ಸೋಮವಾರ, ಏಪ್ರಿಲ್ 20, 2026

ಭ್ರಮರ ಬಂಧನ (ಪುಸ್ತಕ ಯಾನ - 273)


ಪುಸ್ತಕದ ಶೀರ್ಷಿಕೆ : ಭ್ರಮರ ಬಂಧನ

ಲೇಖಕರು : ಹೆಚ್. ಜಿ. ರಾಧಾದೇವಿ

ಪ್ರಕಾಶಕರು : ಶ್ರೀಲಕ್ಷ್ಮೀ ವೆಂಕಟೇಶ್ವರ ಪ್ರಕಾಶನ

ಪ್ರಥಮ ಮುದ್ರಣ : 2002

ಎರಡನೇ ಮುದ್ರಣ : 2023 (ನನ್ನ ಓದಿಗೆ ಸಿಕ್ಕಿದ್ದು)


ಭ್ರಮರ ಬಂಧನ ಹೆಚ್.ಜಿ ರಾಧಾದೇವಿಯವರ ಮೊದಲ ಕಾದಂಬರಿ. ಈ ಕಾದಂಬರಿ 1974ರ ಅ.ನ.ಕೃ ಸ್ಮಾರಕ ಕಾದಂಬರಿ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಕಾದಂಬರಿ. ಇದಾದ ನಂತರ ಹೆಚ್. ಜಿ ರಾಧಾದೇವಿಯವರು ಬರೆದ ಮತ್ತೊಂದು ಕಾದಂಬರಿ 'ಸುವರ್ಣ ಸೇತುವೆ' ಪ್ರಕಟವಾಯಿತು. ಹೆಚ್ಚಿನವರು ಇದನ್ನೇ ರಾಧಾದೇವಿಯವರ ಮೊದಲ ಕಾದಂಬರಿಯ ಎಂದು ಗುರುತಿಸುತ್ತೇವೆ. ಈಗ 'ಭ್ರಮರ ಬಂಧನ' ಮರುಮುದ್ರಣವಾಗಿ ಓದುಗರ ಕೈ ಸೇರಿದೆ. 


ರಂಗರಾಯರು ಹಾಗೂ ರತ್ನಮ್ಮನವರಿಗೆ ಇಬ್ಬರು ಮಕ್ಕಳು. ರಂಜಿತಾ ಹಾಗೂ ಮಾಲಿನಿ. ರಂಜಿತಾ ಹಿರಿಯವಳಾದರೂ.. ಮಾಲಿನಿಗೆ ಈಗಾಗಲೇ ಮಾವನ ಮಗ ಜಗದೀಶನ ಜೊತೆ ವಿವಾಹ ನಿಷ್ಕರ್ಷೆಯಾಗಿತ್ತು. ರಂಜಿತಳಿಗೆ ಹೋಲಿಸಿದರೆ ಮಾಲಿನಿ ಉತ್ಸಾಹದ ಚಿಲುಮೆ, ಅಂತೆಯೇ ರೂಪವತಿ ಕೂಡಾ. ಓದಿನಲ್ಲಿಯೂ ಬುದ್ಧಿವಂತಳು, ಊರೆಲ್ಲಾ ಗೆಳತಿಯರು. ರಂಜಿತಾ ಓದಿನಲ್ಲಿ ಬುದ್ಧಿವಂತಳಲ್ಲ. ರೂಪವತಿಯಾದರೂ.. ಮಾಲಿನಿಗೆ ಹೋಲಿಸಿದರೆ ರೂಪವೂ ಕಡಿಮೆ, ಮಾತು ಕಡಿಮೆ. ಆದರೆ, ಅವಳಲ್ಲಿಲ್ಲದ ಗುಣವಿಶೇಷವೊಂದು ರಂಜಿತಾಳ ಬಳಿ. ಇತ್ತು ಅದೇ ಅವಳ ಸುಮಧುರ ಕಂಠ.


