ಪುಸ್ತಕದ ಶೀರ್ಷಿಕೆ : ರಾಯಭಾಗದ ರಹಸ್ಯ ರಾತ್ರಿ
ಲೇಖಕರು : ಜೋಗಿ
ಪ್ರಕಾಶಕರು : ಅಂಕಿತ ಪುಸ್ತಕ
ಪ್ರಥಮ ಮುದ್ರಣ : 2008
ದ್ವಿತೀಯ ಮುದ್ರಣ : 2012 (ನನ್ನ ಓದಿಗೆ ಸಿಕ್ಕಿದ್ದು)
ಪುಟಗಳು : 112
ಬೆಲೆ : 80 ರೂ.
ಹಾರರ್ ಕಥೆಗಳನ್ನು ನಾನು ಇಷ್ಟಪಟ್ಟು ಓದುವುದಿಲ್ಲವಾದರೂ.. ಅದನ್ನು ಓದದೆಯೂ ಇರುವುದಿಲ್ಲ. ಜೋಗಿ ಅವರ 'ರಾಯಭಾಗದ ರಹಸ್ಯ ರಾತ್ರಿ' ಕಥಾ ಸಂಕಲನ ಎನ್ನಿಸಿದರೂ.. ಇಲ್ಲಿನ ಕಥೆಗಳು ತೀರಾ ಭಯಾನಕವೆನ್ನಿಸಲಿಲ್ಲ. ಇಲ್ಲಿ ದೆವ್ವವನ್ನು ಹುಡುಕಿ ಹೊರಟಾಗ ಸಿಕ್ಕ ಕಥೆಗಳಿವೆ. ಜೀವನದ ಅನುಭವಗಳನ್ನೇ ಕಥೆಯಾಗಿಸಿದ ಪ್ರಸಂಗಗಳಿವೆ. ಕೆಲವು ಸಾವಿನ ಮುಖವನ್ನು ತೋರಿಸಿದರೆ ಇನ್ನು ಕೆಲವು ವಾಸ್ತವದ ಘಟನೆಗಳನ್ನು ಬಿಡಿಸಿಟ್ಟಂತೆ ಕಾಣುತ್ತವೆ. 'ಹೊತ್ತು ಹೋಗುವುದೆನೆಗೆ ಸತ್ತವರ ಸಂಘದಲ್ಲಿ' ಎಂಬ ಶೀರ್ಷಿಕೆ ಜೊತೆಯ ಅಡಿಬರಹ ಹಾಗೂ ಮುಖಪುಟದಲ್ಲಿ ಕಪ್ಪು ಹಿನ್ನೆಲೆಯೊಂದಿಗೆ ಹನಿಯುತ್ತಿರುವ ನೆತ್ತರು ಪುಸ್ತಕವನ್ನು ಓದುಗರ ಕೈಗೆತ್ತಿಕೊಳ್ಳುವಂತೆ ಮಾಡುವಲ್ಲಿ ಮೊದಲ ಹಾಗೂ ಸಫಲ ಪಾತ್ರ ವಹಿಸಿದೆ. 'ದೆವ್ವ ಇದೆ ಅಥವಾ ಇಲ್ಲ' ಎಂದೇನೂ ಹೇಳಲಾರೆ. ಸದ್ಯಕ್ಕೆ ಇಲ್ಲಿನ ಕಥೆಗಳ ಕುರಿತಷ್ಟೇ ಹೇಳಬಲ್ಲೆ. ಈ ಕಥಾ ಸಂಕಲನದಲ್ಲಿ 15 ಕಥೆಗಳಿವೆ. ಕೆಲ ಕತೆಗಳಲ್ಲಿ ಅನೈತಿಕ ಸಂಬಂಧಗಳ ಕುರಿತ ಉಲ್ಲೇಖವಿದ್ದರೂ.. ಅಶ್ಲೀಲತೆಯ ಸೋಂಕಿಲ್ಲ.
