ಪುಸ್ತಕದ ಶೀರ್ಷಿಕೆ : ಹಿಡಿಯಲ್ಲಿ ಹಸಿಮಣ್ಣು
ಲೇಖಕರು : ಡಾ. ಬಿ. ಎನ್. ದಾಕ್ಷಾಯಿಣಿ
ಪ್ರಕಾಶಕರು : ಉದಯ ಪ್ರಕಾಶನ
ಪ್ರಥಮ ಮುದ್ರಣ : 2001
ಪುಟಗಳು : 103
ಲಭ್ಯತೆ : ಹಳೆಯ ಪುಸ್ತಕಗಳ ಅಂಗಡಿ
ಸುಪ್ರೀತ್ ಕೆ. ಎನ್ ಅವರ ಸಾವು ಕಾದಂಬರಿ ಓದಿದ ನಂತರ ಯಾವುದಾದರೂ ಲೈಟ್ ರೀಡಿಂಗ್ ಬೇಕಿತ್ತು. ಹಾಗೆಂದು ಹಿಡಿದ ಈ ಕಥಾ ಸಂಕಲನ ಸಾವಿನ ವಿಷಯಗಳನ್ನು ಮತ್ತಷ್ಟು ಗಾಢ ಆಲೋಚನೆಗೆ ಒಳಪಡಿಸಿತು ಎಂದರೂ ತಪ್ಪಾಗಲಾರದು. ಸಾಮಾನ್ಯವಾಗಿ ವೈದ್ಯರು ಬರೆದ ಬರಹಗಳನ್ನು ಓದುವಾಗ ಅಲ್ಲಿ ರೋಗ ಹಾಗೂ ಸಾವಿನ ಕುರಿತಾದ ಉಲ್ಲೇಖಗಳಿದ್ದಾಗ.. ನೆಗೆಟಿವಿಟಿ ಯತ್ತ ಸೆಳೆಯದಿದ್ದರೂ.. ರೋಗಗಳು ಹಾಗೂ ಚಿಕಿತ್ಸೆಯ ಕುರಿತಾದ ಮಾಹಿತಿಗಳಿದ್ದರೂ.. ಅವರ ನೇರವಾದ ನೋಟ ಹಾಗೂ ಅನುಭವ, ರೋಗಗಳ ವಿಚಾರ ಹಾಗೂ ಸಾವಿನ ವಿಚಾರ ಸಾಮಾನ್ಯವಾಗಿ ತಲ್ಲಣವನ್ನುಂಟು ಮಾಡುವಂತಹದ್ದೇ ಆಗಿರುತ್ತದೆ ಎನ್ನುವುದು ನನ್ನ ಓದಿನ ಮಿತಿಯಲ್ಲಿನ ನನ್ನ ಅನುಭವ.
ಡಾ. ಬಿ. ಎನ್. ದಾಕ್ಷಾಯಿಣಿ ಅವರು ಹುಟ್ಟಿದ್ದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ. ತಂದೆ ಶ್ರೀ ಬಿ. ನಂಜಯ್ಯ ಅವರು ಜಿಲ್ಲಾಧಿಕಾರಿಯಾಗಿದ್ದವರು. ತಾಯಿ ಶ್ರೀಮತಿ ಎನ್. ಎಂ ಪಾರ್ವತಮ್ಮ. ಪತಿ ನೇತ್ರ ತಜ್ಞ ಡಾಕ್ಟರ್ ಎನ್. ಎಂ ಮಲ್ಲಿಕಾರ್ಜುನಯ್ಯ. ಇವರು ಮಕ್ಕಳ ತಜ್ಞರು. ಮೂರು ದಶಕಗಳಿಂದ ಬರೆಯುತ್ತಿದ್ದ ಇವರು ಪ್ರಕಟಿತ ಮೊದಲ ಪುಸ್ತಕವೇ 'ಹಿಡಿಯಲ್ಲಿ ಹಸಿಮಣ್ಣು'. ಈ ಕಥಾ ಸಂಕಲನದಲ್ಲಿ ಆರು ಕಥೆಗಳಿವೆ.
