆ ಹೆಚ್ಚಾಯಿತು. ಬ್ಯುಸಿನೆಸ್ ಒಂದರಲ್ಲಿ ಹೇಗೆ ಬದಲಾವಣೆಗಳಾಗುತ್ತವೆ ಎಂಬುದಕ್ಕೆ ಇದೊಂದು ಸಣ್ಣ ಉದಾಹರಣೆ ಅಷ್ಟೇ..
ಬ್ಯುಸಿನೆಸ್ ನಲ್ಲಿ ನಿರಂತರ ಬದಲಾವಣೆ, ಹೊಸತನಗಳಿಂದಲೂ ಜನರ ಮನಸ್ಸನ್ನು ಗೆಲ್ಲಬೇಕಾಗುತ್ತದೆ. ಹೊಸತರ ಅನ್ವೇಷಣೆ, ಹೊಸ ಉಪಾಯಗಳು ಜನರ ಮನಸ್ಸನ್ನು ಸೆಳೆಯುತ್ತದೆ. ಸೆಳೆಯಬಹುದು ಅಥವಾ ಜನರು ಅದನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸದಿರಲೂಬಹುದು. ಒಂದು ಚಾಕೊಲೇಟ್ ತಯಾರಿಕಾ ಕಂಪನಿಯ ಉದಾಹರಣೆ ನೀಡುವುದಾದರೆ.. ಅಲ್ಪಾನ್ ಲಿಬೆ ಅದೆಷ್ಟು ಹೊಸ ಹೊಸ ಬದಲಾವಣೆ ತಂದಿತು..ಪ್ಲೈನ್ ಚಾಕೊಲೇಟ್ ಜೊತೆಗೆ, ಸ್ಟ್ರಾ ಬೆರ್ರಿ ಪ್ಲೇವರ್ ಚಾಕೊಲೇಟ್ ಅನ್ನೂ ತಯಾರಿಸಿತು. ಅದೇ ಚಾಕೊಲೇಟ್ ಕೊಂಚ ಹೊಸ ರೂಪ ಪಡೆದು, ಕೊಂಚ ಹೆಚ್ಚಿನ ಬೆಲೆಯಲ್ಲಿ ಲಾಲಿಪಾಪ್ ಕೂಡಾ ಆಯಿತು. ಐದು ಚಾಕೊಲೇಟ್ ಕೊಂಡರೆ ಒಂದು ಟ್ಯಾಟೂ ಉಚಿತ ಎಂಬ ಆಸೆ ಹುಟ್ಟಿಸಿತು. ಟ್ಯಾಟೂ ಆಸೆಗೆ ಚಾಕೊಲೇಟ್ ಅನ್ನು ಕೊಂಡವರೂ ಕಡಿಮೆ ಏನಲ್ಲ. ಮುಖ ತೊಳೆಯಲು, ಸ್ನಾನಕ್ಕೆ, ಕೈ ತೊಳೆಯಲು ಬೇರೆ ಬೇರೆ ಸೋಪುಗಳಿದ್ದವು. ಈಗ ಅದರಲ್ಲಿ ಬ್ರ್ಯಾಂಡ್ , ಪ್ಲೇವರ್ ಗಳು ಬಂದಿವೆ. ಇನ್ನೂ ಮುಂದುವರಿದು ಹ್ಯಾಂಡ್ ವಾಷ್, ಬಾಡಿ ವಾಷ್, ಫೇಸ್ ವಾಷ್ ಲಿಕ್ವಿಡ್ ಗಳು ಬಂದಿವೆ. ಒಂದನ್ನು ಕೊಂಡರೆ ಮತ್ತೊಂದು ಉಚಿತ, ಬೈ ಒನ್ ಗೆಟ್ ಒನ್ ಎನ್ನುವ ಆಫರ್ ಗಳು ಸರ್ವೇಸಾಮಾನ್ಯವಾಗಿಬಿಟ್ಟಿವೆ.
