ಬುಧವಾರ, ಏಪ್ರಿಲ್ 22, 2026

ಟೆಕ್ಸ್ ಟೈಲ್ ಟೈಕೂನ್ ರೇಮಂಡ್ಸ್ ( ಬ್ಯುಸಿನೆಸ್ ಡೈರಿ ಪುಟ - 13)


ಫ್ಯಾಶನ್ ಎಂಬುದು ಕೇವಲ ಹೆಣ್ಣಿನ ಸ್ವತ್ತಲ್ಲ. ಗಂಡು ಮಕ್ಕಳಿಗೂ ಇತ್ತೀಚೆಗೆ ಫ್ಯಾಷನ್ ಸೆನ್ಸ್ ಹೆಚ್ಚಾಗಿದೆ. ಅಲ್ಲದೆ, ಫ್ಯಾಷನ್ ಎನ್ನುವುದಕ್ಕಿಂತ.. ತಾವು ಧರಿಸುವ ಬಟ್ಟೆ ಹೀಗೆಯೇ ಇರಬೇಕು ಎನ್ನುವುದರಿಂದ ಹೆಣ್ಣು ಮಕ್ಕಳಷ್ಟು ವೈವಿಧ್ಯಮಯವಾಗಿಲ್ಲದಿದ್ದರೂ.. ಬಟ್ಟೆಗಳ ಬ್ರ್ಯಾಂಡ್ ಅವರನ್ನು ಆಕರ್ಷಣೀಯವಾಗಿಸುತ್ತದೆ. 


ಧರಿಸುವ ಬಟ್ಟೆಯಿಂದ ಒಬ್ಬರ ವ್ಯಕ್ತಿತ್ವದ ಅಳತೆ ಗೋಲು ಸಿಗುತ್ತದೆ. ಯಾರನ್ನಾದರೂ ಮೊದಲ ಬಾರಿಗೆ ನೋಡಿದಾಗ ನಮಗೆ ಅವರ ವ್ಯಕ್ತಿತ್ವದ ಪರಿಚಯವಿರುವುದಿಲ್ಲ. ಬದಲಾಗಿ, ಅವರ ಔಟರ್ ಅಪೀಯರೆನ್ಸ್ ಹೇಗಿರುತ್ತದೆ ಎಂಬುದರ ಮೇಲೆ ಆ ವ್ಯಕ್ತಿಯನ್ನು ಅಳೆಯುವುದು ಸರ್ವೇಸಾಮಾನ್ಯ. ಇತ್ತೀಚಿಗಂತೂ ಅದನ್ನು ಬ್ರ್ಯಾಂಡೆಡ್ ಧಿರಿಸುಗಳಿಂದ ಅಳೆಯಲಾಗುತ್ತಿದೆ. ಹಾಗೆಂದು ಬ್ರ್ಯಾಂಡೆಡ್ ಧರಿಸಿದವರು ಮಾತ್ರ ಫ್ಯಾಶನ್ ಸೆನ್ಸ್ ಉಳ್ಳವರು ಎಂದರ್ಥವಲ್ಲ. ಬ್ಯುಸಿನೆಸ್ ನಲ್ಲಿ ಬ್ರ್ಯಾಂಡ್ ನೇಮ್ ಸ್ಥಾಪಿಸುವುದು  ಅಷ್ಟು ಸುಲಭವಲ್ಲ. ಇನ್ನೇನು ಶತಕದ ಗಡಿ ಮುಟ್ಟುವಲ್ಲಿ ಹೆಜ್ಜೆ ಹಾಕುತ್ತಿರುವ ರೇಮಂಡ್ಸ್ ಎಂದರೆ ನಮಗೆ ನೆನಪಾಗುವುದೇ ಸೂಟಿಂಗ್ಸ್ ಮತ್ತು ಶರ್ಟಿಂಗ್ಸ್ ಎಂದು. ಮಹಿಳೆಯರಿಗಾಗಿಯೂ ಅವರ ಕಂಪೆನಿಯಿಂದ ಉಡುಪುಗಳನ್ನು ತಯಾರಿಸುತ್ತಿದ್ದರೂ. ರೇಮಂಡ್ಸ್ ಎಂದ ತಕ್ಷಣ, ಇದು ಪುರುಷರ ಫ್ಯಾಷನ್ ಬ್ರ್ಯಾಂಡ್ ಎಂಬ ಹೊಳವು ತಲೆಗೆ ಬಂದುಬಿಡುತ್ತದೆ. "ದ ಕಂಪ್ಲೀಟ್ ಮೆನ್" ಎನ್ನುವ ಟ್ಯಾಗ್ ಲೈನ್ ಕೂಡಾ ಅದನ್ನೇ ಸಮರ್ಥಿಸಿಕೊಳ್ಳುವಂತಿದೆ. 


ಭಾರತದ ಟೆಕ್ಸ್ ಟೈಲ್ಸ್ ಮತ್ತು ಫ್ಯಾಷನ್ ಇಂಡಸ್ಟ್ರಿಯ 60% ಆವರಿಸಿರುವ ರೇಮಂಡ್ಸ್ ಶುರುವಾದದ್ದು 1925ರಲ್ಲಿ. ಇಂದು ಭಾರತದಲ್ಲಿ 700ಕ್ಕೂ ಹೆಚ್ಚು ರೇಮಂಡ್ಸ್ ಶೋರೂಮ್ ಗಳಿದ್ದು.

