ಸೋಮವಾರ, ಏಪ್ರಿಲ್ 20, 2026

ಸಂಗೀತ ಕಲಾನಿಧಿ ಪದ್ಮವಿಭೂಷಣ ಡಿ. ಕೆ. ಪಟ್ಟಮ್ಮಾಳ್ (ಪುಸ್ತಕ ಯಾನ - 283)


ಪುಸ್ತಕದ ಶೀರ್ಷಿಕೆ : ಸಂಗೀತ ಕಲಾನಿಧಿ ಪದ್ಮವಿಭೂಷಣ ಡಿ. ಕೆ. ಪಟ್ಟಮ್ಮಾಳ್

ಲೇಖಕರು : ಡಾ|| ಎಸ್. ಸಿ. ಶರ್ಮ

ಪ್ರಕಾಶಕರು : ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ

ಪ್ರಥಮ ಮುದ್ರಣ : 2016

ಪುಟಗಳು : 56

ಬೆಲೆ : 25 ರೂ. 


ಲೇಖಕರಾದ ಡಾ|| ಎಸ್. ಸಿ. ಶರ್ಮ ಅವರು ಶಿಕ್ಷಣ ತಜ್ಞರು ಹಾಗೂ ಸಂಶೋಧಕರು. ಕರ್ನಾಟಕ ಸಂಗೀತ ಅಕಾಡೆಮಿಯ ಸ್ಕಾಲರ್ಶಿಪ್ ಪಡೆದವರು. ಹಾಡುಗಾರಿಕೆ ಹಾಗೂ ವಯೋಲಿನ್ ನುಡಿಸುವಲ್ಲಿಯೂ ಪ್ರವೀಣರು. ಆಲ್ ಇಂಡಿಯಾ ರೇಡಿಯೋ ಕಾರ್ಯಕ್ರಮಗಳನ್ನು ಸಹಾ ನೀಡಿದ್ದಾರೆ. ಡಾ|| ಶರ್ಮ ಅವರು ತಮ್ಮ ವಿಜ್ಞಾನ, ತಂತ್ರಜ್ಞಾನದ ಪರಿಣಿತಿಯನ್ನು ಬಳಸಿ ಕರ್ನಾಟಕ ಸಂಗೀತದಲ್ಲಿ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಸಂಗೀತ ತಜ್ಞರಾಗಿ 'ಒತ್ತಡ ನಿವಾರಣೆಯಲ್ಲಿ ಸಂಗೀತದ ಪಾತ್ರ'ದ ಕುರಿತು ಅಧ್ಯಯನವನ್ನು ನಡೆಸಿದ್ದಾರೆ. ಕರ್ನಾಟಕ ಸಂಗೀತಕ್ಕೆ ಡಿ. ಕೆ. ಪಟ್ಟಮ್ಮಾಳ್ ರವರ ಕೊಡುಗೆಗಳು ಎಂಬ ಮಹಾಪ್ರಬಂಧವನ್ನು ರಚಿಸಿ ಅವಿನಾಶಿಲಿಂಗಂ ಮಹಿಳಾ ವಿಶ್ವವಿದ್ಯಾನಿಲಯ ಕೊಯಂಬತ್ತೂರು ಇಲ್ಲಿಂದ ಡಿ. ಲಿಟ್ ಪದವಿಯನ್ನು ಪಡೆದಿದ್ದಾರೆ. ಶರ್ಮರವರು ಡಿ. ಕೆ. ಪಟ್ಟಮ್ಮಾಳ್ ಅವರನ್ನು ತಮ್ಮ ಮಾನಸಗುರು ಎಂದು ಭಾವಿಸಿದ್ದಾರೆ. ಈ ವ್ಯಕ್ತಿಚಿತ್ರಣ ಅವರಿಗೆ ಸಲ್ಲಿಸುವ ಗೌರವ, ಗುರುಕಾಣಿಕೆ ಎಂದು ಭಾವಿಸಿದ್ದಾರೆ.


