ಸೋಮವಾರ, ಏಪ್ರಿಲ್ 20, 2026

ಸಾವು (ಪುಸ್ತಕ ಯಾನ - 266)


ಕಾದಂಬರಿಯ ಹೆಸರು : ಸಾವು

ಪ್ರಭೇದ : ಆಧ್ಯಾತ್ಮಿಕ

ಲೇಖಕರ ಹೆಸರು : ಸುಪ್ರೀತ್ ಕೆ ಎನ್

ಪುಸ್ತಕದ ಬೆಲೆ : 395 ರೂ.


ಸಾವು ಉಂಟು ಮಾಡುವ ತಲ್ಲಣದ ಬಗೆಗಳು ಒಬ್ಬೊಬ್ಬ ಮನುಷ್ಯರ ಜೀವನದಲ್ಲಿ ಒಂದೊಂದು ರೀತಿ. ಈ ಕಾದಂಬರಿಯಲ್ಲಿ ಒಂದು ಮಾತು ಬರುತ್ತದೆ. "ಸತ್ತವರನ್ನು ಮರೆಯುವ ಅವಶ್ಯಕತೆ ಇಲ್ಲ. ಅವರ ನೆನಪು ನಮ್ಮಲ್ಲಿರಬೇಕು. ಆದರೆ, ಆ ನೆನಪು ನಮ್ಮನ್ನು ಬಾಧಿಸಬಾರದು. ಸತ್ತ ವ್ಯಕ್ತಿಯ ನೆನಪು ನಮ್ಮ ಮನಸ್ಸಿಗೆ ಸಂತೋಷವನ್ನು ಕೊಡಬೇಕು." ಆದರೆ, ಅತ್ಯಂತ ಆತ್ಮೀಯರಾದ ವ್ಯಕ್ತಿಗಳ ಅನುಪಸ್ಥಿತಿಯನ್ನು ಸಾವು ಎಂದು ಅರಗಿಸಿಕೊಳ್ಳಲಾಗದೇ ಇರುವುದು ಬದುಕಿರುವವರ ದುರಂತಗಳಲ್ಲೊಂದು. ಆದರೆ, ಸಾವು ಎಂಬುದು ಮನುಷ್ಯನ ಬದುಕಿನಲ್ಲಿ ಅನಿವಾರ್ಯ ಘಟ್ಟ. ಸತ್ತವರ ಬದುಕಿನಲ್ಲಿ ಅದು ಅಂತ್ಯವಾದರೆ.. ಬದುಕಿರುವವರ ಜೀವನದಲ್ಲಿ ಅದು ಪ್ರತಿಕ್ಷಣ ನೆನಪಿಸುವ ದುರಂತದ ಕ್ಷಣ. ಅದರಲ್ಲಿಯೂ ಆರೋಗ್ಯವಾಗಿರುವವರ ಹಠಾತ್ ನಿರ್ಗಮನ, ಬಾಳಿ ಬದುಕುವ ಚಿಕ್ಕ ವಯಸ್ಸಿನವರು ಸತ್ತರಂತೂ.. ಆ ದುಃಖ ಇಡೀ ಜನ್ಮ ಉಳಿಯುವಂತಹದ್ದು. ತಂದೆ-ತಾಯಿಯರಿಗೆ ಒಬ್ಬರೇ ಮಕ್ಕಳಿದ್ದಾಗ ಆ ಮಗುವಿನ ಮರಣ ಹಾಗೂ ಆ ಸ್ಥಾನವನ್ನು ಯಾರೂ ತುಂಬಲಾರರು. ಈ ಕಾದಂಬರಿಯಲ್ಲಿ ಬರುವ ಸಾವು ವಿವಾಹವಾಗಿ ಒಂದು ಮಗುವಿನ ತಂದೆಯಾಗಿದ್ದ ವಿನಯ್ ನದ್ದು. ಅದು ಬಾಳಿ ಬದುಕುವ ವಯಸ್ಸು. 