ಹಿಡಿಯಲ್ಲಿ ಹಸಿಮಣ್ಣು : ಪ್ರೀತಿ. ಪಿ. ಚೌದರಿ ಐ.ಎ.ಎಸ್ ಪದವೀಧರೆಯಾಗಿದ್ದವಳು. ಈಗ ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಗರ್ಭಕೋಶದ ಕ್ಯಾನ್ಸರ್ ನಿಂದ ನರಳುತ್ತಾ ಮಲಗಿದ್ದಳು. ಅದ್ಭುತ ಪ್ರತಿಭಾವಂತೆ, ಬುದ್ಧಿವಂತೆ, ರೂಪವತಿ, ಗರ್ವವಿಲ್ಲದ ಸರಳ ಸ್ವಭಾವದ ಪ್ರೀತಿಗೆ ಕ್ಯಾನ್ಸರ್ ನಂತಹಾ ರೋಗ ಆವರಿಸಿತ್ತು. ಪ್ರೀತಿಯಿಂದ ನೋಡಿಕೊಳ್ಳುವ ಗಂಡ ಹಾಗೂ ಮಗನಿದ್ದರೂ ಅವಳಿಗೆ ಅರಿವಿಲ್ಲದೆಯೇ ಅವಳ ಹಿಂದಿನ ಬದುಕು ನೆನಪಾಗುತ್ತಿತ್ತು. ಒಳಮನಸ್ಸಿನ ಆಸೆಗಳು ಆಕೆಯನ್ನು ತುಡಿಯುವಂತೆ ಮಾಡುತ್ತಿತ್ತೆಂದರೂ ತಪ್ಪಾಗಲಾರದು.
ಚಿಕ್ಕತಾಯಿಗೆ ನಾಲ್ಕು ಗಂಡು ಮಕ್ಕಳಿದ್ದರು. ಗಂಡ ಕುಡಿದು ಸತ್ತು ಹೋಗಿದ್ದ. ಆಕೆ ಜೀತ ಮಾಡಿ ಬದುಕುತ್ತಿದ್ದವಳು. ಅಪರಾತ್ರಿಯಲ್ಲಿ ಸಿಕ್ಕ ಮಗು ಅವಳ ಮಗಳಾಗಿ ಎಲ್ಲರ ಬಾಯಲ್ಲಿ ಪುಟ್ಟಿಯಾಗಿದ್ದಳು. ಚಿಕ್ಕತಾಯಿಯ ಮನೆಯಲ್ಲಿ ಅನುಕೂಲವಿಲ್ಲದ್ದರಿಂದ.. ಪುಟ್ಟಿಯ ಕಲಿಯುವ ಆಸೆ ಕಮರಿತ್ತು. ಡಾಕ್ಟರ ಮನೆಗೆ ಕೆಲಸಕ್ಕೆ ಹೋಗುವಂತಾಗಿತ್ತು. ಅಲ್ಲಿ ಒಮ್ಮೆ ಡಾಕ್ಟರರ ಹೆಂಡತಿಯ ಹೊಡೆತ ಕಂಡು ಚಿಕ್ಕತಾಯಿ ಆಕೆಯ ಮೇಲಿನ ಮಮತೆಯಿಂದ ಕೆಲಸಕ್ಕೆ ಕಳುಹಿಸುವುದಿಲ್ಲ ಎಂದಿದ್ದಳು. ಆದರೆ ಪುಟ್ಟಿಯ ಮುಂದಿನ ಭವಿಷ್ಯವೇ ಬದಲಾಗಿತ್ತು. ಮಕ್ಕಳಿಲ್ಲದ ಅಪಾರ ಶ್ರೀಮಂತರಾಗಿದ್ದ ರಿಚರ್ಡ್ ಪಿಂಟೋ ದಂಪತಿಗಳ ದತ್ತು ಮಗಳಾದ ಪುಟ್ಟಿ 'ಪ್ರೆಟ್ಟಿ'ಯಾಗಿ ನಂತರ ಪ್ರೀತಿ ಆಗಿದ್ದಳು. ಅದಾದ ನಂತರ ಚಿಕ್ಕತಾಯಿಯ ಮೇಲಿನ ಮಮತೆಯಿಂದ ಒಂದೆರಡು ಬಾರಿ ಯಾರಿಗೂ ತಿಳಿಯದಂತೆ ಬಂದಿದ್ದಳು. ಡಾಕ್ಟರ್ ಆಗಲು ಮನಸ್ಸಿಲ್ಲದ ಪ್ರೀತಿ ತಾನು ಐಎಎಸ್ ಅಧಿಕಾರಿಯಾಗುತ್ತೇನೆಂದು ಹೊರಟು ತನ್ನ ಗುರಿ ಸಾಧಿಸಿದ್ದಳು ಪ್ರವೀಣ್ ಚೌದರಿಯನ್ನು ಪ್ರೀತಿಸಿ ಮದುವೆಯೂ ಆಗಿದ್ದಳು. ಮುದ್ದಾದ ಗಂಡು ಮಗುವಿಗೆ ಜನ್ಮವಿತ್ತಿದ್ದಳು. ಆದರೆ, ತಾನು ಬೆಳೆದ ಮನೆ ವಾತಾವರಣದತ್ತ ಹಾಗೂ ಅಲ್ಲಿನ ಆಹಾರ ಪದ್ಧತಿಯ ಅವಳಿಗೆ ತೀರದ ಒಲವು. ಆಸ್ಪತ್ರೆಯಲ್ಲಿರುವಾಗ ಒಮ್ಮೆ ಅವಳು ಬಯಸಿದಂತೆ ಅವಳ ಹಿಡಿಯಲ್ಲಿ ಹಸಿಮಣ್ಣು..! ಅದು ಕೇವಲ ಮಣ್ಣಲ್ಲ. ಅದು ಹೇಗೆ..? ಎಂಬುದನ್ನು ನೀವೇ ಓದಿ ನೋಡಿ.
ಗೋರಿಯ ಮೇಲೊಂದು ಗೋರಿ : ಸರಯೂಗೆ ಬಾಲ್ಯದಿಂದಲೂ ಪ್ರೇಮದ ದ್ಯೋತಕವಾದ ತಾಜ್ ಮಹಲ್ ಅನ್ನು ಕಣ್ಣಾರೆ ಕಾಣಬೇಕೆಂಬ ಮಹದಾಸೆ. ಶಾಲಾ ದಿನಗಳ ಪಠ್ಯದಲ್ಲಿ "ಷಹಜಹಾನ್ ತನ್ನ ಅತ್ಯಂತ ಪ್ರೀತಿಪಾತ್ರಳದ ಮಡದಿ ಮಮ್ತಾಜ್ ಬೇಗಮ್ ಳ ಸವಿ ನೆನಪಿಗೆ ಸುಂದರವಾದ ತಾಜ್ ಮಹಲನ್ನು ಕಟ್ಟಿಸಿದನು." ಎನ್ನುವುದನ್ನು ಓದಿ ಆಕೆ ಕಲ್ಪನಾ ಲೋಕದಲ್ಲಿ ಕಳೆದು ಹೋಗಿದ್ದಳು. ಆಕೆಯ ಅಕ್ಕ ಮಧುಚಂದ್ರಕ್ಕೆ ಹೋಗಿ ಬಂದಾಗ ಅಲ್ಲಿಂದ ತಾಜ್ ಮಹಲ್ ನ ಪುಟ್ಟ ಪ್ರತಿಕೃತಿಯೊಂದನ್ನು ತಂದು ಕೊಟ್ಟಿದ್ದಳು. ಅಲ್ಲದೆ, ಹುಣ್ಣಿಮೆಯ ಬೆಳಕಲ್ಲಿನ ತಾಜ್ ಮಹಲ್ ಕುರಿತು ಹೇಳಿ ಅವಳಿಗೆ ಆಸೆ ಹೆಚ್ಚಿಸಿದ್ದಳು. ಸರಯೂ ಮದುವೆಯಾಗಿ, ಮಕ್ಕಳಾದ ನಂತರವೂ ಆ ಆಸೆ ಈಡೇರಿರಲಿಲ್ಲ. ಆದರೆ, ಅವಳ ಆಸೆಯನ್ನು ತೀರಿಸಿಕೊಳ್ಳುವ ಸಂಧರ್ಭ ಸಿಕ್ಕು ಅಲ್ಲಿ ಹೋದಾಗಲೇ ಅವಳಿಗೆ ಭ್ರಮನಿರಸನವಾದದ್ದು. ಅದಕ್ಕೆ ಕಾರಣವೇನೆಂದು ನೀವೇ ಓದಿ ನೋಡಿ.