ಈ ಪುಸ್ತಕದಲ್ಲಿ ಡಿ. ಕೆ ಪಟ್ಟಮ್ಮಾಳ್ ಅವರ ಕುರಿತಾಗಿ ವಿಚಾರಗಳಿದ್ದರೂ.. ಇದು ಅವರ ಕುರಿತು ತಿಳಿಯುವುದಕ್ಕೆ ಪ್ರವೇಶಿಕೆ ಮಾತ್ರ ಎಂದೆನಿಸಿತು. ಲೇಖಕರು ಪಟ್ಟಮ್ಮಾಳ್ ರವರ ಕೆಲವು ಭಾವಚಿತ್ರಗಳನ್ನು ಸಹಾ ಓದುಗರಿಗೆ ದೊರಯುವಂತೆ ಮಾಡಿದ್ದಾರೆ.


ಡಿ. ಕೆ. ಪಟ್ಟಮ್ಮಾಳ್ ಹುಟ್ಟಿದ್ದು ಕಾಂಚೀಪುರದ ದಮಾಲ್ ಎಂಬ ಹಳ್ಳಿಯಲ್ಲಿ. ದಮಾಲ್ ಕೃಷ್ಣಸ್ವಾಮಿ ದೀಕ್ಷಿತರು ಹಾಗೂ ಶ್ರೀಮತಿ ಕಾಂತಿಮತಿ ಅವರ ಎರಡನೇ ಮಗು ಹಾಗೂ ಏಕೈಕ ಮಗಳಾಗಿ 1919ರಲ್ಲಿ ಜನಿಸಿದರು. ಅಣ್ಣ ಡಿ. ಕೆ ರಂಗನಾಥನ್. ತಮ್ಮಂದಿರು ಡಿ. ಕೆ ಸುಬ್ರಮಣಿಯನ್, ಡಿ. ಕೆ ನಾಗರಾಜನ್ ಹಾಗೂ ಡಿ. ಕೆ ಜಯರಾಮನ್. ತಂದೆ ಶಾಲಾ ಮಾಸ್ತರರಾಗಿದ್ದವರು. ತಾಯಿ ಗೃಹಿಣಿ. ತಾಯಿ ಸಂಗೀತವನ್ನು ಕ್ರಮಬದ್ಧವಾಗಿ ಕಲಿಯದಿದ್ದರೂ.. ಸಂಗೀತದ ಪರಿಚಯವಿತ್ತು. ಕೃತಿಗಳನ್ನು ಸುಶ್ರಾವ್ಯವಾಗಿ ಹಾಡುತ್ತಿದ್ದರು. ತೆಲುಗು ಕೃತಿಗಳನ್ನು ಹಾಡುತ್ತಿದ್ದರಾದರೂ.. ತೆಲುಗು ತಿಳಿದಿರಲಿಲ್ಲ. ಅಂದಿನ ಸಾಮಾಜಿಕ ಪದ್ಧತಿಯಂತೆ ಹೆಣ್ಣು ಮಕ್ಕಳು ಮನೆಯ ಹೊರಗೆ ಸಾರ್ವಜನಿಕವಾಗಿ ಹಾಡಲು ಅವಕಾಶವಿರಲಿಲ್ಲ. ಸಮಾರಂಭಗಳಲ್ಲಿಯು ಹಾಡುವುದು ನಿಶಿದ್ದವಾಗಿತ್ತು. ನೃತ್ಯ ಹಾಗೂ ಸಂಗೀತ ಕೇವಲ ದೇವದಾಸಿಯರಿಗೆ ಮೀಸಲಿದ್ದ ಕಾಲ.