ಹುಲಿ ಬಂತು ಹುಲಿ : ಕೇನ್ಯಾ ರಾಮಣ್ಣ ಶೆಟ್ರು ಸರ್ಕಾರದ ಹೈನುಗಾರಿಕೆಯ ಘೋಷಣೆ ಕೇಳಿ, ಹಾಲು ಉತ್ಪಾದನೆ ಶುರು ಮಾಡಿದ್ದರಾದರೂ ಮುಂದುವರಿಸುವುದು ಅಷ್ಟು ಸುಲಭವಾಗಿರಲಿಲ್ಲ. ಸರ್ಕಾರ ಅದಕ್ಕೆ ತಕ್ಕ ವ್ಯವಸ್ಥೆ ಮಾಡಿರಲಿಲ್ಲವೆಂದು.. ಅಲ್ಲದೇ, ಅವರ ಕ್ಷೀರಕ್ರಾಂತಿ ಆ ಪ್ರದೇಶದಲ್ಲೆಲ್ಲ ಪ್ರಚಾರವಾಗಿದ್ದರಿಂದ ಸುಳ್ಯದಿಂದ ಸುಮಾರು 30 ಮೈಲಿ ದೂರದಲ್ಲಿ ಕಂಡ ಸೊಗಸಾದ ಹುಲ್ಲುಗಾವಲ ಬಳಿ ಬುಡಕಟ್ಟು ಜನಾಂಗಕ್ಕೆ ಸೇರಿದ ಕೊಲ್ಲಿ ಎಂಬುವನನ್ನು ಗೊತ್ತು ಮಾಡಿ ದನಗಳನ್ನು ಗೋಮಾಳ ಮಾಡಿ ಅಲ್ಲಿಗೆ ಬಿಟ್ಟರು. ನಂತರದ ಉಸ್ತುವಾರಿಯನ್ನು ತಮ್ಮ ಏಕೈಕ ಮಗ ಸುಬ್ಬಣ್ಣ ಶೆಟ್ಟಿಗೆ ಒಪ್ಪಿಸಿದರು ಸುಬ್ಬಣ್ಣ ಬದಲಾದ ಎಂದುಕೊಂಡರು ರಾಮಣ್ಣ ಶೆಟ್ರು. ಆದರೆ, ಆಗಿದ್ದೇ ಬೇರೆ. ಕೆಲ ದಿನಗಳ ನಂತರ ಸುಬ್ಬಣ್ಣ ಶೆಟ್ಟಿಯನ್ನು ಒಂದು ಆಕೃತಿ ಎಳೆದೊಯ್ಯಿತು. ಜೀಪಿನ ಡ್ರೈವರ್ ಗುರುವಪ್ಪ ಜೀಪಿನೊಂದಿಗೆ ಕೆರೆಗೆ ಬಿದ್ದು ಸತ್ತ. ಕ್ರಮೇಣ ರಾಮಣ್ಣ ಶೆಟ್ಟರು ಮನೆಯಿಂದ ಕಾಣೆಯಾದರು. ಹುಡುಕಿ ಬಂದವರಿಗೆ ಅವರ ಮನೆಯಂಗಳದಲ್ಲಿ ಹುಲಿಯ ಹೆಜ್ಜೆ ಗುರುತುಗಳು ಕಾಣಿಸಿದ್ದವು. ಇದೆಲ್ಲದರಲ್ಲಿ ಕೊಲ್ಲಿಯ ಕೈವಾಡವಿತ್ತೇ..? ಇದೆಲ್ಲದಕ್ಕೂ ಕಾರಣವೇನು..