ಆದರೆ ಈ ಕಾದಂಬರಿ ಓದುವಾಗ ಮತ್ತೊಂದು ವಿಚಾರವನ್ನು ಮುಂದಿಡುತ್ತಾರೆ ಲೇಖಕರು. ತಂದೆ-ತಾಯಿಯರಿಗೆ ನಿನ್ನ ಮಗನಂತೆ ನಾನಿರುತ್ತೇನೆ ಎಂದು ಸಮಾಧಾನಿಸುವವರಿರುತ್ತಾರೆ. ಮಕ್ಕಳಿಗೆ ಅಪ್ಪನ ಸ್ಥಾನದಲ್ಲಿ ನಿಂತು ಪೋಷಿಸುತ್ತೇನೆ ಎನ್ನುವವರಿರುತ್ತಾರೆ. ಆದರೆ, ಹೆಂಡತಿಗೆ ಗಂಡನ ಸ್ಥಾನ ತುಂಬುವುದು ಯಾರಿಂದಲೂ ಅಸಾಧ್ಯವಾದದ್ದು. ಆಕೆಗೆ ಸ್ನೇಹಿತನಂತೆ ನಾನಿದ್ದೇನೆ, ಅಣ್ಣನಂತೆ ನಾನಿದ್ದೇನೆ ಎನ್ನಬಹುದು ಗಂಡನ ಸ್ಥಾನ ಗಂಡನದ್ದೇ.. ಆದರೆ, ನನಗನ್ನಿಸಿದಂತೆ ವಾಸ್ತವದಲ್ಲಿ ಯಾರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಾಗುವುದಿಲ್ಲ. ಸಾವಿನ ದಿನಗಳ ಬಿಸಿಯಲ್ಲಿ, ದುಃಖದ ದಿನಗಳಲ್ಲಿ ಎಲ್ಲರೂ ಹತ್ತಿರವಿರಬಹುದು. ಆದರೆ, ದಿನ ಕಳೆದಂತೆ ಆ ನೋವು ಉಳಿದವರಿಗೆ ಸಾಮಾನ್ಯವೆನಿಸಬಹುದು ಅಥವಾ ಅದೇ ಋಣದಿಂದ ಮತ್ತೊಮ್ಮೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸಬಹುದು. ಆದರೆ, ಯಾರು ಯಾರಿಗೂ ಪರ್ಯಾಯವಲ್ಲ. 


ಇದಿಷ್ಟೂ ಸಾವಿನ ಸುತ್ತ-ಮುತ್ತದ ಸಮಾಚಾರವಾದರೆ.. ಈ ಕಾದಂಬರಿಯಲ್ಲಿ ಬಂದಿರುವ ಸ್ಥಳ ಶೃಂಗೇರಿಯ ಕುರಿತು ಓದಿ ಕೂಲಂಕಷವಾಗಿ ಶೃಂಗೇರಿಯನ್ನು ನೋಡಬೇಕೆಂಬ ಆಸೆ ಹುಟ್ಟಿದೆ. ಶಾರದಮ್ಮನವರ ಜೊತೆಗೆ ಶೃಂಗೇರಿಯ ಪರಿಸರ ಕೂಡ ಅಷ್ಟೇ ಸೆಳೆಯುತ್ತದೆ.


ಗಣೇಶ ಭಟ್ಟರು ಹಾಗೂ ಶಶಿಕಲಾರ ಒಬ್ಬನೇ ಮಗ ವಿನಯ್ ಅಪಘಾತವಾಗಿ ಸಾವನ್ನಪ್ಪಿದ್ದ. ಆತ ತಂದೆ-ತಾಯಿಯ ಜೊತೆ ಪತ್ನಿ ರಾಧಿಕಾ ಹಾಗೂ ಪುಟ್ಟ ಮಗಳು ಸಾನ್ವಿಯನ್ನು ಸಹಾ ಬಿಟ್ಟು ಹೋಗಿದ್ದ. ಯಾರೂ ಆಲೋಚಿಸದ ರೀತಿಯಲ್ಲಿ ಧುತ್ತನೆ ಬಂದರೆಗಿದ್ದ ಸಾವು ಎಲ್ಲರನ್ನೂ ದಿಗ್ಭ್ರಮೆಗೊಳಿಸಿತ್ತು. ಇದ್ದುದರಲ್ಲಿ ಮೊದಲು ಸುಧಾರಿಸಿಕೊಂಡು ಪರಿಸ್ಥಿತಿಯನ್ನು, ಸಂದರ್ಭವನ್ನು ನಿಭಾಯಿಸಿದವರು ಸೋಮಯಾಜಿಗಳು. 


