ಮಂಗಳವಾರ, ಏಪ್ರಿಲ್ 21, 2026

ಹಕ್ಕಿಯ ತೆರದಲಿ (ಪುಸ್ತಕ ಯಾನ - 300)


ಪುಸ್ತಕದ ಶೀರ್ಷಿಕೆ : ಹಕ್ಕಿಯ ತೆರದಲಿ

ಲೇಖಕರು : ಸುಧಾಮೂರ್ತಿ

ಪ್ರಕಾಶಕರು : ಸಪ್ನ ಬುಕ್ ಹೌಸ್

ದ್ವಿತೀಯ ಮುದ್ರಣ : 2003

ಒಂಬತ್ತನೇ ಮುದ್ರಣ : 2021 (ನನ್ನ ಓದಿಗೆ ಸಿಕ್ಕಿದ್ದು)

ಪುಟಗಳು : 140

ಬೆಲೆ : 80 ರೂ. 


ಪ್ರವಾಸ ಕಥನಗಳು ಗೂಗಲ್ ಇಲ್ಲದ ಕಾಲದಲ್ಲಿಯಂತೂ ಪ್ರವಾಸ ಹೋಗುವ ಆಸೆಯುಳ್ಳವರಿಗೆ ದಿಕ್ಸೂಚಿಗಳಂತೆಯೇ ಸರಿ ಸುಧಾ ಮೂರ್ತಿಯವರ ಈ ಪ್ರವಾಸ ಕಥನ ಸರಳ ಕೈಪಿಡಿಯಂತೆ ಸೊಗಸಾಗಿ ಮೂಡಿಬಂದಿದೆ. ಸೋಲೋ ಟ್ರಾವೆಲಿಂಗ್, ಗೂಗಲ್ ಮ್ಯಾಪ್, ಇಂಟರ್ನೆಟ್ ಅನ್ನೇ ನೆಚ್ಚಿಕೊಂಡು ಹೋಗುತ್ತಿರುವ ಪ್ರವಾಸಗಳು ಟ್ರೆಂಡ್ ಆಗುತ್ತಿರುವ ಕಾಲದಲ್ಲಿಯೂ ಈ ಪ್ರವಾಸ ಕಥನ ಮಾಹಿತಿಪೂರ್ಣವಾಗಿದೆ. 


ಪ್ರವಾಸದ ವ್ಯಾಖ್ಯಾನ ಬದಲಾಗುತ್ತಲೇ ಹೋಗಿದೆ. ಅಂದಿನ ಪ್ರವಾಸಕ್ಕೂ.. ಇಂದಿನ ಪ್ರವಾಸಕ್ಕೂ ಬಹಳ ವ್ಯತ್ಯಾಸಗಳಿವೆ. "ದೇಶ ಸುತ್ತು, ಕೋಶ ಓದು" ಎನ್ನುವ ಗಾದೆಯಂತೆ ಜ್ಞಾನ ಸಂಪಾದನೆಗೆ ಪ್ರವಾಸ ಬಹಳ ಅನುಕೂಲಕರವಾಗಿದ್ದರೂ.. ಪ್ರವಾಸ ಹೋಗುವ ಸಂದರ್ಭ, ಹವಾಮಾನ, ಮನಸ್ಥಿತಿ ಎಲ್ಲವೂ ಜೊತೆಯಾಗಬೇಕಾಗುತ್ತದೆ. ಅಚಾನಕ್ಕಾಗಿ ಎದುರಾಗುವ ಸಂದರ್ಭಗಳನ್ನು ಬಗ್ಗೆ ಹರಿಸಿಕೊಳ್ಳುವ ಚಾಕಚಕ್ಯತೆ ಹಾಗೂ ಬುದ್ಧಿವಂತಿಕೆ, ಸಮಯಪ್ರಜ್ಞೆ ಸಹ ಮುಖ್ಯವಾಗುತ್ತದೆ. ಅದೆಲ್ಲವನ್ನೂ ಬಹಳ ಚಂದವಾಗಿ ಈ ಪ್ರವಾಸ ಕಥನದಲ್ಲಿ ಕಟ್ಟಿಕೊಟ್ಟಿದ್ದಾರೆ ಲೇಖಕಿ.