ಕಣ್ಮರೆ : ರಾಜೇಗೌಡರ ಮನೆಗೆ ಬಂದ ಭಿಕ್ಷುಕ ಅನಪೇಕ್ಷಿತವಾಗಿ ಕೊಲೆಯಾದದ್ದನ್ನು ಹೇಳಲು ಒಬ್ಬರ ಹೊರತು ಮತ್ತಾರೂ ಸಾಕ್ಷಿ ಇರಲಿಲ್ಲ. ಆದರೆ, ಅದೇ ಭಿಕ್ಷುಕ ಮತ್ತೆ ಕಂಡದ್ದು ಸರೋಜಿನಿ ಗಂಡುಮಗುವಿಗೆ ಜನ್ಮವಿತ್ತ ದಿನ. ರಾಜೇಗೌಡರ ಸಾವು ಭಿಕ್ಷುಕ ಬಿದ್ದಿದ್ದ ಭಂಗಿಯಲ್ಲಿಯೇ ಆಗಿತ್ತು. ಸರೋಜಿನಿಯ ಮಗು ಇದ್ದಕ್ಕಿದ್ದಂತೆ ನಾಪತ್ತೆಯಾಗಿತ್ತು. ಇದೆಲ್ಲದರ ಹಿಂದಿನ ಮರ್ಮವೇನು..?
ರಾಟೆ ರಾಮಣ್ಣನ ಕಥೆ : ಕ್ಷೌರಿಕ ಸೀನಣ್ಣನ ಕರಾಮತ್ತಿನಿಂದ ರಾಟೆ ರಾಮಣ್ಣ ಹಾಗೂ ಆತನ ಪತ್ನಿ ಲಕ್ಷ್ಮಿ ಕೆಲಸಕ್ಕೆ ಸೇರಿದ್ದಾಯ್ತು. ಆದರೆ, ಇದ್ದಕ್ಕಿದ್ದಂತೆ ಒಂದು ದಿನ ಲಕ್ಷ್ಮಿ ಮೈಮೇಲೆ ದೆವ್ವ ಬಂದಂತೆ ಆಡಿ, ಅದಕ್ಕೆ ಕಾರಣವನ್ನು ತಿಳಿಯಲು ಹೊರಟಾಗ ಮಂತ್ರವಾದಿಗೆ ಸಿಕ್ಕ ಕಾರಣವೇನು..?? ದೆವ್ವ ಇದ್ದಕ್ಕಿದ್ದ ಹಾಗೆ ದೇವಿಯಾಗಿ ಬದಲಾದ ಪವಾಡವೂ ಆಗಿತ್ತು. ಊರು ಬಿಡಬೇಕಾಗಿ ಬಂದಾಗ ಭಟ್ಟರಿಗೆ ಆ ಜಾಗ ಮಾರಿದ್ದರು. ಮತ್ತೆ ಹೋದಾಗ ರಾಮಣ್ಣ ಇರಲಿಲ್ಲ. ಲಕ್ಷ್ಮಿ ಹೇಗಿದ್ದಳು..?? ರಾಟೆ ರಾಮಣ್ಣನ ಕಥೆ ಏನು..?
ಕತ್ತಲೆಕಾನದ ಶಿಕಾರಿಗಳು : ಬೋಪಯ್ಯನ ಪ್ರೀತಿಯ ಬೇಟೆ ನಾಯಿ ನೆಪೋಲಿಯನ್ ನನ್ನು ಯಾವುದೋ ನಾಯಿ ಕೊಂದು ಹಾಕಿದ್ದರಿಂದ ಬೋಪಯ್ಯ ಕೋವಿ ಹಿಡಿದು ಕಾಡಿನತ್ತ ಹೆಜ್ಜೆ ಹಾಕಿದ್ದ. ಆದರೆ, ಆತನಿಗೆ ಕೇಳಿದ ಧ್ವನಿ ನಿತ್ಯಾನಂದನದ್ದು. ಅವನನ್ನು ಆ ಸ್ಥಿತಿಗೆ ತಳ್ಳಿದ್ದು ದೆವ್ವ ಎಂದೇ ಬಹಳಷ್ಟು ಮಂದಿ ನಂಬಿದ್ದರು. ಡಾಕ್ಟರ್ ಉತ್ತಯ್ಯ ಮಾತ್ರ ಅದನ್ನು ಒಪ್ಪಲೇ ಇಲ್ಲ. ಅದಕ್ಕೆ ಕಾರಣ ಕಾಡುನಾಯಿ ಇರಬೇಕು ಎಂದರು. ಬೋಪಯ್ಯ ಮತ್ತೆ ಕಾಡಿನತ್ತ ಹೆಜ್ಜೆ ಹಾಕಿದ್ದ. ಕೋವಿ ಸದ್ದು ಕೇಳಿದ್ದರಿಂದ ಬೋಪಯ್ಯ ಆ ನಾಯಿಯನ್ನು ಹೊಡೆದು ಸಾಯಿಸಿದ್ದಾನೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಮೂರು ದಿನದ ನಂತರ ತಿಳಿದದ್ದು ಸತ್ತದ್ದು ಬೋಪಯ್ಯನೆಂದು. ಅದರ ಹಿಂದೆ ಹೊರಟಾಗ ತಿಳಿದ ಕಾರಣವೇನು..?? ಪ್ರಾಣಿಗಳು ದೆವ್ವ ಆಗುತ್ತವೆಯಾ ಎಂಬ ಪ್ರಶ್ನೆಯೊಂದಿಗೆ ಕಟ್ಟಿಕೊಟ್ಟಿರುವ ಕಥೆ ಇದು.
