ಪುಸ್ತಕದ ಶೀರ್ಷಿಕೆ : ಕಂಬನಿ
ಲೇಖಕರು : ಕೊಡಗಿನ ಗೌರಮ್ಮ
ಪ್ರಕಾಶಕರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ
ಪ್ರಥಮ ಮುದ್ರಣ : 1985
ಪುಟಗಳು : 254
ಕೊಡಗಿನ ಗೌರಮ್ಮನವರ ಎರಡು ಸಣ್ಣ ಕಥಾಸಂಕಲನಗಳ ಸಂಯುಕ್ತ ಸಂಪುಟ ಕಂಬನಿ ಮತ್ತು ಚಿಗುರು. ಈಗ ನನ್ನ ಆಯ್ಕೆ ಕಂಬನಿ ಕಥಾಸಂಕಲನ. ಈ ಕಥಾಸಂಕಲನದಲ್ಲಿ 12 ಕಥೆಗಳಿವೆ. ವಾಣಿಯ ಸಮಸ್ಯೆ ಹಾಗೂ ಮನುವಿನ ರಾಣಿ ಕತೆಗಳನ್ನು ಈ ಮೊದಲೇ ಬಿಡಿಬಿಡಿಯಾಗಿ ಓದಿದ್ದೆ. ವಾಣಿಯ ಸಮಸ್ಯೆ ನಮಗೆ ನಮ್ಮ ಹೈಸ್ಕೂಲು ಕನ್ನಡ ಪಠ್ಯದಲ್ಲಿತ್ತು. ಈ ಕಥಾಸಂಕಲನದಲ್ಲಿ ಕಂಡ ಕಥಾಶೈಲಿಗಳಲ್ಲಿ ನನಗೆ ಅವರು ಪತ್ರ ಬರೆಯುವ ಶೈಲಿಯಲ್ಲಿ ಕಥಾನಕವನ್ನು ಕಟ್ಟಿಕೊಟ್ಟ ಬಗೆ ಇಷ್ಟವಾಯಿತು. ವಿಭಿನ್ನವಾಗಿಯೂ ಅನ್ನಿಸಿತು. ಆಯಾ ಕತೆಗಳಲ್ಲಿ ಇದನ್ನು ಹೇಳುವೆ.
ವಾಣಿಯ ಸಮಸ್ಯೆ : ಬಹಳ ವರ್ಷಗಳಿಂದ ಖಾಲಿಯಿದ್ದ ಇಂದುವಿನ ಪಕ್ಕದ ಮನೆ ತುಂಬಿದಂತೆ ಅವಳ ಬದುಕು ಸಹಾ ಆದ ಕತೆ. ಏಕಾಂತವನ್ನೇ ಬಯಸುತ್ತಿದ್ದವಳಿಗೆ ಬದುಕಲ್ಲಿ ನಿರೀಕ್ಷಿಸಿರದ ಸಂಗತಿಗಳು ಎದುರಾಗುತ್ತವೆ. ತನ್ನದೇ ಪ್ರಾಯದ ವಾಣಿಯ ಪರಿಚಯ ಆತ್ಮೀಯತೆಗೆ ತಿರುಗುತ್ತದೆ. ಆಕೆಯ ಪತಿ ರತ್ನನಿಗೂ ಇಂದಿರಾಳ ಅಚ್ಚುಕಟ್ಟುತನ ಹಿಡಿಸುತ್ತದೆ. ಮುಂದೆ, ಘಟಿಸುವ ಸಂಗತಿಗಳು ರತ್ನನ ಮನಸ್ಸು ಹಾಗೂ ಇಂದುವಿನ ಮನಸ್ಸಿನ ಮೇಲೆ ಪರಿಣಾಮ ಬೀರಿದರೆ ಅದಾವುದರ ಅರಿವೂ ಆಗದಂತೆ ಉಳಿಯುವ ವಾಣಿ. ಇಲ್ಲಿ ಇಂದುವಿನ ಸರಳತೆ, ಸ್ನೇಹಮಯಿ ಸ್ವಭಾವದ ಕನ್ನಡಿಯಂತೆಯೇ ವಾಣಿಯೂ ಇಷ್ಟವಾಗುತ್ತಾಳೆ. ವಾಣಿಯ ಮುಗ್ಧತೆ, ನಂಬಿಕೆ ಹಿಡಿಸುತ್ತದೆ. ಇಲ್ಲಿ ವಾಣಿಯ ಸಮಸ್ಯೆಯೇನು ನೀವೇ ಓದಿ ನೋಡಿ.