ವಿದೇಶಗಳಲ್ಲಿ ಇನ್ನೂರಕ್ಕೂ ಹೆಚ್ಚಿನ ಶೋರೂಮ್ ಗಳಿವೆ. ನಂಬಿಕೆ, ಗುಣಮಟ್ಟ ಹಾಗೂ ಶ್ರೇಷ್ಠತೆಯ ಮೇಲೆ ನಂಬಿಕೆ ಇಟ್ಟು ನಡೆಸಿಕೊಂಡು ಬಂದಿರುವ ಬ್ರ್ಯಾಂಡ್ ಇಂದು 620 ಕೋಟಿಗೂ ಹೆಚ್ಚು ಬೆಳೆಬಾಳುತ್ತದೆ. ಇದು ಕೇವಲ ಫ್ಯಾಶನ್ ಇಂಡಸ್ಟ್ರಿಯಲ್ಲಿ ಮಾತ್ರವಲ್ಲದೆ, ರಿಯಲ್ ಎಸ್ಟೇಟ್, ಇಂಜಿನಿಯರಿಂಗ್ ಹಾಗೂ ಉಳಿದ ಕ್ಷೇತ್ರಗಳಲ್ಲಿಯೂ ತನ್ನ ಛಾಪು ಮೂಡಿಸಿದೆ.


ಮೊದಲಿಗೆ ರೇಮಂಡ್ಸ್ ಎನ್ನುವ ಕಂಪನಿಯ ಹೆಸರು ಬೇರೆಯಿತ್ತು. ಈಗ ರೇಮಂಡ್ಸ್ ಅನ್ನು ನಡೆಸುತ್ತಿರುವ ಸಿಂಘಾನಿಯಾ ಕುಟುಂಬ ಇದನ್ನು ನಡೆಸುತ್ತಿರುವ ಮೂರನೇ ಕೈ. ಮೊದಲಿಗೆ ಇದು ವಾಡಿಯ ಎನ್ನುವ ವೃದ್ಧರೊಬ್ಬರ ಕನಸಿನ ಕೂಸಾಗಿತ್ತು. 1925 ರಲ್ಲಿ ಅತ್ಯಂತ ಮಾಡ್ರನ್ ಆಗಿರುವ ಉಲ್ಲನ್ ಮಿಲ್ ಅನ್ನು ಮಹಾರಾಷ್ಟ್ರದ ಥಾಣೆಯಲ್ಲಿ ತೆರೆದಿದ್ದ ಇವರು, ಭಾರತದ ಸೈನ್ಯದಲ್ಲಿರುವ ಸೈನಿಕರಿಗೆ ಉಡುಪುಗಳನ್ನು ತಯಾರಿಸಿಕೊಡುತ್ತಿದ್ದರು. ಆದರೆ, ವೃದ್ಧಾಪ್ಯದ ಕಾರಣ ಹಾಗೂ ವಿವಿಧ ಕಾರಣಗಳಿಂದ ಅವರ ಬೇಡಿಕೆಯಷ್ಟು ಉಡುಪುಗಳನ್ನು ಪೂರೈಸಲು ಸಾಧ್ಯವಾಗದೇ ಮಾರಾಟ ಮಾಡುವ ಯೋಚನೆ ಮಾಡಿದರು. ಆಗ ಈ ಕಂಪೆನಿಯನ್ನು ಕೊಂಡದ್ದು ಈ.ಡಿ ಸಾಸ್ಸೂನ್ ಅಂಡ್ ಕೋ ಎನ್ನುವ ಕಂಪನಿ. ಸಾಸ್ಸೂನ್ ಅಂಡ್ ಕೋ ಭಾರತ, ಜಪಾನ್ ಹಾಗೂ ಚೀನಾದಲ್ಲಿ ಮುಂಚೂಣಿಯಲ್ಲಿದ್ದ ಟ್ರೇಡಿಂಗ್ ಕಂಪನಿಯಾಗಿತ್ತು 


ಈ ಕಂಪನಿಯ ಬೋರ್ಡ್ ಆಫ್ ಡೈರೆಕ್ಟರ್ ಗಳಲ್ಲಿ ಅತ್ಯಂತ ಪ್ರಭಾವಶಾಲಿಗಳಾಗಿದ್ದ ಆಲ್ಬರ್ಟ್ ರೇಮಂಡ್ ಹಾಗೂ ಅವರ ಸೋದರ ಅಬ್ರಹಾಂ ಜಾಕೋಬ್ ರೇಮಂಡ್ ಇವರಿಬ್ಬರ ಹೆಸರಿನಿಂದಾಗಿ.. ವಾಡಿಯ ಮಿಲ್ ಎಂದಿದ್ದ ಈ ಉಲ್ಲನ್ ತಯಾರಿಕೆಯ ಕಂಪನಿಯ ಹೆಸರನ್ನು 'ರೇಮಂಡ್ ಉಲ್ಲನ್ ಮಿಲ್' ಎಂದು ಬದಲಾಯಿಸಿದರು. ಆಗ ಇಲ್ಲಿ ಉಲ್ಲನ್ ಕಂಬಳಿಗಳು ಹಾಗೂ ಇತರ ಉಲ್ಲನ್ ಬಟ್ಟೆಗಳು ಮಾತ್ರ ತಯಾರಿಕೆಯಾಗುತ್ತಿದ್ದವು. ಇವು ಸುಲಭವಾಗಿ ಹರಿಯಲು ಸಾಧ್ಯವಲ್ಲದಂತಹ ಬಟ್ಟೆಗಳಾಗಿದ್ದವು. 1944 ರಲ್ಲಿ ಈ 'ರೇಮಂಡ್ ಉಲ್ಲನ್ ಮಿಲ್' ಅನ್ನು ಲಾಲಾ ಕೈಲಾಶ್ ಪತ್ ಸಿಂಘಾನಿಯಾ ಅವರು ಕೊಂಡುಕೊಂಡರು. 