ಪಟ್ಟಮಾಳ್ ಹಬ್ಬದ ದಿನಗಳಲ್ಲಿ ಅವರಿವರ ಮನೆಗೆ ಹೋದಾಗ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ತಂದೆ ಅವರನ್ನು ಸಂಗೀತ ಕಚೇರಿಗಳಿಗೆ, ರಾಮನವಮಿ ಹಾಗೂ ತ್ಯಾಗರಾಜರ ಆರಾಧನಾ ಸಂದರ್ಭದಲ್ಲಿ ಕರೆದುಕೊಯ್ಯುತ್ತಿದ್ದಾಗ ಅಲ್ಲಿ ಕೇಳಿದ ಹಾಡುಗಳನ್ನು ಅವರ ನೆನಪಿನ ಶಕ್ತಿಯಿಂದ ಹಾಗೂ ಪ್ರತಿಭೆಯಿಂದ ಮತ್ತೆ ಹಾಗೆಯೇ ಅನುಕರಿಸಿ ಹಾಡುತ್ತಿದ್ದರು. 


ನಾಲ್ಕು ವರ್ಷದ ಮಗುವಾಗಿದ್ದಾಗಿನಿಂದ ಅವರ ತಂದೆ ಶ್ಲೋಕಗಳನ್ನು ಹೇಳಿಕೊಡುತ್ತಿದ್ದರು. ಬೆಳಗ್ಗಿನ ಜಾವ ಮೂರು ಗಂಟೆಗೆ ಎದ್ದು ಆಕೆ ಶ್ಲೋಕಗಳನ್ನು ಪಠಿಸುತ್ತಾ ಮನನ ಮಾಡಿಕೊಳ್ಳುತ್ತಿದ್ದರು. ಇದು 6 ಗಂಟೆಯವರೆಗೂ ಮುಂದುವರೆಯುತ್ತಿತ್ತು. ಎಂಟು ಗಂಟೆಯ ನಂತರ ಪುನಃ ಪ್ರಾರಂಭವಾಗುತ್ತಿತ್ತು. ನಿತ್ಯವೂ ಸಂಜೆ ದೀಪ ಹಚ್ಚುವ ಸಮಯದಲ್ಲಿ ಶ್ಲೋಕಗಳ ಪಠಣ, ಮನನ ನಡೆಯುತ್ತಿದ್ದವು. ತಂದೆ ಹೇಳುವ ಶ್ಲೋಕಗಳನ್ನು ಶ್ರದ್ಧೆಯಿಂದ ಕೇಳಿಯೇ ಅದನ್ನು ಕಲಿಯುತ್ತಿದ್ದರು. 


ಪಟ್ಟಮ್ಮಾಳ್ ರವರಿಗೆ ಒಬ್ಬ ಗುರುವಿನ ಬಳಿ ಸಾಂಪ್ರದಾಯಕವಾಗಿ ಸಂಗೀತ ಕಲಿಯುವ ಅವಕಾಶ ದೊರೆಯಲಿಲ್ಲ. ಅದಕ್ಕೆ ಕಾರಣ ಎರಡು ಮೊದಲನೆಯದು ಆರ್ಥಿಕ ಪರಿಸ್ಥಿತಿ ಹಾಗೂ ಅವರಿದ್ದ ಸ್ಥಳ.


ಅವರಿಗೆ ಆರು ವರ್ಷವಿದ್ದಾಗ ತಮ್ಮನ ಜೊತೆಗೂಡಿ ಮದುವೆ ಸಮಾರಂಭವೊಂದರಲ್ಲಿ ಹಾಡಿದಾಗ ಎಲ್ಲರೂ ಮೆಚ್ಚಿದರು. ಅದನ್ನು ಕೇಳಿಯೇ ಹೆಸರು ತಿಳಿಯದ ಮಹನೀಯರೊಬ್ಬರು ಆಕೆಯ ಸಾಮರ್ಥ್ಯವನ್ನು ಗುರುತಿಸಿ ಅವರ ಮನೆಯಲ್ಲಿ 20 ದಿನಗಳ ಕಾಲ ನೆಲೆಸಿ ಪಟ್ಟಮ್ಮಾಳ್ ರವರಿಗೆ ಸಾಂಪ್ರದಾಯಿಕವಾಗಿ ಸಂಗೀತ ಪಾಠ ಮಾಡುತ್ತಾರೆ. ಅವರನ್ನು ತೆಲುಗು ವಾದಿಯಾರ್ ಎಂದೇ ನೆನಪಿಸಿಕೊಳ್ಳುತ್ತಾರೆ ಪಟ್ಟಮ್ಮಾಳ್. 


