ಮಂಗಳವಾರ, ಏಪ್ರಿಲ್ 21, 2026

ಅಂತರಂಗದ ಧ್ವನಿಗಳು (ಪುಸ್ತಕ ಯಾನ - 285)


ಪುಸ್ತಕದ ಶೀರ್ಷಿಕೆ : ಅಂತರಂಗದ ಧ್ವನಿಗಳು

ಲೇಖಕರು : ಸಿ. ಎನ್. ಮುಕ್ತಾ

ಪ್ರಕಾಶಕರು : ಲಕ್ಷ್ಮಿ ಪ್ರಕಾಶನ

ಪ್ರಥಮ ಮುದ್ರಣ : 1993

ಪುಟಗಳು : 170


ಮನುಷ್ಯನ ಅಂತರಂಗದ ಮಾತುಗಳಿಗೂ ಹಾಗೂ ಆತನ ನಡವಳಿಕೆಗೂ ಬಹಳಷ್ಟು ವ್ಯತ್ಯಾಸವಿರುತ್ತದೆ. ವ್ಯತ್ಯಾಸವಿಲ್ಲದಿರುವಂತೆ ಕಾಣುವವರನ್ನು ಅರ್ಥೈಸಿಕೊಳ್ಳಲು ಬಹಳವೇ ಕಷ್ಟ. ಅಂತರಂಗದ ಧ್ವನಿಗಳು ಕಾದಂಬರಿಯಲ್ಲಿ ಕೆಲವು ಪಾತ್ರಗಳನ್ನು ನಾವು ಊಹಿಸಿಕೊಳ್ಳುವುದೇ ಬೇರೆಯ ರೀತಿ. ಆದರೆ, ಅವುಗಳ ನಡೆಗಳೇ ಬೇರೆಯ ರೀತಿ. ಇದು ತಪ್ಪನ್ನು ತಿದ್ದಿಕೊಂಡ ಲಕ್ಷಣವೂ ಹೌದು. ತಪ್ಪನ್ನು ಮುಚ್ಚಿಟ್ಟು ಮುಂದಿನ ಬದುಕನ್ನು ಸವೆಸುತ್ತಿದ್ದವರ ಲಕ್ಷಣವೂ ಹೌದು. ಹಾಗೆಂದು, ಒಬ್ಬ ವ್ಯಕ್ತಿ ಪರಿವರ್ತನೆಯಾಗದೆ ಹಾಗೆಯೇ ಮುಂದುವರಿಯಬೇಕೆಂದಲ್ಲ.. ಆದರೆ, ಆ ಹಿಂದಿನ ನೆನಪುಗಳು ಹಾಗೂ ಇಂದಿನ ವರ್ತನೆಯನ್ನು ಅವರು ಬೇರೆಯ ರೀತಿಯಲ್ಲಿಯೂ ಸಮತೋಲನ ಮಾಡಿಕೊಂಡು ಹೋಗಬಹುದಾಗಿತ್ತು ಎನ್ನಿಸಿತು. ಆದರೆ ಹೇಳುವಷ್ಟು ಸುಲಭವಲ್ಲ ಮನುಷ್ಯರ ನಡೆಗಳು.


ರಾಜಾರಾವ್ ಹಾಗೂ ದಮಯಂತಿ ದಂಪತಿಗಳಿಗೆ ಆರು ಜನ ಮಕ್ಕಳು. ಹಿರಿಯ ಮಗಳು ಸುಮಳ ಮದುವೆಯಾಗಿತ್ತು. ದಿನಸಿ ಅಂಗಡಿ ಇಟ್ಟಿದ್ದ ಹುಡುಗನಿಗೆ ತಾಯಿ ಇರಲಿಲ್ಲ. ತಂದೆ ಮಾತ್ರವೇ ಇದ್ದದ್ದು. ಬೇರೆ ಯಾವ ಸಹೋದರ-ಸಹೋದರಿಯೂ ಇರಲಿಲ್ಲವೆಂದು ಮರು ಆಲೋಚನೆ ಮಾಡದೆ ದಮಯಂತಿ ವಿವಾಹ ಮಾಡಿಸಿದ್ದರು. ಈಗ ಅವಳಿಗೆ ಇಬ್ಬರು ಮಕ್ಕಳು. ದೊಡ್ಡವನು ಸಂದೀಪ. ಈಗ ಇವರ ಮನೆಯಲ್ಲಿಯೇ ಓದುತ್ತಿದ್ದ. ಮಗಳು ಇನ್ನು ಚಿಕ್ಕವಳು ಸಂಧ್ಯಾ. ರಾಜಾರಾವ್ ಮಾತ್ರ ಓದಿರುವ, ಕೆಲಸದಲ್ಲಿರುವ ವರನನ್ನೇ ಹುಡುಕುವ ಆಸೆ ಹೊಂದಿದ್ದರು.