ತಲ್ಲಣಿಸದಿರು ಕಂಡ್ಯಾ : ಯಾರ ಮೇಲೂ ಸಿಲುಕದಿದ್ದ ಸರಳ ಸ್ನೇಹಮಯಿಯಾಗಿದ್ದ ಡಾಕ್ಟರ್ ಮೇಘ ಸ್ವಭಾವ ಈಗ ಸಂಪೂರ್ಣ ಬದಲಾಗಿತ್ತು. ಅದಕ್ಕೆ ಕಾರಣವೂ ಇತ್ತು ಆಕೆಗೆ ಬಂದಿದ್ದ ಸ್ತನದ ಕ್ಯಾನ್ಸರ್. ಅದಕ್ಕೆ ಆಪರೇಷನ್ ಯಶಸ್ವಿಯಾಗಿದ್ದರೂ.. ಅವಳ ಮುಂದಿನ ಚಿಂತೆ ತನ್ನ ಬದುಕು ಅಲ್ಪಾಯುವಾಗಿದ್ದರೆ..! ಕ್ಯಾನ್ಸರ್ ಮತ್ತೆ ಮರುಕಳಿಸಿದರೆ..! ಎಂಬುದು. ಗಂಡ ಮುರಳಿಗೆ ಮಾತ್ರ ಈ ವಿಚಾರವನ್ನು ಹೇಳಿದ್ದಳು. ತಂದೆ-ತಾಯಿ, ಮಗನಿಂದ ಈ ವಿಚಾರ ಮುಚ್ಚಿಟ್ಟಿದ್ದಳು. ಮಗ ಸದ್ಯಕ್ಕೆ ದೂರದ ಹಾಸ್ಟೆಲ್ ನಲ್ಲಿದ್ದನು. ಆದರೆ, ಅವಳ ಯೋಚನೆಯನ್ನೇ ಬದಲಾಯಿಸುವ ಘಟನೆಯೊಂದು ನಡೆದಿತ್ತು.