ಕೈಲಾಶ್ ಪತ್ ಸಿಂಘಾನಿಯಾ ಅವರಿಗೆ ಈಗಾಗಲೇ.. ಅವರದ್ದೇ ಆದ ಒಂದು ಕಂಪನಿಯಿತ್ತು. ಅದೇ 'ಜೆ.ಕೆ ಕಾಟನ್ ಸ್ಪಿನ್ನಿಂಗ್ ಅಂಡ್ ವೀವಿಂಗ್ ಮಿಲ್ಸ್ ಕೋ'. ಇಲ್ಲಿ ಅವರು ಉತ್ತಮವಾದ ಗುಣಮಟ್ಟದ ಕಾಟನ್ ಬಟ್ಟೆಗಳನ್ನು.. ಕೇವಲ ಭಾರತೀಯ ಕಚ್ಛಾ ವಸ್ತುಗಳನ್ನು ಹಾಗೂ ಭಾರತೀಯ ಯಂತ್ರೋಪಕರಣಗಳನ್ನು, ಕೆಲಸಗಾರರನ್ನೇ ಬಳಸಿ ದೇಶೀಯ ರೀತಿಯಲ್ಲಿ ತಯಾರಿಸುತ್ತಿದ್ದರು. ಇಂತಹ ಕೈಲಾಶ್ ಪತ್ ಸಿಂಘಾನಿಯಾ ಅವರಿಗೆ ರೇಮಂಡ್ಸ್ ಕುರಿತು ಗೊತ್ತಿದ್ದು.. ಇದಕ್ಕೆ ಮುಂದೆ ಇನ್ನೂ ಉತ್ತಮವಾದ ಭವಿಷ್ಯವಿದೆ. ಅಲ್ಲದೆ, ಭವಿಷ್ಯದಲ್ಲಿ ಇದಕ್ಕೆ ಬಹಳ ಬೇಡಿಕೆ ಇದೆ ಎನ್ನುವ ಸೂಚನೆ ಸಿಕ್ಕಿತು. ಹಾಗಾಗಿ, ಅದನ್ನು ಕೊಂಡುಕೊಂಡರು. ತಮ್ಮ ಕಂಪನಿಯನ್ನು ಸಹಾ ಅದರ ಜೊತೆಗೆ ಮಿಳಿತಗೊಳಿಸಿದರು. ರೇಮಂಡ್ ಎನ್ನುವ ಹೆಸರನ್ನೇ ಉಳಿಸಿಕೊಂಡರು. ದೇಶೀಯ ಶೈಲಿಯಲ್ಲಿಯೇ ತಯಾರಾಗುವ ಈ ಬಟ್ಟೆಗಳು.. ಇಂಗ್ಲೆಂಡಿನಲ್ಲಿ ತಯಾರಾಗುವ ಬಟ್ಟೆಗಳಿಗೆ ಪೈಪೋಟಿ ನೀಡುತ್ತಿದ್ದವು. 


ಸಿಂಘಾನಿಯಾ ಕುಟುಂಬದವರು ತಾವು ನೆಲೆಸಿದ್ದ ಊರಾದ.. ಶೇಖಾವತಿಯ ಪುಟ್ಟ ಹಳ್ಳಿ ಸಿಂಘಾನಾವನ್ನು ಬಿಟ್ಟು ರಾಜಸ್ಥಾನದ ಒಂದು ಮರುಭೂಮಿಯಂತಹಾ ಪಟ್ಟಣಕ್ಕೆ ಬಂದರು. ಆ ಪಟ್ಟಣದ ಹೆಸರು ಫಾರ್ರುಕ್ಕಾಬಾದ್. ಅಲ್ಲಿ ಇನ್ನೂ ಉತ್ತಮವಾದ ಅವಕಾಶಗಳು ದೊರೆಯಬಹುದು ಎಂಬ ಉದ್ದೇಶದಿಂದ ಅವರು ಸ್ಥಳಾಂತರ ಮಾಡಿದ್ದರು. ಅವರ ಆ ಉದ್ದೇಶವು ನೆರವೇರಿತು. 


ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಕೈಲಾಶ್ ಪತ್ ಅವರು ರೇಮಂಡ್ಸ್ ಅನ್ನು ಮತ್ತಷ್ಟು ಉನ್ನತ ಸ್ಥಾನಕ್ಕೇರಿಸಿದರು. 1950 ರಲ್ಲಿ ಒಂದು ಹೊಸ ಉತ್ಪಾದನಾ ಘಟಕವನ್ನು ಸ್ಥಾಪಿಸಿ.. ಮತ್ತಷ್ಟು ತಂತ್ರಜ್ಞಾನಗಳನ್ನು ಉತ್ತಮಪಡಿಸಿದರು. 1958ರಲ್ಲಿ ಮೊದಲ ಮೊದಲ ರೇಮಂಡ್ಸ್ ಶೋರೂಮ್ ಅನ್ನು ಮುಂಬೈನ ಬಲ್ಲಾರ್ಡ್ ಎಸ್ಟೇಟ್ ನ ಕಿಂಗ್ ಕಾರ್ನರ್ ನಲ್ಲಿ ತೆರೆಯಲಾಯಿತು. ಅವರು ವಿದೇಶದಲ್ಲಿ ಮೊದಲು ತೆರೆದ ಶೋರೂಮ್ ಓಮನ್ ನಲ್ಲಿ. ಅದು ಪ್ರಾರಂಭವಾಗಿದ್ದು 1990ರಲ್ಲಿ.