ನೈನಾ ಪಿಳ್ಳೈ ಅವರನ್ನು ಮಾನಸಿಕ ಗುರುವೆಂದು ಪರಿಗಣಿಸಿ, ಅವರ ಶೈಲಿಯನ್ನೇ ಅನುಕರಿಸಿ ತಮ್ಮ ಸಂಗೀತವನ್ನು ತಾವೇ ರೂಪಿಸಿಕೊಳ್ಳುತ್ತಿದ್ದರು.


ಪಟ್ಟಮ್ಮಾಳ್ ಕಂಚೀಪುರದಲ್ಲಿ ಕಲಿಯುತ್ತಿದ್ದ ಶಾಲೆಯ ಮುಖ್ಯಶಿಕ್ಷಕಿ ಅಮ್ಮುಕುಟ್ಟಿ ಅಮ್ಮಾಳ್ ಪಟ್ಟಮ್ಮಾಳರ ಬದುಕು ಬದಲಿಸಿದ ಮುಖ್ಯ ವ್ಯಕ್ತಿ ಎಂದರೂ ತಪ್ಪಾಗಲಾರದು. ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನೃತ್ಯ ರೂಪಕದಲ್ಲಿ ಪಾತ್ರವಹಿಸಿದ್ದ ಪಟ್ಟಮ್ಮಾಳ್ ರನ್ನು ಮೆಚ್ಚಿ ಚಿನ್ನದ ಪದಕವನ್ನು ಘೋಷಿಸುತ್ತಾರೆ ಕಂದಸ್ವಾಮಿ. ಅದು 'ದಿ ಹಿಂದೂ' ಪತ್ರಿಕೆಯಲ್ಲಿಯೂ ಪ್ರಕಟವಾಗುತ್ತದೆ. ಆದರೆ, ಇದಕ್ಕೆ ಮನೆಯಲ್ಲಿ ತಂದೆಯಿಂದ ಹಾಗೂ ಹಲವರಿಂದ ವಿರೋಧ ಬಂದಾಗ ಬೆಂಬಲಕ್ಕೆ ನಿಂತದ್ದು ಅಮ್ಮುಕುಟ್ಟಿ ಅಮ್ಮಾಳ್. ನಂತರ 10 ವರ್ಷದ ಬಾಲಕಿ ಪಟ್ಟಮ್ಮಾಳರ ಹಾಡುಗಳ ಧ್ವನಿಮುದ್ರಣ ನಡೆಯುತ್ತದೆ. ಹೀಗೆ ಶುರುವಾದ ಯಶಸ್ಸಿನಿಂದ ಮದರಾಸಿಗೆ ಹಲವಾರು ಸಂಗೀತ ಸಭೆಗಳಿಂದ ಆಹ್ವಾನ ಬರಲಾರಂಭಿಸಿದಾಗ ಸಂಸಾರ ಸಮೇತರಾಗಿ ಎಲ್ಲರೂ ಮದರಾಸಿನಲ್ಲಿ ನೆಲೆಸುತ್ತಾರೆ.