ಈ ಪ್ರವಾಸ ಕಥನವನ್ನು ಅವರು ಕಟ್ಟಿಕೊಡುವ ಕಾರಣವನ್ನು ಮೊದಲ ಪ್ರವಾಸ ಕಥನದ ಅಂತ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ. ಇದು ಅವರು ಅವರ ತಂದೆಗೆ ಅರ್ಪಿಸಿರುವುದು. ಕಾರಣ, ಅವರ ತಂದೆಗೆ ಪ್ರವಾಸಗಳಿಗೆ ಹೋಗಿ ಬಂದ ನಂತರ ಅಲ್ಲಿನ ಕುರಿತು ಹೇಳುವ, ತಿಳಿಯುವ ಕುತೂಹಲ. ಈಜಿಪ್ಟ್ ಪ್ರವಾಸದ ಸಂಧರ್ಭದಲ್ಲಿ ಕೊನೆಯ ದಿನಗಳಲ್ಲಿ ಅವರ ತಂದೆಯ ಅಂತ್ಯವಾಗುತ್ತದೆ. ಅದೂ ನಿರೀಕ್ಷಿಸಿರದ ಸಂಧರ್ಭದಲ್ಲಿ. ವಿಷಯ ತಿಳಿದಾಗ ಅವರು ಹೇಳುವುದು "ದೇಹ ಮಾತ್ರ ಸುಂದರವಾದ ಲುಕ್ಸರ್ ನಲ್ಲಿ ಇದ್ದಿತು. ಆದರೆ, ಮನಸ್ಸು ಬಿಸಿನೀರು ಚೆಲ್ಲಿದ ಹೂವಿನಂತೆ ಬಾಡಿಹೋಗಿತ್ತು" ಎಂದು. ಈ ಕಹಿ ಘಟನೆಯ ಎರಡು ವರ್ಷದ ನಂತರ ಬರೆದ ಪ್ರವಾಸಕಥನ ಇದು.


ಈ ಪ್ರವಾಸ ಕಥನದಲ್ಲಿ ಮೂರು ವಿವಿಧ ಪ್ರವಾಸದ ಕಥನಗಳಿವೆ. 

1. ಪ್ರಾಚೀನ ನಾಡಿನಲ್ಲಿ : ಈಜಿಪ್ತ್ ನ ಪ್ರವಾಸ ಕಥನ


ಈಜಿಪ್ತ್ ಕುರಿತ ಕೆಲವು ಮಾಹಿತಿಗಳ ಜೊತೆಗೆ ಕೆಲ ಛಾಯಾಚಿತ್ರಗಳೂ ಇವೆ. ಇಲ್ಲಿಗೆ ದುಬೈ ಮಾರ್ಗದ ಮೂಲಕ ಹೋಗುತ್ತಾರೆ. ಈಜಿಪ್ತಿನ ಪ್ರಮುಖ ಆಕರ್ಷಣೆಯಾದ ಪಿರಮಿಡ್ ಗಳು, ಉತ್ಖನನದಿಂದ ದೊರೆತ ಬಗೆ ಹಾಗೂ ಕೈರೋದ ವಸ್ತು ಸಂಗ್ರಹಾಲಯದ ಕುರಿತು ಹೇಳುತ್ತಾರೆ. ಅರಸು ಮನೆತನಗಳ ಮಮ್ಮಿಗಳ ಸಂರಕ್ಷಣಾ ಕ್ರಮವನ್ನೂ ತಿಳಿಯಬಹುದಾಗಿದೆ. 


ನಮ್ಮ ಸಂಸ್ಕೃತಿ, ಕತೆಗಳು, ವಸ್ತುಗಳ ಹೋಲಿಕೆಗಳ ಕುರಿತು ಹೇಳಿರುವ ಬಗೆ ಇಷ್ಟವಾಗುತ್ತದೆ. ನಮ್ಮಲ್ಲಿ ತಾಳೆಗರಿಯ ಉಪಯೋಗವಿರುವ ಹಾಗೆ ಅಲ್ಲಿ ಪ್ಯಾಪಿರಸ್ ಕುರಿತು ಹೇಳುತ್ತಾರೆ. ಪ್ಯಾಪಿರಸ್ ನಂತೆ ಬಾಳೆಯ ನಾರಿನ ಕಾಗದವನ್ನೂ ಮಾರುವವರಿದ್ದಾರೆ. ಪ್ರವಾಸಿಗರು ಅವೆರಡರ ವ್ಯತ್ಯಾಸವನ್ನು ತಿಳಿಯದೇ ಮೋಸ ಹೋಗುವುದೂ ಇದೆ. 


ಪಿರಮಿಡ್ ನಂತೆಯೇ ಸ್ಪಿಂಕ್ಸ್ ಅನ್ನು ಈಜಿಪ್ತಿನ ಗುರುತಾಗಿ ಗುರುತಿಸುತ್ತೇವೆ. ಸ್ಪಿಂಕ್ಸ್ ಎಂದರೆ ಎಲ್ಲವೂ ಸಿಂಹದೇಹಿಗಳೇ ಅಲ್ಲ.. ಅದರಲ್ಲಿಯೂ ಇರುವ ವ್ಯತ್ಯಾಸವನ್ನು ಹೇಳುತ್ತಾರೆ. ಈಜಿಪ್ತಿನ ಒಂದು ಕಾಲದ ಸುಂದರ ನಗರ ಮೆಂಫಿಸ್ ಅನ್ನೂ ತೋರುತ್ತಾರೆ. ಇಲ್ಲಿನ ಪ್ರಮುಖ ರಾಜವಂಶೀಯರು ಹಾಗೂ ಕಾರ್ನಾಕ್ ದೇವಾಲಯ ಹಾಗೂ ಲುಕ್ಸಾರ್ ದೇವಾಲಯದ ಕುರಿತು ನೀವೇ ಓದಿ ನೋಡಿ. 