ಕೆಲಸವೂ ಇಲ್ಲದೆ, ಹೆಚ್ಚಿನ ಓದು ಇಲ್ಲದ್ದರಿಂದ.. ಹೆಚ್ಚಿನ ಪ್ರಯತ್ನ ಮಾಡಿದರೂ ಕೆಲಸ ಸಿಗದಾದಾಗ ತನ್ನ ಅದೃಷ್ಟ ಪರೀಕ್ಷಿಸುವಂತೆ ಆಕಾಶವಾಣಿಗೆ ಒಮ್ಮೆ ಪತ್ರ ಬರೆದಿದ್ದಳು. ಅವಳ ಸುಮಧುರ ಸ್ವರ ವರದಾನವಾಗಿ.. ಕನ್ನಡ ಕವನಗಳನ್ನು ಅವಳು ಸ್ವಂತ ಶೈಲಿಯಲ್ಲಿ ಭಾವಪೂರ್ಣವಾಗಿ ಹಾಡುತ್ತಿದ್ದದ್ದು ಜೊತೆಯಾಗಿ ಆಕಾಶವಾಣಿಯ ಧ್ವನಿ ಪರೀಕ್ಷೆಯಲ್ಲಿಯೂ ಉತ್ತೀರ್ಣಳಾದಳು. ಇದಾದ ನಂತರ ಅವಳ ಪ್ರತಿಭೆಗೆ ಒಂದು ಬೆಲೆ ಸಿಕ್ಕಿತು ಎಂದರೂ ತಪ್ಪಾಗಲಾರದು. ತಂಗಿ ಮಾಲಿನಿಯ ಕಾಲೇಜಿನ ಕಾರ್ಯಕ್ರಮದಲ್ಲಿ ಆಕೆ ಆಕಾಶವಾಣಿ ಗಾಯಕಿ ಎಂದು ಪರಿಚಯಿಸಲ್ಪಟ್ಟು ಕಲಾಹೃದಯಿಗಳ ಮನ ಗೆದ್ದಳು. 


ಅಂದು ಕಾಲೇಜಿನಲ್ಲಿ ಸಿಕ್ಕ ಸನ್ಮಾನ, ಮನ್ನಣೆ.. ಪ್ರತಿಭೆಯಿಂದ ಅವಕಾಶಗಳು ಸಿಕ್ಕರೂ ಅದರಿಂದ ಆದಾಯವೇನಿರಲಿಲ್ಲ. ಆಕಾಶವಾಣಿಯಿಂದ ಎರಡನೇ ಅವಕಾಶ ಸಿಗಬಹುದು ಎಂದು ಕಾದರೂ ಸಿಕ್ಕಿರಲಿಲ್ಲ. ಅಷ್ಟರಲ್ಲಿ ಬಂದ ಪತ್ರ ಅವಳಲ್ಲಿ ಆತ್ಮವಿಶ್ವಾಸ ತುಂಬಿತ್ತು. ಅದು 'ಭೃಂಗ ಕೋಕಿಲ ವಾದ್ಯ ವೃಂದ'ದಿಂದ ಬಂದ ಪತ್ರ. ಆ ತಂಡದಲ್ಲಿ ವಾದ್ಯ ವಿಭಾಗದ ಆರು ಪರಿಣಿತರಿದ್ದರು. ಮಧುಕರ ಪ್ರಧಾನ ಗಾಯಕನಾಗಿದ್ದ. ಅದುವರೆಗೂ ಗಾಯಕಿ ಯಾರೂ ಇರಲಿಲ್ಲ. ಮೊದಲಿಗೆ ಒಂದು ಕಾರ್ಯಕ್ರಮಕ್ಕೆ ಕಡಿಮೆ ಹಣವೆಂದೂ.. ನಂತರ ಸತತವಾಗಿ 25 ಕಾರ್ಯಕ್ರಮಗಳು ಮುಗಿದ ನಂತರ ಅದರ ದುಪ್ಪಟ್ಟು ಹಣ ಕೊಡಲಾಗುತ್ತದೆ ಎಂದು ಬರೆದಿದ್ದನು ಮಧುಕರ. 