1986 ರಲ್ಲಿ ಪಾರ್ಕ್ ಅವನ್ಯೂ ಎಂಬ ಹೆಸರಿನಲ್ಲಿ ಹೊಸ ಸ್ಟೈಲಿಶ್ ವಾರ್ಡ್ರೋಬ್ ಕಲೆಕ್ಷನ್ ಗಳನ್ನು ಪುರುಷರಿಗಾಗಿಯೇ ತಯಾರಿಸಿದರು. ಇದು ಇಂದಿಗೂ ರೇಮಂಡ್ಸ್ ನ ಪ್ರಖ್ಯಾತ ಬ್ರ್ಯಾಂಡ್ ಗಳಲ್ಲಿ ಒಂದಾಗಿದೆ. 2018ರಲ್ಲಿ ಪಾರ್ಕ್ ಅವೆನ್ಯೂ ಬ್ರ್ಯಾಂಡ್ ಗೆ 'ಇನ್ನೋವೇಟಿವ್ ಕಾನ್ಸೆಪ್ಟ್' ಎನ್ನುವ ವಿಭಾಗದಲ್ಲಿ 'ಉತ್ತಮ ಡಿಸೈನ್ ಕಾನ್ಸೆಪ್ಟ್ ಆಫ್ ದಿ ಇಯರ್' ಎನ್ನುವ ಪ್ರಶಸ್ತಿಯೂ ಸಿಕ್ಕಿದೆ. 


1991ರಲ್ಲಿ ಅವರು ಬೇರೆ ಕಂಪನಿಗಳನ್ನು ಸಹಾ ಕೊಳ್ಳಲು ತೊಡಗಿದರು. ಹಾಗೆ ಕೊಂಡ ಮೊದಲ ಕಂಪನಿಯೇ ಪ್ರೀಮಿಯಂ ಕಾಂಡೋಮ್ ಕಂಪನಿಯಾದ 'ಕಾಮಸೂತ್ರ'. ಈಗ ಇದನ್ನು ಕಳೆದ ತಿಂಗಳು ಗೋದ್ರೆಜ್ ಕಂಪನಿಯವರು ರೇಮಂಡ್ಸ್ ನವರಿಂದ ಕೊಂಡುಕೊಂಡಿದ್ದಾರೆ. 1996ರಲ್ಲಿ ಏವಿಯೇಷನ್ ಗೂ ಕಾಲಿಟ್ಟರು. ರೇಮಂಡ್ ಏವಿಯೇಷನ್ ಅಡಿಯಲ್ಲಿ ಭಾರತದ ಕಾರ್ಪೊರೇಟ್ ಪ್ರಯಾಣಿಕರು ಇವರ ಏರ್ ಚಾರ್ಟರ್ ಸರ್ವೀಸ್ ಗಳನ್ನು ಬಳಸಬಹುದಾಗಿದೆ. 


ಗ್ರಾಹಕರಿಗೆ ಬೇರೆ ಬೇರೆ ರೀತಿಯ ಡಿಸೈನ್, ಗುಣಮಟ್ಟದ ಬಟ್ಟೆಗಳನ್ನು ತಮ್ಮ ಬ್ರ್ಯಾಂಡ್ ಅಡಿಯಲ್ಲಿ ಕೊಡುವುದಕ್ಕಾಗಿ ಸೆಮಿ ಫಾರ್ಮಲ್ಸ್, ಕ್ಯಾಸ್ಯುಯಲ್ಸ್ ಹಾಗೂ ಲಕ್ಷುರಿ ಕ್ಯಾಶುಯಲ್ ಬ್ರಾಂಡ್ ಗಳಿಗೆ 'ಪಾರ್ಕ್ಸ್' ಎಂಬ ಹೆಸರಿಟ್ಟು ಅದನ್ನು 1999 ರಿಂದ ಶುರು ಮಾಡಿದರು. 


ರೇಮಂಡ್ಸ್ ನವರಿಗೆ ಫೋರೇಜಸ್, ಸೋಲಾರ್-2, ಸನ್ ವೇವ್, ಬೆಟರೋಲಜಿ ಎನ್ನುವ ಪ್ರತಿಸ್ಪರ್ಧಿಗಳಿದ್ದರೂ ರೇಮಂಡ್ಸ್ ವ್ಯಾಪಾರ ಕಿಂಚಿತ್ತೂ ಕುಗ್ಗಲಿಲ್ಲ. ಆದರೆ, ಅವರ ಕಾನ್ಸೆಪ್ಟ್ ಒಂದು ರೀತಿಯಲ್ಲಿ ಅವರ ವ್ಯಾಪಾರದ ಮೇಲೆ ಋಣಾತ್ಮಕ ಪರಿಣಾಮ ಬೀರುವಂತಿತ್ತು. ಅದೇನೆಂದರೆ, 2000-01 ನಿಂದ ಈಚೆಗೆ ಹೆಚ್ಚಿನ ಜನರು ಬಟ್ಟೆಗಳನ್ನು ಅಥವಾ ಶರ್ಟ್ ಪೀಸ್ ಅಥವಾ ಸೂಟ್ ಪೀಸ್ ಗಳನ್ನು ಕೊಂಡು ಹೊಲಿಸುವುದಕ್ಕಿಂತ.. ಅದಾಗಲೇ ಧರಿಸಲು ಸಿದ್ಧವಾಗಿರುತ್ತಿದ್ದ ಸ್ಟಿಚ್ಡ್ ಬಟ್ಟೆಗಳನ್ನು ಬಯಸತೊಡಗಿದರು. ಅದಕ್ಕಾಗಿ ರೇಮಂಡ್ ನವರು 2008 ರಿಂದ "ರೆಡಿ ಟು ವಿಯರ್" ಎಂಬ ಸ್ಟಿಚ್ ಆಗಿರುವ ಬಟ್ಟೆಗಳನ್ನು ಗ್ರಾಹಕರಿಗೆ ಪರಿಚಯಿಸಿತು. ರೆಡಿ ಟು ವಿಯರ್ ಎನ್ನುವ ಕಾನ್ಸೆಪ್ಟ್ ಮಾತ್ರವಲ್ಲದೆ, ರೇಮಂಡ್ಸ್ ಟೈಲರ್ ಎನ್ನುವ ಕಾನ್ಸೆಪ್ಟ್ ನಿಂದ ತನ್ನ ಗ್ರಾಹಕರು ರೇಮಂಡ್ಸ್ ನಲ್ಲಿಯೇ ಲಭ್ಯವಿರುವ ಪರಿಣಿತಿ ಹೊಂದಿರುವ ಟೈಲರ್ ನಿಂದ ತಮ್ಮ ಬಟ್ಟೆಗಳನ್ನು ತಮಗೆ ಬೇಕಾದಂತೆ, ಬೇಕಾದ ಅಳತೆಗೆ ಸ್ಟಿಚ್ ಮಾಡಿಸಿಕೊಳ್ಳುವ ಹೊಸ ಅವಕಾಶವೊಂದನ್ನು ನೀಡಿತು. ರೇಮಂಡ್ಸ್ ಪಾಯಿಂಟ್ ಹೊಂದಿರುವ ಗ್ರಾಹಕರಿಗೆ ಇದು ಉಚಿತ ಎಂದೂ ಹೇಳಿತು. 


ಬಟ್ಟೆಗಳ ಬಗೆಗಳು, ಗುಣಮಟ್ಟ ಬೇರೆ-ಬೇರೆ ರೀತಿಯಲ್ಲಿರುತ್ತವೆ. ಹಾಗಾಗಿ.. ಈಗ ಇರುವ ಅಷ್ಟೂ ಫ್ಯಾಬ್ರಿಕ್ ಗಳಿಗಿಂತ ಹೊಸದಾದ ಫ್ಯಾಬ್ರಿಕ್ ಅನ್ನು ಪರಿಚಯಿಸಬೇಕೆಂದು 'ವಿಶ್ವದಲ್ಲೇ ಮೊದಲ ಸ್ಮಾರ್ಟ್ ಫ್ಯಾಬ್ರಿಕ್' ಎಂದು 'ಟೆಕ್ನೋ ಸ್ಮಾರ್ಟ್' ಎನ್ನುವ ಫ್ಯಾಬ್ರಿಕ್ ಅನ್ನು 2016ರಲ್ಲಿ ಪರಿಚಯಿಸಿತು. 


ಪ್ರತಿಯೊಂದು ಬ್ಯುಸಿನೆಸ್ ಗಳಿಗೂ ಕೋವಿಡ್ ಸಮಯವೆನ್ನುವುದು ತಮ್ಮ ಬ್ಯುಸಿನೆಸ್ ನಲ್ಲಿ ಇಳಿತವನ್ನು ಕಾಣುವಂತಹಾ ಸಮಯವೇ.. ಎಲ್ಲೋ ಕೆಲವು ಬ್ಯುಸಿನೆಸ್ ಗಳಷ್ಟೇ ಇದರ ಹೊಡೆತದಿಂದ ಪಾರಾಗಿದ್ದು. ರೇಮಂಡ್ ನವರು ಈ ಸಂದರ್ಭದಲ್ಲಿ ತಮ್ಮ ಕೆಲವು ಉತ್ಪಾದನಾ ಘಟಕಗಳನ್ನು ಮುಚ್ಚಿದರೂ ಸಹಾ ಕೆಲವು ಉತ್ಪಾದನಾ ಘಟಕಗಳನ್ನು ಪಿ.ಪಿ.ಇ ಕಿಟ್ ಗಳನ್ನು ತಯಾರಿಸಲು ಬಳಸಿಕೊಂಡರು. ಅಷ್ಟೇ ಅಲ್ಲದೆ.. ಕೋವಿಡ್ ವಿರುದ್ಧ ಹೋರಾಡಲು ಹೊಸ ರೀತಿಯ ಪರಿಣಾಮಕಾರಿ ಆಂಟಿವೈರಲ್ ಫ್ಯಾಬ್ರಿಕ್ ಅನ್ನು ಪರಿಚಯಿಸಿದರು.  ಅದರ ಹೆಸರು 'ವೈರಾ ಸೇಫ್' ಎಂಬುದಾಗಿ. 