ರಾಧಿಕಾ ಹಾಗೂ ವಿನಯ್ ಮದುವೆಗೆ ಒಂದರ್ಥದಲ್ಲಿ ಸೇತುವೆಯಾಗಿದ್ದವರು ಸೋಮಯಾಜಿಗಳು ಎಂದರೂ ತಪ್ಪಾಗಲಾರದು. ಜಯರಾಮ ಹೆಬ್ಬಾರರು ಹಾಗೂ ಸರೋಜಾರಿಗೆ ಇಬ್ಬರು ಮಕ್ಕಳು. ಮೊದಲನೆಯವನು ರಮೇಶ ಆತ ಚೈತ್ರಳನ್ನು ಪ್ರೇಮಿಸಿ ವಿವಾಹವಾಗಿದ್ದ. ಮಗಳು ರಾಧಿಕಾ ವಿನಯ್ ಕೈ ಹಿಡಿದಿದ್ದಳು.  ಆಕೆ ಲೆಕ್ಚರರ್ ಆಗಿದ್ದವಳು. ಮಗುವನ್ನು ಆಕೆ ತಾಯಿಯೇ ಸುಪರ್ದಿಗೆ ಬಿಟ್ಟು ಕೆಲಸಕ್ಕೆ ಹೋಗುತ್ತಿದ್ದಳು. ತಾಯಿ ಮನೆಗೂ ಹತ್ತಿರವೇ ಇದ್ದುದರಿಂದ ಸುಖ ದಾಂಪತ್ಯದಲ್ಲಿ ದಿನಗಳು ಹೋಗುತ್ತಿದ್ದದ್ದೇ ತಿಳಿಯುತ್ತಿರಲಿಲ್ಲ. ಶೃಂಗೇರಿಗೆ ಅತ್ತೆ-ಮಾವನ ಜೊತೆ ಇರಲು ಗಂಡ ಮಗುವಿನ ಜೊತೆ ಬಂದಿದ್ದ ರಾಧಿಕಾಳಿಗೆ ಈ ಆಘಾತ ಜೀರ್ಣಿಸಿಕೊಳ್ಳುವಂತಹದ್ದಾಗಿರಲಿಲ್ಲ. ಅವರಿಬ್ಬರ ಜೊತೆಗೆ ಬಂದದ್ದು ದೀಪಕ್. ಚಿಕ್ಕಂದಿನಿಂದ ವಿನಯ್ ಜೊತೆಗಾರನಂತಿದ್ದವನು, ರಾಧಿಕಾಳಿಗೆ 10 ತಿಂಗಳು ಚಿಕ್ಕವನು. ರಾಧಿಕಾಳಿಗೂ ಸ್ನೇಹಿತನಂತಿದ್ದನು.


ಚಂದ್ರಮೌಳಿ ಜೋಯಿಸರು ಹಾಗೂ ಮಂಜುಳಾರ ಮಗನೇ ದೀಪಕ್. ಮಗಳು ದಿವ್ಯ ಬೇಡವೆಂದರೂ ಸೋಮಯಾಚಿಗಳ ಮಗ ಶರತ್ ನನ್ನು ಪ್ರೀತಿಸಿ, ಮನೆಯವರ ವಿರೋಧದ ನಡುವೆಯೂ ದೀಪಕ್ ನ ಸಹಾಯದಿಂದ ವಿವಾಹವಾಗಿದ್ದಳು. ಅಕ್ಕನ ಮದುವೆಗೆ ಎಲ್ಲರನ್ನೂ ಎದುರು ಹಾಕಿಕೊಂಡು ಸಹಾಯ ಮಾಡಿದ್ದ. ಎರಡು ಮನೆಗಳಲ್ಲಿನ ಮುನಿಸು ಇದೀಗ ಕರಗಿತ್ತು.


ಸಾವಿನ ಮನೆಗಳಲ್ಲಿ ತೆಗೆದುಕೊಳ್ಳುವ ತೀರ್ಮಾನದಂತೆ ಹಿರಿಯರಾಗಿ ಸೋಮಯಾಜಿಗಳೇ ಮುಂದೆ ಎಲ್ಲವನ್ನೂ ನೋಡಿಕೊಂಡರು. ರಾಧಿಕಾಳಿಗೆ ಎಲ್ಲಿ ಇರಲೂ ಮನಸ್ಸು ಒಪ್ಪುತ್ತಿರಲಿಲ್ಲ. ಆಕೆ ಮತ್ತೆ ಮೊದಲಿನಂತಾಗಲು ಕೆಲಸದಲ್ಲಿ ತೊಡಗಿಕೊಳ್ಳಬೇಕಿತ್ತು. ಸೋಮಯಾಜಿಗಳ ಸಲಹೆಯಂತೆ.. ಬೇಡದ ಆಲೋಚನೆಗಳಿಂದ ದೂರವಿರಲು ಆಕೆ ಕೆಲಸವನ್ನು ಆಶ್ರಯಿಸಿದಳು. ಆಕೆ ಮತ್ತೆ ಬೋಧಿಸಲು ಕಾಲೇಜಿಗೆ ಹೊರಟಳು. ಆದರೆ, ಮನೆಯಲ್ಲಿ ಒಂಟಿತನ ಕಾಡುತ್ತಿತ್ತು. 