2. ಡಾಂಗ್ - ಯು - ಕೀ (ಪೂರ್ವ ದೇಶದ ಕತೆ)


ಚೀನೀ ಭಾಷೆಯಲ್ಲಿ ಡಾಂಗ್ ಎಂದರೆ ಪೂರ್ವ. ಭಾರತದ ಯಾತ್ರೆಯ ಕಥೆಯನ್ನು ಚೀನೀ ಯಾತ್ರಿಕ ಬರೆದು 'ಸೀ-ಯು-ಕಿ' ಎಂದರೆ 'ಪೂರ್ವ ದೇಶದ ಕತೆ' ಎಂದದ್ದರ ಪ್ರೇರಣೆಯಾಗಿ 'ಡಾಂಗ್-ಯು-ಕೀ' ಎಂದಿದ್ದಾರೆ. ಇದರ ಭೌಗೋಳಿಕ ಸ್ವರೂಪ, ಭಾಷೆ ಹಾಗೂ ಭಾರತದಿಂದ ಅಲ್ಲಿಗೆ ಹೋಗಬಹುದಾದ ದಾರಿಗಳ ಕುರಿತು ಹೇಳುತ್ತಾರೆ. ಇವರು ಅಲ್ಲಿಗೆ ಹೋಗಿದ್ದು.. ಸಿಂಗಾಪುರದ ಮೂಲಕ. ಇವರು ಅಲ್ಲಿಗೆ ಹೋದಾಗ ಅಲ್ಲಿಯವರ ಭಾಷೆಗೂ.. ಇಂಗ್ಲೀಷ್ ಗೂ ಇದ್ದ ಭಾಷೆಯ ವ್ಯತ್ಯಾಸವನ್ನು ತೋರುತ್ತಾರೆ. ಈಗಿನಂತೆ ಟ್ರ್ಯಾನ್ಸ್ಲೆಟರ್ ಆಪ್ ಗಳೂ ಇಲ್ಲದಿದ್ದಾಗ.. ಎಲ್ಲವೂ ಅಲ್ಲಿನ ಚೀನಾ ಭಾಷೆಯಲ್ಲಿಯೇ ಬರೆದಿರುವ ಸಂಧರ್ಭದಲ್ಲಿ ಅಲ್ಲಿನ ಓಡಾಟಕ್ಕೆ ಇವರು ಬಳಸಿದ ಬುದ್ಧಿವಂತಿಕೆಯನ್ನು ಓದಿಯೇ ಅರಿಯಬೇಕು.


'ಚೀನಾಂಬರ'ಗಳೆಂದೇ ಸುಪ್ರಸಿದ್ಧವಾದ ಚೀನಾದ ರೇಷ್ಮೆಯ ಕತೆಗಳನ್ನು ಹೇಳುತ್ತಾ.. ಅಲ್ಲಿನ ಉಡುಪುಗಳು, ಅಲಂಕಾರದ ದರ್ಶನ, ಅಲ್ಲಿನವರ ಸೈಕಲ್ ವ್ಯಾಮೋಹವನ್ನು, ಶೌಚಾಲಯದ ಸ್ವಚ್ಛತೆಯನ್ನೂ ದರ್ಶನ ಮಾಡಿಸುತ್ತಾರೆ. 


ಅಲ್ಲಿ ಇವರು ತೊಂದರೆ ಅನುಭವಿಸಿದ್ದು ಸಸ್ಯಾಹಾರದ ಆಹಾರ ಸಿಗದೇ.. ಇಲ್ಲಿನ ಜನ ಬೌದ್ದ ಧರ್ಮವನ್ನೇ ಹೆಚ್ಚು ಪಾಲಿಸುತ್ತಿದ್ದರೂ.. ಸಸ್ಯಾಹಾರದ ಕುರಿತು ಒಲವು ತೋರದೇ ಇರುವುದೇಕೆ ಎಂದೂ ಯೋಚಿಸುತ್ತಾರೆ. 


ಲೇಖಕಿ ನೋಡಬಯಸಿದ್ದು 'ಫರ್ಬಿಡನ್ ಸಿಟಿ'ಯನ್ನು. ಇದರ ವಿಶೇಷತೆಯನ್ನು ನೀವೇ ಓದಿ ಅರಿಯಿರಿ. 