ಈ ವಿಚಾರವಾಗಿ ಮನೆಯಲ್ಲಿ ಬಹಳಷ್ಟು ಚರ್ಚೆ ನಡೆಯಿತು. ಅವಳು ಹೀಗೆ ಕಾರ್ಯಕ್ರಮದಲ್ಲಿ ಹೋಗಿ ಗಂಡಿನ ಜೊತೆಗೆ ಹಾಡಿದರೆ, ಬೀದಿ ಬೀದಿ ತಿರುಗುವ ಹುಡುಗಿಗೆ ಗಂಡು ಸಿಗಲು ಕಷ್ಟವಾಗುತ್ತದೆ ಎಂಬುದು ತಂದೆ-ತಾಯಿಯ ವಿಚಾರ. ಆದರೆ, ಮಾಲಿನಿ ಅಷ್ಟಕ್ಕೇ ಸುಮ್ಮನಾಗದೆ, ರಂಜಿತಾಳ ಪ್ರತಿಭೆಗೆ ಮನ್ನಣೆ ಸಿಕ್ಕು.. ಆಕೆ ದೊಡ್ಡ ಗಾಯಕಿಯಾಗುತ್ತಾಳೆಂದು ಅವಳ ಪ್ರತಿಭೆಗೆ ಮನ್ನಣೆ ನೀಡಬೇಕೆಂದು ಪ್ರೋತ್ಸಾಹ ಕೊಟ್ಟು ಬೆಂಬಲಿಸಿದಳು. ಅಂತೂ ತಂದೆ-ತಾಯಿ ಒಪ್ಪಿ ಆಕೆ ಕಾರ್ಯಕ್ರಮದಲ್ಲಿ ಹಾಡುವಂತಾಯಿತು. ಭೃಂಗ ಕೋಕಿಲ ತಂಡದ ಗಾಯಕಿಯಾಗಿ ಅವಳು ಸೇರಿದ ಮೇಲೆ ಕೆಲವು ಸಲಹೆಗಳನ್ನು ನೀಡಿದ್ದರಿಂದ.. ಅದರಂತೆ ಮಾರ್ಪಾಟಾಗಿ ಜೊತೆಗೆ ತಂಡದ ಕಾರ್ಯಕ್ರಮವೂ ಸೊಗಸಾಗಿ ಬಂದು ದಿನೇದಿನೇ ಪ್ರಖ್ಯಾತಿ ಹೆಚ್ಚುತ್ತಿತ್ತು. ತಂಡದ ಆರು ಜನರು ಅವಳ ಜೊತೆ ಗೌರವದಿಂದಲೇ ನಡೆದುಕೊಳ್ಳುತ್ತಿದ್ದರು. ಜಗನ್ನಾಥನಂತೂ ಆಕೆಯನ್ನು ತಂಗಿಯ ರೀತಿಯಲ್ಲಿಯೇ ಕಾಣುತ್ತಿದ್ದ. ಮಧುಕರನ ಭಯದಿಂದ ಶುದ್ಧ ರೌಡಿಯಂತಿದ್ದ ರಾಜಾನಂದ ಸಹ ಗೌರವದಿಂದಲೇ ವರ್ತಿಸುತ್ತಿದ್ದ. 


ತಡರಾತ್ರಿಯ ಕಾರ್ಯಕ್ರಮಗಳಿದ್ದಾಗ ಮಧುಕರನೇ ಬಂದು ಅವಳನ್ನು ಮನೆಯವರೆಗೂ ಬಿಟ್ಟು ಹೋಗುತ್ತಿದ್ದ. ಮನೆಯವರೆಗೂ ಎಂದರೆ ಪೂರ್ತಿ ಮನೆಯವರೆಗಲ್ಲ. ಏಕೆಂದರೆ, ಆಕೆ ತಾಯಿಗೆ ತಾನು ವಯಸ್ಸಾದವರ ಜೊತೆ ಬರುತ್ತೇನೆಂದು ಸುಳ್ಳಾಡಿದ್ದಳು. ಅದಕ್ಕೆ ಕಾರಣ ಅದು ತಪ್ಪು ಗ್ರಹಿಕೆಗೆ ಎಡೆ ಮಾಡಿಕೊಡಬಾರದೆಂದು. ತಾಯಿ ಅದನ್ನು ನಂಬಿದ್ದರು. ತಂದೆಯ ಕಣ್ಣಿಗೆ ಈ ವಿಚಾರ ಬಿದ್ದು ಇದರ ಕುರಿತಾಗಿ ಮಾತುಕತೆಯೂ ನಡೆದಿತ್ತು. 