ಎರಡನೆಯ ಮಗಳು ರಮಾಳಿಗೂ ಮದುವೆಯಾಗಿತ್ತು. ಮನ ಬಯಸಿದಂತಹಾ ಹುಡುಗ ಸಿಕ್ಕಿರಲಿಲ್ಲವಾದರೂ.. ಸರ್ಕಾರಿ ಕೆಲಸದಲ್ಲಿರುವವನ ಜೊತೆ ಮದುವೆಯಾಗಿತ್ತು. ಮೂರನೆಯ ಮಗಳು ಉಮಾ. ಎಂ.ಎ ಮಾಡಿ ಖಾಸಗಿ ಕಾಲೇಜಿನಲ್ಲಿ ಲೆಕ್ಚರರ್ ಆಗಿದ್ದವಳು. ರಾಜರಾವ್ ಅವರ ತಂಗಿ ವಿಜಯಮ್ಮನವರ ಮನೆಯಲ್ಲಿಯೇ ಇದ್ದಳು. ಅವರ ಮಗ ಪ್ರಕಾಶನ ಜೊತೆ ಮದುವೆ ನಿಶ್ಚಯವಾಗಿತ್ತು. ಮುಂದೆ ಆತನ ಜೊತೆಗೆ ವಿವಾಹವೂ ಆಗಿತ್ತು. ಮನೆಯ, ತಂದೆ-ತಾಯಿಯೊಡನೆ ಅಷ್ಟು ಬಾಂಧವ್ಯವಿಟ್ಟುಕೊಂಡಿರಲಿಲ್ಲ.


ನಾಲ್ಕನೆಯ ಹಾಗೂ ಕೊನೆಯ ಮಗಳು ಸಿಂಧು. ತಂದೆಯ ಮುದ್ದಿನ ಮಗಳು. ತಾಯಿಯ ಆಲೋಚನೆಗೆ, ನಡೆಗೆ ಅವಳದ್ದು ವಿರೋಧವೇ.. ದಮಯಂತಿಗೆ ಹೆಣ್ಣುಮಕ್ಕಳ ಮೇಲೆ ಬಹಳವೇ ಪ್ರೇಮ. ಉಮಾಳನ್ನು ವಿಜಯಮ್ಮನವರ ಮನೆಯಲ್ಲಿ ಬಿಡಲು ಇಷ್ಟವಿರದಿದ್ದರೂ ಉಮಾ ಹಠ ಹಿಡಿದು ಹೋಗಿದ್ದರಿಂದ ಸುಮ್ಮನಾಗಿದ್ದರು.


ಸಿಂಧುವಿಗೆ ಇಬ್ಬರು ಅಣ್ಣಂದಿರು. ಮೊದಲನೆಯವನು ಶ್ರೀಧರ. ಆತ ಅಮ್ಮನ ಮಗನೇ.. ಹೆಣ್ಣುಮಕ್ಕಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಬಾರದು ಹಾಗೂ ಅವರು ತಮ್ಮ ಹದ್ದುಬಸ್ತಿನಲ್ಲಿಯೇ ಇರಬೇಕು ಎಂಬ ಮನೋಭಾವದವನು. ಸಿಂಧುವಿಗೆ ಎರಡನೆಯ ಅಣ್ಣ ರಮೇಶನೆಂದರೆ ಬಹಳ ಇಷ್ಟ. ಆತ ಬ್ಯಾಂಕ್ ನಲ್ಲಿ ಕೆಲಸ ಹಿಡಿದು, ಬೇಕೆಂದೇ ದೂರದ ಮಂಗಳೂರಿನಲ್ಲಿ ನೆಲೆಸಿದ್ದ. ಆತನಿಗೆ ಮನೆಗೆ ಬರಲು ಅಷ್ಟಾಗಿ ಇಷ್ಟವಾಗುತ್ತಿರಲಿಲ್ಲ. ಊರಿಗೆ ಬಂದಾಗ ಎಲ್ಲದರ ಕುರಿತು.. ರಾಜಕೀಯ, ಕ್ರೀಡೆ, ಸಾಹಿತ್ಯ ಎಲ್ಲದರ ಜೊತೆಗೆ ಅಪ್ಪ ಹಾಗೂ ತಂಗಿಯ ಜೊತೆ ಚರ್ಚೆ ಮಾಡುತ್ತಿದ್ದ. 