ಚೀನಾದ ಡ್ರ್ಯಾಗನ್, ಅಲ್ಲಿನ ಜನರ ಅಂತ್ಯ, ದೇವಾಲಯಗಳು, ರಾಜವಂಶೀಯರ ಕುರಿತು ಹೇಳುತ್ತಾರೆ. ಮುಖ್ಯವಾಗಿ ಚೀನಾದ ಮಹಾಗೋಡೆ ಹಾಗೂ ಅಲ್ಲಿನ ಸ್ಥಿತಿಗತಿಯನ್ನು ತೋರುತ್ತಾರೆ. ಶಿಂಗ್ ಲೀ ಯ ದುರಂತಗಾಥೆ ಮನಮಿಡಿಯುವಂತೆ ಮಾಡುತ್ತದೆ. 


3. ಸ್ತ್ರೀ ಸ್ವಾತಂತ್ರ್ಯದ ನಾಡಿನಲ್ಲಿ...

(ಸ್ಕಾನ್ಡಿನೇವಿಯಾ ದೇಶಗಳ ಪ್ರವಾಸ ಕಥನ)


ಲೇಖಕಿ ಒಂದು ವಿಚಾರಗೋಷ್ಠಿಗೆ ಹೋಗಿದ್ದಾಗ ಅಲ್ಲಿ ಮಹಿಳೆ ಜಗತ್ತಿನಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಮುಂದುವರಿದ 174 ದೇಶಗಳ ಪಟ್ಟಿ ತೋರುತ್ತಾರೆ. ವಿಪರ್ಯಾಸವೆಂದರೆ ಭಾರತ 173ನೇ ಸ್ಥಾನದಲ್ಲಿತ್ತು. ಆ ಪಟ್ಟಿಯಲ್ಲಿ ಮೊದಮೊದಲ ಸ್ಥಾನದಲ್ಲಿದ್ದ ದೇಶಗಳನ್ನು ದರ್ಶಿಸುವ ಅಪೇಕ್ಷೆ ಹೊಂದಿದ್ದರು. 


ಮುಖ್ಯವಾಗಿ ನೊಬೆಲ್ ನೆಲವಾದ ಸ್ವೀಡನ್ ಅನ್ನು ನೋಡಲು ಅಪೇಕ್ಷಿಸುತ್ತಾರೆ. ಸ್ವೀಡನ್, ನಾರ್ವೆ, ಡೆನ್ಮಾರ್ಕ್ ಈ ಮೂರು ದೇಶಗಳನ್ನು ಸ್ಕಾಂಡಿನೇವಿಯನ್ ದೇಶಗಳೆಂದು ಕರೆಯುತ್ತಿದ್ದರು. ಈಗ ಈ ಗುಂಪಿಗೆ ಫಿನ್ಲ್ಯಾಂಡ್ ಕೂಡಾ ಸೇರ್ಪಡೆಯಾಗಿದೆ. ಈ ದೇಶಗಳಲ್ಲಿ ಪ್ರವಾಸ ಮಾಡುವುದು ಅಷ್ಟು ಸುಲಭವಲ್ಲ. ಇಲ್ಲಿ ಅತಿಯಾದ ಚಳಿ ಹಾಗೂ ವರ್ಷದಲ್ಲಿ ಎರಡೇ ಮಾಸಗಳು. ಒಂದು ಮಧ್ಯರಾತ್ರಿಯಾದರೂ ಪ್ರಖರವಾದ ಬೆಳಕಿರುವ ರಾತ್ರಿಗಳಾದರೆ, ಇನ್ನೊಂದು ಮಧ್ಯಾಹ್ನದ ಹನ್ನೆರಡರ ಸಮಯದಲ್ಲಿಯೂ ರಾತ್ರಿಯ ಕಗ್ಗತ್ತಲೆಯಂತಿರುವ ಪರಿಸ್ಥಿತಿ. 


ಇಲ್ಲಿನ ವಸ್ತುಸಂಗ್ರಹಾಲಯಗಳ ವಿಶೇಷತೆ, ಸ್ಕೀ ಜಿಗಿತ, ಮಹಿಳೆಯರ ಸ್ಥಿತಿಗತಿ, ನೊಬೆಲ್ ನಾಡು ಎಲ್ಲದರ ಕುರಿತು ಹೆಚ್ಚು ಹೇಳಲಾರೆ. ಸ್ತ್ರೀಯರಿಗೆ ಸ್ವರ್ಗಸಮಾನವೆಂದೇ ಖ್ಯಾತಿಯಾಗಿರುವ ಈ ದೇಶಗಳ ಓದಿಯೇ ತಿಳಿಯಿರಿ. 

~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