ಚೈತ್ರ ಗರ್ಭಿಣಿಯಾಗಿದ್ದರಿಂದ ಮುಂದೆ ಅವಳಿಗೆ ಮಗುವಾದಾಗ ಸಾನ್ವಿ ಮಗುವಿನ ಮೇಲಿನ ಅಕ್ಕರೆಯಿಂದ ಅಲ್ಲಿಯೇ ಉಳಿಯುತ್ತಿದ್ದದ್ದು ಹೆಚ್ಚಾಗಿತ್ತು. ಚೈತ್ರಳ ತಾಯಿ ನಾಗಲಕ್ಷ್ಮಿ ಅವರಿಗೆ ಬಾಣಂತನದ ಕುರಿತಾದ ಅನುಭವ ಇಲ್ಲದ್ದರಿಂದ, ಸರೋಜಾರೇ ಮುಂದೆ ಎಲ್ಲವನ್ನು ಮಾಡಬೇಕಾಗಿತ್ತು. ಆಗ ಅವರು ಹೆಚ್ಚಾಗಿ ಚೈತ್ರಳ ಮನೆಗೆ ಹೋಗುತ್ತಿದ್ದುದರಿಂದ.. ರಾಧಿಕಾಳನ್ನು ಕಾಳಜಿ ಮಾಡಬೇಕೆಂದುಕೊಂಡರೂ ಅದು ಸಾಧ್ಯವಾಗುತ್ತಿರಲಿಲ್ಲ. ಅತ್ತಿಗೆ ಚೈತ್ರ ಸ್ನೇಹಿತೆಯಂತಿದ್ದರೂ.. ನಾಗಲಕ್ಷ್ಮೀಯವರ ಸ್ವಭಾವ ಸರಿಬರದೆ ಅವರಿಂದ ದೂರವೇ ಇದ್ದಳು ರಾಧಿಕಾ. ರಾಧಿಕಾಳಿಗೆ ಒಬ್ಬಂಟಿತನದ ಗೆಳೆಯರಾಗಿ ಸಿಕ್ಕದ್ದು ಮೂರ್ತಿ ಹಾಗೂ ದೀಪಕ್. 


ಬದುಕಿನಲ್ಲಿ ಸಿಗುವವರೆಲ್ಲರೂ ಒಳ್ಳೆಯವರಾಗಿಯೇ ಇರಬೇಕಾಗಿಲ್ಲವೆಂದು ಅರ್ಥ ಮಾಡಿಸಿದ್ದು ಮೂರ್ತಿ. ಮೊದಮೊದಲಿಗೆ ಸಾಂತ್ವನದ ಸ್ನೇಹದ ನೆಪದಲ್ಲಿ ಅವಳಿಗೆ ಹತ್ತಿರವಾಗುತ್ತಿದ್ದವರು ಇಂಗ್ಲೀಷ್ ಲೆಕ್ಚರರ್ ಮೂರ್ತಿ. ನಂತರ, ಅವರ ನಿಜರೂಪ ತೋರಿಸಿದ್ದರು. ದೀಪಕ್ ಆಕೆಗಿಂತ ಚಿಕ್ಕವನಾಗಿದ್ದರೂ.. ಯೋಚಿಸಿ ತಾನು ಅವಳನ್ನು ವಿವಾಹವಾಗುವುದಾಗಿ ಹೇಳಿದ. ಆದರೆ, ರಾಧಿಕಾ ಮೊದಲು ಇದಕ್ಕೆ ಒಪ್ಪಿಗೆ ನೀಡಲಿಲ್ಲ.