ಬ್ಯುಸಿನೆಸ್ ನಲ್ಲಿ ಈ ರೀತಿಯ ಆಫರ್ ನೀಡುವುದು ಸಹಾ ತಮ್ಮ ಬ್ಯುಸಿನೆಸ್ ಅನ್ನು ಬೂಮ್ ಮಾಡಿಕೊಳ್ಳುವ ಉದ್ದೇಶದಿಂದಲೇ.. ಇದರಲ್ಲಿ ಸಫಲರಾದವರೂ ಇದ್ದಾರೆ, ವಿಫಲರಾದವರೂ ಇದ್ದಾರೆ. ಹೀಗೆ ಕಡಿಮೆ ಬೆಲೆಯಲ್ಲಿ ಆಫರ್ ನೀಡುತ್ತಾ ಬ್ಯುಸಿನೆಸ್ ನಲ್ಲಿ ಮುಂದಿದ್ದ ಒಂದಾನೊಂದು ಕಾಲದ ಮಾಲ್ ಗಳ ಮಹಾರಾಜ ಬಿಗ್ ಬಿಜಾರ್ ಈಗ ಹೇಳ ಹೆಸರಿಲ್ಲದಂತೆ ಮಾಯವಾಗಿದೆ. ಈಗ ಅದೇ ರೀತಿಯ ಕಡಿಮೆ ಬೆಲೆಯ ಆಫರ್ ನೀಡುತ್ತಿರುವ ಡಿ - ಮಾರ್ಟ್ ಹಾಗೂ ರಿಲಾಯನ್ಸ್ ಮಾರ್ಟ್ ಗಳು ಗ್ರಾಹಕರನ್ನು ಸೆಳೆಯುವಲ್ಲಿ ಮುಂದಾಗುತ್ತಿವೆ. ಈ ಬ್ಯುಸಿನೆಸ್ ನಲ್ಲಿ ಒಬ್ಬರಿಗೊಬ್ಬರು ಪೈಪೋಟಿ ನೀಡುವುದು ಕಡಿಮೆ ಏನಿಲ್ಲ. ಆಡಿಡಾಸ್, ಪೂಮಾ ಕಂಪನಿಗಳು ಅಣ್ಣ ತಮ್ಮಂದಿರದ್ದೇ ಆಗಿದ್ದರೂ.. ಅವು ರೈವರ್ಲಿ ಗೂ ಹೆಸರುವಾಸಿಯಾಗಿವೆ. ಅಷ್ಟೇ ಏಕೆ..? ಇತ್ತೀಚಿನ ದಿನಗಳ ಬದಲಾವಣೆ ಗಮನಿಸಿ ನೋಡಿ. ಟೆಲಿಕಾಂ ಕ್ಷೇತ್ರದಲ್ಲಿ ಏರ್ ಟೆಲ್ ಹಾಗೂ ಜಿಯೋ ಪೈಪೋಟಿ ಏನೂ ಕಡಿಮೆಯಾದ್ದಲ್ಲ. ಒಂದು ಕಂಪನಿಯ ಟಾಕ್ ಟೈಮ್, ಡೇಟಾ ಪ್ಯಾಕ್ ದರಗಳು ಬದಲಾದರೆ, ಮತ್ತೊಂದರದ್ದೂ ಬದಲಾಗುತ್ತಿರುತ್ತದೆ.
ಇಂದು ದೊಡ್ಡದಾಗಿ ಹೆಸರು ಮಾಡಿರುವ ಬ್ಯುಸಿನೆಸ್ ಗಳು ಒಂದಾನೊಂದು ಕಾಲದಲ್ಲಿ ಚಿಕ್ಕದಾಗಿ ಶುರುವಾದವುಗಳೇ.. ಮನೆ ಮನೆಗೆ ಹೋಗಿ ಮಾರಾಟ ಮಾಡುತ್ತಿದ್ದ ಸೋಪಿನ ಪುಡಿಯೇ ನಿರ್ಮಾ ಪೌಡರ್ ಆದದ್ದನ್ನು ಮರೆಯುವಂತಿಲ್ಲ. ಹಾಗೆಯೇ, ಮೊದಲ ಒಂದೆರಡು ಉದ್ಯಮದ ಪ್ರಯತ್ನಗಳು ಕೈ ಹಿಡಿಯದಿದ್ದಾಗ ಅದನ್ನು ಕೈ ಬಿಟ್ಟು ಸುಮ್ಮನಾದವರೂ ಇದ್ದಾರೆ.. ಮರಳಿ ಯತ್ನವ ಮಾಡು ಎನ್ನುತ್ತಾ ಸೋಲಿಗೆ ಕಾರಣ ಹುಡುಕಿ ಸರಿಪಡಿಸಿಕೊಂಡು ಮುನ್ನಡೆದವರೂ ಇದ್ದಾರೆ. ಇಲ್ಲವೇ, ತಮ್ಮದೇ ಸ್ವಂತ ಉದ್ಯಮ ಶುರು ಮಾಡಿದವರೂ ಇದ್ದಾರೆ. ಹೀಗೆ ಹೇಳಬೇಕೆಂದಾಗ ನೆನಪಾಗುವುದು ಕೆ.ಎಫ್.ಸಿ ಯ ಮಾಲೀಕ ಕೊಲೊನೆಲ್ ಹಾರ್ಡ್ಲ್ಯಾನ್ಡ್ ಡೇವಿಡ್ ಸ್ಯಾನ್ಡರ್ಸ್. ಆತನ ಚಿಕನ್ ರೆಸಿಪಿಯನ್ನು ತಿರಸ್ಕರಿಸಿದ್ದು ಕೇವಲ ಒಂದೆರಡಲ್ಲ, 1000 ಕ್ಕೂ ಹೆಚ್ಚಿನ ರೆಸ್ಟೋರೆಂಟ್ ಗಳು.