ಕಲಾವಿದರೆಂದರೆ ಸಾರ್ವಜನಿಕರ ಸ್ವತ್ತೆಂಬಂತೆ ವರ್ತಿಸುವ ಹಾಗೂ ವಯಸ್ಸಾದವರೆಂದು ಗೌರವ ತೋರಿದಾಗ ಅದನ್ನು ಸಲುಗೆಯಾಗಿ ತೆಗೆದುಕೊಂಡವರ ಕಹಿ ಪ್ರಸಂಗಗಳು ಅವಳಿಗೆ ಕಾಡದೇ ಇರಲಿಲ್ಲ. ವೃತ್ತಿಗೌರವದ ದೆಸೆಯಿಂದ.. ಬೇಡದಿದ್ದರೂ ಅವರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಲೇಬೇಕಿತ್ತು. 


ಮಧುಕರನ ಚಿಕ್ಕಪ್ಪನ ಹೆಣ್ಣು ಮಕ್ಕಳ ಮದುವೆಗಾಗಿ ಇವರದ್ದೇ ಆರ್ಕೆಸ್ಟ್ರಾಗಾಗಿ ಎರಡು ದಿನ ಮೈಸೂರಿಗೆ ಹೋಗಬೇಕಾಗಿ ಬಂದಾಗ ಸೋದರಮಾವನ ಮನೆಯಲ್ಲಿಯೇ ಉಳಿದರು ರಂಜಿತಾ ಹಾಗೂ ಮಾಲಿನಿ. ಅವರ ಮಗನೇ ಮಾಲಿನಿಯ ಪತಿಯಾಗುವನಿದ್ದವನು. ರತ್ನಮ್ಮನವರ ಅಣ್ಣನ ಮನೆಯಾದರೂ.. ಅತ್ತಿಗೆ ಶ್ರೀಮಂತಿಕೆಯ ಅಹಂ ಇದ್ದವರು. ಆದರೆ, ಅವರಾಗಿಯೇ ಮಾಲಿನಿಯ ರೂಪ, ಬುದ್ದಿವಂತಿಕೆ ನೋಡಿ ಹೆಣ್ಣು ಕೇಳಲು ಬಂದಿದ್ದರು. ಜಗದೀಶ ವಿದೇಶದಿಂದ ಬಂದ ನಂತರ ಅವರ ಮದುವೆಯಾಗುವುದರಲ್ಲಿತ್ತು. ಈಗ ರಂಜಿತಾಳೂ ಸಿರಿವಂತಳು ಎಂದು ತಿಳಿದು ಅಲ್ಲಿ ಅವಳನ್ನು ಉಪಚರಿಸಿದ್ದೇ ಉಪಚರಿಸಿದ್ದು. ರಂಜಿತಾಳ ಮನಸ್ಸಿನಲ್ಲಿ ತನ್ನ ವಿವಾಹದ ಕುರಿತು ಕೊರಗು ಇದ್ದೇ ಇತ್ತು.


ಈ ಮದುವೆಯ ಓಡಾಟ ಹಾಗೂ ಅವಳ ಸೌಂದರ್ಯದಿಂದ ಮೋಹಿತನಾದ ಮಧುಕರ. ಮನಸ್ಸಿನಲ್ಲಿದ ಮಾತು ಅಂದು ಬಾಯಲ್ಲಿ ಬಂದು.. ಮುಂದೆ ಆ ಪ್ರೇಮ ಹಿರಿಯರ ಒಪ್ಪಿಗೆಯಿಂದ ವಿವಾಹದಲ್ಲಿ ಕೊನೆಯಾಯಿತು. ವಿವಾಹದ ನಂತರ ಅತ್ತೆ-ಮಾವ ಗಂಡನ ಸಾನಿಧ್ಯದಲ್ಲಿ ಒಂದರ್ಥದಲ್ಲಿ ಸುಖಿಯಾಗಿದ್ದಳು ರಂಜಿತ. ಆದರೆ, ಅವಳು ಮತ್ತೆ ಮಧುಕರನ ಆರ್ಕೆಸ್ಟ್ರಾದಲ್ಲಿ ಹಾಡುವಂತಿರಲಿಲ್ಲ. ಅದು ಮಧುಕರನಿಗೆ ಇಷ್ಟವಾಗುತ್ತಿರಲಿಲ್ಲ. ಈ ವಿಚಾರದಲ್ಲಿ ಆತನೊಂದಿಗೆ ವಾದಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. 