ಸನ್ಯಾಸಿ ರತ್ನ : ರಾಜ ಹಾಗೂ ರತ್ನನೆಂಬ ಇಬ್ಬರು ಸ್ನೇಹಿತರ ನಡುವಿನ ಮಾತುಕತೆ, ಆಹ್ಲಾದಮಯ ಸನ್ನಿವೇಶಗಳನ್ನು ಹೇಳುತ್ತಲೇ ಪ್ರಾಯದ ಯುವಕರಾಗಿ ಅವರರಿಬ್ಬರ ನಡವಳಿಕೆಯನ್ನು ಬಿಚ್ಚಿಡುತ್ತಾರೆ. ರತ್ನನಿಗೆ ರಾಜನ ತಂಗಿ ಸೀತೆಯಲ್ಲಿ ಪ್ರೀತಿ. ತಾಯ್ತಂದೆಯರು ಒಪ್ಪಿದ್ದರೂ.. ಅದಕ್ಕೆ ರಾಜನ ಒಪ್ಪಿಗೆಯಿಲ್ಲ. ಅದಕ್ಕೆ ಕಾರಣವೆಂದರೆ.. ತನ್ನಂತೆಯೇ ಆತನೂ ವಿವಾಹವಾಗಬಾರದೆಂಬುದಾಗಿ. ಸನ್ಯಾಸಿಯಾಗಬೇಕೆಂದು ಆಶಿಸಿದ ರತ್ನ ಮುಂದೆ ಏನಾದ ಓದಿ ನೋಡಿ
ಒಂದು ಪುಟ್ಟ ಚಿತ್ರ : ಒಂದು ಪುಟ್ಟ ಚಿತ್ರವನ್ನು ಪತ್ರ ಮುಖೇನ ಬಿಡಿಸಿಟ್ಟ ಕತೆಯಾದರೂ ಇಲ್ಲಿ ಪ್ರಸ್ತಾಪ ಮಾಡಿರುವ ಜೀವನ ಚಿತ್ರಣ ಹೆಚ್ಚು ಪ್ರಭಾವ ಬೀರಿ ಆಲೋಚನೆಗೆ ಹಚ್ಚುವಂತಹದ್ದು. ಗಂಡು-ಹೆಣ್ಣಿನ ನಡುವಿನ ನಂಬಿಕೆ.. ಅದರಲ್ಲೂ ಕುರುಡು ನಂಬಿಕೆಯಿಂದ ಮುಂದಿಟ್ಟ ಹೆಜ್ಜೆ ಏನಾಯಿತು ಎಂಬುದನ್ನು ಪಾತ್ರಗಳೇ ಪತ್ರಗಳ ಮೂಲಕ ಬಿಚ್ಚಿಡುವ ಕತೆ.
ಅವಳ ಭಾಗ್ಯ : ಒಬ್ಬೊಬ್ಬರ ಭಾಗ್ಯ ಒಂದೊಂದು ಬಗೆಯದ್ದು.. ಅದಕ್ಕೆ ಅದೃಷ್ಟವೂ ಕೆಲವೊಮ್ಮೆ ಜೊತೆಯಾಗಬಹುದು. ಆದರೆ, ನೋಡುಗರ ಕಣ್ಣಲ್ಲಿನ ಅಳತೆಗೋಲು ಮಾತ್ರ ವಿಭಿನ್ನ. ಜಮೀನುದಾರರ ಏಕಮಾತ್ರ ಪುತ್ರಿ, ಒಳ್ಳೆಯ ಸಂಪಾದನೆಯಿದ್ದ ಇರುವ ಡಾಕ್ಟರ್ ಕೃಷ್ಣಸ್ವಾಮಿಯ ಹೆಂಡತಿ ತನ್ನಪ್ಪನ ದರಿದ್ರ ಗುಮಾಸ್ತರ ಮಗಳು ಪಾರುವಿನ ಬದುಕನ್ನು, ಅವಳು ಮದುವೆಯಾದ ಮನೆ, ರೀತಿಯನ್ನು ಕಂಡು ಅವಳ ಭಾಗ್ಯ! ಎಂದ ಬಗೆ ವಿಚಿತ್ರವಾದರೂ ಅವಳ ನೋಟವೇ ಹಾಗೆಯಾ..?! ಭಾಗ್ಯ ನಿಜಕ್ಕೂ ದಕ್ಕಿದ್ದಕ್ಕೂ.. ದಕ್ಕುವ ನೋಟಕ್ಕೂ ಅದೆಷ್ಟು ವಿಭಿನ್ನ!