ರಾಧಿಕಾಳ ಮನಸ್ಸಿನಲ್ಲಿದ್ದ ಹಲವು ಸಂಶಯಗಳನ್ನು ದೀಪಕ್ ನಿವಾರಿಸಿದ. ಆಕೆಯ ಅತ್ತೆ-ಮಾವನನ್ನು ತಾವೇ ನೋಡಿಕೊಳ್ಳುವುದೆಂದು, ಸಾನ್ವಿ ತಮಗೆ ಮಗಳಾಗಿ ಇರುವುದರಿಂದ ಆಕೆಯನ್ನು ತಾನು ತಂದೆಯಂತೆ ಕಾಪಾಡುತ್ತೇನೆ. ನಮಗೆ ಮಕ್ಕಳು ಬೇಡವೆಂದಾಗ ರಾಧಿಕಾಳಿಗೂ ನಂಬಿಕೆ ಬರತೊಡಗಿತ್ತು. ಆದರೆ, ಈ ವಿಚಾರಗಳು ಕೇವಲ ಇಬ್ಬರ ನಡುವೆ ಮಾತ್ರ ಚರ್ಚಿತವಾಗಿ ತೀರ್ಮಾನವಾಗಿರಬೇಕಾಗಿರಲಿಲ್ಲ. ಇದಕ್ಕೆ ಎಲ್ಲರ ಹಾಗೂ ಕುಟುಂಬದವರ ಪ್ರತಿಕ್ರಿಯೆ ಹೇಗಿತ್ತು..?? ಹಾಗೂ ಒಂದು ಸಾವು ಎಲ್ಲರ ಬದುಕನ್ನು ಹೇಗೆ ಬದಲಾಯಿಸುತ್ತದೆ ಎಂಬುದರ ಚಿತ್ರಣವಿದೆ.


ಇದರಲ್ಲಿ ಮುಖ್ಯವಾಗಿ ಸೋಮಯಾಜಿಗಳ ಕುರಿತು ಹೇಳುತ್ತೇನೆ. ಅವರು ಚಿಕ್ಕ ವಯಸ್ಸಿನಲ್ಲಿಯೇ ತಮ್ಮ ಪತ್ನಿಯನ್ನು ಕಳೆದುಕೊಂಡು ಮಗ ಶರತ್ ನನ್ನು ಬೆಳೆಸಿದವರು. ಆದರೆ, ಅವರು ಮತ್ತೊಂದು ವಿವಾಹವಾಗದೆ.. ಆಧ್ಯಾತ್ಮದ ಹಾದಿಯಲ್ಲಿ ಮುನ್ನಡೆದವರು. ವಯಸ್ಸಿನ ಹೆಣ್ಣಿಗೆ ಆಧ್ಯಾತ್ಮದ ದಾರಿಯಲ್ಲಿ ಹೋಗು ಎಂದು ಸಲಹೆ ನೀಡುವುದು ಅಷ್ಟು ಸುಲಭವಲ್ಲ. ಸೋಮಯಾಜಿಗಳು ತಮ್ಮ ಬದುಕನ್ನು ಹಾಗೂ ಆಕೆಯ ಪರಿಸ್ಥಿತಿ, ಮನಸ್ಥಿತಿಯನ್ನು ಮನಸ್ಸಿನಲ್ಲಿಟ್ಟುಕೊಂಡು ನೀಡಿದ ಸಲಹೆಗಳೇನು..? 


ಸೋಮಯಾಜಿಗಳಿಗೆ ಕಾಶಿಯಲ್ಲಿ ಮಾರ್ಗದರ್ಶಕರಾಗಿ ಸಿಕ್ಕಿದ್ದವರು ಪರಮಾನಂದ ಭಾರತೀಗಳು. ಅವರ ವ್ಯಕ್ತಿತ್ವ ಹಾಗೂ ಅವರ ಚಿಂತನೆಗಳ ಮೂಲಕ ಸೋಮಯಾಜಿಗಳ ಮನಸ್ಸಿನ ಎಷ್ಟೋ ಪ್ರಶ್ನೆಗಳಿಗೆ ಉತ್ತರ ದೊರೆಯುತ್ತದೆ. ಪರಮಾನಂದ ಭಾರತೀಗಳು ಹೇಳುವ 'ಮಾನಸಿಕ ಸನ್ಯಾಸ' ಸೋಮಯಾಜಿಗಳಿಗೆ ದಾರಿದೀಪವಾಗುತ್ತದೆ. ಇದು ಸಂಸಾರದಲ್ಲಿದ್ದುಕೊಂಡೇ ಆಚರಿಸುವ ಸನ್ಯಾಸತ್ವ. ಅಷ್ಟೆಲ್ಲಾ ಸಾಧನೆ ಮಾಡಿದವರ ಮಗ ದಾರಿ ತಪ್ಪಿದ್ದೇಕೆ..? ಅದಕ್ಕೆ ಅವರು ಕೊಡುವ ತಾರ್ಕಿಕ ಉತ್ತರವೇನು..? ತಿಳಿಯಲು ಕಾದಂಬರಿ ಓದಿ. 