ಮಾಲಿನಿಯ ವಿವಾಹವಾದಾಗಲೂ ಮಧುಕರನದ್ದೇ ಆರ್ಕೆಸ್ಟ್ರಾ. ಆದರೆ, ಈಗ ಕಲ್ಯಾಣಿ ಎಂಬಾಕೆ ಅದರ ಮುಖ್ಯ ಗಾಯಕಿ. ರಂಜಿತಾಳಿಗೆ ವ್ಯತಿರಿಕ್ತವಾದ ನಡೆ ಎಂದರೂ ತಪ್ಪಾಗಲಾರದು. ಕಲ್ಯಾಣಿಯ ನೋಟ, ವೈಯಾರ ಹಾಗೂ ಅವಳ ಹಾವ-ಭಾವ ರಂಜಿತಾಳಿಗೆ ಇಷ್ಟವಾಗಿರಲಿಲ್ಲ. ಅದನ್ನು ಒಂದೆರಡು ಬಾರಿ ವ್ಯಕ್ತಪಡಿಸಿಯೂ ಇದ್ದಳು. ಆದರೆ, ನೇರ ಒಂದು ದಿನ ಅವರಿಬ್ಬರಿಗೂ ಮಾತುಕತೆಯ ಜಟಾಪಟಿಯೂ ಆಯಿತು. ಅದು ಮಧುಕರನಿಗೆ ಅಚ್ಚರಿಯ ಜೊತೆಗೆ ಕೋಪವನ್ನೂ ತರಿಸಿತ್ತು. 


ಗರ್ಭಿಣಿಯಾದ ರಂಜಿತಾಳಿಗೊಂದು ಬಯಕೆ ಇತ್ತು. ಅದೆಂದರೆ, ಮತ್ತೆ ಹಾಡುವುದು. ಕೃಷ್ಣರಾಜು ಅವರಿಂದ ಮದ್ರಾಸ್ ನಿಂದ ಬಂದ ಪತ್ರದಲ್ಲಿ ಕಲಾಸಂಘದ ಕಾರ್ಯಕ್ರಮಕ್ಕಾಗಿ ಕರೆಯಿತ್ತು. ಮೊದಲ ದಿನದಲ್ಲಿ ಕನ್ನಡದ ಸುಪ್ರಸಿದ್ಧ ಕಾದಂಬರಿಕಾರರಾದ ಕಾದಂಬರಿ ಸಾರ್ವಭೌಮ ಅ.ನ.ಕೃ ಅವರು ಭಾಷಣಕಾರರಾಗಿಯೂ.. ಅಧ್ಯಕ್ಷರಾಗಿ ಖ್ಯಾತ ಪತ್ರಿಕೋದ್ಯಮಿ ತೀ.ತಾ ಶರ್ಮಾ ಅವರು ಉಪಸ್ಥಿತಿಯೂ ಇರಲಿತ್ತು. ಮಧುಕರ ಈ ಕಾರ್ಯಕ್ರಮಕ್ಕೆ ಒಪ್ಪಿದ.