ರಾಯಭಾಗದ ರಹಸ್ಯ ರಾತ್ರಿ : ವಿದ್ಯಾಶಂಕರ ತನ್ನ ದೆವ್ವದಂತಹಾ ಬಂಗಲೆಯಲ್ಲಿ ಕರ್ಕಶವಾಗಿ ಸನಿಹದಲ್ಲೇ ನಕ್ಕ ಸದ್ದು ಕೇಳಿ ಮೂರು ವರ್ಷ ನಿದ್ದೆ ಮಾಡಿರಲಿಲ್ಲ. ಪೊಲೀಸರಾದ ಶಹಾಪುರ ಅವರು ಅವನ ಮನೆಯೊಳಗೆ ಒಂಟಿಯಾಗಿ ಕೂರುವುದಾಗಿ ಹೇಳಿಕೆ ಕೊಟ್ಟರು. ಅವರ ಜೊತೆ ಹೋದವರಿಗೆ ತಿಳಿದ ರಹಸ್ಯವೇನು..? ವಿದ್ಯಾಶಂಕರನಿಗೆ ಯಾವ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆಯಾಯಿತು..??
ಯಡಕುಮೇರಿಯ ಸುರಂಗದಲ್ಲಿ : ಯಡಕುಮೇರಿಯ ಸುರಂಗದಲ್ಲಿ ರೈಲಿನ ಹಿಂದೆ ಹೋಗುತ್ತಿದ್ದ ಅಸ್ಪಷ್ಟ ಆಕೃತಿಯನ್ನು ಕಂಡವರಿಗೆ ಮಾದೇವನ ಕಥೆ ನೆನಪಾಗಿತ್ತು. ಮಾದೇವ ಬಯಲು ಸೀಮೆಯವನು. ಅಲ್ಲಿ ವಾಚ್ ಮ್ಯಾನ್ ಕೆಲಸಕ್ಕೆಂದು ನೇಮಕವಾಗಿದ್ದವನು. ಗೆಳೆಯನ ಗೈರುಹಾಜರಿಯಲ್ಲಿ ಮಾದೇವನನ್ನು ಹುಡುಕಿಕೊಂಡು ಹೊರಟವರಿಗೆ ತಿಳಿದ ಸತ್ಯವೇನು.?? ಮಾದೇವ ಹೇಳುತ್ತಿದ್ದ ಕಥೆ ಏನು..? ಸುರಂಗದಂತಹಾ ನಿಗೂಢ ಕಥೆ.