ಕೌಸಲ್ಯಾನಂದನ : ಸೀತೆ ಲಿನ್ನಿಯ ಮನೆಗೆ ಹೋಗುವ ಸಂಧರ್ಭ ಎದುರಾದದ್ದು ವಿಚಿತ್ರವಾದರೂ.. ಲಿನ್ನಿಯ ಬದುಕಲ್ಲಿ ಅದು ತಂದ ತಿರುವು ಸಹಾ ವಿಚಿತ್ರವೇ.. ಲಿನ್ನಿಯ ಹೆಸರು ವಸಂತ. ರಾಮು ಲಿನ್ನಿಯ ಸೋದರತ್ತೆಯ ಮಗ. ಆತನೆಂದರೆ ಲಿನ್ನಿಗೆ ಅಚ್ಚುಮೆಚ್ಚು. ಆದರೆ, ಅವರಿಬ್ಬರ ಆತ್ಮೀಯತೆ ಒಂದೇ ರೀತಿಯಲ್ಲಿರಲಿಲ್ಲ. ರಾಮುವಿನ ದೂರ ತಳ್ಳುವಿಕೆಗೆ ಕಾರಣವೊಂದಿತ್ತು. ಆದರೆ, ಅವರಿಬ್ಬರ ಸುಧೀರ್ಘ ಅಗಲಿಕೆಗೆ ಸೀತಾ ಕಾರಣವಾದದ್ದು ವಿಪರ್ಯಾಸ. ಆದರೆ, ಅದು ತನ್ನ ಸ್ನೇಹಿತೆ ಲಿನ್ನಿಯ ಒಳಿತಿಗಾಗಿಯೇ.. ಲಿನ್ನಿ ಎಂಬ ಹೆಸರಿಗೆ ಕಾರಣವೇನು..? ರಾಮು ವಸಂತಳ ನಡುವಿನ ಬಂಧ ಹೇಗಿತ್ತು..? ಮುಂದೇನಾಯಿತು..?? ರಾಮುವಿಗೂ ಕೌಸಲ್ಯಾನಂದನನಿಗೂ ಇರುವ ನಂಟು ಏನು..? ಎಲ್ಲವನ್ನೂ ತಿಳಿಯಲು ಈ ಕತೆ ಓದಿ.
ನಾಲ್ಕು ಘಟನೆಗಳು : ಇದೂ ಪತ್ರ ರೀತಿಯಲ್ಲಿ ರಾಮು ಹಾಗೂ ಸೀತೆಯ ನಡುವೆ ನಡೆದ ಸಂವಾದದಲ್ಲಿ ಕತೆಯನ್ನು ಕಟ್ಟಿಕೊಟ್ಟಿರುವ ಪರಿ. ಇಲ್ಲಿನ ಘಟನೆಗಳಲ್ಲಿ ದೈನಂದಿನ ಘಟನೆಗಳೇ ತುಂಬಿದ್ದರೂ ಆ ಘಟನೆಗಳ ಕಂಡ ಪರಿ ಹಾಗೂ ಹಂಚಿಕೊಂಡಿರುವ ಪರಿ ಅದನ್ನು ನೋಡುವ ನೋಟವನ್ನೇ ಬದಲಿಸಿದಂತೆ ಕಾಣುತ್ತದೆ.
ಪ್ರಾಯಶ್ಚಿತ್ತ : ಮೂರ್ತಿ ಹೆಚ್ಚು ಓದಿ ಮುಂದೆ ಬರುತ್ತಿದ್ದದ್ದು ತನ್ನ ತಂದೆಯ ಅನಾದರ, ತಾಯಿಯ ಮೇಲೆ ತೋರುತ್ತಿದ್ದ ಸಿಟ್ಟನ್ನು ತಡೆಹಿಡಿಯಲು ಎಂಬುದೇ ಸಮಂಜಸವಾದೀತು. ಆದರೆ, ಮುಂದೆ ಮೂರ್ತಿ ತೆಗೆದುಕೊಂಡ ನಿರ್ಧಾರ ಆತನ ತಂದೆ ಕೋಪಗೊಂಡು, ಒಪ್ಪದಂತೆ ಮಾಡಿದರೂ ತಾಯಿಯ ಸಂತೋಷಕ್ಕೆ ಕಾರಣವಾಗುತ್ತದೆ. ತನ್ನ ಕಾಲ ಮೇಲೆ ನಿಂತವನಿಗೆ ನಲಿನಿಯನ್ನು ಮದುವೆಯಾಗಿ, ತಾಯಿಯನ್ನು ಜೊತೆಗಿಟ್ಟುಕೊಳ್ಳುವ ಕನಸು. ಇದರಲ್ಲಿ ಒಂದಷ್ಟೇ ನನಸಾಗುತ್ತದೆ. ಇದಕ್ಕೆ ಕಾರಣವಾಗಿದ್ದ ತಂದೆಯ ಪಾಪಕ್ಕೆ ಪ್ರಾಯಶ್ಚಿತ್ತವಾಗುತ್ತದಾ..? ಮಾರ್ಮಿಕ ಅಂತ್ಯ ನೀಡಿರುವ ಕತೆ ಇದು.