ಮೊದಲಿಗೆ ಆಧ್ಯಾತ್ಮಿಕ ಕಾದಂಬರಿ ಎಂದಾಗ ಅದನ್ನು ಹಿಡಿಯಲು ಬಹಳಷ್ಟು ಯೋಚಿಸಿ ಹಿಡಿಯುತ್ತೇನೆ. ಆದರೆ, ಈ ಯುವ ಲೇಖಕರು ಕಟ್ಟಿಕೊಟ್ಟಿರುವ ಕಾದಂಬರಿ ಆಧ್ಯಾತ್ಮಿಕವಾಗಿ ಮಾತ್ರವಲ್ಲದೆ ಅತ್ಯುತ್ತಮ ಯೋಚನಾಲಹರಿಯಿಂದಲೂ ಹತ್ತಿರವಾಗುತ್ತದೆ. ಆಧ್ಯಾತ್ಮಿಕ ಕಾದಂಬರಿಯ ಕುರಿತು ಬರೆಯುವುದೇ ಸುಲಭವಲ್ಲ.. ಅಂತಹದ್ದರಲ್ಲಿ, ಸಾವಿನಂತಹ ಗಹನ ವಿಷಯದ ಕುರಿತಾಗಿ, ಅದರಲ್ಲಿ ಆಧ್ಯಾತ್ಮವನ್ನು ಬೆರೆಸಿ ಕಾದಂಬರಿಯನ್ನಾಗಿಸುವುದನ್ನು ಸುಲಭವಲ್ಲವೇ ಅಲ್ಲ. ಅದರಲ್ಲಿ ಲೇಖಕರು ಗೆದ್ದಿದ್ದಾರೆ ಎನ್ನಿಸಿತು. 


ಈ ಕಾದಂಬರಿಯ ಅಂತ್ಯ ತಿಳಿಯಲೆಂದೇ ಅಷ್ಟು ಕುತೂಹಲದಿಂದ ಓದುತ್ತಿರುವಾಗ ಅಂತ್ಯ ಓಪನ್ ಎಂಡೆಡ್ ಆದದ್ದು ಅಷ್ಟು ಸಮಂಜಸವೆನಿಸಲಿಲ್ಲವಾದರೂ.. ನಂತರ ನನಗೆ ನಾನೇ ಪ್ರಶ್ನೆ ಹಾಕಿಕೊಂಡಾಗ ಆಕೆ ಯಾವ ನಿರ್ಧಾರ ತೆಗೆದುಕೊಂಡರೆ ಒಳ್ಳೆಯದಿತ್ತು ಎಂದು ಯೋಚಿಸುವುದು ಸಹಾ ಕಷ್ಟಕರವಾಗಿತ್ತು. ಹಾಗಾಗಿ, ಓದುಗರ ಯೋಚನಾಲಹರಿಗೆ ಬಿಟ್ಟ ಅಂತ್ಯ ಲೇಖಕರ ಜಾಣ್ಮೆಯ ನಡೆ ಎಂದೇ ಅನ್ನಿಸಿತು. 


1. ಸಾವಿನ ಮನೆಯಲ್ಲಿನ ವೈರಾಗ್ಯ, ಅವರ ಹತ್ತಿರದವರು ಅನುಭವಿಸುವುದನ್ನು ಭಾವನೆಗಳ ಜೊತೆಗೆ ಕಟ್ಟಿಕೊಡುವುದರ ಜೊತೆಗೆ ಅವರು, ಅವರ ಆರೋಗ್ಯ ಕ್ಷೀಣಿಸುವ ಬಗೆಯನ್ನು ನಡೆಯಲ್ಲಿಯೂ ಕಟ್ಟಿಕೊಟ್ಟಿದ್ದಾರೆ.