ಕೊಲ್ಲಿಸಿದಳೇ ಪ್ರೇಯಸಿ? : ಮಂಗಳೂರು ಹೆಂಚು ಹೊದಿಸಿದ್ದ ಹೆಂಚಿನ ಗೂಡು ಕಂಡು ಕುತೂಹಲವಾಗಿ ಅದರ ಹಿಂದೆ ಬಿದ್ದಾಗ ಶಿವಣ್ಣ ಹೆಂಚು ತಯಾರಿಸುತ್ತಿದ್ದ ಎಂದು ಗೊತ್ತಾಗಿತ್ತು. ಆದರೆ, ಅದು ಪಾಳು ಬಿದ್ದಿತ್ತು. ಅದು ಪಾಳು ಬಿದ್ದದ್ದೇಕೆ ಎಂದ ವಿಚಾರಿಸಿದಾಗ ಸಿಕ್ಕಿದ್ದು ರಮೇಶನ ವಿಳಾಸ. ರಮೇಶನ ಅನುಭವ ಕೇಳಿದವರಿಗೆ ಮಂಜು ಬೀಳುತ್ತಿರುವ ಮುಂಜಾನೆಯಲ್ಲೂ.. ಆಗಷ್ಟೇ ಉರಿದು ಆರಿದ ಅಗ್ನಿಕುಂಡದ ತರ ಗೂಡು ಬೆಚ್ಚಗಿದ್ದದ್ದು ಕಂಡಿತ್ತು. ಇದಕ್ಕೂ ಶೀರ್ಷಿಕೆಗೂ ಇರುವ ಸಂಬಂಧ ನೀವೇ ಓದಿ ತಿಳಿಯಿರಿ.
ಆಗುಂಬೆಯ ಆಗಂತುಕ! : ಆಗುಂಬೆಯಲ್ಲಿ ಅಪರಿಚಿತನಾಗಿದ್ದು.. ಪರಿಚಯವಾಗಿದ್ದು ಮಹೇಶ್ವರ. ಸಮಾನ ಆಸಕ್ತರಾದ್ದರಿಂದ ಪರಿಚಯವಾದವರು. ಈಗ ರಾಜಶೇಖರ ಪಟ್ವಾಡಿಯ ಕುರಿತು ಇದ್ದ ಪೇಪರ್ ಕ್ಲಿಪ್ಪಿಂಗ್ ಗಳನ್ನು ಕೊಟ್ಟಿದ್ದರು. ನಂತರ ಪಟ್ವಾಡಿಯ ಕುರಿತು ಹೇಳಿದ್ದರು. ಅವರನ್ನು ನಂಬಿ ಅಲ್ಲಿಗೆ ಹೊರಟವರಿಗೆ ಆದ ವಿಲಕ್ಷಣವಾದ ಅನುಭವವೇನು ? ಇಲ್ಲಿ ಆಗುಂಬೆಯ ಆಗಂತುಕ ಯಾರು ?
ರಾಂಗ್ ನಂಬರ್! : ಶಿವಲಿಂಗಯ್ಯನವರು ಒಮ್ಮೆ ಮಾಡಿದ ಕರೆ ಕನೆಕ್ಟ್ ಆಗಿ ಆ ಸುಸ್ವರ ಕೇಳಿತ್ತು. ಆ ಸ್ವರದಲ್ಲಿದ್ದ ಆಪ್ತತೆ, ಮಾಧುರ್ಯದಿಂದ ಅವರು ಅದರತ್ತ ಆಸಕ್ತರಾದರು. ಆದರೆ, ತಾವು ಡಯಲ್ ಮಾಡಿದ ನಂಬರ್ ಯಾವುದೆಂದು ಅವರಿಗೆ ತಿಳಿದಿರಲಿಲ್ಲ. ರಾಂಗ್ ನಂಬರ್ ಅನ್ನು ಬೆನ್ನತ್ತಿ ಹೊರಟವರಿಗೆ ಮತ್ತೆ ಸುಸ್ವರ ಕೇಳಿತೇ..?