ಸಂಗೀತಗಾರರಲ್ಲಿ ಮಹಿಳಾ ಹಾಡುಗಾರರು ರಾಗ ಕೀರ್ತನೆ, ಜಾವಳಿ ಮತ್ತು ಪದಗಳನ್ನು ಮಾತ್ರ ಹಾಡಬೇಕು. ಪಲ್ಲವಿ, ಕಲ್ಪನಾ ಸ್ವರಗಳನ್ನು ಹಾಡುವಂತಿಲ್ಲ ಎಂಬ ಅಲಿಖಿತ ನಿಯಮವನ್ನು ಪಾಲಿಸುತ್ತಿದ್ದರು ಎಲ್ಲರೂ. ಪಲ್ಲವಿ ಹಾಗೂ ಕಲ್ಪನಾ ಸ್ವರಗಳನ್ನು ಹಾಡಲು ಅಪಾರ ಬುದ್ಧಿಮತ್ತೆ ಹಾಗೂ ಕಲಾಪ್ರೌಢಿಮೆ ಇರಬೇಕೆಂಬ ಅಭಿಪ್ರಾಯವಿತ್ತು. ಎಲ್ಲಾ ಅಡೆತಡೆಗಳನ್ನು ನಿವಾರಿಸಿಕೊಂಡು ಪಲ್ಲವಿ ಹಾಡುವಲ್ಲಿ ಪರಿಣಿತಿ ಸಾಧಿಸಿದ ಪಟ್ಟಮ್ಮಾಳರನ್ನು 'ಪಲ್ಲವಿ ಪಟ್ಟಮ್ಮಾಳ್' ಎಂದು ಜನ ಗುರುತಿಸುವಂತಾಯಿತು.


1940ರಲ್ಲಿ ಈಶ್ವರನ್ ಅವರನ್ನು ವಿವಾಹವಾಗಿದ್ದು ವೈಯಕ್ತಿಕ ಹಾಗೂ ವೃತ್ತಿ ಜೀವನಕ್ಕೆ ಬೆಂಬಲ, ಸಹಕಾರ ಸಿಕ್ಕಿತು. 1944 ರಲ್ಲಿ ಈಶ್ವರನ್ ತಮ್ಮ ವೃತ್ತಿಯನ್ನೇ ತ್ಯಜಿಸಿ ಪಟ್ಟಮ್ಮಾಳರ ಸಂಗೀತ ಸಾಧನೆಯ ಅಭಿವೃದ್ಧಿಗಾಗಿ ಶ್ರಮಿಸಿತೊಡಗಿದರು. ಪಟ್ಟಮ್ಮಾಳರ ಸಂಗೀತಗೋಷ್ಠಿಗಳ ನಿರ್ವಹಣೆ ಮಾಡಲಾರಂಭಿಸಿದರು. 


ಸಂಗೀತಕ್ಷೇತ್ರದ ಸಂಪ್ರದಾಯಗಳನ್ನು ಮುರಿದು ಕಟ್ಟಿದ ಹೆಗ್ಗಳಿಕೆ ಪಟ್ಟಮ್ಮಾಳರದ್ದು. ಪಲ್ಲವಿಯನ್ನು ಹಾಡಿದ್ದು ಮಾತ್ರವಲ್ಲದೆ, ತಮ್ಮ ಕಚೇರಿಗಳಲ್ಲಿ ಪಲ್ಲವಿಯ ವಿಸ್ತರಣೆಯನ್ನೇ ಪ್ರಮುಖವಾಗಿಸಿಕೊಂಡು ಹೊಸ ಪದ್ದತಿಗೆ ನಾಂದಿ ಹಾಡಿದರು. ಸಂಗೀತಗೋಷ್ಠಿಗಳಲ್ಲಿ ಸುಮಾರು 2 ಗಂಟೆಗಳ ಕಾಲ ಪಲ್ಲವಿಯನ್ನೇ ಹಾಡಬಲ್ಲ ಸಾಮರ್ಥ್ಯ ಅವರದಾಗಿತ್ತು. ತೆಲುಗು, ಸಂಸ್ಕೃತ ಹಾಗೂ ಕನ್ನಡ ಹಾಡುಗಳನ್ನು ಕಲಿಯುವಾಗ ಅವುಗಳ ಅರ್ಥದ ಬಗ್ಗೆ, ಉಚ್ಚಾರಣೆ ಬಗ್ಗೆ ಹೆಚ್ಚು ಅಸ್ಥೆ ವಹಿಸುತ್ತಿದ್ದರು.