2. ರಾಧಿಕಾ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರವನ್ನು ಒಮ್ಮೆ ಮಾಡುತ್ತಾಳಾದರೂ.. ಆ ಪ್ರಸಂಗ ವಿನಯ್ ಸತ್ತಾಗಿನದ್ದಲ್ಲ. ಆದರೆ, ಅಂತಹಾ ನಿರ್ಧಾರದಿಂದ ಹಿಂದೆ ಸರಿದದ್ದು, ಬದುಕನ್ನು ಎದುರಿಸುವ ಹಾಗೂ ಎದುರಿಸಬೇಕಾದ ರೀತಿಯನ್ನು ತಿಳಿಸುತ್ತದೆ.


3. ನಚಿಕೇತನ ಪ್ರಸಂಗವನ್ನು ಹೇಳಿ, ಅದರ ಮೂಲಕ ದಾನ ಹಾಗೂ ಸಾವಿನ ಕುರಿತ ಕೆಲ ಪ್ರಶ್ನೆಗಳಿಗೆ ಉತ್ತರಿಸುತ್ತಾರೆ.


4. ಮನಸ್ಸು ಎಂಬುದು ಎಷ್ಟು ಧೃಢವಾಗಿರಬೇಕು ಇಲ್ಲವಾದರೆ ಅದರ ತಲ್ಲಣಗಳಿಗೆ ಸಿಲುಕಿ, ಅದರಿಂದ ಉಂಟಾಗುವ ಪರಿಣಾಮಗಳು ಮತ್ತೊಬ್ಬರ ಬದುಕಲ್ಲಿ ಎಷ್ಟು ಅಲ್ಲೋಲ ಕಲ್ಲೋಲ ಎಬ್ಬಿಸಬಲ್ಲವು ಎಂಬುದನ್ನು ರಾಧಿಕಾ ಹಾಗೂ ದೀಪಕ್ ಮೂಲಕ ತೋರಿಸಿದ್ದಾರೆ.


5. ಕಾಶಿಯಲ್ಲಿನ ಪರಿಸರ, ಘಾಟ್ ಗಳ ಜೊತೆಗೆ, ನದಿಯಲ್ಲಿ ತೇಲಿ ಬರುವ ಹೆಣ, ಶವದ ವಾಸನೆಯನ್ನು ಉಲ್ಲೇಖಿಸಿ ಹೊಸದಾಗಿ ಅಲ್ಲಿಗೆ ಹೋದವರಿಗೂ.. ಅಲ್ಲಿಯೇ ವಾಸಿಸುತ್ತಿರುವವರಿಗೂ ಆಗುವ ಅನುಭವಗಳ ವ್ಯತ್ಯಾಸ ತಿಳಿಸುತ್ತಾರೆ. ಸಾವನ್ನು ಹೊಸದಾಗಿ ನೋಡುವವರ ದುಃಖಕ್ಕೂ.. ಸಾವನ್ನು ದಿನವೂ ನೋಡುತ್ತಾ ನಿರ್ಲಿಪ್ತವಾಗಿ ತಮ್ಮ ಕರ್ತವ್ಯ ಮಾಡುವವರಿಗೂ ಇರುವ ವ್ಯತ್ಯಾಸ ಕಾಣುತ್ತದೆ.


6. ಪರಮಾನಂದ ಭಾರತೀಯವರ ಮಾನಸಿಕ ಸನ್ಯಾಸ.. ಎಲ್ಲವನ್ನೂ ಬಿಟ್ಟು ಸನ್ಯಾಸತ್ವ ತೆಗೆದುಕೊಳ್ಳುವವರಿಗಿಂತ, ಸಂಸಾರದ ಜವಾಬ್ದಾರಿಯನ್ನು ಹೊತ್ತೇ ಸನ್ಯಾಸಿಯಂತಿರುವವರ ಬದುಕಿನ ವಿಭಿನ್ನ ಆಲೋಚನೆಯನ್ನು ಬಿಚ್ಚಿಡುತ್ತದೆ.


7. ಮೊದಲಿಗೆ ಸೋಮಯಾಜಿಗಳಿಗೆ ಪರಮಾನಂದ ಭಾರತೀಯವರಿಂದ ತಮ್ಮ ಮನಸ್ಸಿನ ಪ್ರಶ್ನೆಗಳಿಗೆ, ಅನುಮಾನಗಳಿಗೆ ಉತ್ತರ ಸಿಕ್ಕರೂ.. ನಂತರ ತಮ್ಮ ಆಧ್ಯಾತ್ಮಿಕ ಸಾಧನೆಯಿಂದ ತಮ್ಮಲ್ಲೇ ಉತ್ತರ ಹುಡುಕಿಕೊಂಡ ಬಗೆಯ ಉನ್ನತ ಆಲೋಚನೆಯನ್ನು ಹೇಳುತ್ತದೆ.