2005 ರಿಂದ ಈಚೆಗೆ ರೇಮಂಡ್ಸ್ ನಲ್ಲಿ ಹಲವಾರು ರೀತಿಯ ಹೊಸ ಬದಲಾವಣೆಗಳು ಕಂಡು ಬಂದವು. ಅದಕ್ಕೆ ಕಾರಣರಾದವರು ಈಗಿನ ಚೇರ್ಮನ್ ಆಗಿರುವ ಗೌತಮ್ ವಿಜಯಪತ್ ಸಿಂಘಾನಿಯಾ. ಇವರ ತಂದೆ ವಿಜಯಪತ್ ಸಿಂಘಾನಿಯಾ. ಇವರು ಕೂಡಾ ರೇಮಂಡ್ ನಲ್ಲಿ ಚೇರ್ಮನ್ ಆಗಿದ್ದು ಎಷ್ಟೋ ಹೊಸತನದ ಬದಲಾವಣೆಗಳನ್ನು ಯೋಜಿಸಿ, ಕಾರ್ಯರೂಪಕ್ಕೆ ತಂದು ಕಂಪನಿಗೆ ಲಾಭವನ್ನು ತಂದುಕೊಟ್ಟವರು. ಇವರ ತಾಯಿ ಆಶಾಬಾಯಿ ಸಿಂಘಾನಿಯಾ. ಗೌತಮ್ ರೇಮಂಡ್ಸ್ ಗ್ರೂಪ್ ನಲ್ಲಿ ಕೆಲಸಕ್ಕೆ ಸೇರಿದ್ದು 1986ರಲ್ಲಿ. 


ಗೌತಮ್ ಸಿಂಘಾನಿಯಾರನ್ನು ಹೈಪರ್ ಆಕ್ಟೀವ್ ಎಂದೇ ಹೇಳಲಾಗುತ್ತದೆ. ಅವರ ಕೆಲಸ ಹಾಗೂ ಯೋಜನೆಗಳು ಅಷ್ಟು ಚುರುಕು. ಅಲ್ಲದೆ, ಅವರಿಗೆ ಬ್ಯುಸಿನೆಸ್ ಗಳಿಗಿಂತ ಕಾರ್ ರೇಸಿಂಗ್ ನಲ್ಲಿಯೇ ಆಸಕ್ತಿ ಹೆಚ್ಚು. ಹಾಗೆಂದು ಬ್ಯುಸಿನೆಸ್ ಕುರಿತು ಗಮನ ಹರಿಸಿಲ್ಲ ಅಥವಾ ಆಸಕ್ತಿ ಇಲ್ಲ ಎಂದಲ್ಲ. ಕಾರ್ ರೇಸಿಂಗ್ ನಲ್ಲಿ ಬಳಸಲಾಗುವ ಟೆಕ್ನಿಕ್ ಗಳನ್ನು ಇಲ್ಲಿಯೂ ಬಳಸಲು ಶುರು ಮಾಡಿದರು. ಎಲ್ಲಾ ಕೆಲಸಗಳಲ್ಲಿಯೂ ಹೊಸ ರೀತಿಯ ಬದಲಾವಣೆಗಳನ್ನು ತಂದರು. ಹೊಸ-ಹೊಸ ವೆರೈಟಿಯ ಶರ್ಟ್, ಫ್ಯಾಬ್ರಿಕ್ ಗಳನ್ನು ತಂದರು. ಕಲರ್ ಪ್ಲಸ್, ಎಥ್ನಿಕ್ಸ್ ಎನ್ನುವ ಬ್ರಾಂಡ್ ಗಳು ರೇಮಂಡ್ ನ ಮತ್ತೆರಡು ಪ್ರಸಿದ್ಧ ಬ್ರ್ಯಾಂಡ್ ಗಳು. 


2013ರಲ್ಲಿ ತನ್ನ ಕಂಪನಿಯ ಹೆಚ್ಚಿನ ಕೆಲಸಗಾರರನ್ನು ಬದಲಾಯಿಸಿದರು. ಅಲ್ಲದೆ, ಸೀನಿಯರ್ ಲೆವೆಲ್ ನಲ್ಲಿದ್ದ ಎಷ್ಟೋ ಟ್ಯಾಲೆಂಟೆಡ್ ಪ್ರೊಫೆಷನಲ್ ಗಳನ್ನು ತಮ್ಮ ಕಂಪನಿಗೆ ಸೇರಿಸಿಕೊಂಡರು. ಲೈಫ್ ಸ್ಟೈಲ್ ಎನ್ನುವ ಬ್ರಾಂಡ್ ನ ಸಿ.ಎಫ್.ಓ ಆಗಿದ್ದ ಸಂಚಯ್ ಬೇಲ್ ಇಲ್ಲಿನ ಸಿ.ಇ.ಓ ಆದರು. ಅಲ್ಲದೇ, ತಮ್ಮ ಕಂಪನಿಯ ಬಟ್ಟೆಗಳ ದರಗಳನ್ನು ಸಹಾ ಹೆಚ್ಚು ಮಾಡಿದರು. ಹಾಗೆಂದು, ಕಡಿಮೆ ದರದಲ್ಲಿ ಇದ್ದವನ್ನಲ್ಲ.. ಬದಲಾಗಿ, ಹೆಚ್ಚಿನ ದರದ ಬಟ್ಟೆಗಳನ್ನು ಬಳಕೆಗೆ ತಂದರು. ರೇಮಂಡ್ಸ್ ನಲ್ಲಿ 300 ರೂಪಾಯಿಯಿಂದ ಮೂರು ಲಕ್ಷದವರೆಗಿನ ಬಟ್ಟೆಗಳು ದೊರೆಯುತ್ತವೆ. ಒಂದೇ ಸಲಕ್ಕೆ ಹೆಚ್ಚು-ಕಡಿಮೆ ಒಂದು ಲಕ್ಷದಷ್ಟು ಬಟ್ಟೆಯ ದರವನ್ನು ಹೆಚ್ಚಿಸಿದ್ದರು. ಅವರು ಈ ಕುರಿತು ಹೇಳಿರುವುದೇನೆಂದರೆ "ಆಟೋ ಡ್ರೈವರ್ ಗಳಿಂದ ಹಿಡಿದು ರತನ್ ಟಾಟಾ ವರೆಗೂ ಸಹಾ ನಮ್ಮ ಕಂಪನಿ ಉಪಯುಕ್ತವಾಗುವಂತಿರಬೇಕು" ಎಂಬುದಾಗಿ. 