ಅ.ನ.ಕೃ ಅವರ ಹಾಗೂ ತೀ.ತಾ ಶರ್ಮಾ ಅವರ ಮಾತುಕತೆಯಲ್ಲಿ 'ಭ್ರಮರ ಬಂಧನ' ಹಾಗೂ 'ಭ್ರಮರ ಕೀಟ ನ್ಯಾಯ' ಎಂಬ ಮಾತುಕತೆಗಳಾದದ್ದು ರಂಜಿತಾಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ರಂಜಿತಾಳ ಮನಸ್ಸಿನ ಆಸೆ ಪೂರೈಸಿದರೂ.. ಅವರಿಬ್ಬರೂ ಮದ್ರಾಸಿನಿಂದ ಜೊತೆಯಾಗಿ ಹೊರಡಲಿಲ್ಲ. ಅದಕ್ಕೆ ಕಾರಣವೇನು..??


ಭ್ರಮರ ಬಂಧನ ಹಾಗೂ ಭ್ರಮರ ಕೀಟ ನ್ಯಾಯ ಎಂದರೇನು ?


ರಂಜಿತಾ ಕಲೆಯ ಆಸೆಗಾಗಿ ತನ್ನ ಸಾಂಸಾರಿಕ ಬದುಕನ್ನು ಬಲಿ ಕೊಟ್ಟಳೇ ಅಥವಾ ಅನುಮಾನದಿಂದ ಗಂಡನನ್ನು ದೂರ ಮಾಡಿಕೊಂಡಳೇ.. ಕಲ್ಯಾಣಿ ಎಲ್ಲಿ ಹೋದಳು...? ಗರ್ಭಿಣಿಯಾಗಿದ್ದ ರಂಜಿತಾಳ ಮುಂದಿನ ಬದುಕು ಹೇಗಿತ್ತು..?


ವಿವಾಹದ ಮೊದಲು ಗಾಯಕಿಯಾಗಿದ್ದ, ತಾನು ಮೆಚ್ಚಿದ ಹುಡುಗಿ ಪತ್ನಿಯಾದಾಗ ಮಧುಕರ ಆಕೆಯನ್ನು ಕಲಾಸೇವೆಯಿಂದ ದೂರ ಇಟ್ಟದ್ದೇಕೆ..?


ಈ ಕಾದಂಬರಿ ಸುಖಾಂತ್ಯವೋ ಅಥವಾ ದುಃಖಾಂತ್ಯವೋ ನೀವೇ ಓದಿನೋಡಿ.


ಈ ಕಾದಂಬರಿ ಸ್ಪರ್ಧೆಗಾಗಿ ಬರೆದಿರುವುದು ಎಂಬುದು ಹೌದಾದರೂ... ಇಲ್ಲಿ ಅ.ನ.ಕೃ ಅವರ ಉಲ್ಲೇಖವಿದ್ದು ಒಂದು ಉತ್ಕೃಷ್ಟವಾದ ಸಂಭಾಷಣೆಯ ಮೂಲಕ ಆಲೋಚನೆಗೆ ಹಚ್ಚುವಂತಹಾ ಸಂಭಾಷಣೆಗಳಿವೆ.


ತೆರೆಯ ಮೇಲೆ ಅಥವಾ ವೇದಿಕೆಯ ಮೇಲೆ ನಾವು ನೋಡುವ ಕಲಾವಿದರ ಹಿಂದಿನ ಬದುಕಿನ ಚಿತ್ರಣ ಹೇಗಿರುತ್ತದೆ ಎಂಬುದನ್ನು ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ ಲೇಖಕಿ. ಪ್ರತಿ ರಂಗದಲ್ಲಿಯೂ ಒಳ್ಳೆಯವರಿದ್ದ ಹಾಗೆ ಕೆಟ್ಟವರೂ ಇರುತ್ತಾರೆ. ಈ ಎರಡೂ ಅನುಭವಗಳ ಮೇಳೈಸುವಿಕೆ ಇದ್ದಾಗಲಷ್ಟೇ.. ಬದುಕಿನಲ್ಲಿ ಎಲ್ಲಾ ಅನುಭವಗಳೂ ಸಾಧ್ಯ. ಅದು ಇಲ್ಲಿ ಹೇಗೆ ಚಿತ್ರಿತವಾಗಿದೆ ಎಂಬುದನ್ನು ನೀವೇ ಓದಿ ನೋಡಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