8. ಧ್ಯಾನದ ಪ್ರಕ್ರಿಯೆ ಸುಲಭವಾದುದಲ್ಲ.. ಅದರ ಏಕಾಗ್ರತೆ ಹಾಗೂ ಕ್ರಮೇಣ ಧ್ಯಾನಸ್ಥ ಸ್ಥಿತಿಯ ನೆಮ್ಮದಿಯ ಅನುಭವದ ಉತ್ತರವಿದೆ.


9. ವಿಧವಾ ಪುನರ್ವಿವಾಹ ಹಾಗೂ ಧರ್ಮ ಸಿಂಧು ಗ್ರಂಥದ ಪ್ರಕಾರದ ವಿಧವೆಯರ ನಡೆ ಎರಡೂ ಕೇವಲ ಆಧ್ಯಾತ್ಮಿಕ ಆಲೋಚನೆಗಳಲ್ಲಿ ಮಾತ್ರವಲ್ಲದೆ, ಸಾಮಾಜಿಕವಾಗಿಯೂ.. ಕಾಲದ ಅಂತರದ ಯೋಚನಾಲಹರಿಯ ಪ್ರತಿನಿಧಿಗಳಂತಿವೆ. ದೀಪಕ್ ನ ಚಿಕ್ಕಮ್ಮ ಹಾಗೂ ರಾಧಿಕಾ ಇಬ್ಬರನ್ನೂ ಈ ನಿಟ್ಟಿನಲ್ಲಿ ಗಮನಿಸಬಹುದು. 


10. ದೀಪಕ್ ಹಾಗೂ ರಾಧಿಕಾರ ವಯಸ್ಸಿನ ಅಂತರ ಉಲ್ಟಾ ಇದ್ದಿದ್ದರೆ ಆಲೋಚನೆ ಹಾಗೂ ನಡೆ ವಿಭಿನ್ನವಾಗಿರುತ್ತಿತ್ತಾ.. ಎಂದು ಭಾವಿಸಿದರೂ.. ಪಾಲಿಸಿಕೊಂಡು ಬಂದ ರೀತಿ-ನೀತಿ, ಸಂಪ್ರದಾಯ, ಭಾವುಕತೆಯನ್ನು ಮೀರಿ ನಿಲ್ಲುವುದು ಅಷ್ಟು ಸುಲಭವಲ್ಲವೇನೋ ಎನ್ನಿಸಿತು. 


ಆಲೋಚನೆಗೆ ಹಚ್ಚುವ ಕಾದಂಬರಿಯ ಕಥಾವಸ್ತು, ಆಯಾ ಸ್ಥಾನದಲ್ಲಿ ನಿಂತು ಆಲೋಚಿಸಿದಾಗ ಆಯಾ ಪಾತ್ರಗಳ ಗೊಂದಲ, ಯೋಚನೆ ನಮ್ಮದೂ ಆಗುವಂತಿದೆ. ಆಧುನಿಕ ವಿಚಾರಧಾರೆಯಲ್ಲಿ ಬೆಳೆದ ಯುವ ಜನತೆ ಆಧ್ಯಾತ್ಮಕ್ಕೆ ಬಲವಂತವಾಗಿ ಒಗ್ಗಿಸಿಕೊಳ್ಳುವುದು ಕಷ್ಟವೇ.. ಅದು ಬಲವಂತವೂ ಆಗಬಾರದು. ಇಲ್ಲಿ ಎಲ್ಲವೂ ವಿಚಾರಗಳಂತೆ ಮುಂದಿವೆ. ಆಯ್ಕೆ, ನಿರ್ಧಾರ ನಮ್ಮದೆಂಬಂತಿದೆ. ಇದು ಆಯ್ಕೆಯನ್ನು ಜಟಿಲವಾಗಿಸಿ, ನಿರ್ಧಾರವನ್ನು ಗೋಜಲಾಗಿಸಿ ಆಲೋಚನೆಗೆ ಸವಾಲೆಸೆದ ಕಾದಂಬರಿ.


~ವಿಭಾ ವಿಶ್ವನಾಥ್

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