ಸಿಂಧು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಆಕೆ ಯಾವುದರ ಕುರಿತು ದನಿಯತ್ತಿರಲಿಲ್ಲ. ದಮಯಂತಿಯವರು ಹೆಣ್ಣುಮಕ್ಕಳನ್ನು ಹಿಡಿತದಲ್ಲಿಟ್ಟುಕೊಂಡಿದ್ದರೂ ಪಂಜರದ ಗಿಳಿಗಳನ್ನಾಗಿಸಿರಲಿಲ್ಲ. ಎಲ್ಲಾದರೂ ಪ್ರವಾಸ ಕರೆದೊಯ್ಯುತ್ತಿದ್ದರು, ಕೇಳಿದನ್ನೆಲ್ಲಾ ತೆಗೆದುಕೊಡುತ್ತಿದ್ದರಾದರೂ.. ಅವರು ಗಂಡನ ಜೊತೆ ಹೋಗುತ್ತಿರಲಿಲ್ಲ. ಅಷ್ಟೇ ಅಲ್ಲ ರಾತ್ರಿ ಊಟ ಬಡಿಸುವ ವಿಚಾರಕ್ಕೂ ಸಹಾ ಮಕ್ಕಳನ್ನೇ ಮುಂದಿಟ್ಟು ಊಟ ಕೊಡುತ್ತಿದ್ದರು. ಅವರೆಲ್ಲರೂ ಒಟ್ಟಿಗೆ ಕುಳಿತು ಊಟ ಮಾಡಿದ್ದೇ ಇಲ್ಲ. ಯಾವ ವಿಷಯದ ಬಗ್ಗೆಯೂ ಚರ್ಚಿಸಿ ತೀರ್ಮಾನಕ್ಕೆ ಬರುತ್ತಿರಲಿಲ್ಲ . ಸಿಂಧು ಎಂದಿಗೂ ತಂದೆ-ತಾಯಿ ಜಗಳವಾಡಿದ್ದನ್ನು ನೋಡಿಯೇ ಇರಲಿಲ್ಲ. ಎಲ್ಲರ ಮನೆಯಲ್ಲಿದ್ದುದ್ದಕ್ಕಿಂತ ಇಲ್ಲಿನ ಪರಿಸರ ವ್ಯತಿರಿಕ್ತವಾಗಿತ್ತು. 


ಈ ಕುರಿತು ಸಿಂಧು ರಮೇಶನ ಜೊತೆ ಚರ್ಚಿಸುವಾಗ ಆತ ಹೇಳಿದ ಪ್ರಕಾರ.. ದಮಯಂತಿಯ ತಂದೆಯ ಮನೆಯಲ್ಲಿ ಬಹಳ ಶ್ರೀಮಂತರು

 ಅವರೇ ರಾಜರಾವ್ ರನ್ನು ಒಪ್ಪಿ ಮನೆಯ ಅಳಿಯನನ್ನಾಗಿಸಿಕೊಂಡಿದ್ದರು. ಈಗಿರುವ ಮನೆಯೂ ಅವರದ್ದೇ.. ಹಾಗಾಗಿ, ಶ್ರೀಮಂತಿಕೆಯ ದರ್ಪದಿಂದ ತಾಯಿ, ತಂದೆಯನ್ನು ಹಿಡಿತದಲ್ಲಿಟ್ಟುಕೊಂಡಿದ್ದರು ಎನ್ನುವುದು ಅವನ ಅಭಿಪ್ರಾಯ. 