ಅಪರಾಧಿ ಯಾರು ? : ಇದೂ ಪತ್ರದ ರೀತಿಯಲ್ಲಿಯೇ ವಿಭಿನ್ನ ಜನರು ಕಾಣುವ ಘಟನೆಯೊಂದನ್ನು ಕಟ್ಟಿಕೊಟ್ಟಿರುವ ಪರಿ. ಹಿಂದೂ ಹುಡುಗಿಯೊಬ್ಬಳು ಬೇರೆ ಧರ್ಮವನ್ನು ಸ್ವೀಕರಿಸುವ ಹಿಂದಿರುವ ಘಟನೆ ಹಾಗೂ ಅದಕ್ಕೆ ನಿಮಿತ್ತರಾದವರು ಸಮಾಜದಲ್ಲಿ ಬದುಕುವ ರೀತಿ ಕಾಣುತ್ತದೆ. ಇಲ್ಲಿ ಅಪರಾಧಿ ಯಾರು ಎಂಬುದು ಓದುಗರ ಕಣ್ಣಿಗೂ.. ಕತೆಯಲ್ಲಿ ನೋಡುಗರ ಕಣ್ಣಿಗೂ ಬೇರೆ ಬೇರೆಯಾಗಿ ಕಾಣುವುದು ವಿಪರ್ಯಾಸ. ಸೂಕ್ಷ್ಮ ಘಟನೆಯೊಂದರ ಕಥಾವಸ್ತು.
ಹೋಗಿಯೇ ಬಿಟ್ಟಿದ್ದ ! : ಮುದುಕನೊಬ್ಬ ತಾನಾಗಿಯೇ ಕತೆ ಹೇಳಲು ಹೊರಡುತ್ತಾನೆ. ಆದರೆ, ಅದರ ಹಿಂದೆಯೇ ಕೇವಲ ಕತೆ ಕಾಣದೇ ನೋವು ಕಂಡರೂ.. ಅದನ್ನು ಕೊನೆಯವರೆಗೂ ಗುರುತಿಸಲು ಸಾಧ್ಯವಾಗುವುದಿಲ್ಲ. ಆತನದ್ದೇ ಬದುಕಿನ ಕತೆ ಹೇಳಿದ ಮುದುಕನ ಮನಸ್ಥಿತಿ ಹಾಗೂ ಪರಿಸ್ಥಿತಿಗಳೆರಡನ್ನೂ ತೆರೆದಿಡುವ ಕತೆ ಇದು.
ಸುಳ್ಳು ಸ್ವಪ್ನ : ಗಂಡು ಹಾಗೂ ಹೆಣ್ಣು ಇಬ್ಬರೂ ಮದುವೆಯ ಕುರಿತು ಹಲವಾರು ಸುಖಸ್ವಪ್ನಗಳನ್ನು ಕಂಡಿರುತ್ತಾರೆ. ಆದರೆ, ಕೆಲವರ ಪಾಲಿಗೆ ಅದು ನಿಜವಾದರೆ.. ಕೆಲವರ ಪಾಲಿಗೆ ಸುಳ್ಳು. ಇಲ್ಲಿ ಪ್ರಭೆಯ ಪಾಲಿಗೆ ಇದು ಏನಾಯಿತು..? ಕಾಲಾನುಕ್ರಮವನ್ನು ಉಲ್ಲೇಖಿಸಿ ಬರೆದಿರುವ ಕತೆ ಇದು.