ಬ್ಯುಸಿನೆಸ್ ಶುರು ಮಾಡುವುದಕ್ಕೆ ವಯಸ್ಸು ಕಾರಣವೂ ಅಲ್ಲ.. ಅಡ್ಡಿಯೂ ಅಲ್ಲ. ಫೋರ್ಡ್ ಮೋಟಾರ್ ಕಂಪೆನಿಯ ಮಾಲೀಕ ಹೆನ್ರಿ ಫೋರ್ಡ್ ತನ್ನ ಕಂಪೆನಿ ಶುರು ಮಾಡಿದ್ದು ಅವನ 53 ನೇ ವಯಸ್ಸಿನಲ್ಲಿ. ಅದಕ್ಕೂ ಮೊದಲು ಆತ ಶುರು ಮಾಡಿದ್ದ ಮೂರು ಉದ್ಯಮಗಳೂ ಆತನ ಕೈ ಹಿಡಿದಿರಲಿಲ್ಲ. ಬಿಲ್ ಗೇಟ್ಸ್ ಶುರು ಮಾಡಿದ ಮೊದಲ ಉದ್ಯಮವೂ ಆತನ ಕೈ ಹಿಡಿಯಲಿಲ್ಲ. ಆತನ ಮೊದಲ ಬ್ಯುಸಿನೆಸ್ "ಟ್ರಾಫ್ - ಓ - ಡೇಟಾ " ನಲ್ಲಿ ಆತ ಸೋತಿದ್ದ. ಹಾಗೆಂದು, ಸುಮ್ಮನೆ ಕೈ ಕಟ್ಟಿ ಕೂರಲಿಲ್ಲ.
ಬ್ಯುಸಿನೆಸ್ ಅಥವಾ ಉದ್ಯಮ ಎಂಬುದಕ್ಕೆ ಈಗ ಸೀಮೆಗಳಿಲ್ಲ. ಪ್ರಾದೇಶಿಕ, ಜಿಲ್ಲೆ, ರಾಜ್ಯ, ದೇಶ, ವಿದೇಶಕ್ಕೂ ಹರಡುತ್ತಿದೆ. ಕೇವಲ ಬುದ್ಧಿಯನ್ನೇ ಬಂಡವಾಳವನ್ನಾಗಿಸಿಕೊಂಡು ಬ್ಯುಸಿನೆಸ್ ಶುರು ಮಾಡಿದವರಿದ್ದಾರೆ. ಮನೆಯಲ್ಲಿ ಗೃಹಿಣಿಯರು ಅಚ್ಚುಕಟ್ಟಾಗಿ ಮಾಡುವ ತಿಂಡಿಗಳು ಈಗ ರುಚಿ - ಶುಚಿಯಿಂದ ಬ್ರ್ಯಾಂಡ್ ಆಗಬಹುದು. ಮಣ್ಣಿನಿಂದ ಏನಾಗುತ್ತದೆ ಎನ್ನುವವರಿಗೆ ಇಂದು ಮಣ್ಣಿನ ಆಭರಣಗಳು ಉದ್ಯಮವೇ ಆಗಿರುವುದು ಕಾಣುತ್ತದೆ. ಕುಡಿಯುವ ನೀರು ಕೂಡಾ ಈಗ ಡ್ರಿಂಕಿಂಗ್ ಮಿನರಲ್ ವಾಟರ್ ಬಾಟಲ್ ಆಗಿ ಬದಲಾಗಿ ಬ್ಯುಸಿನೆಸ್ ಆಗಿದೆ. ಬ್ಯುಸಿನೆಸ್ ಕೇವಲ ಗೆಲುವಿನ ಕಥೆಯಲ್ಲ, ಗೆದ್ದದ್ದನ್ನು ಬೇಗ ಗುರುತಿಸುತ್ತೇವೆ ಎನ್ನುವುದು ಸತ್ಯವೇ ಆದರೂ.. ಗೆದ್ದ ಬ್ಯುಸಿನೆಸ್ ನ ಹಿಂದೆ ಅದೆಷ್ಟು ಶ್ರಮ, ಬುದ್ಧಿವಂತಿಕೆ, ಟೀಮ್ ವರ್ಕ್ ಇರಬಹುದು. ಹಾಗೆಯೇ, ಸೋತ ಬ್ಯುಸಿನೆಸ್ ಗಳನ್ನು ಕಂಡಾಗ ಕೇವಲ ಅದರ ಸೋಲು ಕಾಣಬಾರದು. ಸೋಲಿನಿಂದ ಕಲಿಯುವ ಪಾಠ ಕಾಣಬೇಕು. ಹೀಗೆ ಸೋಲು - ಗೆಲುವಿನ ಬ್ಯುಸಿನೆಸ್ ಗಳ ಕುರಿತು ಹೇಳಲು ಸಿದ್ಧವಾಗಿದ್ದೇನೆ. "ಬ್ಯುಸಿನೆಸ್ ಡೈರಿ"ಯ ಪುಟಗಳನ್ನು ಓದಲು ನೀವೂ ಸಿದ್ಧರಾಗಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