ಮೊದಲು ಲಯಕ್ಕೆ ಪ್ರಾಶಸ್ತ್ಯ ನೀಡುತ್ತಿದ್ದವರು ನಂತರ ಭಾವಕ್ಕೆ ಪ್ರಾಮುಖ್ಯತೆ ನೀಡತೊಡಗಿದರು. ಸಂಕೀರ್ಣತಾಳಗಳ ಆವರ್ತನವನ್ನು ಸುಲಭವಾಗಿ ಹಾಡುವ ಶೈಲಿ ಅವರದ್ದಾಗಿತ್ತು. ಮದುವೆಯ ಮೊದಲ ವರ್ಷದ ಹೊರತಾಗಿ ಇನ್ನಾವ ಸಮಯದಲ್ಲೂ ಪಟ್ಟಮ್ಮಾಳರ ಸಂಗೀತ ಕಚೇರಿ ಇಲ್ಲದ ಕಾಲವಿರಲಿಲ್ಲ. ಹಬ್ಬದ ಸಮಯದಲ್ಲಂತೂ ತಿಂಗಳಿಗೆ ಸರಾಸರಿ 20 ಕಚೇರಿಗಳಿರುತ್ತಿದ್ದವು. ಒಂದೇ ತಿಂಗಳಲ್ಲಿ 27 ಗಾಯನ ಕಾರ್ಯಕ್ರಮಗಳನ್ನು ನೀಡಿ ದಾಖಲೆಯನ್ನೂ ನಿರ್ಮಿಸಿದ್ದಾರೆ. ಸಾಮಾನ್ಯವಾಗಿ ಒಂದೊಂದು ಗೋಷ್ಟಿಯೂ ನಾಲ್ಕು ಗಂಟೆಗಳ ಅವಧಿಯವು.


ಅವರ ಸಮಕಾಲೀನರಾದ ಎಂ. ಎಸ್ ಸುಬ್ಬಲಕ್ಷ್ಮಿ, ಎಂ. ಎಲ್ ವಸಂತಕುಮಾರಿ ಹಾಗೂ ಪಟ್ಟಮ್ಮಾಳರನ್ನು ಕರ್ನಾಟಕ ಸಂಗೀತದ ಮಹಿಳಾ ತ್ರಿಮೂರ್ತಿಗಳೆಂದೇ ಪರಿಗಣಿಸುತ್ತಿದ್ದರು. 


ಪಟ್ಟಮ್ಮಾಳ್ ಅವರ ಕೊನೆಯ ತಮ್ಮ ಡಿ. ಕೆ ಜಯರಾಮನ್ ಅವರನ್ನು ತಮ್ಮ ಶಿಷ್ಯರನ್ನಾಗಿಸಿಕೊಂಡಿದ್ದರು. ಪಟ್ಟಮ್ಮಾಳರ ಸೊಸೆ ಲಲಿತಾ ಸಹ ಅವರಲ್ಲಿ ಸಂಗೀತ ಕಲಿತು, ಅವರೊಡನೆ ಕಚೇರಿ ನೀಡುವ ಮಟ್ಟಕ್ಕೆ ಬೆಳೆದರು. ಮೊಮ್ಮಗಳಾದ ನಿತ್ಯಶ್ರೀ ಮಹದೇವನ್ ಅವರಿಗೂ ಪಟ್ಟಮ್ಮಾಳರೇ ಗುರುವಾಗಿದ್ದರು.