ರೋಗಿಯಾಗಿ ಬಂದಿದ್ದ ಚೆಲುವರಾಜು ಕೃಷಿಕ, ಅನಕ್ಷರಸ್ಥ. ಹೊಟ್ಟೆ-ಬಟ್ಟೆಗೆ ನೇರವಾಗಿದ್ದ ಜೀವನ. ಅಲ್ಲದೇ, ಹೊಸದಾಗಿ ಮದುವೆಯಾಗಿದ್ದವನು. ಹೆಂಡತಿ ಸರಸು ಆತನ ಹೊಟ್ಟೆ ನೋವಿನ ಕಾರಣದಿಂದ ಆತನನ್ನು ಅಲ್ಲಿಗೆ ಕರೆತಂದಿದ್ದಳು. ಇಬ್ಬರದ್ದೂ ಮತ್ತೆಮತ್ತೆ ನೋಡುವಂತಹಾ ಜೋಡಿ. ಆದರೆ, ಚೆಲುವರಾಜುವಿಕೆಯ ಇದ್ದದ್ದು ಕ್ಯಾನ್ಸರ್. ಅದಕ್ಕಾಗಿ ಅವನ ಆಸ್ತಿ, ಸರಸುವಿನ ಒಡವೆ ಎಲ್ಲವೂ ಕರಗಿತು. ಮೇಘ ಎಲ್ಲರನ್ನೂ ಸಂಪರ್ಕಿಸಿ, ಆತನ ರೋಗದ ಮತ್ತಷ್ಟು ಮಾಹಿತಿಗೆಂದು ಆಯ್ದುಕೊಂಡದ್ದು 'ಲೆಪ್ರಾಟಮಿ'ಯನ್ನು. ಅವರಿಗೆ ಅದೆಲ್ಲವನ್ನು ವಿವರಿಸಲಾಗಿರಲಿಲ್ಲ ಮೇಘಳಿಗೆ. ಅಷ್ಟರಲ್ಲಿ ಸರಸು ಗರ್ಭಿಣಿಯೂ ಆಗಿದ್ದಳು.
ಮೇಘಳಿಗೆ ಈ ಸಂದರ್ಭದಲ್ಲಿ ಎರಡು ಆಲೋಚನೆ ಬರುತ್ತದೆ. ರೋಗಿಗೆ ಅವನ ದೇಹದಲ್ಲಿ ಉದ್ಭವಿಸಿರುವ ಅರ್ಬುದ ಕಣಕಣವಾಗಿ ದೇಹವನ್ನು ಆವರಿಸುವ ಕುರಿತ ಅರಿವಿಲ್ಲ. ಆದರೆ, ತನಗೆ ಅದರ ಅರಿವಿದೆ. ಅದೇ ತಲ್ಲಣಕ್ಕೆ ಕಾರಣವಾಗಿರಬಹುದು. ಅವರ ಮಾನಸಿಕ ನೆಮ್ಮದಿಗೆ ಕಾರಣ ಅವರ ಅಜ್ಞಾನವೇ..? ಅಮಾಯಕತೆಯೇ..? ಮೌಢ್ಯವೇ..?
ಮತ್ತೊಂದು ವಿಚಾರ. ಇದ್ದಕ್ಕಿದ್ದಂತೆಯೇ ಹಾರ್ಟ್ ಅಟ್ಯಾಕ್ ಆಗಿ ಸಾಯುವುದಕ್ಕಿಂತ ತನ್ನ ಪರಿಸ್ಥಿತಿ ಎಷ್ಟೋ ಮೇಲು. ಮುಂಜಾಗ್ರತೆ ವಹಿಸಿ ಜವಾಬ್ದಾರಿಯನ್ನೆಲ್ಲಾ ನಿರ್ವಹಿಸಿ ಅವಲಂಬಿಗಳಿಗೆ ಅನುಕೂಲ ಮಾಡಿಕೊಟ್ಟು ಹೋಗಬಹುದೆಂದು. ತನ್ನ ಅವಕಾಶದ ಕುರಿತ ಧನ್ಯತೆ.
ಚೆಲುವರಾಜುವಿನ ಮನೆಯವರಿಗೆ ಅವನ ಬದುಕಿನ ಕಟುಸತ್ಯ ಅರಿವಾಯಿತೇ..? ರೋಗಿಯೊಬ್ಬನಿಂದಾಗಿ ಬದುಕಿನ ಕುರಿತು ತನ್ನ ನಿಲುವನ್ನೇ ಬದಲಿಸಿಕೊಂಡ ಡಾಕ್ಟರ್ ನ ಕಥೆ ಇದು. ಈ ಕತೆ ಹೆಚ್ಚು ಇಷ್ಟವಾಯಿತು.