...ಯಾರು? : ಮಹೇಶ ಹಾಗೂ ವಸಂತನ ಗೆಳೆತನ ತುಂಬಾ ಕಾಲದ್ದಲ್ಲವಾದರೂ.. ಅವರಿಬ್ಬರ ನಡುವಿನ ನಂಬಿಕೆ ಬಹಳಷ್ಟಿತ್ತು. ಆದರೆ, ಮಹೇಶನ ಜೊತೆಯಲ್ಲಿದ್ದ ಆ ಹುಡುಗಿಯನ್ನು ಕಂಡು ವಸಂತನ ಮನದಲ್ಲಿ ಅನುಮಾನ ಉಂಟಾಯಿತು. ನಟಿಯೊಬ್ಬಳೊಡನೆ ಓಡಾಡುತ್ತಿದ್ದ ಮಹೇಶನನ್ನು ವಸಂತ ಅಳೆದದ್ದೇ ಬೇರೆ ರೀತಿಯಲ್ಲಿ. ಇದಕ್ಕೆ ಮಹೇಶನ ಪ್ರತಿಕ್ರಿಯೆ ಹೇಗಿತ್ತು..? ಮಹೇಶ ತೆರೆದಿಟ್ಟ ಆತನ ಬದುಕಿನ ಚಿತ್ರಣ ಮತ್ತೆ ಸ್ನೇಹವನ್ನು ಚಿಗುರಿಸಿತೇ..?? ಇದೂ ಸಹಾ ಪತ್ರದ ಮೂಲಕ ಕಟ್ಟಿಕೊಟ್ಟ ಕತೆ. ಈ ಕತೆಯ ಶೈಲಿ ಹಾಗೂ ಕಥಾವಸ್ತು ಎರಡೂ ಅವುಗಳ ಗಟ್ಟಿತನದಿಂದ ಬಹಳ ಇಷ್ಟವಾಯಿತು.
ಮನುವಿನ ರಾಣಿ : ಈ ಕಥಾಸಂಕಲನದಲ್ಲಿ ಬಹಳ ಆಲೋಚನೆಗೆ ದೂಡಿದ ಕತೆ ಇದು. ವೈದ್ಯನಾದವನು ಎಲ್ಲಾ ರೋಗಿಗಳನ್ನೂ ಒಂದೇ ರೀತಿಯಲ್ಲಿ ನೋಡಬೇಕೆಂದಿದ್ದರೂ.. ಕೆಲವೊಮ್ಮೆ ಸಮಾಜದಲ್ಲಿನ ಧೋರಣೆ, ನೋಟಗಳನ್ನು ರೋಗಿಯನ್ನು ಕಾಣುವ ಬಗೆಯನ್ನೇ ಬೇರೆಯಾಗಿಸುತ್ತವೆ. ಎರಡು ತಿಂಗಳ ಹಿಂದಷ್ಟೇ ಆ ಊರಿಗೆ ವರ್ಗವಾಗಿ ಬಂದಿದ್ದವನಿಗೂ ರಾಜಮ್ಮನ ಮನೆಯಿಂದ ರೋಗಿಯನ್ನು ನೋಡಲು ಕರೆ ಬಂದಾಗ ನಿರಾಕರಿಸುವಂತಾಗುತ್ತದೆ. ಆದರೆ, ಎರಡನೇ ಬಾರಿಗೂ ಕರೆ ಕಳುಹಿಸಿದಾಗ ಹೋದವನಿಗೆ ಸಿಕ್ಕ ಚಿತ್ರಣ ರೋಗಿಯನ್ನು ಉಳಿಸಿಕೊಳ್ಳಲಾಗದಿದ್ದರೂ.. ಮನುವಿನ ರಾಣಿಯ ಪರಿಚಯ ಮಾಡಿಸಿ, ಆತನ ನೋಟ, ನಿರ್ಧಾರ, ನಿಲುವುಗಳನ್ನು ಬಡಳಿಸಿಕೊಳ್ಳುವಂತೆ ಮಾಡುತ್ತದೆ. ಆ ಘಟನೆ ಏನು..? ಶೀರ್ಷಿಕೆಯ ಮಾರ್ಮಿಕತೆ ತಿಳಿಯಲು ಈ ಕತೆ ಓದಿ.
ವಿಭಿನ್ನ ಕಥಾವಸ್ತುಗಳು, ವಿಭಿನ್ನ ಕಥಾಶೈಲಿ, ಸೂಕ್ಷ್ಮತೆಯ ನೋಟಗಳು, ಭಾವನೆಗಳ ಬಿಂಬಿಸುವಿಕೆ ಎಲ್ಲದರಿಂದ ಈ ಕಥಾಸಂಕಲನ ಆಪ್ತವಾಗುತ್ತದೆ. ಚಿಗುರು ಕಥಾಸಂಕಲನ ಓದಿ ಮುಂದಿನ ದಿನಗಳಲ್ಲಿ ಪರಿಚಯಿಸುವೆ.
~ವಿಭಾ ವಿಶ್ವನಾಥ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