ಸುಮಾ, ರಮಾರ ನಂತರ ಹುಟ್ಟಿದ್ದ ಶ್ರೀಧರನಿಗೆ ಈಗ ವಿವಾಹದ ವಯಸ್ಸು. ಆತ ಸಿಂಧುವಿನ ಗೆಳತಿ ಸುನೀತಾಳನ್ನು ಇಷ್ಟಪಟ್ಟಿದ್ದ. ಹಾಗೆಂದು, ಅದು ಅವರಿಬ್ಬರ ನಡುವಿನ ಪ್ರೇಮ ವಿವಾಹವಲ್ಲ. ಈ ವಿಚಾರ ದಮಯಂತಿಯವರಿಗೆ ಹಿಡಿಸದಿದ್ದರೂ.. ರಾಜರಾವ್ ಅವರಿಗೆ ತಮ್ಮ ಗೆಳೆಯ ಶ್ರೀನಿವಾಸರಾವ್ ರ ಮನೆಯಲ್ಲಿ ಹೆಣ್ಣು ತರುವುದು ಸಂಭ್ರಮದ ವಿಷಯವೇ.. ಬಿಗಿ ಸ್ವಭಾವದ, ಹೆಣ್ಣು ಮಕ್ಕಳ ಕುರಿತು ಕಟ್ಟುನಿಟ್ಟಾಗಿದ್ದ ಶ್ರೀಧರನಿಗೆ ಸುನೀತಾಳೊಂದಿಗೆ ಮದುವೆಯಾಯಿತು. ಆತ ಅವಳನ್ನು ಬಹಳ ಪ್ರೀತಿಸುತ್ತಿದ್ದ. ಆದರೆ, ತಂದೆಯ ಮನೆಗೆ ಕಳುಹಿಸುವುದಕ್ಕೂ ಆತ ಜೊತೆಯಾಗಿಯೇ ಹೋಗಿ ಜೊತೆಯಾಗಿಯೇ ಕರೆತರಬೇಕು. ಯಾವುದಕ್ಕೂ ಸ್ವಾತಂತ್ರ್ಯವಿಲ್ಲ.


ಸಿಂಧು ಲೆಕ್ಚರರ್ ಆಗಿ ಕೆಲಸಕ್ಕೆ ಸೇರಿದಳು. ಹಾಗಾಗಿ, ಅವಳು ಹೆಚ್ಚು ಮನೆಯಲ್ಲಿರುತ್ತಿರಲಿಲ್ಲ. ದಮಯಂತಿ ಹಾಗೂ ಸುನೀತಾ ನಡುವೆ ಆಗಾಗ ಜಗಳ, ಕದನಗಳು ಇದ್ದೇ ಇದ್ದವು. ರಾಜರಾವ್ ಅವರು ಸೊಸೆಗೆ ಆಗಾಗ ಸಮಾಧಾನ ಮಾಡುತ್ತಿದ್ದರು. ಅವರು ಹಾರ್ಟ್ ಅಟ್ಯಾಕ್ ನಿಂದ ತೀರಿ ಹೋದ ನಂತರ ಅವಳ ಪರಿಸ್ಥಿತಿ ಕೇಳುವಂತಿರಲಿಲ್ಲ.. ಆದರೆ, ಅವರು ಸಾಯುವುದಕ್ಕೂ ಮುನ್ನವೇ ಶ್ರೀಧರನ ಬಳಿಯಲ್ಲಿ, ಸಿಂಧುವಿಗೆ ಓದಿದ ಹಾಗೂ ಅವಳು ಇಷ್ಟಪಡುವ ಹುಡುಗನ ಜೊತೆಗೆ ಮದುವೆ ಮಾಡಬೇಕೆಂದು ಮಾತು ತೆಗೆದುಕೊಂಡಿದ್ದರು. ತಂದೆಯ ಸಾವಿನ ನಂತರ ಬಹಳವೇ ಖಿನ್ನಳಾಗಿದ್ದಳು ಸಿಂಧು. ಅವಳ ನಡವಳಿಗೆ ಬಹಳಷ್ಟು ಬದಲಾಯಿಸಿತು.


ಆ ಸಮಯದಲ್ಲಿ ರಮೇಶನ ಜೊತೆ ಕೆಲ ದಿನಗಳ ಮಟ್ಟಿಗೆ ಮಂಗಳೂರಿಗೆ ಹೋದವಳಿಗೆ ಅಲ್ಲಿ ರಮೇಶ ಪ್ರೀತಿಸುತ್ತಿದ್ದ ಡಾಕ್ಟರ್ ಮಗಳಾದ ಗಾಯಿತ್ರಿಯ ವಿಚಾರ ತಿಳಿಯಿತು. ಸಿಂಧುವಿನ ಮದುವೆಯಾಗದೆ ತಾನು ಮದುವೆಯಾಗಲಾರೆ ಎಂದು ಚಂದ್ರಕಾಂತ್ ಪರಿಚಯವನ್ನು ಮಾಡಿಸಿದ್ದ. ಆದರೆ, ಸಿಂಧು ಇನ್ನು ಮದುವೆಗೆ ಒಪ್ಪಿಗೆ ನೀಡಿರದಿದ್ದರೂ ಆತನನ್ನು ಇಷ್ಟಪಟ್ಟಿದ್ದಳು. ನಂತರ, ಅಚಾನಕ್ಕಾಗಿ ರಮೇಶ ಹಾಗೂ ಸಿಂಧು ಊರಿಗೆ ಬರಬೇಕಾಯಿತು.