ಇವರದ್ದೇ ಆದ ಸಿಂಘಾನಿಯಾ ಸ್ಕೂಲ್ ಗಳಿವೆ. ಟ್ರಸ್ಟ್ ಗಳಿವೆ. ಅಲ್ಲದೇ, ನಿರುದ್ಯೋಗಿ ಹೆಣ್ಣು ಮಕ್ಕಳಿಗಾಗಿ ಕಂಪನಿಯ ವತಿಯಿಂದ ಟ್ರೈನಿಂಗ್ ಅನ್ನು ಕೊಟ್ಟು ಅವರನ್ನು ಟೈಲರಿಂಗ್ ನಲ್ಲಿ ಪರಿಣಿತರನ್ನಾಗಿ ಮಾಡಲು ಪರಿಣಿತರಾದ ಟೈಲರಿಂಗ್ ಇನ್ಸ್ಟಿಟ್ಯೂಟ್ ಅನ್ನು ಸ್ಥಾಪಿಸಿದ್ದಾರೆ. 2014ರ ಬ್ರ್ಯಾಂಡ್ ಟ್ರಸ್ಟ್ ರಿಪೋರ್ಟ್ ನ ಪ್ರಕಾರ ವಿಶ್ವದಲ್ಲಿನ ಅತಿ ಹೆಚ್ಚು ನಂಬಿಕೆಯ ಬ್ರಾಂಡ್ ಗಳಲ್ಲಿ ರೇಮಂಡ್ 23ನೇ ಸ್ಥಾನದಲ್ಲಿದೆ. ಅಲ್ಲದೇ ಹಲವಾರು ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.


ಜಾಹೀರಾತಿನ ಮೂಲಕ ತಮ್ಮ ಬ್ರ್ಯಾಂಡ್ ಕುರಿತು ಸುದ್ದಿ ಹರಡುವಲ್ಲಿ ಎಷ್ಟೋ ಕಂಪನಿಗಳು ಮುಂದಿವೆ. ಅಂತಹಾ ಪಟ್ಟಿಗೆ ರೇಮಂಡ್ಸ್ ಕೂಡಾ ಸೇರುತ್ತದೆ. ಇವರ 'ದಿ ಕಂಪ್ಲೀಟ್ ಮ್ಯಾನ್' ಎನ್ನುವ ಟಿ.ವಿ ಜಾಹೀರಾತು ಪ್ರಶಸ್ತಿಯನ್ನು ಸಹಾ ಗೆದ್ದುಕೊಂಡಿದೆ.


ಬ್ಯುಸಿನೆಸ್ ಅನ್ನು ಬದಿಗೊತ್ತಿ ನೋಡುವುದಾದರೆ.. ತಂದೆಯಾದ ವಿಜಯ ಪತ್ ಸಿಂಘಾನಿಯಾ ಹಾಗೂ ಗೌತಮ್ ಸಿಂಘಾನಿಯಾ ಇಬ್ಬರಿಗೂ ಆಸ್ತಿಯ ವಿಚಾರಕ್ಕೆ ಕೆಲವು ಘರ್ಷಣೆಗಳಾಗಿವೆ. ಅಲ್ಲದೇ, ಕುಟುಂಬದಲ್ಲಿಯೇ ಆಸ್ತಿ ವಿಚಾರಕ್ಕೆ ಒಳ ಜಗಳಗಳಿವೆ. ಈ ಪ್ರಕರಣ ಕೋರ್ಟ್ ಮೆಟ್ಟಿಲನ್ನೂ ಹತ್ತಿದೆ. ಇಲ್ಲಿ, ಅಪ್ಪ ಹಾಗೂ ಮಕ್ಕಳಲ್ಲಿ ಯಾರದ್ದು ಸರಿ ? ಯಾರದ್ದು ತಪ್ಪು ? ಎನ್ನುವ ವಿಚಾರವನ್ನು ನಾನಿಲ್ಲಿ ಪ್ರಸ್ತಾಪಿಸಲಾರೆ. ಆದರೆ, ಈ ವಿಚಾರವನ್ನು ಏಕೆ ಪ್ರಸ್ತಾಪಿಸುತ್ತಿದ್ದೇನೆ ಎಂದರೆ.. ಕುಟುಂಬ ಜಗಳದ ಈ ವಿಚಾರ ಕೋರ್ಟ್ ಮೆಟ್ಟಿಲೇರಿ.. ಜಗಳವಾದಾಗ, ಇದು ಬ್ಯುಸಿನೆಸ್ ಮೇಲೆ ಸಹಾ ಪರಿಣಾಮ ಬೀರಿತು. ಇದರಿಂದಾಗಿ ರೇಮಂಡ್ಸ್ ಕಂಪನಿಯ ಶೇರುಗಳು ಕುಸಿದಿದ್ದವು. ಬ್ಯುಸಿನೆಸ್ ಎಂದರೆ ಕೇವಲ ಹಣ ಮಾತ್ರವಲ್ಲ, ಪ್ರತಿಷ್ಠೆಯ ವಿಚಾರವೂ ಹೌದು. ಅವರು ಸಮಾಜದಲ್ಲಿ ಕಾಪಾಡಿಕೊಂಡು ಬಂದಿರುವ ತಮ್ಮ ಇಮೇಜ್ ಮೂಲಕವೂ ಇಲ್ಲಿ ಶೇರುಗಳ ಬೆಲೆ ಏರಿಕೆ ಏರಿಳಿತವಾಗುತ್ತದೆ.