ಜೀತ : ಡಾ. ಕರುಣಾಕರ್ ಗೆ ಬಂದ ಕರೆಯಿಂದ ಆತ ಚಿಕಿತ್ಸೆಗಾಗಿ ಪಾರ್ವತಿ ಸಿಸ್ಟರ್ ಅನ್ನು ಜೊತೆಗೂಡಿಸಿಕೊಂಡು ಫಾದರ್ ಸ್ಟೀವನ್ ಸನ್ ಅವರ ಮನೆಗೆ ಹೊರಟ. ಅಲ್ಲಿ ನೋಡಿದರೆ ತುರ್ತು ಚಿಕಿತ್ಸೆಯ ಅವಶ್ಯಕತೆಯಿತ್ತು. ಅಷ್ಟರಲ್ಲಿ ಪಾರ್ವತಿ ಅವರ ಮನೆಯಲ್ಲಿ ಜೀತಕ್ಕಿದ್ದ ಹುಡುಗ ರಾಬರ್ಟ್ ನನ್ನು ಕಂಡು ಪ್ರಜ್ಞೆ ತಪ್ಪಿ ಬಿದ್ದಳು. ರಾಬರ್ಟ್ ತಂದೆ ಆತನ ವಿದ್ಯಾಭ್ಯಾಸದ ಹಂಬಲಕ್ಕಾಗಿ ಮತಾಂತರಗೊಂಡು, ಹಾಸ್ಟೆಲ್ನಲ್ಲಿ ಅಡುಗೆಯವನಾಗಿ ಸೇರಿ, ಕ್ಷಯರೋಗ ಬಂದು ಸಾಯುವಾಗ ಫಾದರ್ ಸ್ಟೀವನ್ ಸನ್ ಗೆ ತನ್ನ ಮಗನ ಜವಾಬ್ದಾರಿಯನ್ನು ಒಪ್ಪಿಸಿದ್ದರು. ವಿದ್ಯಾಭ್ಯಾಸದ ಹಂಬಲಕ್ಕೆಂದೇ ಮತಾಂತರಗೊಂಡ ರಾಬರ್ಟ್ ಅವರ ಮನೆಯಲ್ಲಿ ಜೀತಕ್ಕಿದ್ದದ್ದೇಕೆ..? ಇಲ್ಲಿ ತಪ್ಪು ಯಾರದ್ದು..?? ಪಾರ್ವತಿಗೂ ರಾಬರ್ಟ್ ಗೂ ಇದ್ದ ಸಂಬಂಧವೇನು..?
ಒರಸರಿವೆ : ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ಮನೆಯಲ್ಲಿ ಮೂರನೇ ಹೆಣ್ಣುಮಗಳಾಗಿದ್ದವಳು ಮೃದುಲ. ಅಕ್ಕಂದಿರಿಂದ ಉಪಯೋಗಿಸಿ ಬಂದದ್ದನ್ನು ಉಪಯೋಗಿಸುತ್ತಿದ್ದವಳು. ಚೆನ್ನಾಗಿ ಓದಿ, ಉದ್ಯೋಗ ಸಂಪಾದಿಸಿ ತನ್ನ ಕಾಲ ಮೇಲೆ ತಾನು ನಿಂತಿದ್ದವಳು. ಮದುವೆಯಾದರೂ ಗಂಡನಿಂದ ಸಂಬಳವನ್ನು ನಿರೀಕ್ಷಿಸುವಂತಿರಲಿಲ್ಲ. ಒಬ್ಬ ಮಗ ಹಾಗೂ ಮಗಳಿದ್ದರು. ಪದೇಪದೇ ತೀವ್ರತರವಾಗಿ ಹೊಟ್ಟೆ ನೋವು