ಶ್ರೀನಿಧಿಯ ಕಥಾಸಂಕಲನ : ಶ್ರೀನಿಧಿ ತನ್ನ ಗುರುಗಳಾಗಿದ್ದ ರಾಮಣ್ಣ ಮೇಷ್ಟ್ರನ್ನು ಹುಡುಕಿಕೊಂಡು ಬಂದದ್ದು ತನ್ನ ಕಥಾಸಂಕಲನದ ಬಿಡುಗಡೆಯ ದಿನದಂದು ಅದರ ಕುರಿತು ಮಾತನಾಡಲು ಕೋರಿ. ಮೇಷ್ಟ್ರು ಅಳೆದು ತೂಗಿ ಅದಕ್ಕೆ ಒಪ್ಪಿದ್ದರು. ಆತನ ಗೆಳೆಯ ಮೃತ್ಯುಂಜಯನ ಕಾರಿಗಾಗಿ ಕಾಯುತ್ತಾ ಕೂತಿದ್ದರು. ಶ್ರೀನಿಧಿಯ ಕಥಾಸಂಕಲನ ಬಿಡುಗಡೆಯಾಯಿತೇ. ಮೇಷ್ಟ್ರು ಅಳೆದು ಸುರಿದು ಮಾಡಿಟ್ಟುಕೊಂಡಿದ್ದ ವಿಮರ್ಶೆ ಏನಾಯಿತು..?
ಸೋಮಣ್ಣನ ಸೆಕೆಂಡ್ ಹ್ಯಾಂಡ್ ಲಾರಿ! : ಅಷ್ಟಕ್ಕೂ ಸೋಮಣ್ಣನಿಗೆ ಲಾರಿ ಕೊಳ್ಳುವ ಹುಚ್ಚು ಹಿಡಿದದ್ದೇಕೆ.. ಲಾರಿ ಬಂದಾಗಿನಿಂದ ಸೋಮಣ್ಣನ ಬದುಕಿನಲ್ಲಿ ಆದ ಬದಲಾವಣೆಗಳೇನು.. ಲಾರಿ ಮಾರುವುದಕ್ಕೆ ಹೊರಟ ಸೋಮಣ್ಣನ ಸಮಸ್ಯೆಯೇನು..? ಸೋಮಣ್ಣನನ್ನು ಆಕ್ಸಿಡೆಂಟ್ ಸೋಮಣ್ಣ ಎಂದು ಕರೆಯುತ್ತಿದ್ದೇಕೆ.. ಅಷ್ಟಿದ್ದರೂ ಆತನು ಒಳಗಿನ ಉತ್ಸಾಹ ಹಾಗೂ ಜೀವನಪ್ರೀತಿ ಇಷ್ಟವಾಗುತ್ತದೆ.
ಮುಸ್ಸಂಜೆಯ ಮೂರುಗಳಿಗೆ! : ಈ ಕಥೆಯಲ್ಲಿ ಸುಮ್ಮನೆ ಮುಸ್ಸಂಜೆಯ ಮೂರುಗಳಿಗೆಯ ಅನುಭವವನ್ನು ಗಾಢವಾಗಿ ಅನುಭವಿಸಬೇಕು. ಕತ್ತಲು ಬೆಳಗುವ, ಬೆಳಕು ಅಳಿಯುವ ಕಥೆ ಇದೆ ಇಲ್ಲಿ.
ಕಾಗದದ ದೋಣಿ : ಮಗ ಶ್ರೀನಿಧಿಯ ಮೂಲಕ ತನ್ನ ಮಹತ್ವಕಾಂಕ್ಷೆಯನ್ನು ಸಾಧಿಸಲು ಹೊರಟ ಸುಮಿತ್ರೆಯ ಕಾಣುತ್ತಾಳೆ. "ಇದು ಕಥೆಯಲ್ಲ ಅನ್ನಿಸಿದರೆ ನಿಮ್ಮ ಅನಿಸಿಕೆ. ವಾಸ್ತವ ಅನ್ನಿಸಿದರೆ ಅದು ದುರಂತ." ಎನ್ನುತ್ತಾರೆ ಲೇಖಕರು. ಅದು ನಿಜವೂ ಹೌದು.