ಒಂದು ತಿಂಗಳಿನ ಹಿಂದಷ್ಟೇ ಇವರು ತಮ್ಮ ಕಂಪನಿಯ ಅಧೀನದಲ್ಲಿದ್ದ 'ಕಾಮಸೂತ್ರ'ವನ್ನು ಗೋದ್ರೆಜ್‌ಗೆ ಮಾರಿದ್ದಾರೆ. ಹಾಗೆಂದು, ಈ ಕಂಪನಿ ಯಾವುದೇ ನಷ್ಟದಲ್ಲಿಯೂ ಇಲ್ಲ.. ಇಂದಿಗೂ 620 ಕೋಟಿ ಆದಾಯವನ್ನು ಹೊಂದುತ್ತಿದೆ. ಆದರೆ, ಈಗ ಅವರು ಕೇವಲ ಫ್ಯಾಬ್ರಿಕ್ ಬ್ರ್ಯಾಂಡ್ ಅನ್ನು ಮಾತ್ರವೇ ಮುಖ್ಯವಾದ ಬ್ರ್ಯಾಂಡ್ ಆಗಿ ಬೆಳೆಸಲು ಗಮನ ಹರಿಸುತ್ತಿದ್ದಾರೆ. 


ಇಂದಿಗೂ.. ತನ್ನ ಧ್ಯೇಯದಂತೆ.. ಗ್ರಾಹಕರ ನಂಬಿಕೆಯ, ಗುಣಮಟ್ಟದ ಹಾಗೂ ಶ್ರೇಷ್ಠತೆಯ ಬ್ರ್ಯಾಂಡ್ ಎಂದೇ ಹೆಸರಾಗಿರುವ ರೇಮಂಡ್ಸ್ ಬ್ಯುಸಿನೆಸ್ ನಲ್ಲಿ ಹೊಸ-ಹೊಸ ಪ್ರಯತ್ನಗಳು ಹಾಗೂ ಆಕರ್ಷಕವಾದ ಬ್ರ್ಯಾಂಡ್ ನೇಮ್ ಮತ್ತು ಆಕರ್ಷಕವಾದ ಜಾಹೀರಾತು. ಅಷ್ಟೇ ಅಲ್ಲದೆ.. ಹೊಸತನ ಕೆಲಸಗಳ ಕಾರ್ಯರೂಪ ಕೂಡ ಬ್ಯುಸಿನೆಸ್ ಅನ್ನು ಮುಂಚೂಣಿಯಲ್ಲಿರುವಂತೆ ನೋಡಿಕೊಂಡಿದೆ. ಇಳಿತ ಕಂಡಿದ್ದ ಶೇರ್ ಗಳು ಅದಾದ ನಂತರ ಏರಿಕೆಯಾಗಿದ್ದರೂ.. ಸಾರ್ವಜನಿಕವಾಗಿ ಬ್ಯುಸಿನೆಸ್‌ನಲ್ಲಿ ಪ್ರಸಿದ್ಧಿಯಾದ ನಂತರ ಎಷ್ಟು ಎಚ್ಚರಿಕೆಯಿಂದ ವರ್ತಿಸಬೇಕು ಎನ್ನುವ ಪಾಠವನ್ನು ಹೇಳುವಂತಿದೆ ಆ ಘಟನೆ. ಪ್ರತಿಯೊಬ್ಬ ಗ್ರಾಹಕರಿಗೂ.. ಅವರಿಗೆ ಬೇಕಾದ ಅಳತೆಯಲ್ಲಿ, ಅವರಿಗೆ ಹೊಂದಿಕೆಯಾಗುವಂತೆ, ಆರಾಮದಾಯಕವಾದ ಸ್ಟಿಚ್ಚಿಂಗ್ ಸೇವೆಯನ್ನು ನೀಡುತ್ತಾ ಗ್ರಾಹಕರ ಸಂತೃಪ್ತಿಯೇ ಬ್ಯುಸಿನೆಸ್ ಅನ್ನು ಎತ್ತರಕ್ಕೆ ಕೊಂಡೊಯ್ಯುವ ಸಾಧನ ಎನ್ನುವ ಪಾಠ ಹೇಳುತ್ತಿದೆ ಟೆಕ್ಸ್ ಟೈಲ್ ಟೈಕೂನ್ ರೇಮಂಡ್ಸ್. 


( ಸ್ಪಷ್ಟನೆ : ಬ್ಯುಸಿನೆಸ್ ಡೈರಿಯಲ್ಲಿ ಪರಿಚಯಿಸಲಾಗುವ ಬ್ರ್ಯಾಂಡ್, ಅಥವಾ ಬ್ಯುಸಿನೆಸ್ ಅವುಗಳ ಪರಿಚಯವಷ್ಟೇ.. ಹೊರತಾಗಿ, ಜಾಹೀರಾತು ಅಥವಾ ರೆಕಮೆಂಡೇಶನ್ ಅಲ್ಲ. )


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