ಬರುತ್ತಿದ್ದಾಗ ಆಕೆ ಚಿಂತೆಗೀಡಾದಳು. ಗರ್ಭಕೋಶವನ್ನು 10 ವರ್ಷದ ಹಿಂದೆಯೇ ತೆಗೆಸಿದ್ದರಿಂದ ಮತ್ತೇನು ಸಮಸ್ಯೆಯಾಗಿರಬಹುದೆಂದು ಡಾಕ್ಟರ್ ಬಳಿ ಹೋದಾಗ ಅವರು ಹೇಳಿದ್ದು ಕೇಳಿ ವಿಚಲಿತಳಾದಳು. ಆಕೆಯ ಗಂಡನಿಗೆ ಅದು ದೊಡ್ಡ ವಿಷಯವೇ ಆಗಿರಲಿಲ್ಲ.. ಆಪರೇಷನ್ ಗೆಂದು ಹಣ ಹೊಂದಿಸಲು ಪರದಾಡುತ್ತಿದ್ದಾಗ, ಯಾರಿಂದಲೂ ಕನಿಷ್ಠ ಸಹಾಯವೂ ಸಿಗಲಿಲ್ಲ. ಅವರ ಕಷ್ಟಕಾಲದಲ್ಲಿ ತಾನು ನೆರವಾಗಿದ್ದುದ್ದನ್ನು ನೆನೆಸಿಕೊಂಡಳು. ಅಷ್ಟಕ್ಕೂ ಆಕೆಗೆ ಬಂದಿದ್ದ ಆರೋಗ್ಯ ಸಮಸ್ಯೆಯೇನು..? ಅದು ನಿವಾರಣೆಯಾಯಿತೇ..?
"ಕೊಳೆ, ಧೂಳು, ಮಣ್ಣು-ಮಸಿ ಎಲ್ಲವನ್ನು ತನ್ನಲ್ಲಡಗಿಸಿಕೊಂಡು ಪರಿಸರವನ್ನು ಸ್ವಚ್ಛವಾಗಿಡುವ ಒರಸರಿವೆಯನ್ನು ಯಾರೂ ಶುದ್ಧಪಡಿಸೋಲ್ಲವೇಕೆ" ಎನ್ನುವ ಆಕೆಯ ಆಲೋಚನೆಗೆ ಉತ್ತರ ಸಿಕ್ಕಿತೇ..?
ದೀರ್ಘಸುಮಂಗಲೀ ಭವ : ಸುಮಂಗಲ ಬ್ಯಾಂಕ್ ಉದ್ಯೋಗಿಯಾಗಿ, ಕಥೆಗಾರ್ತಿಯೂ ಆಗಿದ್ದವಳು. ನಿಯತಕಾಲಿಕವೊಂದರ ಸಂಪಾದಕರಾಗಿದ್ದ ಚಂದ್ರಶೇಖರ್ ಜೊತೆಗೆ ಪ್ರೇಮ ವಿವಾಹವೂ ಆಗಿತ್ತು. ಅಲ್ಲದೇ.. ಅದು ಅಂತರ್ಜಾತೀಯ ವಿವಾಹ. ಇಬ್ಬರು ಮುದ್ದು ಮಕ್ಕಳು. ಎಲ್ಲರೊಡನೆ ಬೆರೆಯುತ್ತಿದ್ದವಳಾದರೂ.. ಜಾತೀಯತೆಯ ಸೋಂಕಿನಿಂದಾಗಿ ಎಲ್ಲರಿಂದ ದೂರವೇ ಉಳಿಯಬೇಕಾಗಿ ಬಂದಿತು. ಅಂತಹಾ ಸಂದರ್ಭದಲ್ಲಿ ತೀವ್ರ ಜ್ವರಕ್ಕೆ ಈಡಾದ ಗಂಡನ ರಿಪೋರ್ಟ್ ಬಂದಾಗ ಕುಸಿದೇ ಹೋಗಿದ್ದಳು.