ಕೊನೆಯ ಮಾತುಗಳು ಅವನಿಗೆ ಕೇಳಿಸಲಿಲ್ಲ! : ಇದೊಂದು ಇಂಗ್ಲಿಷ್ ಅನುವಾದದ ಕಥೆ. ಚಕ್ರಪಾಣಿ ತನಗೆ ಬೇಕಾದಂತಹಾ ಮನೆಯ ಕುರಿತು ವಿವರಿಸುವಾಗ ಕೃಷ್ಣಮೂರ್ತಿಗೆ ಅಂತಹಾ ಮನೆ ಸಿಗಬಹುದಾ ಎನ್ನುವುದಕ್ಕಿಂತಲೂ.. ತನ್ನ ಕರಾರುಗಳನ್ನು ಸ್ಪಷ್ಟವಾಗಿ ಹೇಳಿ, ಮನೆಗಳನ್ನು ತೋರಿಸುತ್ತಿದ್ದ ಸುಭದ್ರಮ್ಮ ಎಂಬ ಮುದುಕಿಯ ಮನೆ ತೋರಿದಾಗ.. ಆಕೆ ಹೇಳಿದಂತೆ ಆ ಹಳೆಯ ಮನೆಗೆ 30 ಲಕ್ಷ ಕೊಟ್ಟು ಒಂದೇ ಬಾರಿಗೆ ಕೊಂಡುಕೊಂಡ. ಆದರೆ, ಅದು ಅಷ್ಟು ಬೆಲೆಬಾಳುವಂತಹದ್ದಲ್ಲ ಎನ್ನುವುದರ ಹಿನ್ನೆಲೆಯನ್ನು ಸುಭದ್ರಮ್ಮ ಹೇಳುತ್ತಾ.. ಆ ಮನೆಯ ಕುರಿತು, ತನ್ನ ಬದುಕಿನ ಕುರಿತು ಹೇಳುತ್ತಿದ್ದಾಗ ಚಕ್ರಪಾಣಿಗೆ ನೆನಪಾದ ಘಟನೆ ಏನು ?
ಇಕ್ಬಾಲ್ ಚರಿತ್ರೆ : ಶ್ರೀಧರ್ ಅಯ್ಯಂಗಾರ್ ಹಿಂದಿನ ದಿನ ಸಂಜೆ ಆಫೀಸಿನಿಂದ ಹೊರಡುವುದು ಕೊಂಚ ತಡವಾಗಿದ್ದಕ್ಕೆ ವ್ಯಾನ್ ಡ್ರೈವರ್ ಇಕ್ಬಾಲ್ ಅವನನ್ನು ಬಿಟ್ಟೇ ಹೊರಟಿದ್ದನೆಂದು ಆತನಿಗೆ ಕೋಪ ಬಂದಿತ್ತು. ಆ ಕೋಪ ತೀರಿಸಿಕೊಳ್ಳಲು ಕಾಯುತ್ತಿದ್ದ. ಆದರೆ, ಅಂದು ಎಲ್ಲವೂ ಅಸ್ತವ್ಯಸ್ತವಾಗಿತ್ತು. ಸಂಜೆ ಇಕ್ಬಾಲ್ ಸಿಗಲಿಲ್ಲ. ಅದೆಲ್ಲದರ ಹಿಂದಿನ ಕಾರಣವೇನು..?
ಇಲ್ಲಿನ ಕೆಲ ಕಥೆಗಳಲ್ಲಿ ಜೋಗಿಯವರ ಮ್ಯಾಜಿಕಲ್ ಟಚ್ ಕಾಣಿಸುತ್ತದೆ. ಇಲ್ಲಿ ಎಲ್ಲವೂ ನಿಗೂಢವೆನಿಸುವುದು ಹೌದಾದರೂ.. ಇವು ತೀರಾ ಭಯಾನಕವೆಂಬ ಭಾವನೆಯನ್ನು ಮೂಡಿಸಲಿಲ್ಲ. ಈ ಕಥೆಗಳು ಹುಟ್ಟಿದ ರೀತಿಯನ್ನು ಅವರು ಪುಸ್ತಕದ ಮೊದಲಲ್ಲಿ ಹೇಳಿದ್ದಾರೆ. ಕುತೂಹಲವಿದ್ದವರು ಹಾಗೂ ಈ ಪ್ರಭೇದವನ್ನು ಇಷ್ಟಪಡುವವರು ಒಮ್ಮೆ ಓದಿ ನೋಡಿ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