ಸಿಂಧು ಮಂಗಳೂರಿಗೆ ಹೋಗುವ ಮೊದಲು ಸುನೀತ ಗರ್ಭಿಣಿ. ಅವರು ಅಚಾನಕ್ಕಾಗಿ ಇಲ್ಲಿಗೆ ಬರಲು ಕಾರಣ ಸುನೀತಾಳ ಸಾವು. ಅದು ಬೆಂಕಿ ಅವಘಡದಿಂದ ಆಗಿತ್ತು. ಆ ಸಾವಿಗೆ ತನ್ನ ಅಣ್ಣ ಶ್ರೀಧರ ಹಾಗೂ ತಾಯಿಯೇ ಕಾರಣವೆಂಬ ಸಿಂಧುವಿನ ನಿಲುವಿಗೆ ಕಾರಣವೇನು..? ನಿಜಕ್ಕೂ ಸುನಿತಳ ಸಾವು ಅಪಘಾತವೇ, ಆತ್ಮಹತ್ಯೆಯೇ ಅಥವಾ ಕೊಲೆಯೇ..? ಈ ವಿಚಾರ ತಿಳಿದ ಸುನೀತಾ ಮನೆಯವರ ಪ್ರತಿಕ್ರಿಯೆ ಹೇಗಿತ್ತು..?


ಮೋಹನಮಣಿಗೆ ಕ್ಯಾನ್ಸರ್ ಎಂಬ ವಿಚಾರ ತಿಳಿದು ಆಕೆಯನ್ನು ಹುಡುಕಿಕೊಂಡು ಹೊರಟಾಗ ಸಿಂಧುವಿಗೆ ತಿಳಿದ ಸತ್ಯವೇನು..?


ರಮೇಶ ಹಾಗೂ ಗಾಯಿತ್ರಿಯರ ಮದುವೆಯನ್ನು ಸಿಂಧುವೇ ಮುಂದೆ ನಿಂತು ಮಾಡಿಸಿದಳಾದರೂ.. ತಾನು ಮಾತ್ರ ವಿವಾಹ ಆಗಲಾರೆನೆಂದು ಹಿಂದೆ ಸರಿದಾಗ ಚಂದ್ರಕಾಂತ್ ಆ ಕಾರಣದ ಹಿಂದೆ ಬಿದ್ದು ತಿಳಿದ ಸತ್ಯವೇನು..?


ಗಾಯಿತ್ರಿಯ ಮನೆಯ ಕೌಟುಂಬಿಕ ವಾತಾವರಣಕ್ಕೂ ತಮ್ಮ ಮನೆಯ ಕೌಟುಂಬಿಕ ವಾತಾವರಣಕ್ಕೂ ವ್ಯತ್ಯಾಸ ಕಂಡುಕೊಂಡ ಸಿಂಧುವಿನ ಮನಸ್ಸಿನಲ್ಲಿ ಮೂಡಿದ ಭಾವನೆಗಳೇನು..?


ಸಿಂಧು ಹಾಗೂ ಚಂದ್ರಕಾಂತ್ ಇಬ್ಬರ ವಿವಾಹದ ವಿಚಾರ ಏನಾಯ್ತು.. ಅದಕ್ಕೆ ಅವಳ ತಾಯಿ ದಮಯಂತಿ ಒಪ್ಪಿದರೇ..? ಎಲ್ಲವನ್ನೂ ತಿಳಿಯಲು ಓದಿ 'ಅಂತರಂಗದ ಧ್ವನಿಗಳು' ಕಾದಂಬರಿಯನ್ನು.


ವ್ಯಕ್ತಿಗಳ ನೋವು ಗಡಸುತನ ಹಾಗೂ ದುಃಖದ ಹಿಂದಿನ ಕಾರಣ ತಿಳಿದಾಗ ಅವರ ಅಂತರಂಗವನ್ನೇ ಬಿಚ್ಚಿಟ್ಟು ನೋಡಿದಂತಿರುತ್ತದೆ. ಹಾಗೆಯೇ ನಿರ್ಮಲವಾಗಿ ಶಾಂತವಾಗಿರುವವರ ಮನಸ್ಸಿನಲ್ಲಿಯೂ ಎಂತಹ ಘೋರ ಸತ್ಯಗಳು ಇರುತ್ತವಲ್ಲವಾ ಎನಿಸುವಂತೆ ಮಾಡಿದ ಕಾದಂಬರಿ ಇದು. 


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