ಆದರೂ.. ತನ್ನ ಆತಂಕವನ್ನು ಯಾರ ಬಳಿಯೂ ಹಂಚಿಕೊಂಡಿರಲಿಲ್ಲ. ತುಳಸಿ ಹಬ್ಬದ ದಿನ ತನ್ನ ಮಾಂಗಲ್ಯಭಾಗ್ಯ ಗಟ್ಟಿಯಾಗಲೆಂದು ಬೇಡಿಕೊಂಡು, ತನ್ನ ಬ್ಯಾಂಕಿನ ಸಹೋದ್ಯೋಗಿ ಪ್ರತಿಭಾಳ ಮನೆಗೆ ಹೋದಳು. ಆದರೆ, ಅವಳಿಗೆ ಅಂದು ಅಲ್ಲಿ ಕುಂಕುಮ ಸಿಗಲಿಲ್ಲ. ಬದಲಾಗಿ, ಆಕೆಯ ನಿರೀಕ್ಷೆಯನ್ನು ಮೀರಿದಂತೆ ಫ್ಯಾನ್ಸಿ ಸ್ಟೋರ್ ಇಟ್ಟಿದ್ದ ಗೆಳತಿ ಮಮ್ತಾಜ್ ಳಿಂದ ಅನಿರೀಕ್ಷಿತ ರೀತಿಯಲ್ಲಿ ಕುಂಕುಮ ದೊರೆತಿತ್ತು. ಜಾತಿ-ಮತಗಳನ್ನು ಮೀರಿ ಮಾನವತೆ ಗೆದ್ದ ಕಥೆ ಇಲ್ಲಿದೆ. ಅಲ್ಲಿಂದ ಬಂದ ನಂತರ ಆಕೆಗೆ ಮತ್ತೊಂದು ಆಘಾತ ಕಾದಿತ್ತು. ಅದೇನು..? ನೀವೇ ಓದಿ ನೋಡಿ.
ವೈದ್ಯ ಲೋಕದ ಕಥೆಗಳು, ಜನಸಾಮಾನ್ಯರ ಜೀವನದೊಂದಿಗೆ ತಳುಕು ಹಾಕಿಕೊಂಡ ಪರಿ ಇಲ್ಲಿದೆ. ರೋಗಗಳ ಕುರಿತ ಉಲ್ಲೇಖ ಹಾಗೂ ಚಿಕಿತ್ಸೆಯ ವಿವರಗಳು ಕಂಡುಬರುತ್ತವೆ. ನಾನು ಗಮನಿಸಿದಂತೆ.. ನಾವು ಹೆಚ್ಚಾಗಿ ಬಳಸುವ ಕ್ಯಾನ್ಸರ್ ಎನ್ನುವ ಪದಕ್ಕೆ ಅವರು ಪ್ರತಿಬಾರಿಯೂ ಅರ್ಬುದ ಎಂದೇ ಬಳಸುತ್ತಾರೆ. ಹೀಗೆ ವೈದ್ಯಕೀಯ ಕಥೆಗಳನ್ನು ಹಾಗೂ ಪ್ರಸಂಗಗಳನ್ನು ಬರೆಯುವಾಗ ಹೆಚ್ಚಿನ ಪದಗಳನ್ನು ಕನ್ನಡದಲ್ಲಿಯೇ ಉಲ್ಲೇಖಿಸಿದ್ದಾರೆ. ಆಂಗ್ಲ ಪದಗಳ ಬಳಕೆ ಕಡಿಮೆಯೇ.. ಇಲ್ಲಿ ಮಾನವೀಯತೆ ಹಾಗೂ ಅಂತಃಕರಣದ ಜೊತೆಗೆ ಜಾತಿ-ಮತಗಳನ್ನು ಮೀರಿ ನಿಂತ ಬಗೆ ಇದೆ. ಸೂಕ್ಷ್ಮ ಸಂವೇದನೆಯ ಕಥೆಗಳು ಕಾಡುತ್ತವೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