ಶಿಸ್ತಿನ ಜೀವನ ನಡೆಸುತ್ತಿದ್ದ ಪಟ್ಟಮ್ಮಾಳರು ತಮ್ಮ ಶಿಷ್ಯರೂ ಶಿಸ್ತಿನಿಂದಿರಬೇಕೆಂದು ಅಪೇಕ್ಷಿಸುತ್ತಿದ್ದರು. ಸಂಗೀತ ಪಾಠಗಳನ್ನು ಯಾರೂ ಬರೆದುಕೊಳ್ಳುವಂತಿರಲಿಲ್ಲ. ಮೌಖಿಕವಾಗಿ ಹೇಳಿಕೊಟ್ಟದ್ದನ್ನು ಪುನರಾವರ್ತಿಸುತ್ತಲೇ ಕಲಿಸುತ್ತಿದ್ದರು. 


ಕೌಲಾಲಂಪುರದಿಂದ ಬಂದು ಸಂಗೀತ ಕಲಿಯುತ್ತಿದ್ದ ಶಿಷ್ಯ ಚೌ-ಚ್ಯೂ ಸೆನ್ ನ ಗ್ರಹಣಶಕ್ತಿ, ವಾಕ್ ಸಾಮರ್ಥ್ಯ ಹಾಗೂ ಕಲಿಕಾ ವೈಖರಿಯಿಂದ ಸಂಪ್ರೀತರಾಗಿದ್ದರು. ಆತನ ಪ್ರತಿಭೆಗೆ ಸಾಣೆ ಹಿಡಿದು ಆಶು ಕೃತಿಗಳನ್ನು ರಚಿಸುವ ಮಟ್ಟಕ್ಕೆ ಆತನನ್ನು ಬೆಳೆಸಿದರು. ಫ್ರೆಂಚ್, ಜರ್ಮನ್, ಅಮೆರಿಕ, ಕೆನಡಾ, ಜಪಾನ್, ಸಿಂಗಾಪುರದಿಂದೆಲ್ಲಾ ಬಂದು ಪಟ್ಟಮ್ಮಾಳರ ಶಿಷ್ಯತ್ವ ಪಡೆದವರಿದ್ದಾರೆ. 


ಇವರ ಕುರಿತು ಹೇಳಲು ಹೊರಟರೆ ಬಹಳಷ್ಟು ಪ್ರಸಂಗಗಳಿವೆ. ಅಲ್ಲದೇ, ನೀವು ಸಂಗೀತಾಸಕ್ತರಾಗಿದ್ದರೆ ಇವರ ಕೃತಿಗಳು ಹಾಗೂ ರಾಗಗಳ ಪ್ರಸ್ತಾಪವಿರುವ ಹಲವಾರು ಸಂಗತಿಗಳು ಸೆಳೆಯುತ್ತವೆ. ಇವರಿಗೆ ಬಂದ ಸನ್ಮಾನ, ಮನ್ನಣೆ ಹಾಗೂ ಪ್ರಶಸ್ತಿಗಳು.. ಇವರ ಕುರಿತು ಹೇಳಿರುವ ಮಾತುಗಳು ಸಂಗೀತ ದೈತ್ಯರೊಡನೆ ಸ್ಪರ್ಧೆ ಹೇಗಿತ್ತು ಎಂಬುದು ತಿಳಿಯುತ್ತದೆ. 


ಅವರು ಯಾವಾಗಲೂ ಧರಿಸುತ್ತಿದ್ದ, ತಂದೆ ಮದುವೆಯಲ್ಲಿ ಕೊಟ್ಟಿದ್ದ ವಜ್ರದ ನೆಕ್ಲೆಸ್ ಅನ್ನು ತೆಗೆದಿರಿಸಿದ್ದೇಕೆ ಎಂಬುದನ್ನು ಓದಿ ತಿಳಿಯಿರಿ. ಅಂದ ಹಾಗೆ ಇದು ಇವರ ವ್ಯಕ್ತಿಚಿತ್ರಣಕ್ಕೆ ಕೇವಲ ಪ್ರವೇಶಿಕೆಯಷ್ಟೇ..


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